ಪ್ರತಿಯೊಬ್ಬ ಮತದಾರ ತಿಳಿದಿರಬೇಕಾದ ಅಂಶಗಳು
2018ರ ಕರ್ನಾಟಕ ವಿಧಾನಸಭಾ ಚುನಾವಣೆ
2018ರ ಕರ್ನಾಟಕ ರಾಜ್ಯದ ವಿಧಾನ ಸಭಾ ಚುನಾವಣೆಯು ಮೇ 12ರಂದು ಒಂದೇ ಹಂತದಲ್ಲಿ ನಡೆಯಲಿದ್ದು, ಈ ಸಲದ ಚುನಾವಣೆಯು ಇಲೆಕ್ಟ್ರಾನಿಕ್ ಮತಯಂತ್ರದ (ಇವಿಎಮ್) ಸಹಾಯದಿಂದ ನಡೆಯಲಿದೆ. ಈ ಇವಿಎಮ್ ಕುರಿತು ದೇಶಾದ್ಯಂತ ಅಪಸ್ವರಗಳು ಕೇಳಿ ಬಂದಿದ್ದು, ಕರ್ನಾಟಕದಲ್ಲಿಯೂ ಕೂಡ ಹಿಂದಿನ ಮತದಾನ ಪದ್ದತಿಯಾದ ಬ್ಯಾಲೆಟ್ ಪೇಪರ್ ಉಪಯೋಗಿಸಿ ಚುನಾವಣೆ ನಡೆಸಬೇಕೆಂಬ ಒತ್ತಾಯ ಕೇಳಿ ಬರತೊಡಗಿದೆ. ಈ ಎಲ್ಲಾ ವಿದ್ಯಾಮಾನಗಳನ್ನು ಗಮನಿಸಿದ ಭಾರತದ ಚುನಾವಣಾ ಆಯೋಗವು ಮುಂಬರುವ ಕರ್ನಾಟಕದ ವಿಧಾನ ಸಭಾ ಚುನಾವಣೆಯಲ್ಲಿ ಇವಿಎಮ್ ದುರ್ಬಳಕೆ ತಡೆಗಟ್ಟುವ ಸಲುವಾಗಿ ಇವಿಎಮ್ ನೊಂದಿಗೆ ವಿವಿಪ್ಯಾಟ್ ಬಳಸಲು ನಿರ್ಧರಿಸಿದೆ. ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಉಪಯೋಗಿಸುವ ಈ ವಿವಿಪ್ಯಾಟ್ ನ ಬಗ್ಗೆ ತಿಳಿದುಕೊಳ್ಳುವುದು ಪ್ರತಿಯೋರ್ವ ಮತದಾರನ ಕರ್ತವ್ಯವಾಗಿದೆ.
ವೋಟರ್ ವೆರಿಫೈಯೇಬಲ್ ಪೇಪರ್ ಆಡಿಟ್ ಟ್ರಯಲ್ ಎಂಬುವುದರ ಸಂಕ್ಷಿಪ್ತ ರೂಪವೇ ವಿವಿಪ್ಯಾಟ್.
ಅಂದರೆ ಯಾವ ಅಭ್ಯರ್ಥಿಗೆ ಮತ ಚಲಾಯಿಸಿದೆ ಎಂದು ಗೊಂದಲಗೊಳ್ಳುವ ಮತದಾರರ ಗೊಂದಲ ನಿವಾರಣೆಗೆ ಇರುವ ಯಂತ್ರವೇ ವಿವಿ ಪ್ಯಾಟ್. ನಾವು ಮತ ಚಲಾಯಿಸುವ ಇವಿಎಮ್ ಯಂತ್ರದ ಸಮೀಪವೇ ಮತ್ತೊಂದು ವಿವಿಪ್ಯಾಟ್ ಯಂತ್ರವನ್ನು ಇಟ್ಟಿರುತ್ತಾರೆ. ಸಣ್ಣ ಸ್ಕ್ರೀನ್ ಹೊಂದಿರುವ ಈ ವಿವಿಪ್ಯಾಟ್ ಯಂತ್ರವನ್ನು ಇವಿಎಮ್ ಗೆ ಜೋಡಿಸಿಡಲಾಗುತ್ತದೆ. ಮತದಾರ ತಾನು ಆಯ್ಕೆ ಮಾಡಬೇಕಿರುವ ವ್ಯಕ್ತಿಯ ಹೆಸರಿನ ಮುಂದಿನ ಗುಂಡಿ ಒತ್ತಿದರೆ ಸಾಕು ಮತಯಂತ್ರದ ಪಕ್ಕದಲ್ಲಿಯೇ ಇಡಲಾಗುವ ಮತ ಖಾತರಿಪಡಿಸುವ ವೋಟರ್ ವೆರಿಫೈಯೇಬಲ್ ಪೇಪರ್ ಆಡಿಟ್ (ವಿವಿ ಪ್ಯಾಟ್) ಯಂತ್ರದಲ್ಲಿ ನಾವು ಮತ ಹಾಕಿದ ಅಭ್ಯರ್ಥಿಯ ಹೆಸರಿನಲ್ಲಿ ಮುದ್ರಿತವಾದ ಚೀಟಿ ಮತದಾನದ ಪೆಟ್ಟಿಗೆಯಲ್ಲಿ ಬೀಳುತ್ತದೆ. ಆಗ ನಾವು ಚಲಾಯಿಸಿದ ಮತ ಸರಿಯಾಗಿದೆಯೇ ಎನ್ನುವುದನ್ನು ಖಚಿತ ಪಡಿಸಿಕೊಳ್ಳಬಹುದು.
ಈ ಮುದ್ರಿತ ಚೀಟಿ ಮತದಾರನಿಗೆ 7 ಸೆಕೆಂಡ್ಗಳ ಕಾಲ ವಿವಿಪ್ಯಾಟ್ ನ ಸ್ಕ್ರೀನ್ ನಲ್ಲಿ ಗೋಚರಿಸುತ್ತದೆ. ಏಳು ಸೆಕೆಂಡುಗಳ ಕಾಲ ಮುದ್ರಿತ ಚೀಟಿ ವಿವಿಪ್ಯಾಟ್ ಸ್ಕ್ರೀನ್ ಮೂಲಕ ನಮಗೆ ಗೋಚರಿಸಿ ನಂತರ ಮತದಾನದ ಪೆಟ್ಟಿಗೆಯೊಳಗೆ ಬೀಳುತ್ತದೆ. ಒಂದು ವೇಳೆ ಮತಯಂತ್ರದ ದುರ್ಬಳಕೆಯಿಂದಾಗಿ ತಾನು ಚಲಾಯಿಸಿದ ಮತ ಬೇರೆ ಅಭ್ಯರ್ಥಿಗೆ ಚಲಾಯಿಸಲ್ಪಟ್ಟಿದ್ದು ಕಂಡು ಬಂದರೆ ತಕ್ಷಣ ಮತಗಟ್ಟೆಯ ಅಧಿಕಾರಿಗಳ ಗಮನಕ್ಕೆ ತರಬಹುದಾಗಿದೆ. ಮತಯಂತ್ರ ದೋಷವುಂಟಾದರೆ ಮುದ್ರಿತ ಮತಗಳನ್ನು ಚುನಾವಣಾ ಆಯೋಗದ ಅನುಮತಿಯೊಂದಿಗೆ ಎಣಿಕೆಗೆ ಬಳಕೆ ಮಾಡಿಕೊಳ್ಳಬಹುದಾಗಿದೆ. ವಿವಿಪ್ಯಾಟ್ ಬಳಕೆಯಿಂದಾಗಿ ಇವಿಎಮ್ ದುರುಪಯೋಗವಾಗುವ ಸಾಧ್ಯತೆ ಬಹಳ ಕಡಿಮೆ. ಅಲ್ಲದೆ ಅಭ್ಯರ್ಥಿಗಳು ಈ ಮುದ್ರಿತ ಮತಗಳನ್ನು ಅಫಿಡವಿಟ್ ಸಲ್ಲಿಸುವ ಮೂಲಕ ಮತ ಎಣಿಕೆ ನಂತರ ಪಡೆದುಕೊಳ್ಳಲು ಚುನಾವಣಾ ಆಯೋಗ ಅವಕಾಶ ಕಲ್ಪಿಸಿಕೊಟ್ಟಿದೆ.
ಇಲೆಕ್ಟ್ರಾನಿಕ್ ಮತಯಂತ್ರದ ದುರ್ಬಳಕೆಯನ್ನು ತಡೆಗಟ್ಟುವ ಉದ್ದೇಶದಿಂದ ಚುನಾವಣಾ ಆಯೋಗವು ಬಳಸಲು ನಿರ್ಧರಿಸುವ ಈ ವಿವಿಪ್ಯಾಟ್ ನ ಕಾರ್ಯನಿರ್ವಹಣೆಯ ಕುರಿತು ಅರಿಯುವುದು ಹಾಗೂ ಮತದಾರನು ತನ್ನ ಜವಾಬ್ಧಾರಿಯ ಕುರಿತು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ. ಯುವ ಜನತೆ ವಿದ್ಯಾವಂತರಾಗಿದ್ದರೂ, ಬಹುತೇಕ ಅನಕ್ಷರಸ್ಥರಾದ ಹಿರಿಯ ತಲೆಮಾರಿನ ಮತದಾರರಿಗೆ ವಿವಿಪ್ಯಾಟ್ ಕಾರ್ಯನಿರ್ವಹಣೆಯ ಕುರಿತು ಮನವರಿಕೆ ಮಾಡಿಕೊಡುವ ಮೂಲಕ ರಾಜ್ಯದ ಎಲ್ಲಾ ಮತದಾರರಲ್ಲಿ ಜಾಗೃತಿ ಮೂಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.