ಕೇಂಬ್ರಿಡ್ಜ್ ಅನಲಿಟಿಕಾ ಪ್ರಕರಣ: ಕೆಲವು ನೈತಿಕ ಪ್ರಶ್ನೆಗಳು
ಹೇಗಾದರೂ ಸರಿಯೇ ಗ್ರಾಹಕರನ್ನು ಸಂತೃಪ್ತ ಗೊಳಿಸುವುದಷ್ಟೇ ಮುಖ್ಯ. ಇದಕ್ಕಾಗಿ ಅವರಿಗೆ ವೇಶ್ಯೆಯರನ್ನು ಪೂರೈಸುವುದಿರಬಹುದು ಇಲ್ಲವೇ ಮತ್ತೊಂದನ್ನು ಪೂರೈಸುವುದಿರಬಹುದು. ಒಟ್ಟಿನಲ್ಲಿ ಸೋಲುವ ಪ್ರಶ್ನೆಯೇ ಇಲ್ಲ. ಕೆಲಸಕ್ಕೆ ಸೇರುವಾಗಲೇ ಯಾವುದೇ ಕೆಲಸವನ್ನು ಮಾಡಲು ನಿರಾಕರಿಸುವುದಿಲ್ಲವೆಂದು ಮತ್ತು ಕಂಪೆನಿಯಲ್ಲಿ ನಡೆಯುವುದನ್ನು ಹೊರಗೆಲ್ಲೂ ಹೇಳುವುದಿಲ್ಲವೆಂದು ಒಡಂಬಡಿಕೆ ಏರ್ಪಡುತಿತ್ತು. ಇವು ಕೇಂಬ್ರಿಡ್ಜ್ ಅನಲಿಟಿಕಾ ಕಂಪೆನಿಯಲ್ಲಿ ನಿರ್ದೇಶಕನಾಗಿದ್ದ ಕ್ರಿಸ್ಟೋಫರ್ ವೈಲಿ ಸಂದರ್ಶನವೊಂದರಲ್ಲಿ ಹೇಳಿರುವ ಮಾತುಗಳು. ತನ್ನನ್ನು ತಾನಗೇ (ಸಲಿಂಗಿ)ಎಂದು ಘೋಷಿಸಿಕೊಂಡಿದ್ದರು, ಕಂಪೆನಿಯು ಆತನಿಗೆ ಸ್ಟ್ರಿಪ್ ಕ್ಲಬ್ (ಬೆತ್ತಲೆ ನೃತ್ಯಗಾರರು ನರ್ತಿಸುವ ಕ್ಲಬ್) ಒಂದರ ಸದಸ್ಯತ್ವವನ್ನು ನೀಡಿತ್ತು. ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಇದರ ಸೇವೆಯನ್ನು ಬಳಸಿಕೊಳ್ಳಲು ಅಧಿಕೃತವಾಗಿ ಅನುಮತಿ ನೀಡುವ ವಿಧಾನವಾಗಿತ್ತು ಎನ್ನುತ್ತಾನೆ ವೈಲಿ.
ಅನಧಿಕೃತವಾಗಿ ಫೇಸ್ಬುಕ್ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ದುರುಪಯೋಗಪಡಿಸಿಕೊಂಡ ಆರೋಪವನ್ನು ಎದುರಿಸುತ್ತಿರುವ ರಾಜಕೀಯ ಸಮಾಲೋಚನಾ ಸೇವೆಗಳನ್ನು ಒದಗಿಸುತ್ತಿದ್ದ ಕೇಂಬ್ರಿಡ್ಜ್ ಅನಲಿಟಿಕಾ ಕಂಪೆನಿಯ ಮಾತೃ ಕಂಪೆನಿ ಎಸ್.ಸಿ.ಎಲ್ ಹೆಸರಿನ ಮತ್ತೊಂದು ಕಂಪೆನಿ. ಇದೊಂದು ಮಿಲಿಟರಿ ಸೇವೆಗಳನ್ನು ಒದಗಿಸುವ ಕಂಪೆನಿಯಾಗಿದ್ದು, 2014ರ ಸುಮಾರಿನಲ್ಲಿ ಕೇಂಬ್ರಿಡ್ಜ್ ಅನಲಿಟಿಕಾವನ್ನು ಸ್ಥಾಪಿಸಲಾಯಿತು. ಕುತೂಹಲಕರ ವಿಷಯವೆಂದರೆ ಇದಕ್ಕೆ ಬಂಡವಾಳವನ್ನು ಹೂಡಿದವರು ಅಮೆರಿಕದ ಈಗಿನ ಅಧ್ಯಕ್ಷರಾಗಿರುವ ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗರು. ಇನ್ನು ವಿಶೇಷವೆಂದರೆ, ಎಸ್.ಸಿ.ಎಲ್ ಇಂಗ್ಲೆಂಡ್ ಸರಕಾರದೊಂದಿಗೆ ಸಾಮಾಜಿಕ ಜಾಲತಾಣಗಳನ್ನು ಮಿಲಿಟರಿ ಉದ್ದೇಶಕ್ಕಾಗಿ ಬಳಸಿಕೊಳ್ಳುವ ಸಂಶೋಧನೆಯ ಪ್ರಮುಖ ಜೊತೆಗಾರನಾಗಿತ್ತು!
ಹಣ, ತಂತ್ರಜ್ಞಾನ ಮತ್ತು ರಾಜಕೀಯ ಮಹತ್ವಾಕಾಂಕ್ಷೆಗಳು ಒಂದೆಡೆ ಸೇರಿದಾಗ ಏನಾಗಬಹುದು ಎನ್ನುವುದಕ್ಕೆ ಕೇಂಬ್ರಿಡ್ಜ್ ಅನಲಿಟಿಕಾ ವ್ಯವಹಾರವೇ ಸಾಕ್ಷಿ. ಇದರಜೊತೆಗೆ ಹೇಗಾದರೂ ಸರಿಯೇ ಗೆಲ್ಲಬೇಕೆಂಬ ವೃತ್ತಿಪರ ಒತ್ತಾಸೆ ಸೇರಿಬಿಟ್ಟರೆ, ನೈತಿಕ ಮತ್ತು ಅನೈತಿಕಗಳ ನಡುವಿನ ಗೆರೆ ಅಳಿಸಿಹೋಗುತ್ತದೆ. ವೃತ್ತಿಪರ ಅಭಿಲಾಷೆಗಳೊಂದಿಗೆ, ಬಂಡವಾಳಶಾಹಿ ಪ್ರವೃತ್ತಿಗಳು ಮತ್ತು ರಾಜಕೀಯ ಸಿದ್ಧಾಂತಗಳು ಸೇರಿಕೊಂಡರೆ ಜಟಿಲತೆ ಇನ್ನೂ ಹೆಚ್ಚಾಗುತ್ತದೆ. ಇಂತಹ ಹುನ್ನಾರಗಳನ್ನು ಮನುಷ್ಯ ಸಮಾಜದ ಇತಿಹಾಸದಲ್ಲಿ ಅನೇಕ ಬಾರಿ ಕಾಣುತ್ತೇವೆ. ಶತ್ರುವನ್ನು ಸದೆಬಡಿಯುವ ತಂತ್ರಗಳ ಕುರಿತು ಗ್ರೀಕ್ ನಾಗರಿಕತೆಯಿಂದ ಆರಂಭಿಸಿ ಭಾರತೀಯ ನಾಗರಿಕತೆಯವರೆಗೂ ಅನೇಕ ಗ್ರಂಥಗಳನ್ನು ಕಾಣಬಹುದು. ಆದರೆ ಸಮಸ್ಯೆಯಿರುವುದು ಸಾಮಾಜಿಕ ಜಾಲತಾಣಗಳು (ಸೋಷಿಯಲ್ ಮೀಡಿಯಾ) ದಿನನಿತ್ಯದ ಬದುಕನ್ನು ಪೂರ್ಣವಾಗಿ ಆವರಿಸಿರುವ ಈ ಹೊತ್ತಿನಲ್ಲಿ, ಇಂತಹ ತಂತ್ರಗಳ ಹಿಂದಿನ ಕುತಂತ್ರಗಳನ್ನು ಮನುಷ್ಯರು ಅರಿಯಲಾಗದೆ ಮಾಡಿಕೊಳ್ಳುವ ಎಡವಟ್ಟುಗಳ ಭೀಕರತೆಯಲ್ಲಿ. ಕೇಂಬ್ರಿಡ್ಜ್ ಅನಲಿಟಿಕಾದ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ಟ್ರಂಪ್ ಅವರು ತಮ್ಮ ಅಧ್ಯಕ್ಷೀಯ ಚುನಾವಣೆಯಲ್ಲಿ ಅಕ್ರಮ ವಲಸಿಗರನ್ನು ದೇಶದಿಂದ ದೂರವಿಡಲು ಗಡಿಯುದ್ದಕ್ಕೂ ಗೋಡೆ ನಿರ್ಮಿಸುವ ಕುರಿತು ಮಾತನಾಡಿದರು. ಜೊತೆಗೆ ದೇಶದಲ್ಲಿ ಕಸದ ರೂಪದಲ್ಲಿರುವ ಉಗ್ರರರನ್ನು (ಧಾರ್ಮಿಕ, ಜನಾಂಗೀಯ ಇತ್ಯಾದಿ ಹಿನ್ನೆಲೆಯ) ಗುಡಿಸಿ ಹೊರಹಾಕುವ ಕುರಿತು ಘೋಷಣೆಗಳ ಮೇಲೆ ಘೋಷಣೆಗಳನ್ನು ಮಾಡಿದರು. 2016ರ ಚುನಾವಣೆಯಲ್ಲಿ ಬಳಕೆಯಾದ ಈ ಮಾತುಗಳ ಪರಿಣಾಮದ ಕುರಿತು 2014 ಮತ್ತು 2015ರಲ್ಲೇ ಪ್ರಯೋಗ ಮಾಡಲಾಗಿತ್ತು. ಕೇಂಬ್ರಿಡ್ಜ್ ಅನಲಿಟಿಕಾ ಕಂಪೆನಿ ಇಂತಹ ಘೋಷಣೆಗಳು ಅಮೆರಿಕದ ಪ್ರಜೆಗಳ ಬೀರಬಹುದಾದ ಪರಿಣಾಮದ ಕುರಿತು ಗೌಪ್ಯವಾಗಿ ಪ್ರಯೋಗ ಮಾಡಿ ನೋಡಿತ್ತು. ಗೋಡೆಯ ಚಿತ್ರಗಳು ಮತ್ತು ಅದರ ಮೇಲೆ ಜನ ಏರಲಾಗದೆ ಕೆಳಗೆ ಬೀಳುವ ಚಿತ್ರಗಳನ್ನು ಫೇಸ್ಬುಕ್ ಖಾತೆಯಲ್ಲಿ ಪ್ರದರ್ಶಿಸಿದ್ದರು. ಅದಕ್ಕೆ ಸಿಗುವ ಪ್ರತಿಕ್ರಿಯೆಗಳನ್ನು ದಾಖಲಿಸಿಕೊಂಡಿದ್ದರು. ಅಂದರೆ, ಟ್ರಂಪ್ ಇಂತಹ ಅರ್ಥದ ಮಾತುಗಳನ್ನು ಸಾರ್ವಜನಿಕವಾಗಿ ಹೇಳುವ ಮುನ್ನವೇ ಜನ ನಡುವೆ ಅದೇ ಸ್ವರೂಪದ ಚಿತ್ರಗಳನ್ನು ಜನರ ಮಾನಸದಲ್ಲಿ ಪರೋಕ್ಷವಾಗಿ ಬಿತ್ತಲಾಗಿತ್ತು.
ಟ್ರಂಪ್ತನ್ನ ಭಯವನ್ನು ಮತ್ತು ಅದಕ್ಕೆ ಸೂಕ್ತ ಪರಿಹಾರವನ್ನು ಸೂಚಿಸುವ ಮೊದಲೇ ಅದಕ್ಕೆ ಪೂರಕವಾದ ಮಾನಸಿಕ ಸ್ಥಿತಿಯನ್ನು ನಿರ್ಮಾಣ ಮಾಡಲಾಗಿತ್ತು! ಅದೂ ವರ್ಷಗಳ ಮೊದಲೇ ಮಾಡಿದ್ದರಿಂದ, ಅವು ದಿಟದ ಸಂದರ್ಭಗಳೆಂದೇ ಜನರ ಪ್ರಜ್ಞೆಯಲ್ಲಿ ಸೇರಿ ಹೋಗಿತ್ತು. ಇಂತಹ ಪ್ರಯತ್ನಗಳನ್ನು ಇದುವರೆಗೂ ಕಂಪೆನಿಗಳು ತಮ್ಮ ಉತ್ಪನ್ನಗಳ ಮಾರಾಟಕ್ಕಾಗಿ ಮಾಡುತ್ತಿದ್ದವು ಮತ್ತು ಇಂತಹ ವಿಷಯಗಳಲ್ಲಿ ಅಮೆರಿಕ ಎಂದಿಗೂ ಮುಂದಿರುತ್ತದೆ. 1920ರ ದಶಕದಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನವನ್ನು ಕಾಡಿದ ತೀವ್ರ ಆರ್ಥಿಕ ಹಿಂಜರಿತದಿಂದ ಹೊರಬರಲು ಮಾರುಕಟ್ಟೆ ಪರಿಣಿತರು ಒಂದು ವಿಶಿಷ್ಟ ಪ್ರಯೋಗವನ್ನು ಮಾಡಿದ್ದರು. ಅವರು ಜನರಲ್ಲಿ ಅನೈರ್ಮಲ್ಯದ ಕುರಿತು ಭಯ ಮೂಡಿಸುವ ಕಾರ್ಯದಲ್ಲಿ ತೊಡಗಿದರು. ವೈದ್ಯಕೀಯ ಜ್ಞಾನದ ಹೆಸರಿನಲ್ಲಿ ಕೈತೊಳೆಯದೇ ಆಹಾರ ಸೇವಿಸಿದರೆ ಬರಬಹುದಾದ ಸೋಂಕುಗಳ ಕುರಿತು ಪತ್ರಿಕೆಗಳಲ್ಲಿ ನಿಯತ ಕಾಲಿಕಗಳಲ್ಲಿ ವರದಿಗಳು ಪ್ರಕಟವಾದವು. ಇವುಗಳ ಬೆನ್ನ ಹಿಂದೆಯೇ ಕೈಗಳ ನೈರ್ಮಲ್ಯ ಕಾಪಾಡಿಕೊಳ್ಳಲು ಅಗತ್ಯವಿರುವ ಸಾಬೂನುಗಳ ಜಾಹೀರಾತುಗಳು ಸೃಷ್ಟಿಯಾಗಿ ಪ್ರಕಟವಾದವು. ಒಂದೆಡೆ ಜ್ಞಾನದ ಹೆಸರಿನಲ್ಲಿ ಅಗತ್ಯವನ್ನು ಸೃಷ್ಟಿಸಿದರೆ, ಮತ್ತೊಂದೆಡೆ ಅಗತ್ಯಕ್ಕೆ ತಕ್ಕಂತೆ ಉತ್ಪನ್ನವೊಂದನ್ನು ಪರಿಚಯಿಸಲಾಯಿತು. ಜೊತೆಗೆ ಬಹಳ ನಾಜೂಕಿನಿಂದ ಸ್ವಚ್ಛತೆಗೂ ಸುವಾಸನೆಗೂ ಸಂಬಂಧ ಕಲ್ಪಿಸಲಾಯಿತು. ಸಿನೆಮಾ ತಾರೆಯರು ಸಾಬೂನಿನ ಕೊಳೆ ನಿವಾರಿಸುವ ಶಕ್ತಿಯೊಂದಿಗೆ ಸುವಾಸನೆಯನ್ನು ಪಸರಿಸುವ ಸಾಮರ್ಥ್ಯವನ್ನು ತಿಳಿ ಹೇಳಿದರು. ಅಲ್ಲಿಗೆ ಕೇವಲ ಮಾರ್ಜಕಗಳಷ್ಟೇ ಸಾಕಾಗದೆ, ಸುವಾಸನೆಯುಕ್ತ ಮಾರ್ಜಕದ ಮಾರುಕಟ್ಟೆ ಸೃಷ್ಟಿಯಾಯಿತು! ಈ ಪ್ರಕರಣದಲ್ಲಿ ಇಂತಹುದೇ ತಂತ್ರ ರಾಜಕೀಯ ನಿರ್ಧಾರಗಳಿಗೆ ಬಳಕೆಯಾಗಿದೆ. ಒಂದು ದೇಶದ ಭವಿಷ್ಯ ಬದಲಿಸುವ ಜೊತೆಗೆ ನಾಗರಿಕ ಸಮಾಜದ ದಿಕ್ಕನ್ನೇ ಬದಲಿಸುವ ಪ್ರಯತ್ನ ಇದಾಗಿದೆ. ಅದೂ ಕೇವಲ ಲಾಭದ ಆಸೆಗೆ ದುಡಿಯುವ ಒಂದು ಕಂಪೆನಿಯು ಇಂತಹ ಕೆಲಸವನ್ನು ನಿರ್ವಹಿಸಿದೆ ಎನ್ನುವುದು ಮನುಷ್ಯ ಸಮಾಜ ಮುಂದಿರುವ ಸವಾಲಿನ ತೀವ್ರತೆಯನ್ನು ತೋರುತ್ತದೆ. ಏಕೆಂದರೆ ರಾಜಕಾರಣ ಮಾರಾಟದ ಸರಕಲ್ಲ. ಅದೊಂದು ಸಮಾಜ ನಿರ್ಮಾಣದ ಪ್ರಕ್ರಿಯೆ.