ತೆಂಗಿನ ಕಾಯಿ ತೆಗೆಯುವ ತರಬೇತಿ ನೀಡಲು ಮಂಗಗಳಿಗೆ ಶಾಲೆ !
ಪ್ರಪಂಚೋದ್ಯ
ತೆಂಗಿನ ಮರದಿಂದ ತೆಂಗಿನ ಕಾಯಿ ತೆಗೆಯಲು ಕಾರ್ಮಿಕರ ಕೊರತೆ ಎದುರಿಸುತ್ತಿರುವ ಈ ಸಂದರ್ಭದಲ್ಲಿ ತೆಂಗಿನ ಮರ ಏರಿ ತೆಂಗಿನ ಕಾಯಿ ಕೀಳಲು ಮಲೇಶ್ಯಾದ ಶಾಲೆಯೊಂದು ಮಂಗಗಳಿಗೆ ತರಬೇತಿ ನೀಡುತ್ತಿದೆ. ಮಲೇಶ್ಯಾದ ಸಣ್ಣ ಗ್ರಾಮದಲ್ಲಿರುವ ಈ ಶಾಲೆಯಲ್ಲಿ ಮಕಾವೊ ತಳಿಯ ಮಂಗಗಳಿಗೆ ತರಬೇತಿ ನೀಡಲಾಗುತ್ತಿದೆ. ಹಂದಿ ಬಾಲದಂತೆ ಬಾಲವುಳ್ಳ ಈ ಮಕಾವೊಗಳು ತೆಂಗಿನ ಮರ ಏರಿ ಬೇಕಾದಷ್ಟು ತೆಂಗಿನ ಕಾಯಿಗಳನ್ನು ಕೊಯ್ದು ಹಾಕುವಂತೆ ಸಿದ್ದಗೊಳಿಸಲಾಗುತ್ತದೆ.
ದೇಶದ ಉತ್ತರದಲ್ಲಿರುವ ಪುಟ್ಟ ಗ್ರಾಮದಲ್ಲಿರುವ ಈ ಶಾಲೆಯಲ್ಲಿ ಅಜ್ಜ ಎಂದು ಎಲ್ಲರೂ ಕರೆಯುವ ವಾನ್ ಈ ತರಬೇತಿ ನೀಡುತ್ತಿದ್ದಾರೆ. ಕಳೆದ ನಾಲ್ಕು ದಶಕಗಳಿಂದ ಸಾವಿರಾರು ಮಕಾವೊಗಳು ಈ ಶಾಲೆಯಿಂದ ತೆಂಗಿನ ಕಾಯಿ ಕೀಳುವ ತರಬೇತಿ ಪಡೆದಿವೆ. ಸಣ್ಣ ಶುಲ್ಕಕ್ಕೆ ದೇಶಾದ್ಯಂತ ಇರುವ ಜನರು ತಮ್ಮ ಮಕಾವೊಗಳನ್ನು ಈ ಶಾಲೆಗೆ ಕಳುಹಿಸುತ್ತಾರೆ. ಚೈನ್‌ನಿಂದ ಈ ಮಕಾವೊಗಳನ್ನು ಕಟ್ಟಿ ತೆಂಗಿನ ಮರಗಳಿಗೆ ಹತ್ತಿಸಿ ತೆಂಗಿನ ಕಾಯಿ ತೆಗೆಯಲು ತರಬೇತಿ ನೀಡಲಾಗುತ್ತದೆ. ತೆಂಗಿನ ಕಾಯಿಗಳನ್ನು ತೆಗೆಯಲು ಮಕಾವೊಗಳನ್ನು ಬಳಸುತ್ತಿರುವುದಕ್ಕೆ ಈ ಹಿಂದೆ ಪ್ರಾಣಿ ಹಕ್ಕು ಹೋರಾಟಗಾರರು ವಿರೋಧ ವ್ಯಕ್ತಪಡಿಸಿದ್ದರು. ಇದು ಪ್ರಾಣಿಗಳ ಮೇಲಿನ ಹಿಂಸೆ ಎಂದು ಅವರು ಆರೋಪಿಸಿದ್ದರು. ಆದರೆ, ಅಜ್ಜ ವಾನ್ (ನಿಜವಾದ ಹೆಸರು ವಾನ್ ಇಬ್ರಾಹಿಂ ವಾನ್ ಮಾಟ್) ಅವರಿಗೆ ಸಮರ್ಥನೆ ನೀಡಿದ್ದರು.
‘‘ಮಕಾವೊಗಳು ನನ್ನ ಮಕ್ಕಳಿದ್ದಂತೆ’’ ಎಂದು 63ರ ಹರೆಯದ ವಾನ್ ಹೇಳಿದ್ದಾರೆ. ಗುಂಪು ತಾಳೆ ಮರಗಳಿರುವ ಪ್ರದೇಶಗಳಲ್ಲಿ ಮಕಾವೊಗಳಿಗೆ ಮರ ಹತ್ತಲು ತರಬೇತಿ ನೀಡಲಾಗುತ್ತದೆ. ‘‘ಅವುಗಳು ಕಾಯಿಯನ್ನು ಕೆಳಗೆ ಹಾಕಿದಾಗ ನಾವು ಪ್ರೀತಿ ತೋರಿಸುತ್ತೇವೆ.’’ ಎಂದು ವಾನ್ ಹೇಳಿದ್ದಾರೆ. ಮಲೇಶ್ಯಾ, ಇಂಡೋನೇಶ್ಯಾದ ಭಾಗಗಳು ಹಾಗೂ ದಕ್ಷಿಣ ಥಾಯ್ಲೆಂಡ್‌ನಲ್ಲಿ ಕಂಡು ಬರುವ ಮಧ್ಯಮ ಗಾತ್ರದ ಹಂದಿ ಬಾಲದ ಮಕಾವೊಗಳಿಗೆ ವಾನ್ ತರಬೇತಿ ನೀಡುತ್ತಿದ್ದಾರೆ.