ಮತದಾನ ಜಾಗೃತಿಗಾಗಿ ಸ್ವೀಪ್ ಜೊತೆಗೂಡಿದ ವಿದ್ಯಾರ್ಥಿಗಳು
1.52ಲಕ್ಷ ಮಕ್ಕಳ ಪೋಷಕರಿಂದ ಪ್ರತಿಜ್ಞೆ: ಕ್ಯಾಂಪಸ್ ರಾಯಭಾರಿ ನೇಮಕ
ಫೋಷಕರಿಗೆ ಮತದಾನ ಮಾಡುವ ಬಗ್ಗೆ ಪತ್ರ ಬರೆದಿರುವ ವಸತಿ ನಿಲಯಗಳ ವಿದ್ಯಾರ್ಥಿಗಳು
ಉಡುಪಿ, ಎ.5: ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸಿ ಮತದಾನದ ಪ್ರಮಾಣ ಹೆಚ್ಚಿಸಲು ಉಡುಪಿ ಜಿಲ್ಲಾ ಸ್ವೀಪ್ ಸಮಿತಿಯ ಜೊತೆ ಜಿಲ್ಲೆಯ ಶಾಲಾ ಕಾಲೇಜು ಮತ್ತು ಹಾಸ್ಟೆಲ್ಗಳ ಲಕ್ಷಾಂತರ ವಿದ್ಯಾರ್ಥಿಗಳು ಕೈಜೋಡಿಸಿದ್ದಾರೆ.
ಜಿಲ್ಲಾಡಳಿತವು ಸುಮಾರು ಎರಡು ಲಕ್ಷ ಮತದಾರರ ಪ್ರತಿಜ್ಞಾ ವಿಧಿಯ ಕರಪತ್ರವನ್ನು ಮುದ್ರಿಸಿದ್ದು, ಅದರಲ್ಲಿ 1.52 ಲಕ್ಷ ಕರಪತ್ರಗಳನ್ನು ಜಿಲ್ಲೆಯ ಒಂದರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ನೀಡಿ ಅವರ ಪೋಷಕರಿಂದ ನೈತಿಕ ಮತದಾನ ಮಾಡುವ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಒಟ್ಟು 1,248 ಕಿರಿಯ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿದ್ದು, ಇದರಲ್ಲಿ 705 ಸರಕಾರಿ, 269 ಅನುದಾನಿತ ಮತ್ತು 274 ಖಾಸಗಿ ಶಾಲೆಗಳಿವೆ.
ಮತದಾರರ ಪ್ರತಿಜ್ಞಾ ವಿಧಿ: ‘ಪ್ರಜಾಪ್ರಭುತ್ವದಲ್ಲಿ ದೃಢವಿಶ್ವಾಸವುಳ್ಳ ಭಾರತದ ಪೌರರಾದ ನಾವು, ನಮ್ಮ ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯಗಳು ಮತ್ತು ಮುಕ್ತ, ನ್ಯಾಯಸಮ್ಮತ ಮತ್ತು ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿ ಹಿಡಿಯುತ್ತೇವೆ ಮತ್ತು ಪ್ರತಿಯೊಂದು ಚುನಾವಣೆಯಲ್ಲಿ ನಿರ್ಭೀತರಾಗಿ ಮತ್ತು ಧರ್ಮ, ಜನಾಂಗ, ಜಾತಿ, ಮತ, ಭಾಷೆ ಅಥವಾ ಯಾವುದೇ ಪ್ರೇರೇಪಣೆಗಳ ದಾಕ್ಷಿಣ್ಯಗಳಿಂದ ಪ್ರಭಾವಿತರಾಗದೆ ಮತ ಚಲಾಯಿಸುತ್ತೇವೆ’ ಎಂದು ಪ್ರತಿಜ್ಞೆ ಸ್ವೀಕರಿಸಿರುವ ವಿದ್ಯಾರ್ಥಿಗಳ ಪೋಷಕರು, ಕರಪತ್ರದ ಕೆಳಗಿನ ಭಾಗದಲ್ಲಿರುವ ‘ನಾನು ಈ ಮೇಲೆ ತಿಳಿಸಿದ ಪ್ರತಿಜ್ಞಾ ವಿಧಿಗೆ ಬದ್ಧನಾಗಿ ಮತಚಲಾಯಿಸುತ್ತೇನೆ ಹಾಗೂ ಇತರರಿಗೂ ಪ್ರೇರಣೆಯನ್ನು ನೀಡುತ್ತೇನೆ’ ಎಂಬ ಬರಹದ ಕೆಳಗೆ ಹೆಸರು ಮತ್ತು ವಿಳಾಸ ಬರೆದು ಸಹಿ ಹಾಕಿದ್ದಾರೆ.
ವಿದ್ಯಾರ್ಥಿಗಳು ಪೋಷಕರ ಸಹಿ ಇರುವ ಕರಪತ್ರದ ಕೆಳಗಿನ ಭಾಗವನ್ನು ಕತ್ತರಿಸಿ ಶಾಲೆಗೆ ತಂದು ಒಪ್ಪಿಸಿದ್ದಾರೆ. ಪ್ರತಿಯೊಂದು ಶಾಲೆಯವರು ಸಾರ್ವಜನಿಕ ಶಿಕ್ಷಣ ಇಲಾಖೆಯ ಮೂಲಕ ಅದನ್ನು ಮಾ.20ರಂದು ಜಿಲ್ಲಾಡಳಿತಕ್ಕೆ ನೀಡಿದ್ದಾರೆ.
ಕ್ಯಾಂಪಸ್ ರಾಯಭಾರಿ: ಮತದಾನಕ್ಕೆ ಅರ್ಹರಾಗಿರುವ 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳಿರುವ ಜಿಲ್ಲೆಯ ಪದವಿ ಕಾಲೇಜುಗಳಲ್ಲಿ ಮತದಾನದ ಕುರಿತ ಜಾಗೃತಿ ಮೂಡಿಸುವುದಕ್ಕಾಗಿ ಕ್ಯಾಂಪಸ್ ರಾಯಭಾರಿಗಳನ್ನು ನೇಮಕ ಮಾಡಲಾಗಿದೆ.
ಹೀಗೆ ಜಿಲ್ಲೆಯಾದ್ಯಂತ ಆಯಾ ಕಾಲೇಜುಗಳ 43 ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಕ್ಯಾಂಪಸ್ ರಾಯಭಾರಿಗಳನ್ನಾಗಿ ನಿಯೋಜಿಸಲಾಗಿದೆ. ಅವರಿಗೆ ಈಗಾಗಲೇ ಜಿಲ್ಲಾಡಳಿತದ ವತಿಯಿಂದ ತರಬೇತಿ ನೀಡಲಾಗಿದೆ. ಕ್ಯಾಂಪಸ್ ರಾಯಭಾರಿಗಳಿಗೆ ತಮ್ಮ ಕಾಲೇಜುಗಳಲ್ಲಿ ಮತದಾರ ಪಟ್ಟಿಗೆ ಸೇರ್ಪಡೆ ಗೊಳ್ಳದವರನ್ನು ಸೇರಿಸುವಂತೆ ಮಾಡುವುದು ಮತ್ತು ಮತದಾರ ಪಟ್ಟಿಯಲ್ಲಿರುವವರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಜವಾಬ್ದಾರಿಯನ್ನು ನೀಡಲಾಗಿದೆ.
‘ಕ್ಯಾಂಪಸ್ ರಾಯಭಾರಿಗಳಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ತರಬೇತಿ ನೀಡಲಾಗಿದೆ. ಅದರಂತೆ ನಮ್ಮ ಕಾಲೇಜಿನ ತರಗತಿಗಳಿಗೆ ತೆರಳಿ ಮತದಾನದ ಕುರಿತು ಅರಿವು ಮೂಡಿಸಿದ್ದೇವೆ. ಮತದಾರರ ಪಟ್ಟಿಗೆ ಸೇರಿಸಲು ಕೆಲವು ವಿದ್ಯಾರ್ಥಿಗಳು ನಮ್ಮಲ್ಲಿ ಹೆಸರನ್ನು ನೀಡಿದ್ದಾರೆ. ಮುಂದೆ ಮತದಾನದ ಕುರಿತು ಜಾಗೃತಿ ಮೂಡಿಸುವ ಬೀದಿ ನಾಟಕ ಮಾಡುವ ಉದ್ದೇಶವನ್ನು ಇಟ್ಟುಕೊಂಡಿದ್ದೇವೆ’ ಎಂದು ಉಡುಪಿ ಎಂಜಿಎಂ ಕಾಲೇಜಿನ ಕ್ಯಾಂಪಸ್ ರಾಯಭಾರಿ ಅನಿತಾ ಜಿ.ವಿ. ತಿಳಿಸಿದ್ದಾರೆ.
ಅದೇ ರೀತಿ ಉಡುಪಿ ಜಿಲ್ಲೆಯಲ್ಲಿರುವ 43 ಸರಕಾರಿ ಸೇರಿದಂತೆ ಒಟ್ಟು 105 ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಲ್ಲಿಯೂ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಇದರಲ್ಲಿ ಪ್ರಥಮ ಪಿಯುಸಿಯ 15 ಸಾವಿರ ಹಾಗೂ ದ್ವಿತೀಯ ಪಿಯುಸಿಯ 16 ಸಾವಿರ ವಿದ್ಯಾರ್ಥಿಗಳು ಕೈಜೋಡಿಸಿದ್ದಾರೆ.
ಹಾಸ್ಟೆಲ್ ಮಕ್ಕಳಿಂದ ಪೋಷಕರಿಗೆ ಪತ್ರ!
ಉಡುಪಿ ಜಿಲ್ಲೆಯ ಒಟ್ಟು 75 ವಿವಿಧ ವಸತಿ ನಿಲಯಗಳಲ್ಲಿರುವ ಸುಮಾರು 3,324 ವಿದ್ಯಾರ್ಥಿಗಳ ಮೂಲಕ ತಮ್ಮ ಪೋಷಕರಿಗೆ ಮತದಾನ ಮಾಡುವ ಬಗ್ಗೆ ಅಂಚೆ ಮೂಲಕ ಪತ್ರ ಬರೆಸಲಾಗಿದೆ. ಜಿಲ್ಲಾಡಳಿತ ಕೊಡಮಾಡಿದ ಫೋಸ್ಟ್ಕಾರ್ಡ್ಗಳಲ್ಲಿ ಮಕ್ಕಳು ತಮ್ಮ ತಂದೆ ತಾಯಂದಿರಿಗೆ ಯಾವುದೇ ಆಮಿಷಕ್ಕೆ ಒಳಗಾಗದೆ ನೈತಿಕ ಮತದಾನ ಮಾಡುವಂತೆ ಬರೆದು ಪೋಸ್ಟ್ ಮಾಡಿದ್ದಾರೆ. ಹೀಗೆ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯ 22 ವಸತಿ ನಿಲಯಗಳ 1,200 ಹಿಂದುಳಿದ ವರ್ಗ ಇಲಾಖೆ ವ್ಯಾಪ್ತಿಯ 41 ವಸತಿ ನಿಲಯಗಳ 1,500 ಹಾಗೂ ಐಟಿಡಿಪಿ ಇಲಾಖೆ ವ್ಯಾಪ್ತಿಯ 12 ಹಾಸ್ಟೆಲ್ಗಳ 624 ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ ಪತ್ರ ಬರೆದು ನೈತಿಕ ಮತದಾನ ಮಾಡುವಂತೆ ಮನವೊಲಿಸುವ ಕೆಲಸ ಮಾಡಿದ್ದಾರೆ.
ಮತದಾನ ಜಾಗೃತಿಯಲ್ಲಿ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ನಮ್ಮಾಂದಿಗೆ ಕೈಜೋಡಿಸಿದ್ದಾರೆ. ಪ್ರಾಥಮಿಕ, ಪ್ರೌಢಶಾಲೆ, ವಸತಿನಿಲಯ ಹಾಗೂ ಪದವಿಪೂರ್ವ ಮತ್ತು ಪದವಿ ಕಾಲೇಜುಗಳ ವಿದ್ಯಾರ್ಥಿಗಳು ಇದರಲ್ಲಿ ತೊಡಗಿಸಿಕೊಳ್ಳುವ ಮೂಲಕ ತಮ್ಮ ಪೋಷಕರು ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸಿದ್ದಾರೆ. ಹಾಸ್ಟೆಲ್ ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ ಭಾವನಾತ್ಮಕವಾಗಿ ಪತ್ರ ಬರೆದಿರುವುದು ಸಾಕಷ್ಟು ಪರಿಣಾಮಕಾರಿಯಾಗಿದೆ.
ಶಿವಾನಂದ ಕಾಪಶಿ, ಅಧ್ಯಕ್ಷರು, ಸ್ವೀಪ್ ಸಮಿತಿ ಹಾಗೂ ಸಿಇಒ, ಜಿಪಂ, ಉಡುಪಿ