BFF ಎಂದು ಕಮೆಂಟ್ ಮಾಡುವ ಮೂಲಕ ಫೇಸ್ ಬುಕ್ ಖಾತೆ ಸುರಕ್ಷಿತವಾಗಿದೆ ಎಂದು ತಿಳಿಯಬಹುದೇ?: ಇಲ್ಲಿದೆ ವಾಸ್ತವಾಂಶ
“ಕಮೆಂಟ್ ಬಾಕ್ಸ್ ನಲ್ಲಿ BFF ಎಂದು ಟೈಪ್ ಮಾಡುವ ಮೂಲಕ ನಿಮ್ಮ ಫೇಸ್ ಬುಕ್ ಖಾತೆ ಸೇಫ್ ಆಗಿದೆಯೇ ಅಥವಾ ಹ್ಯಾಕ್ ಆಗಿದೆಯೇ ಎಂಬುದನ್ನು ತಿಳಿದುಕೊಳ್ಳಬಹುದು. BFF ಎಂದು ಟೈಪ್ ಮಾಡಿದ ತಕ್ಷಣ ಅಕ್ಷರಗಳು ಹಸಿರು ಬಣ್ಣಕ್ಕೆ ತಿರುಗಿದರೆ ನಿಮ್ಮ ಖಾತೆ ಸೇಫ್ ಆಗಿದೆ ಎಂದರ್ಥ. ಇಲ್ಲದಿದ್ದರೆ ನಿಮ್ಮ ಖಾತೆ ಹ್ಯಾಕ್ ಆಗಿದೆ ಎಂದರ್ಥ”…. ಇದು ಫೇಸ್ ಬುಕ್, ವಾಟ್ಸ್ಯಾಪ್ ಸಹಿತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಸಂದೇಶ.
“BFF ಫೀಚರನ್ನು ಮಾರ್ಕ್ ಝುಕರ್ ಬರ್ಗ್ ಕಂಡು ಹಿಡಿದಿದ್ದಾರೆ. ನಿಮ್ಮ ಖಾತೆ ಸೇಫ್ ಆಗಿದೆಯೇ ಇಲ್ಲವೇ ಎನ್ನುವುದನ್ನು ಇದು ಸೂಚಿಸುತ್ತದೆ. ಕಮೆಂಟ್ ಬಾಕ್ಸ್ ಅಲ್ಲಿ BFF ಎಂದು ಟೈಪ್ ಮಾಡಿ. ಅದು ಹಸಿರು ಬಣ್ಣಕ್ಕೆ ತಿರುಗದಿದ್ದರೆ ಕೂಡಲೇ ನಿಮ್ಮ ಖಾತೆ ಬದಲಾಯಿಸಿ” ಎನ್ನುವ ಸಂದೇಶಗಳನ್ನು ಹಲವರು ನಂಬಿದ್ದಾರೆ.
ವಾಸ್ತವವೇನು: ಈ ಫೀಚರ್ ಮೂಲಕ ಫೇಸ್ ಬುಕ್ ಖಾತೆ ಸೇಫ್ ಆಗಿದೆ ಎಂದು ತಿಳಿದುಕೊಳ್ಳಬಹುದು ಎನ್ನುವುದು ಸುಳ್ಳು. BFF ನ್ನು ಫೇಸ್ ಬುಕ್ ವಿಶೇಷ ಕಮೆಂಟ್ ಆಗಿ ಆಯ್ಕೆ ಮಾಡಿದೆ. ನೀವು ಕಮೆಂಟ್ ಬಾಕ್ಸ್ ನಲ್ಲಿ BFF ಎಂದು ಟೈಪ್ ಮಾಡಿದರೆ ಅದು ಹಸಿರು ಬಣ್ಣಕ್ಕೆ ತಿರುಗುತ್ತದೆ. ಏಕೆಂದರೆ ಇದು ಸ್ನೇಹಿತರಿಗಾಗಿ ಮಾಡಲಾದ ವಿಶೇಷ ಫೀಚರ್. ನೀವು ಹಸಿರು ಬಣ್ಣಕ್ಕೆ ತಿರುಗಿದ BFF ಮೇಲೆ ಕ್ಲಿಕ್ ಮಾಡಿದರೆ ವಿಶ್ಯುವಲ್ ಅನಿಮೇಷನ್ ಕಾಣಿಸಿಕೊಳ್ಳುತ್ತದೆ.
‘BFF ಎಂದರೆ ಬೆಸ್ಟ್ ಫ್ರೆಂಡ್ಸ್ ಫಾರೆವರ್’ ಎಂದರ್ಥ. ಈ ಹಿಂದೆ ಗೆಳೆಯರಿಗೆ ಶುಭ ಹಾರೈಸುವುದಕ್ಕಾಗಿ ಫೇಸ್ ಬುಕ್ congratulations ಎನ್ನುವ ಫೀಚರನ್ನು ಬಳಕೆದಾರರಿಗೆ ನೀಡಿದ್ದನ್ನು ಇಲ್ಲಿ ಉಲ್ಲೇಖಿಸಬಹುದು. ಇದರ ಹೊರತಾಗಿ BFF ಕಮೆಂಟ್ ಮೂಲಕ ಫೇಸ್ ಬುಕ್ ಖಾತೆ ಸೇಫ್ ಆಗಿದೆಯೇ ಎಂದು ತಿಳಿದುಕೊಳ್ಳಬಹುದು ಎನ್ನುವುದು ಶುದ್ಧಸುಳ್ಳು.