ಕೌಟುಂಬಿಕ ಪ್ರಭಾವ
ಬೆಳೆಯುವ ಪೈರು
ವಿಧ ವಿಧ ವರ್ತನೆಗಳು
ಕೌಟುಂಬಿಕ ರಚನೆ
ಯಾವುದೇ ಮಗುವಿನ ವರ್ತನೆಯ ಮೇಲೆ ತಂದೆ ಅಥವಾ ತಾಯಿ, ಅಥವಾ ಇತರೇ ವ್ಯಕ್ತಿಗಳ ವ್ಯಕ್ತಿಗತ ಪ್ರಭಾವಗಳು ತಮ್ಮ ಛಾಪು ಮೂಡಿಸುವುದೋ ಅದೇ ರೀತಿಯಲ್ಲಿ ಕೌಟುಂಬಿಕ ರಚನೆಯೂ ಕೂಡ ತಮ್ಮ ಪ್ರಭಾವವನ್ನು ಗಾಢಗೊಳಿಸುತ್ತವೆ ಮತ್ತು ಪ್ರೇರೇಪಿಸುತ್ತದೆ. ಮಗುವು ವಾಸಿಸುವ ಮತ್ತು ಬೆಳೆಯುವ ಕುಟುಂಬದ ಹಲವು ಅಂಶಗಳು ಅದರ ಮಾನಸಿಕ, ಭಾವನಾತ್ಮಕ ವಿಷಯಗಳ ಮೇಲೆ ನೇರವಾದ ಪ್ರಭಾವನ್ನು ಬೀರುತ್ತವೆ.
1. ಕುಟುಂಬದಲ್ಲಿರುವವರ ಸಂಬಂಧಗಳ ವಿಷಯ.
ಮಗುವು ತಾನು ಏನನ್ನು ನಿತ್ಯವೂ ಸಾಕ್ಷೀಕರಿಸುವುದೋ ಅದನ್ನೇ ತನ್ನದಾಗಿಸಿಕೊಳ್ಳುತ್ತಾ ಹೋಗುತ್ತದೆ. ತಂದೆ, ತಾಯಿ ಮತ್ತು ಕುಟುಂಬದ ಇತರೇ ಸದಸ್ಯರು ತಮ್ಮ ತಮ್ಮ್ಮಾಂದಿಗೆ ಪರಸ್ಪರ ಹೇಗೆ ಸಂಬಂಧಗಳನ್ನು ಹೊಂದಿದ್ದಾರೆ ಮತ್ತು ಅವುಗಳನ್ನು ಹೇಗೆ ನಿಭಾಯಿಸುತ್ತಿದ್ದಾರೆ ಎಂಬುದು ಬೆಳೆಯುವ ಮಗುವಿನ ವರ್ತನೆಯ ಮೇಲೆ ಬಹು ಮುಖ್ಯವಾದ ಪ್ರಭಾವವನ್ನು ಬೀರುತ್ತದೆ. ತಾಯಿ ಅಜ್ಜಿಯೊಂದಿಗೆ ವರ್ತಿಸುವ ರೀತಿ, ತಂದೆ ಅಜ್ಜನೊಂದಿಗೆ ಅಥವಾ ತನ್ನ ಸಹೋದರರೊಂದಿಗೆ ವರ್ತಿಸುವ ರೀತಿ ಮಗುವಿನ ವರ್ತನೆಗಳನ್ನು ರೂಪಿಸುವುದರಲ್ಲಿ ಪ್ರಧಾನ ಪಾತ್ರವಹಿಸುತ್ತದೆ. ಮಗುವಿನ ಒಲವು ನಿಲುವುಗಳು ಸ್ಥಿರವಾಗಿರುವುದಿಲ್ಲ. ಅದರ ತತ್ಕಾಲದ ಅಗತ್ಯವನ್ನು ಮತ್ತು ಹಿತವನ್ನು ಕಾಪಾಡುವವರ ಕಡೆಗೆ ವಾಲುತ್ತಿರುತ್ತದೆ. ಆದರೆ, ಹೆಚ್ಚು ವಾಲುವಿಕೆ ಯಾವ ಕಡೆಗಾಗುತ್ತಿದೆ ಎಂಬುದರ ಆಧಾರದ ಮೇಲೆ ಅವರ ಒಲವು ಮತ್ತು ಧೋರಣೆಗಳು ಸ್ಥಿರವಾಗುತ್ತದೆ. ರೂಢಿಯಾಗುತ್ತದೆ ಎಂದೂ ಹೇಳಬಹುದು. ಮುಂದೊಂದು ದಿನ ತನಗೇ ಗೊತ್ತಿಲ್ಲದಂತೆ ಅವರ ಪಕ್ಷಪಾತಿಯಾಗಿ ಬಿಟ್ಟಿರುತ್ತದೆ. ಅವರ ಗುಣಧರ್ಮಗಳನ್ನು ರಹಸ್ಯವಾಗಿ ಅಥವಾ ನೇರವಾಗಿ ಆರಾಧಿಸುತ್ತಿರುತ್ತದೆ. ಅನುಕರಿಸಲೂ ಕೂಡ ತೊಡಗಿರುತ್ತದೆ.
ಕುಟುಂಬದ ಸದಸ್ಯರಲ್ಲಿ ಪರಸ್ಪರ ಜಗಳವೋ, ಮನಸ್ತಾಪವೋ ಬಂದಾಗಲೂ ಮಕ್ಕಳು ನೇರವಾಗಿ ಪರ ವಿರೋಧವನ್ನು ತೋರಿಸದಿದ್ದರೂ ಅವರ ಪರ ವಿರೋಧದ ನೆಲೆಗಳು ಗಟ್ಟಿಗೊಳ್ಳುತ್ತಾ ಹೋಗುತ್ತವೆ. ಮುಂದೆ ಯಾವಾಗ ಅವರು ಶಾರೀರಿಕವಾಗಿ, ಮಾನಸಿಕವಾಗಿ ಸಮರ್ಥರು ಎಂದು ಅವರಿಗೇ ಅನ್ನಿಸಿದಾಗ, ಅಥವಾ ತಾನು ಅವಲಂಬಿತವಾಗಿಲ್ಲ ಎಂದು ತೋರಿದಾಗ ಅದನ್ನು ವ್ಯಕ್ತಪಡಿಸಿಯೇ ತೀರುತ್ತಾರೆ. ತನ್ನ ಒಡಹುಟ್ಟಿದವರು, ತನ್ನ ಹೆತ್ತವರು, ಸಾಕಿದವರು, ಕುಟುಂಬದವರು ಎಂಬಂತಹ ಆಸ್ಥೆ ಮತ್ತು ಆಸಕ್ತಿ ಅವರಿಗೆ ಖಂಡಿತ ಇರುವುದಿಲ್ಲ. ಅವರು ತನ್ನ ಹಿತಕ್ಕೆ ಅನುಕೂಲಕರವಾಗಿದ್ದಾರೋ ಇಲ್ಲವೋ, ತನ್ನ ಭಾವನೆಗಳಿಗೆ ಸ್ಪಂದಿಸುತ್ತಾರೋ ಇಲ್ಲವೋ, ತನ್ನ ವಿಚಾರಗಳನ್ನು ಸ್ವೀಕರಿಸುತ್ತಾರೋ ಇಲ್ಲವೋ; ಇವಷ್ಟೇ ಅವರಿಗೆ ಮುಖ್ಯವಾಗಿರುತ್ತದೆ. ಇದು ಸಹಜ ಕೂಡಾ ಆಗಿರುತ್ತದೆ.
ಹಾಗೆಯೇ ಧಾರ್ಮಿಕವಾಗಿ, ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ, ಕೆಲವೊಮ್ಮೆ ಕಾನೂನಾತ್ಮಕ ವ್ಯವಸ್ಥೆಯ ಭಾಗವಾಗಿ ಹೆತ್ತವರನ್ನು, ಹೊತ್ತವರನ್ನು, ಶಿಕ್ಷಕರನ್ನು ಗೌರವಿಸುವ ಮತ್ತು ಪರಿಗಣಿಸುವ ಅನಿವಾರ್ಯತೆಯಿಂದಾಗಿ ಹೇಗೋ ಗೌರವಿಸಿಕೊಂಡು, ಸಹಿಸಿಕೊಂಡು ಇರುತ್ತಾರೆ. ಒಂದಂತೂ ಸ್ಪಷ್ಟ. ಯಾವ ಸಂಬಂಧಗಳಿಂದ ತಮಗೆ ಹಿತವಾಗಿರುತ್ತದೆಯೋ, ಯಾರು ತಮ್ಮ ವಿಚಾರ ಮತ್ತು ಭಾವನೆಗಳಿಗೆ ಸ್ಪಂದಿಸುವ ಮೂಲಕ ಹಿತಕರವಾಗಿರುತ್ತಾರೆಯೋ ಅವರೊಂದಿಗೇ ಮಾತ್ರವೇ ಮಕ್ಕಳ ನಿಜವಾದ ಸಂಬಂಧ ಬೆಳೆಯುತ್ತದೆ. ಇಲ್ಲವಾದರೆ ಅವರು ಕೌಟುಂಬಿಕ ಸಂಬಂಧವಾಗಿರಲಿ, ಸಾಮಾಜಿಕ ಅಥವಾ ಶೈಕ್ಷಣಿಕ ಸಂಬಂಧವಾಗಿರಲಿ ಅನಿವಾರ್ಯದಿಂದ ಸಹಿಸಿಕೊಂಡಿರುತ್ತಾರೆ. ಅವರ ಕ್ಷೋಭೆ ಮತ್ತು ಬಂಡಾಯವನ್ನೂ ನೇರವಾಗಿ ತೋರಲಾರರು ಏಕೆಂದರೆ, ಅದರ ಪ್ರತಿಫಲವಾಗಿ ತಾವು ತಮ್ಮ ಹಿತವನ್ನು ಕಳೆದುಕೊಳ್ಳುವಂತಹ ಸಂದರ್ಭಗಳು ಏರ್ಪಡುತ್ತವೆ.
ಹಾಗಾಗಿ ಕುಟುಂಬದಲ್ಲಿರುವ ಹಿರಿಯರು ಮಕ್ಕಳ ಮನಸ್ಸಿಗೆ ಹಿತ ಮತ್ತು ಹೃದಯಕ್ಕೆ ಮುದ ನೀಡುವಂತಹ ವರ್ತನೆಗಳನ್ನು ತೋರುತ್ತಿದ್ದರೆ, ಸಂಬಂಧವನ್ನು ಬೆಸೆದುಕೊಂಡಿದ್ದರೆ ನಿಜಕ್ಕೂ ಮಧುರವಾದ ವಾತಾವರಣ ಉಂಟಾಗುತ್ತದೆ. ಮಕ್ಕಳ ವರ್ತನೆಗಳೂ ಅದಕ್ಕೆ ಪೂರಕವಾಗಿರುತ್ತದೆ. ಸಂಬಂಧಗಳನ್ನು ಅನುಮಾನಿಸುವುದು, ಸಂಬಂಧಗಳಲ್ಲಿ ಸಂಘರ್ಷವಿರುವುದು, ಬೇಡವಾದ ಸಂಬಂಧಗಳೊಂದಿಗೆ ಅನಿವಾರ್ಯವಾಗಿ ಕಾಲ ಹಾಕುವುದು, ಸಂಬಂಧಗಳನ್ನು ಅಪಮಾನಿಸುವುದು; ಇವೆಲ್ಲವೂ ಮಗುವಿನ ವರ್ತನೆಗಳನ್ನು ರೂಪಿಸುವುದರಲ್ಲಿ ತಮ್ಮ ಪ್ರಭಾವಗಳನ್ನು ಬೀರುತ್ತವೆ. ವಿಚ್ಛೇದಿತ ಪೋಷಕರ ಜೊತೆಗಿರುವ ಮಗುವಿನ ವರ್ತನೆಗೂ ಮತ್ತು ತಂದೆ ತಾಯಿಯೊಂದಿಗೆ ಬೆಳೆಯುವ ಮಗುವಿನ ವರ್ತನೆಗೂ ವ್ಯತ್ಯಾಸಗಳಿರುತ್ತವೆ. ಅದರಂತೆಯೇ ಮನೆಯಲ್ಲಿ ಒಡಹುಟ್ಟಿದವರಿದ್ದರ ಅಥವಾ ಇಲ್ಲದಿದ್ದರೆ ಅವರ ನಡವಳಿಕೆಗಳಲ್ಲಿ ವ್ಯತ್ಯಾಸವಿರುತ್ತದೆ. ಆದರೆ ಈ ವ್ಯತ್ಯಾಸ ನಕಾರಾತ್ಮಕವಾಗಿರುತ್ತದೆಯೋ ಅಥವಾ ಸಕಾರಾತ್ಮಕವಾಗಿರುತ್ತದೆಯೋ ಅದು ಕುಟುಂಬದ ಸದಸ್ಯರ ವರ್ತನೆ ಮತ್ತು ನಡವಳಿಕೆಗಳ ಮೇಲೆ ಅವಲಂಬಿತವಾಗಿರುತ್ತದೆ.
2. ಆರ್ಥಿಕ ಸ್ಥಿತಿಗತಿ
ಮನೆಯಲ್ಲಿ ಮಕ್ಕಳಿಗೆ ಅನುಕೂಲಕರವಾಗಿದ್ದರೆ, ಬೇಕುಬೇಕಾದ್ದೆಲ್ಲಾ ದೊರಕುತ್ತಿದ್ದರೆ, ಕೊರತೆ ಇರದಿದ್ದರೆ ಅವರ ವರ್ತನೆಗಳಿಗೂ ಆರ್ಥಿಕ ಅನನುಕೂಲತೆ ಇರುವ ಮಕ್ಕಳ ವರ್ತನೆಗಳಿಗೂ ವ್ಯತ್ಯಾಸವಿರುತ್ತದೆ. ಕೊರತೆಯಲ್ಲಿ ಬೆಳೆಯುವ ಮಕ್ಕಳು ತಮ್ಮ ಈಡೇರದ ಆಸೆಗಳನ್ನು ತೃಪ್ತಿಪಡಿಸಿಕೊಳ್ಳಲು ಬೇರೆಲ್ಲೋ ಅವರ ಬೇಕಾದ ವಸ್ತುಗಳನ್ನು ನೋಡಿದಾಗ ಪಡೆಯಲು ಆತುರಿಸಬಹುದು. ನೇರವಾಗಿ ಅಥವಾ ಪರೋಕ್ಷವಾಗಿ ತನ್ನನ್ನು ದಯನೀಯವಾಗಿ ಚಿತ್ರಿಸಿಕೊಂಡು ಬೇಡಬಹುದು. ಕದಿಯಬಹುದು. ಅಸೂಯೆಯಿಂದ ಅದನ್ನು ಹಾಳು ಮಾಡಬಹುದು. ಏನಾದರೂ ಆಗಬಹುದು. ಅಂತೆಯೇ, ಅತ್ಯುತ್ತಮ ಸಂಪಾದನೆ ಇರುವ, ಸಾಧಾರಣ ಹಾಗೆಯೇ ಕನಿಷ್ಠ ವೇತನ ಪಡೆಯುವ ಪೋಷಕರ ಮಕ್ಕಳಲ್ಲಿಯೂ ಕೂಡ ವರ್ತನೆಗಳಲ್ಲಿ ವ್ಯತ್ಯಾಸಗಳನ್ನು ಕಾಣುತ್ತೇವೆ. ಮಗುವಿನ ಹಂಚಿಕೊಳ್ಳುವ, ಕಸಿದುಕೊಳ್ಳುವ, ದುರಾಸೆಪಡುವ, ಬಿಟ್ಟುಕೊಡುವ, ಆಸೆಪಟ್ಟು ಹೊಂದಲಾರದೇ ನಿರಾಸೆಯಿಂದ ಅದುಮಿಟ್ಟುಕೊಂಡು ಹತಾಶೆಯಿಂದ ವರ್ತಿಸುವ ಹಲವು ಬಗೆಯ ವರ್ತನೆಗಳು ಕುಟುಂಬದ ಆರ್ಥಿಕ ಸ್ಥಿತಿಗತಿಗಳು ಉಂಟುಮಾಡುತ್ತವೆ.
3. ಸಾಮಾಜಿಕ ಸ್ಥಾನಮಾನ
ಮಗುವಿನ ಕುಟುಂಬವು ಸಮಾಜದ ಇತರ ಕುಟುಂಬಗಳಿಂದ ಅಥವಾ ಸಾಮಾಜಿಕ ಸಂಸ್ಥೆಗಳಿಂದ ಆದರಕ್ಕೊಳಗಾಗಿದೆಯೋ, ಅನಾದರಕ್ಕೊಳಗಾಗಿದೆಯೋ, ಪರಿಗಣಿಸಲ್ಪಡುವುದೋ, ತಿರಸ್ಕರಿಸಲ್ಪಟ್ಟಿರುವುದೋ; ಇದೂ ಕೂಡ ಮಗುವಿನ ವರ್ತನೆಯ ಕಾರಣವಾಗಿ ರೂಪುಗೊಳ್ಳುತ್ತದೆ. ಇದು ಮಗುವಿನ ಮೇಲರಿಮೆ ಅಥವಾ ಕೀಳರಿಮೆಗಳಿಗೂ ಕೂಡಾ ಕಾರಣವಾಗುತ್ತದೆ. ಕೆಲವು ಮಕ್ಕಳು ಹೊಸಬರನ್ನು ಕಂಡಾಗ ಹಿಂಜರಿಯುತ್ತಾರೆ. ಏನು ಹೆಸರು? ಎಷ್ಟನೇ ಕ್ಲಾಸ್ ಓದುತ್ತಿದ್ದೀಯಾ? ತಿಂಡಿ ತಿಂದಾ? ಇತ್ಯಾದಿ ಪ್ರಶ್ನೆಗಳಿಗೂ ಉತ್ತರಿಸದೇ ದೂರ ಸರಿದು ನಿಲ್ಲುತ್ತಾರೆ. ಸಂಕೋಚ ಪ್ರವೃತ್ತಿ, ಮುಂದುವರಿದು ಮಾತಾಡುವ ಧೈರ್ಯ, ಪ್ರಶ್ನಿಸಿದರೆ ಚುಟುಕಾಗಿ ನಿಲ್ಲುವುದು ಅಥವಾ ಸುದೀರ್ಘವಾಗಿ ಉತ್ತರಿಸುವುದು, ಅಗತ್ಯಕ್ಕಿಂತ ಹೆಚ್ಚು ಹೇಳುವುದು, ಅಥವಾ ತಮ್ಮ ಬಡಾಯಿ ಕೊಚ್ಚಿಕೊಳ್ಳಲು ಸುಳ್ಳುಸುಳ್ಳೇ ಹೇಳುವುದು; ಇತ್ಯಾದಿಗಳೆಲ್ಲಾ ಅವರವರ ಸಾಮಾಜಿಕ ಸ್ಥಾನಮಾನಗಳ ಮೇಲೆ ಅಥವಾ ಸಮೂಹಗಳಲ್ಲಿ ಮನೆಯವರು ಗುರುತಿಸಿಕೊಂಡಿರುವುದರ ಮೇಲೆ ಆಧಾರವಾಗುತ್ತದೆ.
ರಾಜಕಾರಣಿಗಳ, ಸಿನೆಮಾ ನಟರ ಮಕ್ಕಳು ವರ್ತಿಸುವುದಕ್ಕೂ, ಸಾಹಿತಿಯೊಬ್ಬರ, ಸಾಮಾಜಿಕ ಕಾರ್ಯಕರ್ತರ ಮಕ್ಕಳು ವರ್ತಿಸುವುದಕ್ಕೂ ವ್ಯತ್ಯಾಸಗಳನ್ನು ಗುರುತಿಸಬಹುದು. ಮಕ್ಕಳು ಆತ್ಮಗೌರವದಿಂದ ನಡೆದುಕೊಳ್ಳುವುದಕ್ಕೂ ಅಥವಾ ದೀನರೆಂಬಂತೆ ತೋರಿಸಿಕೊಳ್ಳುವುದಕ್ಕೂ ಕೂಡಾ ಕುಟುಂಬದವರು ಪಡೆದಿರುವ ಸಾಮಾಜಿಕ ಸ್ಥಾನಮಾನಗಳು ಕಾರಣವಾಗುತ್ತದೆ. ಆದರೆ, ಮಕ್ಕಳು ಪೋಷಕರಿಂದ ನಿರ್ದಿಷ್ಟವಾಗಿ ತಿಳುವಳಿಕೆ ಮತ್ತು ತರಬೇತಿ ಪಡೆದಿದ್ದಲ್ಲಿ ಎಂತಹ ಸ್ಥಾನಮಾನ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ಹೊಂದಿದ್ದರೂ ಕೂಡಾ ಸಮಚಿತ್ತವನ್ನು ಕಾಯ್ದುಕೊಂಡು, ಸರಳವಾದ ವರ್ತನೆಯನ್ನು ರೂಢಿಸಿಕೊಳ್ಳಲು ಸಾಧ್ಯ. ಇದು ವಿಶೇಷವಾಗಿ ಪೋಷಕರು ಹೇಳಿಕೊಟ್ಟಿದ್ದಾಗಿದ್ದರೆ ಮಾತ್ರ. ಇಲ್ಲವೇ ಕುಟುಂಬದ ಪರಿಸ್ಥಿತಿ ಮತ್ತು ಸ್ಥಾನಮಾನಗಳು ಮಕ್ಕಳನ್ನು ರೂಪಿಸಿಬಿಡುತ್ತವೆ.
4. ನಿತ್ಯ ನಡೆಯುವ ಚಟುವಟಿಕೆಗಳನ್ನು ಸಾಕ್ಷೀಕರಿಸುವುದು
ತಮ್ಮ ಕುಟುಂಬದಲ್ಲಿ ಎಂತಹ ಚಟುವಟಿಕೆಗಳು ನಡೆಯುತ್ತಿರುವವೋ ಅಂತಹ ವರ್ತನೆಗಳನ್ನು ರೂಢಿಸಿಕೊಳ್ಳುತ್ತವೆ. ಕುಟುಂಬದವರು ಯಾವುದಾದರೂ ವ್ಯಾಪಾರ ವ್ಯವಹಾರ ನಡೆಸುತ್ತಿದ್ದು, ಅದಕ್ಕೆ ಸಂಬಂಧಪಟ್ಟಂತಹ ಚಟುವಟಿಕೆಗಳು ನಡೆಯುತ್ತಿದ್ದರೆ, ಅದರಲ್ಲಿ ಸಣ್ಣಸಣ್ಣದಾಗಿ ಸಹಕರಿಸುತ್ತಾ, ಅವುಗಳನ್ನು ನೋಡುತ್ತಾ ಅವುಗಳನ್ನು ರೂಢಿ ಮಾಡಿಕೊಳ್ಳುವಂತಹ ವರ್ತನೆಗಳನ್ನು ಅವರು ರೂಢಿಸಿಕೊಳ್ಳುತ್ತಾರೆ. ಒಂದು ಬೋಂಡ, ವಡೆ ಮಾಡುವ ಮತ್ತು ಮಾರುವ ಕುಟುಂಬದವರಾದರೆ, ಅದಕ್ಕೆ ಸಿದ್ಧಪಡಿಸಿಕೊಳ್ಳುವುದು, ಅದನ್ನು ಮಾರುವುದು, ಅದಕ್ಕೆ ಬೇಕಾದ ವ್ಯವಸ್ಥೆಗಳನ್ನು ಮಾಡುವುದು; ಅದೇ ರೀತಿ ಬಟ್ಟೆಯ ವ್ಯಾಪಾರ, ಕರಕುಶಲ ಚಟುವಟಿಕೆಗಳು, ಧಾರ್ಮಿಕ ಚಟುವಟಿಕೆಗಳು, ರಂಗಭೂಮಿ, ಸಂಗೀತ ಇತರ ತರಗತಿಗಳು; ಹೀಗೆ, ಯಾವುದೇ ರೀತಿಯ ಚಟುವಟಿಕೆಗಳು ಕುಟುಂಬದಲ್ಲಿ ನಡೆಯುತ್ತಿದ್ದರೆ, ಆ ವೃತ್ತಿ, ಅಥವಾ ಚಟುವಟಿಕೆಗಳನ್ನು ಆಧರಿಸಿರುವಂತಹ ಸೂಕ್ಷ್ಮ ಪ್ರಭಾವಗಳು ಮಗುವಿನ ಮೇಲಾಗಿರುತ್ತದೆ.
5. ಧಾರ್ಮಿಕ ನಂಬುಗೆ ಮತ್ತು ರೀತಿ ನೀತಿಗಳು
ಮಗುವಿನ ಕುಟುಂಬದವರು ಅನುಸರಿಸುವ ಯಾವುದೇ ಧಾರ್ಮಿಕ ನಂಬುಗೆ, ಆಚಾರ ವಿಚಾರಗಳು ಪ್ರಾರಂಭದಿಂದಲೇ ಮನೋಭಾವವನ್ನು ರೂಪಿಸುವುದರೊಂದಿಗೆ, ಜಗತ್ತು ಮತ್ತು ಜನ; ಈ ಎರಡರ ಬಗ್ಗೆ ಧೋರಣೆಗಳನ್ನೂ ಕೂಡ ಶ್ರದ್ಧೆಯಿಂದ ಬೆಳೆಸಿಕೊಳ್ಳತೊಡಗುವರು. ಇದು ಬಹಳಷ್ಟು ಹಂತಕ್ಕೆ ನೈತಿಕತೆಯನ್ನೂ ಕೂಡಾ ರೂಪಿಸುವುದು. ಇದು ಒಂದು ರೀತಿಯಲ್ಲಿ ಪರಿಣಾಮಕಾರಿಯಾದ, ಕೆಲವೊಮ್ಮೆ ಅಪಾಯಕಾರಿಯಾದ ಪ್ರಭಾವಗಳನ್ನೂ ಕೂಡ ಬೀರುವವು. ಏಕೆಂದರೆ, ತಮ್ಮ ಕುಟುಂಬ ಮತ್ತು ತಮ್ಮ ಕುಟುಂಬಕ್ಕೆ ಹೊಂದುವ ಇನ್ನಿತರ ಕುಟುಂಬಗಳು ಯಾವುದನ್ನು ನಂಬುತ್ತದೆಯೋ, ಯಾವುದನ್ನು ಪ್ರತಿಪಾದಿಸುತ್ತದೆಯೋ ಅದಕ್ಕೆ ವ್ಯತಿರಿಕ್ತವಾಗಿ ನಂಬುವ ಮತ್ತುಪ್ರತಿಪಾದಿಸುವಂತಹ ಗುಂಪುಗಳನ್ನೂ, ಕುಟುಂಬಗಳನ್ನೂ ಮಗುವು ಶಾಲೆಗೆ ಹೋದಾಗಿನಿಂದಲೇ ಪ್ರಾರಂಭಿಸುತ್ತದೆ.
ಇದರಿಂದ ಅದಕ್ಕೆ ಗೊಂದಲಗಳಾದರೂ, ಕುಟುಂಬದ ಒಂದು ನೈತಿಕ ಒತ್ತಾಯದ ಕಾರಣದಿಂದ ತನ್ನ ನಂಬುಗೆಯನ್ನು ಮತ್ತು ಶ್ರದ್ಧೆಯನ್ನು ಅದು ರೂಢಿಸಿಕೊಳ್ಳಲು ಯತ್ನಿಸುತ್ತಿರುತ್ತದೆ. ಆದರೆ, ಮುಂದೆ ಯಾವುದೇ ಸಮಯದಲ್ಲಿ, ಯಾವುದೇ ಸಂದರ್ಭದಲ್ಲಿ ಅದನ್ನು ಮೀರುವ ಅಥವಾ ಬೇರೆಯ ವಿಷಯಗಳನ್ನು ಸಾರಾಸಗಟಾಗಿ ತಿರಸ್ಕರಿಸುವ ಸಮಯ ಮತ್ತು ಸನ್ನಿವೇಶಗಳು ಒದಗುತ್ತವೆ. ಆಗ ಅವರ ವರ್ತನೆ ಎಷ್ಟು ಸಂಯಮದಿಂದ ಕೂಡಿರುತ್ತವೆ ಅಥವಾ ಎಷ್ಟು ಆಗ್ರಹದಿಂದ ಕೂಡಿರುತ್ತದೆ ಎಂಬುದು ಮಗುವಿಗೆ ಕುಟುಂಬವು ನೀಡಿರುವ ನೈತಿಕ ತರಬೇತಿಯ ಮೇಲೆಯೇ ಆಧರಿತವಾಗಿರುತ್ತದೆ.
6. ವಸ್ತು ಮತ್ತು ವ್ಯಕ್ತಿಗಳ ಕುರಿತಾಗಿ ಕುಟುಂಬದ ಸದಸ್ಯರ ಧೋರಣೆ ಮತ್ತು ಒಲವು
ಇನ್ನು ಮೇಲೆ ಹೇಳಿರುವ ಎಲ್ಲದರ ಮೊತ್ತ ಇದೆನ್ನಬಹುದು. ಮಗುವು ವಸ್ತುವನ್ನು ಉಪಯೋಗಿಸಲು ಕಲಿಯುತ್ತದೆಯೋ, ವ್ಯಕ್ತಿಗಳನ್ನು ಪ್ರೀತಿಸಲು ಕಲಿಯುತ್ತದೆಯೋ, ವಸ್ತುಗಳ ಮೇಲಿನ ಆಕರ್ಷಣೆಯಿಂದ ವ್ಯಕ್ತಿಗಳನ್ನು ಉಪಯೋಗಿಸುತ್ತದೆಯೋ ಎಲ್ಲವೂ ಕೂಡ ಕುಟುಂಬದವರ ಧೋರಣೆ ಮತ್ತು ಒಲವು ಹಾಗೂ ಅವರು ಎಷ್ಟರ ಮಟ್ಟಿಗೆ ಪ್ರಾಮಾಣಿಕವಾಗಿ ಇದ್ದಾರೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಕುಟುಂಬದವರ ಪ್ರಾಮಾಣಿಕತೆಯ ಪ್ರಮಾಣವೇ ಮಕ್ಕಳ ವರ್ತನೆಗಳ ಬಹುಮಟ್ಟಿಗಿನ ಗುಣಮಟ್ಟಕ್ಕೆ ಕಾರಣವಾಗುತ್ತದೆ. ಮಕ್ಕಳ ವರ್ತನೆಗಳ ಗುಣಮಟ್ಟವು ಪೋಷಕರ ಒಲವು, ನಿಲುವು ಮತ್ತು ಧೋರಣೆಗಳ ಪ್ರಾಮಾಣಿಕತೆಯ ಮಾನದಂಡವಾಗಿರುತ್ತದೆ.
ಕುಟುಂಬದ ರಚನೆಯು ಮಕ್ಕಳ ವರ್ತನೆಗಳನ್ನು ರೂಪಿಸುವುದಲ್ಲದೇ ಅವರು ದೊಡ್ಡವರಾದ ಮೇಲೂ ತಮ್ಮ ಪ್ರಭಾವವನ್ನು ಉಳಿಸಿರುತ್ತದೆ. ತಮ್ಮ ಕುಟುಂಬದವರು ಬಾಳಿ ಬದುಕಿದ ವಾತಾವರಣ, ಪರಿಸ್ಥಿತಿ ಮತ್ತು ವ್ಯವಸ್ಥೆಗಳಲ್ಲಿ ಬದುಕಿರದೇ ಇದ್ದರೂ ಅದರ ಸುಪ್ತಸ್ಮರಣೆಗಳಿಗೆ ಮಕ್ಕಳು ದೊಡ್ಡವರಾದ ಮೇಲೂ ಪ್ರತಿಕ್ರಿಯಿಸುತ್ತಿರುತ್ತಾರೆ, ಸ್ಪಂದಿಸುತ್ತಿರುತ್ತಾರೆ, ಪ್ರತಿರೋಧಿಸುತ್ತಿರುತ್ತಾರೆ. ಅವುಗಳೋ ಗುಪ್ತಬೇರುಗಳಾಗಿ ಕೆಲಸ ಮಾಡುತ್ತಲೇ ಇರುತ್ತವೆ.
ಮಗುವಿನ ಕುಟುಂಬದವರು ಅನುಸರಿಸುವ ಯಾವುದೇ ಧಾರ್ಮಿಕ ನಂಬುಗೆ, ಆಚಾರ ವಿಚಾರಗಳು ಪ್ರಾರಂಭದಿಂದಲೇ ಮನೋಭಾವವನ್ನು ರೂಪಿಸುವುದರೊಂದಿಗೆ, ಜಗತ್ತು ಮತ್ತು ಜನ; ಈ ಎರಡರ ಬಗ್ಗೆ ಧೋರಣೆಗಳನ್ನೂ ಕೂಡ ಶ್ರದ್ಧೆಯಿಂದ ಬೆಳೆಸಿಕೊಳ್ಳತೊಡಗುವರು. ಇದು ಬಹಳಷ್ಟು ಹಂತಕ್ಕೆ ನೈತಿಕತೆಯನ್ನೂ ಕೂಡಾ ರೂಪಿಸುವುದು. ಇದು ಒಂದು ರೀತಿಯಲ್ಲಿ ಪರಿಣಾಮಕಾರಿಯಾದ, ಕೆಲವೊಮ್ಮೆ ಅಪಾಯಕಾರಿಯಾದ ಪ್ರಭಾವಗಳನ್ನೂ ಕೂಡ ಬೀರುವವು.