varthabharthi


ವಾರದ ವ್ಯಕ್ತಿ

ವಾರದ ವ್ಯಕ್ತಿ

ಕಾಂಚಾಣ ಮತ್ತು ಖೇಣಿ ರಾಜಕಾರಣ

ವಾರ್ತಾ ಭಾರತಿ : 18 Mar, 2018
-ಬಸು ಮೇಗಲಕೇರಿ

ಬೆಂಗಳೂರು-ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್(ಬಿಎಂಐಸಿ) ಯೋಜನೆ ಜಾರಿ ಮಾಡುತ್ತಿರುವ ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್(ನೈಸ್) ಸಂಸ್ಥೆ ನಡೆಸಿದೆ ಎನ್ನಲಾದ ಅಕ್ರಮಗಳನ್ನು ಕುರಿತು ವಿಚಾರಣೆ ನಡೆಸಿದ ಸದನ ಸಮಿತಿ, ವರದಿ ಮಂಡಿಸಿ ಒಂದು ವರ್ಷದ ಮೇಲಾಯಿತು. ನೈಸ್ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಖೇಣಿಯ ಮೇಲೆ ಕ್ರಮ ಕೈಗೊಳ್ಳಬೇಕಾದ ಕಾಂಗ್ರೆಸ್ ಸರಕಾರ, ವಿವಾದಾತ್ಮಕ ವ್ಯಕ್ತಿ ಖೇಣಿಯನ್ನೇ ಕಾಂಗ್ರೆಸ್‌ಗೆ ಸೇರಿಸಿಕೊಂಡು, ತನ್ನ ‘ಮೌಲ್ಯ’ವನ್ನು ಹೆಚ್ಚಿಸಿಕೊಂಡಿತು! ಈ ‘ಕೂಡಾವಳಿ’ಯ ಹಿಂದೆ, ಖೇಣಿ ಮತ್ತು ಕಾಂಗ್ರೆಸ್ ನಾಯಕರ ಜಾತಿ ರಾಜಕಾರಣವಿದೆ. ಹಣದ ಹರಿವಿದೆ. ಬಂಧನದಿಂದ ಬಿಡಿಸಿಕೊಳ್ಳುವ ತಂತ್ರವೂ ಅಡಗಿದೆ. ‘ಕರ್ನಾಟಕ ಮಕ್ಕಳ ಪಕ್ಷ’ದಿಂದ, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಗೆದ್ದ ಅಶೋಕ್ ಖೇಣಿ, ಜಾತಿಯಲ್ಲಿ ಲಿಂಗಾಯತರು. ಬೀದರ್ ಜಿಲ್ಲೆಯಲ್ಲಿ ಲಿಂಗಾಯತರದೇ ಪ್ರಾಬಲ್ಯ. ಅದರಲ್ಲೂ ಭೀಮಣ್ಣ ಖಂಡ್ರೆ, ಬಸವರಾಜ ಪಾಟೀಲ್ ಹುಮ್ನಾಬಾದ್ ಮತ್ತು ಗುರುಪಾದಪ್ಪನಾಗಮಾರಪಲ್ಲಿ ಕುಟುಂಬಗಳದೇ ಪಾರುಪತ್ಯ. ಬೀದರ್‌ನ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮೂರು, ಕೆಜೆಪಿ ಎರಡು, ಬಿಜೆಪಿ ಒಂದು, ಜೆಡಿಎಸ್ ಒಂದು, ಮತ್ತೊಂದು ಖೇಣಿ ಗೆದ್ದಿದ್ದಾರೆ. ಕಾಂಗ್ರೆಸ್ ಈಗ ಲಿಂಗಾಯತರ ಬಲದಿಂದ ಗೆದ್ದಿರುವ ಮೂರನ್ನು ಆರಕ್ಕೇರಿಸಿಕೊಳ್ಳುವ ಲೆಕ್ಕಾಚಾರಕ್ಕೆ ಬಿದ್ದಿದೆ. ಆ ನಿಟ್ಟಿನಲ್ಲಿ ಕೆಜೆಪಿಯ ಬಿ.ಆರ್. ಪಾಟೀಲ್ರನ್ನು ಈ ಹಿಂದೆಯೇ ಕಾಂಗ್ರೆಸ್‌ಗೆ ಸೇರಿಸಿಕೊಂಡಿದೆ. ಈಗ ಖೇಣಿಯನ್ನು ಸೇರಿಸಿಕೊಳ್ಳುವ ಮೂಲಕ, ಬೀದರ್ ಜಿಲ್ಲೆಯನ್ನು ಕಾಂಗ್ರೆಸ್ ತೆಕ್ಕೆಗೆ ತೆಗೆದುಕೊಳ್ಳಲು ಹವಣಿಸುತ್ತಿದೆ. ಜೊತೆಗೆ ಬೀದರ್ ಜಿಲ್ಲೆಯ ಚುನಾವಣಾ ಖರ್ಚು-ವೆಚ್ಚವನ್ನು ಖೇಣಿಯ ತಲೆಗೆ ಕಟ್ಟಿದೆ ಎಂಬ ವದಂತಿಗೂ ಗುರಿಯಾಗಿದೆ. ಇದು ಕಾಂಗ್ರೆಸ್ ಲೆಕ್ಕಾಚಾರವಾದರೆ, ಬೀದರ್ ಜಿಲ್ಲೆಯ ವಸ್ತುಸ್ಥಿತಿಯೇ ಬೇರೆ ಇದೆ. ಜಿಲ್ಲೆಯನ್ನು ಹಿಡಿತದಲ್ಲಿಟ್ಟು ಕೊಂಡಿರುವ ಮೂರು ಪ್ರಭಾವಿ ಲಿಂಗಾಯತ ಕುಟುಂಬಗಳ ಪೈಕಿ ಖಂಡ್ರೆ ಮತ್ತು ಹುಮ್ನಾಬಾದ್ ಕುಟುಂಬಗಳು ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿವೆ. ಗುರುಪಾದಪ್ಪ ಕುಟುಂಬ ಬಿಜೆಪಿಯೊಂದಿಗಿದೆ. ಆದರೆ ಈಶ್ವರ್ ಖಂಡ್ರೆ ಕಾಂಗ್ರೆಸ್ ಸರಕಾರದಲ್ಲಿ ಮಂತ್ರಿಯಾಗಿದ್ದರೂ, ಸದ್ಯದ ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಪಕ್ಷದ ನಿಲುವಿಗೆ ವಿರುದ್ಧವಿದ್ದಾರೆ. ಜೊತೆಗೆ ಬೀದರ್ ದಕ್ಷಿಣ ಕ್ಷೇತ್ರದಿಂದ ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿ ಎಂದು ಗುರುತಿಸಿಕೊಂಡು, ಓಡಾಡುತ್ತಿರುವ ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಅಳಿಯ ಚಂದ್ರಸಿಂಗ್, ಖೇಣಿಯ ಪಕ್ಷ ಸೇರ್ಪಡೆಯಿಂದ ತಿರುಗಿಬಿದ್ದಿದ್ದಾರೆ. ಇದು ಈ ಭಾಗದ ಧರಂಸಿಂಗ್ ಮತ್ತು ಖರ್ಗೆ ಕುಟುಂಬಗಳ ರಾಜಕೀಯ ಅಸ್ತಿತ್ವವನ್ನು ಅಲುಗಾಡಿಸುವ ಷಡ್ಯಂತ್ರವೆಂದು ಹೇಳಲಾಗುತ್ತಿದೆ. ತಮ್ಮನ್ನು ನಿರ್ಲಕ್ಷಿಸಿ ಖೇಣಿಗೆ ಮಣೆ ಹಾಕಿರುವುದರಿಂದ ಅಜಯ್ ಸಿಂಗ್, ಮಲ್ಲಿಕಾರ್ಜುನ ಖರ್ಗೆ ಬೇಸರಗೊಂಡಿರುವುದು ಈಗಾಗಲೇ ಬಹಿರಂಗಗೊಂಡಿದೆ. ಪ್ರತಿಭಟನೆಗಳೂ ಜರುಗಿವೆ.

ಇನ್ನು ಬೀದರ್ ದಕ್ಷಿಣದಿಂದ ಗೆದ್ದು ಬಂದಿರುವ ಖೇಣಿ, ಮತ್ತೊಂದು ಬಾರಿಗೆ ಗೆಲ್ಲುವ ಮೂಲಕ ತನ್ನ ನೈಸ್ ವ್ಯವಹಾರದ ಅಕ್ರಮಗಳನ್ನು ಮುಚ್ಚಿಕೊಳ್ಳಬೇಕಾದ ಅನಿವಾರ್ಯತೆ ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದೆ. ಆ ನಿಟ್ಟಿನಲ್ಲಿ ಖೇಣಿಗೆ ಬಿಜೆಪಿ ಮತ್ತು ಮೋದಿಗಿಂತ, ರಾಜ್ಯದ ಕಾಂಗ್ರೆಸ್ ಸರಕಾರಕ್ಕೆ ಹತ್ತಿರವಾಗುವುದು ಸುರಕ್ಷಿತ ನಡೆಯಾಗಿ ಕಂಡಿದೆ. ಏಕೆಂದರೆ ಖೇಣಿಯ ನೈಸ್ ಸಂಸ್ಥೆಯ ಅವ್ಯವಹಾರ, ಅಕ್ರಮಗಳ ಕುರಿತು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹಾಗೂ ಸದನ ಸಮಿತಿ ಅಧ್ಯಕ್ಷ ಟಿ.ಬಿ.ಜಯಚಂದ್ರ ಸ್ಪೀಕರ್‌ಗೆ ವರದಿ ಸಲ್ಲಿಸಿದ್ದಾರೆ. ವರದಿಯಲ್ಲಿ, ಅನಧಿಕೃತವಾಗಿ ಸಂಗ್ರಹ ಮಾಡಿರುವ 1,350 ಕೋಟಿ ರೂ.ಗಳನ್ನು ಸರಕಾರ ವಸೂಲಿ ಮಾಡಬೇಕು, ನೋಂದಣಿ ಮತ್ತು ಮುದ್ರಾಂಕ ಶುಲ್ಕದ ವಿನಾಯಿತಿಯನ್ನು 5,688 ಎಕರೆಗೆ ಬದಲಾಗಿ 14,337 ಎಕರೆಗೆ ನೀಡಲಾಗಿರುವುದನ್ನು ಹಿಂಪಡೆಯಬೇಕು, ತಮ್ಮ ಸುಪರ್ದಿಯಲ್ಲಿರುವ ಜಮೀನಿನಲ್ಲಿ ಅಕ್ರಮ ಗಣಿಗಾರಿಕೆಯನ್ನು ಉತ್ತೇಜಿಸಿ, ಗಳಿಸಿರುವ 250 ಕೋಟಿಯನ್ನು ಸರಕಾರಕ್ಕೆ ವಾಪಸ್ ಕಟ್ಟಬೇಕು, ಬೆಂಗಳೂರು ವ್ಯಾಪ್ತಿ ಬಿಟ್ಟು ಬೇರೆ ಪ್ರಗತಿ ಕಾಣದೆ ಇದ್ದರೂ ಗಳಿಸಿರುವ 4,956 ಕೋಟಿ ರೂ.ಗೆ ಲೆಕ್ಕ ತೋರಿಸಬೇಕು, 19 ವರ್ಷಗಳ ನೈಸ್ ಕಂಪೆನಿಯ ನಿರ್ದಿಷ್ಟ ವಿವರಗಳನ್ನು ನೀಡಬೇಕು... ಎಂಬ ಅಕ್ರಮಗಳ 3 ಸಾವಿರ ಪುಟಗಳ ದೊಡ್ಡ ಪಟ್ಟಿಯನ್ನೇ ಮಾಡಿದೆ. ಜೊತೆಗೆ ಈ ಯೋಜನೆ ಜಾರಿಯ ವೇಳೆ ನಡೆದಿರುವ ಅಕ್ರಮದ ಸಂಪೂರ್ಣ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗಳಾದ ಸಿಬಿಐ, ಜಾರಿ ನಿರ್ದೇಶನಾಲಯ, ಕೇಂದ್ರ ಜಾಗೃತ ಆಯೋಗಕ್ಕೆ ಒಪ್ಪಿಸಬೇಕೆಂದು ಸದನ ಸಮಿತಿ ತನ್ನ ವರದಿಯಲ್ಲಿ ಸರಕಾರಕ್ಕೆ ಶಿಫಾರಸು ಮಾಡಿದೆ. ಕ್ರಮ ಕೈಗೊಳ್ಳಬೇಕಾದ ಕಾಂಗ್ರೆಸನ್ನೇ ಖೇಣಿ ಕೈವಶ ಮಾಡಿಕೊಂಡಿದ್ದಾರೆ. ಇದು ಹೇಳಿ ಕೇಳಿ ಬೆಂಗಳೂರು-ಮೈಸೂರು ರಸ್ತೆಯ 11,600 ಎಕರೆ ಜಮೀನಿನ ಸಾವಿರಾರು ಕೋಟಿ ರೂ.ಗಳ ಅವ್ಯವಹಾರ. ಊಹೆಗೂ ನಿಲುಕದ ಮೊತ್ತದ ಅಕ್ರಮ. ಖೇಣಿಯೊಬ್ಬರೇ ಇದಕ್ಕೆ ಕಾರಣಕರ್ತರಲ್ಲ. ಖೇಣಿ ಕಂಜೂಸೂ ಅಲ್ಲ. ಅನಾಯಾಸವಾಗಿ ಬಂದ ಬೆಲೆಬಾಳುವ ಜಮೀನಿನ ಪಾಲನ್ನು ಎಲ್ಲ ಪಕ್ಷದ ರಾಜಕಾರಣಿಗಳಿಗೆ, ಉನ್ನತ ಅಧಿಕಾರಿಗಳಿಗೆ ಧಾರಾಳವಾಗಿ ಹಂಚಿದ್ದಾರೆ. ರಕ್ಷಣೆಗಾಗಿ ಅವರನ್ನೇ ಗುರಾಣಿಯಂತೆ ಬಳಸಿಕೊಂಡಿದ್ದಾರೆ. ತನ್ನ ವಿರುದ್ಧ ಕೂಗಾಡುವವರಿಗೆ ಕಂಠಮಟ್ಟ ತಿನ್ನಿಸಿದ್ದಾರೆ. ಸಿಕ್ಕವರು ಸುಮ್ಮನಾಗಿದ್ದಾರೆ, ಸಿಗದವರು ಈಗಲೂ ಹೋರಾಡುತ್ತಿದ್ದಾರೆ. ಆದರೆ ನೈಸ್ ರಸ್ತೆ ಪ್ರಾಜೆಕ್ಟ್‌ಗಾಗಿ 7,532 ಎಕರೆ ಜಮೀನು ಬಿಟ್ಟುಕೊಟ್ಟ ಮುಗ್ಧ ರೈತರು ಹೊಟೇಲ್‌ಗಳಲ್ಲಿ, ಪೆಟ್ರೋಲ್ ಬಂಕ್‌ಗಳಲ್ಲಿ, ಡಾಬಾಗಳಲ್ಲಿ, ಕಂಪೆನಿಗಳಲ್ಲಿ ಕನಿಷ್ಟ ಕೂಲಿಯಾಳು ಗಳಾಗಿ ದುಡಿಯುತ್ತ, ದಿಕ್ಕೆಟ್ಟ ದರಿದ್ರರಂತೆ ಬದುಕುತ್ತಿದ್ದಾರೆ.

ಅಭಿವೃದ್ಧಿಯ ನೆಪದಲ್ಲಿ, ಕೇವಲ ಒಂದೇ ಒಂದು ಪ್ರಾಜೆಕ್ಟ್ ನಿಂದ ರಾಜ್ಯ ರಾಜಕಾರಣವನ್ನು, ಅಧಿಕಾರಿವರ್ಗವನ್ನು, ಹೋರಾಟಗಾರರನ್ನು ದಾರಿ ತಪ್ಪಿಸಿ; ರಾಜ್ಯದ ಸಾಮಾಜಿಕ- ಆರ್ಥಿಕ-ಕೃಷಿ ವಲಯವನ್ನು ಅಸ್ತವ್ಯಸ್ತಗೊಳಿಸಿದ ಅಶೋಕ್ ಖೇಣಿ ಯಾರು, ಎಲ್ಲಿಂದ ಬಂದರು?

ಬೀದರ್ ಜಿಲ್ಲೆಯ ರಂಜೋಳು ಗ್ರಾಮ ಖೇಣಿ ತಾತನ ಊರು. ಅಶೋಕ್ ಖೇಣಿಯ ತಾತ ಖೇಣಿ ರಂಜೋಳು ಕುಟುಂಬದ ದೊಡ್ಡ ಜಮೀನ್ದಾರ. ಫ್ಯೂಡಲ್ ಲಾರ್ಡ್. ಕೊಡುಗೈ ದಾನಿ. ಈತನಿಗೆ ಅದೆಷ್ಟು ಜಮೀನಿತ್ತು, ಎಲ್ಲಿತ್ತು ಎನ್ನುವುದೇ ಗೊತ್ತಿರಲಿಲ್ಲ. ಜೊತೆಗೆ ಲಿಂಗಾಯತ ಜಾತಿಬಲ ವಿತ್ತು, ಬಡ್ಡಿ ವ್ಯವಹಾರವಿತ್ತು, ಕುಟುಂಬಕ್ಕೆ ರಾಜಕೀಯದ ನಂಟೂ ಇತ್ತು. ಆದರೆ ಅಶೋಕ್ ಖೇಣಿಯ ತಂದೆ ಶೋಕಿಲಾಲನಾಗಿದ್ದರು, ಅಪ್ಪ ಮಾಡಿಟ್ಟ ಆಸ್ತಿ ಕರಗಿಸಿ ದ್ದರು. ದೂರದ ಸೊಲ್ಲಾಪುರದ ಪ್ರತಿಷ್ಠಿತ ಕಲ್ಯಾಣಿ ಕುಟುಂಬದ ಹೆಣ್ಣನ್ನು ಮದುವೆಯಾಗಿದ್ದರೂ, ಸಂಸಾರದಲ್ಲಿ ಏರುಪೇರಾಗಿ ಮಡದಿ ಸೊಲ್ಲಾಪುರದಲ್ಲಿಯೇ ಸೆಟ್ಲ್ ಆಗಿದ್ದರು. ಹಾಗಾಗಿ ಅವರ ಮಗ ಅಶೋಕ್ ಖೇಣಿ ಓದಿದ್ದು, ಬೆಳೆದದ್ದೆಲ್ಲ ಸೊಲ್ಲಾಪುರದಲ್ಲಿ. ಇಂಜಿನಿಯರಿಂಗ್ ಪದವಿ ಮುಗಿಸಿದ ಮೇಲೆ ಕಲ್ಯಾಣಿ ಗ್ರೂಪ್‌ನ ಉದ್ಯಮಗಳು ಅಮೆರಿಕದಲ್ಲಿದ್ದು, ಅವುಗಳ ಉಸ್ತುವಾರಿ ನೋಡಿಕೊಳ್ಳುವ ಕೆಲಸಕ್ಕೆ ಖೇಣಿ ನೇಮಕಗೊಂಡಿದ್ದರು. 1995ರಲ್ಲಿ ಮುಖ್ಯಮಂತ್ರಿಯಾದ ದೇವೇಗೌಡರು, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೇ ಮಾಡಲು ಅಮೆರಿಕದ ಕಲ್ಯಾಣಿ ಕಂಪೆನಿಯೊಂದಿಗೆ ವಾಣಿಜ್ಯ ಒಪ್ಪಂದಕ್ಕೆ ಸಹಿ ಮಾಡಿದರು. ಆ ಪ್ರಾಜೆಕ್ಟ್‌ನ ಉಸ್ತುವಾರಿ ಹೊತ್ತು, ಅಮೆರಿಕದಿಂದ ರಾಜ್ಯಕ್ಕೆ ಬಂದ ಅಶೋಕ್ ಖೇಣಿ ನೈಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದರು. ಭೂ ಸ್ವಾಧೀನ ಕಾರ್ಯ ಶುರುವಾಗುತ್ತಿದ್ದಂತೆಯೇ ದೇವೇಗೌಡರೊಂದಿಗೆ ಕದನಕ್ಕೆ ಬಿದ್ದರು. ಗೌಡರು ಅಧಿಕಾರ ಕಳೆದುಕೊಳ್ಳುತ್ತಿದ್ದಂತೆ ಖೇಣಿ ಜಾತಿ ಕಾರಣಕ್ಕೆ ಜೆ.ಎಚ್.ಪಟೇಲರಿಗೆ ಹತ್ತಿರವಾದರು. ಆಗ ಚೀಫ್ ಸೆಕ್ರೆಟರಿಯಾಗಿದ್ದ ಬಿ.ಎಸ್.ಪಾಟೀಲ್ ಖೇಣಿಯ ಮಾರ್ಗದರ್ಶಕರಾದರು. ಹೀಗೆ ರಾಜಕಾರಣಿಗಳು, ಉನ್ನತ ಅಧಿಕಾರಿಗಳ ಸಂಪರ್ಕಕ್ಕೆ ಬಂದ ಖೇಣಿ, ರೈತರಿಂದ ಜಮೀನು ಬಿಡಿಸಿಕೊಳ್ಳುವ ನಿಟ್ಟಿನಲ್ಲಿ ರೌಡಿಗಳಿಂದ ದಾಂಧಲೆ, ಕೊಲೆ, ದಾಖಲೆ ತಿದ್ದುವುದರಲ್ಲಿ ತ್ರಿವಿಕ್ರಮರಾದರು. ಸರಕಾರದ ಸಹಕಾರದಲ್ಲಿ ಬಹಳ ದೊಡ್ಡ ಬ್ಯುಸಿನೆಸ್‌ಮನ್ ಆಗಿ ಬೆಳೆದು ನಿಂತರು.

ಏತನ್ಮಧ್ಯೆ, ನೈಸ್ ಸಂಸ್ಥೆಯ ಅಕ್ರಮಗಳನ್ನು ಬಯಲಿಗೆಳೆಯು ವವರು ಹೆಚ್ಚಾದರು. ಕಾನೂನು ಹೋರಾಟದಿಂದ ಖೇಣಿ ಹೈರಾ ಣಾದರು. ಆರ್‌ಟಿಐ ಕಾರ್ಯಕರ್ತರು, ಹೋರಾಟಗಾರರು, ಪತ್ರಕರ್ತರು, ರಾಜಕಾರಣಿಗಳಿಗೆ ಹಣ ಹಂಚುವುದು ನಿತ್ಯ ನಿರಂತರವಾದಾಗ- ನಾನೇ ಏಕೆ ರಾಜಕಾರಣಕ್ಕಿಳಿಯಬಾರದು ಎಂಬ ಯೋಚನೆಗೆ ಬಿದ್ದರು. ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ 2013ರಲ್ಲಿ ಚುನಾವಣೆಗೆ ಇಳಿದೇಬಿಟ್ಟರು. ಸಹಜವಾಗಿಯೇ ನೈಸ್ ವಿರುದ್ಧವಿದ್ದ ದೇವೇಗೌಡರು, ‘‘ಆತ ಹೊರಗಿನವ, ಅಕ್ರಮದಲ್ಲಿ ಭಾಗಿಯಾದವ, ರೈತರಿಗೆ ದ್ರೋಹ ಬಗೆದವ’’ ಎಂದು ಟೀಕಿಸಿದರು. ಆಗ ಕೆಲವು ಪತ್ರಕರ್ತರು, ‘‘ಖೇಣಿಯ ಊರು ರಂಜೋಳು, ಅವರ ತಾತ ಲ್ಯಾಂಡ್ ಲಾರ್ಡ್, ಚಿಕ್ಕಪ್ಪ ನರೇಂದ್ರ ಖೇಣಿ ಎಂಎಲ್‌ಸಿ ಆಗಿದ್ದರು, ಖೇಣಿ ಪ್ರತಿಷ್ಠಿತ ಲಿಂಗಾಯತ ಕುಟುಂಬದ ಕುಡಿ’’ ಎಂದು ಬರೆದರು. ಇವರ ವರದಿ ಖೇಣಿಗೆ ವರದಾನವಾಯಿತು. ಗುರಾಣಿಯಂತೆ ಬಳಕೆಯಾಯಿತು. ಜಾತಿವಂತರನ್ನು ಆಕರ್ಷಿಸಿತು. ಜೊತೆಗೆ ಐದು ಲಿಂಗಾಯತ ಮಠಗಳಿಗೆ ಐದೈದು ಲಕ್ಷ ಕೊಟ್ಟ ಖೇಣಿ, ಕಾರಂಜ ಪ್ರಾಜೆಕ್ಟ್ ಗೆ ಜಮೀನು ಬಿಟ್ಟುಕೊಟ್ಟ ರೈತರ ಪರವಾಗಿ ಹೈಕೋರ್ಟ್‌ನಲ್ಲಿ ದಾವೆ ಹೂಡಿ, ಹೆಚ್ಚಿನ ಪರಿಹಾರಕ್ಕೆ ಒತ್ತಾಯಿಸಿ ‘ಸರಕಾರ ಕೊಡದಿದ್ದರೆ ನಾನೇ ಕೊಡುತ್ತೇನೆ’ ಎಂದು ಆಶ್ವಾಸನೆ ನೀಡಿದರು. ಅಷ್ಟೇ ಅಲ್ಲದೆ, ಇಡೀ ಕ್ಷೇತ್ರಕ್ಕೆ ಹಣ ಹಂಚಿ ಮತದಾರರನ್ನು ಭ್ರಷ್ಟರನ್ನಾಗಿಸಿಬಿಟ್ಟರು. ಜೊತೆಗೆ ಬಿಜೆಪಿ-ಕೆಜೆಪಿ ಹೋಳಾಗಿದ್ದು, ಜೆಡಿಎಸ್‌ನ ಬಂಡೆಪ್ಪಕಾಶೆಂಪೂರ್ ಕಳೆಗುಂದಿದ್ದು, ಹಣ-ಜಾತಿ ಸಹಕರಿಸಿದ್ದು ಖೇಣಿ ಗೆಲುವಿಗೆ ದಾರಿಯಾಯಿತು. ಶಾಸಕರಾಗಿ, ಉದ್ಯಮಿ ರಾಜಕಾರಣಿಯಾಗಿ ರೂಪುಗೊಳ್ಳುವಂತಾಯಿತು. ಗೆದ್ದ ಖೇಣಿ ಬೀದರ್‌ನತ್ತ ಹೆಜ್ಜೆ ಹಾಕುವುದಿರಲಿ, ತಲೆ ಹಾಕಿಯೂ ಕೂಡ ಮಲಗಲಿಲ್ಲ. ಕಳೆದ ಐದು ವರ್ಷಗಳಲ್ಲಿ ಖೇಣಿಯ ಪಿಎ ಎನಿಸಿಕೊಂಡವರೆ ಅಧಿಕೃತ ಶಾಸಕರಾಗಿ ದರ್ಬಾರು ನಡೆಸಿದರು. ಇತ್ತ ಶಾಸಕರಾದ ಖೇಣಿ, ಹೆಂಡತಿ ಮಕ್ಕಳನ್ನು ಅಮೆರಿಕದ ಫಿಲಿಡೆಲ್ಫಿಯಾದಲ್ಲಿ ಬಿಟ್ಟು ನೈಸ್ ವ್ಯವಹಾರವನ್ನು ವಿಸ್ತರಿಸುವತ್ತ, ರಾಜಕಾರಣದಲ್ಲಿ ನೆಲೆಯೂ ರುವತ್ತ, ಸದನ ಸಮಿತಿ ವರದಿಗೆ ಗತಿ ಕಾಣಿಸುವತ್ತ ಗಮನ ಹರಿಸಿದರು. ಕಾಂಗ್ರೆಸ್ ಪಕ್ಷ ಸೇರಿ ಯಶಸ್ವಿಯೂ ಆದರು.

ದೇವರಾಜ ಅರಸು ನೆನಪಾಗುತ್ತಿದ್ದಾರೆ... 1978ರಲ್ಲಿ ಶಾಸಕರು ಅಬಕಾರಿ ಗುತ್ತಿಗೆದಾರರಾದ ವೆಂಕಯ್ಯ ಗುತ್ತೇ ದಾರ್, ಶ್ರೀಹರಿ ಖೋಡೆಯನ್ನು ಎಂಎಲ್ಸಿ ಮಾಡಿ ಎಂದು ಮುಖ್ಯಮಂತ್ರಿ ದೇವರಾಜ ಅರಸರ ಮೇಲೆ ಒತ್ತಡ ತಂದಾಗ, ಅವರು ‘‘ಉದ್ಯಮಿಗಳು, ವ್ಯಾಪಾರಸ್ಥರು, ಹಣ ಕೊಟ್ಟು ಸಹಕರಿಸಿದ್ದಾರೆ, ನಿಜ. ನೀವೂ ನಿಮ್ಮ ಅಧಿಕಾರ ಬಳಸಿ ಅವರಿಗೆ ಸಹಾಯ ಮಾಡಿಕೊಡಿ, ತಪ್ಪಲ್ಲ. ಆದರೆ ಅವರ ಕೈಗೇ ಅಧಿಕಾರ ಕೊಟ್ಟರೆ, ಹಣ ಮತ್ತು ಅಧಿಕಾರ ಎರಡೂ ಒಂದಾದರೆ ರಾಜಕಾರಣಕ್ಕೆ ಬೆಲೆ ಇಲ್ಲ, ಪ್ರಜಾಪ್ರಭುತ್ವಕ್ಕೆ ಉಳಿಗಾಲವಿಲ್ಲ, ಎಚ್ಚರ’’ ಎಂದಿದ್ದರು. ಅದು ಇವತ್ತು ನಿಜವಾಗಿದೆ. ದುರಂತವೆಂದರೆ ಖೇಣಿ, ಸಾವಿರಾರು ಕೋಟಿಗಳ ಶ್ರೀಮಂತರಲ್ಲ, ಯಶಸ್ವಿ ಉದ್ಯಮಿಯೂ ಅಲ್ಲ, ಜನಸೇವಕರಂತೂ ಅಲ್ಲವೇ ಅಲ್ಲ. ರೈತರ ಮತ್ತು ಸರಕಾರದ ಜಮೀನನ್ನೇ ಬ್ಯಾಂಕಿಗೆ ಅಡವಿಟ್ಟು, ಅದರಿಂದ ಕೋಟ್ಯಂತರ ರೂಪಾಯಿ ಸಾಲ ಪಡೆದು ರಾಜಕಾರಣ, ಸಿನೆಮಾ ನಿರ್ಮಾಣ, ಕ್ರಿಕೆಟ್, ಮೋಜು ಮಸ್ತಿ ಮಾಡುತ್ತಾ ಮೆರೆದಾಡುತ್ತಿದ್ದಾರೆ. ಮುಂದೊಂದು ದಿನ, ಬ್ಯಾಂಕ್‌ಗಳಿಗೆ ಟೋಪಿ ಹಾಕಿ ನೀರವ್ ಮೋದಿ, ವಿಜಯ ಮಲ್ಯರಂತೆ ದೇಶ ಬಿಟ್ಟು ಹಾರಿದರೂ ಆಶ್ಚರ್ಯವಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)