ದಲಿತರ ಮೇಲಿನ ದೌರ್ಜನ್ಯ ಕಾಯ್ದೆ ದುರ್ಬಲ ತೀರ್ಪು ವಿಷಾದನೀಯ: ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್
ಮೈಸೂರು,ಏ.3: ದಲಿತರ ಮೇಲಿನ ದೌರ್ಜನ್ಯ ಕಾಯ್ದೆ ದುರ್ಬಲಗೊಳಿಸಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ವಿಷಾದನೀಯ. ಇದೊಂದು ಗಂಭೀರ ವಿಚಾರ. ಈ ಕುರಿತು ಕೇಂದ್ರ ಸರಕಾರ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದೆ ಎಂದು ಮಾಜಿ ಸಚಿವ, ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿ.ಶ್ರೀನಿವಾಸಪ್ರಸಾದ್ ಹೇಳಿದರು.
ನಗರದ ಖಾಸಗಿ ಹೋಟೆಲ್‍ನಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ದಲಿತರ ದೌರ್ಜನ್ಯ ಕಾಯ್ದೆ ಮತ್ತಷ್ಟು ಬಲಗೊಳ್ಳಬೇಕಿತ್ತು. ಆದರೆ ಯಾರೋ ಕೆಲವರು ಅಧಿಕಾರಿಗಳ ಮೇಲಿನ ದುರುದ್ದೇಶದಿಂದ ದೌರ್ಜನ್ಯ ಪ್ರಕರಣವನ್ನು ದಾಖಲಿಸುತ್ತಾರೆ ಎಂಬುದನ್ನೇ ಪ್ರಮುಖವಾಗಿ ಇಟ್ಟುಕೊಂಡು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಸರಿಯಲ್ಲ ಎಂದು ಹೇಳಿದರು.
ಈ ತೀರ್ಪುನ್ನು ಖಂಡಿಸಿ ಉತ್ತರ ಭಾರತದ ರಾಜ್ಯಗಳಲ್ಲಿ ನಡೆದ ಪ್ರತಿಭಟನೆಯಲ್ಲಿ 7 ಮಂದಿ ಮೃತಪಟ್ಟಿರುವುದು ದುರದೃಷ್ಟಕರ. ಇಂತಹ ಘಟನೆ ನಡೆಯಬಾರದಿತ್ತು. ಈ ಸಂಬಂಧ ಕೇಂದ್ರ ಸರಕಾರ ಪುರನ್ ಪರಿಶೀಲನಾ ಅರ್ಜಿಯನ್ನು ಹಾಕಿದ್ದು, ಕಾಯ್ದೆಯನ್ನು ಮತ್ತಷ್ಟು ಬಲಿಷ್ಟಗೊಳಿಸುವ ವಿಶ್ವಾಸವಿದೆ ಎಂದರು.
ಸುಪ್ರೀಂ ಕೋರ್ಟ್ ಮಾ.20 ರಂದೇ ತೀರ್ಪು ಪ್ರಕಟಿಸಿದ್ದರೂ ಪುನರ್ ಪರಿಶೀಲನೆ ಅರ್ಜಿ ಸಲ್ಲಿಸಲು ವಿಳಂಭವಾಗಿದ್ದೇ ಗೋಲಿಬಾರ್ ನಡೆಯಲು ಕಾರಣ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದೊಂದು ಗಂಭೀರ ವಿಷಯ. ವಿಳಂಬ ಎನ್ನುವುದಕ್ಕಿಂತ ಆದೇಶ ಪ್ರತಿಯನ್ನು ಪರಿಶಿಲೀಸಿ ಯಾವ ಆಧಾರದಿಂದ ಇಂತಹ ತೀರ್ಪು ಬಂದಿದೆ ಎಂದು ನೋಡಬೇಕು. ಸಾಲದಕ್ಕೆ ಕಾನೂನು ತಜ್ಞರ ಜೊತೆ ಸಮಾಲೋಚಿಸಿ ನಂತರ ಅರ್ಜಿ ಸಲ್ಲಿಸಬೇಕಿರವುದರಿಂದ ತಡವಾಗಿದೆ. ಸುಪ್ರೀಂ ಕೋರ್ಟ್ ತೀರ್ಪು ನೀಡಿರಬಹುದು. ಆದರೇ ಅದು ಲೋಕಸಭೆಯಲ್ಲಿ ಅಂಗೀಕಾರವಾಗಬೇಕಿದೆ ಎಂದು ಹೇಳಿದರು.
ತೀರ್ಪಿನ ಹಿಂದೆ ಆರೆಸ್ಸೆಸ್ ಆಗಲಿ, ಬಿಜೆಪಿಯವರ ಕೈವಾಡವಾಗಲಿ ಇದೆ ಎನ್ನುವುದು ಸತ್ಯಕ್ಕೆ ದೂರ. ಸುಪ್ರೀಂ ಕೋರ್ಟ್ ಒಂದು ಸಾಂವಿಧಾನಿಕ ಪೀಠ. ಅಲ್ಲಿನ ನ್ಯಾಯಾಧೀಶರುಗಳು ಅಷ್ಟು ಸುಲಭವಾಗಿ ಯಾರ ಮಾತುಗಳನ್ನು ಕೇಳುವವರಲ್ಲ. ನ್ಯಾಯಾಂಗದ ಮೇಲೆ ನಂಬಿಕೆ ಇರುವುದರಿಂದಲೇ ಹಲವಾರು ಪ್ರಕರಣಗಳಿಗೆ ಶಿಕ್ಷೆಯಾಗುತ್ತಿದೆ. ಬಿಜೆಪಿ ರಾಜ್ಯಗಳಲ್ಲಿ ದಲಿತ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ ಎಂಬುದನ್ನು ನಾನು ಒಪ್ಪುವುದಿಲ್ಲ. ಅಂತಹ ಕಡೆ ನಡೆದಿದೆ ಎನ್ನವುದಾದರೇ ನನ್ನ ವಿರೋಧ ಇದೆ. ಕಲ್ಕತ್ತ, ಕೇರಳದಲ್ಲೂ ದಲಿತ ದೌರ್ಜನ್ಯ ಪ್ರಕರಣಗಳು ನಡೆದಿವೆ. ಹಾಗಾಗಿ ನಾವು ದಲಿತರ ಮೇಲಿನ ದೌರ್ಜನ್ಯಗಳನ್ನಷ್ಟೇ ಪ್ರಮುಖವಾಗಿ ನೋಡಬೇಕೇ ಹೊರತು ಯಾವ ಪಕ್ಷ ಅಧಿಕಾರದಲ್ಲಿದೆ ಎಂಬುವುದನ್ನಲ್ಲ ಎಂದು ಹೇಳಿದರು.
ಸಿದ್ಧು ಸೋಲು ಖಚಿತ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದುರಹಾಂಕಾರ, ಉಡಾಫೆಯೇ ಅವರ ಸೋಲಿಗೆ ಪ್ರಮುಖ ಅಸ್ತ್ರವಾಗಲಿದೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಇವರ ಸೋಲು ಖಚಿತ. ಹೇಗೆ ಸೋಲಿಸುತ್ತೇನೆ ಎಂಬ ರಾಜಕೀಯ ತಂತ್ರಗಾರಿಕೆ ಬಿಟ್ಟುಕೊಡುವುದಿಲ್ಲ. ಒಟ್ಟಿನಲ್ಲಿ ಸಿದ್ದರಾಮಯ್ಯ ಅವರ ಸೋಲು ಶತ ಸಿದ್ಧ ಎಂದು ಶ್ರೀನಿವಾಪ್ರಸಾದ್ ಹೇಳಿದರು.
ಸಮಾಜವಾದಿ ಎಂದು ಹೇಳುವ ಸಿದ್ದರಾಮಯ್ಯ 750 ಕೆ.ಜಿ. ತೂಕದ ಸೇಬಿನ ಹಾರವನ್ನು ಹಾಕಿಸಿಕೊಳ್ಳುತ್ತಾರೆ. ಬೇಕಿದ್ದರೆ ಅಷ್ಟೇ ಗಾತ್ರದ ಚಿನ್ನದ ಹಾರವನ್ನು ಹಾಕಿದರೆ ಹಾಕಿಸಿಕೊಳ್ಳಲು ಇವರು ಸಿದ್ದ ಎಂದು ಪ್ರಸಾದ್ ವ್ಯಂಗ್ಯವಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮುಡಾ ಮಾಜಿ ಅಧ್ಯಕ್ಷರುಗಳಾದ ಕೆ.ಆರ್.ಮೋಹನ್‍ಕುಮಾರ್, ಸಿ.ಬಸವೇಗೌಡ, ಬಿಜೆಪಿ ಮುಖಂಡರಾದ ರಾಜೇಂದ್ರ, ಕುಂಬ್ರಳ್ಳಿ ಸುಬ್ಬಣ್ಣ, ಶ್ರೀನಿವಾಸಪ್ರಸಾದ್ ಅಭಿಮಾನಿಬಳಗದ ಭರತ್ ರಾಮಸ್ವಾಮಿ, ಅಶೋಕಪುರಂ ಶಿವಕುಮಾರ್, ವೆಂಕಟರಾಜು ಉಪಸ್ಥಿತರಿದ್ದರು.