‘ಎಲ್ಲೆಲ್ಲೂ ಎಲ್ಲರಿಗೂ ಆರೋಗ್ಯ’ದ ಆಶಯದತ್ತ...
ಇಂದು ವಿಶ್ವ ಆರೋಗ್ಯ ದಿನ
ಆರೋಗ್ಯ ಎನ್ನುವುದು ಯಾವುದೇ ಮಾರುಕಟ್ಟೆಯಲ್ಲಿ ಸಿಗುವ ವಸ್ತುವಲ್ಲ ಎಂಬುದನ್ನು ಜನರು ಅರಿಯಬೇಕು. ಪ್ರತಿದಿನವೂ ವೈದ್ಯರು ಸೂಚಿಸಿದ ಹತ್ತಾರು ಔಷಧಿ ಸೇವಿಸಿ ನೂರುಕಾಲ ಬದುಕುತ್ತೇವೆ ಎಂಬ ಭ್ರಮೆಯಿಂದ ಜನರು ಹೊರಬರಬೇಕು. ವೈದ್ಯರು ಏನಿದ್ದರೂ ರೋಗದ ಲಕ್ಷಣಗಳನ್ನು ಅಭ್ಯಸಿಸಿ ಚಿಕಿತ್ಸೆ ನೀಡಿ ಔಷಧಿ ನೀಡುತ್ತಾರೆಯೇ ಹೊರತು ಕೆಲವೊಂದು ಕಾಯಿಲೆಗಳನ್ನು ಗುಣಪಡಿಸುವುದಕ್ಕಿಂತ ನಿಯಂತ್ರಣದಲ್ಲಿಡುವುದಕ್ಕೆ ಹೆಚ್ಚಿನ ಗಮನ ನೀಡುತ್ತಾರೆ ಎಂಬ ಸಾರ್ವಕಾಲಿಕ ಸತ್ಯವನ್ನು ಜನರು ಜೀರ್ಣಿಸಿಕೊಳ್ಳಲೇ ಬೇಕು. ಈ ನಿಟ್ಟಿನಲ್ಲಿ ಜನರು ತಮ್ಮ ಜವಾಬ್ದಾರಿ ಅರಿತು ನಿಭಾಯಿಸಬೇಕಾದ ಅನಿವಾರ್ಯತೆ ಇದೆ.
ಜಾಗತಿಕವಾಗಿ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಆರೋಗ್ಯ ಸಂಸ್ಥೆ ಎಪ್ರಿಲ್ 7ರಂದು ‘ವಿಶ್ವ ಆರೋಗ್ಯ ದಿನ’ ಎಂದು ಆಚರಿಸುತ್ತದೆ. 1950 ಎಪ್ರಿಲ್ 7ರಂದು ಆರಂಭವಾದ ಈ ಆಚರಣೆಯನ್ನು, ಪ್ರತೀ ವರ್ಷ ಯಾವುದಾದರೊಂದು ವಿಶೇಷ ಧ್ಯೇಯವಾಕ್ಯ ಇಟ್ಟುಕೊಂಡು ಆಚರಿಸಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಸುಮಾರು 8 ವಿಶೇಷ ದಿನಗಳನ್ನು, ವಿಶೇಷ ಜಾಗತಿಕ ಆರೋಗ್ಯ ಜಾಗೃತಿಗೆ ಆಯ್ಕೆ ಮಾಡಿದ್ದು, ಅವುಗಳಲ್ಲಿ ವಿಶ್ವ ಆರೋಗ್ಯ ದಿನ ಎಪ್ರಿಲ್ 7 ಕೂಡ ಸೇರಿದೆ. 2014ರಲ್ಲಿ ಸೊಳ್ಳೆಗಳಿಂದ ಹರಡುವ ರೋಗಗಳ ಬಗ್ಗೆ ಜಾಗೃತಿ ಮೂಡಿಸುವ ಬಗ್ಗೆ, 2015ರಲ್ಲಿ ಆಹಾರ ಸುರಕ್ಷತೆಯ ಬಗ್ಗೆ, 2016ರಲ್ಲಿ ಮಧುಮೇಹ ರೋಗದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ‘ಮಧುಮೇಹ ರೋಗದ ಏರಿಕೆ ತಡೆಗಟ್ಟಿ ಮತ್ತು ಮಧುಮೇಹವನ್ನು ಸೋಲಿಸಿ’ ಎಂಬ ಧ್ಯೇಯವಾಕ್ಯವನ್ನು ಇಟ್ಟುಕೊಂಡು ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಗಿದೆ.
2017ರಲ್ಲಿ ‘ಖಿನ್ನತೆಯನ್ನು ಸೋಲಿಸಿ’ ಎಂಬ ಧ್ಯೇಯವಾಕ್ಯವನ್ನು ಇಟ್ಟುಕೊಂಡು ಆಚರಿಸಲಾಗಿತ್ತು. 2018ರ ಧ್ಯೇಯವಾಕ್ಯ ‘ಎಲ್ಲೆಲ್ಲೂ ಎಲ್ಲರಿಗೂ ಆರೋಗ್ಯ’ ಎಂಬ ಉದ್ದೇಶವನ್ನು ಇಟ್ಟುಕೊಂಡು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಜಾಗತಿಕ ಜಗತ್ತಿನ 700ಕೋಟಿ ಜನಸಂಖ್ಯೆಯ ಅರ್ಧದಷ್ಟು ಜನರಿಗೆ ಸೂಕ್ತ ವೈದ್ಯಕೀಯ ಸೌಲಭ್ಯ ದೊರಕಿಸುವುದೇ ವಿಶ್ವಸಂಸ್ಥೆಯ ಆದ್ಯತೆಯಾಗಿದೆ. ವಿಶ್ವಸಂಸ್ಥೆ ತನ್ನ 70ನೇ ವಾರ್ಷಿಕೋತ್ಸವವನ್ನು ಆಚರಿಸುವ ಈ ಸಂದರ್ಭದಲ್ಲಿ ‘ಸರ್ವರಿಗೂ ಆರೋಗ್ಯ’ ಎಂಬ ಘೋಷಣೆಯಡಿಯಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆರೋಗ್ಯ ಭಾಗ್ಯ ಕಲ್ಪಿಸುವ ಕನಸನ್ನು ಹೊಂದಿದೆ. ಜಾಗತಿಕ ಜನಸಂಖ್ಯೆಯಲ್ಲಿನ 100 ಮಿಲಿಯನ್ ಮಂದಿ ಬಡತನ ರೇಖೆಗಿಂತಲೂ ಕೆಳಗಿನವರಾಗಿದ್ದು, ಅಧಿಕ ವೈದ್ಯಕೀಯ ವೆಚ್ಚದ ಕಾರಣದಿಂದಾಗಿ ಬಡತನ ರೇಖೆಯು ಕೆಳಗೆಯೇ ಉಳಿಯುವಂತಾಗಿದೆ. ದುಡಿದ ಹಣವೆಲ್ಲಾ ಆರೋಗ್ಯ ಸಂಬಂಧಿ ವೈದ್ಯಕೀಯ ವೆಚ್ಚಕ್ಕಾಗಿ ವ್ಯಯಿಸುವುದರಿಂದ ದಿನವೊಂದರಲ್ಲಿ ಕನಿಷ್ಠ 2 ಡಾಲರ್ನಲ್ಲಿ ಬದುಕಬೇಕಾದ ಅನಿವಾರ್ಯತೆ ಹೊಂದಿದ್ದಾರೆ. ಇನ್ನೂ ಜಾಗತಿಕ ಜನಸಂಖ್ಯೆಯ 800 ಮಿಲಿಯನ್ ಮಂದಿ (ಜನಸಂಖ್ಯೆಯ 12 ಶೇಕಡಾದಷ್ಟು) ತಮ್ಮ ಸಂಪಾದನೆಯ 10 ಶೇಕಡಾದಷ್ಟು ಆರೋಗ್ಯಕ್ಕಾಗಿ ವ್ಯಯಿಸುತ್ತಾರೆ ಎಂದು ವಿಶ್ವಸಂಸ್ಥೆಯು ವರದಿಗೊಳಿಸಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಾದ ಅಮೆರಿಕ, ಯುರೋಪ್, ಏಶ್ಯಾಖಂಡದ ಕೆಲವೊಂದು ದೇಶಗಳು ಈ ರೀತಿಯ ವೆಚ್ಚವನ್ನು ಸರಿದೂಗಿಸುವ ಸಾಮರ್ಥ್ಯ ಹೊಂದಿವೆ. ಆದರೆ ಬಡರಾಷ್ಟ್ರಗಳಾದ ಆಫ್ರಿಕಾ, ಲಿಬಿಯಾ ಮತ್ತು ಏಶ್ಯಾಖಂಡದ ಕೆಲವು ರಾಷ್ಟ್ರಗಳು ಆರೋಗ್ಯಕ್ಕಾಗಿ ಹೆಚ್ಚಿನ ಹಣ ವ್ಯಯಿಸಲಾಗದಿರುವುದು ಜಾಗತಿಕ ಜಗತ್ತಿನ ದುರಂತವೆಂದರೂ ತಪ್ಪಲ್ಲ. 2018ರ ಧ್ಯೇಯವಾದ ‘ಎಲ್ಲೆಲ್ಲೂ ಎಲ್ಲರಿಗೂ ಆರೋಗ್ಯ’ ಆಶಯದಡಿ ಜಗತ್ತಿನ ಎಲ್ಲರಿಗೂ ಅಗತ್ಯವಿದ್ದಾಗಲ್ಲೆಲ್ಲ ಉನ್ನತ ವೈದ್ಯಕೀಯ ಸೌಲಭ್ಯ ಯಾವುದೇ ಆರ್ಥಿಕ ಅಡಚಣೆ ಇಲ್ಲದೆ ಸಿಗಬೇಕು ಎಂಬುದಾಗಿರುತ್ತದೆ.
ಎಲ್ಲರಿಗೂ ಆರೋಗ್ಯ ಎಂದರೆ ಎಲ್ಲರಿಗೂ ಉಚಿತ ಆರೋಗ್ಯ ಸೌಲಭ್ಯ ಎಂದರ್ಥವಿಲ್ಲ. ಯಾಕೆಂದರೆ ಜಗತ್ತಿನ ಯಾವ ರಾಷ್ಟ್ರವೂ ಎಲ್ಲರಿಗೂ ಏಕಕಾಲದಲ್ಲಿ ಎಲ್ಲಾ ಸಮಯದಲ್ಲಿ ಉಚಿತ ಆರೋಗ್ಯ ಸೌಲಭ್ಯ ಕೊಡಲು ಸಾಧ್ಯವಾಗದು. ಆದರೂ ಎಲ್ಲರಿಗೂ ಕನಿಷ್ಠ ಮೂಲಭೂತ ವೈದ್ಯಕೀಯ ಸೌಲಭ್ಯ ನೀಡಿ ಹಂತ ಹಂತವಾಗಿ ಉನ್ನತ ವೈದ್ಯಕೀಯ ಸೌಲಭ್ಯ ನೀಡುವ ಸಮದ್ದೇಶ ಹೊಂದಿದೆ. ‘ಎಲ್ಲರಿಗೂ ಎಲ್ಲೆಲ್ಲಿಯೂ ಆರೋಗ್ಯ’ ಎಂಬುದು ಕೇವಲ ವ್ಯಕ್ತಿ ಆಧಾರಿತ ಸೇವೆ ಆಗಿರದೆ, ಜಗತ್ತಿನ ಎಲ್ಲ ಸಮುದಾಯಕ್ಕೆ ಮೂಲಭೂತ ವೈದ್ಯಕೀಯ ಸೌಲಭ್ಯ ನೀಡುವುದೇ ಆಗಿರುತ್ತದೆ. ಉದಾಹರಣೆಗೆ ನೀರಿಗೆ ಫ್ಲೋರೈಡ್ ಮಿಶ್ರಣ ಅಥವಾ ಸೊಳ್ಳೆ ಉತ್ಪಾದನೆಗೆ ಪ್ರೋತ್ಸಾಹಿಸುವ ವಾತಾವರಣವನ್ನು ನಿಯಂತ್ರಿಸುವುದು ಅಥವಾ ವೈರಾಣು ಉತ್ಪತ್ತಿಯಾಗದಂತೆ ತಡೆಯುವ ಉದ್ದೇಶ ಹೊಂದಿದೆ. ಎಲ್ಲರಿಗೂ ಆರೋಗ್ಯ ಎಂದರೆ ಕೇವಲ ವೈದ್ಯಕೀಯ ಸೌಲಭ್ಯ ಮತ್ತು ಹಣಕಾಸಿನ ನೆರವು ನೀಡುವುದು ಆಗಿರುವುದಿಲ್ಲ. ಮೂಲಭೂತ ಸೌಲಭ್ಯಗಳಾದ ಶುದ್ಧ ನೀರು, ಶುದ್ಧ ಗಾಳಿ, ಶುದ್ಧ ಬೆಳಕು ನೀಡಿ ರೋಗವನ್ನು ತಡೆಗಟ್ಟುವ ಪ್ರಕ್ರಿಯೆಗೆ ಹೆಚ್ಚು ಒತ್ತು ನೀಡುವ ಸದುದ್ದೇಶ ಹೊಂದಿದೆ. ಇದರ ಜೊತೆಗೆ ಉನ್ನತ ವೈದ್ಯಕೀಯ ಸೌಲಭ್ಯಗಳು, ಸಲಕರಣೆಗಳು ಮತ್ತು ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನ ಕೂಡ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವ ಗುರುತರ ಉದ್ದೇಶವನ್ನು ಹೊಂದಿದೆ. ಸೂಕ್ತ ಕಾನೂನು ಮತ್ತು ಸರಕಾರದ ಕಾಯ್ದೆಗಳ ಮುಖಾಂತರ ಎಲ್ಲರಿಗೂ ಸಕಾಲದಲ್ಲಿ ಸಕಲ ವೈದ್ಯಕೀಯ ಸೌಲಭ್ಯ ತಲುಪಿಸುವ ಮಹದಾಸೆ ಹೊಂದಿದೆ. ವೈದ್ಯಕೀಯ ನೆರವು ಎನ್ನುವುದು ಬರೀ ಆಸ್ಪತ್ರೆ ಕಟ್ಟಿಸಿ ಉಚಿತ ಔಷಧಿ ನೀಡುವುದು ಅಲ್ಲ. ಜನರಿಗೆ ಪ್ರಾಥಮಿಕ ಆವಶ್ಯಕತೆಗಳನ್ನು ನೀಡಿ ರೋಗ ಬರದಂತೆ ಮತ್ತು ರೋಗ ಉಲ್ಬಣಿಸದಂತೆ ಪೂರಕವಾದ ವಾತಾವರಣ ಸೃಷ್ಟಿಸುವ ಉನ್ನತ ಧ್ಯೇಯವನ್ನು ಹೊಂದಿದೆ. ಮೆಡಿಕಲ್ ಕಾಲೇಜ್ನ್ನು ನಿರ್ಮಿಸಿ ವೈದ್ಯರ ಸಂಖ್ಯೆ ಜಾಸ್ತಿ ಮಾಡಿ ರೋಗಕ್ಕೊಂದರಂತೆ ಪರಿಣಿತ ವೈದ್ಯರನ್ನು ಸೃಷ್ಟಿಸುವುದಲ್ಲ, ಹೊಸ ಹೊಸ ರೋಗವನ್ನು ಹುಟ್ಟಿಸುವುದಲ್ಲ. ರೋಗದ ಬಗ್ಗೆ ಜನರಲ್ಲಿ ಜಾಗೃತಿ, ಅರಿವು ಮೂಡಿಸಿ ರೋಗದ ಚಿಕಿತ್ಸೆಗಿಂತ ರೋಗ ತಡೆಗಟ್ಟುವುದರ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ ಜನರನ್ನು ಜಾಣರನ್ನಾಗಿಸುವ ಸದುದ್ದೇಶ ಹೊಂದಿದೆ.
ಜವಾಬ್ದಾರಿ ಅರಿಯೋಣ
ಆರೋಗ್ಯವೇ ಭಾಗ್ಯ ಎಂಬುದು ನಮಗೆಲ್ಲ ತಿಳಿದೇ ಇದೆ. ಮೊದಲೆಲ್ಲಾ ರೋಗವಿಲ್ಲದ ಸ್ಥಿತಿಗೆ ಆರೋಗ್ಯ ಎಂಬುದಾಗಿ ಹೇಳಿದ್ದಾರೆ. ಆದರೆ ಬದಲಾಗುತ್ತಿರುವ ಕಾಲಘಟ್ಟದಲ್ಲಿ ನಾವು ತಿನ್ನುವ ಆಹಾರ, ಸೇವಿಸುವ ಗಾಳಿ, ಬದುಕುವ ಜೀವನ ಶೈಲಿ ಎಲ್ಲವೂ ಕಲುಷಿತವಾಗಿದೆ. ಈ ಕಾರಣದಿಂದಲೇ ರೋಗವಿಲ್ಲದ ಆರೋಗ್ಯವಂಥ ಮನುಷ್ಯನನ್ನು ಭೂತಗನ್ನಡಿ ಹಿಡಿದು ಹುಡುಕಿ ಹಿಡಿದರೂ ಸಿಗದಂತಹ ಪರಿಸ್ಥಿತಿ ಬಂದಿದೆ. ಪ್ರತಿಯೊಬ್ಬರೂ ಒಂದಲ್ಲ ಒಂದು ರೋಗದಿಂದ ಬಳಲುತ್ತಿದ್ದಾರೆ. ಮಧುಮೇಹ, ರಕ್ತದೊತ್ತಡ, ಖಿನ್ನತೆ ಹೀಗೆ ಒಂದಲ್ಲ ಒಂದು ರೋಗ ಎಲ್ಲರನ್ನೂ ಕಾಡುತ್ತಿದೆ. ಹಾಗಾಗಿ ಆರೋಗ್ಯ ಎಂಬ ಶಬ್ದವನ್ನು ರೋಗವಿಲ್ಲದ ದೇಹಸ್ಥಿತಿಯ ಬದಲಾಗಿ, ಜೀವನೋತ್ಸಾಹ ಎಂಬುದಾಗಿ ವ್ಯಾಖ್ಯಾನಿಸಲಾಗಿದೆ. ಮಧುಮೇಹ, ರಕ್ತದೊತ್ತಡ ಇದ್ದರೂ, ದಿನಬೆಳಗೆದ್ದು ಕೆಲಸ ಮಾಡಲು ಹುಮ್ಮಸ್ಸು ಇದ್ದಲ್ಲಿ ಆತನನ್ನು ಆರೋಗ್ಯವಂತ ವ್ಯಕ್ತಿಯೆಂದು ಕರೆಯುವ ಅನಿವಾರ್ಯತೆ ಒದಗಿದೆ. ಯಾವುದೇ ರೋಗವಿಲ್ಲದಿದ್ದರೂ ಖಿನ್ನತೆಯಿಂದಾಗಿ ಅಥವಾ ಇನ್ನಾವುದೇ ಕಾರಣದಿಂದ ಕೆಲಸ ಮಾಡುವ ಆಸಕ್ತಿ ಅಥವಾ ಹುಮ್ಮಸ್ಸು ಇಲ್ಲದಿದ್ದಲ್ಲಿ ಅಂತಹ ವ್ಯಕ್ತಿಗಳನ್ನು ರೋಗಿ ಎನ್ನುವ ಕಾಲಘಟ್ಟದಲ್ಲಿ ನಾವಿಂದು ನಿಂತಿದ್ದೇವೆ. ರೋಗವಿದ್ದರೂ, ರೋಗವನ್ನು ನಿಯಂತ್ರಣದಲ್ಲಿಟ್ಟುಕೊಂಡು ಸಮಾಜದ ಬೆಳವಣಿಗೆಗೆ ಪೂರಕವಾಗಿ ಧನಾತ್ಮಕ ಕೊಡುಗೆ ಕೊಡುವ ವ್ಯಕ್ತಿಗಳನ್ನು ಆರೋಗ್ಯವಂತ ಎಂದು ಪರಿಗಣಿಸಲಾಗುತ್ತದೆ ಎಂದರೂ ಅತಿಶಯೋಕ್ತಿಯಲ್ಲ. ಮಧುಮೇಹ ಮತ್ತು ರಕ್ತದೊತ್ತಡ ಎನ್ನುವುದನ್ನು ಸೂಕ್ತ ಔಷಧಿ, ಆಹಾರ ಪದ್ಧತಿ ಮತ್ತು ಜೀವನ ಶೈಲಿ ಮಾರ್ಪಾಡು ಮಾಡಿಕೊಂಡು ನೂರು ಕಾಲ ಸುಖವಾಗಿ ಬದುಕಲು ಬೇಕಾದ ಎಲ್ಲಾ ವ್ಯವಸ್ಥೆಗಳು ಈಗ ಎಲ್ಲರಿಗೂ ಲಭ್ಯವಿರುವುದೇ ಸಮಾಧಾನಕರ ಅಂಶವಾಗಿದೆ.
ಇನ್ನು ಆರೋಗ್ಯ ಎನ್ನುವುದು ಯಾವುದೇ ಮಾರುಕಟ್ಟೆಯಲ್ಲಿ ಸಿಗುವ ವಸ್ತುವಲ್ಲ ಎಂಬುದನ್ನು ಜನರು ಅರಿಯಬೇಕು. ಪ್ರತಿದಿನವೂ ವೈದ್ಯರು ಸೂಚಿಸಿದ ಹತ್ತಾರು ಔಷಧಿ ಸೇವಿಸಿ ನೂರುಕಾಲ ಬದುಕುತ್ತೇವೆೆ ಎಂಬ ಭ್ರಮೆಯಿಂದ ಜನರು ಹೊರಬರಬೇಕು. ವೈದ್ಯರು ಏನಿದ್ದರೂ ರೋಗದ ಲಕ್ಷಣಗಳನ್ನು ಅಭ್ಯಸಿಸಿ ಚಿಕಿತ್ಸೆ ನೀಡಿ ಔಷಧಿ ನೀಡುತ್ತಾರೆಯೇ ಹೊರತು ಕೆಲವೊಂದು ಕಾಯಿಲೆಗಳನ್ನು ಗುಣಪಡಿಸುವುದಕ್ಕಿಂತ ನಿಯಂತ್ರಣದಲ್ಲಿಡುವುದಕ್ಕೆ ಹೆಚ್ಚಿನ ಗಮನ ನೀಡುತ್ತಾರೆ ಎಂಬ ಸಾರ್ವಕಾಲಿಕ ಸತ್ಯವನ್ನು ಜನರು ಜೀರ್ಣಿಸಿಕೊಳ್ಳಲೇ ಬೇಕು. ಈ ನಿಟ್ಟಿನಲ್ಲಿ ಜನರು ತಮ್ಮ ಜವಾಬ್ದಾರಿ ಅರಿತು ನಿಭಾಯಿಸಬೇಕಾದ ಅನಿವಾರ್ಯತೆ ಇದೆ. ಎಲ್ಲವನ್ನು ಸರಕಾರವೇ ನೀಡಬೇಕು ಎನ್ನುವುದು ಶುದ್ಧ ತಪ್ಪುಕಲ್ಪನೆ. ಸರಕಾರ ಏನಿದ್ದರೂ ಆಸ್ಪತ್ರೆ, ವೈದ್ಯರ ಸೇವೆ, ಔಷಧಿಗಳನ್ನು ನೀಡಬಹುದು. ಮೂಲಭೂತ ಸೌಕರ್ಯಗಳನ್ನು ನೀಡಬಹುದು. ಸ್ವಚ್ಛಗಾಳಿ, ಶುದ್ಧ ನೀರು, ಶುಭ್ರ ಬೆಳಕು ಇವೆಲ್ಲವನ್ನು ಪಡೆಯಲು ಸರಕಾರದ ಜೊತೆಗೆ ಜನರೂ ಕೈಗೂಡಿಸಬೇಕು. ಪ್ರತಿಯೊಬ್ಬರು ತಮ್ಮ ಪರಿಸರವನ್ನು ಸ್ವಚ್ಛವಾಗಿಡಬೇಕು. ಕೊಳಚೆ ಪ್ರದೇಶಗಳಲ್ಲಿ ಸೊಳ್ಳೆಗಳು ಉತ್ಪಾದನೆಯಾಗಿ. ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಹೆಚ್ಚಾಗಿರುವುದರಿಂದ ಜನರು ಪರಿಸರದ ಬಗ್ಗೆ ನೈಮಲ್ಯದ ಬಗ್ಗೆ ಹೆಚ್ಚು ಜಾಗ್ರತೆ ವಹಿಸಬೇಕು. ಪರಿಸರದ ನೀರು ಸ್ವಚ್ಛವಾಗಿಡಲು ಸರಕಾರದ ಜೊತೆ ಮತ್ತು ಸ್ಥಳೀಯ ಆಡಳಿತದ ಜೊತೆಗೆ ಜನರೂ ಕೈ ಜೋಡಿಸಬೇಕು. ಶುದ್ಧಗಾಳಿ ಸಿಗಬೇಕಿದ್ದಲ್ಲಿ ಮರಗಿಡಗಳನ್ನು ಕಡಿಯದೇ ಬೆಳೆಸಿ ಶುದ್ಧ ಗಾಳಿಸಿಗಲು ಪೂರಕವಾದ ವಾತಾವರಣವನ್ನು ನಿರ್ಮಿಸಿಕೊಳ್ಳಬೇಕು. ಮರಗಿಡ ಕಡಿದು, ಗುಡ್ಡ ಬರಿದು ಮಾಡಿ ಕಾಂಕ್ರಿಟ್ ಕಾಡು ಬೆಳೆಸಿ, ಕೈಗಾರಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಿದಲ್ಲಿ ಪರಿಸರ ಮಾಲಿನ್ಯವಾಗಿ ಆರೋಗ್ಯ ಎನ್ನುವುದು ಗಗನ ಕುಸುಮವಾಗುವ ಸಾಧ್ಯತೆ ಹೆಚ್ಚಾಗುತ್ತದೆ. ಎಲ್ಲವನ್ನು ಸರಕಾರ ನೀಡಬೇಕು ಎಂಬ ಧೋರಣೆ ತಪ್ಪು. ಎಲ್ಲ ರೋಗಗಳಿಗೂ ಔಷಧಿ ಇದೆ ಮತ್ತು ಎಲ್ಲ ರೋಗಗಳನ್ನು ವೈದ್ಯರು ಗುಣಪಡಿಸುತ್ತಾರೆ ಎಂಬ ಭ್ರಮಾ ಲೋಕದಿಂದ ಜನರು ಹೊರಬರಲೇಬೇಕು, ಇಲ್ಲವಾದಲ್ಲಿ ದಿನಕ್ಕೊಂದರಂತೆ ಹೊಸ ರೋಗಗಳು ಹುಟ್ಟುತ್ತವೆ ಮತ್ತು ಪ್ರತಿಯೊಂದು ರೋಗಕ್ಕೆ ಒಬ್ಬ ತಜ್ಞ ವೈದ್ಯರು ಹುಟ್ಟಿಕೊಳ್ಳಬಹುದೇ ಹೊರತು, ಸುಂದರ ಸುದೃಢ ಸಮಾಜದ ನಿರ್ಮಾಣ ಖಂಡಿತಾ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಪ್ರಜೆಯೂ ತಮ್ಮ ಹೊಣೆಗಾರಿಕೆ ಅರಿತು ನಿಭಾಯಿಸಿದಲ್ಲಿ ಮಾತ್ರ ‘ಎಲ್ಲೆಲ್ಲಿಯೂ ಎಲ್ಲರಿಗೂ ಆರೋಗ್ಯ’ ಎಂಬ ವಿಶ್ವಸಂಸ್ಥೆಯ 2018ರ ವಿಶ್ವ ಆರೋಗ್ಯ ದಿನದ ಆಚರಣೆಯ ಧ್ಯೇಯ ವಾಕ್ಯಕ್ಕೆ ನ್ಯಾಯ ಒದಗೀತು.