ರಕ್ತಚರಿತೆಯಲ್ಲಿ ಚಿರಸ್ಥಾಯಿ ಸೌಹಾರ್ದದ ಹೆಸರುಗಳು
ತ್ರಿಪುರಾದಲ್ಲಿ ಬುದ್ಧ, ಭೀಮರ ಕಮ್ಯುನಿಸಂ
ಸಿಪಿಐಎಂ ಸರಕಾರ ಉಗ್ರರ ದಾಳಿಯನ್ನು ಸಂವಿಧಾನಾತ್ಮಕವಾಗಿ ಎದುರಿಸಿತ್ತು. ಯಾರು ದಾಳಿ ಮಾಡಿದ್ದಾರೋ ಅವರ ಮೇಲೆ ಮಾತ್ರ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿತ್ತೇ ಹೊರತು ಎಡ ಕಾರ್ಯಕರ್ತರು, ದಾಳಿಕೋರರ ಮಾದರಿಯಲ್ಲೇ ಉತ್ತರ ಕೊಟ್ಟಿಲ್ಲ.
ತ್ರಿಪುರಾದಲ್ಲಿ ಎಡಪಂಥೀಯರ ಮೇಲೆ ಇಷ್ಟೊಂದು ರೀತಿಯ ದಾಳಿ ನಡೆಯುತ್ತಿದ್ದರೂ ಅವರ ಸಹನೆ ಅಚ್ಚರಿ ಮೂಡಿಸುತ್ತೆ. ಬುದ್ಧ್ದ, ಅಂಬೇಡ್ಕರ್ ಜೊತೆಗೆ ಲೆನಿನ್ ಕ್ರಾಂತಿಗೆ ಮುಂದಾದರೆ ಬಹುಶಃ ತ್ರಿಪುರಾದ ಕಮ್ಯುನಿಸ್ಟರಾಗಬಹುದು. ಐಪಿಎಫ್’ಟಿ, ಎನ್.ಎಲ್.ಎಫ್.ಟಿ, ಎಟಿಟಿಎಫ್ ದಾಳಿ ಇವತ್ತಿನದ್ದಲ್ಲ. ಈಗಿನದ್ದಕ್ಕಿಂತಲೂ ಕರಾಳ ದಾಳಿ ಪ್ರತ್ಯೇಕತಾವಾದಿಗಳಿಂದ ನಡೆದಿತ್ತು. ಈಗ ನಡೆಯುತ್ತಿರೋದು ಪ್ರಭುತ್ವದ ಜೊತೆಗೂಡಿದ ಬಂದೂಕುಧಾರಿಗಳ ದಾಳಿ. ವಿಚಿತ್ರ ಎಂದರೆ ಬುಡಕಟ್ಟು ಪ್ರತ್ಯೇಕ ರಾಜ್ಯ ಅಥವಾ ದೇಶಕ್ಕಾಗಿ ನಡೆಯುತ್ತಿದ್ದ ಬುಡಕಟ್ಟುಗಳ ಬಾಂಗ್ಲಾ ಪ್ರೇರಿತ ಸಶಸ್ತ್ರ ಹೋರಾಟಕ್ಕೆ ಬಲಿಯಾಗಿರೋದು ಎಡಪಂಥದ ಬುಡಕಟ್ಟು ನಾಯಕರೇ ಅತ್ಯಧಿಕ. ಬುಡಕಟ್ಟು ಅಲ್ಲದ ಮುಸ್ಲಿಮರು ಮತ್ತು ದಲಿತರನ್ನು ಬುಡಕಟ್ಟು ಉಗ್ರರು ಕೊಲೆ ಮಾಡಲು ಬಂದಾಗ ಅದಕ್ಕೆ ಎದುರು ನಿಂತು ಕೊಲೆಯಾದವರೆಲ್ಲರೂ ಸಿಪಿಐಎಂನ ಬುಡಕಟ್ಟು ನಾಯಕರು, ಶಾಸಕರು, ಸಚಿವರು. ಇದಕ್ಕೊಂದು ದೀರ್ಘ ರಕ್ತಸಿಕ್ತ ಇತಿಹಾಸವೇ ಇದೆ.
ಅದು 1996 ಜನವರಿ ತಿಂಗಳು. ಸಿಮ್ನ ವಿಧಾನಸಭಾ ಕ್ಷೇತ್ರದ ಸಿಪಿಐಎಂ ಶಾಸಕ ಪ್ರಣಬ್ ದೆಬ್ಬರ್ಮಾರನ್ನು ಹಾಡಹಗಲೇ ಬುಡಕಟ್ಟು ಪ್ರತ್ಯೇಕ ದೇಶಕ್ಕಾಗಿ ಭಯೋತ್ಪಾದನೆ ಮಾಡುತ್ತಿರುವ ಪ್ರತ್ಯೇಕತಾವಾದಿಗಳು ಅಪಹರಣ ಮಾಡಿದರು. ಬರೋಬ್ಬರಿ ಹನ್ನೊಂದು ತಿಂಗಳ ಬಳಿಕ ಪ್ರಣಬ್ ದೆಬ್ಬರ್ಮಾ ತಪ್ಪಿಸಿಕೊಂಡು ಬಂದರು. 1996 ಮೇ 12 ರಂದು ಎಟಿಟಿಎಫ್ (ಆಲ್ ತ್ರಿಪುರಾ ಟೈಗರ್ಸ್ ಫೋರ್ಸ್) ಬಂದೂಕುಧಾರಿಗಳು ಬುಡಕಟ್ಟು ಅಲ್ಲದ ದಲಿತರ ಮೇಲೆ ದಾಳಿ ಮಾಡುತ್ತಾರೆ. ಅದನ್ನು ತಡೆಯಲು ಹೋದ ಸಿಪಿಐಎಂ ಹಿರಿಯ ಮುಖಂಡರೂ ಆಗಿರುವ ಬುಡಕಟ್ಟು ಸಮುದಾಯದ ಚಂದ್ರ ಮೋಹನ್ ದೆಬ್ಬರ್ಮಾ ಕೊಲೆಗೀಡಾಗುತ್ತಾರೆ. ಬುಡಕಟ್ಟು ಪ್ರತ್ಯೇಕ ದೇಶಕ್ಕಾಗಿ ನಡೆದ ಹೋರಾಟದಲ್ಲಿ ಬುಡಕಟ್ಟು ಅಲ್ಲದ ಏಳು ಜನರನ್ನು ರಕ್ಷಿಸಲು ಸಿಪಿಐಎಂನ ಬುಡಕಟ್ಟು ನಾಯಕ ಪ್ರಾಣತ್ಯಾಗ ಮಾಡುತ್ತಾರೆ.
ವಿಪರ್ಯಾಸವೆಂದರೆ 1997 ಮೇ ವರೆಗೆ ಒಟ್ಟು ಒಂದು 300 ಜನ ಸಿಪಿಐಎಂ ಅಥವಾ ಸಿಪಿಐಎಂ ಬೆಂಬಲಿತ ಬುಡಕಟ್ಟು ಜನರು ಪ್ರತ್ಯೇಕತಾವಾದಿಗಳ ದಾಳಿಗೆ ಒಳಗಾಗಿ ಸತ್ತಿದ್ದಾರೆ ಎಂದು ಸರಕಾರ ಅಧಿಕೃತವಾಗಿ ಘೋಷಿಸಿತು. ಅದು ತ್ರಿಪುರಾದ ಚಮನು ಗ್ರಾಮ. ಟೀ ಎಸ್ಟೇಟ್ ಮತ್ತು ಕಾಡಂಚಿನ ಕೃಷಿಯಲ್ಲಿ ತೊಡಗಿಕೊಂಡಿದ್ದ ಅಸಂಘಟಿತ ಕೃಷಿ ಕಾರ್ಮಿಕರನ್ನು ಎಡಪಂಥೀಯ ಕಾರ್ಮಿಕ ಚಳವಳಿ ಸಂಘಟಿಸುತ್ತಿತ್ತು. 1997 ಜೂನ್ 9 ರಂದು ಎನ್.ಎಲ್.ಎಫ್.ಟಿ ಪ್ರತ್ಯೇಕತಾವಾದಿಗಳು ಗುಡ್ಡದ ತುದಿಯಿಂದ ಗೆರಿಲ್ಲಾ ಮಾದರಿಯಲ್ಲಿ ಎರಡು ಬಾರಿ ದಾಳಿ ನಡೆಸಿ ಚಮನು ಗ್ರಾಮದಲ್ಲಿ ಕಾರ್ಮಿಕ ಸಂಘಟನೆಯ 9 ಕಾರ್ಯಕರ್ತರನ್ನು ಬಲಿ ತೆಗೆದುಕೊಂಡರು. ಆ ಬಳಿಕ ನಡೆದ ಸಂಘರ್ಷದಲ್ಲಿ ಪ್ರತ್ಯೇಕತಾವಾದಿಗಳು ಗಡಿ ಭದ್ರತಾ ಪಡೆಯ ಸಿಬ್ಬಂದಿಯನ್ನು ಕೊಲ್ಲುತ್ತಾರೆ.
ಅಕ್ಟೋಬರ್ 1998 ರಲ್ಲಿ ಎಟಿಟಿಎಫ್ ಉಗ್ರರು 34 ಸಿಪಿಐಎಂ ಕಾರ್ಯಕರ್ತರನ್ನು ಗುಂಡಿಕ್ಕಿ ಕೊಂದರು. ಸಾವಿಗೀಡಾದವರಲ್ಲಿ ಇಬ್ಬರು ಸಿಪಿಐಎಂನ ಹಿರಿಯ ನಾಯಕರು. ಅದರಲ್ಲಿ ಒಬ್ಬರು ಸಿಪಿಐಎಂನ ಬುಡಕಟ್ಟು ನಾಯಕರೂ ಆಗಿದ್ದ ಮಾಜಿ ಶಾಸಕರು. ಈ ಘಟನೆಯ ಬಳಿಕವೂ ಸುಮಾರು 47 ಎಡಪಂಥದ ಬೆಂಬಲಿಗ ನಾಗರಿಕರನ್ನು ಎಟಿಟಿಎಫ್ ಉಗ್ರರು ಅಪಹರಿಸಿದರು.
1997 ಮಾರ್ಚ್ 20 ರಂದು ಸಿಪಿಐಎಂ ಹಿತೈಷಿ ಮಾಜ್ ಸಂತೋಷ್ ಪ್ರವಕರ್ ಮತ್ತು ನೈಕ್ ಕೋಟ್ ಶಿವಾಜಿ ತುಕಾರಾಂ ಎಂಬವರನ್ನು ಎಟಿಟಿಎಫ್ ಕಾರ್ಯಕರ್ತರು ಗುಂಡಿಕ್ಕಿ ಕೊಲೆ ಮಾಡಿದರು. 1998 ರಲ್ಲಿ ತ್ರಿಪುರಾ ಸರಕಾರದ ಆರೋಗ್ಯ ಮತ್ತು ನಗರ ಅಭಿವೃದ್ಧ್ದಿ ಸಚಿವರಾಗಿದ್ದ ಬಿಮಲ್ ಸಿನ್ಹಾರವರ ದತ್ತು ಸಹೋದರ ಬಿಕ್ರಂ ಸಿನ್ಹಾರನ್ನು ಎಟಿಟಿಎಫ್ ಉಗ್ರರು ಅಪಹರಿಸುತ್ತಾರೆ. ತನ್ನ ದತ್ತು ಸಹೋದರನನ್ನು ಬಿಡಿಸಿಕೊಂಡು ಬರಲು ಆರೋಗ್ಯ ಸಚಿವ ಬಿಮಲ್ ಸಿನ್ಹಾರು ಮಾತುಕತೆಗಾಗಿ ತನ್ನ ಮತ್ತೊಬ್ಬ ಸಹೋದರ ಬಿದ್ಯುತ್ ಸಿನ್ಹಾ ಜೊತೆ ಪ್ರತ್ಯೇಕತಾವಾದಿಗಳ ಅಡಗುತಾಣಕ್ಕೆ ತೆರಳುತ್ತಾರೆ. ಅವಾಂಗ ಘಾಟ್ ಬಳಿಯ ದಲೈ ನದಿ ಬಳಿಯ ತೀರದಲ್ಲಿ ಮಾತುಕತೆ ನಡೆಯುತ್ತದೆ. ದತ್ತು ಸಹೋದರನ ಬಿಡುಗಡೆಗೆ ಎಲ್ಲಾ ಷರತ್ತುಗಳಿಗೆ ಒಪ್ಪಲು ಸಿಪಿಐಎಂ ಸಚಿವ ಬಿಮಲ್ ಸಿನ್ಹ ಸಿದ್ಧ್ದರಿದ್ದರೂ ಕಮ್ಯೂನಿಸ್ಟ್ ಸಿದ್ಧಾಂತವನ್ನೇ ಬಿಡಬೇಕು ಮತ್ತು ಪ್ರದೇಶದಲ್ಲಿ ಸಂಘಟನೆ ಮಾಡಬಾರದು ಎಂಬ ಷರತ್ತಿಗೆ ಸಚಿವರು ಒಪ್ಪಲಿಲ್ಲ. ಕೊನೆಗೆ ಮಾರ್ಚ್ 31 ರಂದು ಎಟಿಟಿಎಫ್ ಉಗ್ರರು ಸಚಿವ ಬಿಮಲ್ ಸಿನ್ಹಾ ಮತ್ತು ಸಹೋದರ ಬಿದ್ಯುತ್ ಸಿನ್ಹಾರನ್ನು ಗುಂಡಿಕ್ಕಿ ಸಾಯಿಸುತ್ತಾರೆ.
ಇದಾದ ಬಳಿಕ ತ್ರಿಪುರಾ ಸರಕಾರವು ಕೇಂದ್ರ ಗೃಹ ಇಲಾಖೆಗೆ ನೀಡಿದ ಮಾಹಿತಿಯಂತೆ 1998 ರವರೆಗೆ ಪ್ರತ್ಯೇಕತಾವಾದಿಗಳು ಸಿಪಿಐಎಂ ಬೆಂಬಲಿಸುವ 800 ನಾಗರಿಕರ ಕೊಲೆ ಮಾಡಿದ್ದಾರೆ. ಅದರಲ್ಲಿ ಒಬ್ಬರು ಸಿಪಿಐಎಂ ಸರಕಾರದ ಆರೋಗ್ಯ ಸಚಿವರೂ ಸೇರಿದ್ದರು. ಅಲ್ಲಿಯವರೆಗೆ ಒಟ್ಟು 2,000 ಜನರನ್ನು ಅಪಹರಿಸಲಾಗಿದ್ದು, ಅದರಲ್ಲಿ ಬಹುತೇಕರು ಹಿಂದಿರುಗಿ ಬಂದಿಲ್ಲ ಎಂದು ಘೋಷಿಸಲಾಯಿತು.
1998 ರ ಸ್ವಾತಂತ್ರ ದಿನಾಚರಣೆಯ ದಿನದಂದು ಆರಂಭವಾಗಿ ಸಪ್ಟೆಂಬರ್ ವರೆಗೆ ಎನ್‌ಎಲ್‌ಎಫ್‌ಟಿ ಮತ್ತು ಎಟಿಟಿಎಫ್ ತನ್ನ ಹತ್ಯಾಕಾಂಡವನ್ನು ನಡೆಸುತ್ತದೆ. 32 ಎಡ ಕಾರ್ಯಕರ್ತರನ್ನು ಈ ಅವಧಿಯಲ್ಲಿ ಪ್ರತ್ಯೇಕತಾವಾದಿ ಉಗ್ರರು ಕೊಲೆ ಮಾಡಿದ್ದರು. ಅದರಲ್ಲಿ ಸಿಪಿಐಎಂ ಹಿರಿಯ ಮುಖಂಡ ಅನಿಲ್ ಬೈದ್ಯ ಕೂಡಾ ಸೇರಿದ್ದಾರೆ. ಇದೇ ಅವಧಿಯಲ್ಲಿ 28 ಸಿಪಿಐಎಂ ಬೆಂಬಲಿತರನ್ನು ಎಟಿಟಿಎಫ್ ಒತ್ತೆಯಾಳಾಗಿ ಇರಿಸಿಕೊಂಡಿತು.
ಸಿಪಿಐಎಂ ನಾಯಕ ಕಿಶೋರ್ ದೆಬ್ಬರ್ಮಾ ಎಂಬವರು ಬುಡಕಟ್ಟು ಸಮುದಾಯಕ್ಕೆ ಸೇರಿದವರಾಗಿದ್ದು, ಬುಡಕಟ್ಟು ಮತ್ತು ಬುಡಕಟ್ಟು ಅಲ್ಲದವರ ಮಧ್ಯೆ ಸಂಘರ್ಷ ನಡೆಸುತ್ತಿದ್ದ ಪ್ರತ್ಯೇಕತಾವಾದಿಗಳು ಸಕ್ರೀಯರಾಗಿದ್ದ ಪ್ರದೇಶದಲ್ಲಿ ಬುಡಕಟ್ಟು ಮತ್ತು ಬುಡಕಟ್ಟೇತರರ ಮಧ್ಯೆ ಸೌಹಾರ್ದಕ್ಕಾಗಿ ಕೆಲಸ ಮಾಡುತ್ತಿದ್ದರು. ಇದು ಪ್ರತ್ಯೇಕತಾವಾದಿಗಳ ಆಕ್ರೋಶಕ್ಕೆ ಗುರಿಯಾಗಿ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಈ ರೀತಿ ಹುತಾತ್ಮರಾದ ಎಡನಾಯಕ ಕಿಶೋರ್ ದೆಬ್ಬರ್ಮಾ ಸ್ಮರಣಾರ್ಥ 1998 ಆಗಸ್ಟ್ 24 ರಂದು ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಲಾಗಿತ್ತು. ಈ ಕ್ರಿಕೆಟ್ ಟೂರ್ನಮೆಂಟ್‌ನ್ನು ಬುಡಕಟ್ಟು ಮತ್ತು ಬುಡಕಟ್ಟು ಅಲ್ಲದವರ ನಡುವಿನ ಸೌಹಾರ್ದದ ಕ್ರೀಡಾಕೂಟ ಎಂದು ಸಿಪಿಐಎಂ ಕರೆಯಿತು. ಈ ಕ್ರೀಡಾಕೂಟವನ್ನು ಗುರಿಯಾಗಿರಿಸಿ ಪ್ರತ್ಯೇಕತಾವಾದಿ ಉಗ್ರರು ದಾಳಿಯನ್ನು ನಡೆಸುತ್ತಾರೆ. ಎಡ ವಿದ್ಯಾರ್ಥಿ ಚಳವಳಿಯಲ್ಲಿ ಸಕ್ರಿಯರಾಗಿದ್ದ ಹದಿನೇಳರ ಹರೆಯದ ಮಹಿಳಾ ಕ್ರಿಕೆಟರ್ ಕಾಜಲ್ ದೆಬ್ಬರ್ಮಾ ಮತ್ತು ಇಬ್ಬರನ್ನು ಎನ್‌ಎಲ್‌ಎಫ್‌ಟಿ ಬಂದೂಕುಧಾರಿಗಳು ಗುಂಡಿಟ್ಟು ಕೊಲೆ ಮಾಡಿದರು. ಇದು ಇಂದಿಗೂ ಕಮ್ಯುನಿಸ್ಟರ ಸ್ಮತಿಪಟಲದಲ್ಲಿ ಹಾಗೇ ಉಳಿದುಕೊಂಡ ನೋವಾಗಿದೆ.
1998 ಆಗಸ್ಟ್ 16 ರಂದು ಬಂದೂಕುಧಾರಿಗಳು ಸಾದರ್ ಉಪವಿಭಾಗದ ನರೇಂದ್ರಪುರ ಟಿ ಎಸ್ಟೇಟ್ ನಲ್ಲಿ ಕಾರ್ಮಿಕರನ್ನು ಸಂಘಟಿಸುತ್ತಿದ್ದ ಐದು ಜನ ಬುಡಕಟ್ಟು ಅಲ್ಲದ ಸಿಪಿಐಎಂ ಬೆಂಬಲಿಗರನ್ನು ಕೊಲೆ ಮಾಡಿದರು.
ಪ್ರತ್ಯೇಕತಾವಾದಿಗಳು ಪ್ರಬಲವಾಗಿರುವ ಟಕರ್ಜಾಲ ಮತ್ತು ಕಂಚಾನ್ಮಾಲ ಪ್ರದೇಶದಲ್ಲಿ 1999 ಫೆಬ್ರವರಿ 02 ರಂದು ಎಡಚಳವಳಿಗೆ ಬೆಂಬಲ ಕೊಡುತ್ತಿದ್ದ 6 ಸಣ್ಣ ಉದ್ಯಮಿಗಳನ್ನು ಕೊಲೆ ಮಾಡಿ ಅವರ ಮನೆಗಳನ್ನು ಸುಟ್ಟು ಹಾಕಲಾಯ್ತು. ಅದರ ಮುಂದುವರಿದ ಭಾಗವಾಗಿ ಸಿಪಿಐಎಂನ ಇಬ್ಬರು ಬುಡಕಟ್ಟು ನಾಯಕರನ್ನು ಕೊಲೆ ಮಾಡಲಾಯ್ತು. 500 ಗುಡಿಸಲುಗಳಿಗೆ ಬೆಂಕಿ ಹಾಕಲಾಯ್ತು. 600 ಜನರು ಆ ಊರನ್ನೇ ತೊರೆದರು ಎಂದು ಪೊಲೀಸ್ ಕಡತದಲ್ಲಿ ದಾಖಲಾಗಿದೆ.
2000 ನೇ ಇಸವಿಯ ಎಪ್ರಿಲ್ 15 ರಂದು ಕಲ್ಯಾಣ್‌ಪುರ ಗ್ರಾಮದಲ್ಲಿ ಸುಮಾರು 25ರಷ್ಟಿದ್ದ ಎನ್‌ಎಲ್‌ಎಫ್ ಟಿ ಉಗ್ರರ ದಾಳಿಗೆ ಹಲವು ಮನೆ, ಅಂಗಡಿಗಳು ಧ್ವಂಸ ವಾದವು. 12 ಜನರನ್ನು ಗುರುತಿಸಿ ಎಡ ಬೆಂಬಲಿತರು ಅನ್ನೋ ಕಾರಣಕ್ಕಾಗಿ ಕೊಲೆ ಮಾಡಲಾಯಿತು. ಈ ದಾಳಿಗೆ 7 ಜನ ಗಾಯಗೊಂಡರು.
ಇದಾದ ಬಳಿಕ ಎಪ್ರಿಲ್ 27 ರಂದು ಘಾರ್ಜಿ ಎಂಬ ಊರಲ್ಲಿ ಎನ್‌ಎಲ್‌ಎಫ್‌ಟಿ ಉಗ್ರರು 24 ಗಂಟೆಯಲ್ಲಿ ನಾಲ್ಕು ಜನರನ್ನು ಗುಂಡಿಕ್ಕಿ ಕೊಲೆ ಮಾಡುತ್ತಾರೆ. ಅದರಲ್ಲಿ ಸಿಪಿಐಎಂ ನಾಯಕನ ಸಹೋದರನಾಗಿರುವ ನರಾಯ್ ಸರ್ಕಾರ್ ಕೂಡಾ ಸೇರಿದ್ದರು. ಸಿಪಿಐಎಂ ಮುಖಂಡರ ಇಬ್ಬರು ಅಕ್ಕ ತಂಗಿಯರನ್ನು ಉಗ್ರರು ಅತ್ಯಾಚಾರ ಮಾಡಿ ಕೊಲೆ ಮಾಡುವ ಹೀನ ಕೃತ್ಯವನ್ನೂ ನಡೆಸುತ್ತಾರೆ.
ಮೇ 18 ರಂದು ಕೊವೈ ಮತ್ತು ತೆಲಿಯಮುರ ಪ್ರದೇಶದಲ್ಲಿ ಒಂದು ವಾರದ ಕಾಲ ನಡೆದ ಜನಾಂಗೀಯ ಘರ್ಷಣೆಯಲ್ಲಿ 50 ಜನ ಸಾಯುತ್ತಾರೆ. ಅದರಲ್ಲಿ ಹೆಚ್ಚಿನವರು ಬೆಂಗಾಲಿ ದಲಿತರು ಮತ್ತು ಮುಸ್ಲಿಮರಾಗಿದ್ದು ಹಲವರು ಸಿಪಿಐಎಂ ಕಾರ್ಯಕರ್ತರು. ಬುಡಕಟ್ಟು ಮತ್ತು ಬುಡಕಟ್ಟು ಅಲ್ಲದವರ ಮಧ್ಯೆ ಸಂಘರ್ಷ ಸೃಷ್ಟಿಸಿ ಪ್ರತ್ಯೇಕ ದೇಶಕ್ಕಾಗಿ ಆಗ್ರಹಿಸುವ ಸಿಐಎ ಪ್ರೇರಿತ ಪ್ರತ್ಯೇಕತಾವಾದಿಗಳು ಈ ಕೃತ್ಯ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ನೇರ ಆರೋಪ ಮಾಡಿದ್ದರು.
ಈ ದಾಳಿಗಳ ಸಂದರ್ಭದಲ್ಲೇ ಟಿಟಿಎಎಡಿಸಿಗೆ ನಡೆದ ಚುನಾವಣೆಯಲ್ಲಿ ಐಪಿಎಫ್‌ಟಿ ಪ್ರತ್ಯೇಕತಾವಾದಿಗಳು ಗೆಲುವು ಸಾಧಿಸುತ್ತಾರೆ. ಆಗ ಇನ್ನಷ್ಟೂ ಗಲಾಟೆಗಳಾಗುತ್ತೆ. ಟಿಟಿಎಎಡಿಸಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ವಾಸವಿರುವ ಬುಡಕಟ್ಟು ಅಲ್ಲದ ದಲಿತ ಮತ್ತು ಮುಸ್ಲಿಮರನ್ನು ಓಡಿಸಲು ಐಪಿಎಫ್ ಟಿ ನಿರ್ಧರಿಸುತ್ತದೆ. ಅದರ ಭಾಗವಾಗಿ ಬಾಗ್ಬೇರ್, ರತಿಯಾ, ಚಕ್ಮಾ ಘಾಟ್ ನಲ್ಲಿ ಜನವಸತಿ ಪ್ರದೇಶದಲ್ಲಿ ಐಪಿಎಫ್ ಟಿ ಪ್ರೇರಿತ ಎಟಿಟಿಎಫ್ ಉಗ್ರರು ಏಕಕಾಲದಲ್ಲಿ ದಾಳಿ ನಡೆಸುತ್ತಾರೆ. ಈ ದಾಳಿಯಲ್ಲಿ 45 ಜನ ಸಾವಿಗೀಡಾಗುತ್ತಾರೆ. 60 ಜನರು ಎನ್‌ಎಲ್‌ಎಫ್‌ಟಿ ಬಂದೂಕುಧಾರಿಗಳಿಂದ ತಪ್ಪಿಸಿಕೊಂಡು ಬಾಗ್ಬೇರ್‌ನಿಂದ ಕಾಂಚಾಪುರ್‌ಗೆ ತೆರಳುತ್ತಿದ್ದರು. ಅವರನ್ನೂ ಸುತ್ತುವರಿದ ಉಗ್ರರು ಮತ್ತೆ 25 ಮುಸ್ಲಿಮರನ್ನು ಕೊಲೆ ಮಾಡುತ್ತಾರೆ.
2000 ನೇ ಇಸವಿಯ ಸೆಪ್ಟಂಬರ್‌ನಿಂದ ಡಿಸೆಂಬರ್ ಅವಧಿಯಲ್ಲಿ ಎನ್‌ಎಲ್‌ಎಫ್‌ಟಿ ಗೆರಿಲ್ಲಾ ಸೇನೆ ದಾಳಿಗೆ 30 ಎಡ ಕಾರ್ಯಕರ್ತರು ಸಾವಿಗೀಡಾಗುತ್ತಾರೆ. ಅದರಲ್ಲಿ ಮೂವರು ಮಹಿಳೆಯರು ಮತ್ತು ಇಬ್ಬರು ಮಕ್ಕಳು.
2001ಕ್ಕೆ ಕಾಲಿರಿಸುತ್ತಿದ್ದಂತೆ 9 ಬುಡಕಟ್ಟು ಜನಾಂಗದವರು ಎಡ ಚಳವಳಿಯಲ್ಲಿ ಇದ್ದಾರೆ ಎನ್ನುವ ಕಾರಣಕ್ಕಾಗಿ ಫಲ್ಗುಂಜ್ಯೊ ಪಾರ ಎಂಬ ಊರಲ್ಲಿ ಕೊಲೆ ನಡೆಸಲಾಯ್ತು. ಮೂರು ದಿನ ಊರಲ್ಲಿ ಕರ್ಫ್ಯೂ ಹೇರಲಾಯ್ತು.
2001ರ ಮಾರ್ಚ್ 3 ರವರೆಗೆ ಮೂರು ತಿಂಗಳು ಪ್ರತ್ಯೇಕತಾ ವಾದಿಗಳ ಗನ್ನು ಸ್ವಲ್ಪವಿಶ್ರಾಂತಿ ಪಡೆದಿತ್ತು. ಮಾರ್ಚ್ ಮೂರರಂದು ಸಿಪಿಐಎಂ ಪ್ರಭಾವ ಹೆಚ್ಚಿರುವ ಬಾಂಪುರ್ ನಲ್ಲಿ 13 ಜನರನ್ನು ಉಗ್ರರು ಗುಂಡಿಕ್ಕಿ ಕೊಲೆ ಮಾಡುತ್ತಾರೆ. ಸಾವಿಗೀಡಾದವರಲ್ಲಿ 9 ಜನ ಪೊಲೀಸರು.
ಸದ್ಯ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಅಡಳಿತ ನಡೆಸುತ್ತಿರುವ ಐಪಿಎಫ್’ಟಿ ಸಹೋದರ ಸಂಘಟನೆ ಎಟಿಟಿಎಫ್ ಮತ್ತು ಬಾಂಗ್ಲಾದೇಶದ ತೀವ್ರವಾದಿಗಳು ಬಹುತೇಕ ಜಂಟಿ ಕಾರ್ಯಾಚರಣೆ ನಡೆಸುತ್ತಾರೆ. ಬಾಂಗ್ಲಾ ನುಸುಳುಕೋರರ ಕ್ಯಾಂಪ್ ಆಗಿರುವ ಸಚ್ಚಾರಿ ಗ್ರಾಮದಿಂದ ಬಂದ ಎಟಿಟಿಎಫ್ ಉಗ್ರರು ಮಹರ್ಚುರ್ ಮಾರುಕಟ್ಟೆ ಪ್ರದೇಶದ ಗುಡಿಸಲು ಸುಟ್ಟು ಹಾಕಿ ಗುಂಡಿನ ಸುರಿಮಳೆಗೈಯುತ್ತಾರೆ. ಅದರಲ್ಲಿ ಹಲವು ಮಕ್ಕಳನ್ನು ಕ್ಲೋಸ್ಡ್ ರೇಂಜ್‌ನಲ್ಲಿ ಶೂಟ್ ಮಾಡಿ ಕೊಲ್ಲಲಾಗುತ್ತದೆ. ಅದೊಂದೇ ರಾತ್ರಿ 9 ಜನ ಸಾವಿಗೀಡಾದರು.
ಇದಾದ ಬಳಿಕ ಸಿಪಿಐಎಂ ಮಹಿಳಾ ನಾಯಕಿ ರಸ್ಮಾಲಾ ದೆಬ್ಬರ್ಮಾ ಅವರನ್ನು ಕೊಲೆ ಮಾಡಲಾಯ್ತು. ಮೇ 7 ಉತ್ತರ ತ್ರಿಪುರಾದ ಕೈಲಾಶ್ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯ ಫಾಟಿಕ್ರೆಯಲ್ಲಿ ಸಿಪಿಐಎಂ ಕಾರ್ಯಕರ್ತ ನಿಲಿಮೇಶ್ ಪೌಲ್ ಮತ್ತು ಅವರ ಪತ್ನಿ ಅಲ್ಪನಾ ಪೌಲ್ ಅವರನ್ನು ಕೊಲೆ ಮಾಡಲಾಯಿತು.
2004 ಜೂನ್ 8 ರಂದು ದಲೈ ಜಿಲ್ಲೆಯ ಅಂಬಾಸದಲ್ಲಿ ಎನ್‌ಎಲ್‌ಎಫ್‌ಟಿ ಮುಖಂಡ ರಾಣಮಾಯಿ ನೇತೃತ್ವದ ಗುಂಪು ಒಬ್ಬರನ್ನು ಕೊಂದು ಮೂವರನ್ನು ಕಿಡ್ನಾಪ್ ಮಾಡುತ್ತಾರೆ. ಜೂನ್ 13 ರಲ್ಲಿ ಕಾನ್ಪುಯಿ ಜಿಲ್ಲೆಯಲ್ಲಿ ಎಡ ಚಳವಳಿಯನ್ನು ಬೆಂಬಲಿಸುತ್ತಿದ್ದ ಎರಡು ಉದ್ಯಮಿಗಳನ್ನು ಕೊಲೆ ಮಾಡಿ 24 ಜನರನ್ನು ಅಪಹರಿಸಲಾಯಿತು.
2004 ಅಕ್ಟೋಬರ್ 22 ರಂದು ಸಿಪಿಐಎಂ ಹಿರಿಯ ನಾಯಕರಾಗಿದ್ದ ಮಾಜಿ ಶಾಸಕ ಆನಂದ್ ರೊಹಾಜ ಮತ್ತು ಅವರ ಪುತ್ರ ಜೋಯ್ ರೊಹಾಜ ಸೇರಿದಂತೆ ನಾಲ್ಕು ಜನರನ್ನು ದಲೈ ಜಿಲ್ಲೆಯಲ್ಲಿ ಎನ್‌ಎಲ್‌ಎಫ್‌ಟಿ ಉಗ್ರರು ಕೊಲೆ ಮಾಡಿದರು. ಇದಲ್ಲದೆ 1993 ರಿಂದ 2000 ಇಸವಿಯವರೆಗೆ ನಡೆದ 389 ದಾಳಿ ಘಟನೆಯಲ್ಲಿ 49 ಸೈನಿಕರು ಹತರಾಗಿದ್ದಾರೆ.
ಬುಡಕಟ್ಟು ಪ್ರತ್ಯೇಕ ದೇಶಕ್ಕಾಗಿ ಬಂದೂಕು ಹೋರಾಟ ನಡೆಸುತ್ತಿರುವ ಆಲ್ ತ್ರಿಪುರಾ ಟೈಗರ್ಸ್ ಫೋರ್ಸ್ ಸಿಪಿಐಎಂ ಸರಕಾರದ ಬುಡಕಟ್ಟು ಶಾಸಕರು, ಮಾಜಿ ಶಾಸಕರು, ಸಚಿವರು, ಎಡ ಕಾರ್ಯಕರ್ತರ ಮನೆ ಮಕ್ಕಳನ್ನು ಸುಟ್ಟು ಹಾಕಿದ್ದಾರೆ. ಆದರೆ ಭೂಗತ ಆಲ್ ತ್ರಿಪುರಾ ಟೈಗರ್ಸ್ ಫೋರ್ಸ್ ನ ಯುವಕರ ಮನೆ, ಕುಟುಂಬಕ್ಕೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಸಿಪಿಐಎಂ ಸರಕಾರ ಭದ್ರತೆ ನೀಡಿದೆ. 25 ವರ್ಷ ಆಡಳಿತ ನಡೆಸುತ್ತಿರುವ ಎಡ ಸರಕಾರ ತನ್ನ ಕಾರ್ಯಕರ್ತರ ಮೇಲೆ ನಿಯಂತ್ರಣವನ್ನು ಸ್ವಲ್ಪ ಸಡಿಲಗೊಳಿಸುತ್ತಿದ್ದರೂ ಸಹ ಆಲ್ ತ್ರಿಪುರಾ ಟೈಗರ್ಸ್ ಫೋರ್ಸ್ ಪ್ರಾಬಲ್ಯ ಹೊಂದಿರುವ ಟಕರ್ಜಾಲ, ಸಚಿಯಬಾರಿಯಂತಹ ಗ್ರಾಮಗಳು, ಅವರನ್ನು ಬೆಂಬಲಿಸುವ ಕುಟುಂಬಗಳು ಬೆಂಕಿಗೆ ಆಹುತಿಯಾಗುತ್ತಿದ್ದವು. ಆದರೆ ಸಿಪಿಐಎಂ ಸರಕಾರ ಉಗ್ರರ ದಾಳಿಯನ್ನು ಸಂವಿಧಾನಾತ್ಮಕವಾಗಿ ಎದುರಿಸಿತ್ತು. ಯಾರು ದಾಳಿ ಮಾಡಿದ್ದಾರೋ ಅವರ ಮೇಲೆ ಮಾತ್ರ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿತ್ತೇ ಹೊರತು ಎಡ ಕಾರ್ಯಕರ್ತರು ದಾಳಿಕೋರರ ಮಾದರಿಯಲ್ಲೇ ಉತ್ತರ ಕೊಟ್ಟಿಲ್ಲ. ಬುಡಕಟ್ಟು ಉಗ್ರರ ಮೇಲಿನ ದಾಳಿ ಅಮಾಯಕ ಬುಡಕಟ್ಟುಗಳ ಮಾರಣ ಹೋಮಕ್ಕೆ ಕಾರಣವಾಗಬಾರದು ಎಂಬ ಸಿಪಿಐಎಂ ನಿಲುವು ಇದಕ್ಕೆ ಕಾರಣವಾಯ್ತು. ಅಂಬೇಡ್ಕರ್, ಬುದ್ಧರನ್ನು ಒಳಗೊಂಡ ಮಾರ್ಕ್ಸ್ ವಾದ ತ್ರಿಪುರಾದ ಎಡಚಳವಳಿಯನ್ನು ಸದ್ಯದ ದಿನದಲ್ಲಿ ಸಂಕಷ್ಟಕ್ಕೆ ದೂಡಿದರೂ ಅಂತಿಮವಾಗಿ ಜಯಗಳಿಸುತ್ತದೆ ಎಂಬುದು ನಿರೀಕ್ಷೆ.