ಬಳಕೆದಾರರ ಹಕ್ಕುಗಳಿಗಾಗಿ ನಮ್ಮ ಹೋರಾಟ
ನರೇಂದ್ರ ನಾಯಕ್ ಜೀವನ ಕಥನ
ಭಾಗ-37
ಮುಂದಿನ ಹಂತದಲ್ಲಿ ನಾವು ಎತ್ತಿಕೊಂಡ ವಿಷಯ ಟೆಂಪಲ್ ಟ್ಯಾಂಕ್ ಕಾಲನಿ ಸಮಸ್ಯೆ. ಕೆಎಸ್ ರಾವ್ ರಸ್ತೆಯ ಒಳಚರಂಡಿ ನೀರು ಹರಿದು ಶ್ರೀನಿವಾಸ ಪಾಠ ಶಾಲೆಯ ರಸ್ತೆಗೆ ಹರಿದು ಬರುತ್ತಿತ್ತು. ಅಲ್ಲಲ್ಲಿ ಬ್ಲಾಕ್ ಆಗಿ ಕಾರಂಜಿಯಂತೆ ಒಳಚರಂಡಿ ನೀರು ಪುಟಿದೇಳುತ್ತಿತ್ತು. ಮಂಡಿ ಮುಳುಗುವವರೆಗೆ ಕೆಲವೊಮ್ಮೆ ನೀರು ನಿಲ್ಲುತ್ತಿತ್ತು. ಈಗ ಅಲ್ಲೆಲ್ಲಾ ಚಿತ್ರಣ ಬದಲಾಗಿದೆ. ಆದರೆ ಆಗ ಟೆಂಪಲ್ ಕಾಲನಿ ಜನರು ಪಡುತ್ತಿದ್ದ ಪಾಡು ಅಷ್ಟಿಷ್ಟಲ್ಲ. ಕೆರೆ, ಬಾವಿಗಳಿಗೂ ಒಳಚರಂಡಿ ನೀರು ನುಗ್ಗಿ ಕಲುಷಿತಗೊಂಡಿತ್ತು.
ಪವಾಡಗಳ ರಹಸ್ಯಗಳನ್ನು ಬಯಲು ಮಾಡುವ ಜತೆ ಜತೆಯಲ್ಲೇ ನಮ್ಮ ಸಮಾನ ಮನಸ್ಕರ ತಂಡ ಬಳಕೆದಾರರ ಬಗ್ಗೆಯೂ ಆಗಾಗ್ಗೆ ಚರ್ಚಿಸುತ್ತಿತ್ತು. ಬಳಕೆದಾರರು ಯಾವೆಲ್ಲಾ ರೀತಿಲ್ಲಿ ಮೋಸ ಹೋಗುತ್ತಾರೆ. ಬಳಕೆದಾರರನ್ನು ಯಾವ ರೀತಿಯಲ್ಲಿ ಮೋಸ ಮಾಡಲಾಗುತ್ತದೆ ಎಂಬ ಬಗ್ಗೆ ನಮಗೆ ಅರಿವಿತ್ತು. ನಮ್ಮ ಅರಿವನ್ನು ಇತರರಿಗೆ ತಿಳಿಯಪಡಿಸುವ ಜತೆಗೆ ಬಳಕೆದಾರರ ಹಕ್ಕುಗಳಿಗಾಗಿ ನಮ್ಮಿಂದಾದ ಪ್ರಯತ್ನ ಮಾಡೋಣವೆಂದು 1981-82ರಲ್ಲಿ ಹಲವು ವಿಷಯಗಳೊಂದಿಗೆ ಗೆಳೆಯರು ಮುಂದಾದೆವು. ಆರಂಭದಲ್ಲಿ ನಮ್ಮ ಜತೆ ಎಲ್ಲಾ ರೀತಿಯ ಮನೋಭಾವದವರೂ ಇದ್ದರು. ಹಾಗಾಗಿ ಆರಂಭದ ಸಭೆ ಸಂಘ ನಿಕೇತನದಲ್ಲಿ ನಡೆದಿತ್ತು. ಅದರಲ್ಲಿ ಕೆಲವರು ಅದು ನಮ್ಮ ವೇದಿಕೆ ಎಂದು ಹೇಳಲು ಆರಂಭಿಸಿದ್ದರಿಂದ ನಾವು ಕೆಲವರು ಬೇರೆಯಾಗಿಯೇ ಕಾರ್ಯಾಚರಿಸಲು ಆರಂಭಿಸಿದೆವು. ಅಲ್ಲಿಯವರೆಗೆ ಸಂಘ ಪರಿವಾರದ ಕೆೆಲವರು ನಮಗೆ ಬೆಂಬಲ ನೀಡುವ ಮೂಲಕ ನಮ್ಮ ಹೋರಾಟದಲ್ಲಿದ್ದರು. ಆ ಬಳಿಕ ನಾವು ನೀರು, ರಸ್ತೆ, ಚರಂಡಿ, ವಿದ್ಯುತ್ ಸೇರಿದಂತೆ ಸಾರ್ವಜನಿಕರ ಹಲವಾರು ಸಮಸ್ಯೆಗಳನ್ನು ಎತ್ತಿಕೊಂಡು ಪ್ರತ್ಯೇಕವಾಗಿಯೇ ಹೋರಾಟ ಆರಂಭಿಸಿದೆವು. ಯಾವುದೇ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಹೋರಾಟ ಮಾಡುವ ಉದ್ದೇಶದಿಂದ ಸಭೆಗಳನ್ನು ಸೇರಲಾರಂಭಿಸಿದೆವು. ಆಗ ನಮ್ಮ ಸ್ನೇಹಿತರಾಗಿದ್ದ ರಘುನಾಥ್ ಶೇಟ್‌ರವರ ನವರತ್ನ ಹೊಟೇಲ್‌ನಲ್ಲಿ ಆರಂಭಿಕ ಸಭೆ ನಡೆಸಲು ನಮಗೆ ಅವಕಾಶ ಕಲ್ಪಿಸಲಾಯಿತು. ಆಗ ನಮ್ಮ ಸಂಘಟನೆಗಾಗಿ ಹೆಸರು ಏನೆಂಬ ಆಲೋಚನೆ ಬಂದಾಗ ಬಳಕೆದಾರರ ವೇದಿಕೆಗಿಂತಲೂ ಬಳಕೆದಾರರ ಶಿಕ್ಷಣವೆಂದರೆ ಉತ್ತಮ ಎಂದು ತಿಳಿದು ‘ಬಳಕೆದಾರರ ಶಿಕ್ಷಣ ಟ್ರಸ್ಟ್ ಮಂಗಳೂರು’ ಆರಂಭಿಸಲಾಯಿತು. ಇದರ ಪ್ರಥಮ ಕಾರ್ಯ ವಿದ್ಯುತ್ ಸಮಸ್ಯೆ. ಆಗಾಗ್ಗೆ ವಿದ್ಯುತ್ ಪೂರೈಕೆ ಸ್ಥಗಿತವಾಗುವುದು. ಇದನ್ನು ಡಾಕ್ಯುಮೆಂಟ್ ಮಾಡುವ ನಿಟ್ಟಿನಲ್ಲಿ ನಮ್ಮ ನಮ್ಮ ಮನೆಗಳಲ್ಲಿ ವಿದ್ಯುತ್ ಪೂರೈಕೆ ನಿಲುಗಡೆಯಾಗುವುದನ್ನು ಪಟ್ಟಿ ಮಾಡಿ ಮೆಸ್ಕಾಂನ ಕಾರ್ಯನಿರ್ವಾಹಕ ಇಂಜಿನಿಯರ್‌ಗೆ ನೀಡಲಾರಂಭಿಸಿದೆವು. ಆಗ ಅವರು ತಮ್ಮ ಸಮಸ್ಯೆಗಳನ್ನು ನಮ್ಮ ಮುಂದಿಟ್ಟರು. ಆದರೆ ನಾವು ವಿದ್ಯುತ್ ಶುಲ್ಕ ಪಾವತಿ ಮಾಡುವಾಗ ನಮಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಬೇಕೆಂದು ಆಗ್ರಹಿಸಿದೆವು. ಇದರಿಂದ ಕೆಲ ಸಮಯ ಸಮಸ್ಯೆಯಲ್ಲಿ ಕೊಂಚ ಬದಲಾವಣೆಯಾಯಿತು. ಇದಾಗಿ ಎರಡು ವರ್ಷಗಳ ಬಳಿಕ ಮತ್ತೆ ಪರಿಸ್ಥಿತಿ ಬಿಗಡಾಯಿಸಿತು. ಈವಾಗ ನಾವೊಂದು ಸ್ಪರ್ಧೆಯನ್ನು ಏರ್ಪಡಿಸಿದೆವು. ಅದೆಂತಹ ಸ್ಪರ್ಧೆ ಅಂತೀರಾ? ಅತ್ಯಂತ ಹೆಚ್ಚು ವಿದ್ಯುತ್ ನಿಲುಗಡೆಯಾದ ಬಗ್ಗೆ ಪಟ್ಟಿ ನೀಡಿದವರಿಗೆ ಬಹುಮಾನ! ಪ್ರಥಮ ಬಹುಮಾನವಾಗಿ ದೊಡ್ಡ ಗಾತ್ರದ ಲಾಟೀನು, ದ್ವಿತೀಯ ಬಹುಮಾನವಾಗಿ ಇಲೆಕ್ಟ್ರಿಕ್ ಚಾರ್ಜರ್, ಮೂರನೇ ಬಹುಮಾನ ದೊಡ್ಡದಾದ ಮೇಣದ ಬತ್ತಿ. ಮೂವರಿಗೂ ಕೈಯಿಂದ ಗಾಳಿ ಹಾಕುವ ಬೀಸಣಿಗೆ!
ಮೆಸ್ಕಾಂಗೆ ಈ ವಿಷಯ ತಿಳಿದು ಸಾಕಷ್ಟು ಸುಧಾರಣೆ ಮಾಡಲು ಪ್ರಯತ್ನಿಸಲಾಯಿತು. ನಮ್ಮ ಉದ್ದೇಶ ಬಳಕೆದಾರರ ಹಿತರಕ್ಷಣೆ, ಜತೆಗೆ ಅಗತ್ಯವಿದ್ದಲ್ಲಿ ವಿದ್ಯುತ್ ನೀಡಲು ಸಾಧ್ಯ ಎಂಬುದನ್ನು ಸಾರ್ವಜನಿಕರ ಜತೆಗೆ ಮೆಸ್ಕಾಂನ ಅಧಿಕಾರಿಗಳ ಗಮನಕ್ಕೂ ತರುವುದಾಗಿತ್ತು. ಆ ನಿಟ್ಟಿನಲ್ಲಿ ನಮಗೆ ಸಾಕಷ್ಟು ಯಶಸ್ಸು ಕೂಡಾ ದೊರಕಿತು. ಇದು ನಾವು ಎತ್ತಿಕೊಂಡ ಪ್ರಥಮ ಸಮಸ್ಯೆಯಾಗಿತ್ತು. ಮುಂದಿನ ಹಂತದಲ್ಲಿ ನಾವು ಎತ್ತಿಕೊಂಡ ವಿಷಯ ಟೆಂಪಲ್ ಟ್ಯಾಂಕ್ ಕಾಲನಿ ಸಮಸ್ಯೆ. ಕೆಎಸ್ ರಾವ್ ರಸ್ತೆಯ ಒಳಚರಂಡಿ ನೀರು ಹರಿದು ಶ್ರೀನಿವಾಸ ಪಾಠ ಶಾಲೆಯ ರಸ್ತೆಗೆ ಹರಿದು ಬರುತ್ತಿತ್ತು. ಅಲ್ಲಲ್ಲಿ ಬ್ಲಾಕ್ ಆಗಿ ಕಾರಂಜಿಯಂತೆ ಒಳಚರಂಡಿ ನೀರು ಪುಟಿದೇಳುತ್ತಿತ್ತು. ಮಂಡಿ ಮುಳುಗುವವರೆಗೆ ಕೆಲವೊಮ್ಮೆ ನೀರು ನಿಲ್ಲುತ್ತಿತ್ತು. ಈಗ ಅಲ್ಲೆಲ್ಲಾ ಚಿತ್ರಣ ಬದಲಾಗಿದೆ. ಆದರೆ ಆಗ ಟೆಂಪಲ್ ಕಾಲನಿ ಜನರು ಪಡುತ್ತಿದ್ದ ಪಾಡು ಅಷ್ಟಿಷ್ಟಲ್ಲ. ಕೆರೆ, ಬಾವಿಗಳಿಗೂ ಒಳಚರಂಡಿ ನೀರು ನುಗ್ಗಿ ಕಲುಷಿತಗೊಂಡಿತ್ತು. ಈ ಬಗ್ಗೆ ಹೋರಾಟ ನಡೆಸಿದಾಗ ನಮಗರಿವಿಗೆ ಬಂದಿದ್ದು, ಈ ಒಳಚರಂಡಿ ನೀರಿನಲ್ಲಿ ನವರತ್ನ ಹೊಟೇಲ್‌ನ ಪಾಲೂ ಇತ್ತೆಂದು. ನಾವು ಈ ಬಗ್ಗೆ ಹೋರಾಟ ಮುಂದುವರಿಸಿದೆವು. ಈ ಬಗ್ಗೆ ನನ್ನ ಆತ್ಮೀಯರಾಗಿದ್ದ ರಘುನಾಥ್ ಶೇಟರ್‌ರವರಿಗೆ ನಮ್ಮ ಹೋರಾಟದ ವಿಷಯ ತಿಳಿಸಿದರು. ನೀವು ಬಳಕೆದಾರರ ಸಭೆ ನಡೆಸಲು ಅಷ್ಟೆಲ್ಲಾ ಸಹಾಯ ಮಾಡಿದರೂ ಅವರೀಗ ನಿಮ್ಮ ವಿರುದ್ಧವೇ ಹೋರಾಟ ನಡೆಸುತ್ತಿದ್ದಾರೆಂದು ಕಿವಿ ಊದಿದರು.
ಆದರೆ ಜಂಟಲ್‌ಮ್ಯಾನ್ ಆಗಿದ್ದ ಅವರು ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಿದ್ದರು. ನಿಜ, ಈ ವಿಷಯದಲ್ಲಿ ಅವರು ನನ್ನ ವಿರುದ್ಧ ಹೋರಾಟ ನಡೆಸುತ್ತಿದ್ದಿರಬಹುದು. ಅದರಲ್ಲಿ ನನ್ನ ತಪ್ಪು ಇರಬಹುದು. ಆದರೆ ಉಳಿದಂತೆ ಅವರು ನಡೆಸಿದ ಹೋರಾಟದಲ್ಲಿ ನನಗೂ ಪ್ರಯೋಜನವಾಗುವ ವಿಷಯದಲ್ಲಿ ಅವರು ಹೋರಾಟ ಮಾಡಿದ್ದಾರೆ. ಹಾಗಾಗಿ ನೀವು ನನಗೆ ಹೇಳಬೇಕಾಗಿಲ್ಲ ಎಂದು ದೂರಿದವರನ್ನು ಹಿಂದಕ್ಕೆ ಕಳುಹಿಸಿದ್ದರು.
ಈ ಹೋರಾಟಕ್ಕೆ ನಮಗೆ ಪರಿಹಾರವೂ ದೊರಕಿತು. ಇದಾದ ಬಳಿಕ ನಾವು ನಮ್ಮ ಟ್ರಸ್ಟನ್ನು ನೋಂದಾಯಿಸಿಕೊಂಡೆವು. ಅದೇ ಸಮಯದಲ್ಲಿ ನಾವು ಹೇಳಲಾಗದೆ ಇರುವುದನ್ನು ಪೇಪರ್ ಆರಂಭಿಸಬೇಕೆಂದು ಇಚ್ಛಿಸಿದೆವು. ಅದಕ್ಕಾಗಿ ಹುಟ್ಟಿಕೊಂಡಿತ್ತು ಬಳಕೆದಾರರ ಚಳವಳಿ. ಆ ಸಮಯದಲ್ಲಿ ಬಳಕೆದಾರರಿಗೆ ಸಂಬಂಧಿಸಿ ಮೂರು ಪತ್ರಿಕೆಗಳಿದ್ದವು.
ಬಳಕೆದಾರರ ವೇದಿಕೆ ಉಡುಪಿ, ಬಳಕೆದಾರರ ಚಳವಳಿ ಮಂಗಳೂರಿನ ನಮ್ಮಿಂದ ಹಾಗೂ ಬಸ್ರೂರಿನ ಬಳಕೆದಾರರ ಶಿಕ್ಷಣ ಪ್ರಕಟವಾಗುತ್ತಿತ್ತು. ನಮ್ಮ ಬಳಕೆದಾರರ ಚಳವಳಿ ಪತ್ರಿಕೆ ಸುಮಾರು 11 ವರ್ಷಗಳ ಕಾಲ ನಾವು ಹೊರ ತಂದೆವು. ಬಳಿಕ ಕಾರಣಾಂತರಗಳಿಂದ ಅದರ ಮುದ್ರಣ ನಿಂತು ಹೋಯಿತು.