ನಿಮ್ಮ ಆಹಾರದಲ್ಲಿ ಅರಿಷಿಣ ಅಗತ್ಯವಾಗಿ ಇರಲೇಬೇಕು,ಏಕೆ ಗೊತ್ತೇ...?
ಅರಿಷಿಣ ಹೆಚ್ಚುಕಡಿಮೆ ಎಲ್ಲ ಭಾರತೀಯ ಅಡುಗೆಗಳಲ್ಲಿ ಬಳಕೆಯಾಗುವ ಪ್ರಮುಖ ಸಂಬಾರ ಪದಾರ್ಥಗಳಲ್ಲೊಂದಾ ಗಿದೆ. ಹಲವಾರು ಕಾಯಿಲೆಗಳ ವಿರುದ್ಧ ಹೋರಾಟದಲ್ಲಿ ನೆರವಾಗುವ ಅದು ಈ ಭೂಗ್ರಹದಲ್ಲಿಯ ಅತ್ಯಂತ ಶಕ್ತಿಶಾಲಿ ಗಿಡಮೂಲಿಕೆ ಎಂದೇ ಪರಿಗಣಿಸಲ್ಪಟ್ಟಿದೆ.
ಅರಿಷಿಣದಲ್ಲಿ ಕರ್ಕುಮಿನಾಯ್ಡಗಳೆಂದು ಕರೆಯಲಾಗುವ ಹಲವಾರು ರಾಸಾಯನಿಕ ಸಂಯುಕ್ತಗಳಿವೆ. ಇವುಗಳಲ್ಲಿ ಅತ್ಯಂತ ಕ್ರಿಯಾಶೀಲವಾಗಿರುವುದು ಕರ್ಕುಮಿನ್ ಮತ್ತು ಇದೇ ವಸ್ತು ಅರಿಷಿಣವನ್ನು ಶಕ್ತಿಶಾಲಿ ಸಂಬಾರ ಪದಾರ್ಥವನ್ನಾಗಿಸಿದೆ.
ಕರ್ಕುಮಿನ್ ಪ್ರಬಲ ಉರಿಯೂತ ನಿರೋಧಕ ಗುಣಗ ಳೊಂದಿಗೆ ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿದೆ. ಇವು ಋತುಚಕ್ರ ಸಮಸ್ಯೆಗಳು, ಕಾಮಾಲೆ, ರಕ್ತಸ್ರಾವ, ರಕ್ತಮೇಹ, ಹಲ್ಲುನೋವು, ತರಚುಗಾಯಗಳು, ಎದೆನೋವು ಇತ್ಯಾದಿಗಳಿಗೆ ಪರಿಣಾಮಕಾರಿ ಚಿಕಿತ್ಸೆಯನ್ನು ನೀಡುತ್ತವೆ.
ಅರಿಷಿಣ ನಮ್ಮ ಆಹಾರದಲ್ಲಿ ಇರಲೇಬೇಕು ಎನ್ನುವುದಕ್ಕೆ ಕಾರಣಗಳಿಲ್ಲಿವೆ...
► ಜೀರ್ಣಕ್ರಿಯೆಗೆ ನೆರವಾಗುತ್ತದೆ
ಅರಿಷಿಣವು ಪಿತ್ತಕೋಶವನ್ನು ಪ್ರಚೋದಿಸುವ ಮೂಲಕ ಪಿತ್ತರಸದ ಬಿಡುಗಡೆಗೆ ಕಾರಣವಾಗುತ್ತದೆ. ಪಿತ್ತರಸವು ನಾವು ಸೇವಿಸಿದ ಆಹಾರವನ್ನು ವಿಭಜಿಸುವಲ್ಲಿ ನೆರವಾಗುತ್ತದೆ ಮತ್ತು ನಮ್ಮ ಶರೀರವು ಕೊಬ್ಬುಗಳು ಮತ್ತು ಕೆಲವು ಪೌಷ್ಟಿಕಾಂಶಗಳನ್ನು ಹೀರಿಕೊಳ್ಳಲು ನೆರವಾಗುತ್ತದೆ. ಅರಿಷಿಣವು ಜೀರ್ಣ ಕಾರ್ಯವನ್ನು ಸುಗಮಗೊಳಿಸುವ ಮೂಲಕ ವಾಯುವಿನ ಕಿರುಕುಳದಿಂದ ಬಿಡುಗಡೆ ನೀಡುತ್ತದೆ ಎನ್ನುವುದನ್ನು ಇತ್ತೀಚಿನ ಅಧ್ಯಯನಗಳು ತೋರಿಸಿವೆ.
► ಅದು ಉರಿಯೂತ ನಿರೋಧಕವಾಗಿದೆ
ಹೆಚ್ಚಿನ ಜನರಲ್ಲಿ ಕರುಳಿನ ಉರಿಯೂತ ಸಾಮಾನ್ಯ ಕಾಯಿಲೆಯಾಗಿದೆ. ಅರಿಷಿಣದಲ್ಲಿರುವ ಕರ್ಕುಮಿನ್ ಇದಕ್ಕೆ ಚಿಕಿತ್ಸೆ ನೀಡುವಲ್ಲಿ ನೆರವಾಗು ತ್ತದೆ.
► ಯಕೃತ್ತಿನ ಕಾರ್ಯವನ್ನು ಉತ್ತಮಗೊಳಿಸುತ್ತದೆ
ಯಕೃತ್ತು ನಮ್ಮ ಶರೀರದ ಅತ್ಯಂತ ಪ್ರಮುಖ ಅಂಗವಾಗಿದೆ. ಹೆಚ್ಚುವರಿ ಪೌಷ್ಟಿಕಾಂಶಗಳನ್ನು ಸಂಗ್ರಹಿಸುವ ಅದು ವಿಷಕಾರಿ ವಸ್ತುಗಳನ್ನು ನಿವಾರಿಸುವಲ್ಲಿ ನೆರವಾಗುತ್ತದೆ. ಅಲ್ಲದೆ ರಕ್ತ ಗ್ಲುಕೋಸ್ನ್ನು ದಾಸ್ತಾನಿಟ್ಟುಕೊಂಡು ಒಳ್ಳೆಯ ಕೊಲೆಸ್ಟ್ರಾಲ್ನ್ನು ಉತ್ಪಾದಿಸುತ್ತದೆ. ಅರಿಷಿದಲ್ಲಿರುವ ಉರಿಯೂತ ನಿರೋಧಕ ಮತ್ತು ಉತ್ಕರ್ಷಣ ನಿರೋಧಕ ಗುಣಗಳು ಯಕೃತ್ತಿನ ಕೆಲಸವನ್ನು ಉತ್ತಮಗೊಳಿಸುತ್ತವೆ ಮತ್ತು ಯಕೃತ್ತಿಗೆ ಹಾನಿಯನ್ನು ತಡೆಯುತ್ತವೆ.
► ನೈಸರ್ಗಿಕ ನಂಜು ನಿರೋಧಕ
ತನ್ನ ನೈಸರ್ಗಿಕ ನಂಜು ನಿರೋಧಕ ಗುಣದಿಂದಾಗಿ ಅರಿಷಿಣವು ಸಣ್ಣಪುಟ್ಟ ತರಚುಗಾಯಗಳನ್ನು ಗುಣಪಡಿಸುವ ಉತ್ತಮ ಮನೆಮದ್ದಾ ಗಿದೆ.
► ಅಲ್ಝೀಮರ್ ಕಾಯಿಲೆಯನ್ನು ತಡೆಯುತ್ತದೆ
ಅರಿಷಿಣವು ಅಲ್ಝೀಮರ್ ಕಾಯಿಲೆಯನ್ನು ತಡೆಯುತ್ತದೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ಅದು ಮಿದುಳಿನಲ್ಲಿಯ ಆಕ್ಸಿಡೇಟಿವ್ ಹಾನಿಯನ್ನು ತಡೆಯುತ್ತದೆ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ. ಅಲ್ಜೀಮರ್ ಕಾಯಿಲೆಯಲ್ಲಿ ಪ್ರೋಟಿನ್ ಲೋಳೆಯ ರೂಪದಲ್ಲಿ ಪಾಚಿಗಟ್ಟುತ್ತದೆ ಮತ್ತು ಅರಿಷಿಣವು ಇದನ್ನು ನಿವಾರಿಸುತ್ತದೆ.
► ನೈಸರ್ಗಿಕ ನೋವು ನಿವಾರಕವಾಗಿದೆ
ಸಣ್ಣಪುಟ್ಟ ಸಂದುನೋವು ಮತ್ತು ಸ್ನಾಯುಗಳ ಬಿಗಿತದ ನೋವುಗಳಿಗೆ ಅರಿಷಿಣವು ಉತ್ತಮ ಮನೆಮದ್ದಾಗಿದೆ. ಅದರಲ್ಲಿರುವ ಉರಿಯೂತ ನಿರೋಧಕ ಗುಣವು ಸಣ್ಣಪುಟ್ಟ ನೋವುಗಳಿಂದ ಉಪಶಮನ ಪಡೆಯಲು ನೆರವಾಗುತ್ತದೆ.
► ಶರೀರದ ತೂಕವನ್ನು ಇಳಿಸಲು ನೆರವಾಗುತ್ತದೆ
ಶರೀರದ ತೂಕವನ್ನು ಇಳಿಸುವಲ್ಲಿ ಅರಿಷಿಣವು ಅದ್ಭುತ ಕೆಲಸ ಮಾಡುತ್ತದೆ. ಕೊಬ್ಬು ಸಂಗ್ರಹಗೊಳ್ಳುವುದನ್ನು ತಡೆಯುವ ಅದು ಸೂಕ್ತ ಆಹಾರ ಸೇವನೆಯ ಮೂಲಕ ಶರೀರದ ತೂಕವನ್ನು ಇಳಿಸಿಕೊಳ್ಳುವ ಪ್ರಕ್ರಿಯೆಗೆ ನೆರವಾಗುತ್ತದೆ ಮತ್ತು ಚಯಾಪಚಯವನ್ನು ಉತ್ತಮ ಗೊಳಿಸುತ್ತದೆ.
► ನೈಸರ್ಗಿಕ ಖಿನ್ನತೆ ನಿವಾರಕ
ಅಸಮರ್ಪಕ ಜೀವನಶೈಲಿ, ಕುಗ್ಗಿದ ಸಾಮಾಜಿಕ ಬೆಂಬಲ, ಬದುಕಿನ ಲ್ಲಿಯ ಗೊಂದಲಗಳು ಇತ್ಯಾದಿಗಳು ಖಿನ್ನತೆಗೆ ಪ್ರಮುಖ ಕಾರಣಗಳಾ ಗಿವೆ. ತನ್ನ ಉರಿಯೂತ ನಿರೋಧಕ ಗುಣದಿಂದಾಗಿ ಅರಿಷಿಣವು ಖಿನ್ನತೆಯಿಂದ ಪಾರಾಗಲು ಉತ್ತಮ ಮನೆಮದ್ದಾಗಿದೆ. ಖಿನ್ನತೆಯಿಂದ ನರಳುತ್ತಿರುವಾಗ ಆಹಾರದಲ್ಲಿ ಅರಿಷಿಣವಿರಲಿ.
► ಸೋರಿಯಾಸಿಸ್ಗೆ ಚಿಕಿತ್ಸೆ ನೀಡುತ್ತದೆ
ಸೋರಿಯಾಸಿಸ್ನಿಂದ ನರಳುತ್ತಿರುವವರು ಅರಿಷಿಣವನ್ನು ಪೀಡಿತ ಭಾಗದಲ್ಲಿ ಲೇಪಿಸಿಕೊಳ್ಳುವ ಮೂಲಕ ಉಪಶಮನವನ್ನು ಪಡೆಯಬಹು ದಾಗಿದೆ.
► ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ನಮ್ಮ ಶರೀರವು ಸೂಕ್ಷ್ಮಜೀವಿಗಳ ವಿರುದ್ಧ ಹೋರಾಡಲು ಸದೃಢವಾದ ರೋಗ ನಿರೋಧಕ ಶಕ್ತಿಯು ಅಗತ್ಯವಾಗಿದೆ. ಸೋಂಕು, ಶೀತ ಅಥವಾ ಜ್ವರವು ನಮ್ಮನ್ನು ಕಾಡಿದಾಗ ಈ ನಿರೋಧಕ ವ್ಯವಸ್ಥೆಯು ಅವುಗಳ ವಿರುದ್ಧ ಹೋರಾಡುತ್ತದೆ. ಅರಿಷಿಣವು ತನ್ನ ಸೂಕ್ಷ್ಮಜೀವಿ ಮತ್ತು ವೈರಸ್ ನಿರೋಧಕ, ಉರಿಯೂತ ನಿರೋಧಕ ಮತ್ತು ಉತ್ಕರ್ಷಣ ನಿರೋಧಕ ಗುಣಗಳಿಂದಾಗಿ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ.