ಪೂರ್ವ ಯುರೋಪ್ನಲ್ಲಿ ಕಿತ್ತಳೆ ಬಣ್ಣದ ಹಿಮದ ಮಳೆ
ಪ್ರಪಂಚೋದ್ಯ
ಹಿಮವು ಕಿತ್ತಳೆ ಬಣ್ಣವನ್ನು ತಳೆಯಲು ಸಾಧ್ಯವೇ?. ಖಂಡಿತವಾಗಿಯೂ ಸಾಧ್ಯವಿದೆ. ಕಳೆದ ಶುಕ್ರವಾರ ಹಾಗೂ ಶನಿವಾರ ಪೂರ್ವ ಯುರೋಪ್ನ ವಿವಿಧೆಡೆ ಕಿತ್ತಳೆ ಬಣ್ಣದಿಂದ ಕೂಡಿದ ಹಿಮವು ಆವರಿಸಿ, ಹಲವರನ್ನು ಚಕಿತಗೊಳಿಸಿತು. ಹಿಮವು ಕಿತ್ತಳೆ ಬಣ್ಣಕ್ಕೆ ತಿರುಗಿದ್ದನ್ನು ಕಂಡು ರಶ್ಯಾ, ಬಲ್ಗೇರಿಯ, ಉಕ್ರೇನ್, ರೊಮೇನಿಯಾ ಹಾಗೂ ಮೊಲ್ಡೊವಾ ದೇಶಗಳ ಹಲವೆಡೆ ನಾಗರಿಕರು ಗಾಬರಿಬಿದ್ದಿದ್ದರು.
ಕಿತ್ತಳೆ ಬಣ್ಣದ ಹಿಮ ಕವಿದ ಕೆಲವು ಪ್ರದೇಶಗಳಂತೂ ಥೇಟ್ ಮಂಗಳಗ್ರಹದ ಪರಿಸರವನ್ನೇ ಹೋಲುತ್ತಿತ್ತು. ಆ ಪ್ರದೇಶಗಳ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡ ಹಲವರು ಮಂಗಳನಲ್ಲಿ ಹಿಮಸುರಿಯುತ್ತಿದೆ ಎಂಬ ಜೋಕ್ ಹರಿಯಬಿಟ್ಟಿದ್ದರು.
ಕಿತ್ತಳೆ ಬಣ್ಣದ ಹಿಮ ಸುರಿಯುವುದು ಅಪರೂಪ. ಇಲ್ಲಿ ನಿಜಕ್ಕೂ ನಡೆದಿರುವುದೇನೆಂದರೆ ದೂರದ ಆಫ್ರಿಕಾ ಖಂಡದಿಂದ ಬೀಸಿದ ಪ್ರಚಂಡ ಬಿರುಗಾಳಿಯು ಭಾರೀ ಪ್ರಮಾಣದ ಮರಳನ್ನು ವಾತಾವರಣದಲ್ಲಿ ಸೇರಿಸಿತ್ತು. ಇದರಿಂದಾಗಿ ಈ ಮರಳು ಹಿಮ ಮತ್ತು ಮಳೆಯೊಂದಿಗೆ ಸಮ್ಮಿಶ್ರಣಗೊಂಡಿರುವುದೇ ಕಿತ್ತಳೆ ಹಿಮ ಸುರಿದಿದೆಯೆಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಸಾಮಾನ್ಯವಾಗಿ ಐದು ವರ್ಷಗಳಿಗೊಮ್ಮೆ ಈ ರೀತಿಯ ವಿದ್ಯಮಾನಗಳು ಸಂಭವಿಸುತ್ತಿರುತ್ತವೆ. ಆದರೆ ಈ ಸಲ ಅಧಿಕ ಪ್ರಮಾಣದಲ್ಲಿ ಹಿಮದೊಂದಿಗೆ ಮರಳು ಬೆರೆತುಕೊಂಡಿತ್ತು. ಕೆಲವೆಡೆಗಳಲ್ಲಂತೂ ಜನರು ತಮ್ಮ ಬಾಯಿಯೊಳಗೂ ಮರಳಿನ ಕಣಗಳು ಸೇರಿಕೊಂಡಿರುವುದಾಗಿ ಹೇಳಿಕೊಂಡಿದ್ದಾರೆಂದು ಬಿಬಿಸಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಪೂರ್ವ ಯುರೋಪ್ನ ಮೇಲೆ ಬಿಳಿಬಣ್ಣದ ಮೋಡಗಳನ್ನು ತೆಳುಕಂದು ಬಣ್ಣವು ಆವರಿಸಿರುವುದನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ತೆಗೆದಿರುವ ಛಾಯಾಚಿತ್ರಗಳು ತೋರಿಸಿಕೊಟ್ಟಿವೆ. ಬಿರುಗಾಳಿಯಿಂದ ಮೇಲಕ್ಕೆದ್ದ ಮರಳು ವಾತಾವರಣದ ಮೇಲ್ಮಟ್ಟವನ್ನು ತಲುಪಿದ ಬಳಿಕ ಅದು ಹರಡುತ್ತಾ ಕೆಳಗಿಳಿಯತೊಡಗುತ್ತದೆಯೆಂದು ಬ್ರಿಟನ್ನ ರಾಷ್ಟ್ರೀಯ ಹವಾಮಾನ ಸೇವಾ ಇಲಾಖೆಯ ವಿಜ್ಞಾನಿ ಸ್ಟೀವನ್ ಕೀಟ್ಸ್ ತಿಳಿಸಿದ್ದಾರೆ.