‘ಕದ್ದು ಮುಚ್ಚಿ’ ಸಹಭೋಜನ ಮಾಡದೆ ಬಹಿರಂಗವಾಗಿ ಮಾಡಿ!
ಡಾ. ಬಿ.ಆರ್.ಅಂಬೇಡ್ಕರ್ ಅವರ ಆಯ್ದ ಭಾಷಣ-ಬರಹಗಳು
ಭಾಯಿ ಪರಮಾನಂದರ ಜಾತಿಪಾತಿ ಮುರಿಯುವ ಉದ್ದೇಶ - ಹಿಂದೂ ಸಾಮ್ಯವಾದಿ ಸಂಸ್ಥೆಯ ಉದ್ದೇಶ ಹಾಗೂ ಕಾರ್ಯಕಲಾಪಗಳು - ಅನೇಕ ಹಿಂದೂ ಜನರಿಗೆ ಒಪ್ಪಿಗೆಯಾಗುತ್ತಿವೆ ಅನ್ನುವುದು ಸಂತೋಷದ ಸಂಗತಿ. ಇದನ್ನು ಪುಷ್ಟೀಕರಿಸುವ ಘಟನೆಯೊಂದು ಇತ್ತೀಚೆಗೆ ನಡೆದಿದೆ. ಮುಂಬೈ ಚಿಂಚಪೋಕಳಿಯ ಸೋಶಿಯಲ್ ಸರ್ವಿಸ್ ಲೀಗ್‌ನವರು ನಡೆಸುತ್ತಿರುವ ಶಾಲೆಯ ವಿದ್ಯಾಥಿಗಳು ಹಾಗೂ ಕುಸ್ತಿ ಕಲಿಯಲು ಬರುವ ಹಳ್ಳಿಯ ಜನ ಸೇರಿ ಗಣೇಶೋತ್ಸವವನ್ನು ಆಚರಿಸಿದರು.
ಸಾರ್ವಜನಿಕ ಗಣೇಶೋತ್ಸವದ ಸಂಕಲ್ಪನೆ ಇತ್ತೀಚೆಗಷ್ಟೇ ಆರಂಭವಾಗಿದೆ. ಹಿಂದೂಗಳಾಗಿಯೂ ಮುಸಲ್ಮಾನರ ಮುಹರ್ರಂ ಕಾಲದಲ್ಲಿ ಪರಸ್ಪರ ದ್ವೇಷಗಳನ್ನು ಮರೆತು ಮುಸಲ್ಮಾನರ ದೇವರನ್ನು ಬೇಡುವ ಸಂಪ್ರದಾಯವನ್ನು ಹಿಂದೂಗಳು ಪಾಲಿಸುತ್ತಿದರು. ಆದರೆ ಲೋ.ತಿಲಕರು ಹಿಂದೂಗಳನ್ನು ತಾಬೂದಿನಿಂದ (ಮುಹರ್ರಂನ ಮೆರವಣಿಗೆ) ರಕ್ಷಿಸಲು ಹಾಗೂ ಉತ್ಸಾಹವನ್ನೇ ವಿಕೃತಗೊಳಿಸಿಕೊಂಡಿರುವ ಇವರಿಗೆ ತಮ್ಮ ಧರ್ಮಕ್ಕೆ ಸಂಬಂಧಪಟ್ಟಿರುವಂತಹ ಯಾವುದಾದರೂ ಮನೋರಂಜನೆಯಾಗಿರಬೇಕು ಅನ್ನುವ ಉದ್ದೇಶದಿಂದ ಸಾರ್ವಜನಿಕ ಗಣೇಶೋತ್ಸವದ ಪ್ರತಿಷ್ಠಾಪನೆ ಮಾಡಿದರು. ಸಾರ್ವಜನಿಕ ಗಣೇಶೋತ್ಸವ ಆಚರಿಸುವುದರ ಹಿಂದಿನ ಇತಿಹಾಸ ಹೀಗಿರುವುದರಿಂದ ಉತ್ಸವದ ನಿರ್ದೇಶ ಸಾಧಾರಣವಾಗಿ ಮುಸಲ್ಮಾನರ ವಿರುದ್ಧವಾಗಿರುವುದು ಸಹಜವೆ. ಈಗ ಈ ಉತ್ಸವವನ್ನು ಹಿಂದೂ ಮಹಾಸಭೆಯ ಆಶ್ರಯದಲ್ಲಿ ಆಚರಿಸಲಾಗುತ್ತಿರುವುದರಿಂದ ಗಣೇಶೋತ್ಸವವೆಂದರೆ ಮುಸಲ್ಮಾನರ ವಿರುದ್ಧ ನಡೆಯುತ್ತಿರುವ ವ್ಯಾಖ್ಯಾನಮಾಲೆಯೇ ಎಂದೆನಿಸುತ್ತದೆ.
ಚಿಂಚಫೋಕಳಿಯಲ್ಲಿ ಆಚರಿಸಲಾದ ಗಣೇಶೋತ್ಸವದಲ್ಲಿ ನಡೆದ ಘಟನೆ ಮಾತ್ರ ಸ್ವಲ್ಪ ಭಿನ್ನವಾಗಿತ್ತು. ಇಲ್ಲಿ ಮುಸಲ್ಮಾನರ ವಿರುದ್ಧ ಜಪ ಮಾಡದೆ ಬ್ರಾಹ್ಮಣರನ್ನೇ ಗುರಿಮಾಡಲಾಯಿತು. ಸಹಭೋಜನದ ಮೂಲಕ ಬ್ರಾಹ್ಮಣರು ತಮ್ಮ ಸಂರಕ್ಷಣೆಗೆಂದೇ ಕಟ್ಟಿಕೊಂಡಿದ್ದ ಬೇಲಿಗಳಲ್ಲೊಂದಾದ ರೋಟಿ ಬಂದಿ ಅನ್ನುವ ಬೇಲಿಯನ್ನು ಕಿತ್ತೆಸೆಯಲಾಯಿತು. ಈ ಸಹಭೋಜನದಲ್ಲಿ ಬ್ರಾಹ್ಮಣರಿಂದ ಹಿಡಿದು ಭಂಗಿಗಳ ತನಕ ಎಲ್ಲರೂ ಸೇರಿದ್ದರು. ಆದರೆ ನನಗನಿಸಿದ ಮಟ್ಟಿಗೆ ಇಲ್ಲಿ ಎರಡು ವಿಷಯಗಳು ಅಪೂರ್ವವಾಗಿದ್ದವು. ಮೊದಲನೆಯದು ದಲಿತರು ಬ್ರಾಹ್ಮಣರಿಗೆ ಊಟ ಬಡಿಸಿದ್ದು. ಸಾಧಾರಣವಾಗಿ ದಲಿತರು ಹಾಗೂ ಬ್ರಾಹ್ಮಣರಲ್ಲಾಗುವ ಸಹಭೋಜನದಲ್ಲಿ ಅಡುಗೆಯ ಅಥವಾ ಯಜಮಾನ ಬ್ರಾಹ್ಮಣನಾಗಿರುತ್ತಾನೆ. ನಿಜ ಹೇಳುವುದಾದರೆ ಇಂತಹ ಸಹಭೊಜನಕ್ಕೆ ಯಾವುದೇ ಮಹತ್ವವಿರುವುದಿಲ್ಲ. ಎಲ್ಲರೂ ತಾವು ಬ್ರಾಹ್ಮಣರ ಎಂಜಲಿನ ದಣಿಗಳೆಂದೇ ತಿಳಿದಿರುತ್ತಾರೆ. ಬ್ರಾಹ್ಮಣರ ಕೈಯಿಂದ ಯಾರೂ ತಿನ್ನಬಹುದು.
ಬ್ರಾಹ್ಮಣರ ಕೈಯಡುಗೆಯನ್ನು ಬ್ರಾಹ್ಮಣರು ದಲಿತರು ಒಟ್ಟಿಗೆ ಕುಳಿತು ಊಟಮಾಡಿದರೆ ಬ್ರಾಹ್ಮಣರ ಗಂಟೇನೂ ಹೋಗುವುದಿಲ್ಲ. ಸಹಭೋಜನದ ಮುಖ್ಯ ಉದ್ದೇಶ ಬ್ರಾಹ್ಮಣ ನಿಲುವಿನ ಉಚ್ಚಾಟನೆಯೆಂದಾಗಿದ್ದರೆ ದಲಿತರ ಕೈಯಡುಗೆಯನ್ನು ಬ್ರಾಹ್ಮಣರಿಗೆ ಉಣಬಡಿಸಬೇಕು. ಅದು ಈ ಸಹಭೋಜನದಲ್ಲಿ ಸಾಧ್ಯವಾಯಿತು. ಹಾಗೆಂದೇ ಈ ಸಹಭೋಜನಕ್ಕೆ ವಿಶೇಷ ಮಹತ್ವ ಪ್ರಾಪ್ತವಾಗಿದೆ. ಮತ್ತೊಂದು ಮಹತ್ವದ ಘಟನೆಯೆಂದರೆ ಈ ಸಹಭೋಜನದಲ್ಲಿ ಶಾಲೆಯ ಹಾಗೂ ಕುಸ್ತಿ ಅಖಾಡದ ಪಕ್ಕದಲ್ಲಿದ್ದ ಆಸ್ಪತ್ರೆಯ ಭಂಗಿಗಳು ಕೂಡ ಬ್ರಾಹ್ಮಣರ ಒಟ್ಟಿಗೆ ಕುಳಿತು ಊಟ ಮಾಡಿದರು. ಕೇವಲ ಅಸ್ಪಶ್ಯ ಎನ್ನುವ ಶಬ್ದದಿಂದಲೇ ಬ್ರಾಹ್ಮಣರ ಮೈ ಉರಿಯುತ್ತದೆ. ಅಪರಿಚಿತ ಅಸ್ಪಶ್ಯರೊಡನೆ ಪರಿಚಯ ಮಾಡಿಕೊಳ್ಳುವಂತಹ ಪ್ರಸಂಗ ಬಂದರಂತೂ ಹೇಗೋ ತಡೆದುಕೊಂಡು ಸಮಯ ಕಳೆಯುತ್ತಾರೆ. ಅಂತಹುದರಲ್ಲಿ ತಮ್ಮ ಕಣ್ಣೆದುರೇ ಭಂಗಿಗಳೊಡನೆ ಒಟ್ಟಿಗೆ ಕುಳಿತು ಊಟ ಮಾಡುವುದನ್ನು ನೋಡಲು ಧೈರ್ಯ ಬೇಕು ಅನ್ನುವುದನ್ನು ಬ್ರಾಹ್ಮಣ ಜಾತಿಯ ಅಭಿಮಾನವಿರುವ ಯಾವುದೇ ಮನುಷ್ಯ ಅಲ್ಲಗಳೆಯಲಾರ. ಇಂತಹ ಮಂಗಳಮಯ ಕಾಲದ ಶ್ರೇಯಸ್ಸು ನಮ್ಮ ಉತ್ಸಾಹಿ ಮಿತ್ರರಾದ ಆಪಟೆ ಅವರಿಗೆ ಸಲ್ಲುತ್ತದೆ. ಇದೊಂದು ವಾರ್ಷಿಕ ಉತ್ಸವವಾಗದೆ ದಿನನಿತ್ಯದ ಕಾರ್ಯಕ್ರಮವಾಗಲು ಭಾಯಿ ಪರಮಾನಂದರ ಜಾತಪಾತ ತೋಡಕ ಮಂಡಳದಂತಹದ್ದೇನಾದರೂ ವ್ಯವಸ್ಥೆಯಾಗಬೇಕು ಅನ್ನುವುದೇ ಡಾ.ಆಪಟೆಯವರಲ್ಲಿ ಸೂಚನೆ.
ಈ ಸಹಭೋಜನದಲ್ಲಿ ಒಟ್ಟು 70ರಿಂದ 80 ಜನರಿದ್ದರು. ಸಣ್ಣ ಜಾಗ ಹಾಗೂ ಕಡಿಮೆ ಸಮಯದ ಕಾರಣ ಸಹಭೋಜನದಲ್ಲಿ ಭಾಗವಹಿಸಲಿಚ್ಛಿಸುವ ಇತರ ಅನೇಕರನ್ನು ಆಮಂತ್ರಿಸಲಾಗಲಿಲ್ಲ. ಹಾಗೆಯೇ ಮಾಟುಂಗಾ ಹಿಂದೂ ಮಹಾಸಭೆಯ ಸಚಿವರಾದ ಡಾ.ಉದ್‌ಗಾಂವಕರ್ ಅವರನ್ನು ಅವರ ಗೆಳೆಯರೊಡನೆ ಆಮಂತ್ರಿಸಿದ್ದೆವು, ಅದನ್ನೊಪ್ಪಿಕೊಂಡ ಅವರು ಯುರೋಪಿಯನ್ ಪದ್ಧತಿಯಂತೆ ಒಂದು ನಿಮಿಷವೂ ಆಚೀಚೆ ಆಗದಂತೆ ಸರಿಯಾಗಿ ಹನ್ನೆರಡು ಘಂಟೆಗೆ ಬಂದು ‘ಖಾನಾ ತಯ್ಯೆರ ಹೈ?’ ಎಂದು ಅಲ್ಲಿಯ ಅಡುಗೆಯವರನ್ನು ಕೇಳಿದರು. ಅಡುಗೆಯವರು ‘ಇನ್ನೂ ಸ್ವಲ್ಪ ಕಾಲಾವಕಾಶವಿದೆ’ ಎಂದು ಉತ್ತರಿಸಿದಾಗ ಸಿಟ್ಟಿಗೆದ್ದು ‘ಹಮ್ ಜಾತಾ ಹೈ ಹಮಕೋ ದೂಸರಾ ಕಾಮ್ ಹೈ’ ಎಂದು ಹೇಳಿ ಅಲ್ಲಿಂದ ಹೊರಟು ಹೋದರು. ಹೋಗುವಾಗ ಡಾ. ಮಹಾಶಯರು ಒಂದು ಪತ್ರವನ್ನು ಬರೆದಿಟ್ಟು ಹೋದರು. ಅದರಲ್ಲಿ, ‘‘ಹಿಂದೂ ಮಹಾಸಭೆಯು ಇಂಥ ಅನೇಕ ಸಹಭೋಜನವನ್ನು ಆಯೋಜಿಸಿದೆ, ಆದರೆ ಅದನ್ನೆಲ್ಲೂ ಪ್ರಕಟಿಸದೆ ಯಾರ ಸಹಾಯವೂ ಇಲ್ಲದೆ ನಾವೇ ಅದನ್ನು ಆಯೋಜಿಸಿದ್ದೇವೆ, ಮುಂದೆಯೂ ಆಯೋಜಿಸುತ್ತಿರುತ್ತೇವೆ’’ ಅನ್ನುವಂತಹ ಉರಿಕಾರುವ ಶಬ್ದಗಳನ್ನು ಬಳಸಿದ್ದಾರೆ.
ಹಿಂದೂ ಮಹಾಸಭೆಗೆ ಇಂತಹ ಸಹಭೋಜನದ ಕಾರ್ಯಕ್ರಮಗಳು ಇಷ್ಟವಿದ್ದರೆ ಇಂತಹ ಕಾರ್ಯಕ್ರಮಗಳನ್ನವರು ಹಿಂದೆಯೂ ಮಾಡಿದ್ದು ಮುಂದೆಯೂ ಮಾಡುವವರಿದ್ದರೆ ಸಚಿವರಿಗೆ ಈ ಆಮಂತ್ರಣ ಖುಷಿ ಕೊಡಬೇಕಿತ್ತು. ಆದರೆ ಅವರಿಗೆ ಸಿಟ್ಟು ಬಂತು! ನನಗೇನನಿಸುತ್ತದೆ ಗೊತ್ತೇ? ಅವರು ಹಿಂದೂ ಸಂಘಟನೆಯ ಬಗ್ಗೆ ಉದ್ದುದ್ದ ಭಾಷಣಗಳನ್ನು ಬಿಗಿಯುವಾಗ, ದೊಡ್ಡ ದೊಡ್ಡ ಮಾತುಗಳನ್ನಾಡುವಾಗ ಅವರು ವರ್ತಿಸುವ ರೀತಿಯೂ ಹಾಗೆ ಇದೆಯೇ? ಎಂದು ಪರೀಕ್ಷಿಸಲು ನಾವವರನ್ನು ಆಮಂತ್ರಿಸಿದ್ದೇವೆ ಎಂದವರಿಗೆ ಅನಿಸಿದ್ದರಿಂದ ಸಿಟ್ಟು ಬಂದಿರಬೇಕು. ನಿಜ ಹೇಳುವುದಾದರೆ ಹಿಂದೂ ಮಹಾಸಭೆಯನ್ನು ನಾಚಿಸಲೆಂದೋ ಇಲ್ಲವೆ ಅದರ ಸಚಿವರನ್ನು ಪರೀಕ್ಷಿಸಲೆಂದೋ ಈ ಸಹಭೊಜನವನ್ನಿಟ್ಟುಕೊಂಡಿರಲಿಲ್ಲ.
ಆದರೆ ಅವರಿಗೆ ಹಾಗನಿಸುವುದು ಸ್ವಾಭಾವಿಕ. ಸಚಿವರು ಸಿಟ್ಟು ಮಾಡಿಕೊಳ್ಳುವ ಮೊದಲು ಜನ ತನ್ನ ನಡವಳಿಕೆಯ ಬಗ್ಗೆ ಯಾಕೆ ಅನುಮಾನ ಪಡುತ್ತಾರೆ ಅನ್ನುವುದನ್ನು ಮೊದಲು ಯೋಚಿಸಿ ತದನಂತರ ಅನುಮಾನ ಪರಿಹರಿಸಿದರೆ ಮಾತ್ರ ಇಂತಹ ಆಮಂತ್ರಣಗಳನ್ನು ಯಾರೂ ಬಲವಂತ ಮಾಡಲಾರರು. ಸಚಿವ ಮಹಾಶಯರು ಸಹಭೋಜನ ಮಾಡುವುದಿಲ್ಲ ಎಂದಲ್ಲ. ಆದರೆ ಅವರದನ್ನೆಲ್ಲೂ ಪ್ರಕಟಿಸುವುದಿಲ್ಲವಾದ್ದರಿಂದ ಅವರು ಹೇಳಿದಂತೆ ನಡೆದುಕೊಳ್ಳುತ್ತಾರೆಯೇ? ಎಂದು ತಿಳಿಯುವ ಮಾರ್ಗವೇ ಇಲ್ಲ. ಅನೇಕ ಸನಾತನ ಧರ್ಮದವರು ಕೂಡ ಸಹಭೋಜನ ಮಾಡುತ್ತಾರೆ. ಆದರೆ ಅದನ್ನೆಲ್ಲೂ ಹೇಳಿಕೊಳ್ಳುವುದಕ್ಕೆ ಹಿಂಜರಿಯುತ್ತಾರೆ. ‘ಆಗಬಾರದ್ದು ಆಯಿತು’ ಎಂದು ತಿಳಿದು ಬಾಯಿಮುಚ್ಚಿ ಸುಮ್ಮನಿದ್ದುಬಿಡುತ್ತಾರೆ. ಹಾಗಾಗಿ ಅವರು ಸಹಭೋಜನ ಮಾಡಿಯೂ ಕೂಡ ಮಾಡುವುದಿಲ್ಲ ಅನ್ನುವ ಅನಿಸಿಕೆ ಎಲ್ಲರದ್ದಾಗುತ್ತದೆ. ಈ ತಪ್ಪು ತಿಳುವಳಿಕೆಗೆ ಅವರೇ ಸ್ವತಃ ಕಾರಣರು. ಅದೇ ರೀತಿ ಡಾಕ್ಟರ್ ಮಹಾಶಯರದ್ದಾಗಿರಬೇಕು. ಇದರ ಉಪಾಯ ಅವರ ಕೈಯಲ್ಲೇ ಇದೆ. ಅವರು ಮಾಡುವ ಸಹಭೋಜನವನ್ನವರು ಕದ್ದು ಮುಚ್ಚಿ ಮಾಡದೆ ಎಲ್ಲರೆದುರು ಹೇಳಿಕೊಳ್ಳಲಿ, ಇಲ್ಲವಾದಲ್ಲಿ ಇವರು ಸಹಭೋಜನ ಮಾಡಿಯೂ ಕೂಡ ಮಾಡಿಲ್ಲ ಅನ್ನುವ ಭ್ರಮೆಯಲ್ಲಿ ಕ್ರಾಂತಿಕಾರಿಗಳು ಇಂತಹ ಆಮಂತ್ರಣಗಳನ್ನು ಅವರಿಗೆ ಕೊಟ್ಟು ಅವರನ್ನು ಪೀಡಿಸದೆ ಬಿಡರು.