ಇತಿಹಾಸ ಪುನಾರಚನೆ ಹಿಂದೆ ಕೇಸರಿ ಅಜೆಂಡಾ?
ಕಳೆದ ವರ್ಷದ ಜನವರಿಯಲ್ಲಿ ಮೋದಿ ಸರಕಾರವು ವಿದ್ವಾಂಸರನ್ನೊಳ ಗೊಂಡ ಸಮಿತಿಯೊಂದನ್ನು ರಚಿಸಿ ಭಾರತದ ಇತಿಹಾಸವನ್ನು ಪುನಾರಚಿಸುವ ಕೆಲಸವನ್ನು ಅವರಿಗೆ ವಹಿಸಿದೆ.
ಅಂತಾರಾಷ್ಟ್ರೀಯ ಸುದ್ದಿಸಂಸ್ಥೆ ರಾಯ್ಟರ್ಸ್ನ ವರದಿಯ ಪ್ರಕಾರ, ಪ್ರಧಾನಿ ಮೋದಿ ರಚಿಸಿದ ಸಮಿತಿಯಲ್ಲಿ ಭೂಗೋಳಶಾಸ್ತ್ರಜ್ಞ, ಪುರಾತತ್ವ ತಜ್ಞ, ಪುರಾತನ ಸಂಸ್ಕೃತ ಭಾಷೆಯ ವಿದ್ವಾಂಸರು ಹಾಗೂ ಇಬ್ಬರು ಉನ್ನತ ಅಧಿಕಾರಿಗಳನ್ನು ಒಳಗೊಂಡಂತೆ ಒಟ್ಟು 14 ಮಂದಿ ಸದಸ್ಯರಿದ್ದಾರೆ.
ಪುರಾತತ್ವ ಸಂಶೋಧನೆ ಹಾಗೂ ಡಿಎನ್ಎ ತಂತ್ರಜ್ಞಾನದಂತಹ ಪುರಾವೆಗಳನ್ನು ಬಳಸಿಕೊಂಡು ಹಲವು ಸಹಸ್ರ ವರ್ಷಗಳ ಮೊದಲೇ ಹಿಂದೂಗಳು ಭಾರತದ ಮೂಲನಿವಾಸಿಗಳಾಗಿದ್ದರು ಹಾಗೂ ಹಿಂದೂ ಪುರಾಣಗಳು ಸತ್ಯವಾದುದಾಗಿದ್ದು, ಮಿಥ್ಯೆಯಲ್ಲವೆಂದು ಪ್ರಮಾಣೀಕರಿಸುವುದೇ ಈ ಸಮಿತಿಯ ಕೆಲಸವಾಗಿದೆ.
ವೈವಿಧ್ಯತೆಯ ರಾಷ್ಟ್ರವಾದ ಭಾರತದಲ್ಲಿ ಹಿಂದೂ ರಾಷ್ಟ್ರೀಯತಾವಾದಿಗಳು ಅಧಿಕಾರವನ್ನು ನಿಯಂತ್ರಿಸುವುದರಾಚೆಗೂ ತಮ್ಮ ಪ್ರಭಾವವನ್ನು ವಿಸ್ತರಿಸಲು ಹಾಗೂ ಅಂತಿಮವಾಗಿ ಭಾರತವು ಹಿಂದೂಗಳ ರಾಷ್ಟ್ರವೆಂಬ ತಮ್ಮ ಚಿಂತನೆಗೆ ಸರಿಹೊಂದುವಂತೆ ದೇಶದ ಗುರುತನ್ನು ರೂಪಿಸಲು ಯತ್ನಿಸುತ್ತಿದ್ದಾರೆ.
ಆಧುನಿಕ ಭಾರತವು ಬ್ರಿಟಿಷ್ ಆಳ್ವಿಕೆಯಿಂದೀಚೆಗೆ ವಲಸಿಗರು, ಆಕ್ರಮಣಗಳು ಹಾಗೂ ಮತಾಂತರಗಳ ನಡುವೆ ರೂಪುಗೊಂಡ ದೇಶವಾಗಿದೆಯೆಂಬ ಪ್ರಚಲಿತ ಇತಿಹಾಸವನ್ನು ಅವರೀಗ ಪ್ರಶ್ನಿಸುತ್ತಿದ್ದಾರೆ.
‘‘ಪುರಾತನ ಇತಿಹಾಸದ ಕೆಲವು ನಿರ್ದಿಷ್ಟ ಅಂಶಗಳನ್ನು ಪುನಾರಚಿಸಲು ಸರಕಾರಕ್ಕೆ ನೆರವಾಗುವಂತಹ ವರದಿಯೊಂದನ್ನು ಸಲ್ಲಿಸಲು ನನ್ನನ್ನು ಕೇಳಿಕೊಳ್ಳಲಾಗಿದೆ’’ ಎಂದು ಸಮಿತಿಯ ಅಧ್ಯಕ್ಷ ಕೆ.ಕೆ. ದೀಕ್ಷಿತ್ ತಿಳಿಸಿದ್ದಾರೆ.
ಭಾರತದ ಇತಿಹಾಸವನ್ನು ಪರಿಷ್ಕರಿಸುವ ಬೃಹತ್ ಯೋಜನೆಯ ಭಾಗವಾಗಿ ಈ ಸಮಿತಿ ಕೆಲಸ ಮಾಡಲಿದೆಯೆಂದು ಸಮಿತಿಯ ರಚನಕಾರರಾದ ಮಹೇಶ್ ಶರ್ಮಾ ದೃಢಪಡಿಸಿದ್ದಾರೆ.
ಇತಿಹಾಸವನ್ನು ಪುನಾರಚಿಸುವ ಮೋದಿ ಸರಕಾರದ ಪ್ರಯತ್ನಕ್ಕೆ ಹಲವಾರು ಚಿಂತಕರು, ರಾಜಕಾರಣಿಗಳು ಹಾಗೂ ಗಣ್ಯರಿಂದ ತೀವ್ರವಾದ ವಿರೋಧ ವ್ಯಕ್ತವಾಗಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲೇ, ಮುಸ್ಲಿಮರು ಯಾವತ್ತೂ ಈಗಿನಷ್ಟು ಅವಗಣಿಸಲ್ಪಟ್ಟಿರಲಿಲ್ಲ. ಈ ಸರಕಾರವು ಮುಸ್ಲಿಮರು ಭಾರತದಲ್ಲಿ ಎರಡನೇ ದರ್ಜೆಯ ನಾಗರಿಕರಾಗಿ ಬದುಕಬೇಕೆಂದು ಬಯಸುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
2014ರಲ್ಲಿ ಮೋದಿ ಸರಕಾರವು ಅಧಿಕಾರಕ್ಕೇರಲು ನೆರವಾಗಿರುವ ಆರೆಸ್ಸೆಸ್, ಇತಿಹಾಸ ಪುನಾರಚಿಸುವ ಕುರಿತ ಚರ್ಚೆಗೆ ಚಾಲನೆ ನೀಡಿದೆ. 17.20 ಕೋಟಿ ಮುಸಲ್ಮಾನರು ಸೇರಿದಂತೆ ಭಾರತೀಯ ಮೂಲದವರೆಲ್ಲರೂ ಹಿಂದೂಗಳಾಗಿದ್ದರು ಹಾಗೂ ಅವರೆಲ್ಲರೂ ತಮ್ಮ ಸಮಾನ ಪರಂಪರೆಯನ್ನು ಒಪ್ಪಿಕೊಳ್ಳಬೇಕು ಎಂಬುದನ್ನು ಅದು ಕಾಲಕಾಲಕ್ಕೆ ಪ್ರತಿಪಾದಿಸುತ್ತಾ ಬಂದಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರೆಸ್ಸೆಸ್)ವು ಮೋದಿ ಸೇರಿದಂತೆ ತನ್ನ ನಿಷ್ಠಾವಂತ ಸದಸ್ಯರನ್ನು ಕೆಲವು ಮಹತ್ವದ ಹುದ್ದೆಗಳಲ್ಲಿ ನಿಯೋಜಿಸಿದೆ. ಪ್ರಧಾನಿ ಮೋದಿ ಬಾಲ್ಯದಿಂದಲೇ ಆರೆಸ್ಸೆಸ್ನ ಸದಸ್ಯರಾಗಿದ್ದರು. ಕೇಂದ್ರ ಸಂಸ್ಕೃತಿ ಸಚಿವ ಶರ್ಮಾ ಅವರು ತನ್ನ ಅಧಿಕೃತ ಆತ್ಮಕತೆಯಲ್ಲಿ ತಾನು ಕೂಡಾ ಹಲವು ವರ್ಷಗಳಿಂದ ಆರೆಸ್ಸೆಸ್ನ ನಿಷ್ಠಾವಂತ ಅನುಯಾಯಿಯೆಂದು ಹೇಳಿಕೊಂಡಿದ್ದಾರೆ.
‘‘ಭಾರತದ ಇತಿಹಾಸದ ನೈಜ ಬಣ್ಣ ಕೇಸರಿಯಾಗಿದೆ ಹಾಗೂ ದೇಶದಲ್ಲಿ ಸಾಂಸ್ಕೃತಿಕ ಬದಲಾವಣೆಯನ್ನು ತರಲು ನಾವು ಇತಿಹಾಸವನ್ನು ಮತ್ತೆ ಬರೆಯಬೇಕಿದೆ’’ ಎಂದು ಆರೆಸ್ಸೆಸ್ ವಕ್ತಾರ ಮನಮೋಹನ್ ವೈದ್ಯ ತಿಳಿಸಿದ್ದಾರೆ. ಆರೆಸ್ಸೆಸ್ನ ಇತಿಹಾಸ ಸಂಶೋಧಕ ವಿಭಾಗದ ವರಿಷ್ಠ ಬಾಲಮುಕುಂದ್ ಪಾಂಡೆ, ತಾನು ನಿಯಮಿತವಾಗಿ ಕೇಂದ್ರ ಸಂಸ್ಕೃತಿ ಸಚಿವ ಶರ್ಮಾ ಅವರನ್ನು ಭೇಟಿಯಾಗುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ಪುರಾತನ ಹಿಂದೂಗ್ರಂಥಗಳು ವಾಸ್ತವಿಕವೇ ಹೊರತು, ಕಾಲ್ಪನಿಕವಲ್ಲ ಎಂಬುದನ್ನು ಸಾಬೀತುಪಡಿಸುವ ಮೂಲಕ ಭಾರತ ಗತ ವೈಭವವನ್ನು ಮರುಸ್ಥಾಪಿಸುವ ಕಾಲ ಈಗ ಸನ್ನಿಹಿತವಾಗಿದೆಯೆಂದು ಪಾಂಡೆ ಹೇಳಿದ್ದಾರೆ.
ಸಮಿತಿಯ ನಿರ್ಣಯಗಳು ಶಾಲಾ ಪಠ್ಯಪುಸ್ತಕಗಳಲ್ಲಿ ಹಾಗೂ ಶೈಕ್ಷಣಿಕ ಸಂಶೋಧನೆಗಳಲ್ಲಿ ಜಾಗವನ್ನು ಪಡೆದುಕೊಳ್ಳಲಿದೆಯೆಂಬ ಭರವಸೆಯನ್ನು ಶರ್ಮಾ ಹೊಂದಿದ್ದಾರೆ. 12 ಸಾವಿರ ವರ್ಷಗಳಿಂದೀಚೆಗೆ ಭಾರತೀಯ ಸಂಸ್ಕೃತಿಯ ಉಗಮ ಹಾಗೂ ವಿಕಸನದ ಸಮಗ್ರ ಅಧ್ಯಯನವನ್ನು ಪ್ರಸ್ತುತ ಪಡಿಸಲಾಗುವುದು ಎಂಬ ವಿಷಯವನ್ನು ಸಮಿತಿ ಪ್ರಸ್ತಾಪಿಸಿದೆ.
ವಿವಿಧ ಜನಾಂಗ, ಸಮುದಾಯಗಳ ಸಾಮೂಹಿಕ ವಲಸೆಯ ಪರಿಣಾಮವಾಗಿ ಭಾರತವು ಒಂದು ರಾಷ್ಟ್ರವಾಗಿ ರೂಪುಗೊಂಡಿದೆಯೆಂಬ ಚಿಂತನೆಯನ್ನು ಹಿಂದೂ ರಾಷ್ಟ್ರೀಯತಾವಾದಿಗಳು ಹಾಗೂ ಮೋದಿ ಪಕ್ಷದ ಹಿರಿಯ ನಾಯಕರು ವಿರೋಧಿಸುತ್ತಾರೆ. ಈಗಿನ ಹಿಂದೂ ಜನಸಮು ದಾಯವು ನೇರವಾಗಿ ಭಾರತೀಯ ನೆಲದ ಮೊದಲ ಮೂಲನಿವಾಸಿಗಳ ಪೀಳಿಗೆಯವರೆಂದೇ ಅವರು ನಂಬುತ್ತಾರೆ.
ರಾಷ್ಟ್ರೀಯತಾವಾದಿಗಳಿಗೆ ಈ ನೆಲದಲ್ಲಿ ಯಾರು ಮೊದಲು ನೆಲೆಸಿದವ ರೆಂಬ ಪ್ರಶ್ನೆಯು ಅತ್ಯಂತ ಮುಖ್ಯವಾಗಿರುತ್ತದೆ ಎಂದು ಖ್ಯಾತ ಇತಿಹಾಸತಜ್ಞೆ ರೋಮಿಲಾ ಥಾಪರ್ ಅಭಿಪ್ರಾಯಿಸುತ್ತಾರೆ. ‘‘ಒಂದು ವೇಳೆ ಹಿಂದೂಗಳಿಗೆ ಹಿಂದೂ ರಾಷ್ಟ್ರದ ನಾಗರಿಕರೆಂಬ ಅಗ್ರಮಾನ್ಯ ಸ್ಥಾನ ದೊರೆಯಬೇಕಿದ್ದರೆ, ತಮ್ಮ ಮೂಲಭೂತ ಧರ್ಮವು ಆಮದಾದುದಲ್ಲವೆಂದು ಅವರು ಪ್ರತಿಪಾದಿಸಬೇಕಾಗುತ್ತದೆ’’ ಎಂದವರ ಅನಿಸಿಕೆಯಾಗಿದೆ.
‘‘ತಮ್ಮ ಅಗ್ರಸ್ಥಾನವನ್ನು ಪ್ರತಿಪಾದಿಸುವುದಕ್ಕಾಗಿ, ಹಿಂದೂ ರಾಷ್ಟ್ರೀಯತಾ ವಾದಿಗಳು ತಮ್ಮ ಪೂರ್ವಿಕರು ಹಾಗೂ ತಾವು ಅನುಸರಿಸುತ್ತಿರುವ ಧರ್ಮವು ಸ್ವದೇಶಿ ಮೂಲದ್ದೆಂದು ಘೋಷಿಸಿಕೊಳ್ಳುವ ಅಗತ್ಯವಿರುತ್ತದೆ’’ ಎಂದು ಹೊಸದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ಹಲವು ದಶಕಗಳಿಂದ ಉಪನ್ಯಾಸಕಿಯಾಗಿರುವ ಹಾಗೂ ಪುರಾತನ ಭಾರತದ ಇತಿಹಾಸದ ಬಗ್ಗೆ ಪುಸ್ತಕಗಳನ್ನು ಬರೆದಿರುವ 86 ವರ್ಷ ಪ್ರಾಯದ ರೋಮಿಲಾ ಥಾಪರ್ ಹೇಳುತ್ತಾರೆ.
ಕಾಂಗ್ರೆಸ್ ಪಕ್ಷದ ಸಂಸದರಾದ ಶಶಿ ತರೂರ್ ಅವರು ‘‘ಭಾರತದ ಪರಿಕಲ್ಪನೆಯನ್ನು ಆಗ್ರಹಿಸುವ ಭಾರತೀಯ ಇತಿಹಾಸದ ಕುರಿತಾದ ರಾಜಕೀಯ ಅಭಿಯಾನವನ್ನು ರಾಷ್ಟ್ರೀಯತಾವಾದಿ ಹಿಂದೂಗಳು ಮುನ್ನಡೆಸುತ್ತಿದ್ದಾರೆ. ಸ್ವಾತಂತ್ರ ದೊರೆತ ಏಳು ದಶಕಗಳಿಂದ ಬಹುತ್ವವಾದದ ನಂಬಿಕೆಯ ಆಧಾರದಲ್ಲಿ ಭಾರತೀಯತೆಯು ವಿಕಸಿತವಾಗಿದೆ’’ ಎಂದು ಹೇಳುತ್ತಾರೆ. ಆದರೆ ಹಿಂದೂ ರಾಷ್ಟ್ರೀಯತಾವಾದದ ಉದಯವು ಅವರಲ್ಲಿ ಸಾಂಸ್ಕೃತಿಕ ಶ್ರೇಷ್ಠತೆಯ ಭಾವನೆಯನ್ನು ಉಂಟು ಮಾಡಿದೆಯೆಂದು ತರೂರ್ ಹೇಳುತ್ತಾರೆ.
ಸಮಿತಿಯ ಅಂತಿಮ ವರದಿಯನ್ನು ತಾನು ಸಂಸತ್ನ ಮುಂದೆ ಸಲ್ಲಿಸುವುದಾಗಿ ಹಾಗೂ ಸಮಿತಿಯು ಶೋಧಿಸಿದ ವಿಷಯಗಳು ಶಾಲಾ ಪಠ್ಯಪುಸ್ತಕಗಳಲ್ಲಿ ಸ್ಥಾನ ಪಡೆಯುವಂತಾಗಲು ತಾನು ಮಾನವಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಮನವೊಲಿಸುವುದಾಗಿ ಅವರು ಹೇಳಿದ್ದಾರೆ. ನಿಷ್ಠಾವಂತ ಆರೆಸ್ಸೆಸಿಗರಾದ ಪ್ರಕಾಶ್ ಜಾವಡೇಕರ್ ಶಿಕ್ಷಣ ಹಾಗೂ ಸಾಕ್ಷರತಾ ಸಚಿವರಾಗಿದ್ದಾರೆ.
ಸಾಂಸ್ಕೃತಿಕ ಸಚಿವಾಲಯದ ಪ್ರತಿಯೊಂದು ಶಿಫಾರಸನ್ನು ತಾವು ಗಂಭೀರವಾಗಿ ಪರಿಶೀಲಿಸುವುದಾಗಿ ಜಾವಡೇಕರ್ ತಿಳಿಸಿದ್ದಾರೆ. ನಮ್ಮ ಸರಕಾರವು, ಶಾಲೆಗಳಲ್ಲಿ ಹಾಗೂ ಕಾಲೇಜುಗಳಲ್ಲಿ ಬೋಧಿಸಲಾಗುತ್ತಿರುವ ಇತಿಹಾಸ ಪಠ್ಯದ ಆವೃತ್ತಿಯನ್ನು ಪ್ರಶ್ನಿಸುವ ದಿಟ್ಟತನವನ್ನು ಪ್ರದರ್ಶಿಸಿದ ಪ್ರಪ್ರಥಮ ಸರಕಾರವಾಗಿದೆ.
ಇತಿಹಾಸ ಪುನಾರಚನಾ ಸಮಿತಿಯ ಮೊದಲ ಸಭೆಯ ನಡಾವಳಿಗಳ ಪ್ರಕಾರ ಪುರಾತನ ಹಿಂದೂ ಧರ್ಮಗ್ರಂಥಗಳು ಹಾಗೂ ಹಲವು ಸಹಸ್ರ ವರ್ಷಗಳ ಪರಂಪರೆಯನ್ನು ಹೊಂದಿರುವ ಭಾರತೀಯ ನಾಗರಿಕತೆಯ ನಡುವೆ ಇರುವ ಅವಿನಾಭಾವ ಸಂಬಂಧವನ್ನು ದೃಢಪಡಿಸುವುದು ಅತ್ಯಗತ್ಯ ವಾಗಿದೆ. ಹೀಗೆ ಮಾಡುವುದರಿಂದ ಸಮಿತಿಗೆ ಅದು ಬಯಸಿದ ಎರಡೂ ತೀರ್ಮಾನಗಳಿಗೆ ಬರಲು ಸಾಧ್ಯವಾಗಲಿದೆ. ಹಿಂದೂ ಧರ್ಮಗ್ರಂಥಗಳಲ್ಲಿ ಬಣ್ಣಿಸಲಾದ ಘಟನೆಗಳು ನೈಜವಾಗಿ ನಡೆದಿರುವುದಾಗಿವೆ ಹಾಗೂ ಈಗಿನ ಹಿಂದೂಗಳು ಆ ಕಾಲದ ಪೀಳಿಗೆಗೆ ಸೇರಿದವರಾಗಿದ್ದಾರೆ ಎಂಬ ತೀರ್ಮಾನಕ್ಕೆ ಅವರು ಬರಲಿದ್ದಾರೆ.
ಸಚಿವ ಶರ್ಮಾ ಹಾಗೂ ಸಮಿತಿ ಸಭೆಯ ಟಿಪ್ಪಣಿಗಳ ಪ್ರಕಾರ, ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾದ ಸ್ಥಳಗಳಲ್ಲಿನ ಪುರಾತನ ಕಲಾಕೃತಿ ಗಳನ್ನು ಪರಿಶೀಲಿಸುವುದು, ಈ ಗ್ರಂಥಗಳಲ್ಲಿ ವಿವರಿಸಲಾದ ಖಗೋಳ ವಿದ್ಯಮಾನಗಳ ದಿನಾಂಕಗಳ ಅಧ್ಯಯನ ನಡೆಸುವುದು ಹಾಗೂ ಮಹಾ ಭಾರತ ಪುರಾಣಕಾವ್ಯದಲ್ಲಿ ಹೆಸರಿಸಲಾಗಿರುವ ಯುದ್ಧದ ಸ್ಥಳಗಳ ಉತ್ಖನನವನ್ನು ಈ ಯೋಜನೆಯು ಒಳಗೊಂಡಿದೆ.
ಭಾರತದ ಹಿಂದೂ ಸಂಸ್ಕೃತಿಯು ಲಕ್ಷಾಂತರ ವರ್ಷಗಳಷ್ಟು ಪುರಾತನ ವೆಂದು ದೇಶದ ಪ್ರಮುಖ ಸಂಸ್ಕೃತ ವಿದ್ವಾಂಸರಲ್ಲೊಬ್ಬರಾದ ಹೊಸದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಸಂತೋಷ್ ಕುಮಾರ್ ಶುಕ್ಲಾ ಹೇಳುತ್ತಾರೆ. ಇತಿಹಾಸದ ಪುನಾರಚನೆಯನ್ನು ಕೈಗೊಳ್ಳು ವಾಗ ತಾನು ಕಟ್ಟುನಿಟ್ಟಾಗಿ ವೈಜ್ಞಾನಿಕ ನಿಲುವನ್ನು ತಾಳುವುದಾಗಿ ಸಮಿತಿಯ ಇನ್ನೋರ್ವ ಸದಸ್ಯ ಹಾಗೂ ದಿಲ್ಲಿಯ ವಿವಿಯ ಭಾಷಾಶಾಸ್ತ್ರ ವಿಭಾಗದ ಮಾಜಿ ಮುಖ್ಯಸ್ಥರಾದ ರಮೇಶ್ ಚಂದ್ ಶರ್ಮಾ ಅವರು ಹೇಳುತ್ತಾರೆ. ‘‘ಯಾವುದೇ ಸಿದ್ಧಾಂತಕ್ಕೆ ನಾನು ವಶವರ್ತಿಯಾಗಿರಲಾರೆ’’ ಎಂದವರು ಸ್ಪಷ್ಟಪಡಿಸುತ್ತಾರೆ.
ಸುಮಾರು 2604 ಕೋಟಿ ರೂ.ಗಳ ವಾರ್ಷಿಕ ಬಜೆಟ್ ಹೊಂದಿರುವ ಸಾಂಸ್ಕೃತಿಕ ಸಚಿವಾಲಯವು ಕೇಂದ್ರೀಯ ನಿಧಿ, ಪುರಾತತ್ವ ಅಧ್ಯಯನ ಹಾಗೂ ಕಲಾ ವಿಷಯಗಳಿಗೆ ಆರ್ಥಿಕ ನೆರವು ನೀಡುವ ಹೊಣೆಗಾರಿಕೆ ಹೊಂದಿದೆ. ಹಿಂದುತ್ವದ ಸಿದ್ಧಾಂತಗಳಿಗೆ ಅನುಗುಣವಾಗಿ ಇತಿಹಾಸವನ್ನು ಪರಿಷ್ಕರಿಸುವ ಅಭಿಯಾನವನ್ನು ಆರಂಭಿಸುವಲ್ಲಿ ಸಾಂಸ್ಕೃತಿಕ ಸಚಿವಾಲಯವು ಪ್ರಭಾವಶಾಲಿ ಸ್ಥಾನಮಾನ ಹೊಂದಿದೆ.
ಕೃಪೆ: Asia Times and Reuters