ರಾಜಕಾರಣ ಮತ್ತು ರಾಯಭಾರಿ ದ್ರಾವಿಡ್
ವಾರದ ವ್ಯಕ್ತಿ
ರಾಜ್ಯ ಚುನಾವಣಾ ಆಯೋಗ ಕ್ರಿಕೆಟಿಗ ರಾಹುಲ್ ದ್ರಾವಿಡ್‌ರನ್ನು ಚುನಾವಣೆಯ ರಾಯಭಾರಿಯನ್ನಾಗಿ ಆಯ್ಕೆ ಮಾಡಿದೆ. ಇದು ಅತ್ಯುತ್ತಮ ಆಯ್ಕೆ, ಒಬ್ಬ ಸಭ್ಯ ನಾಗರಿಕನಿಗೆ ನೀಡುವ ಅತ್ಯುನ್ನತ ಗೌರವ. ಹಾಗೆಯೇ ಪ್ರಜಾಪ್ರಭುತ್ವದ ಆಶಯಕ್ಕೆ ಹತ್ತಿರವಾಗಿ, ಹೊಸ ತಲೆಮಾರನ್ನು ಪ್ರಭಾವಿಸುವ ಮುಖ್ಯ ಪ್ರೇರಕ ಶಕ್ತಿಯಾಗಿ ದ್ರಾವಿಡ್‌ರ ಆಯ್ಕೆ ಸೂಕ್ತ ಮತ್ತು ಸಕಾಲಿಕ.
ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಎಂದಾಕ್ಷಣ ಎಲ್ಲರೂ ಹೇಳುವ ಮಾತು ಒಂದೆ- ಜಂಟಲ್‌ಮನ್. ಮೃದು ಮಾತಿನ, ಸೌಮ್ಯ ಸ್ವಭಾವದ, ಅಪಾರ ತಾಳ್ಮೆಯ, ಸಿಕ್ಕಾಪಟ್ಟೆ ಶಿಸ್ತಿನ, ವಿವಾದಗಳಿಲ್ಲದ, ವಿಪರೀತಕ್ಕೆ ಹೋಗದ ಅಪ್ರಥಮ ಕ್ರಿಕೆಟಿಗ. ಆಟದಲ್ಲೂ ಅಷ್ಟೆ, ಕಲಾತ್ಮಕ ಶೈಲಿಯ ಹೊಡೆತಕ್ಕೆ ಹೆಸರಾದ, ತಂಡಕ್ಕಾಗಿ ತುಡಿಯುವ, ದೇಶಕ್ಕಾಗಿ ಆಡುವ, ಜವಾಬ್ದಾರಿಯನ್ನೆಂದೂ ಮರೆಯದ ಆಟಗಾರ. ಗೆದ್ದಾಗ ಮೆರೆಯದ, ಸೋತಾಗ ಸೊರಗದ ಸ್ಥಿತಪ್ರಜ್ಞ. ಮೈದಾನದಿಂದ ಹೊರಗೆ, ಸಾಮಾಜಿಕ ಬದುಕಿನಲ್ಲೂ ಅದೇ ಸಂಯಮದ ನಡೆ-ನುಡಿಗೆ ಹೆಸರಾದವರು. ತಾನೊಬ್ಬ ಸ್ಟಾರ್ ಎಂಬ ಅಹಂನಿಂದ ಆಚೆಗೆ ನಿಂತವರು. ಹಾಗಾಗಿ ರಾಹುಲ್ ದ್ರಾವಿಡ್‌ರ ಆಟ ಮತ್ತು ಅವರು ಮೈಗೂಡಿಸಿಕೊಂಡ ವಿನಯವಂತ ವ್ಯಕ್ತಿತ್ವವೇ ಅವರನ್ನು ಇಷ್ಟು ಎತ್ತರಕ್ಕೆ ತಂದು ನಿಲ್ಲಿಸಿದೆ. ಚುನಾವಣಾ ಆಯೋಗಕ್ಕೆ ಸೂಕ್ತ ವ್ಯಕ್ತಿಯಂತೆ ಕಂಡಿದೆ.
ಕರ್ನಾಟಕ ವಿಧಾನಸಭಾ ಚುನಾವಣೆಯ ಕಾವು ಏರುತ್ತಿರುವ ಈ ಹೊತ್ತಿನಲ್ಲಿ, ಕ್ರಿಕೆಟ್ ಮತ್ತು ರಾಹುಲ್ ದ್ರಾವಿಡ್ ಕೂಡ ಸುದ್ದಿಯಲ್ಲಿದ್ದಾರೆ. ಸದ್ಯದಲ್ಲೇ ಐಪಿಎಲ್ ಜಾತ್ರೆ ಶುರುವಾಗಲಿದೆ. ಬಾಲ್ ಟ್ಯಾಂಪರಿಂಗ್ ಕೃತ್ಯದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಸ್ಟೀವ್ ಸ್ಮಿತ್, ಉಪನಾಯಕ ಡೇವಿಡ್ ವಾರ್ನರ್ ಮತ್ತು ಕ್ಯಾಮರೊನ್ ಬ್ಯಾಂಕ್ರಾಫ್ಟ್ ಸಿಕ್ಕಿಬಿದ್ದು, ಒಂದು ವರ್ಷ ಅಮಾನತು ಶಿಕ್ಷೆಗೆ ಒಳಗಾಗಿದ್ದಾರೆ. ತಮ್ಮ ಪ್ರಚಂಡ ಪ್ರತಿಭೆಯ ಮೂಲಕವೇ ಜಾಗತಿಕ ಕ್ರಿಕೆಟ್ ಲೋಕದಲ್ಲಿ ಪಾರುಪತ್ಯ ಮೆರೆದಿದ್ದ, ಮಿಂಚುತ್ತಿದ್ದ, ಕೊಬ್ಬಿನಿಂದ ಕೆನೆಯುತ್ತಿದ್ದ ಆಸ್ಟ್ರೇಲಿಯಾ ತಂಡ, ಚಿಲ್ಲರೆ ಕೆಲಸಕ್ಕೆ ಕೈಹಾಕಿ, ಜಾಗತಿಕ ಮಟ್ಟದಲ್ಲಿ ಛೀ ಥೂಗೆ ಒಳಗಾಗಿದೆ. ಹಾಗೆ ನೋಡಿದರೆ, ಬಾಲ್ ವಿರೂಪಗೊಳಿಸುವ ಕೆಟ್ಟ ಚಾಳಿ ಇಂದಿನದಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಹಿಂದೆ ಆಡಿದ ಎಲ್ಲ ದೇಶಗಳ ಆಟಗಾರರು ಒಂದಲ್ಲ ಒಂದು ಸಲ ‘ಕೆಡಿಸುವ’ ಕೆಲಸಕ್ಕೆ ಕೈಹಾಕಿ, ಕಲಾತ್ಮಕ ಆಟಕ್ಕೆ ಕಲೆ ಮೆತ್ತಿದ್ದಾರೆ. ಶಿಕ್ಷೆಗೊಳಗಾಗಿದ್ದಾರೆ. ಭಾರತ ತಂಡದ ಸಚಿನ್ ತೆಂಡೂಲ್ಕರ್ ಹಾಗೂ ಕ್ರಿಕೆಟ್ ಲೋಕದ ಜಂಟಲ್‌ಮನ್ ರಾಹುಲ್ ದ್ರಾವಿಡ್ ಕೂಡ ದಂಡ ತೆತ್ತ ಉದಾಹರಣೆಗಳಿವೆ.
ಆದರೂ ರಾಹುಲ್ ದ್ರಾವಿಡ್ ಎಂಬ ಆಟಗಾರನೇ ಬೇರೆ. ಬ್ಯಾಟಿಂಗ್ ಶೈಲಿಯಂತೂ ಅದ್ಭುತ. ಕರ್ನಾಟಕದ ಹೆಮ್ಮೆಯ ಕ್ರಿಕೆಟಿಗ ಗುಂಡಪ್ಪವಿಶ್ವನಾಥ್ ಮತ್ತು ಅಝರುದ್ದೀನ್- ಇಬ್ಬರ ಶೈಲಿಯನ್ನು ಬ್ಯೂಟಿಫುಲ್ಲಾಗಿ ಬ್ಲೆಂಡ್ ಮಾಡಿದ ಶೈಲಿಯದು. ಅವರ ಒಂದೊಂದು ಸ್ಟ್ರೋಕ್ ಅನ್ನೂ ಕ್ರಿಕೆಟ್ ಪ್ರೇಮಿಗಳು ಆಸ್ವಾದಿಸುತ್ತಾರೆ. ಎದುರಾಳಿ ತಂಡದವರು ಅಧ್ಯಯನ ಮಾಡುತ್ತಾರೆ. ಸೆಂಚುರಿ ಹೊಡೆಯಲಿ, ಪಂದ್ಯ ಗೆಲ್ಲಲಿ ಅಗತ್ಯಕ್ಕಿಂತ ಹೆಚ್ಚು ಮಾತನಾಡಿದ್ದಿಲ್ಲ, ಮೆರೆದಾಡಿದ್ದಂತೂ ಇಲ್ಲವೇ ಇಲ್ಲ. ಅವರ ಸಂಯಮ ಮತ್ತು ತನ್ಮಯತೆ ಮಿಕ್ಕವರಿಗೆ ಮಾದರಿಯಾಗುವಂಥದ್ದು.
ಹೀಗೆ ಮಾಡೆಲ್ ಆದ ದ್ರಾವಿಡ್‌ರನ್ನು ಕ್ರಿಕೆಟ್ ಜಗತ್ತಿನಲ್ಲಿ ‘ದಿ ವಾಲ್’ ಎಂದು ಕರೆಯಲಾಗುತ್ತದೆ. ಇದು ಒಂದು ರೀತಿಯಲ್ಲಿ ಪ್ರಶಂಸೆಯೂ ಹೌದು, ಕೆಲವೊಂದು ಸಲ ಗೇಲಿಗೆ ಬಳಕೆಯಾದ ಪದವೂ ಹೌದು. ಆದರೆ ಭಾರತ ಕ್ರಿಕೆಟ್ ತಂಡ ಸಂಕಷ್ಟಕ್ಕೆ ಸಿಲುಕಿದಾಗೆಲ್ಲ ದ್ರಾವಿಡ್ ಗೋಡೆಯಂತೆಯೇ ನಿಂತು, ಸೋಲಿನಿಂದ ಪಾರುಮಾಡಿದ್ದಿದೆ. ಇವತ್ತಿಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೆಸ್ಟ್ ಸರಣಿಯಲ್ಲಿ, ಎಲ್ಲ ವಿದೇಶಿ ತಂಡಗಳ ವಿರುದ್ಧ ಸೆಂಚುರಿ ಸಿಡಿಸಿದ ಏಕೈಕ ಆಟಗಾರ ಎಂಬ ದಾಖಲೆಗೆ ಒಳಗಾದವರು ಇವರೊಬ್ಬರೆ. ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ನಲ್ಲಿ 10 ಸಾವಿರ ರನ್ ಗಳಿಸಿರುವ ರಾಹುಲ್ ದ್ರಾವಿಡ್ ಸಾಧನೆಯನ್ನು ಸಾರುವ ಗೋಡೆಯೊಂದನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿರ್ಮಿಸಿ ಗೌರವಿಸಲಾಗಿದೆ. 15 ಅಡಿ ಎತ್ತರ, 27 ಅಡಿ ಅಗಲವಿದ್ದು, ಅದರ ನಿರ್ಮಾಣಕ್ಕಾಗಿ 10 ಸಾವಿರ ಇಟ್ಟಿಗೆಗಳನ್ನು ಬಳಸಲಾಗಿದೆ. ಗೋಡೆಗೆ ‘ದಿ ವಾಲ್’ ಎಂದೇ ಹೆಸರಿಡಲಾಗಿದೆ. ಗೋಡೆಯ ಮೇಲೆ ದ್ರಾವಿಡ್ ಆಟದ ಮೂರು ಗುಣಗಳಾದ ಬದ್ಧತೆ, ದೃಢತೆ ಹಾಗೂ ಉತ್ಕೃಷ್ಟತೆಯನ್ನು ಬಿಂಬಿಸಲಾಗಿದೆ. ವಿಶೇಷವೆಂದರೆ, ಈ ಬೃಹತ್ ಕಲಾಕೃತಿಯನ್ನು ದ್ರಾವಿಡ್‌ರ ಅಮ್ಮ ಡಾ.ಪುಷ್ಪಾದ್ರಾವಿಡ್ ರಚಿಸಿದ್ದಾರೆ. ಮಗನ ಸಾಧನೆಯನ್ನು ಕಲೆಯ ಮೂಲಕ ಅಭಿವ್ಯಕ್ತಿಸಿದ್ದಾರೆ.
ಇಂತಹ ದ್ರಾವಿಡ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿ ಬದುಕಿನ ಆಟಕ್ಕೆ ಸಿದ್ಧಗೊಳ್ಳುತ್ತಿರುವಾಗಲೇ ಕೋಚ್ ಹುದ್ದೆ ಅರಸಿ ಬಂದಿದೆ. ಹೊಸ ಪ್ರತಿಭೆಗಳ ಶೋಧದಲ್ಲಿ, ಹೊಸ ತಂಡವನ್ನು ತರಬೇತುಗೊಳಿಸುವಲ್ಲಿ, ದೇಶಕ್ಕೆ ಕೊಡುಗೆಯಾಗಿ ನೀಡುವಲ್ಲಿ ನಿರತರಾಗಿದ್ದಾರೆ. ಅದಕ್ಕೊಂದು ಉತ್ತಮ ಉದಾಹರಣೆ ಎಂದರೆ, ಇತ್ತೀಚೆಗೆ ಭಾರತದ ಅಂಡರ್ 19 ತಂಡ ಸತತ ನಾಲ್ಕನೇ ಬಾರಿ ವಿಶ್ವಕಪ್ ಕ್ರಿಕೆಟ್ ಕಿರೀಟ ಧರಿಸಿದ್ದು. ಅದರ ಹಿಂದೆ ತಂಡದ ಕೋಚ್ ಆದ ದ್ರಾವಿಡ್‌ರ ನಿರಂತರ ಪರಿಶ್ರಮ, ಶಿಸ್ತು, ಶ್ರದ್ಧೆ ಇದೆ. ಅದಕ್ಕಾಗಿ ಇಡೀ ದೇಶವೇ ದ್ರಾವಿಡ್‌ರನ್ನು ಹಾಡಿಹೊಗಳಿದೆ. ಆ ಸಮಯದಲ್ಲಿ ಬಿಸಿಸಿಐ ದ್ರಾವಿಡ್‌ರಿಗೆ 50 ಲಕ್ಷ, ಆಟಗಾರರಿಗೆ 20 ಲಕ್ಷ ಎಂದು ಘೋಷಿಸಿದಾಗ, ‘ತಂಡದ ಗೆಲುವಲ್ಲಿ ಎಲ್ಲರದೂ ಸಮಾನ ಪಾಲಿದೆ, ಎಲ್ಲರಿಗೂ ಸಮಾನವಾಗಿ ಹಣ ಹಂಚಿ’ ಎಂದು ಬಿಸಿಸಿಐಗೆ ವಿನಂತಿಸಿಕೊಳ್ಳುವ ಮೂಲಕ ಸಮಾನತೆಯ ಪಾಠ ಮಾಡಿದ್ದರು. ಹಾಗೆಯೇ ಯುವ ಆಟಗಾರರ ಕಣ್ಣಲ್ಲಿ ನಿಜವಾದ ಹೀರೋ ಆಗಿದ್ದರು, ಆದರ್ಶ ವ್ಯಕ್ತಿಯಾಗಿ ಕಂಗೊಳಿಸಿದ್ದರು.
ರಾಹುಲ್ ದ್ರಾವಿಡ್‌ರಿಗೆ ಕ್ರಿಕೆಟ್ ಲೋಕದ ಪ್ರತಿಷ್ಠಿತ ವಿಸ್ಡನ್ ಕ್ರಿಕೆಟರ್, ಡಾನ್ ಬ್ರಾಡ್ಮನ್ ಪುರಸ್ಕಾರ ಲಭಿಸಿದೆ. ಭಾರತ ಸರಕಾರ ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಹಾಗೆ ನೋಡಿದರೆ, ದ್ರಾವಿಡ್ ಎಂದೂ ಪ್ರಚಾರಕ್ಕೆ, ಪ್ರಶಸ್ತಿಗಳಿಗೆ, ಸನ್ಮಾನಗಳಿಗೆ ಆಸೆಪಟ್ಟವರಲ್ಲ. ಬೆಂಗಳೂರು ವಿಶ್ವವಿದ್ಯಾನಿಲಯವು ದ್ರಾವಿಡ್‌ಗೆ ಗೌರವ ಡಾಕ್ಟರೇಟ್ ಪದವಿ ನೀಡಲು ನಿರ್ಧರಿಸಿತ್ತು. ಆದರೆ ದ್ರಾವಿಡ್ ಅದನ್ನು ನಯವಾಗಿ ನಿರಾಕರಿಸಿ, ‘ಸಂಶೋಧನೆ ಮಾಡಿಯೇ ಡಾಕ್ಟರೇಟ್ ಪಡೆಯುತ್ತೇನೆ’ ಎಂದು ತಿಳಿಸಿ, ‘ಗೌಡಾ’ ಪದವಿ ಪಡೆಯುವವರಿಗೆ ಸಂದೇಶ ರವಾನಿಸಿದ್ದರು.
ಹಾಗೆಯೇ, ದ್ರಾವಿಡ್ ತಮ್ಮ ಮಕ್ಕಳ ಶಾಲೆಯ ವಿಜ್ಞಾನ ಪ್ರದರ್ಶನವೊಂದರಲ್ಲಿ, ಮಕ್ಕಳೊಂದಿಗೆ ಸರತಿ ಸಾಲಿನಲ್ಲಿ ನಿಂತದ್ದು, ‘ನಾನು ಅಲ್ಲಿ ಒಬ್ಬ ಪೋಷಕ ಅಷ್ಟೆ’ ಎಂದದ್ದು ಅವರ ಸರಳ ಸಜ್ಜನಿಕೆಯನ್ನು ಸಾರುತ್ತಿತ್ತು. ಇದೇ ಸಾಲಿಗೆ ಸೇರುವ ಮತ್ತೊಂದು ಸಂಗತಿ ಎಂದರೆ, ಖ್ಯಾತ ರೆಸ್ಲರ್ ಜಾನ್ ಸೆನಾ ದ್ರಾವಿಡ್‌ರನ್ನು ಮೆಚ್ಚಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ, ‘ಸೇಡಿಗಾಗಿ ನೀವು ಆಡಬೇಕಿಲ್ಲ, ಗೌರವ-ಹೆಮ್ಮೆಯ ಸಲುವಾಗಿ ಆಟವಾಡಿ’ ಎಂಬ ದ್ರಾವಿಡ್‌ರ ಮಾತನ್ನು ಮೆಚ್ಚಿ ಪೋಸ್ಟ್ ಮಾಡಿದ್ದರು. ಅದು ಜಗತ್ತಿನಾದ್ಯಂತ ಸುದ್ದಿಯಾಗಿತ್ತು. ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು.
ದುರದೃಷ್ಟಕರ ಸಂಗತಿ ಎಂದರೆ, ದಶಕಗಟ್ಟಲೆ ಪ್ರಾಮಾಣಿಕ ವಾಗಿ ಕ್ರಿಕೆಟ್ ಆಡಿ ಗಳಿಸಿದ ಹಣವನ್ನು ರಾಹುಲ್ ದ್ರಾವಿಡ್ ಕೂಡ ಮನುಷ್ಯ ಸಹಜ ಆಸೆಗೆ ಬಿದ್ದು ಮೋಸ ಹೋಗಿದ್ದಾರೆ. ಇತ್ತೀಚೆಗೆ ವಿಕ್ರಂ ಇನ್ವೆಸ್ಟ್‌ಮೆಂಟ್ ಎಂಬ ಕಂಪೆನಿಯಲ್ಲಿ ಹೆಚ್ಚಿನ ಲಾಭಕ್ಕಾಗಿ 20 ಕೋಟಿ ರೂ. ತೊಡಗಿಸಿದ್ದರು. ಅದರಲ್ಲಿ 16 ಕೋಟಿ ವಾಪಸ್ ಸಿಕ್ಕಿ 4 ಕೋಟಿ ರೂ. ವಂಚನೆಗೊಳಗಾಗಿ ಠಾಣೆಗೆ ದೂರು ನೀಡುವ ಮೂಲಕ ಸುದ್ದಿಯಾಗಿದ್ದೂ ಇದೆ.
ದ್ರಾವಿಡ್‌ರಂತಹ ಆಟಗಾರರನ್ನು ಕೊಟ್ಟ ಕ್ರಿಕೆಟ್ ಇವತ್ತು ಕೇವಲ ಆಟವಾಗಿ ಉಳಿದಿಲ್ಲ. ಕೋಟ್ಯಂತರ ರೂಪಾಯಿಗಳ ವಹಿವಾಟುಳ್ಳ ಬೃಹತ್ ಉದ್ಯಮವಾಗಿ ಬೆಳೆದು ನಿಂತಿದೆ. ಕ್ರಿಕೆಟ್ ಆಟಗಾರ ರನ್ ಹೊಳೆ ಹರಿಸುವ, ವಿಕೆಟ್ ಉರುಳಿಸುವ, ಮೈದಾನದ ಮೆಷಿನ್ ಆಗಿದ್ದಾನೆ. ಹಣದ ದಾಹಕ್ಕೆ, ಖ್ಯಾತಿಯ ಗೀಳಿಗೆ ಒಳಗಾಗಿದ್ದಾನೆ. ಸಂಯಮವೇ ಸಂಸ್ಕೃತಿ ಎಂಬುದನ್ನು ಮರೆತ ಪ್ರೇಕ್ಷಕರು ಹುಚ್ಚು ಅಭಿಮಾನಿಗಳಾಗಿ, ದೇಶಪ್ರೇಮಿಗಳಾಗಿ ರೂಪಾಂತರಗೊಂಡಿದ್ದಾರೆ. ಗೆದ್ದರೆ ಹೊಗಳುವ, ಸೋತರೆ ಕೆರಳುವ ಜನ, ಅದು ಆಟ, ಅಲ್ಲಿ ಸೋಲು-ಗೆಲುವು ಸಾಮಾನ್ಯ ಎನ್ನುವುದನ್ನೇ ಮರೆತಿದ್ದಾರೆ. ಇಂತಹ ಒತ್ತಡದಲ್ಲಿ ಆಡಬೇಕಾದ ಆಟಗಾರ, ಆಟದ ಸೊಗಸನ್ನು, ಕಲಾತ್ಮಕತೆಯನ್ನು ಕಡೆಗಣಿಸಿ, ತಂತ್ರಗಾರಿಕೆಗೆ ತಲೆಬಾಗಿದ್ದಾನೆ. ಪ್ರೇಕ್ಷಕರು, ಆಯ್ಕೆದಾರರು, ಜಾಹೀರಾತುದಾರರು, ಬೆಟ್ಟಿಂಗ್ ಕಟ್ಟುವವರ ಒತ್ತಡಕ್ಕೆ ಒಳಗಾಗಿ ಜೀವವನ್ನು ಒತ್ತೆಯಿಟ್ಟು ಆಡುತ್ತಿದ್ದಾನೆ. ಮೊನ್ನೆ ಶ್ರೀಲಂಕಾದಲ್ಲಿ ನಡೆದ ತ್ರಿಕೋನ ಟಿ20 ಸರಣಿಯಲ್ಲಿ, ಬಾಂಗ್ಲಾ ವಿರುದ್ಧದ ಫೈನಲ್ನಲ್ಲಿ, ಕೊನೆ ಬಾಲ್ನಲ್ಲಿ ದಿನೇಶ್ ಕಾರ್ತಿಕ್ ಸಿಕ್ಸರ್ ಸಿಡಿಸದೆ ಹೋಗಿದ್ದರೆ, ವಿಜಯಶಂಕರ್ ಎಂಬ ಹೊಸ ಆಟಗಾರನ ಕೆರಿಯರ್ ಅಷ್ಟೇ ಅಲ್ಲ, ಆತನ ಮನೆಯವರು ಬೀದಿಗೆ ಬೀಳುತ್ತಿದ್ದರು. ಅಭಿಮಾನಿಗಳ ಬಾಯಿಗೆ ಸಿಕ್ಕಿ ಚಿಂದಿಯಾಗುತ್ತಿದ್ದರು.
ಹಾಗೆಯೇ ಇವತ್ತು ದೇಶದ ಜನತೆಯ ಒಳಿತಿಗೆ, ಉದ್ಧಾರಕ್ಕೆ, ನೆಮ್ಮದಿಯ ಬದುಕಿಗೆ ಬೆಳಕಾಗಬೇಕಾದ ರಾಜಕಾರಣವೂ ಸ್ವಚ್ಛವಾಗಿ ಉಳಿದಿಲ್ಲ. ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡ ಬಹುದೊಡ್ಡ ದೇಶ ನಮ್ಮದು. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು, ನಮ್ಮ ನಡುವಿನಿಂದ ಎದ್ದುಹೋದವನೇ ನಮ್ಮನ್ನಾಳುವ ನಾಯಕ. ಇಷ್ಟೆಲ್ಲ ಇದ್ದರೂ, ಆಚರಣೆಯಲ್ಲಿ ಪ್ರಜಾಪ್ರಭುತ್ವದ ಮೂಲ ಆಶಯಗಳನ್ನೇ ಅಣಕಿಸಲಾಗುತ್ತಿದೆ. ರಾಜಕಾರಣದ ಅಂಗಳಕ್ಕೆ ಧರ್ಮ ದಾಂಗುಡಿಯಿಟ್ಟಿದೆ. ಶ್ರೀಸಾಮಾನ್ಯನ ಜಾಗದಲ್ಲಿ ಶ್ರೀಮಂತರು ಬಂದು ನಿಂತಿದ್ದಾರೆ. ಮಠಾಧೀಶರು, ಮೌಲ್ವಿಗಳು, ಸಾಧು ಸಂತರು ನಿರ್ಣಾಯಕ ಸ್ಥಾನವನ್ನು ಅಲಂಕರಿಸಿ, ಹದ್ದುಮೀರಿ ವರ್ತಿಸುತ್ತಿದ್ದಾರೆ. ಜಾತ್ಯತೀತರು ಜಾತಿವಾದಿಗಳಾಗಿದ್ದಾರೆ. ಮೂಲಭೂತವಾದಿಗಳು ದೇಶವನ್ನು ಹಿಂದಕ್ಕೆಳೆಯುತ್ತಿದ್ದಾರೆ. ಪಕ್ಷ ರಾಜಕಾರಣ ಉದ್ಯಮದ ರೂಪ ಪಡೆಯುತ್ತಿದೆ. ಬಡವ-ಶ್ರೀಮಂತರ ನಡುವೆ ಅಂತರ ಹೆಚ್ಚಾಗುತ್ತಿದೆ. ಅಧಿಕಾರಕ್ಕೇರಿದವರು ಸುಳ್ಳಿನ ಭ್ರಮಾಲೋಕ ಸೃಷ್ಟಿಸಿ, ಅಭಿವೃದ್ಧಿಯ ಹರಿಕಾರರಂತೆ ಪೋಸು ಕೊಡುತ್ತಿದ್ದಾರೆ. ಬ್ರಹ್ಮಾಂಡ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಅಧಿಕಾರ ದುರುಪಯೋಗ ಎಲ್ಲೆ ಮೀರಿ- ಇವುಗಳ ಬಗ್ಗೆ ಮಾತನಾಡುವವನು ಮೂರ್ಖ ಎಂಬಂತಾಗಿದೆ.
ಒಟ್ಟಿನಲ್ಲಿ ಕ್ರಿಕೆಟ್ ತನ್ನ ಕಲಾತ್ಮಕತೆಯನ್ನು, ರಾಜಕಾರಣ ತನ್ನ ವೌಲ್ಯವನ್ನು ಕಳೆದುಕೊಂಡಿದೆ. ಯುವಜನತೆ ಕ್ರಿಕೆಟ್‌ನ ಅಂಧಾಭಿಮಾನಿಗಳಾಗಿ, ರಾಜಕಾರಣ ನಮಗಲ್ಲವೆಂದು ನಿರ್ಲಕ್ಷಿಸುತ್ತಿದ್ದಾರೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ಸಭ್ಯ ನಾಗರಿಕ ರಾಹುಲ್ ದ್ರಾವಿಡ್, ರಾಜ್ಯ ಚುನಾವಣೆಯ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾಗಿದ್ದಾರೆ. ಯುವಪೀಳಿಗೆಯ ಮನ ಪರಿವರ್ತಿಸುವ, ಬದಲಾವಣೆಯನ್ನು ತರುವ ಮತದಾನದ ಹಕ್ಕಿನ ಬಗ್ಗೆ ತಿಳಿಸಿಕೊಡುವ, ಮತಗಟ್ಟೆಗಳತ್ತ ಅವರನ್ನು ಆಕರ್ಷಿಸುವ ಮಹತ್ವದ ಜವಾಬ್ದಾರಿ ಹೊತ್ತಿದ್ದಾರೆ. ದ್ರಾವಿಡ್ ವ್ಯಕ್ತಿತ್ವ, ವರ್ಚಸ್ಸು ಮತ್ತು ಜನಪ್ರಿಯತೆ ಎಷ್ಟರಮಟ್ಟಿಗೆ ಕೆಲಸ ಮಾಡುತ್ತದೆ ಎನ್ನುವುದನ್ನು ಕಾಲವೇ ಹೇಳಬೇಕು.