ಹಿಟ್ಲರ್ ರಚಿಸಿದ ಕಲಾಕೃತಿ ಹರಾಜು!
ಪ್ರಪಂಚೋದ್ಯ
ನಾಝಿ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ರಚಿಸಿದ್ದೆಂದು ಹೇಳಲಾದ ತೈಲ ಭಾವಚಿತ್ರವೊಂದು ಜರ್ಮನ್ನ ಹರಾಜು ಮನೆಯಲ್ಲಿ ಮುಂದಿನ ವಾರ ಹರಾಜಾಗಲಿದೆ. ಈ ತೈಲ ಭಾವ ಚಿತ್ರ ಅಡಾಲ್ಫ್ ಹಿಟ್ಲರ್ನ ಗೆಳತಿಯದ್ದೆಂದು ಹೇಳಲಾಗುತ್ತಿದೆ. ಈ ತೈಲಭಾವ ಚಿತ್ರವನ್ನು 60,000 ಯುರೋಗೆ ಖರೀದಿಸಲು ಆಸಕ್ತರು ಮುಂದೆ ಬಂದಿದ್ದಾರೆ.
63x48 ಸೆ. ಮೀ.ನ ಈ ಕಲಾಕೃತಿಯಲ್ಲಿ ಎ. ಹಿಟ್ಲರ್ ಎಂದು ಸಹಿ ಹಾಕಲಾಗಿದೆ. 1916ರಲ್ಲಿ ಹಿಟ್ಲರ್ ಒಂದನೇ ಮಹಾಯುದ್ಧದ ಸಂದರ್ಭ ಫ್ರಾನ್ಸ್ನಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಭೇಟಿಯಾದ ಫ್ರೆಂಚ್ ಮಹಿಳೆ ಶಾರ್ಲೆಟ್ ಲೋಬ್ಜೋಯಿ ಭಾವಚಿತ್ರ ಇದಾಗಿದೆಯಂತೆ. ಈ ಬಗ್ಗೆ ಹಿಟ್ಲರ್ ಕುರಿತು ಆಳವಾಗಿ ತಿಳಿದುಕೊಂಡಿದ್ದ 2007ರಲ್ಲಿ ಮೃತಪಟ್ಟ ವಾರ್ನರ್ ಮಾಸರ್ ಹೇಳಿದ್ದರು. ಹೆಸಿಯನ್ ಬಟ್ಟೆಯಲ್ಲಿ ರಚಿಸಲಾದ ಈ ಹಾನಿಗೊಂಡ ‘ಯುವತಿಯ ಭಾವಚಿತ್ರ’ವನ್ನು ಫ್ಲೆಮಿಂಗ್ನ ಉದ್ಯಮಿ 1967ರಲ್ಲಿ ನ್ಯೂರೆಂಬರ್ಗ್ ನಲ್ಲಿರುವ ವೀಡ್ಲರ್ ಹರಾಜು ಮನೆಯಿಂದ ಖರೀದಿಸಿದ್ದರು. ಈ ಭಾವಚಿತ್ರದ ದಾಖಲೆಗಳ ಪ್ರಕಾರ ಇದನ್ನು ಜಪಾನ್ನಲ್ಲಿ ಕೂಡ ಹರಾಜು ಹಾಕಲಾಗಿತ್ತು. ಈ ಭಾವಚಿತ್ರದಲ್ಲಿ ಕೆಂಪು ತಲೆ ವಸ್ತ್ರ ಧರಿಸಿದ ಯುವತಿ ಇದ್ದಾಳೆ. ಆಕೆಯ ಮುಖದಲ್ಲಿ ನೆರಳು ಬಿದ್ದಿದೆ. ಆಕೆ ಪಿಚ್ಫೋರ್ಕ್ (ಫೋರ್ಕ್ ನಂತಹ ಹಾರೆ) ಹಿಡಿದುಕೊಂಡಿದ್ದಾಳೆ. ತಿಳಿ ಬಣ್ಣದ ಅಂಗಿ ಧರಿಸಿದ್ದಾಳೆ. ವೀಡ್ಲರ್ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದ ವಾರ್ನರ್ ಮಾಸರ್ರವರು ಹಿಟ್ಲರ್ ಬಗ್ಗೆ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಈ ಪುಸ್ತಕದಲ್ಲಿ ಅವರು ಚಿತ್ರಗಳು, ಪತ್ರಗಳು ಹಾಗೂ ಟಿಪ್ಪಣಿಗಳ ಮೂಲಕ ನಾಝಿ ನಾಯಕನ ಮನಸ್ಥಿತಿಯ ಬಗೆಗಿನ ಒಳನೋಟ ನೀಡಿದ್ದಾರೆ. ಎರಡನೇ ಮಹಾಯುದ್ಧದಲ್ಲಿ ಜರ್ಮನಿ ಪಾಲ್ಗೊಳ್ಳುವ ಮುನ್ನ ಹಾಗೂ ಜರ್ಮನಿ ಉದಯವಾಗುವ ಮೊದಲು ಹಿಟ್ಲರ್ ಜೀವನ ನಿರ್ವಹಣೆಗಾಗಿ ಕಲಾಕೃತಿಗಳನ್ನು ರಚಿಸುತ್ತಿದ್ದನಂತೆ.
1945ರಲ್ಲಿ ಬರ್ಲಿನ್ನಲ್ಲಿದ್ದ ಆತನ ಕೇಂದ್ರ ಕಚೇರಿಗೆ ಸೋವಿಯತ್ ಪಡೆಯು ಮುತ್ತಿಗೆ ಹಾಕಿದ ಸಂದರ್ಭ ಹಿಟ್ಲರ್ ಕೆಲವು ಸಮಯದ ಹಿಂದೆಯಷ್ಟೇ ತಾನು ವಿವಾಹವಾಗಿದ್ದ ಇವಾ ಬ್ರೌನ್ ಜೊತೆ ಆತ್ಮಹತ್ಯೆ ಮಾಡಿಕೊಂಡಿದ್ದ. 2015ರಲ್ಲಿ ವೀಡ್ಲರ್ ಸಂಸ್ಥೆಯು ಎ. ಹಿಟ್ಲರ್ ಎಂದು ಸಹಿ ಇರುವ ಬವೇರಿಯಾದ ನ್ಯೂಸ್ಛೆವಾಂಟೈನ್ ಕೋಟೆಯ ಜಲವರ್ಣದ ಕಲಾಕೃತಿಯನ್ನು ಮಾರಾಟ ಮಾಡಿತ್ತು. ಈ ಕಲಾಕೃತಿಯನ್ನು ಕೂಡ ಹಿಟ್ಲರ್ ರಚಿಸಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಕಲಾಕೃತಿ 100,000 ಯುರೋಗೆ ಮಾರಾಟವಾಗಿತ್ತು.