ಫೇಸ್ಬುಕ್ ಬಳಕೆದಾರರಿಗೆ ಹಾಕಿದ ಮನೋವೈಜ್ಞಾನಿಕ ಗಾಳ
ಕೇಂಬ್ರಿಡ್ಜ್ ಅನಲಿಟಿಕಾ ಪ್ರಕರಣ
ಭಾಗ-4
ಕೇಂಬ್ರಿಡ್ಜ್ ಅನಲಿಟಿಕಾ ಅಮೆರಿಕ ದೇಶಕ್ಕೆ ಸೇರಿದ 50 ಮಿಲಿಯನ್ ಫೇಸ್ಬುಕ್ ಬಳಕೆದಾರರ ಮಾನಸಿಕ ಪ್ರೊಫೈಲ್ ಅನ್ನು ತಯಾರಿಸಿತ್ತು. ಪ್ರತಿಯೊಬ್ಬ ಬಳಕೆದಾರನಿಗೆ ಸಂಬಂಧಿಸಿದ ನಾಲ್ಕು ಸಾವಿರ ಮನೋವೈಜ್ಞಾನಿಕ ಅಂಶಗಳನ್ನು ಗುರುತಿಸಲಾಗಿತ್ತೆಂದು ಹಗರಣವನ್ನು ಬಯಲಿಗೆ ತಂದ ಕ್ರಿಸ್ಟೋಫರ್ ವೈಲಿ ಹೇಳುತ್ತಿದ್ದಾನೆ. ಇಂತಹದೊಂದು ಪ್ರೊಫೈಲ್ ತಯಾರಿಸಲು ಕಂಪೆನಿ ಬಳಸಿಕೊಂಡಿದ್ದು ಮನೋವಿಜ್ಞಾನಿ ಕೋಗ್ನ್ನ್ ತಯಾರಿಸಿದ್ದ ವ್ಯಕ್ತಿತ್ವ ವಿಶೇಷಗಳನ್ನು (ಪರ್ಸನಾಲಿಟಿ ಟೈಪ್) ಅಳೆಯುವ ಆಪ್ ಅನ್ನು.
ಫೇಸ್ಬುಕ್ ಬಳಕೆದಾರರಿಗೆ ಅವರ ವ್ಯಕ್ತಿತ್ವ ವಿಶೇಷತೆಗಳನ್ನು ತಿಳಿಸುವ ನೆಪದಲ್ಲಿ, ಕೋಗ್ನ್ನ್ನ ಆ್ಯಪ್ ಅನೇಕ ಪ್ರಶ್ನೆಗಳನ್ನು ಕೇಳುತ್ತಾ ಹೋಯಿತು. ಪ್ರಶ್ನೆಗಳಿಗೆ ಬಳಕೆದಾರ ಉತ್ತರಿಸುತ್ತಾ ಸಾಗಿದಂತೆ, ಕೋಗ್ನ್ನ್ನ ಬಳಿ ಸದರಿ ಬಳಕೆದಾರನ ವಿಶೇಷತೆಗಳ ಚಿತ್ರಣ ಮೂಡುತ್ತಾ ಹೋಯಿತು. ಆತ ಇದೇ ದತ್ತಾಂಶವನ್ನು ಕೇಂಬ್ರಿಡ್ಜ್ ಅನಲಿಟಿಕಾ ಕಂಪೆನಿಗೆ ನೀಡಿದ. ಕಂಪೆನಿಯಲ್ಲಿದ್ದ ವೈಲಿಯಂತಹವರು ಲಭ್ಯವಾದ ಬಳಕೆದಾರರ ದತ್ತಾಂಶವನ್ನು ವಿವಿಧ ಅಲ್ಗಾರಿದಂಗಳ (ನಿರ್ದಿಷ್ಟ ಉದ್ದೇಶಕ್ಕಾಗಿ ತಯಾರಾಗುವ ತಂತ್ರಾಂಶವನ್ನು ‘ಅಲ್ಗಾರಿದಂ’ ಎನ್ನುತ್ತಾರೆ. ಇದು ಮಿಲಿಯನ್ಗಟ್ಟಲೆ ದತ್ತಾಂಶವನ್ನು ಬಿಲಿಯನ್ ಸಾಧ್ಯತೆಗಳಿಗಾಗಿ ವಿಶ್ಲೇಷಿಸುವ ಅಗಾಧವಾದ ಸಾಮರ್ಥ್ಯವನ್ನು ಹೊಂದಿರುತ್ತದೆ) ಮೂಲಕ ವಿಶ್ಲೇಷಣೆಗೆ ಒಳಪಡಿಸಿದರು. ವೈಲಿ ಹೇಳುವಂತೆ 50 ಮಿಲಿಯನ್ ಫೇಸ್ಬುಕ್ ಬಳಕೆದಾರರ ಮಾನಸಿಕ ಸ್ಥಿತಿಗತಿಯನ್ನು ಸೂಚಿಸುವ ತಲಾ ನಾಲ್ಕು ಾವಿರ ಅಂಶಗಳ ಪಟ್ಟಿ ಸಿದ್ಧವಾಯಿತು.
ಹೀಗೆ ವೈಯಕ್ತಿಕವಾಗಿ ಸಿದ್ಧವಾದ ಪ್ರತಿಯೊಬ್ಬರಿಗೆ ಸೇರಿದ ನಾಲ್ಕು ಸಾವಿರ ಮನೋವೈಜ್ಞಾನಿಕ ಅಂಶಗಳ ಸೂಚಿಯ ಮಹತ್ವವನ್ನು ಅರಿಯಬೇಕಾದರೆ ಒಂದೆರಡು ಮನೋವೈಜ್ಙಾನಿಕ ವಿಚಾರಗಳನ್ನು ನಾವು ಅರಿಯಬೇಕಾಗುತ್ತದೆ. ಕಳೆದ ಐವತ್ತು ವರ್ಷಗಳಲ್ಲಿ ಮನೋವಿಜ್ಞಾನಿಗಳು ಮನುಷ್ಯರ ಮನಸ್ಸನ್ನು ಕುರಿತು ಸಾಕಷ್ಟು ಸಂಶೋಧನೆಗಳನ್ನು ನಡೆಸಿದ್ದಾರೆ. ಮನಸ್ಸು ಎನ್ನುವುದು ಮನುಷ್ಯನ ಮಿದುಳಿನ ಸೃಷ್ಟಿಯಾಗಿದೆ. ಮಿದುಳಿನಲ್ಲಿ ರೂಪಿತವಾಗಿರುವ ನರವ್ಯೆಹಗಳು ಮನುಷ್ಯನ ವ್ಯಕ್ತಿತ್ವವನ್ನು ರೂಪಿಸುತ್ತವೆ. ಯಾವ ರೀತಿಯಲ್ಲಿ ಓರ್ವ ಮನುಷ್ಯನ ವ್ಯಕ್ತಿತ್ವ ರೂಪಿತವಾಗುತ್ತದೆಂದು ನಿಖರವಾಗಿ ಹೇಳಲು ಇನ್ನೂ ಸಾಧ್ಯವಾಗಿಲ್ಲವಾದರೂ, ಮನುಷ್ಯನಲ್ಲಿ ವ್ಯಕ್ತಗೊಳ್ಳುವ ವರ್ತನೆಗಳ ಹಿಂದಿನ ಮಾನಸಿಕತೆಯನ್ನು ಅರ್ಥಮಾಡಿಕೊಳ್ಳುವಲ್ಲಿ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ.
ಮನಃಶಾಸ್ತ್ರದ ಪಿತಾಮಹನೆಂದು ಗುರುತಿಸಲಾಗುವ ಫ್ರಾಯ್ಡಾ ರ ಶಿಷ್ಯರಾಗಿದ್ದ ಆಡ್ಯಲರ್ ಮನುಷ್ಯರನ್ನು ಅಂತರ್ಮುಖಿಗಳು ಮತ್ತು ಬಹಿರ್ಮುಖಿಗಳು ಎಂಬ ಎರಡು ಗುಂಪಾಗಿ ವಿಂಗಡಿಸಿದ್ದರು. ನೂರು ವರ್ಷದ ಹಿಂದೆ ಪ್ರತಿಪಾದಿತವಾದ ವಿಂಗಡನೆಯನ್ನು ಇತ್ತೀಚಿನ ದಿನಗಳಲ್ಲಿ ವಿಜ್ಞಾನಿಗಳು ಪುರಾವೆಗಳ ಮೂಲಕ ಖಚಿತಪಡಿಸಿಕೊಂಡಿದ್ದಾರೆ. ಮುಂದುವರಿದ ಎಂಆರ್ಐ ಸ್ಕ್ಯಾನಿಂಗ್ ತಂತ್ರಜ್ಞಾನದ ಸಹಾಯದೊಂದಿಗೆ, ಈ ಎರಡೂ ಗುಂಪಿನವರ ಮಿದುಳಿನ ರಚನೆಯಲ್ಲಿ ಭಿನ್ನತೆಯಿರುವುದನ್ನು ಪತ್ತೆಹಚ್ಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಇವರೀರ್ವರ ಅಭಿವ್ಯಕ್ತಿ ಮತ್ತು ಗ್ರಹಿಕಾ ವಿಧಾನಗಳು ಭಿನ್ನವೆನ್ನುವುದನ್ನು ಅರ್ಥಮಾಡಿಕೊಂಡಿದ್ದಾರೆ.
ಅಂತರ್ಮುಖಿಗಳು ತಾರ್ಕಿಕವಾಗಿ ಆಲೋಚಿಸಬಲ್ಲವರಾಗಿದ್ದು ನಾಲ್ಕು ಜನರ ಮುಂದೆ ಹೆಚ್ಚು ಮಾತನಾಡುವುದಿಲ್ಲ. ಸೋಜಿಗವೆಂದರೆ, ಇವರು ಅಂತರ್ಜಾಲದಲ್ಲಿ ಬಹಳ ಕ್ರಿಯಾಶೀಲರಾಗಿರುತ್ತಾರೆ. ತಮ್ಮ ಅಭಿಪ್ರಾಯಗಳನ್ನು ಸಾಕಷ್ಟು ಸಮರ್ಥವಾಗಿ ಫೇಸ್ಬುಕ್, ಟ್ವಿಟರ್ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಪಡಿಸುತ್ತಾರೆ. ಇಂತಹವರಿಗೆ ಕೇವಲ ಮಾಹಿತಿ ಲಭ್ಯವಾದರೆ ಸಾಕಾಗುವುದಿಲ್ಲ. ಮಾಹಿತಿಯ ಕುರಿತು ಅತೀವ ಕುತೂಹಲವಿರುವ ಇವರು, ಮಾಹಿತಿಯ ಆಳಅಗಲವನ್ನು ಜಾಲಾಡದೆ ಬಿಡರು. ಯಾವುದೇ ಮಾಹಿತಿಯ ಮೂಲ ಖಚಿತವಾಗದ ಹೊರತು ಇತರರಿಗೆ ಇವರು ಹೇಳುವುದಿಲ್ಲ. ಏಕೆಂದರೆ, ಇವರು ಯಾರನ್ನೂ ವೃಥಾ ನೋಯಿಸರು. ಇವರಿಗೆ ವಿರುದ್ಧವಾದ ವರ್ತನೆ ಬಹಿರ್ಮುಖಿಗಳದ್ದು. ಇವರಿಗೆ ಮಾಹಿತಿ ದೊರೆತರೆ ಸಾಕು. ಅದರ ಬೆನ್ನ ಹಿಂದೆ ಬೀಳುವುದು ಕಡಿಮೆ. ಜೊತೆಗೆ ಒಂದು ವಿಷಯವನ್ನು ಇನ್ನೊಬ್ಬರಿಗೆ ಹೇಳಿದರೆ ಅದರ ಪರಿಣಾಮ ಏನು ಎನ್ನುವುದು ಇವರಿಗೆ ಮುಖ್ಯವಲ್ಲ. ಮಾಹಿತಿ ಒಂದಿಷ್ಟು ಆಕರ್ಷಕವಾಗಿದ್ದರೆ ಸಾಕು. ಅದನ್ನು ತಮಗೆ ಗೊತ್ತಿರುವ ಎಲ್ಲರಿಗೂ ಟಾಂ ಟಾಂ ಹಾಕಿಬಿಡುತ್ತಾರೆ. ಇದರಿಂದ ಮತ್ತೊಬ್ಬರಿಗೆ ನೋವಾದರೆ ಎನ್ನುವ ಪ್ರಶ್ನೆಯೇ ಇವರಿಗಿರುವುದಿಲ್ಲ.
ಕೇಂಬ್ರಿಡ್ಜ್ ಅನಲಿಟಿಕಾದಂತಹ ಕಂಪೆನಿಗಳು ಈ ಜ್ಞಾನವನ್ನು ಸಂಪೂರ್ಣವಾಗಿ ಬಳಸಿಕೊಳ್ಳುತ್ತವೆ. ತಾವು ನೀಡುವ ಸುಳ್ಳು ಸುದ್ದಿಯನ್ನು ಅಂತರ್ಮುಖಿಗಳಿಗೆ ನೀಡಬೇಕಾದಲ್ಲಿ, ನೀಡಿದ ಸುದ್ದಿಯ ಸುಳ್ಳು ಮೂಲವನ್ನು ಮರೆಯದೆ ನೀಡುತ್ತಾರೆ. ಅದೇ ವಿಷಯವನ್ನು ಬಹಿರ್ಮುಖಿಗಳಿಗೆ ನೀಡಬೇಕಾದರೆ, ಆದಷ್ಟು ರಂಗುರಂಗಾಗಿ ನೀಡುತ್ತಾರೆ. ಉದಾಹರಣೆಗೆ ಕದ್ದು ಪಡೆದುಕೊಂಡ ಫೇಸ್ಬುಕ್ನ 50 ಮಿಲಿಯನ್ ಬಳಕೆದಾರರ ಮನೋವೈಜ್ಞಾನಿಕ ಪ್ರೊಫೈಲ್ನ ಆಧಾರದ ಮೇಲೆಯೇ ಕಂಪೆನಿಯು ತನ್ನ ಗ್ರಾಹಕನ ಅಗತ್ಯಕ್ಕೆ ತಕ್ಕಂತೆ ಮಾಹಿತಿಯನ್ನು ನೀಡಿದ್ದು ಮತ್ತು ಇದನ್ನು ಸ್ವಯಂಚಾಲಿತ ಅಲ್ಗಾರಿದಂ ನಿರ್ವಹಸಿದ ಕಾರಣ, ತಪ್ಪಾಗುವ ಸಾಧ್ಯತೆಗಳೇ ಇರಲಿಲ್ಲ.
ಗ್ರಾಹಕನಿಗೆ ಪೂರಕವಾಗುವ ಮಾಹಿತಿಯನ್ನು ಫೇಸ್ಬುಕ್ ಬಳಕೆದಾರರಿಗೆ ನೀಡುವಾಗ ಮತ್ತೊಂದು ಮನೋವೈಜ್ಞಾನಿಕ ಜ್ಞಾನವನ್ನು ಕೇಂಬ್ರಿಡ್ಜ್ ಅನಲಿಟಿಕಾ ಬಳಸಿಕೊಳ್ಳುತ್ತದೆ. ಮನುಷ್ಯರ ಬೌದ್ಧಿಕ ಸಾಮರ್ಥ್ಯದ ಆಧಾರದ ಮೇಲೆ ಮನುಷ್ಯರನ್ನು ಎಂಟು ಗುಂಪುಗಳಾಗಿ ವಿಭಾಗಿಸಲಾಗುತ್ತದೆ. ಕೆಲವರಿಗೆ ಮಾತನಾಡುವ ಕೌಶಲವಿದ್ದರೆ, ಮತ್ತೆ ಹಲವರಿಗೆ ಸಂಖ್ಯೆಗಳನ್ನು ನಿಖರವಾಗಿ ಅರಿಯುವ ಸಾಮರ್ಥ್ಯವಿರುತ್ತದೆ. ಇನ್ನೂ ಕೆಲವರಿಗೆ ಚಿತ್ರಗಳನ್ನು ಅರಿಯುವ ಕೌಶಲವಿರುತ್ತದೆ. ಹಲವರಿಗೆ ಅಮೂರ್ತವಾದ ಸೈದ್ಧಾಂತಿಕ ಚರ್ಚೆಗಳಲ್ಲಿ ಭಾಗವಹಿಸುವ ಶಕ್ತಿಯಿರುತ್ತದೆ. ಈ ವಿಂಗಡನೆಯ ಅನುಸಾರ ಫೇಸ್ಬುಕ್ ಬಳಕೆದಾರರನ್ನು ವಿಂಗಡಿಸಿ, ಅವರಿಗೆ ತಕ್ಕನಾದ ಮಾಹಿತಿಯನ್ನಷ್ಟೇ ಕೇಂಬ್ರಿಡ್ಜ್ ಅನಲಿಟಿಕಾ ನೀಡುವುದರ ಮೂಲಕ ತನ್ನ ಗ್ರಾಹಕನಿಗೆ ಅನುಕೂಲವಾಗುವ ಸನ್ನಿವೇಶವನ್ನು ಸೃಷ್ಟಿಸಿಕೊಂಡಿದೆ. ತನ್ಮೂಲಕ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಕಂಪೆನಿಯ ಕೃತ್ಯವು ಸಾಕಷ್ಟು ಪ್ರಭಾವ ಬೀರಿದೆಯೆಂದು ಪರಿಣಿತರು ಅಭಿಪ್ರಾಯಪಡುತ್ತಾರೆ.