ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾರ ಕೊನೆಯಾಗದ ವಿವಾದಗಳ 214 ದಿನಗಳು
ಭಾರತದ 45ನೇ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ಈವರೆಗೆ ಪದವಿಯಲ್ಲಿ ಕಳೆದಿರುವ 214 ದಿನಗಳು ವಿವಾದಗಳಿಂದಲೇ ಕೊನೆಯಾಗಿವೆ. ಅವರು ಆ ಸ್ಥಾನದಲ್ಲಿ ಇನ್ನೂ 186 ದಿನಗಳನ್ನು ಕಳೆಯಬೇಕಿದೆ. ಆದರೆ ಅದಕ್ಕೂ ಮೊದಲು ದೋಷಾರೋಪ ನಿರ್ಣಯದ ಮಾತುಗಳು ಅವರನ್ನು ಸುತ್ತುವರಿದಿವೆೆ.
ಸಿಜೆಐ ಎಂಬುದು ನ್ಯಾಯಾಧೀಶರ ವೃತ್ತಿಜೀವನದಲ್ಲಿ ಉತ್ತುಂಗದ ಹಂತ. ಆದರೆ ಈ ಪದವಿಯನ್ನು ನ್ಯಾಯಾಂಗದ ಮೇಲಿನ ವಿಶ್ವಾಸಾರ್ಹತೆಯನ್ನು ಹೆಚ್ಚಿಸಲು ಬಳಸುವ ಬದಲು ದೀಪಕ್ ಮಿಶ್ರಾ ಆ ಪದವಿಯನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಅವರು ಮುಖ್ಯ ನ್ಯಾಯಾಧೀಶರ ಸ್ಥಾನವನ್ನು ಅಲಂಕರಿಸುವುದಕ್ಕೂ ಮೊದಲೇ ಸಮಸ್ಯೆಗಳು ಅವರನ್ನು ಆವರಿಸಲು ಆರಂಭಿಸಿತ್ತು. ಮೊದಲನೆಯದಾಗಿ, ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಕಲಿಕೊ ಪುಲ್ ಅವರ ಆತ್ಮಹತ್ಯಾ ಪತ್ರದಲ್ಲಿ ಇತರ ನ್ಯಾಯಾಧೀಶರ ಜೊತೆ ಮಿಶ್ರಾ ಹೆಸರನ್ನು ಕೂಡಾ ಉಲ್ಲೇಖಿಸಲಾಗಿತ್ತು.
2016ರಲ್ಲಿ ಒಡಿಶಾ ಮೂಲದ ಸಾಮಾಜಿಕ ಹೋರಾಟಗಾರ ಜಯಂತ ಕುಮಾರ್ ದಾಸ್ ಎಂಬವರು ಅಂದಿನ ಸಿಜೆಐಗೆ ಪತ್ರ ಬರೆದು, ಜಮೀನುರಹಿತ ಬಡವರಿಗೆ ಹಂಚಲು ಮೀಸಲಿಟ್ಟಿದ್ದ ಸಾರ್ವಜನಿಕ ಭೂಮಿಯನ್ನು ಪಡೆಯಲು ಮಿಶ್ರಾ ವಾಸ್ತವಾಂಶಗಳನ್ನು ತಿರುಚಿದ್ದಾರೆ ಎಂದು ಆಪಾದಿಸಿದ್ದರು. ಈ ವಿಷಯಕ್ಕೆ ಸಂಬಂಧಿಸಿ ಸಿಬಿಐ ತನಿಖೆ ನಡೆದು ಪ್ರಕರಣವು ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಇಂದ್ರಜಿತ್ ಮೊಹಂತಿ ಬಳಿಗೆ ಬಂದಿತ್ತು. ತಿಂಗಳ ಒಳಗಾಗಿ, ಮೊಹಂತಿಯವರೇ ಆಂತರಿಕ ತನಿಖೆಯೊಂದಕ್ಕೆ ಗುರಿಯಾಗಬೇಕಾಯಿತು. ಆದರೆ ಈ ತನಿಖೆಯಲ್ಲಿ ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯಾಧೀಶರ ಹೆಸರು ತಳಕು ಹಾಕಿಕೊಂಡಾಗ ತನಿಖೆಯನ್ನು ಅರ್ಧಕ್ಕೇ ನಿಲ್ಲಿಸಲಾಯಿತು.
ಇದೆಲ್ಲವೂ ನಡೆದಿದ್ದು ಮಿಶ್ರಾ ಸಿಜೆಐ ಆಗುವುದಕ್ಕೂ ಮೊದಲು. ಗಂಭೀರ ನೈತಿಕ ಲೋಪಗಳಿರುವ ದೀಪಕ್ ಮಿಶ್ರಾರನ್ನು ಮುಖ್ಯ ನ್ಯಾಯಾಧೀಶರನ್ನಾಗಿ ನೇಮಕ ಮಾಡುವುದು ಸರಿಯೇ ಎಂದು ಶಾಂತಿ ಭೂಷಣ್‌ರಂಥ ಹಿರಿಯ ನ್ಯಾಯಾಧೀಶರು ಪ್ರಶ್ನಿಸಿದರೂ ಅವರ ನೇಮಕವನ್ನು ತಡೆಯಲು ಯಾರಿಂದಲೂ ಸಾಧ್ಯವಾಗಲಿಲ್ಲ. ನ್ಯಾಯಾಧೀಶ ಜೆ. ಚೆಲಮೇಶ್ವರ್‌ರನ್ನು ಸಿಜೆಐ ಆಗಿ ನೇಮಕ ಮಾಡಬೇಕೆಂಬ ಆಗ್ರಹವನ್ನು ಇಡಲಾದರೂ ಸರಕಾರ ಸದ್ದಿಲ್ಲದೆ ಮಿಶ್ರಾ ಹೆಸರನ್ನು ಅಂತಿಮಗೊಳಿಸಿತು. ಆದರೆ ಒಮ್ಮೆ ಮುಖ್ಯ ನ್ಯಾಯಾಧೀಶರ ಸ್ಥಾನಕ್ಕೆ ಏರಿದ ನಂತರ ಮಿಶ್ರಾ ಎಲ್ಲವನ್ನೂ ಹಿಂದಕ್ಕೆ ಬಿಟ್ಟು ತಮ್ಮ ಸ್ಥಾನಕ್ಕೆ ಕೀರ್ತಿ ತರುವ ಕಾರ್ಯವನ್ನು ಮಾಡಬೇಕಿತ್ತು. ಆದರೆ ಅವರು ತಮ್ಮ ಅವಧಿಯನ್ನು ಹಾದಿಯಾ ಪ್ರಕರಣದಲ್ಲಿ ಹಿಂದಿನ ನ್ಯಾಯಾಧೀಶರ ನಿಲುವಿನ ವಿರುದ್ಧ ಸಾಗುವ ಮೂಲಕ ಆರಂಭಿಸಿದರು. ಹಿಂದಿನ ಸಿಜೆಐ ಖೇಹರ್, ಹಾದಿಯಾರನ್ನು ಬ್ರೈನ್‌ವಾಶ್ ಮಾಡಲಾಗಿತ್ತೇ ಎಂಬ ಬಗ್ಗೆ ತನಿಖೆ ನಡೆಸಲು ಬಯಸಿದ್ದರೆ ಮಿಶ್ರಾ, ನ್ಯಾಯಾಲಯವು ವಯಸ್ಕರ ತೀರ್ಮಾನವನ್ನು ಪ್ರಶ್ನಿಸುವಂತಿಲ್ಲ ಎಂದು ತಿಳಿಸಿದ್ದರು.
ಇದೇ ವೇಳೆ, ಪ್ರಸಾದ್ ಶಿಕ್ಷಣ ಸಂಸ್ಥೆ ವಿವಾದವು ಸದ್ದಿಲ್ಲದೆ ಬೆಳೆಯುತ್ತಿತ್ತು. ಪ್ರಸಾದ್ ಶಿಕ್ಷಣ ಸಂಸ್ಥೆಯೆಂಬ ವೈದ್ಯಕೀಯ ಕಾಲೇಜಿನ ಮುಖ್ಯಸ್ಥ ಮಧ್ಯವರ್ತಿಗಳ ಜೊತೆ ಸೇರಿಕೊಂಡು ಒಡಿಶಾ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಐ.ಎಂ ಖುರೇಶಿ ಅವರ ಸಹಾಯದಿಂದ ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಗೆ ಲಂಚ ನೀಡಿದ್ದ ಎಂಬ ಆರೋಪವು ಅಕ್ಟೋಬರ್‌ನಲ್ಲಿ ಕೇಳಿಬಂತು. ಪ್ರಶಾಂತ್ ಭೂಷಣ್, ದುಶ್ಯಂತ್ ದವೆ ಮತ್ತು ಕಾಮಿನಿ ಜೈಸ್ವಾಲ್ ಈ ಆರೋಪದ ಆಂತರಿಕ ತನಿಖೆಯಾಗಬೇಕೆಂದು ಆಗ್ರಹಿಸಿದಾಗ ಮಿಶ್ರಾರ ಎದುರಾಳಿ ಚೆಲಮೇಶ್ವರ್ ಒಪ್ಪಿಕೊಂಡರು. ಆದರೆ, ಯಾವುದೇ ಪರಿಶೀಲನೆಯನ್ನು ತರಾತುರಿಯಲ್ಲಿ ಮುಗಿಸುವ ಮಿಶ್ರಾರ ನಿರ್ಧಾರ ಅವರಿಗೆ ದುಬಾರಿಯಾಯಿತು.
ಅಂದಿನಿಂದ ಮಿಶ್ರಾ ಮತ್ತು ಚೆಲಮೇಶ್ವರ್ ಪರಸ್ಪರ ಮುಖ ನೋಡುವುದಿಲ್ಲ. ಇದರ ಜೊತೆಗೆ ಇತರ ಹಲವು ನ್ಯಾಯಾಧೀಶರು ಕೂಡಾ ತಮ್ಮ ಪಕ್ಷವನ್ನು ಆರಿಸಬೇಕಾಗಿ ಬಂತು. ಮಿಶ್ರಾರಿಗೆ ನ್ಯಾಯಾಲಯದಲ್ಲಿ ಬೆರಳೆಣಿಕೆಯ ಗೆಳೆಯರಷ್ಟೇ ಇದ್ದ ಕಾರಣ, ಮಿಶ್ರಾರ ಪೀಠದ ಮುಂದೆ ಪ್ರಮುಖ ಪ್ರಕರಣಗಳು ಬರುವಂತೆ ಪಟ್ಟಿ ಮಾಡುವುದರಿಂದ ಹಿಡಿದು ಭೂಷಣ್‌ರ ಅರ್ಜಿಯು ವಜಾ ಆಗುವಂತೆ ವೈಯಕ್ತಿಕವಾಗಿ ಉಸ್ತುವಾರಿ ವಹಿಸುವವರೆಗೆ, ದೀಪಕ್ ಮಿಶ್ರಾ ಎಲ್ಲದಕ್ಕೂ ತನ್ನ ಸಹೋದ್ಯೋಗಿ ಅರುಣ್ ಮಿಶ್ರಾರನ್ನು ಅವಲಂಬಿಸಬೇಕಾಯಿತು.
ಈ ಬೆಳವಣಿಗೆಯಿಂದ ಇತರ ನ್ಯಾಯಾಧೀಶರು ಮುಖ ಗಂಟಿಕ್ಕಿಕೊಂಡರು. ಅಂತಿಮವಾಗಿ ಇತರ ಮೂರು ಹಿರಿಯ ನ್ಯಾಯಾಧೀಶರು ಚೆಲಮೇಶ್ವರ್ ಪಕ್ಷವನ್ನು ಸೇರಿಕೊಂಡು ಜನವರಿಯಲ್ಲಿ ಐತಿಹಾಸಿಕ ಮಾಧ್ಯಮಗೋಷ್ಠಿ ನಡೆಸಿದರು.
ನ್ಯಾಯಾಂಗದ ಪರವಾಗಿ ಕಾರ್ಯಕಾರಿ ಜೊತೆಗಿನ ಸಿಜೆಐ ಮಿಶ್ರಾರ ಒಡನಾಟವನ್ನು ಎಚ್ಚರಿಕೆಯಿಂದ ವೀಕ್ಷಿಸಲಾಗುತ್ತಿತ್ತು ಮತ್ತು ದಾಖಲಿಸಲಾಗುತ್ತಿತ್ತು. ಆದರೆ, ಎಲ್ಲ ವಿವಾದಗಳು ಸ್ವಾಭಾವಿಕವಾಗಿ ಸಾಯುತ್ತವೆ ಎಂಬ ನಂಬಿಕೆಯಲ್ಲಿ ಮಿಶ್ರಾ ಏನೂ ನಡೆದೇ ಇಲ್ಲ ಎಂಬಂತೆ ವರ್ತಿಸಿದರು.
ಈಗ ದೀಪಕ್ ಮಿಶ್ರಾ ಮುಂದಿರುವ ದೊಡ್ಡ ಭಯವೆಂದರೆ ದೋಷಾರೋಪ ನಿರ್ಣಯ ಮಂಡಿಸಲ್ಪಟ್ಟ ಪ್ರಥಮ ಮುಖ್ಯ ನ್ಯಾಯಾಧೀಶ ಎಂಬ ಹಣೆಪಟ್ಟಿಯನ್ನು ಹೊತ್ತು ಪದವಿಯಿಂದ ಕೆಳಗಿಳಿಯುವುದು.
ವೈದ್ಯಕೀಯ ಕಾಲೇಜು ವಿವಾದದ ನಂತರ ಮಿಶ್ರಾ ತಮ್ಮ ಹೆಚ್ಚಿನ ನ್ಯಾಯಾಂಗ ಸಮಯವನ್ನು ಸಾಂವಿಧಾನಿಕ ಪೀಠದಲ್ಲಿ ವಿಚಾರಣೆಗಾಗಿ ಕಳೆಯುತ್ತಾರೆ. ಜೊತೆಗೆ ಅವರು ಅಯೋಧ್ಯಾ ಪ್ರಕರಣ ಮತ್ತು ನ್ಯಾಯಾಧೀಶ ಬಿ.ಎಚ್.ಲೋಯಾ ಸಾವಿನ ಪ್ರಕರಣದ ವಿಚಾರಣೆಯನ್ನು ವಿಶೇಷ ಪೀಠದಲ್ಲಿ ನಡೆಸುತ್ತಿದ್ದಾರೆ. 15 ಸಂವಿಧಾನ ಪೀಠಗಳ ನೇತೃತ್ವ ವಹಿಸುವ ಮೂಲಕ ಮಿಶ್ರಾ ನಿವೃತ್ತ ಸಿಜೆಐ ಕೆ.ಜಿ. ಬಾಲಕೃಷ್ಣನ್ ಅವರ ದಾಖಲೆಯನ್ನು ಸರಿದೂಗಿಸಿದ್ದಾರೆ. ಆದರೆ ಅವರ ಅಧಿಕಾರದ ಅವಧಿಯು 14 ತಿಂಗಳಾಗಿದ್ದರೆ ಬಾಲಕೃಷ್ಣನ್ ಅವರು 3 ವರ್ಷ ನಾಲ್ಕು ತಿಂಗಳು ಮುಖ್ಯ ನ್ಯಾಯಾಧೀಶರಾಗಿ ಕಾರ್ಯನಿರ್ವ ಹಿಸಿದ್ದು ಅತೀ ದೀರ್ಘಾವಧಿಯ ಸಿಜೆಐಗಳಲ್ಲಿ ಒಬ್ಬರಾಗಿದ್ದಾರೆ. ಸಿಜೆಐಯ ಅವಧಿಯನ್ನು ಕೆಲಸದ ದಿನಗಳ ಆಧಾರದಲ್ಲಿ ಲೆಕ್ಕಹಾಕಲಾಗುತ್ತದೆ. ಆದರೆ ಮಿಶ್ರಾರ ಸಮಸ್ಯೆಗಳನ್ನು ಗಮನಿಸಿದರೆ ಅವರ ಪಾಲಿಗೆ ಪ್ರತಿದಿನವೂ ಪ್ರಮುಖವಾಗಿದೆ.
ತನ್ನ ಕಾರ್ಯಗಳನ್ನು ನಿಭಾಯಿಸುವಲ್ಲಿ ಉತ್ತಮ ಕೆಲಸ ಮಾಡಿದ್ದಾರೆಯೇ ಅಥವಾ ಕೆಟ್ಟ ರೀತಿಯಲ್ಲಿ ಅಧಿಕಾರ ನಡೆಸಿದ್ದಾರೆಯೇ ಎಂಬುದರ ಮೇಲೆ ಮುಖ್ಯ ನ್ಯಾಯಾಧೀಶರ ಅವಧಿಯನ್ನು ವಿಶ್ಲೇಷಿಸಲಾಗುತ್ತದೆ. ಆದರೆ ಮಿಶ್ರಾ ವಿಷಯಕ್ಕೆ ಬಂದರೆ ಅವರು ನ್ಯಾಯಾಲಯವನ್ನು ವ್ಯವಸ್ಥಿತವಾಗಿಡಲು ಯಾವುದೇ ಪ್ರಯತ್ನವನ್ನು ಮಾಡಿಲ್ಲ ಎಂದೇ ಹೇಳಲಾಗುವುದು. ಈ ಗೊಂದಲದಲ್ಲಿ ಅವರು ಅತ್ಯುನ್ನತ ಸಾಂವಿಧಾನಿಕ ಸಂಸ್ಥೆಯ ಮೇಲಿರುವ ನಂಬಿಕೆಯನ್ನೇ ಕಳೆದುಕೊಳ್ಳುವಂತೆ ಮಾಡಿದ್ದಾರೆ. ವಿಪಕ್ಷಗಳು ದೋಷಾರೋಪ ನಿರ್ಣಯದ ಬಗ್ಗೆ ಮಾತನಾಡುವುದು ದೋಷಾರೋಪ ನಿರ್ಣಯ ಮಂಡನೆಗೂ ಹೆಚ್ಚು ಹಾನಿಕರವಾಗಿದೆ. ಈಗಲೂ ದೋಷಾರೋಪ ನಿರ್ಣಯ ಅಥವಾ ರಾಜೀನಾಮೆಯಂಥ ಸಂದರ್ಭವನ್ನು ತಪ್ಪಿಸಿ ಮುಂದಿನ ದಿನಗಳನ್ನು ಉತ್ತಮವಾಗಿ ನ್ಯಾಯಾಂಗದ ಸುಧಾರಣೆಗೆ ಬಳಸಲು ಮಿಶ್ರಾ ಅವರಿಗೆ ಅವಕಾಶವಿದೆ. ಅವರು ಸರ್ವೋಚ್ಚ ನ್ಯಾಯಾಲಯದ ಎಲ್ಲ ನ್ಯಾಯಾಧೀಶರ ಸಭೆ ಕರೆದು ಈ ತೊಂದರೆಗೆ ಏನಾದರೂ ಮಾಡಿದಾಗ ಮಾತ್ರ ಅದು ಸಾಧ್ಯ. ಅದು ಹೇಗೋ ಅವರು ಸದ್ಯದ ಪರಿಸ್ಥಿತಿಯಲ್ಲಿ ಮುಂದುವರಿದರೂ ಪ್ರತೀ ಗಂಭೀರ ವಿಷಯಗಳಲ್ಲಿ ಅವರು ಪ್ರದರ್ಶಿಸುವ ನಿಷ್ಕ್ರಿಯತೆಯಿಂದ ಭಾರತದ ಸ್ವತಂತ್ರ ನ್ಯಾಯಾಂಗವು ತನ್ನನ್ನೇ ರಕ್ಷಿಸುವ ಅನಿವಾರ್ಯತೆಗೆ ಒಳಗಾಗುವುದರಲ್ಲಿ ಅನುಮಾನವಿಲ್ಲ.
ಕೃಪೆ: ದಿ ಪ್ರಿಂಟ್.ಇನ್