ಬಹುಭಾಷಿಕತೆ ಕೇವಲ ಭಾಷೆಗೆ ಸಂಬಂಧಿಸಿದುದಲ್ಲ: ಪ್ರೊ.ಶಿವರಾಮ ಪಡಿಕಲ್
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ
ಕೊಣಾಜೆ, ಮಾ. 28: ಬಹುಭಾಷಿಕತೆ ಕೇವಲ ಭಾಷೆಗೆ ಸಂಬಂಧಿಸಿದುದಲ್ಲ. ಅದು ಪರಿಸರ ಸಂಸ್ಕೃತಿ ಮತ್ತು ಜೀವ ವೈವಿಧ್ಯಗಳ ಸಂಕೇತ. ಅವಿಭಜಿತ ದಕ್ಷಿಣಕನ್ನಡದ ಪರಿಸರದಲ್ಲಿ ಮೂಡಿ ಬಂದ ಸಾಹಿತ್ಯ ಬಹುಭಾಷಾ ನೆಲೆಯಿಂದಲೇ ತನ್ನ ಸತ್ವವನ್ನು ಪಡೆದುಕೊಂಡಿರುವಂತದ್ದು ಎಂದು ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದ ಪ್ರೊ.ಶಿವರಾಮ ಪಡಿಕಲ್ ಹೇಳಿದರು.
ಅವರು ಮಂಗಳೂರು ವಿಶ್ವವಿದ್ಯಾನಿಲಯದ ಯುಜಿಸಿ ಸ್ಯಾಪ್ ಯೋಜನೆಯ ಆಶ್ರಯದಲ್ಲಿ ‘ಕರಾವಳಿಯ ಬಹುಭಾಷಿಕ, ಸಾಹಿತ್ಯಕ ಸಾಂಸ್ಕ್ರತಿಕ ಅಧ್ಯಯನದ ವೈಧಾನಿಕತೆ’ ಎಂಬ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಬಹುಸಾಂಸ್ಕ್ರತಿಕ, ಆರೋಗ್ಯ, ಬಹುಭಾಷಾ ಒಡನಾಟ ಮತ್ತು ರಾಜಕೀಯಗಳನ್ನು ಮನಸ್ಸಿನಲ್ಲಿ ಇರಿಸಿಕೊಂಡೇ ನಾವು ಸಾಂಸ್ಕ್ರತಿಕ ಭಾಷಾಂತರವನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದ ಅವರು ಕರ್ನಾಟಕದ ಆಧುನಿಕತೆಯ ಹಿನ್ನೆಲೆಯಲ್ಲಿ ಬಹುಭಾಷಿಕತೆ, ಸಾಹಿತ್ಯ, ಸಂಸ್ಕ್ರತಿಗಳನ್ನು ಅನು ಸಂಧಾನಿಸಬಹುದಾದ ರೀತಿಗಳ ಬಗ್ಗೆ ಚರ್ಚಿಸಿದರು. ಕಾರ್ಯಕ್ರಮದಲ್ಲಿ ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ಪ್ರೊ.ಅವಿನಾಶ್.ಟಿ. ಸ್ಯಾಪ್ ಯೋಜನೆಯ ಸಂಯೋಕರಾದ ಪ್ರೊ.ಬಿ.ಶಿವರಾಮ ಶೆಟ್ಟಿ, ಪ್ರಾದ್ಯಾಪಕ ಡಾ.ನಾಗಪ್ಪ ಗೌಡ ಉಪಸ್ಥಿತರಿದ್ದರು. ಡಾ.ಧನಂಜಯ ಕುಂಬ್ಳೆ ಕಾರ್ಯಕ್ರಮ ನಿರೂಪಿಸಿದರು.