ಚುನಾವಣೆ ಘೋಷಣೆಯಾದರೆ 24 ಗಂಟೆಯೊಳಗೆ ಪ್ರಚಾರ ಸಾಮಗ್ರಿ ತೆರವುಗೊಳಿಸಬೇಕು: ಡಿ.ಎಸ್ ರಮೇಶ್
ದಾವಣಗೆರೆ,ಮಾ.17: ಚುನಾವಣೆ ಘೋಷಣೆಯಾದ 24 ಗಂಟೆಯೊಳಗೆ ಸಾರ್ವಜನಿಕ ಸ್ಥಳಗಳಲ್ಲಿರುವ ಯಾವುದೇ ರಾಜಕೀಯ ಪಕ್ಷದ ಬ್ಯಾನರ್, ಫ್ಲೆಕ್ಸ್, ಹೋರ್ಡಿಂಗ್ಸ್ ಮುಂತಾದವುಗಳನ್ನು ಕಡ್ಡಾಯವಾಗಿ ತೆರವುಗೊಳಿಸಬೇಕು. ತೆರವುಗೊಳಿಸಲಾಗದಂತಹ ಸಮಯದಲ್ಲಿ ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೆ ಬಿಳಿ ಬಟ್ಟೆಯಿಂದ ಮುಚ್ಚಬೇಕೆಂದು ಜಿಲ್ಲಾಧಿಕಾರಿ ಡಿ.ಎಸ್ ರಮೇಶ್ ಸೂಚಿಸಿದರು.
ಶನಿವಾರ ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಚುನಾವಣಾ ಕಾರ್ಯಕ್ಕೆ ನಿಯೋಜಿತರಾದ ಅಧಿಕಾರಿಗಳು, ರಾಜಕೀಯ ಪಕ್ಷಗಳ ಪ್ರತಿನಿಧಿಗಳನ್ನುದ್ದೇಶಿಸಿ ಅವರು ಮಾತನಾಡಿ, ಈ ನಿಟ್ಟಿನಲ್ಲಿ ಈಗಾಗಲೇ ಸಮಿತಿಗಳನ್ನು ರಚಿಸಿ ಸೂಕ್ತ ನಿರ್ದೇಶನ ನೀಡಲಾಗಿದೆ ಹಾಗೂ ಯಾವ ಕಾನೂನುಗಳಡಿ ಕ್ರಮ ವಹಿಸಬೇಕೆಂದು ತಿಳಿಸಲಾಗಿದೆ. ಅದರಂತೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ಚುನಾವಣಾ ಕಾರ್ಯಗಳನ್ನು ಯಶಸ್ವಿಯಾಗುವಂತೆ ನೋಡಿಕೊಳ್ಳಬೇಕು ಎಂದರು.
ಚುನಾವಣಾ ಆಯೋಗ ಸಾರ್ವಜನಿಕ ಸ್ಥಳಗಳ ಪ್ರಕಟಣೆಗೆ ಕೆಲವೊಂದು ನೀತಿಗಳನ್ನು ರೂಪಿಸಿದೆ. ಅದರಂತೆ ಸ್ಥಳೀಯ ಸಂಸ್ಥೆಗಳಾದ ಗ್ರಾ.ಪಂ., ತಾ.ಪಂ, ಜಿ.ಪಂ, ಪಾಲಿಕೆಗಳು ಕೆಲವೊಂದು ಸಾರ್ವಜನಿಕ ಸ್ಥಳಗಳಲ್ಲಿ ಚುನಾವಣಾ ಜಾಹೀರಾತಿಗೆ ಅವಕಾಶ ಮಾಡಿಕೊಡುತ್ತವೆ. ಸಂಬಂಧಿಸಿದ ಸ್ಥಳಗಳಲ್ಲಿ ನಿಗದಿತ ಶುಲ್ಕ ಪಾವತಿಸಿ ತಮ್ಮ ಪಕ್ಷ ಅಥವಾ ಅಭ್ಯರ್ಥಿಯ ಬಗ್ಗೆ ಪ್ರಚಾರಕ್ಕೆ ಉಪಯೋಗಿಸಿಕೊಳ್ಳಬೇಕು. ಹಾಗೂ ಸಂಬಂಧಿಸಿದ ಅಭ್ಯರ್ಥಿಯು ಅದಕ್ಕೆ ಒಪ್ಪಿಗೆ ನೀಡಿರಬೇಕು.
ಈ ಯಾವುದೇ ನಿಯಮಗಳನ್ನು ಅನುಸರಿಸದೇ ಯಾವುದೇ ಪ್ರಚಾರದ ಬ್ಯಾನರ್, ಬಂಟಿಂಗ್, ಫ್ಲೆಕ್ಸ್, ಕರಪತ್ರ ಕಂಡುಬಂದರೆ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಪ್ರಕರಣ ದಾಖಲಿಸಿ 6 ತಿಂಗಳು ಜೈಲು, 1 ಸಾವಿರ ದಂಡ ವಿಧಿಸಲು ಅವಕಾಶವಿದೆ ಎಂದರು.
ಯಾವುದೇ ಸ್ಥಳದಲ್ಲಿರುವ ಒಂದು ಫಲಕ ಸಾರ್ವಜನಿಕರ ಗಮನ ಸೆಳೆದರೆ ಅಥವಾ ಕಣ್ಣಿಗೆ ಬಿದ್ದರೆ ಅದು ಸಾರ್ವಜನಿಕ ಜಾಹೀರಾತಾಗುತ್ತದೆ. ಒಂದು ವೇಳೆ ಒಬ್ಬ ವ್ಯಕ್ತಿಯು ತನ್ನ ಸ್ವಂತ ಮನೆಯ ಮೇಲೆ ಯಾವುದೇ ಪಕ್ಷದ ಧ್ವಜ ಹಾಕಿದ್ದು ಅದು ಸಾರ್ವಜನಿಕರ ಗಮನಕ್ಕೆ ಬಂದಲ್ಲಿ ಅದೂ ಕೂಡ ಸಾರ್ವಜನಿಕ ಫಲಕವೇ ಆಗುತ್ತದೆ. ಆದ್ದರಿಂದ ಯಾವುದೇ ಸಾರ್ವಜನಿಕ ದೃಷ್ಟಿಗೆ ಬೀಳುವಂತಹ ಎಲ್ಲ ಪ್ರಚಾರಗಳು ಸಾರ್ವಜನಿಕ ಜಾಹೀರಾತುಗಳಾಗುವುದರಿಂದ ಇವುಗಳ ಬಗ್ಗೆ ಎಚ್ಚರ ವಹಿಸಬೇಕು ಎಂದರು.
ಯಾವುದೇ ವ್ಯಕ್ತಿ ತನ್ನ ಮನೆಯ ಆವರಣದಲ್ಲಿ ತನ್ನ ಪಕ್ಷದ ಪ್ರಚಾರ ಮಾಡಿಕೊಳ್ಳಲು ಅವಕಾಶ ಇದೆ. ಆದರೆ ಬೇರೊಬ್ಬರ ಒತ್ತಡದಿಂದ ಆ ರೀತಿ ಮಾಡಿದಲ್ಲಿ ಅಪರಾಧವಾಗುತ್ತದೆ. ಯಾವುದೇ ವಾಹನಗಳಲ್ಲಿ ಚುನಾವಣಾ ಬಾವುಟ, ಚಿಹ್ನೆ ಹಾಕಲು ಆರ್ ಟಿ ಓ ಅನುಮತಿ ಬೇಕಾಗುತ್ತದೆ. ಅಭ್ಯರ್ಥಿ ತನ್ನ ಸ್ವಂತ ವಾಹನದ ಮೇಲೆ ಇವುಗಳನ್ನು ಬಳಸಬಹುದು. ಆದರೆ ಬೇರೆಯವರು ಪ್ರಚಾರ ಮಾಡಬೇಕಾದಲ್ಲಿ ಅಭ್ಯರ್ಥಿ ಮತ್ತು ಸಂಬಂಧಿಸಿದ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕಾಗುತ್ತದೆ. ಯಾವುದೇ ಸಾರ್ವಜನಿಕ ಬಳಕೆಯ ಸಮುದಾಯ ಭವನಗಳನ್ನು ಎಲ್ಲ ಪಕ್ಷದವರಿಗೂ ಸಮಾನವಾಗಿ ನೀಡಬೇಕು. ಯಾವುದೇ ವ್ಯಕ್ತಿ ತನ್ನ ಸ್ವಂತ ಮನೆಯಲ್ಲಿ ಪ್ರಚಾರ ಮಾಡುವ ಸಾಧನಗಳಿಗೆ ಸಂಬಂಧಿಸಿದಂತೆ ಅಭ್ಯರ್ಥಿಯ ಅನುಮತಿ ಪಡೆಯಬೇಕು. ಇಲ್ಲವಾದಲ್ಲಿ ರೂ. 500 ದಂಡ ವಿಧಿಸಬಹುದು ಎಂದರು.
ಯಾವುದೇ ಪಕ್ಷಗಳ ರ್ಯಾಲಿಗಳಲ್ಲಿ ಬಳಸಿದ ಪ್ರಚಾರ ಸಾಧನಗಳನ್ನು ಸಂಬಂಧಿಸಿದವರೇ ತೆರವುಗೊಳಿಸಬೇಕು. ಒಂದು ವೇಳೆ ಹಾಗೆ ಮಾಡದೇ ಇದ್ದಲ್ಲಿ ಸಂಬಂಧಿಸಿದ ಪ್ರಾಧಿಕಾರ ತೆರವುಗೊಳಿಸಿ ಆ ತೆರವುಗೊಳಿಸುವಿಕೆಯ ಖರ್ಚನ್ನು ಸಂಬಂಧಿಸಿದ ಅಭ್ಯರ್ಥಿಯ ಖಾತೆಯ ಲೆಕ್ಕಕ್ಕೆ ಹೋಗುತ್ತದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ, ಹೆಚ್ಚುವರಿ ಪೋಲಿಸ್ ವರಿಷ್ಟಾಧಿಕಾರಿ ಉದೇಶ್, ಜಿ ಪಂ ಉಪ ಕಾರ್ಯದರ್ಶಿ ಷಡಕ್ಷರಪ್ಪ, ಉಪ ವಿಭಾಗಾಧಿಕಾರಿ ಡಾ.ಮಧು ಪಾಟಿಲ್, ಚುನಾವಣಾ ತಹಶೀಲ್ದಾರ್ ಪ್ರಸಾದ್, ವಿವಿಧ ಇಲಾಖೆಗಳ ಚುನಾವಣಾ ನಿಯೋಜಿತ ಅಧಿಕಾರಿಗಳು ಹಾಜರಿದ್ದರು.