ಕಾವ್ಯದ ಮೂಲಕ ಅಭಿಯಾನ
ಈ ಹೊತ್ತಿನ ಹೊತ್ತಿಗೆ
ಶಾರದಾ ಎ. ಅಂಚನ್ ಅವರು ದೂರದ ಮುಂಬಯಿಯಲ್ಲಿದ್ದುಕೊಂಡು ಕನ್ನಡ ಸಾಹಿತ್ಯದ ಕೈಂಕರ್ಯವನ್ನು ಮಾಡುತ್ತಾ ಬರುತ್ತಿದ್ದಾರೆ. ತಮ್ಮ ಭಾವಾಲೋಚನೆಗಳನ್ನು ಕವಿತೆಗಳ ಮೂಲಕ, ಮತ್ತು ಗದ್ಯ ಬರಹಗಳ ಮೂಲಕ ಪ್ರಾಮಾಣಿಕವಾಗಿ ಮತ್ತು ಪರಿಣಾಮಕಾರಿಯಾಗಿ ಅಭಿವ್ಯಕ್ತಿಸುತ್ತಾ ಬಂದಿದ್ದಾರೆ. ಈಗಾಗಲೇ ಎರಡು ಕವನ ಸಂಕಲನಗಳನ್ನು ಹೊರತಂದಿರುವ ಶಾರದಾ ಅವರ ಮೂರನೆಯ ಸಂಕಲನ ‘ಅಭಿಯಾನ’. ಇಲ್ಲಿ ನಲವತ್ತು ಕವಿತೆಗಳಿವೆ. ದಂತಗೋಪುರದಲ್ಲಿ ಕೂತು ಬರೆಯದೆ, ಬದುಕಿನ ವಾಸ್ತವಗಳಿಗೆ ಮುಖಾಮುಖಿಯಾಗಿ ಬರೆಯುವ ಎದೆಗಾರಿಕೆಯನ್ನು ಕವಯಿತ್ರಿ ಈ ಕವಿತೆಗಳಲ್ಲಿ ಪ್ರಕಟಪಡಿಸಿದ್ದಾರೆ. ಕಾಮ, ಕ್ರೌರ್ಯಗಳ ಕುರಿತಂತೆ ಬರೆಯುವ ಲೇಖಕಿ ತಮ್ಮ ಪ್ರತೀ ಸಾಲುಗಳಲ್ಲಿ ಸಾಮಾಜಿಕ ಎಚ್ಚರಿಕೆಯನ್ನು ಹೊಂದಿದ್ದಾರೆ. ಅವರು ಆಯ್ದುಕೊಂಡ ಬಹುತೇಕ ವಸ್ತುಗಳು ಇವುಗಳಿಗೆ ಸಾಕ್ಷಿಯಾಗಿವೆ.
‘ಅಭಿಯಾನ’ ಕವಿತೆ ಸರಕಾರ ಹಮ್ಮಿಕೊಂಡಿರುವ ‘ಸ್ವಚ್ಛತಾ ಅಭಿಯಾನ’ಕ್ಕೆ ಸಂಬಂಧಿಸಿದ್ದು. ದೇಶದ ಪರಿಸರದ ಸ್ವಚ್ಛತೆಯ ಬಗ್ಗೆ ಮಾತನಾಡುತ್ತಲೇ, ಮನುಷ್ಯನ ಅಂತರಂಗದ ಸ್ವಚ್ಛತೆಯ ಕಡೆಗೆ ಅವರು ಈ ಕವಿತೆಯಲ್ಲಿ ಬೆಟ್ಟು ಮಾಡುತ್ತಾರೆ. ಬಹಿರಂಗ ಶುದ್ಧಿಯ ಜೊತೆಗೆ ಅಂತರ ಶುದ್ಧಿಯ ಅಗತ್ಯವೂ ಇದೆ ಎನ್ನುವುದನ್ನು ಈ ಕವಿತೆಯಲ್ಲಿ ಹೇಳುವ ಪ್ರಯತ್ನ ಮಾಡುತ್ತಾರೆ. ಚಂದ್ರನ ಅಂಗಳಕ್ಕೆ ಕಾಲಿಟ್ಟಿರುವ ‘ಮಾಮ್’ನ್ನು ಉಲ್ಲೇಖಿಸಿ ಬರೆಯುತ್ತಾ, ಮಂಗಳಗ್ರಹದಲ್ಲಿ ಹೊಸತೊಂದು ಬದುಕು ಕಟ್ಟುವ ಕನಸನ್ನು ಕವಯತ್ರಿ ಕಾಣುತ್ತಾರೆ. ಅಲ್ಲಿ ಮಾನವೀಯತೆಯ ಸೆಲೆಯನ್ನು ಶೋಧಿಸಿ, ನೆಮ್ಮದಿಯ ಬದುಕನ್ನು ಹುಡುಕುವ ಮಾಮ್‌ನ್ನು ಸಾಂಕೇತಿಕವಾಗಿ ಅವರು ಪದ್ಯದಲ್ಲಿ ಬಳಸುತ್ತಾರೆ. ನಾಲಗೆಯ ಬಗ್ಗೆ ಬರೆಯುತ್ತಾ, ಅದು ಹೇಗೆ ನಮ್ಮ ಮನೆ, ಮನವನ್ನು ಒಡೆಯಲು ಕಾರಣವಾಗಿದೆ ಎನ್ನುವುದನ್ನು ವಿವರಿಸುತ್ತಾ ಮಾನವೀಯತೆಯನ್ನು ಮೆರೆಯಲು ನಾಲಗೆಗೆ ಸಲಹೆ ನೀಡುತ್ತಾರೆ. ‘‘ರಕ್ತಬೇಕಿದೆ’’ ಎಂಬ ಕವಿತೆಯಲ್ಲಿ ಹೇಗೆ ರಕ್ತವೆನ್ನುವುದು ಜಾತಿ, ಧರ್ಮವನ್ನು ಒಂದಾಗಿತ್ತುದೆ ಎನ್ನುವುದನ್ನು ಹೇಳುತ್ತಾರೆ. ರಕ್ತ ಚೆಲ್ಲುವುದಕ್ಕಿರುವುದಲ್ಲ, ಬದುಕಿಸುವುದಕ್ಕೆ ಎಂದು ಹೇಳುತ್ತಾರೆ.
ಹೆಚ್ಚಿನ ಪದ್ಯಗಳು ವಾಚ್ಯಗಳಾಗಿವೆ. ಪದ್ಯಗಳಾಗಬಹುದಾದ ಸಾಲುಗಳು ಪದಗಳ ದುಂದುವೆಚ್ಚದಿಂದ ಗದ್ಯಗಳಂತೆ ಭಾಸವಾಗುತ್ತಿವೆ. ಅವರ ಸಾಲುಗಳು ಕಾವ್ಯವಾಗಿ ಇನ್ನಷ್ಟು ಮಾಗಬೇಕಾಗಿದೆ, ಬಾಗಬೇಕಾಗಿದೆ. ಪೂಜಾ ಪ್ರಕಾಶನ ಮುಂಬಯಿ ಕೃತಿಯನ್ನು ಹೊರತಂದಿದೆ. 86 ಪುಟಗಳ ಈ ಕೃತಿಯ ಮುಖಬೆಲೆ 150 ರೂಪಾಯಿ. ಆಸಕ್ತರು 9821621501 ದೂರವಾಣಿಯನ್ನು ಸಂಪರ್ಕಿಸಬಹುದು.