ಸರಕಾರದ ಆಡಳಿತದಲ್ಲಿ ಡಿಜಿಟಲ್ ಕನ್ನಡ
ಡಿಜಿಟಲ್ ಕನ್ನಡ
ಕರ್ನಾಟಕ ಸರಕಾರವು ತನ್ನ ಆಡಳಿತವನ್ನು ಪಾರದರ್ಶಕವಾಗಿ ನಡೆಸಲು ಮತ್ತು ಸಾರ್ವಜನಿಕರಿಗೆ ತ್ವರಿತ ಸೇವೆಯನ್ನು ನೀಡಲು ವಿದ್ಯುನ್ಮಾನ ಆಡಳಿತ (ಇ-ಆಡಳಿತ) ಇಲಾಖೆಯನ್ನು ಆರಂಭಿಸಿತ್ತು. ಈಗ ಆ ಇಲಾಖೆಯು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯೊಳಗೆ ವಿಲೀನಗೊಂಡು ಒಂದು ವಿಭಾಗವಾಗಿ ಮುಂದುವರಿದಿದೆ. ಇ-ಆಡಳಿತದ ಜೊತೆಗೆ ಈಗ ಎಂ-ಆಡಳಿತ (ಮೊಬೈಲ್ ಆಡಳಿತ) ಆರಂಭಗೊಂಡಿದೆ. ನೂರಾರು ಜನಪರ ಸೇವೆಗಳು ಆನ್‌ಲೈನ್‌ನಲ್ಲಿ ಲಭ್ಯವಾಗುತ್ತಿವೆ. ಇಂತಹ ಜನಪರ ಡಿಜಿಟಲ್ ಸೇವೆಗಳಲ್ಲಿ ಕನ್ನಡದ ಸ್ಥಾನಮಾನವೇನು ಎಂಬುದು ಈಗಿನ ಪ್ರಶ್ನೆ. ಎರಡು ದಶಕಗಳ ಹಿಂದೆಯೇ ‘ಭೂಮಿ’ ಎಂಬ ಹೆಸರಿನ ತಂತ್ರಾಂಶವನ್ನು ಸರಕಾರವು ಅಭಿವೃದ್ಧಿಗೊಳಿಸಿ ರೈತರ ಆರ್.ಟಿ.ಸಿ., ಪಹಣಿ ಇತ್ಯಾದಿ ದಾಖಲೆಗಳ ಡಿಜಿಟಲ್ ಪ್ರತಿಗಳು ಸುಲಭವಾಗಿ ದೊರೆಯುವಂತೆ ಡಿಜಿಟಲೀಕೃತ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿತು. 2006ರಲ್ಲಿ ಈ ‘‘ಭೂಮಿ ತಂತ್ರಾಂಶವನ್ನು ‘‘ಕಾವೇರಿ’’ ಹೆಸರಿನ ನೋಂದಣಿ ತಂತ್ರಾಂಶದೊಳಗೆ ಸೇರಿಸಿ ಎರಡನ್ನೂ ಏಕೀಕೃತಗೊಳಿಸಲಾಗಿದೆ. ಈ ತಂತ್ರಾಂಶಗಳಿಗೆ ದೇಶವ್ಯಾಪಿ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ. ದೇಶದ ಬೇರೆಬೇರೆ ರಾಜ್ಯಗಳ ಕಂದಾಯ ಇಲಾಖೆ ಅಧಿಕಾರಿಗಳ ತಂಡಗಳು ಕರ್ನಾಟಕಕ್ಕೆ ಭೇಟಿ ನೀಡಿ, ವಾಹಿತಿ ಪಡೆದು, ಮೆಚ್ಚುಗೆ ವ್ಯಕ್ತಪಡಿಸಿವೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗಳನ್ನೂ ಸಹ ಗಳಿಸಿರುವ ಈ ತಂತ್ರಾಂಶಗಳ ವಿಶೇಷವೆಂದರೆ, ಇಡೀ ದತ್ತಸಂಚಯವು ಕನ್ನಡದಲ್ಲಿರುವುದು. ದತ್ತಸಂಚಯದ ಭಾಷಾ ತಂತ್ರಜ್ಞಾನವು ಸಾಕಷ್ಟು ಅಭಿವೃದ್ಧಿಗೊಳ್ಳದಿದ್ದ ಅಂದಿನ ಕಾಲದಲ್ಲಿಯೇ ಡಿಜಿಟಲ್ ಕನ್ನಡವು ರಾರಾಜಿಸಿದ್ದಕ್ಕೆ ಕಾರಣವಿದೆ. ಡಿಜಿಟಲೀಕರಣದ ಹೆಸರಿನಲ್ಲಿ ಎಲ್ಲೆಡೆ ಆಗುವಂತೆ ಇಲ್ಲಿ ಇಂಗ್ಲಿಷ್ ಕೈಮೇಲಾಗಲು ಸಾಧ್ಯವೇ ಇರಲಿಲ್ಲ. ರೈತರ ದಾಖಲೆಗಳು ಜನಸಾಮಾನ್ಯರ ಭಾಷೆಯಲ್ಲಿ ಇರಬೇಕಾದುದು ಅನಿವಾರ್ಯವಾಗಿತ್ತು. ಅದಕ್ಕಾಗಿ ಅಂದು ಲಭ್ಯವಿದ್ದ ಭಾಷಾ ತಂತ್ರಜ್ಞಾನವನ್ನು ಹುಡುಕಿ ಅಳವಡಿಸಲಾಯಿತು.
2012ರವರೆಗೂ ಕರ್ನಾಟಕ ಸರಕಾರವು ತಂತ್ರಾಂಶ ತಯಾರಿಕೆ ಮತ್ತು ಬಳಕೆಯ ತನ್ನ ನೀತಿಯಲ್ಲಿ ಕನ್ನಡದ ಕುರಿತಾಗಿ ಸ್ಪಷ್ಟ ನಿಲುವನ್ನು ಪ್ರಕಟಿಸಿರಲಿಲ್ಲ. ಐದು ವರ್ಷಗಳ ಹಿಂದೆ ಸರಕಾರವು ಸರಕಾರಿ ಮತ್ತು ಸಾರ್ವಜನಿಕ ವಲಯಗಳಲ್ಲಿ ಡಿಜಿಟಲ್ ಕನ್ನಡ ಬಳಕೆ ಮತ್ತು ತಂತ್ರಾಂಶ ತಯಾರಿಕೆಯಲ್ಲಿ ಯೂನಿಕೋಡ್ ಶಿಷ್ಟತೆಯನ್ನು ಅಳವಡಿಸುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ‘ನುಡಿ’ ತಂತ್ರಾಂಶವನ್ನು ಕಂಪ್ಯೂಟರ್‌ಗಳಲ್ಲಿ ಬಳಸುತ್ತಾ ಬರುತ್ತಿರು ವುದನ್ನು ಹೊರತು ಪಡಿಸಿದರೆ, ಕೆಲಸಕಾರ್ಯಗಳ ಗಣಕೀಕರಣವನ್ನು ಇಂಗ್ಲಿಷ್‌ನಲ್ಲಿಯೇ ಕೈಗೊಳ್ಳಲಾಗುತ್ತಿತ್ತು. ಈಗಲೂ ಕೆಲವು ಕಂಪ್ಯೂಟರೀಕರಣ ಯೋಜನೆಗಳಲ್ಲಿ ಸಂಸ್ಕರಿತ ಮಾಹಿತಿಗಳನ್ನು ಜನಸಾಮಾನ್ಯರಿಗೆ ನೀಡುವ ಹಾಗಿದ್ದರೆ ಮಾತ್ರ ಅಂತಹವುಗಳನ್ನು, ಅಂದರೆ, ಔಟ್‌ಪುಟ್‌ನ್ನು ಮಾತ್ರ ಕನ್ನಡದಲ್ಲಿ ತೆಗೆದುಕೊಳ್ಳುವ ವ್ಯವಸ್ಥೆ ಇರುವ ತಂತ್ರಾಂಶಗಳನ್ನು ಸಿದ್ಧಪಡಿಸಿ ಬಳಸಲಾಗುತ್ತಿದೆ. ಇಂತಹ ಔಟ್‌ಪುಟ್‌ನಲ್ಲಿ ದತ್ತಸಂಚಯದಿಂದ (ಡೇಟಾಬೇಸ್) ಬರುವ ಮಾಹಿತಿಗಳು ಇಂಗ್ಲಿಷ್‌ನಲ್ಲಿಯೇ ಇರುತ್ತವೆ. ಕೇವಲ ಇತರ ವಿಷಯಗಳು ಮಾತ್ರ ಕನ್ನಡದ ಪೂರ್ವಮುದ್ರಿತ ನಮೂನೆಗಳಲ್ಲಿರುತ್ತವೆ. ಕೋಮ್ಯಾಟ್ ಕಂಪೆನಿಯು ಆಹಾರ ಇಲಾಖೆಯ ಬಳಕೆಗಾಗಿ ಸಿದ್ಧಪಡಿಸಿರುವ ಪಡಿತರಚೀಟಿಯ ತಂತ್ರಾಂಶವು ಇದಕ್ಕೆ ಒಂದು ಅಪವಾದವಾಗಿದೆ. ಇದರಲ್ಲಿ ಯುನಿಕೋಡ್ ಕನ್ನಡ ಲಿಪಿವ್ಯವಸ್ಥೆಯನ್ನು ಸಮರ್ಥವಾಗಿ ಬಳಸಿಕೊಂಡಿರುವ ಕಾರಣ, ಮಾಹಿತಿಯನ್ನು ಕನ್ನಡದಲ್ಲಿಯೇ ಊಡಿಸಿ, ಸಂಸ್ಕರಿಸಿ, ಹೊರಪಡೆಯುವ ವ್ಯವಸ್ಥೆಯಿದೆ. ಅನಿವಾರ್ಯ ಸಂದರ್ಭಗಳಲ್ಲಿ ಭಾಷಾ ತಂತ್ರಜ್ಞಾನವನ್ನು ಹುಡುಕಿ, ಅದನ್ನು ಹೇಗೆ ಅಳವಡಿಸಿ ಬಳಸಲಾಗಿದೆ ಎಂಬುದನ್ನು ತಿಳಿಯಲು ಇತಿಹಾಸದ ಪುಟಗಳನ್ನು ತಿರುವಿಹಾಕಲೇಬೇಕು. ಹಳೆಯದನ್ನು ಅರ್ಥೈಸಿಕೊಳ್ಳದಿದ್ದರೆ, ಹೊಸತೂ ಸಹ ನಮ್ಮ ಅರಿವಿನ ಅಳತೆಗೆ ಸಿಗುವುದಿಲ್ಲ ಎಂಬ ಮಾತೊಂದಿದೆ.
ಭಾರತೀಯ ಭಾಷೆಗಳಿಗಾಗಿ ಎರಡೂವರೆ ದಶಕಗಳ ಹಿಂದೆ ಆವಿಷ್ಕಾರಗೊಂಡ ‘ಜಿಸ್ಟ್’ ತಂತ್ರಜ್ಞಾನ Graphics and Intelligence based Script Technology (GIST)] ಆಡಳಿತ ರಂಗದಲ್ಲಿಯೂ ಉಪಯುಕ್ತವಾಯಿತು. ಭಾರತೀಯ ಭಾಷೆಗಳ ಕಂಪ್ಯೂಟಿಂಗ್‌ಗಾಗಿ ನೂತನ ತಂತ್ರಜ್ಞಾನದ ಸಂಶೋಧನೆಯ ಅಂಗವಾಗಿ ಒಂದು ಪರ್ಸನಲ್ ಕಂಪ್ಯೂಟರಿಗೆ (ಪಿ.ಸಿ) ಹೊರಗಿನಿಂದ ಒಂದು ಸಮಾನಾಂತರ ವ್ಯವಸ್ಥೆಯನ್ನು ನಿರ್ಮಿಸಿ, ಭಾರತೀಯ ಭಾಷೆಗಳ ಲಿಪಿಗಳನ್ನು ಊಡಿಸುವ ವ್ಯವಸ್ಥೆಯನ್ನು ಐಐಟಿ ಕಾನ್ಪುರ್‌ನಲ್ಲಿ ತಂತ್ರಜ್ಞರಾಗಿದ್ದ ಮುಂಬೈನ ಶ್ರೀ ಮೋಹನ್ ತಾಂಬೆ ನಿರ್ಮಿಸಿದ್ದರು, ಆದರೆ ಅದು, ಇಂಗ್ಲಿಷ್ ಪಠ್ಯ ಪ್ರದರ್ಶನಕ್ಕೆ ಒಂದು ಪಿ.ಸಿ. ಮತ್ತು ದೇಸೀ ಭಾಷಾ ಪಠ್ಯಗಳ ಪ್ರದರ್ಶನಕ್ಕೆ ಮತ್ತೊಂದು ಪಿ.ಸಿ., ಈ ರೀತಿ ಎರಡು ಪಿ.ಸಿ.ಗಳನ್ನು ಒಂದರ ಪಕ್ಕ ಮತ್ತೊಂದು ಇರುವಂತೆ ವ್ಯವಸ್ಥೆಗೊಳಿಸಿದ್ದರಿಂದ, ಬಳಕೆದಾರನು ಎರಡು ಕಂಪ್ಯೂಟರ್‌ಗಳನ್ನು ಬಳಸಿ ಕಾರ್ಯ ನಿರ್ವಹಿಸುವಂತೆ ತೋರುತ್ತಿತ್ತು. ಈ ವ್ಯವಸ್ಥೆಯನ್ನು ಒಂದೇ ಪಿ.ಸಿ.ಯೊಳಗೆ ಅಳವಡಿಸಲು ಸಾಧ್ಯವಾಗುವಂತೆ ಒಂದು ಸಂಯೋಜನೆ ತಂತ್ರವನ್ನು ಬಳಸಿ ಮೊದಲಿಗೆ ಪಿ.ಸಿ.ಮೇಟ್ ಎಂದು ಕರೆಯಲಾದ ಕಾರ್ಡ್ ಒಂದನ್ನು ಕನ್ನಡಿಗರಾದ ಶ್ರೀ ಎಸ್.ಕೆ.ಆನಂದ್ ಸಿದ್ಧಪಡಿಸಿದರು. ಅದೇ ಕಾರ್ಡ್ ಮುಂದೆ ಜಿಸ್ಟ್ ಕಾರ್ಡ್ ಎಂಬ ಹೆಸರು ಪಡೆಯಿತು. ಈ ತಂತ್ರಜ್ಞಾನವು ಜಿಸ್ಟ್ ತಂತ್ರಜ್ಞಾನ ಎಂದು ಪ್ರಸಿದ್ಧವಾಯಿತು. ಈ ಜಿಸ್ಟ್ ತಂತ್ರಜ್ಞಾನವನ್ನು ಬಳಸಿ ಪುಣೆಯ (ಸೆಂಟರ್ ಫಾರ್ ಡೆವೆಲಪ್‌ಮೆಂಟ್ ಆಫ್ ಅಡ್ವಾನ್ಸಡ್ ಕಂಪ್ಯೂಟಿಂಗ್) ಸಿ-ಡ್ಯಾಕ್ ಸಂಸ್ಥೆಯು ಭಾರತೀಯ ಭಾಷೆಗಳ ಕಂಪ್ಯೂಟಿಂಗ್ ಉದ್ದೇಶಗಳಿಗೆ ಡಾಸ್ ವೇದಿಕೆಯಲ್ಲಿ ಕಾರ್ಯನಿರ್ವಹಿಸುವ ಹಲವಾರು ತಂತ್ರಾಂಶಗಳನ್ನು ಸಿದ್ಧಪಡಿಸಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿತು. ಈ ತಂತ್ರಾಂಶಗಳನ್ನು ಹಲವಾರು ರಾಜ್ಯಗಳ ಸರಕಾರಗಳು ತಮ್ಮ ದೈನಂದಿನ ಕಂಪ್ಯೂಟರ್ ಬಳಕೆಯಲ್ಲಿ ಅಳವಡಿಸಿಕೊಂಡವು. ಕರ್ನಾಟಕ ಸರಕಾರದ ಮಹತ್ವದ ‘ಭೂಮಿ ತಂತ್ರಾಂಶದಲ್ಲಿಯೂ ಇದೇ ಯಂತ್ರಾಂಶ (ಹಾರ್ಡ್‌ವೇರ್) ಮತ್ತು ತಂತ್ರಾಂಶಗಳು (ಸಾಫ್ಟ್ ವೇರ್) ಬಳಕೆಯಾದವು. ಹಲವಾರು ಭಾರತೀಯ ಭಾಷಾ ವೃತ್ತಪತ್ರಿಕೆಗಳೂ ಸಹ ತಮ್ಮ ಮುದ್ರಣ ಆವಶ್ಯಕತೆಗಳಿಗಾಗಿ ಈ ತಂತ್ರಾಂಶಗಳನ್ನು ಬಳಸಲು ಆರಂಭಿಸಿದರು. ಕಂಪ್ಯೂಟರಿನಲ್ಲಿ ದೇಸೀ ಭಾಷಾಬಳಕೆಗಿದ್ದ ಅಡೆತಡೆಗಳೂ ನಿವಾರಣೆಯಾದವು.
‘ಜಿಸ್ಟ್‌ಕಾರ್ಡ್’ನ್ನು ಕಂಪ್ಯೂಟರ್‌ನೊಳಗೆ ಅಳವಡಿಸಿಕೊಳ್ಳುವ ಮೂಲಕ ಬಹುಭಾಷಾ ಲಿಪಿವ್ಯವಸ್ಥೆಯನ್ನು ’ಜಿಸ್ಟ್’ ತಂತ್ರಜ್ಞಾನವು ಒದಗಿಸಿತು. ಹೀಗೆ ದೊರೆತ ಭಾರತೀಯ ಭಾಷಾ ಲಿಪಿವ್ಯವಸ್ಥೆಯಲ್ಲಿ ಕನ್ನಡ ಭಾಷೆಯೂ ಸಹ ಒಂದು. ಇದೇ ಜಿಸ್ಟ್ ತಂತ್ರಜ್ಞಾನದ ಮುಂದುವರಿದ ಭಾಗವಾಗಿ, ಜಿಸ್ಟ್‌ಕಾರ್ಡ್ ಎಂಬ ಯಂತ್ರಾಂಶದ ಬೆಂಬಲವಿಲ್ಲದೆ ನೇರವಾಗಿ ತಂತ್ರಾಂಶದ ಸಹಾಯದಿಂದಲೇ, ಲಿಪಿಗಳನ್ನು ಮೂಡಿಸುವ ’ಜಿಸ್ಟ್‌ಶೆಲ್’ ಎಂಬ ತಂತ್ರಾಂಶವನ್ನು ಸಿ-ಡ್ಯಾಕ್ ಸಂಸ್ಥೆಯು ಬಿಡುಗಡೆ ಮಾಡಿತು. ಈ ಜಿಸ್ಟ್‌ಶೆಲ್ ಬಳಸಿ ಕಂಪ್ಯೂಟರ್‌ನ (ಅಂದಿನ) ಡಾಸ್‌ಆಧಾರಿತ ಆನ್ವಯಿಕ ತಂತ್ರಾಂಶಗಳಾದ, ಡಿಬೇಸ್, ಲೋಟಸ್-123 ಇತ್ಯಾದಿಗಳಲ್ಲಿಯೂ ಕನ್ನಡವನ್ನು ಬಳಸಲು ಸಾಧ್ಯವಾಯಿತು. ಇದರಿಂದಾಗಿ, ಅಂದು, ಕೇವಲ ಪದಸಂಸ್ಕರಣೆಗಾಗಿ ಮಾತ್ರ ಸೀಮಿತವಾಗಿದ್ದ ಕನ್ನಡ ಭಾಷಾ ಬಳಕೆಯು, ದತ್ತಸಂಸ್ಕಣಾ ಕಾರ್ಯಗಳಿಗೂ ಸಹ ವಿಸ್ತರಿಸಿತು.
ಕನ್ನಡಕ್ಕೆ ಇಂದು ಹಲವು ಆಧುನಿಕ ತಂತ್ರಜ್ಞಾನಗಳು ಲಭ್ಯವಾಗಿವೆ. ವಿದ್ಯುನ್ಮಾನ ಆಡಳಿತದ ಹೆಸರಿನಲ್ಲಿ ನಡೆದಿರುವ ವಿವಿಧ ಇಲಾಖೆಗಳ ಕಂಪ್ಯೂಟರೀಕರಣದಲ್ಲಿ ಸಮಗ್ರವಾಗಿ ಕನ್ನಡವನ್ನು ಬಳಸುವಲ್ಲಿ ಇರುವ ತೊಡಕುಗಳು ಯಾವುವು ಎಂಬುದನ್ನು ಗಮನಿಸಿದರೆ, ಅದು ಕೇವಲ ಇಚ್ಛಾಶಕ್ತಿಯ ಕೊರತೆ ಮಾತ್ರ ಎಂಬುದು ಎದ್ದು ಕಾಣುವ ಅಂಶವಾಗಿದೆ. ಸರಕಾರದ ಆಡಳಿತದ ಎಲ್ಲ ಹಂತಗಳಲ್ಲಿ ಡಿಜಿಟಲ್ ಕನ್ನಡದ ಬಳಕೆಯು ಯೂನಿಕೋಡ್ ಶಿಷ್ಟತೆಯನ್ನು ಆಧರಿಸಿಯೇ ಆಗತಕ್ಕದ್ದೆಂದು ಆದೇಶವಾಗಿ ಐದು ವರ್ಷಗಳೇ ಕಳೆದಿವೆ. ಆದರೆ, ಅಂತರ್ಜಾಲದಲ್ಲಿ ಹೊರತುಪಡಿಸಿ ಬೇರೆ ಎಲ್ಲೆಡೆ ಹಳೆಯ (ಆಸ್ಕಿ-ಎನ್‌ಕೋಡಿಂಗ್) ಫಾಂಟ್‌ಗಳ ಬಳಕೆ ಮುಂದುವರಿದೇ ಇದೆ. ಕನ್ನಡವನ್ನು ಇಂಗ್ಲಿಷ್‌ನಷ್ಟೇ ಸಮರ್ಥವಾಗಿ ಬಳಸಲು ಹಿಂದೆ ಇದ್ದ ತಾಂತ್ರಿಕ ತೊಡಕುಗಳು ಇಂದು ಇಲ್ಲವಾಗಿವೆ. ಶಿಷ್ಟತೆಗಳ ಅನುಸಾರವಿರುವ ಉಚಿತ ತಂತ್ರಾಂಶಗಳೂ (ಉದಾ: ‘ಪದ ತಂತ್ರಾಂಶ) ಸಹ ಲಭ್ಯ ಇವೆ. ಇವುಗಳನ್ನು ಬಳಸಿಕೊಂಡು ಆನ್ವಯಿಕ ತಂತ್ರಾಂಶಗಳನ್ನು ಸಿದ್ಧಪಡಿಸುವಲ್ಲಿ ಹೆಚ್ಚಿನ ಸಮಸ್ಯೆಗಳಿಲ್ಲ. ಆಡಳಿತದ ಉನ್ನತ ಮಟ್ಟದಲ್ಲಿ ನೀತಿ-ನಿರ್ಧಾರಗಳನ್ನು ಕೈಗೊಳ್ಳುವ ಸರಕಾರೀ ಅಧಿಕಾರಿಗಳು, ಸರಕಾರವನ್ನು ನಡೆಸುವ ಜನಪ್ರತಿನಿಧಿಗಳು ಮತ್ತು ಕನ್ನಡವನ್ನು ಕಂಪ್ಯೂಟರ್‌ಗಳಲ್ಲಿ ಸಮರ್ಥವಾಗಿ ಅಳವಡಿಸುವ ಇಚ್ಛಾಶಕ್ತಿಯನ್ನು ತೋರಬೇಕಾಗಿದೆ.
ಎರಡು ದಶಕಗಳ ಹಿಂದೆಯೇ ‘ಭೂಮಿ’ ಎಂಬ ಹೆಸರಿನ ತಂತ್ರಾಂಶವನ್ನು ಸರಕಾರವು ಅಭಿವೃದ್ಧಿಗೊಳಿಸಿ ರೈತರ ಆರ್‌ಟಿಸಿ, ಪಹಣಿ ಇತ್ಯಾದಿ ದಾಖಲೆಗಳ ಡಿಜಿಟಲ್ ಪ್ರತಿಗಳು ಸುಲಭವಾಗಿ ದೊರೆಯುವಂತೆ ಡಿಜಿಟಲೀಕೃತ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿತು. 2006ರಲ್ಲಿ ಈ ‘‘ಭೂಮಿ’’ ತಂತ್ರಾಂಶವನ್ನು ‘‘ಕಾವೇರಿ’’ ಹೆಸರಿನ ನೋಂದಣಿ ತಂತ್ರಾಂಶದೊಳಗೆ ಸೇರಿಸಿ ಎರಡನ್ನೂ ಏಕೀಕೃತಗೊಳಿಸಲಾಗಿದೆ. ಈ ತಂತ್ರಾಂಶಗಳಿಗೆ ದೇಶವ್ಯಾಪಿ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ.
ಡಾ. ಎ. ಸತ್ಯನಾರಾಯಣ