ಆರು ವರ್ಷಗಳಿಂದ ಪರಸ್ಪರ ನೋಡದ ತಾಯಿ-ಮಗನ ಭೇಟಿಗೆ ವೇದಿಕೆಯಾದ ದುಬೈ ವಿಮಾನ ನಿಲ್ದಾಣ
ಮಾ. 20, ಮಂಗಳವಾರ ವಿಶ್ವ ಸಂತೋಷದ ದಿನದಂದು ದುಬೈ ವಿಮಾನ ನಿಲ್ದಾಣದ ಮೂರನೇ ಟರ್ಮಿನಲ್ ಒಂದು ಅಪರೂಪದ ಘಟನೆಗೆ ಸಾಕ್ಷಿಯಾಯಿತು.
ಅದೇನೆಂದರೆ ಸುಮಾರು ಆರು ವರ್ಷಗಳಿಂದ ಮುಖ ನೋಡದೆ ಬೇರ್ಪಟ್ಟಿದ್ದ, ದುಬೈಯಲ್ಲಿ ಚಾಲಕನಾಗಿ ದುಡಿಯುತ್ತಿರುವ ಪಾಕಿಸ್ತಾನಿ ಯುವಕನನ್ನು ತನ್ನ ಪಾಕಿಸ್ತಾನದಲ್ಲಿದ್ದ ತಾಯಿ ಭೇಟಿಯಾದ ಕ್ಷಣಕ್ಕೆ ದುಬೈ ವಿಮಾನ ನಿಲ್ದಾಣದ ಪಾಸ್ಪೋರ್ಟ್ ಅಧಿಕಾರಿಗಳು ಸಾಕ್ಷಿಯಾದರು.
ಸುಮಾರು ಆರು ವರ್ಷಗಳ ಹಿಂದೆ 21 ವರ್ಷದ ತಾಹಿರ್ ಅಯ್ಯೂಬ್ ಎಂಬ ಪಾಕಿಸ್ತಾನಿ ಯುವಕ ಉತ್ತಮ ಕೆಲಸ ಹಾಗೂ ವೇತನವನ್ನು ನಿರೀಕ್ಷಿಸಿ ಯುಎಇಗೆ ಹೋಗಿದ್ದು, ಆತನ ಅದೃಷ್ಟ ಚೆನ್ನಾಗಿರಲಿಲ್ಲ. ಮನೆಯವರ ಕಷ್ಟ, ಕುಟುಂಬದವರ ಖರ್ಚನ್ನು ತಲೆ ಮೇಲೆ ಹೊತ್ತುಕೊಂಡಿದ್ದ ಯುವಕನಿಗೆ ಸರಿಯಾದ ಕೆಲಸ ಸಿಗಲಿಲ್ಲ. ಆತನ ವರಮಾನವು ಕುಟುಂಬವನ್ನು ಸಾಕುವುದರಲ್ಲೇ ಖಾಲಿಯಾಗುತ್ತಿತ್ತು. ತನ್ನ ತಾಯಿ ಪದೇ ಪದೇ ಊರಿಗೆ ಬರುವಂತೆ ಒತ್ತಾಯ ಮಾಡುತ್ತಿದ್ದರೂ, ತಾಹಿರ್ ಮಾತ್ರ ಸ್ವಲ್ಪ ಹಣ ಸಂಪಾದಿಸಿ ಬರುತ್ತೇನೆಂದು ತನ್ನ ತಾಯಿಯನ್ನು ಸಮಾಧಾನ ಪಡಿಸುತ್ತಿದ್ದ. ಹೀಗೆಯೇ ತನ್ನ ಕುಟುಂಬವನ್ನು ಸಲಹುವ ಒತ್ತಡದಲ್ಲಿ ತಾಹಿರ್ ಗೆ ತನ್ನ ಜೀವನದ ಆರು ವರ್ಷ ಕಳೆದು ಹೋದದ್ದೇ ತಿಳಿಯಲಿಲ್ಲ.
ತನ್ನ ತಂದೆ ತಾಯಿಯನ್ನು ಉಮ್ರಾ ನಿರ್ವಹಿಸಲು ಮಕ್ಕಾಕ್ಕೆ ಕಳುಹಿಸಬೇಕೆಂಬುವುದು ತಾಹಿರ್ ಅವರ ಬಹುದಿನದ ಬಯಕೆಯಾಗಿತ್ತು. ಅದರಂತೆ ತನ್ನ ತಂದೆ ತಾಯಿಯನ್ನು ಪವಿತ್ರ ಮಕ್ಕಾಕ್ಕೆ ಕಳುಹಿಸಿದ ತಾಹೀರ್ ಬಹಳ ಸಂತೋಷದಿಂದಿದ್ದ. ತನ್ನ ತಂದೆ ತಾಯಿ ಉಮ್ರಾ ನಿರ್ವಹಿಸಿ ಜಿದ್ದಾದಿಂದ ದುಬೈಗೆ ಹಾಗೂ ದುಬೈಯಿಂದ ಪಾಕಿಸ್ತಾನಕ್ಕೆ ವಿಮಾನ ಟಿಕೆಟ್ ಲಭಿಸದ ಕುರಿತು ಮಾಹಿತಿ ತಿಳಿದ ತಾಹಿರ್ ರಿಗೆ ಆರು ವರ್ಷ ನೋಡದ ತನ್ನ ತಾಯಿಯ ಮುಖ ನೋಡುವ ಹಂಬಲವುಂಟಾಗಿದ್ದು, ಇದು ಅಸಾಧ್ಯವಾದರೂ ತಾಹಿರ್ ಪ್ರಯತ್ನ ಮಾಡಿ ನೋಡುವ ಛಲ ಉಂಟಾಗಿತ್ತು.
ವಿಶ್ವದ ಯಾವುದೇ ವಿಮಾನ ನಿಲ್ದಾಣದಲ್ಲಿ ಕನೆಕ್ಟಿಂಗ್ ವಿಮಾನದ ಮೂಲಕ ಪ್ರಯಾಣಿಸುವ ಪ್ರಯಾಣಿಕರನ್ನು ಹೊರಗಿನವರಿಗೆ ಭೇಟಿ ಮಾಡಲು ಅವಕಾಶವಿಲ್ಲ. ಆದರೆ ತನ್ನ ಮನಮಿಡಿತವನ್ನು ತನ್ನ ಪ್ರಾಯೋಜಕನಿಗೆ ತಿಳಿಸಿದ ತಾಹಿರ್ ಈ ಕುರಿತು ನಿಲ್ದಾಣದ ಅಧಿಕಾರಿಗಳಲ್ಲಿ ವಿನಂತಿಸಬೇಕಾಗಿ ಕೇಳಿಕೊಂಡಿದ್ದರು. ಅದರಂತೆ ಯುಎಇ ಜನರಲ್ ಡೈರೆಕ್ಟರೇಟ್ ಆಫ್ ರೆಸಿಡೆನ್ಸಿ ಅಂಡ್ ಫಾರಿನರ್ಸ್ ಅಫೇರ್ಸ್ (GDRFA) ಅಧಿಕಾರಿಗಳನ್ನು ಸಂಪರ್ಕಿಸಿದ ತಾಹಿರ್ ಅವರ ಶಾರ್ಜಾದಲ್ಲಿರುವ ಪ್ರಾಯೋಜಕ, ಇಂತಹ ಅಪರೂಪದ ಘಟನೆಗಾಗಿ ಅವಕಾಶ ಕಲ್ಪಿಸುವಂತೆ ಮನವಿ ಮಾಡಿಕೊಂಡರು.
ವಿಶ್ವ ಸಂತೋಷದ ದಿನ ಹಾಗೂ ತಾಯಂದಿರ ದಿನದ ಮಹತ್ವವನ್ನು ವಿಶ್ವಕ್ಕೆ ತೋರಿಸಿ ಕೊಡಲು ಮುಂದಾದ ಸಚಿವಾಲಯವು ದುಬೈ ವಿಮಾನ ನಿಲ್ದಾಣದ ಅಧಿಕಾರಿಗಳನ್ನು ಸಂಪರ್ಕಿಸಿ, ಈ ಅಪರೂಪದ ಘಟನೆಗೆ ವೇದಿಕೆ ಕಲ್ಪಿಸುವಂತೆ ನಿರ್ದೇಶನ ನೀಡಿತು. ಅದರಂತೆ ದುಬೈ ನಿಲ್ದಾಣದ ಪಾಸ್ಪೋರ್ಟ್ ಮುಖ್ಯಸ್ಥರಾದ ಲೆಪ್ಟಿನೆಂಟ್ ಕರ್ನಲ್ ಇಬ್ರಾಹಿಮ್ ಹಮೀದ್ ಅವರ ನೇತೃತ್ವದಲ್ಲಿ, ಮಂಗಳವಾರ ರಾತ್ರಿ 11:55 ಕ್ಕೆ ಆರು ವರ್ಷಗಳ ನಂತರದ ತಾಯಿ ಮಗನ ಭೇಟಿಯ ಅಪರೂಪದ ಘಟನೆಗೆ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 3 ಪ್ರತ್ಯಕ್ಷ ಸಾಕ್ಷಿಯಾಯಿತು.
ಆರು ವರ್ಷದ ನಂತರ ತಾಯಿಯನ್ನು ನೋಡಿದ ಮಗ ಹಾಗೂ ಮಗನನ್ನು ನೋಡಿದ ತಾಯಿ ಕೆಲವು ಕ್ಷಣಗಳು ಭಾವುಕರಾಗಿ ಕೇವಲ ಆನಂದ ಬಾಷ್ಪದೊಂದಿಗೆ ದಿಟ್ಟಿಸಿ ನೋಡಿದರು. ನಂತರ ಪರಸ್ಪರ ಆಲಂಗಿಸಿ ಬಿಗಿದಪ್ಪಿಕೊಂಡು ಕಣ್ಣೀರಿನ ಮಳೆಯೊಂದಿಗೆ ಪರಸ್ಪರ ಕುಶಲೋಪಚರಿಸಿದರು.
ಒಟ್ಟಿನಲ್ಲಿ ಮಗ ತಾಹಿರ್ ನ ಮನದ ಮಿಡಿತ, ತಂದೆ ತಾಯಿಯ ಅದೃಷ್ಟ, ಪ್ರಾಯೋಜಕನ ಹುಮ್ಮಸ್ಸು , ಯುಎಇಯ ವಿದೇಶಿ ವ್ಯವಹಾರಗಳ ಸಚಿವಾಲಯದ ಮಾನವೀಯತೆ ಹಾಗೂ ದುಬೈ ವಿಮಾನ ನಿಲ್ದಾಣದ ಅಧಿಕಾರಿಗಳ ಕರ್ತವ್ಯ ನಿಷ್ಠೆ ಇವೆಲ್ಲವೂ ಒಟ್ಟು ಸೇರಿದಾಗ ವಿಶ್ವದ ಅತೀ ಜನನಿಬಿಡ ನಿಲ್ದಾಣಗಳಲ್ಲೊಂದಾದ ದುಬೈ ವಿಮಾನ ನಿಲ್ದಾಣಕ್ಕೆ ಇಂತಹ ಘಟನೆಗೆ ಸಾಕ್ಷಿಯಾಗಲು ಸಾಧ್ಯವಾಯಿತು.