ಅಭ್ಯರ್ಥಿಗಳ ಕನಿಷ್ಠ ಅರ್ಹತೆ: ಅಂಬೇಡ್ಕರ್ ಆಶಯ
ಇದೀಗ ರಾಜ್ಯದಲ್ಲಿ ಚುನಾವಣಾ ಕಾವು ಬೇಸಿಗೆಯ ಕಾವಿನ ಜೊತೆ ನಿಧಾನಕ್ಕೆ ಏರತೊಡಗಿದೆ. ವಿವಿಧ ಪಕ್ಷಗಳ, ಪಕ್ಷೇತರ ಹೀಗೆ ಅಭ್ಯರ್ಥಿಗಳು ಆ ಕಾವಿಗೆ ತಕ್ಕಂತೆ ಪ್ರಮುಖ ಅರ್ಹತೆಯೋ ಎಂಬಂತೆ ಗರಿಗರಿ ಬಿಳಿ ಅಂಗಿ ಹೊಲಿಸಿಕೊಳ್ಳುವುದರಲ್ಲಿ ನಿರತರಾಗಿದ್ದಾರೆ. ರಾಜಕೀಯ ಪಕ್ಷಗಳು ಕೂಡ ಅಭ್ಯರ್ಥಿಗಳ ಅಂತಹ ಕನಿಷ್ಠ ಜ್ಞಾನ, ತಿಳುವಳಿಕೆ ಇದರ ಬಗ್ಗೆ ಪರೀಕ್ಷಿಸಲು ಹೋಗುತ್ತಿಲ್ಲ. ಬದಲಿಗೆ ಅಭ್ಯರ್ಥಿ ಅವನು ಯಾವ ಜಾತಿ, ಆತನ ಜಾತಿಯ ಪ್ರಾಬಲ್ಯ ಎಷ್ಟು? ತನ್ನ ಜಾತಿಯ ಮತಗಳನ್ನು ಆತ ಎಷ್ಟು ಸೆಳೆಯಬಲ್ಲ? ಪಕ್ಷಕ್ಕೆ ಆತ ಎಷ್ಟು ದೇಣಿಗೆ ಕೊಡಬಲ್ಲ? ಸ್ವಂತ ದುಡ್ಡು ಖರ್ಚು ಮಾಡಲು ಶಕ್ತನೇ? ಹೀಗೆ ಅರ್ಹತೆಗಳ ಮಾನದಂಡ ಇಟ್ಟುಕೊಂಡು ಆಯ್ಕೆ ಮಾಡಲು ಸಿದ್ಧತೆ ನಡೆಸುತ್ತಿವೆ. ಅಭ್ಯರ್ಥಿ ಆತ ಏನು ಓದಿದ್ದಾನೆ? ಸದನದಲ್ಲಿ ಪರಿಪಕ್ವವಾಗಿ ಜನರ ಸಮಸ್ಯೆಗಳ ಬಗ್ಗೆ ಮಾತನಾಡಬಲ್ಲನಾ? ಪರಿಹಾರ ನೀಡಬಲ್ಲನಾ, ಸಂವಿಧಾನದ ಕನಿಷ್ಠ ಜ್ಞಾನ ಇದೆಯಾ? ಸಂಸದೀಯ ನಡಾವಳಿಗಳ ಕನಿಷ್ಠ ತಿಳುವಳಿಕೆ ಇದೆಯಾ? ಊಹ್ಞೂಂ, ಇದ್ಯಾವುದನ್ನು ಪಕ್ಷಗಳು ತಮ್ಮ ಆ ಆಯ್ಕೆಯ ಮಾನದಂಡವಾಗಿ ಖಂಡಿತ ತೆಗೆದುಕೊಳ್ಳುವುದಿಲ್ಲ. ನಿಜ, ಅವುಗಳಿಗೆ ಗೆಲ್ಲುವ, ಬಹುಮತ ಗಳಿಸುವ ಪ್ರಜಾಪ್ರಭುತ್ವ ನಿಯಮವೇ ಮುಖ್ಯ ವಾಗಬಹುದು. ಆದರೆ ಆ ನಿಯಮದ ನಂತರದ ಮುಂದಿನ ಹಂತ ಅಂದರೆ ಪ್ರಜೆಗಳ ಹಿತವೂ ಇಲ್ಲಿ ಪರಿಗಣನೆಗೆ ಬರಬೇಕಲ್ಲವೇ? ಈ ನಿಟ್ಟಿನಲ್ಲಿ ಅಭ್ಯರ್ಥಿಗಳು ಹೊಂದಿರಬೇಕಾದ ಕನಿಷ್ಠ ಜ್ಞಾನ, ತಿಳುವಳಿಕೆಯ ವಿಚಾರ ನಮಗೆ ಅಂಬೇಡ್ಕರರ ಚಿಂತನೆಗಳಲ್ಲಿ ದೊರಕುತ್ತವೆ. ಅಂತಹ ಅವರ ಚಿಂತನೆಯನ್ನು ದಾಖಲಿಸುವುದಾದರೆ 1952ರಲ್ಲಿ ಸಂಸತ್ತಿನಲ್ಲಿ ಪ್ರೊ.ಕೆ.ಟಿ.ಶಾರವರು ಸಂಸತ್ ಮತ್ತು ರಾಜ್ಯ ವಿಧಾನಸಭೆಗಳ ಸದಸ್ಯರು ಹೊಂದಿರಬೇಕಾದ ಶೈಕ್ಷಣಿಕ ಅರ್ಹತೆಗಳಿಗೆ ಸಂಬಂಧಿಸಿದಂತೆ ಒಂದು ಗೊತ್ತುವಳಿ ಮಂಡಿಸುತ್ತಾರೆ.
ಶಾರವರ ಗೊತ್ತುವಳಿ ಬೆಂಬಲಿಸಿ ಇತರ ಸದಸ್ಯರು ಎಂಪಿಗಳು ಮತ್ತು ಎಂಎಲ್‌ಎಗಳು ಹೊಂದಿರಬೇಕಾದ ಕನಿಷ್ಠ ವಿದ್ಯಾರ್ಹತೆಗಳ ಬಗ್ಗೆ ಸಹಮತ ವ್ಯಕ್ತಪಡಿಸುತ್ತಾರಾದರೂ, ಅಂತಹ ಗೊತ್ತುವಳಿ ಬಹುತೇಕರನ್ನು ಸದಸ್ಯರನ್ನಾಗಿಸುವ ನಿಟ್ಟಿನಲ್ಲಿ ತಡೆಯುತ್ತದೆ ಎಂಬ ತಮ್ಮ ಸಹಜ ಆತಂಕವನ್ನು ಅವರೆಲ್ಲ ಹೊರಹಾಕುತ್ತಾರೆ. ಅಂದಹಾಗೆ ಆಗ ಕಾನೂನು ಸಚಿವರಾಗಿದ್ದ ಅಂಬೇಡ್ಕರರು ಈ ವಿಷಯದ ಬಗ್ಗೆ ಮಧ್ಯೆ ಪ್ರವೇಶಿಸಿ ‘‘ಸದಸ್ಯರು ಪ್ರೊ. ಶಾರವರ ಗೊತ್ತುವಳಿಗೆ ಸಂಬಂಧಿಸಿದಂತೆ ಸೂಕ್ತವಾಗಿಯೇ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದಾರೆ. ಆದರೆ ಯಾರೂ ಕೂಡ ಅಭ್ಯರ್ಥಿಗಳು ಶಿಕ್ಷಣದ ಯಾವ ಮಟ್ಟ ತಲುಪಿರಬೇಕು ಎಂಬ ಬಗ್ಗೆ ನಿಖರತೆ ವ್ಯಕ್ತಪಡಿಸಿಲ್ಲ. ಆದರೆ ನನಗನಿಸಿದಂತೆ ಈ ಸದನದ ಸದ್ಯರಾಗಲು ಕೇವಲ ಶಿಕ್ಷಣವೊಂದೇ ಏಕೈಕ ಅರ್ಹತೆಯಾಗುವುದು ಖಂಡಿತ ಸಾಧ್ಯವಿಲ್ಲ. ಇದಕ್ಕೆ ಪೂರಕವಾಗಿ ನಾವು ಭಗವಾನ್ ಬುದ್ಧರು ಬಳಸಿರುವ ಪದಗಳನ್ನು ಉಲ್ಲೇಖಿಸುವುದಾದರೆ, ಬುದ್ಧ ಹೇಳಿದ್ದು, ಮನುಷ್ಯರು ಎರಡು ಅಂಶಗಳನ್ನು ಹೊಂದಿರಬೇಕು. ಒಂದನೆಯದು ಜ್ಞಾನ ಮತ್ತೊಂದು ಶೀಲ. ಶೀಲವಿಲ್ಲದ ಜ್ಞಾನ ಅಪಾಯಕಾರಿ. ಆದ್ದರಿಂದ ಜ್ಞಾನ ಅದು ಶೀಲದ ಜೊತೆ ಜೊತೆಗೆ ಸಾಗಬೇಕು. ಈ ದಿಸೆಯಲ್ಲಿ ಶೀಲ ಎಂದರೆ ಅದು ನಡತೆ, ನೈತಿಕ ಸ್ಥೈರ್ಯ, ಯಾವುದೇ ಪ್ರಲೋಭನೆಗಳಿಗೆ ಒಳಗಾಗದೆ ಸ್ವತಂತ್ರವಾಗಿರುವ ಸಾಮರ್ಥ್ಯ ಎಂದರ್ಥ. ಒಟ್ಟಾರೆ ತನ್ನ ಆದರ್ಶಗಳಿಗೆ ತಾನು ಬದ್ಧನಾಗಿರುವುದೆಂದರ್ಥ. ಈ ನಿಟ್ಟಿನಲ್ಲಿ ಒಂದು ನಿರ್ದಿಷ್ಟ ಮಟ್ಟದ ಶೀಲ ಗಳಿಸದ ಯಾವುದೇ ಸದಸ್ಯ ಈ ಪವಿತ್ರ ಸದನವನ್ನು ಪ್ರವೇಶಿಸುವುದನ್ನು ನಾನು ನೋಡುವುದನ್ನು ಇಷ್ಟಪಡುವುದಿಲ್ಲ ಮತ್ತು ಇದಕ್ಕಿಂತ(ಶೀಲ) ಉತ್ತಮ ಅರ್ಹತೆ ಸದಸ್ಯರಿಂದ ಅಪೇಕ್ಷಿಸುವುದು ಸಾಧ್ಯವೇ ಇಲ್ಲ...’’ ಹೀಗೆ ಬಾಬಾಸಾಹೇಬ್ ಅಂಬೇಡ್ಕರರು ತಮ್ಮ ಮುಕ್ತ ಅಭಿಪ್ರಾಯ ಹೇಳುತ್ತಾರೆ ಮತ್ತು ಭಗವಾನ್ ಗೌತಮ ಬುದ್ಧ ಬೋಧಿಸಿದ ಜ್ಞಾನ ಮತ್ತು ಶೀಲ(ನಡತೆ)ಗಳೇ ಸದಸ್ಯನೋರ್ವನ ಪ್ರಮುಖ ಅರ್ಹತೆ ಆಗಿರಬೇಕು ಎಂದು ಅವರು ಸ್ಪಷ್ಟಪಡಿಸುತ್ತಾರೆ.
ಹಾಗಿದ್ದರೆ ಸದಸ್ಯರ ಶೈಕ್ಷಣಿಕ ಅರ್ಹತೆ ಬಗ್ಗೆ ಅವರು ಏನೂ ಹೇಳಲಿ ಲ್ಲವೇ? ಖಂಡಿತ, ಅಂಬೇಡ್ಕರರು ಮುಂದುವರಿದು ಹೇಳುತ್ತಾರೆ ‘‘ಶಿಕ್ಷಣದ ಅರ್ಹತೆಯ ಬಗ್ಗೆ ಹೇಳುವುದಾದರೆ ಓರ್ವ ಸದಸ್ಯ ತನ್ನ ಕರ್ತವ್ಯವನ್ನು ಸಮರ್ಥ ವಾಗಿ ನಿಭಾಯಿಸಲು, ನಿಭಾಯಿಸುವ ಅಂತಹ ಸಾಮರ್ಥ್ಯ ಹೊಂದಲು ಶಿಕ್ಷಣ ಅತ್ಯಗತ್ಯ ಎಂಬುದನ್ನು ನಾನು ಖಂಡಿತ ಒಪ್ಪುತ್ತೇನೆ. ಆದರೆ ಈ ಸದನದಲ್ಲಿ ಒಂದಷ್ಟು ಸದಸ್ಯರಿದ್ದಾರೆ, ಅವರು ಶಿಕ್ಷಣ ಪಡೆಯದಿದ್ದರೂ ಕೂಡ ತಾವು ಯಾರನ್ನು ಪ್ರತಿನಿಧಿಸುತ್ತಿದ್ದಾರೋ ಅವರ ನೋವುಗಳನ್ನು ಮಂಡಿಸುವಲ್ಲಿ ಅತ್ಯಂತ ಸಮರ್ಥರಿದ್ದಾರೆ ಮತ್ತು ಇದನ್ನು ನಾನು ಅತ್ಯಂತ ಸ್ಪಷ್ಟವಾಗಿ ಹೇಳುತ್ತಿದ್ದೇನೆ ಕೂಡ. ಈ ದಿಸೆಯಲ್ಲಿ ಅತಿ ಹೆಚ್ಚು ಶಿಕ್ಷಣ ಪಡೆದ ವ್ಯಕ್ತಿ, ಇವರಂತೆ ಅನುಭವವಿಲ್ಲದ, ಸಮಸ್ಯೆಗಳ ತಿಳುವಳಿಕೆಯಿಲ್ಲದ ಕಾರಣದಿಂದ ತನ್ನ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸುತ್ತಿಲ್ಲ. ಶಿಕ್ಷಣ ಪಡೆದ ವರ್ಗಗಳಿಂದ ಬರುವ ನನ್ನ ಸ್ನೇಹಿತರು ಸದನದಲ್ಲಿ ಭಾಷಣಗಳನ್ನು ಮಾಡುವುದು ಮುಖ್ಯವಲ್ಲ, ಬದಲಿಗೆ ತಾವು ಯಾರನ್ನು ಪ್ರತಿನಿಧಿಸುತ್ತಾರೋ ಆ ಜನರ ನೋವುಗಳಿಗೆ ಸ್ಪಂದಿಸುವುದು ಮತ್ತು ಅವರ ದುಃಖಗಳಿಗೆ ಪರಿಹಾರ ಕಲ್ಪಿಸುವುದು ಮುಖ್ಯ ಎಂಬುದನ್ನು ಅರಿಯುತ್ತಿಲ್ಲ. ಬರೀ ಭಾಷಣ ಮಾಡಿ ಸಮಸ್ಯೆಗಳನ್ನು ಮುಂದೊಡ್ಡುವುದು ಸುಲಭ. ಆದರೆ ಅವುಗಳಿಗೆ ಪರಿಹಾರ ಸೂಚಿಸುವುದು ಬಹಳ ಕಷ್ಟ.’’ ಹೀಗೆ ಹೇಳುತ್ತಾ ಅಂಬೇಡ್ಕರರು ಔಪಚಾರಿಕ ಶಿಕ್ಷಣ ಪಡೆಯದಿದ್ದರೂ ಸದನದಲ್ಲಿ ಜನರ ಸಮಸ್ಯೆಗಳನ್ನು ಸಮರ್ಥವಾಗಿ ಮಂಡಿಸುವ ಜೊತೆಗೆ ಪರಿಹಾರ ಸೂಚಿಸುವ ಸದಸ್ಯರುಗಳ ಉದಾಹರಣೆಯನ್ನು ತಮ್ಮ ಆ ಮಾತುಗಳಲ್ಲಿ ನೀಡುತ್ತಾರೆ. ಆ ಮೂಲಕ ಸದಸ್ಯರಿಗೆ ಶೈಕ್ಷಣಿಕ ಅರ್ಹತೆ ನಿಗದಿಗೊಳಿಸುವ ಸಂಬಂಧದ ಅದರ ಮತ್ತೊಂದು ಮಾನವೀಯ ಮುಖವನ್ನು ಸದನಕ್ಕೆ ಪರಿಚಯಿಸುತ್ತಾರೆ.
ಮುಂದುವರಿದು ಅವರು ಹೇಳುವುದು ‘‘ಇರಲಿ, ಶೈಕ್ಷಣಿಕ ಅರ್ಹತೆಯನ್ನು ಮಾನದಂಡವಾಗಿ ಇಡುವುದಾದರೆ ನಾವು ಯಾವ ಮಟ್ಟಕ್ಕೆ ಅಥವಾ ತರಗತಿಗೆ ಫಿಕ್ಸ್ ಮಾಡುವುದು? ಬರೀ ಪದವಿ ಪಡೆದವರು ಮಾತ್ರ ಸದನದ ಸದಸ್ಯರಾಗಲು ಅರ್ಹರು ಎಂದು ನೀವು ಹೇಳುವಿರಾ? ಅಂದಹಾಗೆ ಹಾಗೆ ಮಾಡಿದ್ದೇ ಆದರೆ ಪರಿಣಾಮ ಏನಾಗುವುದು? ಏಕೆಂದರೆ ಸದಸ್ಯರಿಗೆ ತಿಳಿಯದ್ದೇನೆಂದರೆ ಯಾವುದೇ ಕಾಲೇಜು ಅಥವಾ ಯೂನಿವರ್ಸಿಟಿ ಪ್ರವೇಶ ಪಡೆಯದಿದ್ದರೂ ಪದವೀಧರರಿಗಿಂತ ಬೌದ್ಧಿಕವಾಗಿ ಮತ್ತು ಶೈಕ್ಷಣಿಕವಾಗಿ ಸಮರ್ಥರಾದ ಅನೇಕ ಮಂದಿ ಈ ಸದನದಲ್ಲಿದ್ದಾರೆ ಮತ್ತು ಅಂತಹವರ ಸಂಖ್ಯೆ ಸಾಕಷ್ಟಿದೆ ಎಂಬುದು. ಈ ನಿಟ್ಟಿನಲ್ಲಿ ಅಂತಹವರನ್ನು ಏನು ಮಾಡುವುದು? ಖಾಸಗಿಯಾಗಿ ಶಿಕ್ಷಣ ಪಡೆದು ಬಿ.ಎ. ಮತ್ತು ಎಂ.ಎ. ಪಡೆದವರಿಗಿಂತ ಸಮರ್ಥರಾಗಿರುವ ಅಂತಹವರನ್ನು ಯೂನಿವರ್ಸಿಟಿ ಪ್ರಮಾಣಪತ್ರ ಪಡೆದಿಲ್ಲ ಎಂಬ ಒಂದೇ ಕಾರಣಕ್ಕಾಗಿ ದೂರ ಇಡಲು ಸಾಧ್ಯವೇ? ನನಗನಿಸಿದಂತೆ ಹಾಗೇನಾದರೂ ಆದರೆ ಖಂಡಿತ ಅದು ದುರದೃಷ್ಟಕರ ಫಲಿತಾಂಶ ನೀಡಲಿದೆ.’’ ಹೀಗೆ ಅಂಬೇಡ್ಕರರು ತಮ್ಮ ಆತಂಕ ಹೊರಹಾಕುತ್ತಾರೆ. ಆ ಮೂಲಕ ಔಪಚಾರಿಕ ಶಿಕ್ಷಣ ಪಡೆಯದಿದ್ದರೂ ಶಿಕ್ಷಣ ಪಡೆದವರಿಗಿಂತ ಯಾವುದರಲ್ಲೂ ಕಮ್ಮಿ ಇಲ್ಲದ ಸದಸ್ಯರ ಪರ ತಮ್ಮ ವಾದ ಮಂಡಿಸುತ್ತಾರೆ. ಮುಂದುವರಿದು ಈ ಸಮಸ್ಯೆಯ ಮಗದೊಂದು ಮುಖವನ್ನು ಅವರು ತೆರೆದಿಡುತ್ತಾರೆ. ಅದೆಂದರೆ ಸಮಾಜದಲ್ಲಿ ಅಸ್ತಿತ್ವದಲ್ಲಿರುವ ಶೈಕ್ಷಣಿಕ ತಾರತಮ್ಯ.
ಅವರು ಹೇಳುವುದು ‘‘ಶಿಕ್ಷಣ ಈ ದೇಶದಲ್ಲಿ ಎಲ್ಲ ಸಮುದಾಯಗಳ ನಡುವೆ ಸಾರ್ವತ್ರಿಕವಾಗಿ ಹರಡಿಲ್ಲ. ಅತೀ ಹೆಚ್ಚು ಶಿಕ್ಷಣ ಪಡೆದ ಸಮುದಾಯಗಳು ಒಂದೆಡೆಯಾದರೆ ಅತೀ ಕಡಿಮೆ ಶಿಕ್ಷಣ ಪಡೆದ ಸಮುದಾಯಗಳು ಒಂದೆಡೆ ಇವೆ. ಈ ನಿಟ್ಟಿನಲ್ಲಿ ನಾವು ಬಿ.ಎ. ಅಥವಾ ಮೆಟ್ರಿಕ್ಯುಲೇಶನ್ ಅನ್ನು ಅರ್ಹತೆ ಯಾಗಿ ಇಟ್ಟರೆ ಅದು ಇಡೀ ಸದನದ ಸದಸ್ಯತ್ವವನ್ನು ಕೆಲವೇ ಕೆಲವು ಮಂದಿಯ ಸ್ವತ್ತಾಗಿ ಮಾಡಿದಂತಾಗುತ್ತದಲ್ಲವೇ ಎಂಬುದು? ಹಾಗೆಯೇ ನಾವು ಶೈಕ್ಷಣಿಕ ಅರ್ಹತೆಯನ್ನು ಇನ್ನೂ ಕಡಿಮೆ ಮಟ್ಟಕ್ಕೆ, ಅಂದರೆ ಯಾವ ಸಮು ದಾಯವನ್ನೂ ಸದನದಿಂದ ದೂರ ಇಡಬಾರದು ಎಂದು ನಾಲ್ಕನೆಯ ತರಗತಿಗೆ ಅಥವಾ ಮೂರು R (Reading, Writing and Arithmetic) ಅಂದರೆ ಸಾಕ್ಷರತೆಯ ಕನಿಷ್ಠ ಮಟ್ಟಕ್ಕೆ ಇಟ್ಟಿರೆಂದಿಟ್ಟುಕೊಳ್ಳಿ, ಪ್ರಶ್ನೆ ಏನೆಂದರೆ ಅಂತಹ ಅರ್ಹತೆ ಅದು ಉತ್ತಮವಾದದ್ದೆ ಎಂಬುದು? ಖಂಡಿತ, ಅದಕ್ಕೆ ಅಂದರೆ ಅಂತಹ ಕನಿಷ್ಠ ಅರ್ಹತೆಗೆ ಯಾವುದೇ ಮೌಲ್ಯವಿರುವುದಿಲ್ಲ.’’
‘‘ಆದ್ದರಿಂದ ನನ್ನ ಮನವಿ ಏನೆಂದರೆ, ನಿಜ, ಅಭ್ಯರ್ಥಿಗಳಿಗೆ ಶೈಕ್ಷಣಿಕ ಅರ್ಹತೆ ಅದು ಉತ್ತಮ ವಿಚಾರ, ಅದನ್ನು ನಾನು ತಳ್ಳಿಹಾಕುತ್ತಿಲ್ಲ. ಈ ನಡುವೆ ಇಂತಹ ಅರ್ಹತೆಗೆ ನೀವು ಕಾನೂನಿನ ಮಾನ್ಯತೆಯನ್ನು ಹೇಗೆ ನೀಡಬಲ್ಲಿರಿ ಎಂಬುದು ಕೂಡ ನನಗೆ ಹೊಳೆಯುತ್ತಿಲ್ಲ. ಆದ್ದರಿಂದ ಉದ್ಭವಿಸಬಹುದಾದ ಇಂತಹ ಸಮಸ್ಯೆಗಳ ಹಿನ್ನೆಲೆಯಲ್ಲಿ ಈ ವಿಷಯವನ್ನು ಜನರಿಗಷ್ಟೇ ಅಥವಾ ಸರಕಾರಗಳನ್ನು ನಡೆಸುವ ರಾಜಕೀಯ ಪಕ್ಷಗಳಿಗಷ್ಟೆ ಬಿಡಬೇಕು ಎಂಬುದು. ಅಂದಹಾಗೆ ರಾಜಕೀಯ ಪಕ್ಷಗಳು ತಮ್ಮ ರಾಜಕೀಯ ಉದ್ದೇಶಗಳಿಗಾಗಿ ಸದಸ್ಯರ ಇಂತಹ ಶೈಕ್ಷಣಿಕ ಅರ್ಹತೆಯ ಸಮಸ್ಯೆಯ ಬಗ್ಗೆ ಗಮನಹರಿಸದಿರಬಹುದು ಆದರೆ ಜನರಂತೂ ಖಂಡಿತ ಗಮನಹರಿಸುತ್ತಾರೆ. ತಮ್ಮ ಸಮಸ್ಯೆಗಳಿಗೆ ಸದನದಲ್ಲಿ ಸ್ಪಂದಿಸದ ಸದಸ್ಯರನ್ನು ಖಂಡಿತ ಅವರು ಆರಿಸುವುದಿಲ್ಲ. ಏಕೆಂದರೆ ಅವರಿಗೆ ಫಲಿತಾಂಶ ಬೇಕು. ಈ ನಿಟ್ಟಿನಲ್ಲಿ ನನಗೆ ಭರವಸೆ ಇದೆ ತಮ್ಮ ಕಲ್ಯಾಣವನ್ನು ಸದನದಲ್ಲಿ ಪ್ರಸ್ತಾಪಿಸುವ ಸದಸ್ಯರನ್ನಷ್ಟೆ ಜನ ಆಯ್ಕೆಮಾಡುತ್ತಾರೆ ಎಂದು. ಈ ಹಿನ್ನೆಲೆಯಲ್ಲಿ ಸದಸ್ಯರ ಶೈಕ್ಷಣಿಕ ಅರ್ಹತೆಯ ಈ ವಿಷಯವನ್ನು ಜನರಿಗೇ ಬಿಡಬೇಕು, ಅದೇ ಸರಿಯಾದ ಮಾರ್ಗವಾಗಿದೆ.’’ (ಅಂಬೇಡ್ಕರ್ ಬರಹಗಳು, ಇಂಗ್ಲಿಷ್ ಸಂ.17, ಭಾಗ 3, ಪು.161)
ಒಟ್ಟಾರೆ ಅಂಬೇಡ್ಕರ್‌ರವರ ಈ ಆಶಯದ ಹಿನ್ನೆಲೆಯಲ್ಲಿ ಜನತೆ ಮತ್ತು ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳು ಹೇಗಿರಬೇಕು, ಯಾವ ಕನಿಷ್ಠ ಅರ್ಹತೆ ಹೊಂದಿರಬೇಕು ಎಂಬುದರ ಬಗ್ಗೆ ಚಿಂತಿಸುವ ಅಗತ್ಯವಿದೆ. ಈ ದಿಸೆಯಲ್ಲಿ ರಾಜಕೀಯ ಪಕ್ಷಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುವ, ಜ್ಞಾನ ಮತ್ತು ಶೀಲ(ನಡತೆ)ಗಳನ್ನು ಹೊಂದಿರುವ ಅಭ್ಯರ್ಥಿಗಳ ಆಯ್ಕೆಯತ್ತ ಗಮನಹರಿಸಲಿ. ಪ್ರಜಾಪ್ರಭುತ್ವದ ಯಶಸ್ಸಿಗೆ ಟೊಂಕಕಟ್ಟಲಿ ಎಂಬುದೇ ಸದ್ಯದ ಕಳಕಳಿ.