ಅರಣ್ಯ ನಾಶಕ್ಕೆ ಕೊನೆಯೆಂದು?
ಇಂದು ವಿಶ್ವ ಅರಣ್ಯ ದಿನಾಚರಣೆ
ನಿಸರ್ಗದ ಅತ್ಯಮೂಲ್ಯವಾದ ಕೊಡುಗೆ ಅರಣ್ಯ. ಮಾನವನ, ಕಾಡು ಪ್ರಾಣಿಗಳ ಹಾಗೂ ಪಕ್ಷಿಗಳ ಅಳಿವು-ಉಳಿವು ಇದರ ಮೇಲೆ ಅವಲಂಬಿತವಾಗಿದೆ. ಅರಣ್ಯ ನಾಶದಿಂದಾಗಿ ಮಾನವ ಕುಲಕ್ಕೆ ವಿಪತ್ತು ಬರುವುದರಲ್ಲಿ ಯಾವ ಸಂದೇಹವೂ ಇಲ್ಲ. ಮಾನವನ ಅವ್ಯಾಹತ ಹಸ್ತಕ್ಷೇಪದಿಂದಾಗಿ ಅರಣ್ಯ ನಾಶವಾಗುತ್ತಿದೆ. ವಿಶ್ವಾದ್ಯಂತ ಪ್ರತೀ ವರ್ಷವೂ ಸಾವಿರಾರು ಜಾತಿಯ ಸಸ್ಯಗಳು ಹಾಗೂ ಪ್ರಾಣಿ ಪಕ್ಷಿಗಳು ಕಣ್ಮರೆಯಾಗುತ್ತಿವೆ. ಭಾರತ ದೇಶದಲ್ಲಿರಬೇಕಾದ ಅರಣ್ಯವು ಶೇ. 33 ಭಾಗ. ಆದರೆ ಉಪಗ್ರಹಗಳಿಂದ ಪಡೆದ ಮಾಹಿತಿ ಪ್ರಕಾರ ಇದು ಶೆ. 10 ಭಾಗ ಎಂದು ತಿಳಿದು ಬಂದಿದೆ. ಕಾಡು ಪ್ರಾಣಿಗಳ, ಪಕ್ಷಿಗಳ ಸಂಖ್ಯೆ ಕಳೆದ 40 ವರ್ಷಗಳಲ್ಲಿ ಅರ್ಧದಷ್ಟು ಕಣ್ಮರೆಯಾಗಿದೆ ಎಂದು ‘ಲಿವಿಂಗ್ ಪ್ಲಾನೆಟ್’ 2017ರ ವರದಿಯಲ್ಲಿ ಪ್ರಕಟವಾಗಿದೆ. ಕಾಡು ಪ್ರಾಣಿಗಳು ವನದೇವತೆಯ ಆಭರಣಗಳು, ಅವುಗಳ ರಕ್ಷಣೆ ನಮ್ಮೆಲ್ಲರ ಹೊಣೆ
ಅರಣ್ಯಗಳು ಮಣ್ಣನ್ನು ಸಂರಕ್ಷಿಸುವ ಹೊದಿಕೆಯಂತೆ. ತೇವ ಉಷ್ಣತೆಗಳನ್ನು ನಿಯಂತ್ರಣದಲ್ಲಿಟ್ಟು ಹವಾಮಾನದ ಮೇಲೂ ಪ್ರಭಾವ ಬೀರುತ್ತವೆ. ನಾಗರಿಕತೆ ಬೆಳೆದಂತೆ ಅರಣ್ಯಗಳ ನಾಶ ಹೆಚ್ಚಾಯಿತು. ಹಾಗಾಗಿಯೇ ನಾಗರಿಕರಲ್ಲಿ ಅರಣ್ಯದ ಮಹತ್ವ ತಿಳಿವಳಿಕೆ ನೀಡಲು 21 ಮಾರ್ಚ್ 1971ರಲ್ಲಿ ("The Conference of the food and Agriculture organization".) ‘ವಿಶ್ವ ಅರಣ್ಯ ದಿನ’ ಆಚರಿಸಲು ಕರೆ ನೀಡಿತು. 2018ರ ಸ್ಲೋಗನ್ ("Forests for Sustainable Cities".)
ಭೌಗೋಳಿಕ ಸ್ಥಿತಿ, ಮಣ್ಣು ಮತ್ತು ಋತು ಭೇದ ಮೊದಲಾದ ಕಾರಣಗಳಿಂದ ಉಂಟಾಗುವ ಹವೆ ವಾಯುಗುಣಗಳು ಅರಣ್ಯ ಬೆಳವಣಿಗೆ ಮೇಲೆ ಪ್ರಭಾವ ಬೀರುತ್ತವೆ. ಪ್ರಪಂಚದ ಅರಣ್ಯಗಳನ್ನು ಮುಖ್ಯವಾಗಿ ಮೂರು ವರ್ಗಗಳನ್ನಾಗಿ ವಿಂಗಡಿಸಬಹುದು. ಶಂಕು ವೃಕ್ಷ ಅರಣ್ಯಗಳು, ಸಮಶೀತೋಷ್ಣವಲಯ ಅರಣ್ಯಗಳು ಮತ್ತು ಉಷ್ಣ ವಲಯದಲ್ಲಿ ಹಬ್ಬಿರುವ ಅರಣ್ಯಗಳು.
1) ಶಂಕು ವೃಕ್ಷಗಳ ಅರಣ್ಯಗಳು:
ಶಂಕುವಿನ ಆಕಾರದ ಕಾಯಿ ಬಿಡುವ ಮರಗಳು. ಇವು ತುಂದ್ರಾ ಪ್ರದೇಶದಿಂದ ದಕ್ಷಿಣಕ್ಕಿರುವ ತಂಪುಹವೆ ಪ್ರದೇಶದಲ್ಲಿ ನೈಸರ್ಗಿಕವಾಗಿ ಬೆಳೆಯುತ್ತವೆ, ಫರ್, ಪೈನ್ ಮರಗಳು ಇಂಥ ಅರಣ್ಯಗಳಲ್ಲಿರುತ್ತವೆ.
2) ಸಮಶೀತೋಷ್ಣವಲಯದ ಅರಣ್ಯಗಳು:
ಸಮಶೀತೋಷ್ಣವಲಯದಲ್ಲಿರುವ ಅರಣ್ಯಗಳು ಕಾಲಕಾಲಕ್ಕೆ ಎಲೆ ಉದುರುವ ಮರಗಳ ಅರಣ್ಯ. ಓಕ್, ಎಲ್ಮ್, ದೇವದಾರು ಮೊದಲಾದ ಮರಗಳು ಈ ಅರಣ್ಯ ಪ್ರದೇಶದಲ್ಲಿ ಬೆಳೆಯುತ್ತವೆ.
3) ಉಷ್ಣ ವಲಯದಲ್ಲಿ ಹಬ್ಬಿರುವ ಕಾಡುಗಳು:
ಉಷ್ಣವಲಯದಲ್ಲಿ ಹಬ್ಬಿರುವ ಕಾಲಕಾಲಕ್ಕೆ ಎಲೆ ಉದುರುವ ಮರಗಳ ಅರಣ್ಯ. ಭಾರತ, ಬರ್ಮಾಗಳಲ್ಲಿ ಇಂಥ ಅರಣ್ಯಗಳನ್ನು ಕಾಣುತ್ತೇವೆ.
ಅರಣ್ಯದಿಂದ ಆಗುವ ಲಾಭಗಳು:
ಅರಣ್ಯಗಳು ಮಳೆಬೀಳಲು ಸಹಾಯಕವಾಗಿವೆ, ಗಾಳಿಯ ಹೊಡೆತ, ನೀರಿನ ಕೊರತೆಗಳಿಂದ ರಕ್ಷಿಸಿ ಮಣ್ಣಿನ ಫಲವತ್ತತೆಯನ್ನು ಉಳಿಸಿಕೊಂಡು ನೆಲದಲ್ಲಿ ನೀರಿನ ತೇವ ನೆಲೆಸುವಂತೆ ಮಾಡುತ್ತದೆ. ಅರಣ್ಯಗಳ ಸುತ್ತಲಿನ ಪ್ರದೇಶದ ಹವಾಗುಣದ ಮೇಲೆ ವಿಶೇಷ ಪ್ರಭಾವ ಬೀರುತ್ತದೆ. ಕಾರಣಾಂತರಗಳಿಂದ ನೆಲದಲ್ಲಿ ಹುದುಗಿಹೋದ ಅರಣ್ಯಗಳು ಕಾಲಾಂತರದಲ್ಲಿ ಕಲ್ಲಿದ್ದಲು, ಕಲ್ಲೆಣ್ಣೆಗಳಂಥ ಇಂಧನಗಳಾಗಿ ಮಾರ್ಪಡುತ್ತವೆ. ಅರಣ್ಯವನ್ನು ರಕ್ಷಿಸಿದರೆ, ಅರಣ್ಯವು ನಮ್ಮನ್ನು ರಕ್ಷಿಸುತ್ತದೆ.
‘ರೋಗವಿಲ್ಲದ ಮಾನವನಿಲ್ಲ, ಔಷಧ ಗುಣವಿಲ್ಲದ ಸಸ್ಯವಿಲ್ಲ’ ಎಂಬ ಗಾದೆಯಂತೆ ಹಲವಾರು ಅರಣ್ಯ ಸಸ್ಯಗಳು ಔಷಧ ನೀಡುತ್ತವೆ. ಹಲವಾರು ವಿಧದ ಸಸ್ಯ ಜನ್ಯ ತೈಲಗಳು ಅರಣ್ಯ ಮೂಲದಿಂದ ದೊರೆಯುತ್ತವೆ. ಕಾಗದ, ಗಂಧದ ಎಣ್ಣೆ, ಅರಗು, ಕರ್ಪೂರದಂಥ ದ್ರವ್ಯಗಳು ಕೈಗಾರಿಕೆಗಳಿಗೆ ಅರಣ್ಯಗಳು ಬೇಕು. ಬಿದಿರು, ಮರಮಟ್ಟು, ಗೊಂದುರಾಳ, ಸಾಂಬಾರ ಪದಾರ್ಥಗಳಂಥ ಅವಶ್ಯ ವಸ್ತುಗಳು ಅರಣ್ಯದಲ್ಲಿ ಉತ್ಪತ್ತಿಯಾಗುತ್ತವೆ. ಚರ್ಮ, ದಂತ, ಮಾಂಸ ಮೊದಲಾದ ವಸ್ತುಗಳು ಅರಣ್ಯವಾಸಿಗಳಾದ ಪ್ರಾಣಿಗಳಿಂದ ದೊರಕುತ್ತದೆ.
ಅರಣ್ಯ ನಾಶದ ಕಾರಣಗಳು:
ಅರಣ್ಯ ನಾಶಕ್ಕೆ ಕಾಳ್ಗಿಚ್ಚು, ಪ್ರಾಣಿಗಳು, ಕೀಟಗಳು ಮತ್ತು ರೋಗಗಳು ಮತ್ತು ನೈಸರ್ಗಿಕ ಕಾರಣಗಳು ಒಂದಿಷ್ಟು ಕೊಡುಗೆ ಸಲ್ಲಿಸಿದರೆ, ಮನುಷ್ಯ ಈ ಎಲ್ಲದಕ್ಕಿಂತ ಹೆಚ್ಚು ಕಾರಣನಾಗಿದ್ದಾನೆ.
ಕಾಡು ಪ್ರಾಣಿಗಳಾದ ಆನೆ, ಕಾಡುಕೋಣ, ಕಾಡು ಹಂದಿ ಮುಂತಾದವುಗಳಿಂದ ಸಾಕಷ್ಟು ನಾಶ ಉಂಟಾಗುವುದು. ಮಿಡತೆ ಮುಂತಾದ ಕೀಟಗಳು ಮಹಾರಣ್ಯಗಳನ್ನು ನಿರ್ಮೂಲ ಮಾಡುತ್ತವೆ. ಸೂಕ್ಷ್ಮಾಣು ಶಿಲೀಂಧ್ರಗಳಿಂದ ಹರಡುವ ರೋಗಗಳು ಅರಣ್ಯಗಳಿಗೆ ಮಾರಕ.
ಮಳೆ, ಗಾಳಿ ಮುಂತಾದ ನೈಸರ್ಗಿಕ ಕಾರಣಗಳಿಂದಾಗಿ ಸಾಕಷ್ಟು ಕಾಡು ನಾಶ ಸಂಭವಿಸುವುದಿದೆ. ನೆಲ ಜರಿದು ಅರಣ್ಯ ಸ್ವರೂಪ ಬದಲಾಗುತ್ತದೆ. ಇಂಥ ಅಪಾಯಗಳಿಂದ ಅರಣ್ಯಗಳು ನಾಶವಾಗುತ್ತವೆ.
ಅರಣ್ಯ ನಾಶಕ್ಕೆ ಮುಖ್ಯ ಕಾರಣ ಮಾನವನಾಗಿದ್ದಾನೆ. ಅರಣ್ಯದಲ್ಲಿ ಉಂಟಾಗುವ ಕಾಳ್ಗಿಚ್ಚು ಕೂಡಾ ನೈಸರ್ಗಿಕ ಕಾರಣಗಳಿಗಿಂತ ಮನುಷ್ಯನ ಅಜಾಗರೂಕತೆಯಿಂದಲೇ ಸಂಭವಿಸಬಹುದು, ಅಲ್ಲದೆ ತನ್ನ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಮಾನವ ಅರಣ್ಯನಾಶ ಮಾಡುತ್ತಿದ್ದಾನೆ. ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಳ್ಳುವ ಪ್ರಕರಣಗಳು ಎಲ್ಲರಿಗೂ ತಿಳಿದದ್ದೇ. ಈ ಒತ್ತುವರಿಗೆ ಸಮಾಜದಲ್ಲಿ ಹೆಸರು ಮಾಡಿದವರು, ಗಣ್ಯರು ಮತ್ತು ಜನಪ್ರತಿನಿಧಿಗಳ ನೆರವಿನ ಹಸ್ತ ಇರುವುದೂ ಎಲ್ಲರಿಗೂ ಗೊತ್ತಿರುವ ವಿಷಯವೇ. ಇಂಥ ಒತ್ತುವರಿಗಳಿಂದಾಗಿಯೂ ಗಿಡಮರಗಳ ಸಂಖ್ಯೆ ಕಡಿಮೆಯಾಗುತ್ತದೆ. ಪರಿಣಾಮ ಪರಿಸರ ಮತ್ತು ಜೀವವೈವಿಧ್ಯಕ್ಕೆ ದೊಡ್ಡ ಏಟು ಬೀಳುತ್ತದೆ. ಒತ್ತುವರಿ ಹಿನ್ನೆಲೆಯಲ್ಲಿ ಗಿಡಮರಗಳನ್ನು ನಿರ್ದಯವಾಗಿ ಕಡಿಯಲಾಗುತ್ತದೆ. ಅಲ್ಲದೇ ಮರಗಳನ್ನು ಕಡಿದು ಕಳ್ಳ ಸಾಗಣೆ ಕೂಡಾ ಮಾಡಲಾಗುತ್ತದೆ. ಇದನ್ನು ತಡೆಯುವುದು ಅಸಾಧ್ಯವೆನಿಸಿದೆ.
ಅರಣ್ಯ ನಾಶದ ಪರಿಣಾಮ:
ಅರಣ್ಯ ನಾಶವಾದ್ದರಿಂದ ಭೂಮಿಯ ಮೇಲೆ ಇಂಗಾಲದ ಪ್ರಮಾಣ ಹೆಚ್ಚಾಗಿದೆ, ಅದ್ದರಿಂದ ನಾವು ‘ಹಸಿರುಮನೆ’ ಪರಿಣಾಮವನ್ನು ಎದುರಿಸುತ್ತಿದ್ದೇವೆ. ಮನುಷ್ಯನಿಗೆ ಜೀವಿಸಲು ಮುಖ್ಯವಾಗಿ ಬೇಕಾದದ್ದು ಆಮ್ಲಜನಕ. ಅರಣ್ಯಗಳು ಆಮ್ಲಜನಕದ ಕಣಜಗಳು. ಆಮ್ಲಜನಕವನ್ನು ನಾವು ಸಸ್ಯಗಳಿಂದ ಪಡೆಯುತ್ತೇವೆ. ಬರಿದಾಗುವ ಕಾಡುಗಳು, ಭೂತಾಪ ಏರಿಕೆಗೆ ಕಾರಣವಾಗುತ್ತದೆ. ಅತಿಯಾದ ಚಳಿ, ಅತಿಯಾದ ಶಾಖ, ಚಂಡಮಾರುತಗಳ ಹೆಚ್ಚಳ ಮತ್ತು ಇಂಗಾಲ ಇತ್ಯಾದಿಗಳ ಹೊರಸೊಸುವಿಕೆಯ ಹೆಚ್ಚಳದಿಂದ ವಾಯುಮಾಲಿನ್ಯ ಹೆಚ್ಚಾಗುತ್ತದೆ. ಇದರಿಂದಾಗಿ ನಗರಗಳಲ್ಲಿ ಉಸಿರಾಡಲು ಶುದ್ಧ ಗಾಳಿಸಿಗುವುದು ಕಷ್ಟವಾಗುತ್ತದೆ. ಕಾಡು ನಶಿಸಿ ಕಾಡು ಪ್ರಾಣಿಗಳು ನೀರು, ಆಹಾರ ಹುಡುಕುತ್ತಾ ನಾಡಿಗೆ ಬರಲು ಪ್ರಾರಂಭಿಸಿವೆ. ಸರಕಾರ ಅರಣ್ಯ ಕಾಯ್ದೆಗಳನ್ನು ರೂಪಿಸಿದರೂ ಇದಕ್ಕೆ ಬೆಲೆಯೇ ಇಲ್ಲದಂತಾಗಿವೆ. ಹೀಗೆಯೇ ಕಾಡು ನಶಿಸುತ್ತಾ ಹೋದರೆ ಮುಂದೊಂದು ದಿನ ಮನುಷ್ಯ ಉಸಿರಾಡಲೂ ಕಷ್ಟಪಡಬೇಕಾಗಿದೆ ಎಂಬ ಅರಿವು ಇನ್ನಾದರೂ ಮನುಷ್ಯ ಕುಲಕ್ಕೆ ಬರಬೇಕಾಗಿದೆ. ಹಾಗಾಗಿ ಗಿಡನೆಟ್ಟು ಮರವಾಗಿಸಿ ಸಕಲ ಜೀವರಾಶಿಗಳನ್ನು ಉಳಿಸುವತ್ತ ಮಾನವ ಕುಲ ಗಂಭೀರ ಹೆಜ್ಜೆಯಿಡಬೇಕಾಗಿದೆ.