ಬಿಜೆಪಿಗೆ ಬಿಸಿ ತುಪ್ಪವಾದ 'ಸ್ನೇಹಿತರು'!
ತಾರಕಕ್ಕೇರಿದ ಹರತಾಳು ಹಾಲಪ್ಪ - ಬೇಳೂರು ಗೋಪಾಲಕೃಷ್ಣ ನಡುವಿನ ಟಿಕೆಟ್ ಫೈಟ್
ಶಿವಮೊಗ್ಗ, ಮಾ. 31: ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಟಿಕೆಟ್ ಪಾಲಿಟಿಕ್ಸ್ ಕ್ಲೈಮಾಕ್ಸ್ ಹಂತಕ್ಕೆ ಬರುತ್ತಿದ್ದಂತೆ, ಇದೀಗ ಸಾಗರ ಕ್ಷೇತ್ರದ ಬಿಜೆಪಿ ಟಿಕೆಟ್ ರಾಜಕಾರಣ ತೀವ್ರಗೊಂಡಿದೆ. ಒಂದಾನೊಂದು ಕಾಲದ ಸ್ನೇಹಿತರಾದ ಮಾಜಿ ಸಚಿವ ಹರತಾಳು ಹಾಲಪ್ಪ ಹಾಗೂ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ನಡುವಿನ 'ಟಿಕೆಟ್ ಫೈಟ್', ಬಿಜೆಪಿ ವರಿಷ್ಠರಿಗೆ ಅಕ್ಷರಶಃ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಇವರಿಬ್ಬರ ನಡುವಿನ ಟಿಕೆಟ್ ಕಲಹದಿಂದ, ಜಿಲ್ಲಾ ಬಿಜೆಪಿಯಲ್ಲಿ ಮತ್ತೊಮ್ಮೆ ಭಿನ್ನಮತ ಭುಗಿಲೇಳುವ ಲಕ್ಷಣಗಳು ಗೋಚರವಾಗಲಾರಂಭಿಸಿದೆ. ಇದಕ್ಕೆ ಇಂಬು ನೀಡುವಂತೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ಹಿನ್ನೆಲೆಯಲ್ಲಿ, ಹಾಲಪ್ಪರವರು ಪಕ್ಷ ತೊರೆಯುವ ಗಂಭೀರ ಚಿಂತನೆ ನಡೆಸಲಾರಂಭಿಸಿದ್ದಾರೆ. ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿ ಸೊರಬ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ.
ಈ ದಿಢೀರ್ ವಿದ್ಯಮಾನವು ಬಿಜೆಪಿ ಪಾಳೆಯವನ್ನು ತಲ್ಲಣಗೊಳ್ಳುವಂತೆ ಮಾಡಿದೆ. ಚುನಾವಣಾ ಹೊಸ್ತಿಲಲ್ಲಿ ಹಾಲಪ್ಪ ಪಕ್ಷ ತೊರೆದರೆ ಪಕ್ಷಕ್ಕೆ ತೊಂದರೆ ಕಟ್ಟಿಟ್ಟ ಬುತ್ತಿ ಎಂಬುವುದನ್ನರಿತಿರುವ ಆ ಪಕ್ಷದ ಮುಖಂಡರೀಗ, ವೈಮನಸ್ಸು ಶಮನಕ್ಕೆ ಮುಂದಾಗಿದ್ದಾರೆ. ಹಾಲಪ್ಪರ ಮನವೊಲಿಕೆಗೆ ತೀವ್ರ ಕಸರತ್ತು ನಡೆಸಲಾರಂಭಿಸಿದ್ದಾರೆ.
ಟಿಕೆಟ್ ಕೈ ತಪ್ಪಿ ಹೋಗುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಹಾಲಪ್ಪರವರು, ಇನ್ನು ಮುಂದೆ ಸುಮ್ಮನಿರುವ ಪ್ರಶ್ನೆಯೇ ಇಲ್ಲ. ಸುಮ್ಮನಿರುತ್ತೇನೆಂಬ ಕಾರಣದಿಂದಲೇ ಹಿಂಗೆಲ್ಲ ಆಗುತ್ತಿದೆ ಎಂದು ಪಕ್ಷದ ವರಿಷ್ಠರಿಗೆ ಸ್ಪಷ್ಟಪಡಿಸಿದ್ದಾರೆ. ಟಿಕೆಟ್ ಕೈ ತಪ್ಪಿದರೆ ಪಕ್ಷಾಂತರ ಮಾಡುವ ಪರೋಕ್ಷ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಎಂದಿನಂತೆ ಬೇಳೂರು ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಮತ್ತೊಂದೆಡೆ ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಟಿಕೆಟ್ ರೇಸ್‍ನಲ್ಲಿರುವ ಬೇಳೂರು ಗೋಪಾಲಕೃಷ್ಣ, 'ನಾನೇ ಸಾಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ. ಪಕ್ಷದ ಆಂತರಿಕ ಸಮೀಕ್ಷೆಯಲ್ಲಿ ತಮ್ಮ ಹೆಸರು ಮುಂಚೂಣಿಯಲ್ಲಿದೆ. ಈ ಕಾರಣದಿಂದ ಪಕ್ಷದ ವರಿಷ್ಠರು ತಮಗೆ ಟಿಕೆಟ್ ನೀಡಲು ನಿರ್ಧರಿಸಿದ್ದಾರೆ. ವಿಧಾನ ಪರಿಷತ್‍ಗೆ ಆಯ್ಕೆಯಾಗುವ ಪ್ರಶ್ನೆಯೇ ಇಲ್ಲ. ಹಿಂಬಾಗಿಲ ರಾಜಕಾರಣ ಮಾಡುವುದಿಲ್ಲ' ಎಂದು ಹೇಳಿದ್ದಾರೆ. ಹಾಲಪ್ಪರವರ ಟೀಕಾಪ್ರಹಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
'ಸ್ನೇಹಿತರ' ನಡುವೆ ನಡೆಯುತ್ತಿರುವ ಟಿಕೆಟ್ ಫೈಟ್ ನಡುವೆ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪರವರು ಶಿಕಾರಿಪುರದಲ್ಲಿ ಮಾತನಾಡಿ, ಸಾಗರ ಕ್ಷೇತ್ರದ ಟಿಕೆಟ್ ಏನೀದ್ದರೂ ಹರತಾಳು ಹಾಲಪ್ಪಗೆ ಎಂಬ ಸುಳಿವು ನೀಡಿದ್ದಾರೆ. ಬೇಳೂರು ಗೋಪಾಲಕೃಷ್ಣರನ್ನು ವಿಧಾನ ಪರಿಷತ್‍ಗೆ ಆಯ್ಕೆ ಮಾಡಿ ಕಳುಹಿಸಲಾಗುವುದು ಎಂದು ಹೇಳುವ ಮೂಲಕ ಈ ಪ್ರಕರಣಕ್ಕೆ ಹೊಸ ಟ್ವಿಸ್ಟ್ ನೀಡಿದ್ದಾರೆ.
ಮಾಜಿ ಸಚಿವ ಕುಮಾರ್ ಬಂಗಾರಪ್ಪ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದ ನಂತರ ಸಾಗರ ಹಾಗೂ ಸೊರಬ ಕ್ಷೇತ್ರಗಳೆರೆಡರಲ್ಲಿಯೂ ಕಣಕ್ಕಿಳಿಯುವ ಬಿಜೆಪಿ ಅಭ್ಯರ್ಥಿಗಳ ಕುರಿತಂತೆ ಸಾಕಷ್ಟು ಕುತೂಹಲ ಮನೆ ಮಾಡಿತ್ತು. ಕುಮಾರ್ ಬಂಗಾರಪ್ಪಗೆ ಸೊರಬದಿಂದ ಟಿಕೆಟ್ ನೀಡಲು ನಿರ್ಧರಿಸಿದ್ದ ಬಿಜೆಪಿ ವರಿಷ್ಠರು, ಆ ಕ್ಷೇತ್ರದ ಟಿಕೆಟ್ ನಿರೀಕ್ಷೆಯಲ್ಲಿದ್ದ ಹಾಲಪ್ಪಗೆ ಸಾಗರ ವಿಧಾನಸಭಾ ಕ್ಷೇತ್ರದ ಟಿಕೆಟ್ ನೀಡುವ ತೀರ್ಮಾನ ಮಾಡಿದ್ದರು.
ಸಾಗರದಿಂದ ಹಾಲಪ್ಪಗೆ ಟಿಕೆಟ್ ನೀಡಲು ಮುಂದಾಗಿದ್ದ ವರಿಷ್ಠರ ನಿರ್ಧಾರಕ್ಕೆ ಆ ಕ್ಷೇತ್ರದ ಸ್ಪರ್ಧಾಕಾಂಕ್ಷಿ ಬೇಳೂರು ಅಸಮಾಧಾನಗೊಂಡಿದ್ದರು. ಹಾಲಪ್ಪರನ್ನು ಕಣಕ್ಕಿಳಿಸುವುದಕ್ಕೆ ಹಲವು ಬಾರಿ ಬಹಿರಂಗವಾಗಿಯೇ ಆಕ್ಷೇಪ ವ್ಯಕ್ತಪಡಿಸಿದ್ದರು. ತಾವು ಚುನಾವಣಾ ಕಣಕ್ಕಿಳಿಯುವುದು ಖಚಿತ ಎಂದು ಸ್ಪಷ್ಟಪಡಿಸಿದ್ದರು.
ಈ ನಡುವೆ ಜೆಡಿಎಸ್ ಪಕ್ಷವು ಜಿಲ್ಲೆಯ ಸಾಗರ ಹೊರತುಪಡಿಸಿ ಉಳಿದ ಆರು ಕ್ಷೇತ್ರಗಳಲ್ಲಿ ಅಭ್ಯರ್ಥಿ ಘೋಷಿಸಿತ್ತು. ಬಿಜೆಪಿ ಟಿಕೆಟ್ ಘೋಷಣೆ ನಂತರ ಸಾಗರ ಅಭ್ಯರ್ಥಿ ಆಯ್ಕೆ ನಡೆಸಲು ಮುಂದಾಗಿತ್ತು.
ಇತ್ತೀಚೆಗೆ ಸಾಗರದಿಂದ ಹಾಲಪ್ಪಗೆ ಟಿಕೆಟ್ ನೀಡಲಾಗುವುದು ಎಂದು ಬಿ.ಎಸ್.ಯಡಿಯೂರಪ್ಪ ಬಹಿರಂಗವಾಗಿ ಹೇಳಿದ್ದರು. ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಮತ್ತೊಂದೆಡೆ ವರಿಷ್ಠರು ಯಾವ ಕ್ಷೇತ್ರಕ್ಕೂ ರಾಜ್ಯ ನಾಯಕರು ಅಭ್ಯರ್ಥಿ ಘೋಷಿಸಬಾರದು ಎಂದು ಫರ್ಮಾನು ಹೊರಡಿಸಿದ್ದರು. ಸರ್ವೇ ಮೂಲಕ ಅಭ್ಯರ್ಥಿ ಆಯ್ಕೆ ನಡೆಸುವುದಾಗಿ ತಿಳಿಸಿದ್ದರು.
ಸರ್ವೇಯಲ್ಲಿ ಬೇಳೂರು ಹೆಸರು ಮುಂಚೂಣಿಗೆ ಬಂದಿರುವ ಕಾರಣದಿಂದ ಅವರಿಗೆ ಟಿಕೆಟ್ ಸಿಗುವ ಮಾತುಗಳು ಕೇಳಿಬಂದಿದ್ದವು. ಟಿಕೆಟ್ ನಿರೀಕ್ಷೆಯಲ್ಲಿದ್ದ ಹರತಾಳು ಹಾಲಪ್ಪಗೆ ಈ ಬೆಳವಣಿಗೆಯು ಕಂಗಲಾಗುವಂತೆ ಮಾಡಿತ್ತು. ಇದೀಗ ಅವರು ಕೂಡ ಬೇಳೂರು ಹಾದಿ ತುಳಿದಿದ್ದಾರೆ. ತಮಗೇನಾದರೂ ಟಿಕೆಟ್ ಸಿಗದಿದ್ದರೆ ಕಾಂಗ್ರೆಸ್ ಸೇರ್ಪಡೆಯಾಗಿ, ಸೊರಬ ಕ್ಷೇತ್ರದಿಂದ ಕಣಕ್ಕಿಳಿಯುವ ಪರೋಕ್ಷ ಎಚ್ಚರಿಕೆ ನೀಡಲಾರಂಭಿಸಿದ್ದಾರೆ.
ಒಟ್ಟಾರೆ ಸಾಗರ ಕ್ಷೇತ್ರದಲ್ಲಿ ಹಾಲಪ್ಪ ಹಾಗೂ ಬೇಳೂರು ನಡುವೆ ಟಿಕೆಟ್ ಏರ್ಪಟ್ಟಿರುವ ಪೈಪೋಟಿಯು ಬಿಜೆಪಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಯಾರಿಗೆ ಟಿಕೆಟ್ ನೀಡಿದರೂ ಬಂಡಾಯ ಎದುರಿಸುವಂತಾಗಿದೆ. ಮುಂದೆ ಈ ಫೈಟ್ ಇನ್ಯಾವ ತಿರುವು ಪಡೆದುಕೊಳ್ಳಲಿದೆ ಎಂಬುವುದನ್ನು ಇನ್ನಷ್ಟೆ ಕಾದು ನೋಡಬೇಕಾಗಿದೆ.
ಸುಮ್ಮನಿರುವ ಪ್ರಶ್ನೆಯೇ ಇಲ್ಲ : ಹರತಾಳು ಹಾಲಪ್ಪ
ನನಗೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಸಿಗುವ ನಿರೀಕ್ಷೆಯಿದೆ. ಅದು ನಿಜವಾಗುತ್ತೊ ಇಲ್ಲವೋ ಗೊತ್ತಿಲ್ಲ. ಬಿಜೆಪಿ ಪಕ್ಷ, ನಾಯಕರು, ಆರೆಸ್ಸೆಸ್ ಗೆ ಬೈದವರಿಗೂ ಟಿಕೆಟ್ ನೀಡಲಾಗುತ್ತಿದೆ. ಏನೇ ಆಗಲಿ ನಾನಿನ್ನೂ ಸುಮ್ಮನೆ ಕೂರುವ ಪ್ರಶ್ನೆಯೇ ಇಲ್ಲ. ನಾವು ಸುಮ್ಮನಿರುತ್ತೆವೆ ಅಂದಿದ್ದಕ್ಕೆ ಹಿಂಗೆ ಮಾಡಿದ್ರು,. ಪಕ್ಷದ ವರಿಷ್ಠರು ಕೈಗೊಳ್ಳುವ ನಿರ್ಧಾರವನ್ನು ಕಾದು ನೋಡುತ್ತೇನೆ ಎಂದು ಮಾಜಿ ಸಚಿವ ಹರತಾಳು ಹಾಲಪ್ಪರವರು ಸ್ಪಷ್ಟಪಡಿಸಿದ್ದಾರೆ.
ಎಂಎಲ್‍ಸಿಯಾಗುವುದಿಲ್ಲ : ಬೇಳೂರು ಗೋಪಾಲಕೃಷ್ಣ
ಯಾವುದೇ ಕಾರಣಕ್ಕೂ ನಾನು ಹಿಂಬಾಗಿಲಿನಿಂದ ಅಧಿಕಾರ ಪಡೆಯಲು ಸಿದ್ದನಿಲ್ಲ. ಆ ರೀತಿ ರಾಜಕಾರಣವೂ ಮಾಡುವುದಿಲ್ಲ. ಪಕ್ಷದ ಆಂತರಿಕ ಸಮೀಕ್ಷೆ ನನ್ನ ಪರವಾಗಿದೆ. ಇದನ್ನು ಪರಿಗಣಿಸಿ ಪಕ್ಷದ ವರಿಷ್ಠರು ಈ ಬಾರಿಯ ಚುನಾವಣೆಯಲ್ಲಿ ಸಾಗರ ಕ್ಷೇತ್ರದಿಂದ ಸ್ಪರ್ಧಿಸಲು ನನಗೆ ಅವಕಾಶ ನೀಡುತ್ತಾರೆ. ಹಾಲಪ್ಪರವರು ತಮ್ಮ ವಿರುದ್ದ ಮಾಡಿರುವ ಆರೋಪಗಳಲ್ಲಿ ಹುರುಳಿಲ್ಲ. ಅವರೊಂದಿಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ' ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದ್ದಾರೆ.
ಎಂಎಲ್‍ಸಿ ಮಾಡುತ್ತೆವೆ : ಬಿ.ಎಸ್.ಯಡಿಯೂರಪ್ಪ
ಸಾಗರ ಕ್ಷೇತ್ರದ ಟಿಕೆಟ್‍ಗೆ ಸಂಬಂಧಿಸಿದಂತೆ ಹರತಾಳು ಹಾಲಪ್ಪ ಹಾಗೂ ಬೇಳೂರು ಗೋಪಾಲಕೃಷ್ಣ ಜೊತೆ ಚರ್ಚೆ ನಡೆಸಲಾಗುವುದು. ಗೊಂದಲ ಪರಿಹಾರಕ್ಕೆ ಕ್ರಮಕೈಗೊಳ್ಳಲಾಗುವುದು. ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರುವುದು ಖಚಿತವಾಗಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ಬೇಳೂರಿಗೆ ವಿಧಾನ ಪರಿಷತ್‍ಗೆ ಆಯ್ಕೆ ಮಾಡಲಾಗುವುದು. ಖುದ್ದು ಪಕ್ಷದ ಅಧ್ಯಕ್ಷ ಅಮಿತ್ ಶಾರವರೇ ಈ ವಿಷಯ ತಿಳಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.