ಆರೋಗ್ಯಕರ ಹಲ್ಲುಗಳಿಗಾಗಿ...
ಇಂದು ವಿಶ್ವ ಬಾಯಿ ಆರೋಗ್ಯ ದಿನ
ಪ್ರತೀ ವರ್ಷ ಮಾರ್ಚ್ 20ರಂದು ವಿಶ್ವ ಬಾಯಿಯ ಆರೋಗ್ಯ ದಿನ ಎಂದು ಆಚರಿಸಲಾಗುತ್ತಿದ್ದು, ಬಾಯಿಯ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು, ಬಾಯಿಯ ಆರೋಗ್ಯವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಧನಾತ್ಮಕವಾದ ವಿಚಾರಧಾರೆಗಳನ್ನು ಮೂಡಿಸಲು ಮತ್ತು ಬಾಯಿಯ ಆರೋಗ್ಯದಿಂದ, ದೇಹದ ಆರೋಗ್ಯದ ಮತ್ತು ವ್ಯಕ್ತಿಯ ವ್ಯಕ್ತಿತ್ವದ ಮೇಲಾಗುವ ಪರಿಣಾಮಗಳ ಬಗ್ಗೆ ಹೊಸ ಚಿಂತನೆಗಳನ್ನು ಮೂಡಿಸುವ ಸಮದ್ದೇಶವನ್ನು ಈ ಆಚರಣೆ ಹೊಂದಿದೆ. ಈ ಆಚರಣೆ 2007ರಲ್ಲಿ (FDI) (ಅಂತಾರಾಷ್ಟ್ರೀಯ ದಂತ ಸಂಘ) ಆಚರಣೆಗೆ ತಂದಿತು. (FDI) ಇದರ ಜನಕರಾದ ಚಾರ್ಲ್ಗೊಡನ್ ಅವರು ಹುಟ್ಟಿದ ದಿನವಾದ ಸೆಪ್ಟಂಬರ್ 12ರಂದು ಈ ಆಚರಣೆಯನ್ನು ಜಾರಿಗೆ ತರಲಾಯಿತು. ಆದರೆ 2013ರಲ್ಲಿ ಆಡಳಿತಾತ್ಮಕ ದೃಷ್ಟಿಯಿಂದ ವಿಶ್ವ ಬಾಯಿ ಆರೋಗ್ಯ ದಿನವನ್ನು ಮಾರ್ಚ್ 20ಕ್ಕೆ ಬದಲಾಯಿಸಲಾಯಿತು.
ಮುಖ ಮನಸ್ಸಿನ ಕನ್ನಡಿ, ಸುಂದರವಾದ ಮುಖದಲ್ಲಿ ಅಂದವಾದ ದಂತ ಪಂಕ್ತಿಗಳಿಂದ ಕೂಡಿದ ಶುಭ್ರ, ನಿಷ್ಕಲ್ಮಶ ನಗು ಮತ್ತು ಆರೋಗ್ಯವಂತ ಬಾಯಿ ದೇಹದ ಅರೋಗ್ಯದ ದಿಕ್ಸೂಚಿ. ಪ್ರತಿಯೊಬ್ಬ ಮನುಷ್ಯನೂ ಬಯಸುವುದು ಕೂಡಾ ಸುಂದರ ನಿಷ್ಕಲ್ಮಶ ನಗುವನ್ನೇ. ಹಲ್ಲುಗಳು ವಜ್ರಕ್ಕಿಂತಲೂ ಅಮೂಲ್ಯವಾದ ಆಸ್ತಿ. ನಮ್ಮ ಹಲ್ಲಿನ ಆರೈಕೆಯು ನಮ್ಮ ಶರೀರದ ಸಾಮಾನ್ಯ ಆರೋಗ್ಯದ ಒಂದು ಪ್ರಮುಖ ಅಂಗವಾಗಿದೆ. ಹಲ್ಲಿನ ಆರೋಗ್ಯವನ್ನು ನಿರ್ಲಕ್ಷಿಸಿದರೆ ನಮ್ಮ ಸಾಮಾನ್ಯ ಆರೋಗ್ಯದ ಮೇಲೂ ಅದರ ದುಷ್ಪರಿಣಾಮವಾಗಬಹುದು. ಆದ್ದರಿಂದ ಹಲ್ಲಿನ ಆರೈಕೆಯನ್ನು ಚೆನ್ನಾಗಿ ಮಾಡಿದರೆ ಅವು ನಮ್ಮ ಆರೋಗ್ಯದ ಆರೈಕೆ ಮಾಡುತ್ತದೆ. ಸುಂದರವಾದ ಸದೃಢವಾದ ಹಲ್ಲುಗಳು ಆಹಾರವನ್ನು ಸರಿಯಾಗಿ ಜಗಿಯಲು ಅನುಕೂಲ ಮಾಡಿಕೊಟ್ಟು ದೇಹದ ಪಚನ ಕ್ರಿಯೆಗೆ ಸಹಾಯ ಮಾಡುತ್ತದೆ. ಅಲ್ಲದೆ ಸದೃಢವಾದ ಆರೋಗ್ಯವಂತ ಹಲ್ಲುಗಳು ಮನುಷ್ಯನಿಗೆ ಎಲ್ಲ ರೀತಿಯ ಆಹಾರ ಪದಾರ್ಥಗಳನ್ನು, ಗೆಡ್ಡೆಗೆಣಸುಗಳನ್ನು, ನಾರುಯುಕ್ತ, ಪೌಷ್ಟಿಕಾಂಶಯುಕ್ತ ಹಸಿ ತರಕಾರಿ, ಹಣ್ಣು- ಹಂಪಲುಗಳನ್ನು ತಿನ್ನಲು ಸಹಾಯ ಮಾಡಿ, ದೇಹದ ಆರೋಗ್ಯದ ಮೇಲೆ ಹತೋಟಿ ಇಡುತ್ತದೆ.
ನಮ್ಮ ದೇಹಕ್ಕೆ ಬೇಕಾದ ಪೌಷ್ಟಿಕ ಆಹಾರ ಬಾಯಿಯ ಮೂಲಕವೇ ಜಠರವನ್ನು ತಲುಪಬೇಕು. ತಿಂದ ಆಹಾರ ದೇಹಕ್ಕೆ ಹಿಡಿಯಬೇಕಾದರೆ ಅದನ್ನು ಸರಿಯಾಗಿ ಜಗಿದು ತಿಂದಿರಬೇಕು. ಈ ಕೆಲಸಕ್ಕೆ ಸ್ವಸ್ಥವಾದ ಹಲ್ಲುಗಳು ಅತೀ ಅಗತ್ಯ. ಹಲ್ಲುಗಳು ಮಾತನಾಡಲು ಕೂಡಾ ಅವಶ್ಯಕ. ಕೃತಕ ಹಲ್ಲುಗಳಿಂದ ಸ್ಪಷ್ಟ ಉಚ್ಛಾರದಲ್ಲಿ ಮೊದಮೊದಲು ಕಷ್ಟವಾಗಬಹುದು. ಹಲ್ಲುಗಳಿಲ್ಲದಿದ್ದರೆ ಕೆಲವು ಅಕ್ಷರಗಳನ್ನು ಸ್ಪಷ್ಟವಾಗಿ ಉಚ್ಚರಿಸುವುದು ಅಸಾಧ್ಯ. ಹಲ್ಲುಗಳು ಮುಖದ ಅಂದವನ್ನು ಹೆಚ್ಚಿಸುವ ಜೊತೆಗೆ ವ್ಯಕ್ತಿಯ ಆತ್ಮವಿಶ್ವಾಸಕ್ಕೂ ಹೆಚ್ಚಿನ ಬಲ ನೀಡುತ್ತವೆ. ಆದ್ದರಿಂದಲೇ ಹಲ್ಲಿನ ಜೋಪಾನವೇ ಸುಖ ಜೀವನಕ್ಕೆ ಸೋಪಾನವಾಗುತ್ತದೆ.
► ಸುಂದರ ನಗುವಿನ ಹಿಂದಿನ ರಹಸ್ಯಗಳು
ಇಂದು ಮಾರುಕಟ್ಟೆಯಲ್ಲಿ ಬಾಯಿಯ ಆರೋಗ್ಯ ಕಾಪಾಡುವ ನೂರಾರು ಬಗೆಯ ಪರಿಕರಗಳು ಲಭ್ಯವಿದೆ. ಈ ಬಗ್ಗೆ ರಂಗುರಂಗಿನ ಮಾಹಿತಿಗಳು ಜಾಹೀರಾತುಗಳು ಮಾಧ್ಯಮದಲ್ಲಿ ಕಾಣಸಿಗುತ್ತದೆ. ಸುಂದರ, ಸದೃಢ ಹಲ್ಲುಗಳಿಗಾಗಿ ಬಳಸುವ ದಂತ ಪರಿಕರಗಳನ್ನು ಮೂರು ರೀತಿಯಾಗಿ ವಿಂಗಡಿಸಬಹುದು.
1. ದಂತಚೂರ್ಣ (Tooth paste), 2. ದಂತ ಕುಂಚ (Tooth brush), 3. ದಂತ ಬಳ್ಳಿ (Dental Floss) ನಾಗರಿಕತೆ, ವಿಜ್ಞಾನ ಬೆಳೆದಂತೆಲ್ಲಾ ಕಳೆದ ನಾಲ್ಕೈದು ದಶಕಗಳಲ್ಲಿ ದಂತ ಸಂರಕ್ಷಣೆಗೆ ಸಂಬಂಧಿಸಿದಂತೆ ಟೂತ್ಪೇಸ್ಟ್ ಮತ್ತು ಟೂತ್ಬ್ರಶ್ಗಳ ಉತ್ಪಾದನೆಯಲ್ಲಿ ಅದ್ಭುತವಾದ (ಭಯಂಕರ) ಕ್ರಾಂತಿಯಾಗಿದೆ ಎಂದರೆ ಅತಿಶಯೋಕ್ತಿಯಲ್ಲ. ನಮ್ಮ ಪೂರ್ವಜರು ಬೇವಿನಸೊಪ್ಪು, ಮಾವು, ಗೇರು ಎಲೆ, ತೆಂಗಿನನಾರು, ಉಪ್ಪು, ಮಸಿ ಮುಂತಾದ ನೈಸರ್ಗಿಕ ಬಳುವಳಿಗಳನ್ನು ದಂತ ರಕ್ಷಣೆಗೆ ಉಪಯೋಗಿಸುತ್ತಿದ್ದರು. ಆದರೆ ಈಗಿನ ಕಾಲದಲ್ಲಿ ಅಂತಹ ವಸ್ತುಗಳ ಅಗತ್ಯ ನಮಗಿಲ್ಲ. ಆ ಕಾಲದ ಆಹಾರ ಪದಾರ್ಥಕ್ಕೂ ಜೀವನಶೈಲಿಗೂ, ಮೇಲೆ ತಿಳಿಸಿದ ನೈಸರ್ಗಿಕ ಪರಿಕರಗಳು ಪೂರಕವಾಗಿತ್ತು. ಇಂದಿನ ಜನಾಂಗಕ್ಕೆ, ನಮ್ಮ ಆಹಾರ ಪದಾರ್ಥಗಳಿಗೆ, ಜೀವನ ಶೈಲಿಗೆ, ಹಿಂದಿನ ಕಾಲದ ವಸ್ತುಗಳು ಅನಗತ್ಯ. ನಮ್ಮ ಪೂರ್ವಜರು ಹಸಿ ತರಕಾರಿ, ಗೆಡ್ಡೆಗೆಣಸು, ಕಬ್ಬು, ಜೋಳ ಮುಂತಾದ ನಾರುಯುಕ್ತ ವಸ್ತುಗಳನ್ನು ಮುಖ್ಯ ಆಹಾರವನ್ನಾಗಿ ಉಪಯೋಗಿಸುತ್ತಿದ್ದರು. ಆದರೆ ಇಂದಿನ ನಮ್ಮ ಜನಾಂಗ ಕಬ್ಬು, ಜೋಳ, ಗೆಡ್ಡೆಗೆಣಸು, ಮುಂತಾದ ಹಸಿ ತರಕಾರಿಗಳನ್ನು ದೃಶ್ಯ ಮಾಧ್ಯಮಗಳಲ್ಲಿ, ಪತ್ರಿಕೆಗಳಲ್ಲಿ ನೋಡಿ ಗೊತ್ತೇ ಹೊರತು ತಿನ್ನುವ ಗೋಜಿಗೆ ಹೋಗುವುದಿಲ್ಲ. ಈಗ ನಾವು ಹೆಚ್ಚು ಹೆಚ್ಚು ರೆಡಿಮೇಡ್ ಆಹಾರ ಪದಾರ್ಥಗಳನ್ನು ತಿನ್ನುವುದೇ ಜಾಸ್ತಿ. ಹಿಂದಿನ ಕಾಲದಲ್ಲಿ ಉಪಯೋಗಿಸುತ್ತಿದ್ದ ಆಹಾರ ಪದಾರ್ಥಗಳು ಹಲ್ಲುಗಳ ಆರೋಗ್ಯಕ್ಕೆ ಪೂರಕವಾಗಿತ್ತು ಮತ್ತು ಆಹಾರ ಸೇವನೆಯಿಂದಲೇ ಹಲ್ಲು ಶುಚಿಯಾಗುತ್ತಿತ್ತು. ಆದರೆ ಈಗಿನ ಜನಾಂಗ ತಿನ್ನುವ ಆಹಾರ ಹಲ್ಲುಗಳ ಆರೋಗ್ಯಕ್ಕೆ ಮಾರಕವಾಗಿದೆ. ಚಾಕೊಲೆಟ್, ಕುರುಕುರೆ ಮುಂತಾದ ಅಂಟು ಪದಾರ್ಥ ತಿಂದಲ್ಲಿ ಹಲ್ಲು ಶುಚಿಯಾಗುವ ಬದಲು ಹಲ್ಲಿನ ರೋಗ ರುಜಿನಗಳಿಗೆ ನಾಂದಿ ಹಾಡುತ್ತದೆ.
►ಹಲ್ಲಿನ ರಕ್ಷಣೆಗೆ ಹಲವು ಮಾರ್ಗಸೂತ್ರಗಳು
► ಹಲ್ಲುಗಳನ್ನು ದಿನಕ್ಕೆರಡು ಬಾರಿ ಬ್ರಶ್ ಮಾಡಿ. ಬ್ರಶ್ ಮಾಡಬೇಕಾದ ಕನಿಷ್ಠ ಅವಧಿ ಎರಡು ನಿಮಿಷ. ಸರಿಯಾದ ಕ್ರಮದಲ್ಲಿ ಬ್ರಶ್ ಮಾಡುವುದು ಅತೀ ಆವಶ್ಯಕ. ಗೊತ್ತಿಲ್ಲದಿದ್ದರೆ ಸಮೀಪದ ದಂತ ವೈದ್ಯರಲ್ಲಿ ವಿಚಾರಿಸಿ. ಊಟ ತಿಂಡಿಯ ಬಳಿಕ ಬ್ರಶ್ ಮಾಡಿದರೆ ಒಳ್ಳೆಯದು. ಸಾಧ್ಯವಾಗದಿದ್ದಲ್ಲಿ ರಾತ್ರಿಯಂತೂ ಮಲಗುವ ಮುನ್ನ ಹಲ್ಲುಜ್ಜಿ ಮಲಗಿ.
► ಹಲ್ಲು ಉಜ್ಜುವ ಅವಧಿಗಿಂತ ಕ್ರಮಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿ. ದಿನಕ್ಕೆ ನಾಲ್ಕು ಬಾರಿ ಹಲ್ಲುಜ್ಜುವುದರಿಂದ ಹಲ್ಲು ಹಾಳಾಗಬಹುದು. (ಸವೆದು ಹೋಗಬಹುದು) ದಿನಕ್ಕೆರಡು ಬಾರಿ ಸರಿಯಾದ ಉದ್ದೇಶದಿಂದ ಹಲ್ಲು ತಿಕ್ಕಬೇಕು. ಸಾಮಾನ್ಯವಾಗಿ ಬ್ರಶ್ಗೆ ಮೇಲೆ ಕೆಳಗೆ ಚಾಲನೆ ನೀಡಬೇಕು. ಬಹಳ ಜೋರಾಗಿ ಅಡ್ಡ ಹಲ್ಲುಜ್ಜಬಾರದು. ಅತಿಯಾದ ಬಲ ಹಾಕಿ ಹಲ್ಲುಜ್ಜುವುದರಿಂದ ಹಲ್ಲಿಗೆ ಹಾನಿಯಾಗಬಹುದು.
► ಬ್ರಶ್ಗಳನ್ನು ಆರಿಸುವಾಗ ಜಾಗ್ರತೆವಹಿಸಿ. ಉಚಿತವಾಗಿ ಸಿಕ್ಕಿದೆ (ಟೂತ್ಪೇಸ್ಟ್ ಜೊತೆಗೆ) ಎಂದು ಉಪಯೋಗಿಸಬೇಡಿ. ಸ್ವಲ್ಪಬಾಗಿದ ಬ್ರಶ್ನಿಂದ ದವಡೆ ಹಲ್ಲುಗಳನ್ನು ಚೆನ್ನಾಗಿ ಬ್ರಶ್ ಮಾಡಬಹುದು. ನೇರವಾದ ಬ್ರಶ್ನಿಂದ ಹಿಂಭಾಗದ ಹಲ್ಲು ತಲುಪುವುದು ಮತ್ತು ಸ್ವಚ್ಛಗೊಳಿಸುವುದು ಬಹಳ ಕಷ್ಟ. ಬ್ರಶ್ಗಳಲ್ಲಿ ಮೃದು, ಮೀಡಿಯಂ ಮತ್ತು ಹಾರ್ಡ್ ಎಂದು ಮೂರು ವಿಧಗಳಿವೆ. ದಯವಿಟ್ಟು ಮೆದು (Soft) ಅಥವಾ ಮೀಡಿಯಂ ಬ್ರಶ್ಗಳನ್ನೇ ಉಪಯೋಗಿಸಿ. ಕಠಿಣ (Hard) ಬ್ರಶ್ಗಳಿಂದ ಹಲ್ಲು ಸವೆಯುವುದು ಖಚಿತ.
► ಕನಿಷ್ಠ ಮೂರು ತಿಂಗಳಿಗೊಮ್ಮೆ ಬ್ರಶ್ ಬದಲಾಯಿಸಿ. ನಿಮ್ಮ ಆವಶ್ಯಕತೆಗಳಿಗೆ ಅನುಗುಣವಾಗಿ ದಂತ ವೈದ್ಯರ ಸಲಹೆ ಪಡೆದು ಬ್ರಶ್ ಹಾಗೂ ಟೂತ್ಪೇಸ್ಟ್ ಖರೀದಿಸಿ.
► ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ದೊರಕುವ ಟೂತ್ಪೇಸ್ಟ್ಗಳು ಪ್ಲೋರೈಡ್ನಿಂದ ಕೂಡಿದ್ದು ಹುಳುಕಾಗದಂತೆ ಹಲ್ಲನ್ನು ಕಾಪಾಡುತ್ತದೆ. ದುಬೈಯಿಂದ ತಂದಿದ್ದು, ಉಚಿತವಾಗಿ ಸಿಕ್ಕಿದ್ದು, ಟಿ.ವಿ. ಅಥವಾ ಪತ್ರಿಕೆಯ ಜಾಹೀರಾತು ನೋಡಿ ದಯವಿಟ್ಟು ಟೂತ್ಪೇಸ್ಟ್ ಉಪಯೋಗಿಸಬೇಡಿ. ಫಾರ್ಮಸಿಗಳಲ್ಲಿ ದೊರೆ ಯುವ ಮೆಡಿಕೇಟೇಡ್ (ಮದ್ದುಯುಕ್ತ) ದಂತ ಚೂರ್ಣಗಳನ್ನು ದಂತ ವೈದ್ಯರು ಸೂಚಿಸಿದರೆ ಮಾತ್ರ ಖರೀದಿಸಿ ಅನಗತ್ಯ ಉಪಯೋಗಿಸಬೇಡಿ.
► ಪದೇ ಪದೇ ಬ್ರಶ್ ಹಾಗೂ ಪೇಸ್ಟ್ ಬದಲಾಯಿಸಬೇಡಿ. ಇದರಿಂದ ಬಾಯಿಯಲ್ಲಿ ಹುಣ್ಣು, ಅಲರ್ಜಿ, ತುರಿಕೆ ಬರಬಹುದು. ಹಲ್ಲು ಬೆಳ್ಳಗಾಗಿಸುವ ಯಾವುದೇ ರಾಸಾಯನಿಕಗಳನ್ನು ದಯವಿಟ್ಟು ದಂತ ವೈದ್ಯರ ಸಲಹೆ ಇಲ್ಲದೆ ಉಪಯೋಗಿಸಬೇಡಿ. ಇದರಲ್ಲಿ (Abrasives) ಜಾಸ್ತಿ ಇರುವುದರಿಂದ ಹಲ್ಲು ಸವೆಯುತ್ತದೆಯೇ ಹೊರತು ಹಲ್ಲು ಬಿಳಿಯಾಗುವುದಿಲ್ಲ.
► ನಿಮ್ಮ ವಸಡುಗಳನ್ನು ಬ್ರಶ್ ಆದ ಬಳಿಕ ಬೆರಳಿನಿಂದ ಗಟ್ಟಿಯಾಗಿ ತಿಕ್ಕಿ ಕನಿಷ್ಠ ಪಕ್ಷ 2ರಿಂದ ಮೂರು ನಿಮಿಷ ವಸಡನ್ನು ಮಸಾಜ್ ಮಾಡಬೇಕು. ಇದು ರಕ್ತ ಪರಿಚಲನೆಯನ್ನು ಹೆಚ್ಚಿಸುವುದು ಮತ್ತು ವಸಡಿನ ಆರೋಗ್ಯವನ್ನು ವೃದ್ಧಿಸುತ್ತವೆ.
► ಎರಡು ಊಟದ ಮಧ್ಯೆ ಸಿಹಿ ಪದಾರ್ಥ ಅಂಟಾದ ಪದಾರ್ಥ (ಚಾಕೊಲೇಟ್)ಗಳನ್ನು ಸೇವಿಸಬೇಡಿ. ಅನಿವಾರ್ಯ ವಾದಲ್ಲಿ ತಿಂದ ಬಳಿಕ ಚೆನ್ನಾಗಿ ಹಲ್ಲು ಉಜ್ಜಬೇಕು. ಬಾಯಿಯನ್ನು ಪ್ರತೀ ಸಲ ಆಹಾರ ತಿಂದ ಬಳಿಕ ನೀರಿನಿಂದ ಚೆನ್ನಾಗಿ ತೊಳೆಯಿರಿ. ರಾತ್ರಿ ಮಲಗುವ ಮುನ್ನ ಉಗುರು ಬೆಚ್ಚನೆಯ ನೀರಿಗೆ ಉಪ್ಪು ಹಾಕಿ ಚೆನ್ನಾಗಿ ಬಾಯಿ ಮುಕ್ಕಳಿಸುವುದು ಸೂಕ್ತ.
► ವಿಟಮಿನ್ ಮತ್ತು ಖನಿಜಾಂಶಗಳುಳ್ಳ ಸತ್ವಯುಕ್ತ ಆಹಾರವನ್ನು ಸೇವಿಸಿರಿ. ಕಬ್ಬು, ಆ್ಯಪಲ್, ಕ್ಯಾರೆಟ್, ಮೂಲಂಗಿ ಇತ್ಯಾದಿ ನಾರುಯುಕ್ತ ತರಕಾರಿಗಳನ್ನು ಹೆಚ್ಚು ಹೆಚ್ಚು ಸೇವಿಸಿದರೆ ಹಲ್ಲುಗಳು ಸದೃಢವಾಗುತ್ತವೆ. ಸೌತೆಕಾಯಿ, ಟೊಮೆಟೊ ಇತ್ಯಾದಿ ಹಸಿ ತರಕಾರಿಗಳನ್ನು ಜಾಸ್ತಿ ಉಪಯೋಗಿಸಿದ್ದಲ್ಲಿ ಹಲ್ಲಿನ ಆರೋಗ್ಯದ ಜೊತೆ ದೇಹದ ಆರೋಗ್ಯವನ್ನು ವೃದ್ಧಿಸುತ್ತದೆ.
► ನಿಮ್ಮ ದಂತ ವೈದ್ಯರನ್ನು ನಿಯಮಿತವಾಗಿ 6 ತಿಂಗಳಿಗೊಮ್ಮೆಯಾದರೂ ಭೇಟಿ ಮಾಡಿ. ಇದು ನಿಮ್ಮ ತೊಂದರೆಗಳನ್ನು ಪ್ರಾಥಮಿಕ ಹಂತದಲ್ಲಿಯೇ ಗುರುತಿಸಲು ಹಾಗೂ ಗುಣಪಡಿಸಲು ಸಹಕಾರಿ. ಈ ಸೂತ್ರಗಳನ್ನು ಸರಿಯಾಗಿ ಅನುಸರಿಸಿದಲ್ಲಿ ನಿಮ್ಮ ಹಲ್ಲು, ನಿಮ್ಮ ನಗು ಆಸ್ತಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.