ಕೇಂಬ್ರಿಡ್ಜ್ ಅನಲಿಟಿಕಾ - ಭಾರತದಲ್ಲಿ ನಿಜವಾಗಿಯೂ ಮಾಡಿದ್ದೇನು?
ಒಂದು ವಿಶೇಷ ವರದಿ
ಅದಾಗಲೇ ಒಂದು ಗಿರಾಕಿ ಬಂದಾಗಿತ್ತು ಮತ್ತು ಆ ಗಿರಾಕಿ ಕಾಂಗ್ರೆಸ್ ಆಗಿರಲಿಲ್ಲ. ಹಾಗಾದರೆ ಗಿರಾಕಿ ಯಾರು? ಕಾಂಗ್ರೆಸ್ ಸೋಲುವುದನ್ನು ನೋಡಲು ಬಯಸಿದ್ದ ಅಮೆರಿಕದ ಓರ್ವ ಭಾರತೀಯ ವಾಣಿಜ್ಯೋದ್ಯಮಿ ಎಂದು ಆಕೆ ಉತ್ತರಿಸಿದಳು. ಆದರೆ ಆ ಗಿರಾಕಿಯ ಹೆಸರು ಹೇಳಲು ಆಕೆ ನಿರಾಕರಿಸಿದಳು.
ಈ ಮಾಹಿತಿಯೊಂದಿಗೆ ರೈ, ನಿಕ್ಸ್ರವರನ್ನು ತರಾಟೆಗೆ ತೆಗೆದುಕೊಂಡರು. ಕಾಂಗ್ರೆಸ್ನಿಂದ ಹಣ ಪಡೆದು ಅದನ್ನೇ ಸೋಲಿಸಲು ಕೆಲಸ ಮಾಡುವುದು ಅನೈತಿಕ ಎಂದು ಅವರಿಗನ್ನಿಸಿತು.
ತನ್ನ ಮೋಸ ಬಯಲಾದಾಗ ನಿಕ್ಸ್ ಕೊಟ್ಟ ನೇರವಾದ ಉತ್ತರ: ‘‘ನಾನು ಇಲ್ಲಿಗೆ ಬಂದದ್ದು ಹಣ ಮಾಡಲಿಕ್ಕಾಗಿ’’.
ಬ್ರಿಟನಿನ ವಿವಾದಾಸ್ಪದ ರಾಜಕೀಯ ಕನ್ಸಲ್ಟೆನ್ಸಿ ಕೇಂಬ್ರಿಡ್ಜ್ ಅನಲಿಟಿಕಾ, 2010ರಲ್ಲಿ ಬಿಹಾರ್ನ, ಅಸೆಂಬ್ಲಿ ಚುನಾವಣೆಗಳ ಮೇಲೆ ಪ್ರಭಾವ ಬೀರಲು ತಾನು ಕೆಲಸ ಮಾಡಿರುವುದಾಗಿಯೂ ಮತ್ತು ತನ್ನ ಗಿರಾಕಿಗಳು ಚುನಾವಣೆಯಲ್ಲಿ ಭಾರೀ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರೆಂದೂ ತನ್ನ ವೆಬ್ಸೈಟ್ನಲ್ಲಿ ಹೇಳಿಕೊಂಡಿದೆ.
2013ರಲ್ಲಿ ರಚಿಸಲಾದ ಕೇಂಬ್ರಿಜ್ ಅನಲಿಟಿಕಾದ ಮಾತೃಸಂಸ್ಥೆ ಸ್ಟ್ರಾಟೆಜಿಕ್ ಕಮ್ಯುನಿಕೇಶನ್ ಲ್ಯಾಬೊರೇಟರಿಸ್(ಎಸ್ಸಿಎಲ್). ಅದು ಭಾರತದಲ್ಲಿ ಈ ಎಸ್ಸಿಎಲ್ ಮೂಲಕ ಕಾರ್ಯ ವೆಸಗಿದೆ. ಎಸ್ಸಿಎಲ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪೆನಿಯ ದಾಖಲೆಗಳಲ್ಲಿ ನಾಲ್ವರು ನಿರ್ದೇಶಕರಿದ್ದಾರೆ. ಅಲೆಕ್ಸಾಂಡರ್ ಜೇಮ್ಸ್ ಆ್ಯಶ್ಬರ್ನರ್ ನಿಕ್ಸ್, ಅಲೆಕ್ಸಾಂಡರ್ ವ್ಯಾಡಿಂಗ್ಟನ್ ಓಕ್ಸ್, ಅಮರೀಶ್ ಕುಮಾರ್ ತ್ಯಾಗಿ ಮತ್ತು ಅವನೀಶ್ ಕುಮಾರ್ ರೈ. ಮೊದಲ ಇಬ್ಬರು 2005ರಲ್ಲಿ ಬ್ರಿಟನ್ನಲ್ಲಿ ಎಸ್ಸಿಎಲ್ನ ಸಹ-ಸ್ಥಾಪಕರಾದ ಬ್ರಿಟಿಷ್ ನಾಗರಿಕರು; ಅಮರೀಶ್ ತ್ಯಾಗಿ(ಸಂಯುಕ್ತ) ಜನತಾದಳದ ನಾಯಕ ಕೆ.ಸಿ. ತ್ಯಾಗಿಯ ಪುತ್ರ. ಅಮರೀಶ್ ಈಗ ಭಾರತದಲ್ಲಿ ಸಿಎಯ ಜೊತೆ ಕಾರ್ಯ ವೆಸಗುವ ‘ಒವ್ಲಿನೊ ಬಿಸಿನೆಸ್ ಇಂಟಲಿಜೆನ್ಸ್’ ಎಂಬ ಒಂದು ಸಂಸ್ಥೆಯನ್ನು ಕೂಡ ನಡೆಸುತ್ತಿದ್ದಾರೆ.
ಆದರೆ ಎಸ್ಸಿಎಲ್ ಇಂಡಿಯಾದ ನಾಲ್ಕನೇ ನಿರ್ದೇಶಕ ಅವನೀಶ್ ಕುಮಾರ್ ರೈ ಅಂದರೆ ಯಾರು? ಮೂಲತಃ ಬಿಹಾರಿನವರಾದ ರೈ, 1984ರಿಂದ, ಪಕ್ಷಭೇದವಿಲ್ಲದೆ, ರಾಜಕಾರಣಿಗಳಿಗೆ ಓರ್ವ ಚುನಾವಣಾ ಸಲಹೆಗಾರನಾಗಿ ಕಾರ್ಯವೆಸಗುತ್ತಿದ್ದಾರೆ. ಅವರು ಎಷ್ಟರ ಮಟ್ಟಿಗೆ ಎಲೆಮರೆಯ ಕಾಯಿಯಂತಿದ್ದಾರೆ ಎಂದರೆ ಅಂತರ್ಜಾಲದಲ್ಲಿ ಹುಡುಕಿದರೆ ಅಲ್ಲಿ ಅವರ ಬಗ್ಗೆ ನಿಮಗೇನು ಮಾಹಿತಿ ಸಿಗುವುದಿಲ್ಲ. ‘ದಿ ಪ್ರಿಂಟ್’ಗೆ ನೀಡಿದ ಒಂದು ಸಂದರ್ಶನದಲ್ಲಿ ಅವರು ಎಸ್ಸಿಎಲ್ ಇಂಡಿಯಾ ಹೇಗೆ ಆರಂಭವಾಯಿತು? ಅದೇನು ಮಾಡಲು ಪ್ರಯತ್ನಿಸಿತು? ಮತ್ತು ಯಾಕೆ ಅದು ಸೋತಿತು? ಎಂಬ ಬಗ್ಗೆ ವಿವರವಾಗಿ ಹೇಳಿದ್ದಾರೆ.
2009ರ ಒಂದು ರಹಸ್ಯ
2009ರ ಲೋಕಸಭಾ ಚುನಾವಣೆಗಳಲ್ಲಿ, ರೈಯವರು ಬಿಜೆಪಿ ನಾಯಕ(ಹಾಗೂ ಈಗ ಕೇಂದ್ರದಲ್ಲಿ ಸಂಸ್ಕೃತಿ ರಾಜ್ಯ ಸಚಿವ) ಮಹೇಶ್ ಶರ್ಮಾರವರ ಜೊತೆ ಕೆಲಸ ಮಾಡುತ್ತಿದ್ದರು. ಶರ್ಮಾ ಗೌತಮ್ ಬುದ್ಧ್ನಗರ್ ಕ್ಷೇತ್ರದಲ್ಲಿ ಖಂಡಿತವಾಗಿ ಗೆಲ್ಲುತ್ತಾರೆಂದು ರೈಯವರಿಗೆ ಖಾತರಿಯಿತ್ತು. ಆದರೆ, ಶರ್ಮಾ, ಬಿಎಸ್ಪಿಯ ಸುರೇಂದ್ರ ಸಿಂಗ್ ನಗರ್ ವಿರುದ್ಧ 16,000ಕ್ಕೂ ಕಡಿಮೆ ಮತಗಳ ಅಂತರದಿಂದ ಸೋತರು. ಶರ್ಮಾ ಯಾಕೆ ಸೋತರೆಂಬುದು ರೈಗೆ ಒಂದು ರಹಸ್ಯವಾಗಿತ್ತು. ಈ ರಹಸ್ಯದ ಬಗ್ಗೆ ಅವರು ಲಂಡನ್ ಮೂಲದ ತನ್ನ ಒಬ್ಬ ಗೆಳೆಯನಿಗೆ ಹೇಳಿದರು. ಬ್ರಿಟನ್ನಿಂದ ರಾಜಕೀಯ ವರ್ತನೆಯಲ್ಲಿ ಪರಿಣಿತರನ್ನು ಗೌತಮ್ ಬುದ್ಧ್ ನಗರಕ್ಕೆ ಕರೆಸಿ ಈ ರಹಸ್ಯವನ್ನು ಬಿಡಿಸಬೇಕೆಂದು ಆ ಗೆಳೆಯ ಸಲಹೆ ನೀಡಿದರು. ಪರಿಣಾಮವಾಗಿ ರೈ, ಎಸ್ಸಿಎಲ್ಯುಕೆಯಲ್ಲಿ ಚುನಾವಣಾ ಮುಖ್ಯಸ್ಥರಾಗಿರುವ ಡ್ಯಾನ್ ಮ್ಯುರೇಸನ್ರವರನ್ನು ಸಂಪರ್ಕಿಸಿದರು.
ರೊಮೇನಿಯಾದ ಓರ್ವ ಪ್ರಜೆಯಾಗಿರುವ ಮ್ಯುರೇಸನ್ ‘ಬಿಹೇವಿಯರಲ್ ಡೈನಾಮಿಕ್ಸ್ ಇನ್ಸ್ಟಿಟ್ಯೂಟ್’ನ ಇತರ ಮೂವರು ತಜ್ಞರೊಂದಿಗೆ ಭಾರತಕ್ಕೆ ಬಂದರು. ಈ ಸಂಸ್ಥೆಯು 1993ರಲ್ಲಿ ನಿಜಲ್ ಓಕ್ಸ್ರಿಂದ ಸ್ಥಾಪಿಸಲ್ಪಟ್ಟಿತ್ತು. ತರುವಾಯ, ಅಲೆಕ್ಸಾಂಡರ್ ನಿಕ್ಸ್ ಜೊತೆಗೂಡಿ ಓಕ್ಸ್ ಮತ್ತು ಅಲೆಕ್ಸಾಂಡರ್ ಓಕ್ಸ್ ಎಸ್ಸಿಎಲ್ನ ಸಹಸ್ಥಾಪಕರಾದರು.
ಶರ್ಮಾರವರಿಗೆ ತೀರ ಕಡಿಮೆ ಮತಗಳು ದೊರಕಿದ್ದ ಜವಾರ್ ವಿಧಾನಸಭಾ ಪ್ರದೇಶದಲ್ಲಿ ದುಭಾಷಿಗಳ ಮೂಲಕ ಮ್ಯುರೇಸನ್ರವರ ತಂಡ ಮತದಾರರ ಸಂದರ್ಶನಗಳನ್ನು ನಡೆಸಿತ್ತು. ಒಂದು ತಿಂಗಳ ಕಾಲ ನಡೆದ ಸಂದರ್ಶನಗಳ, ಸಂಶೋಧನೆಯ ವೀಡಿಯೋ ಚಿತ್ರೀಕರಣ ನಡೆಸಿ, ಮತದಾರರು ಪ್ರಶ್ನೆಗಳಿಗೆ ಉತ್ತರಿಸುವಾಗಿನ ಅವರ ಮುಖಭಾವಗಳನ್ನು (ಅವರು ಸುಳ್ಳು ಹೇಳುತ್ತಿದ್ದಾರೋ ಎಂಬುದನ್ನು ಕಂಡುಹಿಡಿಯಲು) ವಿಶ್ಲೇಷಣೆಗೊಳಪಡಿಸಲಾಯಿತು. ಮತದಾರರು ಶರ್ಮಾರವರನ್ನು ಓರ್ವ ರಾಜಕಾರಣಿ ಅಥವಾ ಓರ್ವ ವೈದ್ಯನೆಂದು ಕೂಡ ಪರಿಗಣಿಸದೆ, ಕೇವಲ ಓರ್ವ ವಾಣಿಜ್ಯೋದ್ಯಮಿ ಎಂದು ಪರಿಗಣಿಸಿದ್ದರೆಂಬುದು ಈ ಸಂಶೋಧನೆಯಿಂದ ತಿಳಿದುಬಂತು. ಯಾವುದೇ ಅಭಿವೃದ್ಧಿಯ ಕನಸುಗಳನ್ನಾಗಲಿ, ನಿರ್ದಿಷ್ಟ ಆಶ್ವಾಸನೆಗಳನ್ನಾಗಲಿ ನೀಡುವಲ್ಲಿ ಶರ್ಮಾ ವಿಫಲರಾಗಿದ್ದರು.
ಶರ್ಮಾರವರಿಗೆ, ಅವರ ಹಾಗೆಯೇ ಒಬ್ಬ ಬ್ರಾಹ್ಮಣ ಸಹಾಯಕನಿದ್ದ. ಒಂದು ಪ್ರದೇಶದಲ್ಲಿ ಆತನನ್ನು ಕೆಲವು ಬ್ರಾಹ್ಮಣರು ಎಷ್ಟೊಂದು ಇಷ್ಟಪಡುತ್ತಿರಲಿಲ್ಲ ವೆಂದರೆ, ಆತನಿಗೆ ಬುದ್ಧಿ ಕಲಿಸಲು ಅವರು ಬಿಎಸ್ಪಿ ಅಭ್ಯರ್ಥಿಗೆ ಮತ ನೀಡಲು ನಿರ್ಧರಿಸಿದರು. ಬ್ರಾಹ್ಮಣ ಮತದಾರರು ‘‘ಶರ್ಮಾರವರನ್ನು ಖಂಡಿತವಾಗಿಯೂ ಗೆಲ್ಲಿಸುತ್ತೇವೆ’’’ ಎಂದು ಎಷ್ಟೊಂದು ಗದ್ದಲ ಮಾಡಿದ್ದರೆಂದರೆ, ಅದಕ್ಕೆ ಪ್ರತಿಯಾಗಿ ಇತರ ಜಾತಿಗಳ ಮತಗಳು ಧ್ರುವೀ ಕರಣಗೊಂಡವು. ಬಿಜೆಪಿ ಕಾರ್ಯಕರ್ತರು ಪ್ರಚಾರ ಮಾಡಿದ ರೀತಿಯಲ್ಲೂ ದೋಷಗಳು ಕಂಡುಬಂದವು. ಶರ್ಮಾರವರ ಮನೆ-ಮನೆಗೆ ಮಾಡುವ ಪ್ರಚಾರವೂ ದುರ್ಬಲವಾಗಿತ್ತು.
ಲಂಡನ್ ತಂಡದ ವಿಧಾನಗಳಿಂದ ರೈ ತುಂಬ ಪ್ರಭಾವಿತರಾದರು ಮತ್ತು ಭಾರತದಲ್ಲಿ ತಾನು ಇಂತಹ ಇನ್ನಷ್ಟು ಕೆಲಸ ಮಾಡಲು ಉತ್ಸುಕನಾಗಿದ್ದೇನೆಂದು ಮ್ಯುರೇಸನ್ ಹೇಳಿದರು.
ಅಲೆಕ್ಸಾಂಡರ್ ನಿಕ್ಸ್ ಭಾರತಕ್ಕೆ ಬಂದರು
ಒಂದು ದಿನ ಮ್ಯುರೇಸನ್, ಅಲೆಕ್ಸಾಂಡರ್ ನಿಕ್ಸ್ ಜೊತೆ ದಿಲ್ಲಿಗೆ ಬಂದರು. ಒವ್ಲಿನೊ ಬಿಸಿನೆಸ್ ಇಂಟಲಿಜೆನ್ಸ್ನ ಕಚೇರಿಯಲ್ಲಿ ರೈಯವರನ್ನು ಭೇಟಿಯಾದರು. ಅಲ್ಲಿ ತ್ಯಾಗಿ ಕೂಡ ಇದ್ದರು, ಸಂಭಾಷಣೆಯಲ್ಲಿ ಅವರೂ ಒಳಗೊಂಡಿದ್ದರು.
ಹಲವು ರಾಜ್ಯಗಳಲ್ಲಿ ಜನರ ಜಾತಿ, ರಾಜಕೀಯ ಆದ್ಯತೆಗಳು ಇತ್ಯಾದಿಗಳನ್ನೊಳಗೊಂಡ ದತ್ತಾಂಶವೊಂದನ್ನು ಸೃಷ್ಟಿಸುವುದರಲ್ಲಿ ರೈ ಮಗ್ನರಾಗಿದ್ದರೆಂದು ಮ್ಯುರೇಸನ್ಗೆ ತಿಳಿದಿತ್ತು. ಇಂತಹ ದತ್ತಾಂಶವು ಚುನಾವಣೆಯಲ್ಲಿ ಸ್ಪರ್ಧಿಸುವ ಯಾವುದೇ ಅಭ್ಯರ್ಥಿಗೆ ಚಿನ್ನದ ಗಣಿಯೇ ಸರಿ. ಈ ಪ್ರಾಜೆಕ್ಟನ್ನು ವಿಸ್ತರಿಸಿ, 28 ಸ್ಥಾನಗಳಿಗೆ ದತ್ತಾಂಶಗಳನ್ನು ಸೃಷ್ಟಿಸಲು ಮತ್ತು ಅದನ್ನು 2014ರ ಲೋಕಸಭಾ ಚುನಾವಣೆಯಲ್ಲಿ ಪಕ್ಷಗಳಿಗೆ ಮತ್ತು ರಾಜಕಾರಣಿಗಳಿಗೆ ಮಾರಾಟ ಮಾಡಲು ಮ್ಯುರೇಸನ್ ತಂಡ ನಿರ್ಧರಿಸಿತು. ಚುನಾವಣೆಗಳು ನಡೆಯಲು ಆಗ ಇನ್ನೂ ನಾಲ್ಕು ವರ್ಷ ಇತ್ತು. ರೈ, ವಿವಿಧ ಪಕ್ಷಗಳ ಸುಮಾರು 27 ಅಭ್ಯರ್ಥಿಗಳ ಜೊತೆ ಕೆಲಸ ಮಾಡಿ ಈ ದತ್ತಾಂಶ ಸಿದ್ಧಪಡಿಸಿದರು. ಎಸ್ಸಿಎಲ್ನ ಈ ದತ್ತಾಂಶಗಳ ಪವರ್ಪಾಯಿಂಟ್ ಪ್ರಸೆಂಟೇಶನ್ ತನ್ನ ಎಲ್ಲ ಹೆಗ್ಗಳಿಕೆಗಳೊಂದಿಗೆ ತುಂಬ ಪರಿಣಾಮಕಾರಿಯಾಗಿ ಮೂಡಿಬಂತು.
ಗಿರಾಕಿಗಾಗಿ ಹುಡುಕಾಟ
ದತ್ತಾಂಶ ಪ್ರಾಜೆಕ್ಟ್ನ ಕೆಲಸ 2011ರಲ್ಲಿ ಆರಂಭವಾಯಿತು. ನಿಕ್ಸ್, ಮ್ಯುರೇಸನ್ ಮತ್ತು ಅವರ ಸಿಬ್ಬಂದಿ ಲಂಡನ್ನಿಂದ ಆಗಾಗ ಬಂದು ಕ್ಷೇತ್ರ ಕಾರ್ಯ ನಡೆಸಿದರು. ಸಿಬ್ಬಂದಿಗಾಗಿ ಇಂದಿರಾಪುರಂನ ಶಿಪ್ರಾಸನ್ ಸಿಟಿಯಲ್ಲಿ ಮನೆಯೊಂದನ್ನು ಬಾಡಿಗೆಗೆ ಪಡೆಯಲಾಯಿತು.
ರೈ ಹಾಗೂ ತ್ಯಾಗಿಯೊಂದಿಗೆ, ನಿಕ್ಸ್ ಮತ್ತು ಮ್ಯುರೇಸನ್ ರಾಜಕಾರಣಿಗಳನ್ನು ಭೇಟಿಯಾಗಿ, ತಮ್ಮ ಸೇವೆಗಳನ್ನು ಮಾರಾಟ ಮಾಡಲಾರಂಭಿಸಿದರು. ಆ ಸೇವೆಗಳು ಹೀಗಿದ್ದವು:
ನಮ್ಮ ಬಳಿ ಏನಿದೆ?
-ಸ್ಥಳೀಯ ಜ್ಞಾನ ಮತ್ತು ಜಾಗತಿಕ ಪರಿಣತಿ
-ಜಾಗತಿಕ ಕೀರ್ತಿ, ಹಿರಿಮೆ ಮತ್ತು ಅನುಭವ-ವಿಶ್ವಾಸಾರ್ಹತೆ
-ರಾಜಕೀಯ ಬುದ್ಧಿಮತ್ತೆ, ಗುಪ್ತ ಮಾಹಿತಿ ಮತ್ತು ಚುನಾವಣಾ ಆಡಳಿತಕ್ಕೆ ತಂತ್ರಾಂಶ(ಸಾಫ್ಟ್ವೇರ್) - ಸಂಘಟನೆ ಮತ್ತು ಚುನಾವಣಾ ಆಡಳಿತಕ್ಕೆ ಸಂಬಂಧಿಸಿ ಮೊಬೈಲ್ ಫೋನ್ನಲ್ಲಿ ಮಾಹಿತಿಯನ್ನು ಅಪ್ಡೇಟ್ ಮಾಡಲು ಆಂಡ್ರಾಯ್ಡಾ ಅಪ್ಲಿಕೇಶನ್.
-ಭಾರತದಲ್ಲಿ ವರ್ತನೆ ಬದಲಾವಣೆಗೆ ಸಂಬಂಧಿಸಿದ ಸಂವಹನಾ ವಿಧಾನಗಳ ಲಭ್ಯತೆಗೆ ಅವಕಾಶ(ಆಕ್ಸೆಸ್)
-ಸಂಪೂರ್ಣವಾದ ಒಂದು ಪ್ಯಾಕೇಜ್-ಚುನಾವಣಾ ಆಡಳಿತ ಸೇವೆಗಳ ‘ಎ ಟು ಝಡ್’
ಜಾತಿ ಸಂಶೋಧನೆ
-ಮತದಾರರ ಜನಸಂಖ್ಯಾ ಮಾಹಿತಿ ಸಂಗ್ರಹ ಮತ್ತು ವಿಶ್ಲೇಷಣೆ
- ವರ್ತನಾ(ಬಿಹೇವಿಯರಲ್) ಮತದಾನ
-ಮಾಧ್ಯಮಗಳ ಮೇಲೆ ನಿಗಾ
- ಚುನಾವಣಾ ಪ್ರಚಾರ ತಂತ್ರ.... ಇತ್ಯಾದಿ ಇತ್ಯಾದಿ
ರೈ ಹೇಳುವ ಪ್ರಕಾರ, ಸಂಶೋಧಕರ ತಂಡವು ಕಾಂಗ್ರೆಸ್ ಮತ್ತು ಬಿಜೆಪಿ-ಎರಡೂ ಪಕ್ಷಗಳ ರಾಜಕಾರಣಿಗಳನ್ನು ಭೇಟಿ ಮಾಡಿತು. ಕಾಂಗ್ರೆಸ್ ಪಕ್ಷವನ್ನೇ ಒಬ್ಬನಿಗಾಗಿ(ಕ್ಲಯಂಟ್) ಆಗಿ ತೆಗೆದುಕೊಳ್ಳಬೇಕೆಂದು ನಿಕ್ಸ್ ಒತ್ತಾಯಿಸಿದರು. ಯಾಕೆಂದರೆ ಆಗ ಒಂದು ಆಡಳಿತ ಪಕ್ಷವಾಗಿದ್ದ ಕಾರಣ ಅದರ ಬಳಿ ಸಹಜವಾಗಿಯೇ ಹೆಚ್ಚು ಹಣ ಇರುತ್ತದೆ ಎಂದು ನಿಕ್ಸ್ ವಾದಿಸಿದ್ದರು.
ಕಾಂಗ್ರೆಸ್ ನಾಯಕರು, ನಿಕ್ಸ್ ಪ್ಯಾಕೇಜ್ನಲ್ಲಿ ಆಸಕ್ತಿ ತೋರಿಸಿದ ರಾದರೂ, ಯಾವುದೇ ಕೆಲಸವನ್ನು ಅದಕ್ಕೆ ವಹಿಸಿಕೊಡಲಿಲ್ಲ ಅಥವಾ ಯಾವುದೇ ಕರಾರಿಗೆ ಸಹಿ ಹಾಕಲಿಲ್ಲ. ನಿಕ್ಸ್, ಬಿಜೆಪಿಯ ಒಬ್ಬ ಉನ್ನತ ನಾಯಕನನ್ನೂ ಭೇಟಿಯಾದರು; ಆದರೆ, ಆ ನಾಯಕ ಏನೂ ಮಾಡಲಿಲ್ಲ; ಯಾವ ಪ್ರತಿಕ್ರಿಯೆಯನ್ನೂ ತೋರಲಿಲ್ಲ.
ಇಂದಿರಾಪುರಂನಲ್ಲಿ ಕೆಲಸ ಆರಂಭವಾಯಿತು. ಎಸ್ಸಿಎಲ್ಯುಕೆಯ ತಂಡ, 2-3 ತಿಂಗಳ ಕಾಲ, ಭಾರತೀಯ ಕ್ಷೇತ್ರ ಕಾರ್ಯಕರ್ತರಿಗೆ ತರಬೇತಿ ನೀಡಿತು. ಮತದಾರರಿಗೆ ಯಾವ ಯಾವ ಪ್ರಶ್ನೆಗಳನ್ನು ಕೇಳಬೇಕು ಮತ್ತು ಅವರ ಉತ್ತರಗಳನ್ನು ಹೇಗೆ ಮೊಬೈಲ್ ಆ್ಯಪ್ಗೆ ನೇರವಾಗಿ ಫೀಡ್ ಮಾಡಬೇಕು ಎಂದು ಅವರಿಗೆ ಹೇಳಿಕೊಡಲಾಯಿತು.
ಎಲ್ಲವೂ ಅಂದು ಕೊಂಡಂತೆ ನಡೆಯಲಿಲ್ಲ
ಇನ್ಯಾರೋ, ವಿನ್ಯಾಸಗೊಳಿಸಿದ್ದ ಒಂದು ಆ್ಯಪ್ ಇದ್ದ ಅಮೆರಿಕದ ಹೊಸ ಸ್ಮಾರ್ಟ್ಫೋನ್ಗಳನ್ನು ಹಿಡಿದುಕೊಂಡು ಒಂದು ದಿನ ನಿಕ್ಸ್ ಭಾರತ ತಲುಪಿದರು. ಈ ಆಂಡ್ರಾಯ್ಡಾ ಆ್ಯಪ್, ರೈ ವಿನ್ಯಾಸಗೊಳಿಸಿದ್ದ ಆ್ಯಪ್ಗಿಂತ ಅಗ್ಗ ಮತ್ತು ಹೆಚ್ಚು ಉತ್ತಮ ಎಂದು ನಿಕ್ಸ್ ಹೇಳಿದರು.
ಈ ಹೊಸ ಆ್ಯಪ್ ಮೂಲಕ ಕೆಲಸ ಆರಂಭವಾಯಿತು. ಅಂತಿಮವಾಗಿ, ಅಮೇಥಿ ಮತ್ತು ರಾಯ್ಬರೇಲಿ ಕ್ಷೇತ್ರಗಳನ್ನು ಮ್ಯಾಪ್ ಮಾಡಲಾಯಿತು.
ಮೊದಲ ಗಿರಾಕಿ ತಪ್ಪಿಹೋದ
ಒಂದು ದಿನ ಗುಜರಾತ್ ಮೂಲದ ಓರ್ವ ಭಾರತೀಯ - ಅಮೆರಿಕನ್ ಪ್ರಾಜೆಕ್ಟ್ನ ಮೇಲುಸ್ತುವಾರಿ ನೋಡಿಕೊಳ್ಳಲು ಬಂದಳು. ರೆೈಗೆ ಆಕೆಯ ಹೆಸರು ನೆನಪಿಲ್ಲ. ಆದರೆ ಅವರ ಸಂಶೋಧಕರ ತಂಡದಲ್ಲೊಬ್ಬರು ಆಕೆ ಬಿಹೇವಿಯರ್ ಡೈನಾಮಿಕ್ಸ್ ಸಂಸ್ಥೆಯಿಂದ ಬಂದವಳೋ ಅಥವಾ ಎಸ್ಸಿಎಲ್ಯುಕೆಯಿಂದ ಬಂದವಳೋ ಎಂದು ಕೇಳಿದ್ದನ್ನು ಕೇಳಿಸಿಕೊಂಡರು. ಆಕೆ ಆಗ ನೀಡಿದ ಉತ್ತರ: ‘‘ನಾನು ನಿಮ್ಮ ಗಿರಾಕಿಯ ಕಡೆಯವರು’’.
ಮೊದಲ ಗಿರಾಕಿ ತಪ್ಪಿಹೋದದ್ದು ಆವಾಗಲೇ: ಅದಾಗಲೇ ಒಂದು ಗಿರಾಕಿ ಬಂದಾಗಿತ್ತು ಮತ್ತು ಆ ಗಿರಾಕಿ ಕಾಂಗ್ರೆಸ್ ಆಗಿರಲಿಲ್ಲ. ಹಾಗಾದರೆ ಗಿರಾಕಿ ಯಾರು? ಕಾಂಗ್ರೆಸ್ ಸೋಲುವುದನ್ನು ನೋಡಲು ಬಯಸಿದ್ದ ಅಮೆರಿಕದ ಓರ್ವ ಭಾರತೀಯ ವಾಣಿಜ್ಯೋದ್ಯಮಿ ಎಂದು ಆಕೆ ಉತ್ತರಿಸಿದಳು. ಆದರೆ ಆ ಗಿರಾಕಿಯ ಹೆಸರು ಹೇಳಲು ಆಕೆ ನಿರಾಕರಿಸಿದಳು.
ಈ ಮಾಹಿತಿಯೊಂದಿಗೆ ರೈ, ನಿಕ್ಸ್ರವರನ್ನು ತರಾಟೆಗೆ ತೆಗೆದುಕೊಂಡರು. ಕಾಂಗ್ರೆಸ್ನಿಂದ ಹಣ ಪಡೆದು ಅದನ್ನೇ ಸೋಲಿಸಲು ಕೆಲಸ ಮಾಡುವುದು ಅನೈತಿಕ ಎಂದು ಅವರಿಗನ್ನಿಸಿತು.
ತನ್ನ ಮೋಸ ಬಯಲಾದಾಗ ನಿಕ್ಸ್ ಕೊಟ್ಟ ನೇರವಾದ ಉತ್ತರ: ‘‘ನಾನು ಇಲ್ಲಿಗೆ ಬಂದದ್ದು ಹಣ ಮಾಡಲಿಕ್ಕಾಗಿ’’.
ಆ ಪ್ರಾಜೆಕ್ಟ್ನ ಸರ್ವರ್ಗಳು ಅಮೆರಿಕದಲ್ಲಿದ್ದವು. ಸ್ಮಾರ್ಟ್ ಫೋನ್ಗಳಲ್ಲಿದ್ದ ಕಚ್ಚಾ ದತ್ತಾಂಶಗಳನ್ನು ನಿಕ್ಸ್ ಮರಳಿ ಲಂಡನ್ಗೆ ಕೊಂಡೊಯ್ಯ್ಲು ಬಯಸಿದ. ರೈ ಇದಕ್ಕೆ ಸಮ್ಮತಿಸಲಿಲ್ಲ. ಅದೇ ವೇಳೆ ಪ್ರಾಜೆಕ್ಟ್ ತಟಸ್ಥಗೊಂಡಿತು.
ಕೆನ್ಯಾದ ಉಪ ಪ್ರಧಾನಿ ಉಹುರು ಕೆನ್ಯಟಾರ ಚುನಾವಣಾ ಪ್ರಚಾರದ ಕೆಲಸಕ್ಕಾಗಿ ಮ್ಯುರೇಸನ್ ಕೆನ್ಯಾಕ್ಕೆ ಹೋಗಿದ್ದರು. ಎಸ್ಸಿಎಲ್ನ ನೆರವಿನಿಂದಾಗಿ ಕೆನ್ಯಟಾ 2013ರಲ್ಲಿ ಪುನಃ ಪ್ರಧಾನಿಯಾದರು. 2017ರಲ್ಲಿ ಅವರು ಪುನಃ ಆ ಹುದ್ದೆಗೆ ಚುನಾಯಿತರಾದರು.
ಒಂದು ದಿನ ಕೆನ್ಯಾದಿಂದ ಕೆಟ್ಟ ಸುದ್ದಿಯೊಂದು ಬಂತು. ಹೋಟೆಲ್ ಒಂದರ ಕೋಣೆಯೊಂದರಲ್ಲಿ ಮ್ಯುರೇಸನ್ ಶವ ಪತ್ತೆಯಾಯಿತು. ಆತ ಹೃದಯಾಘಾತದಿಂದ ಸತ್ತರೆಂದು ವರದಿಯಾಯಿತು. ಆದರೆ ಅವರನ್ನು ಕೊಲೆ ಮಾಡಲಾಗಿತ್ತು ಎಂದು ಎಸ್ಸಿಎಲ್ಯುಕೆಯ ಸಿಬ್ಬಂದಿ ಮಾತಾಡಿಕೊಳ್ಳುವುದನ್ನು ರೈ ಕೇಳಿಸಿಕೊಂಡರು. ನಿಕ್ಸ್ರ ಹಾಗೆಯೇ ಮ್ಯುರೇಸನ್ ಕೂಡಾ ಎರಡೂ ಕಡೆಯವರಿಂದ ಹಣ ಪಡೆದು ಕೆಲಸ ಮಾಡುತ್ತಿರಬಹುದೆಂದು ರೈಯವರಿಗೆ ಅನ್ನಿಸಿತು.
(ಮ್ಯುರೇಸನ್ ಸಾವಿನ ಬಳಿಕ ಆತನ ಹುದ್ದೆಗೆ ಕ್ರಿಸ್ಟೋಫರ್ ವೈಲಿ ಎಂಬ ಯುವಕ ಬಂದ. ಈತನೇ ಈಗ ಕೇಂಬ್ರಿಡ್ಜ್ ಅನಲಿ ಟಿಕಾ ಮತ್ತು ಫೇಸ್ಬುಕ್ನ ಸುತ್ತ ಇರುವ ವಿವಾದದ ಕೇಂದ್ರ ಬಿಂದುವಾಗಿದ್ದಾನೆ. ವೈಲಿ ಈಗ ವಿಸಲ್ಬ್ಲೋವರ್ ಆಗಿದ್ದಾನೆ ಮತ್ತು ಮ್ಯುರೇಸನ್ ಕೊಲೆಯಾಗಿರಬಹುದು ಎನ್ನುತ್ತಿದ್ದಾನೆ.)
ಅಲ್ಲದೆ ನಿಕ್ಸ್ ತನ್ನ ಗಮನವನ್ನು ಇನ್ನಷ್ಟು ದೊಡ್ಡ ಕುಳಗಳ ಕಡೆಗೆ ಹರಿಸಿ, ಎಸ್ಸಿಎಲ್ನ ಚುನಾವಣಾ ಶಾಖೆಗಳನ್ನು ಕ್ಯಾಂಬ್ರಿಜ್ ಅನಲಟಿಕಾಗೆ ರೂಪಾಂತರಿಸಿ, ಅಮೆರಿಕನ್ ಮಾರುಕಟ್ಟೆಯ ಹುಡುಕಾಟದಲ್ಲಿದ್ದಾರೆ.
ಈ ವೇಳೆಗೆ ರೈಯ ಪ್ರಾಜೆಕ್ಟ್ ಕುಸಿದುಬಿದ್ದಿದೆ. ಭಾರತೀಯ- ಅಮೆರಿಕನ ಗಿರಾಕಿ ಎಸ್ಸಿಎಲ್ನಿಂದ ಹಿಂದೆ ಸರಿದಿದ್ದಾರೆ. ಅವರಿಗೆ ರೈಯಿಂದ ಯಾವುದೇ ದತ್ತಾಂಶ ಸಿಗದಿದ್ದದ್ದೇ ಇದಕ್ಕೆ ಕಾರಣ.
ವೃತ್ತಿಯ ದೃಷ್ಟಿಯಿಂದ ರೈ ಮತ್ತು ತ್ಯಾಗಿ ತಮ್ಮದೇ ಆದ ಬೇರೆ ಬೇರೆ ದಾರಿಯಲ್ಲಿ ಸಾಗಿ ಹೋಗಿದ್ದಾರೆ. ರೈ ಇನ್ನೂ ಮತದಾರರ ಪ್ರೊಫೈಲಿಂಗ್ ಮಾಡುತ್ತಿದ್ದಾರೆ; ತ್ಯಾಗಿ ಮತ್ತು ಅವರ ಒವ್ಲಿನೊ ಬಿಸಿನೆಸ್ ಇಂಟಲಿಜನ್ಸ್, ನಿಕ್ಸ್ ಸಿಎ ಜತೆ ಕೆಲಸ ಮಾಡುವುದನ್ನು ಮುಂದುವರಿಸಿದೆ.
ಕೃಪೆ: theprint.in