ಧಾರವಾಡ: ಡಾ.ಬಾಬು ಜಗಜೀವನರಾಮ್ ಜಯಂತಿ ಆಚರಣೆ
ಧಾರವಾಡ, ಎ.5: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಗುರುವಾರ ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಮ್ ಜಯಂತಿ ಕಾರ್ಯಕ್ರಮವನ್ನು ಕರ್ನಾಟಕ ವಿದ್ಯಾವರ್ಧಕ ಸಂಘದ ನಾಡೋಜ ಪಾಪು ಸಭಾಂಗಣದಲ್ಲಿ ಆಚರಿಸಲಾಯಿತು.
ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್.ಸ್ನೇಹಲ್, ಡಾ.ಬಾಬು ಜಗಜೀವನರಾಮ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ದೇಶದಲ್ಲಿ ಆಹಾರ ಭದ್ರತೆ ತರಲು, ಕಾರ್ಮಿಕ ಕಾನೂನು ಜಾರಿಗೊಳಿಸಲು ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಬಾಬೂಜಿ ನೀಡಿದ ಕೊಡುಗೆ ಸ್ಮರಿಸಿದರು.
ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ನವೀನ್ ಶಿಂತ್ರೆ ಸೇರಿದಂತೆ ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಗಣಕರಂಗದ ಸಿದ್ದರಾಮ ಹಿಪ್ಪರಗಿ ಮತ್ತು ತಂಡದಿಂದ ಬಾಬೂಜಿ ನಾಟಕ ಪ್ರದರ್ಶನಗೊಂಡಿತು. ಮೊರಾರ್ಜಿ ದೇಸಾಯಿ ಹಾಗೂ ರಾಣಿ ಚನ್ನಮ್ಮ ವಸತಿ ಶಾಲೆ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ಜರುಗಿತು ಎಂದು ಪ್ರಕಟನೆ ತಿಳಿಸಿದೆ.