ಅಡುಗೆ ಅನಿಲ ಸಂಪರ್ಕದ ಅಡೆತಡೆಗಳ ವಿರುದ್ಧ ಹೋರಾಟ
ನರೇಂದ್ರ ನಾಯಕ್ ಜೀವನ ಕಥನ
ಭಾಗ-38
ನಾವು ಜನರ ಸಮಸ್ಯೆಗಳನ್ನೆಲ್ಲಾ ಪಟ್ಟಿ ಮಾಡಿ, ನಮ್ಮ ಬೇಡಿಕೆಗಳನ್ನು ಅಡುಗೆ ಅನಿಲ ಕಂಪೆನಿಗೆ ನೀಡಿದೆವು. ಅದರಲ್ಲಿ ಮುಖ್ಯವಾಗಿ ಅಡುಗೆ ಅನಿಲ ಸಂಪರ್ಕದ ವೇಳೆ ಸ್ಟವ್ ಖರೀದಿಸಬೇಕೆಂಬ ಒತ್ತಾಯ. ಅದನ್ನು ಕೈಬಿಡಬೇಕೆಂಬುದು ನಮ್ಮ ಆಗ್ರಹವಾಗಿತ್ತು. ಅಗತ್ಯವಿದ್ದಲ್ಲಿ ಗ್ರಾಹಕರು ಅದನ್ನು ಖರೀದಿಸಬಹುದು. ಅದಕ್ಕಾಗಿ ಒತ್ತಡ ಹೇರಬಾರದು ಎಂದು ನಾವು ಪಟ್ಟಿ ಮಾಡಿದೆವು. ಮಾತ್ರವಲ್ಲದೆ, ಸ್ಟವ್ ಖರೀದಿಗಾಗಿ ಏಜೆನ್ಸಿಗಳು ಮಾಡುತ್ತಿದ್ದ ಕೆಲವೊಂದು ತಂತ್ರಗಳ ದಾಖಲೆಯೂ ನಮ್ಮ ಬಳಿ ಇದ್ದುದರಿಂದ ಅವುಗಳನ್ನೆಲ್ಲಾ ಜತೆಗಿರಿಸಿ ಕಂಪೆನಿಗಳಿಗೆ ನೀಡಿದೆವು.
ಬಳಕೆದಾರರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದು ಒಂದು ವಿಭಿನ್ನ ಹೋರಾಟ. ವಿಚಾರವಾದಿಗಳಾಗಿ ನಾವು ಪವಾಡ ಬಯಲು ರಹಸ್ಯ ಮೂಲಕ ಸಮಾಜದಲ್ಲಿನ ಮೂಢನಂಬಿಕೆಗಳನ್ನು, ಅಜ್ಞಾನವನ್ನು ಹೊಡೆದೋಡಿಸಲು ಪ್ರಯತ್ನಿಸಿದರೆ, ಬಳಕೆದಾರರ ಶಿಕ್ಷಣ ಟ್ರಸ್ಟ್ ಮೂಲಕ ಜನರಲ್ಲಿ ಗ್ರಾಹಕ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಿದೆವು. ಇದೊಂದು ದೀರ್ಘಾವಧಿ ಹೋರಾಟ. ಆದರೆ ಇದು ನಮಗರಿವಿರುವಂತೆಯೇ ನಾವು ಮೋಸ ಹೋಗುತ್ತಿರುವುದರ ವಿರುದ್ಧ ಧ್ವನಿ ಎತ್ತುವ ನಿಟ್ಟಿನಲ್ಲಿ ಆರಂಭಗೊಂಡ ಹೋರಾಟ. ಇಂದು ಈ ಹೋರಾಟ ಕರಾವಳಿ ಜಿಲ್ಲೆಯಲ್ಲಿ ಪ್ರಬಲವಾಗಿ ಮುಂದುವರಿದಿದೆ. ಗ್ರಾಹಕ ಹಕ್ಕುಗಳ ಬಗ್ಗೆ ಸಾಕಷ್ಟು ಜಾಗೃತಿಯೂ ಮೂಡಿದೆ.
ಮಾರುಕಟ್ಟೆ ದರ, ಅಳತೆ, ಪ್ರಮಾಣ, ಗುಣಮಟ್ಟ ಹೀಗೆ ನಾನಾ ರೀತಿಯಲ್ಲಿ ಉತ್ಪನ್ನಗಳ ವಿತರಕರು, ಮಾರಾಟಗಾರರು ಬಳಕೆದಾರರನ್ನು ಶೋಷಿಸುತ್ತಿರುತ್ತಾರೆ. ಬಳಕೆದಾರರಿಗೆ ತಾವು ಶೋಷಣೆಗೊಳಗಾಗುವುದು, ತಾವು ಮೋಸ ಹೋಗುತ್ತಿರುವ ಬಗ್ಗೆ ಅರಿವೂ ಇರುತ್ತದೆ. ಆದರೆ ಅದರ ವಿರುದ್ಧ ಕಾನೂನು ಸಮರ ನಡೆಸಬೇಕೆಂದರೆ ತಾಳ್ಮೆ ಮುಖ್ಯ. ಜತೆಗೆ ಸಾಕಷ್ಟು ಸಮಯವನ್ನು ವ್ಯಯಿಸಬೇಕಾಗುತ್ತದೆ. ದಾಖಲೆ, ಪೂರಕ ಮಾಹಿತಿಗಳನ್ನು ಕಲೆ ಹಾಕಬೇಕಾಗುತ್ತದೆ. ಬಹುತೇಕವಾಗಿ ಈ ವಿಚಾರಗಳ ಬಗ್ಗೆ ಜನಸಾಮಾನ್ಯರಿಗೆ ಅರಿವು ಇರುವುದಿಲ್ಲ. ಜನಸಾಮಾನ್ಯರಿಗೆ ಈ ಕಾನೂನಿನ ಅರಿವು ನೀಡಿ, ಅವರನ್ನು ತಮ್ಮ ಹಕ್ಕುಗಳಿಗಾಗಿ ಹೋರಾಡಲು ಪ್ರೇರಣೆ ನೀಡುವ ನಿಟ್ಟಿನಲ್ಲಿ ನಮ್ಮ ಬಳಕೆದಾರರ ಶಿಕ್ಷಣ ಟ್ರಸ್ಟ್ ಕಾರ್ಯ ನಿರ್ವಹಿಸಿದೆ, ತನ್ನ ಕಾರ್ಯವನ್ನು ಮುಂದುವರಿಸಿದೆ. ಬಳಕೆದಾರರ ಜಾಗೃತಿ ಆರಂಭಿಸಿದ ಪ್ರಾರಂಭದಲ್ಲಿ ನಾವು ಮಾಡಿದ ಕೆಲಸ ನಾವು ಹುಟ್ಟುಹಾಕಿದ ಬಳಕೆದಾರರ ಶಿಕ್ಷಣ ಟ್ರಸ್ಟ್ ನ ನೋಂದಾವಣೆ. ಅದಕ್ಕೆ ಪೂರಕವಾಗಿ ನಾವು ಬಳಕೆದಾರರ ಚಳವಳಿ ಪತ್ರಿಕೆಯನ್ನೂ 11 ವರ್ಷಗಳ ಕಾಲ ನಡೆಸಿದೆವು. ನಮ್ಮ ಟ್ರಸ್ಟ್‌ನ ಮುಖ್ಯ ಉದ್ದೇಶ, ಒಡೆಯರೆಲ್ಲ ಸೇವಕರು. ಅಂದರೆ, ಪ್ರಜಾಪ್ರಭುತ್ವದಲ್ಲಿ ಪ್ರಜೆಯೇ ಒಡೆಯ. ಸರಕಾರಿ ನೌಕರರು ಸೇವಕರು ಎಂಬುದು. ಆದರೆ ನಾವು ಕಾಣುತ್ತಿದ್ದದ್ದು, ಈಗ ಕಾಣುತ್ತಿರುವುದು ಮಾತ್ರ ಇದಕ್ಕೆ ಉಲ್ಟಾ. ನಮ್ಮ ಸೇವಕರಾಗಬೇಕಾದರು ನಮ್ಮ ನಾಯಕರಾಗಿ, ಒಡೆಯರಾಗಿ ನಮ್ಮನ್ನು ಆಳುವ ಪರಿಸ್ಥಿತಿ. ಪ್ರಜಾಪ್ರಭುತ್ವದಲ್ಲಿ ಪ್ರಜೆ ಒಡೆಯನಾಗುವ ಕಾಲ ಮಾತ್ರ ಇನ್ನೂ ಬಂದಿಲ್ಲ. ಅದೇ ನಮ್ಮ ಟ್ರಸ್ಟ್‌ನ ಉದ್ದೇಶವಾಗಿದ್ದ ಪ್ರಜಾಪ್ರಭುತ್ವದಲ್ಲಿ ಪ್ರಜೆಯೇ ಒಡೆಯ. ಇದು ಸರಕಾರಿ ಸ್ವಾಮ್ಯದ ಉದ್ದಿಮೆಗಳಿಗೂ ಅನ್ವಯ. ಆಗ ಅತ್ಯಂತ ಜ್ವಲಂತ ಸಮಸ್ಯೆ ಅಡುಗೆ ಅನಿಲದ್ದು. ಸುಮಾರು 1984ರಿಂದ 90ರವರೆಗೆ ಅಡುಗೆ ಅನಿಲ ಸಮಸ್ಯೆ ತೀವ್ರತೆರನದ್ದಾಗಿತ್ತು. ಉರುವಲಿಗಾಗಿ ಕಟ್ಟಿಗೆ ಬಳಕೆ ಕಡಿಮೆಯಾಗುತ್ತಾ ಸಾಗಿದಂತೆ, ಸೀಮೆಎಣ್ಣೆಯನ್ನೇ ಅವಲಂಬಿಸುತ್ತಿದ್ದ ಕಾಲವದು. ಅಡುಗೆ ಅನಿಲ ಬಳಕೆಯಲ್ಲಿದ್ದರೂ ಅದೊಂದು ಉಳ್ಳವರ ಸೊತ್ತಾಗಿಯೇ ಗುರುತಿಸಲ್ಪಟ್ಟಿತ್ತು. ಅಡುಗೆ ಅನಿಲ ವಿತರಕರು ಚಕ್ರವರ್ತಿಗಳಂತೆ ವರ್ತಿಸುತ್ತಿದ್ದರು. ಅಡುಗೆ ಅನಿಲ ಬೇಕಿದ್ದಲ್ಲಿ, ಏಜೆನ್ಸಿಗಳ ಮೂಲಕ ಕಂಪೆನಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಕೆಲ ವರ್ಷಗಳ ಕಾಲ ಕಾದ ಬಳಿಕ ಅಡುಗೆ ಅನಿಲ ಮಂಜೂರಾಗುತ್ತಿತ್ತು. ಆಗ ವಿತರಕರ ಬಳಿ ಫಲಾನುಭವಿ ತೆರಳಿದಾಗ, ಆ ವಿತರಕ ಕೇಳುವ ಮೊದಲ ಪ್ರಶ್ನೆಯೇ ನಿಮಗೆ ಯಾವ ಸ್ಟವ್ ಬೇಕು? ಎಂದು. ಯಾಕೆಂದರೆ ಒಂದು ಸ್ಟವ್ ಮೇಲೆ ಶೇ.50ರಷ್ಟು ಲಾಭ ಅವರಿಗಾಗುತ್ತಿತ್ತು.
ಅದಕ್ಕಾಗಿ ಬಳಕೆದಾರರು ಸ್ಟವ್ ಖರೀದಿಸುವಂತೆ ಪೀಡಿಸುತ್ತಿದ್ದರು. ಒಂದು ವೇಳೆ ಸ್ಟವ್ ಬೇಡ ಎಂದು ಗ್ರಾಹಕರು ಪಟ್ಟು ಹಿಡಿದರೆ, ಸಂಪರ್ಕ ನೀಡಲು ತಿಂಗಳುಗಟ್ಟಲೆ ಕಾಯುವಂತೆ ಮಾಡುತ್ತಿದ್ದರು. ಮನೆಗೆ ಅಡುಗೆ ಅನಿಲವನ್ನು ನೀಡದೆ, ನೀವೇ ಬಂದು ಕೊಂಡುಹೋಗಿ ಎಂದು ಹೇಳುವುದಲ್ಲದೆ, ಏಜೆನ್ಸಿ ಕಚೇರಿಗೆ ಹೋದಾಗ ದುರ್ವರ್ತನೆ ಬೇರೆ. ಜನತೆ ಇದರಿಂದ ರೋಸಿ ಹೋಗಿದ್ದರು. ಅದಕ್ಕಾಗಿ ಎಲ್‌ಪಿಜಿ ಬಳಕೆದಾರರ ಸಭೆಯನ್ನು ಕರೆಯಲಾಯಿತು. 1985ರಲ್ಲಿ ಈ ಸಭೆ ಪ್ರಥಮವಾಗಿ ಜಿಲ್ಲೆಯಲ್ಲಿ ನಡೆಯಿತು. ಕೆಎಂಸಿ ಸಭಾಂಗಣದಲ್ಲಿ ಆ ಸಭೆ ಕರೆಯಲಾಯಿತು. ಆ ಸಭಾಂಗಣ ಕಿಕ್ಕಿರಿದು ತುಂಬಿ ಹೋಗಿತ್ತು ಇಂಡಿಯನ್ ಆಯಿಲ್, ಭಾರತ್ ಹಾಗೂ ಹಿಂದೂಸ್ಥಾನ್ ಪೆಟ್ರೋಲಿಯಂ ಕಂಪೆನಿಗಳ ಸೀನಿಯರ್ ಸೇಲ್ಸ್ ಆಫೀಸರ್‌ಗಳನ್ನು ವೇದಿಕೆಯಲ್ಲಿ ಕೂರಿಸಲಾಗಿತ್ತು. ಜತೆಗೆ ವಿತರಕರೂ ವೇದಿಕೆಯಲ್ಲಿದ್ದರು. ಆರಂಭದಲ್ಲಿ ಅವರಿಗೆ ಮಾತನಾಡಲು ಅವಕಾಶ ನೀಡಲಾಯಿತು. ಅಧಿಕಾರಿಯೊಬ್ಬ ಆರಂಭದಲ್ಲಿ ಅಡುಗೆ ಅನಿಲದ ಕುರಿತಂತೆ ಮಾತನಾಡಲು ಆರಂಭಿಸಿದರು. ಆಗ ವೇದಿಕೆಯ ಮುಂಭಾಗದಲ್ಲಿ ಕುಳಿತಿದ್ದ ವಯಸ್ಕರೊಬ್ಬರು ಎದ್ದು ನಿಂತು, ನಾವು ಇದನ್ನೆಲ್ಲಾ ಕೇಳಿದ್ದೇವೆ. ನಮಗೆ ಉಪನ್ಯಾಸ ಬೇಕಿಲ್ಲ. ನಾವು ನಮ್ಮ ಸಮಸ್ಯೆಗಳನ್ನು ಹೇಳಲು ಬಂದಿದ್ದು ಎಂದು ಗದರಿದಾಗ ಒಂದರೆ ಘಳಿಗೆ ಸಭಾಂಗಣವೆಲ್ಲಾ ಸ್ತಬ್ಧಗೊಂಡಿತ್ತು. ಆ ದಿನ ಈ ದಿಟ್ಟವಾದ ಸ್ವರವನ್ನು ಎಬ್ಬಿಸಿದ್ದು, ಸೂರ್ಯನಾರಾಯಣ ಅರಿಗ. ಕರ್ನಾಟಕ ಬ್ಯಾಂಕ್‌ನ ಹಿರಿಯ ಅಧಿಕಾರಿಯಾಗಿದ್ದ ಅವರ ಮಾತುಗಳು ವೇದಿಕೆಯಲ್ಲಿದ್ದ ಅಧಿಕಾರಿಗಳನ್ನು ಅಧೀರರನ್ನಾಗಿಸಿದರೆ, ಕೆಳಗೆ ಕುಳಿತಿದ್ದ ಗ್ರಾಹಕರಲ್ಲಿ ಧೈರ್ಯವನ್ನು ತುಂಬಿಸಿತ್ತು. ಅಲ್ಲಿ ಬಂದಿದ್ದ ಮಹಿಳೆಯರು ಸೇರಿದಂತೆ ನೂರಾರು ಮಂದಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಏಜೆನ್ಸಿಗಳು ನಡೆಸುತ್ತಿದ್ದ ದುರ್ವರ್ತನೆಯನ್ನು ಅಧಿಕಾರಿಗಳ ಮುಂದಿಟ್ಟರು.
ಆ ಸಭೆಯಲ್ಲಿ ಜನರನ್ನು ನಿಯಂತ್ರಿಸಲು ನಮಗೆ ಕಷ್ಟಕರವಾಗಿತ್ತು. ಅಷ್ಟೊಂದು ಸಮಸ್ಯೆಗಳನ್ನು ಅಡುಗೆ ಅನಿಲ ವಿತರಕರಿಂದ ಜನಸಾಮಾನ್ಯರು ಎದುರಿಸಿದ್ದರು. ಅದಕ್ಕಾಗಿ ನಾವು ಜನರ ಸಮಸ್ಯೆಗಳನ್ನೆಲ್ಲಾ ಪಟ್ಟಿ ಮಾಡಿ, ನಮ್ಮ ಬೇಡಿಕೆಗಳನ್ನು ಅಡುಗೆ ಅನಿಲ ಕಂಪೆನಿಗೆ ನೀಡಿದೆವು. ಅದರಲ್ಲಿ ಮುಖ್ಯವಾಗಿ ಅಡುಗೆ ಅನಿಲ ಸಂಪರ್ಕದ ವೇಳೆ ಸ್ಟವ್ ಖರೀದಿಸಬೇಕೆಂಬ ಒತ್ತಾಯ. ಅದನ್ನು ಕೈಬಿಡಬೇಕೆಂಬುದು ನಮ್ಮ ಆಗ್ರಹವಾಗಿತ್ತು. ಅಗತ್ಯವಿದ್ದಲ್ಲಿ ಗ್ರಾಹಕರು ಅದನ್ನು ಖರೀದಿಸಬಹುದು. ಅದಕ್ಕಾಗಿ ಒತ್ತಡ ಹೇರಬಾರದು ಎಂದು ನಾವು ಪಟ್ಟಿ ಮಾಡಿದೆವು. ಮಾತ್ರವಲ್ಲದೆ, ಸ್ಟವ್ ಖರೀದಿಗಾಗಿ ಏಜೆನ್ಸಿಗಳು ಮಾಡುತ್ತಿದ್ದ ಕೆಲವೊಂದು ತಂತ್ರಗಳ ದಾಖಲೆಯೂ ನಮ್ಮ ಬಳಿ ಇದ್ದುದರಿಂದ ಅವುಗಳನ್ನೆಲ್ಲಾ ಜತೆಗಿರಿಸಿ ಕಂಪೆನಿಗಳಿಗೆ ನೀಡಿದೆವು. ನಿಯಮ ಪ್ರಕಾರ ಅಡುಗೆ ಅನಿಲವನ್ನು ಗ್ರಾಹಕರ ಮನೆಯ ಅಡುಗೆ ಕೋಣೆಗೆ ಕೊಂಡೊಯ್ದು ಸಂಪರ್ಕ ನೀಡಬೇಕು. ಆದರೆ ಬಹುತೇಕವಾಗಿ ಆ ಪ್ರಕಾರ ಆಗುತ್ತಿರಲಿಲ್ಲ. ನಮ್ಮ ಬೇಡಿಕೆಗಳಲ್ಲಿ ಇದೂ ಒಂದು ಪ್ರಮುಖ ಬೇಡಿಕೆಯಾಗಿತ್ತು. ಒಂದು ತಿಂಗಳ ಬಳಿಕ ಮತ್ತೊಂದು ಸಭೆ ನಡೆಸಿ ಅದರಲ್ಲಿ ಭಾಗವಹಿಸಬೇಕು ಎಂದು ಕಂಪೆನಿಗಳಿಗೆ ಆಗ್ರಹಿಸಲಾಗಿತ್ತು.