ಶಿವಮೊಗ್ಗ: ಬಿಜೆಪಿ ಟಿಕೆಟ್ ಸಿಗದಿದ್ದರೆ 'ಕೈ' ಹಿಡಿಯಲಿದ್ದಾರಾ ಹರತಾಳು ಹಾಲಪ್ಪ?
ನಡೆಯಲಿದೆಯಾ ಕ್ಷಿಪ್ರ ರಾಜಕೀಯ ಬೆಳವಣಿಗೆ?
ಶಿವಮೊಗ್ಗ, ಮಾ. 30: ಜಿಲ್ಲೆಯ ಸಾಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯು ಅಕ್ಷರಶಃ 'ಮ್ಯೂಸಿಕಲ್ ಚೇರ್'ನಂತಾಗಿ ಪರಿಣಮಿಸಿದೆ. ಇಷ್ಟು ದಿನ ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆಂದು ಖಚಿತವಾಗಿ ಹೇಳಲಾಗುತ್ತಿದ್ದ, ಮಾಜಿ ಸಚಿವ ಹರತಾಳು ಹಾಲಪ್ಪಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆಗಳು ಕಂಡುಬರುತ್ತಿವೆ!
ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅಭ್ಯರ್ಥಿಯಾಗುವ ಲಕ್ಷಣಗಳು ದಟ್ಟವಾಗುತ್ತಿದೆ. ಕಮಲ ಪಾಳೇಯದಲ್ಲಿನ ಈ ಹೊಸ ಬೆಳವಣಿಗೆಯು ಸಾಕಷ್ಟು ಕುತೂಹಲ ಕೆರಳುವಂತೆ ಮಾಡಿದೆ. ಸಾಗರ, ಸೊರಬ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ. ಭಿನ್ನಮತ ಭುಗಿಲೇಳುವ ಲಕ್ಷಣಗಳು ಗೋಚರವಾಗುತ್ತಿವೆ.
ದಿಗ್ಭ್ರಮೆ: ಸಾಗರ ಕ್ಷೇತ್ರದ ಟಿಕೆಟ್ ಕೈ ತಪ್ಪಲಿದೆ ಎಂಬ ಸುದ್ದಿಯು, ಸ್ವತಃ ಟಿಕೆಟ್ ಆಕಾಂಕ್ಷಿ ಹರತಾಳು ಹಾಲಪ್ಪ ಮತ್ತವರ ಬೆಂಬಲಿಗರಿಗೆ ಬರ ಸಿಡಿಲು ಬಡಿದಂತಾಗಿದೆ. ಶತಾಯಗತಾಯ ಚುನಾವಣಾ ಅಖಾಡಕ್ಕಿಳಿಯಲು ನಿರ್ಧರಿಸಿರುವ ಹರತಾಳು ಹಾಲಪ್ಪ, ಒಂದು ವೇಳೆ ಬಿಜೆಪಿ ಪಕ್ಷ ಟಿಕೆಟ್ ನೀಡಲು ನಿರಾಕರಿಸಿದರೆ ಬಂಡೇಳುವ ಇಲ್ಲವೇ ಪಕ್ಷಾಂತರವಾಗಲಿದ್ದಾರೆಂಬ ಮಾತುಗಳು ಅವರ ಆಪ್ತ ಮೂಲಗಳಿಂದ ಕೇಳಿಬರುತ್ತಿವೆ. ಇನ್ನೊಂದೆಡೆ ಸಾಗರ - ಸೊರಬ ಬಿಜೆಪಿಯಲ್ಲಿ ಪ್ರಸ್ತುತ ನಡೆಯುತ್ತಿರುವ ವಿದ್ಯಮಾನಗಳನ್ನು ಕಾಂಗ್ರೆಸ್ ಪಕ್ಷ ಸೂಕ್ಷ್ಮವಾಗಿ ಗಮನಿಸುತ್ತಿದೆ. ಒಂದು ವೇಳೆ ಹಾಲಪ್ಪಗೆ ಬಿಜೆಪಿ ಟಿಕೆಟ್ ನೀಡದಿದ್ದರೆ ಅವರನ್ನು ಪಕ್ಷಕ್ಕೆ ಸೆಳೆದು ಸೊರಬ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಗಂಭೀರ ಚಿಂತನೆ 'ಕೈ' ಪಾಳೇಯದಲ್ಲಿ ನಡೆಯುತ್ತಿದೆ.
ಟಿಕೆಟ್ ಆಫರ್: ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಂತದಲ್ಲಿಯೂ ಈ ವಿಚಾರ ಚರ್ಚೆಯಾಗಿದೆ. ಹಾಲಪ್ಪ ಸೊರಬದ ಅಭ್ಯರ್ಥಿಯಾದರೆ ಕಾಂಗ್ರೆಸ್‍ಗೆ ಸಹಕಾರಿಯಾಗಲಿದೆ. ಹಾಗೆಯೇ ಸಾಗರ, ತೀರ್ಥಹಳ್ಳಿ ಕ್ಷೇತ್ರದಲ್ಲಿಯೂ ಪಕ್ಷಕ್ಕೆ ಅನುಕೂಲವಾಗಲಿದೆ ಎಂಬ ಅಭಿಪ್ರಾಯವನ್ನು ಸಿಎಂ ಗಮನಕ್ಕೆ ಆ ಪಕ್ಷದ ನಾಯಕರು ತಂದಿದ್ದಾರೆ ಎನ್ನಲಾಗಿದೆ. ಈ ಕಾರಣದಿಂದ, ಹಾಲಪ್ಪ ಸ್ಪರ್ಧೆಗೆ ಸಿಎಂ ಕೂಡ ಗ್ರೀನ್ ಸಿಗ್ನಲ್ ನೀಡಿದ್ದಾರೆಂದು ಹೇಳಲಾಗುತ್ತಿದೆ. ಆದರೆ ಹಾಲಪ್ಪ ಕಡೆಯಿಂದ ಸ್ಪಷ್ಟ ಸಂದೇಶಗಳು ಕಾಂಗ್ರೆಸ್ ಪಾಳೇಯಕ್ಕೆ ಲಭ್ಯವಾಗಿಲ್ಲ. ಈ ಕಾರಣದಿಂದ ಕಾಂಗ್ರೆಸ್ ಮುಖಂಡರು ಹಾಲಪ್ಪ ಕೈಗೊಳ್ಳುವ ನಿರ್ಧಾರಕ್ಕೆ ಕಾದು ಕುಳಿತುಕೊಂಡಿದ್ದಾರೆಂಬ ಮಾಹಿತಿಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ.
ಪಟ್ಟು: 'ಸಾಗರ ಅಥವಾ ಸೊರಬ ಕ್ಷೇತ್ರಗಳಲ್ಲಿ ಹಾಲಪ್ಪರವರು ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ವರಿಷ್ಠರ ಸೂಚನೆಯಂತೆ ಸಾಗರ ಕ್ಷೇತ್ರದಲ್ಲಿ ಓಡಾಡಿಕೊಂಡಿದ್ದಾರೆ. ಟಿಕೆಟ್ ಸಿಗುವ ನಿರೀಕ್ಷೆಯಿದೆ. ಒಂದು ವೇಳೆ ಅವರಿಗೆ ಬಿಜೆಪಿ ಟಿಕೆಟ್ ಕೈ ತಪ್ಪಿದರೆ ಅವರು ಸೊರಬ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ನಿಶ್ಚಿತ. ಇದರಲ್ಲಿ ಯಾವುದೇ ಅನುಮಾನ ಇಲ್ಲ. ಕಾದು ನೋಡಿ ಎಲ್ಲವೂ ಗೊತ್ತಾಗುತ್ತದೆ' ಎಂದು ಹೆಸರೇಳಲಿಚ್ಚಿಸದ ಹಾಲಪ್ಪ ಆಪ್ತರೊಬ್ಬರು ಸ್ಪಷ್ಟಪಡಿಸುತ್ತಾರೆ.
ಬಿಗಿಪಟ್ಟು: ಸಾಗರ ಕ್ಷೇತ್ರದಲ್ಲಿ ಬೇಳೂರು ಗೋಪಾಲಕೃಷ್ಣರವರು ಟಿಕೆಟ್‍ಗೆ ಬಿಗಿಪಟ್ಟು ಹಿಡಿದಿದ್ದಾರೆ. ಹಾಲಪ್ಪರಿಗೆ ಟಿಕೆಟ್ ನೀಡಲು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಸಾಗರದಿಂದ ಚುನಾವಣಾ ಕಣಕ್ಕಿಳಿಯುವುದು ನಿಶ್ಚಿತ ಎಂದು ಪಕ್ಷದ ವರಿಷ್ಠರಿಗೆ ಹೇಳಿದ್ದಾರೆ. ಮತ್ತೊಂದೆಡೆ ಏಳರಲ್ಲಿ ಆರು ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಿಸಿ, ಸಾಗರ ಕ್ಷೇತ್ರಕ್ಕೆ ಮಾತ್ರ ಅಭ್ಯರ್ಥಿ ಘೋಷಿಸದೆ ಜೆಡಿಎಸ್ ಪಕ್ಷ ತಂತ್ರಗಾರಿಕೆ ನಡೆಸುತ್ತಿದೆ. ಬಿಜೆಪಿಯಲ್ಲಿನ ಬೆಳವಣಿಗೆ ಗಮನಿಸಿ ಟಿಕೆಟ್ ಘೋಷಿಸಲು ಜೆಡಿಎಸ್ ನಿರ್ಧರಿಸಿದೆ. ಲಭ್ಯ ಮಾಹಿತಿಯ ಪ್ರಕಾರ, ಬೇಳೂರಿಗೆ ಟಿಕೆಟ್ ಕೈ ತಪ್ಪಿದರೆ ಅವರನ್ನು ಪಕ್ಷಕ್ಕೆ ಸೆಳೆದು ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಇರಾದೆ ಜೆಡಿಎಸ್‍ನದ್ದಾಗಿದೆ. ಈ ಮಾಹಿತಿ ಅರಿತಿರುವ ಬಿಜೆಪಿ ವರಿಷ್ಠರು ಸಾಗರ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರವನ್ನು ಪಕ್ಷದ ವರಿಷ್ಠರ ಹೆಗಲಿಗೆ ಬಿಟ್ಟಿದ್ದಾರೆ.
ಸರ್ವೇ ಮಾಹಿತಿ: ಬಹುತೇಕ ಹಾಲಪ್ಪ ಸಾಗರದ ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆಂಬ ಮಾಹಿತಿ ಇತ್ತೀಚಿನವರೆಗೂ ಕೇಳಿಬರುತ್ತಿತ್ತು. ಇದೀಗ ಬೇಳೂರು ಗೋಪಾಲಕೃಷ್ಣ ಹೆಸರು ಕೇಳಬರತೊಡಗಿದೆ. ಸಾಗರ ಕ್ಷೇತ್ರದಲ್ಲಿ ಬಿಜೆಪಿ ನಡೆಸಿದ ಆಂತರಿಕ ಗುಪ್ತ ಸಮೀಕ್ಷೆಯಲ್ಲಿ ಬೇಳೂರು ಹೆಸರು ಮುಂಚೂಣಿಯಲ್ಲಿದೆ ಎಂಬ ಕಾರಣದಿಂದ, ಹಾಲಪ್ಪರಿಗೆ ಟಿಕೆಟ್ ನೀಡುವ ನಿರ್ಧಾರದಿಂದ ಬಿಜೆಪಿ ಮುಖಂಡರು ಹಿಂದೆ ಸರಿದಿದ್ದಾರೆ ಎಂದು ಹೇಳಲಾಗುತ್ತಿದೆ.
ಅತಂತ್ರ ಸ್ಥಿತಿಯಲ್ಲಿ ಹಾಲಪ್ಪ!
ಸೊರಬ ಕ್ಷೇತ್ರದಿಂದ ಕಣಕ್ಕಿಳಿಯಲು ಕಳೆದ ಹಲವು ವರ್ಷಗಳಿಂದ ಹರತಾಳು ಹಾಲಪ್ಪ ಸಾಕಷ್ಟು ಸಿದ್ದತೆ ಮಾಡಿಕೊಂಡು ಬಂದಿದ್ದರು. ಆದರೆ ಬದಲಾದ ರಾಜಕಾಕೀಯ ಬೆಳವಣಿಗೆಯಲ್ಲಿ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು. ಈ ವೇಳೆ ಅವರಿಗೆ ಸೊರಬ ಕ್ಷೇತ್ರದ ಟಿಕೆಟ್ ಭರವಸೆ ನೀಡಲಾಗಿತ್ತು. ಆ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಹರತಾಳು ಹಾಲಪ್ಪರನ್ನು ಸಾಗರದಿಂದ ಕಣಕ್ಕಿಳಿಸುವ ನಿರ್ಧಾರವನ್ನು ಬಿಜೆಪಿ ವರಿಷ್ಠರು ಮಾಡಿದ್ದರು. ಈ ಕಾರಣದಿಂದ ಹರತಾಳು ಹಾಲಪ್ಪರವರು ಒಲ್ಲದ ಮನಸ್ಸಿನಿಂದಲೇ ಸೊರಬ ಕ್ಷೇತ್ರ ತೊರೆಯುವ ನಿರ್ಧಾರ ಮಾಡಿದ್ದರು. ಕಳೆದ ಹಲವು ತಿಂಗಳಿನಿಂದ ಸಾಗರ ಕ್ಷೇತ್ರದಲ್ಲಿ ಬಿರುಸಿನ ಸಂಚಾರ ನಡೆಸುತ್ತಿದ್ದಾರೆ. ಇದೀಗ ಸಾಗರ ಕ್ಷೇತ್ರದಲ್ಲಿಯೂ ಅವರಿಗೆ ಟಿಕೆಟ್ ಖಚಿತವಿಲ್ಲದಂತಾಗಿದೆ. ಇದರಿಂದ ಹಾಲಪ್ಪರವರ ಸ್ಥಿತಿ ಅಕ್ಷರಶಃ ಅತಂತ್ರವಾಗಿದೆ. ನಾಯಕರು ಕೊಟ್ಟ ಮಾತಿನಂತೆ ಟಿಕೆಟ್ ನೀಡಬೇಕು. ನಂಬಿಕೆ ಉಳಿಸಿಕೊಳ್ಳಬೇಕು ಎಂದು ಅವರ ಬೆಂಬಲಿಗರು ಒತ್ತಾಯಿಸುವಂತಾಗಿದೆ.
ಟಿಕೆಟ್ ಭರವಸೆಯಿತ್ತಿದ್ದ ಬಿಎಸ್‍ವೈ...
ಕಳೆದ ತಿಂಗಳು ಶಿವಮೊಗ್ಗ ನಗರದ ಅಂಚೆ ಕಚೇರಿಯಲ್ಲಿ ನಡೆದ ಪಾಸ್‍ಪೋರ್ಟ್ ಸೇವಾ ಕೇಂದ್ರ ಕಚೇರಿ ಉದ್ಘಾಟನಾ ಸಮಾರಂಭದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಬಿ.ಎಸ್.ಯಡಿಯೂರಪ್ಪರವರು, ಸಾಗರದಿಂದ ಹರತಾಳು ಹಾಲಪ್ಪ ಹಾಗೂ ಸೊರಬದಿಂದ ಕುಮಾರ್ ಬಂಗಾರಪ್ಪ ಅಭ್ಯರ್ಥಿಯಾಗಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದರು. ಇದು ಬೇಳೂರು ಗೋಪಾಲಕೃಷ್ಣರಲ್ಲಿ ಅಸಮಾಧಾನ ಉಂಟು ಮಾಡಿದ್ದರೂ, ವ್ಯತಿರಿಕ್ತ ಹೇಳಿಕೆ ನೀಡಿರಲಿಲ್ಲ. 'ಪಕ್ಷದ ವರಿಷ್ಠರು ಸರ್ವೇ ಮೂಲಕ ಅಭ್ಯರ್ಥಿ ಆಯ್ಕೆ ನಡೆಸಲಿದ್ದಾರೆ. ಸರ್ವೇಯಲ್ಲಿ ನಮ್ಮ ಹೆಸರೇ ಮುಂಚೂಣಿಯಲ್ಲಿ ಬರಲಿದೆ. ವರಿಷ್ಠರ ನಿರ್ಧಾರವನ್ನು ಕಾದು ನೋಡುವುದಾಗಿ' ತಿಳಿಸಿದ್ದರು. ಈ ನಡುವೆ ಪಕ್ಷದ ವರಿಷ್ಠರು ಯಾವುದೇ ಕ್ಷೇತ್ರದಲ್ಲಿಯೂ ಟಿಕೆಟ್ ಘೋಷಣೆ ಮಾಡದಂತೆ ಬಿಎಸ್‍ವೈಗೆ ತಾಕೀತು ಮಾಡಿದ್ದರು. ಈ ಕಾರಣದಿಂದ ಬಿಎಸ್‍ವೈರವರು ಕೂಡ ಈ ವಿಷಯದಲ್ಲಿ ಮೌನಕ್ಕೆ ಶರಣಾಗುವಂತಾಗಿತ್ತು.
ರಾಹುಲ್ ಗಾಂಧಿ ಯಾತ್ರೆಯತ್ತ ಕಣ್ಣು!
ಬಿಜೆಪಿ ವರಿಷ್ಠರಿಂದ ಟಿಕೆಟ್‍ಗೆ ಖಚಿತ ಭರವಸೆ ದೊರಕದಿದ್ದರೆ, ಏಪ್ರಿಲ್ 3 ರಂದು ಶಿವಮೊಗ್ಗಕ್ಕೆ ಆಗಮಿಸುತ್ತಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ಸಮ್ಮುಖದಲ್ಲಿ ಹರತಾಳು ಹಾಲಪ್ಪರವರು ವಿಧ್ಯುಕ್ತವಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಲಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ. ಹಾಲಪ್ಪರವರು ಕಾಂಗ್ರೆಸ್ ಪಕ್ಷ ಸೇರ್ಪಡೆಯ ಕುರಿತಂತೆ ಸಾಮಾಜಿಕ ಸಂಪರ್ಕ ಜಾಲತಾಣಗಳಲ್ಲಿ ಬಿಸಿ ಬಿಸಿ ಚರ್ಚೆಯೂ ಆಗುತ್ತಿದ್ದು, ಶಿವಮೊಗ್ಗದಲ್ಲಿ ರಾಹುಲ್ ಗಾಂಧಿ ನಡೆಸುತ್ತಿರುವ ರೋಡ್ ಶೋ ಹಾಗೂ ಬಹಿರಂಗ ಸಭೆಯು ಸಾಕಷ್ಟು ಕುತೂಹಲ ಕೆರಳುವಂತೆ ಮಾಡಿದೆ.