ಶಿವಮೊಗ್ಗ: ರಾತ್ರಿಯಿಡಿ ಗೌಪ್ಯ ಸಭೆ ನಡೆಸಿದ ಬಿಜೆಪಿ ರಾಷ್ಟ್ರಾಧ್ಯಕ್ಷ
ನಿದ್ರೆಯಿಲ್ಲದೆ ರಾತ್ರಿ ಕಳೆದ ಅಮಿತ್ ಶಾ
ನಾಯಕರ ಜೊತೆ ಚುನಾವಣಾ ತಂತ್ರಗಾರಿಕೆಯ ಚರ್ಚೆ
ಶಿವಮೊಗ್ಗ, ಮಾ. 27: 'ಕರುನಾಡ ಜಾಗೃತಿ ಯಾತ್ರೆ'ಯ ಅಂಗವಾಗಿ ಸೋಮವಾರ ಶಿವಮೊಗ್ಗ ನಗರಕ್ಕೆ ಆಗಮಿಸಿದ್ದ ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಮಂಗಳವಾರ ಮುಂಜಾನೆಯವರೆಗೂ ಪಕ್ಷದ ಮುಖಂಡರ ಜೊತೆ ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ. ನಿದ್ರೆಯಿಲ್ಲದ ರಾತ್ರಿ ಕಳೆದಿದ್ದಾರೆ.
ಸೋಮವಾರ ಸಂಜೆ ಆಯೋಜಿಸಿದ್ದ ರೋಡ್ ಶೋ, ಗೋಪಿ ವೃತ್ತದಲ್ಲಿ ನಡೆದ ಬಹಿರಂಗ ಸಭೆಯ ನಂತರ ಬೆಕ್ಕಿನಕಲ್ಮಠದಲ್ಲಿ ನಡೆದ ಮಠಾಧೀಶರ ಸಭೆಗೆ ಅಮಿತ್ ಶಾ ಭಾಗವಹಿಸಿದ್ದರು. ಮಠಾಧೀಶರೊಂದಿಗೆ ಸಭೆ ನಡೆಸುವ ಉದ್ದೇಶದಿಂದಲೇ, ಅಮಿತ್ ಶಾ ಕುವೆಂಪು ರಂಗಮಂದಿರದಲ್ಲಿ ಸಾರ್ವಜನಿಕರೊಂದಿಗೆ ನಿಗದಿಯಾಗಿದ್ದ ಸಂವಾದ ಕಾರ್ಯಕ್ರಮಕ್ಕೂ ಗೈರು ಹಾಜರಾಗಿದ್ದರು.
ಕರೆಯಿಸಿಕೊಂಡರು: ಸಂವಾದ ಸಭೆಯಲ್ಲಿ ಭಾಗವಹಿಸುವುದಕ್ಕಾಗಿ ಹಾಗೂ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದ ವಿಷಯಗಳ ಚರ್ಚೆಗಾಗಿ ಸೋಮವಾರ ಬೆಂಗಳೂರಿನಿಂದ ನವದೆಹಲಿಗೆ ತೆರಳಲು ಅಣಿಯಾಗಿದ್ದ ಕೇಂದ್ರ ಸಚಿವರಾದ ಪಿಯೂಷ್ ಗೋಯೆಲ್ ಹಾಗೂ ಪ್ರಕಾಶ್ ಜಾವಡೇಕರ್ ರವರನ್ನು ತುರ್ತಾಗಿ ಶಿವಮೊಗ್ಗಕ್ಕೆ ಕರೆಯಿಸಿಕೊಂಡಿದ್ದರು. ಅಮಿತ್ ಶಾ ಸೂಚನೆಯಂತೆ ಈ ಇಬ್ಬರು ಸಚಿವರು ಹೆಲಿಕಾಪ್ಟರ್ ನಲ್ಲಿ ಶಿವಮೊಗ್ಗಕ್ಕೆ ಸಂಜೆ ಆಗಮಿಸಿದ್ದರು. ಈ ಇಬ್ಬರು ಸಚಿವರ ಜೊತೆಗೆ ತಮ್ಮೊಂದಿಗಿದ್ದ ಸಚಿವ ಅನಂತಕುಮಾರ್ ರನ್ನು ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ಸಂವಾದ ಸಭೆಗೆ ಅಮಿತ್ ಶಾ ಕಳುಹಿಸಿಕೊಟ್ಟಿದ್ದರು.
ಗೌಪ್ಯ ಸಭೆ: ಗೋಪಿ ವೃತ್ತದಲ್ಲಿ ಸಾರ್ವಜನಿಕ ಸಭೆ ಪೂರ್ಣಗೊಂಡ ಬಳಿಕ ಬೆಕ್ಕಿನಕಲ್ಮಠದಲ್ಲಿ ರಾತ್ರಿ ಸುಮಾರು 11.15 ರವರೆಗೆ ಮಠಾಧೀಶರೊಂದಿಗೆ ಗೌಪ್ಯ ಸಮಾಲೋಚನೆಯನ್ನು ಅಮಿತ್ ಶಾ ನಡೆಸಿದರು. ಇದಾದ ನಂತರ ಗುಂಡಪ್ಪಶೆಡ್ ಬಡಾವಣೆಯಲ್ಲಿರುವ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ನಿವಾಸಕ್ಕೆ ತೆರಳಿದರು. ಅಲ್ಲಿ ಆಯೋಜಿಸಿದ್ದ ಔತಣಕೂಟದಲ್ಲಿ ಭಾಗವಹಿಸಿದರು. ಇವರು ಆಗಮಿಸುವುದಕ್ಕೂ ಮುನ್ನವೇ ಕೇಂದ್ರ ಸಚಿವರಾದ ಪಿಯೂಶ್ ಗೋಯೆಲ್, ಪ್ರಕಾಶ್ ಜಾವಡೇಕರ್, ಅನಂತಕುಮಾರ್, ರಾಜ್ಯ ಬಿಜೆಪಿ ಉಸ್ತುವಾರಿ ಮುರುಳೀಧರರಾವ್‍ರವರು ಈಶ್ವರಪ್ಪ ಮನೆಗೆ ಭೇಟಿಯಿತ್ತು ಮಾತುಕತೆ ನಡೆಸಿ ಪ್ರವಾಸಿ ಮಂದಿರಕ್ಕೆ ಹಿಂದಿರುಗಿದ್ದರು.
ಸಭೆ: ಅಮಿತ್ ಶಾರವರು ಈಶ್ವರಪ್ಪ ಮನೆಯಲ್ಲಿ ಬಿ.ಎಸ್.ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪರ ಜೊತೆ ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ಸಮಾಲೋಚನೆ ನಡೆಸಿದ್ದಾರೆ. ಸಮಾಲೋಚನೆ ವೇಳೆ ಈ ಮೂವರ ಹೊರತಾಗಿ ಬೇರೆ ಯಾರು ಉಪಸ್ಥಿತರಿರಲಿಲ್ಲ ಎಂದು ಹೇಳಲಾಗಿದೆ. ತಡರಾತ್ರಿ ಸುಮಾರು 12.45 ರ ನಂತರ ಅಮಿತ್ ಶಾ ಪ್ರವಾಸಿ ಮಂದಿರಕ್ಕೆ ಆಗಮಿಸಿದ್ದಾರೆ. ಅಲ್ಲಿದ್ದ ಕೇಂದ್ರ ಸಚಿವರು, ರಾಜ್ಯ ಉಸ್ತುವಾರಿ ಮುರುಳೀಧರರಾವ್, ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪ, ಪಕ್ಷದ ರಾಷ್ಟ್ರೀಯ ಮುಖಂಡ ಸಂತೋಷ್‍ಜೀ ಜೊತೆಗೆ ಮುಂಜಾನೆ ಸುಮಾರು 4.30 ರವರೆಗೆ ಸುದೀರ್ಘ ಗೌಪ್ಯ ಸಭೆ ನಡೆಸಿದ್ದಾರೆ. ನಂತರ ಒಂದೆರೆಡು ಗಂಟೆ ಪ್ರವಾಸಿ ಮಂದಿರದಲ್ಲಿಯೇ ನಿದ್ರೆ ಮಾಡಿದ ಅಮಿತ್ ಶಾ ಹಾಗೂ ಕೇಂದ್ರ ಸಚಿವರು, ಮಂಗಳವಾರ ಬೆಳಿಗ್ಗೆ 8.30 ರ ಸುಮಾರಿಗೆ ಹೆಲಿಕಾಪ್ಟರ್ ಗಳಲ್ಲಿ ನಗರದಿಂದ ಹಿಂದಿರುಗಿದ್ದಾರೆ.
ಯಡಿಯೂರಪ್ಪ-ಈಶ್ವರಪ್ಪ ನಡುವೆ ಸಂಧಾನ!
ಈಶ್ವರಪ್ಪ ನಿವಾಸದಲ್ಲಿ ನಡೆದ ಸಭೆಯ ವೇಳೆ ಅಮಿತ್ ಶಾರವರು ಬಿ.ಎಸ್.ಯಡಿಯೂರಪ್ಪ ಹಾಗೂ ಕೆ.ಎಸ್.ಈಶ್ವರಪ್ಪ ನಡುವೆ ಮನೆ ಮಾಡಿರುವ ವೈಮನಸ್ಸು ಶಮನಕ್ಕೆ ಕಸರತ್ತು ನಡೆಸಿದ್ದಾರೆ. 'ಭಿನ್ನಾಭಿಪ್ರಾಯ ಬಿಡಿ. ಪಕ್ಷ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕಾರ್ಯನಿರ್ವಹಣೆ ಮಾಡಿ. ನೀವಿಬ್ಬರು ಪಕ್ಷದ ಹಿರಿಯ ಮುಖಂಡರಾಗಿದ್ದು, ನಿಮ್ಮ ಮೇಲಿರುವ ಜವಾಬ್ದಾರಿ ಅರಿತು ಕೆಲಸ ಮಾಡುವಂತೆ' ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಈ ವೇಳೆ ಬಿ.ಎಸ್.ವೈ. ಹಾಗೂ ಈಶ್ವರಪ್ಪರವರು ರವರು ತಮ್ಮ ನಡುವೆಯಿರುವ ವಿಚಾರ ಬೇಧಗಳ ಬಗ್ಗೆ ಅಮಿತ್ ಶಾ ಗಮನಕ್ಕೆ ತಂದಿದ್ದಾರೆ. ಮುಂದಿನ ದಿನಗಳಲ್ಲಿ ಒಟ್ಟಾಗಿ ಕೆಲಸ ಮಾಡುವ ಭರವಸೆ ನೀಡಿದ್ದಾರೆ. ಇದಕ್ಕೆ ಅಮಿತ್ ಶಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಬಿಜೆಪಿ ಮೂಲಗಳು ಹೇಳುತ್ತಿವೆ.
7 ಕ್ಷೇತ್ರಗಳಲ್ಲಿ ಜಯ ಸಾಧಿಸಲು 'ಟಾರ್ಗೆಟ್ ಫಿಕ್ಸ್'
'ನಿಮ್ಮ ತವರೂರು ಶಿವಮೊಗ್ಗ ಜಿಲ್ಲೆಯ ಎಲ್ಲ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಜಯ ಸಾಧಿಸಬೇಕು. ಇದು ನಿಮಗೆ ನೀಡುತ್ತಿರುವ ಗುರಿಯಾಗಿದೆ' ಎಂದು ಅಮಿತ್ ಶಾರವರು ಬಿ.ಎಸ್.ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪ ಹಾಗೂ ಸಂತೋಷ್ ಜೀಯವರಿಗೆ ಟಾರ್ಗೆಟ್ ನೀಡಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಇದೇ ವೇಳೆ ಸಾಕಷ್ಟು ಚರ್ಚೆಗೀಡಾಗಿರುವ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆಯ ಬಗ್ಗೆ ಅಮಿತ್ ಶಾ ಯಾವುದೇ ಮಾತನಾಡಿಲ್ಲವೆಂದು ಹೇಳಲಾಗುತ್ತಿದೆ.
ಅಭ್ಯರ್ಥಿ ಘೋಷಿಸುವಂತಿಲ್ಲ
ಯಾವುದೇ ಕಾರಣಕ್ಕೂ ಯಾವ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳನ್ನು ರಾಜ್ಯ ನಾಯಕರು ಪ್ರಕಟಿಸಬಾರದು. ಪಕ್ಷದ ಕೇಂದ್ರ ಸಮಿತಿಯೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಲಿದೆ. ಈ ವಿಷಯದಲ್ಲಿ ಯಾವುದೆ ಗೊಂದಲಕ್ಕೆ ಆಸ್ಪದವಾಗದಂತೆ ರಾಜ್ಯ ನಾಯಕರು ಎಚ್ಚರಿಕೆ ವಹಿಸಬೇಕು. ಈಗಾಗಲೇ ಸರ್ವೇ ಕಾರ್ಯ ಪೂರ್ಣಗೊಂಡಿದ್ದು, ಅಭ್ಯರ್ಥಿಗಳ ಅಂತಿಮ ಪಟ್ಟಿ ಸಿದ್ದಪಡಿಸಲಾಗುತ್ತಿದೆ. ಆದಷ್ಟು ಶೀಘ್ರವಾಗಿ ಪಟ್ಟಿ ಪ್ರಕಟಿಸಲಾಗುವುದು ಎಂದು ಗುಪ್ತ ಸಭೆಯ ವೇಳೆ ಅಮಿತ್ ಶಾ ರಾಜ್ಯ ನಾಯಕರಿಗೆ ತಿಳಿಸಿದ್ದಾರೆ ಎಂದು ಹೇಳಲಾಗಿದೆ.