varthabharthi


ವಾರದ ವ್ಯಕ್ತಿ

ವಾರದ ವ್ಯಕ್ತಿ

ಅಪರೂಪದ ಅಭ್ಯರ್ಥಿ ರವಿಕೃಷ್ಣಾ ರೆಡ್ಡಿ

ವಾರ್ತಾ ಭಾರತಿ : 8 Apr, 2018
-ಬಸು ಮೇಗಲಕೇರಿ

ಬೆಂಗಳೂರಿನ ಕಾಸ್ಮೋ ಕಲ್ಚರ್ ಪ್ರತಿನಿಧಿಸುವ ಜಯನಗರ ಫೋರ್ಥ್ ಬ್ಲಾಕ್, ಹಲವು ಜನರನ್ನು ಹಲವಾರು ಕಾರಣಗಳಿಗೆ ಆಕರ್ಷಿಸುವ ವಿಶಿಷ್ಟ ಪ್ರದೇಶ. ಪ್ರಜ್ಞಾವಂತರು ಹೆಚ್ಚಿರುವ; ಕ್ಲಬ್, ಮಾಲ್, ಮಾರ್ಕೆಟ್, ಬಜಾರ್‌ಗಳಿರುವ ವಾಣಿಜ್ಯ ವ್ಯವಹಾರಗಳ ಜನನಿಬಿಡ ಪ್ರದೇಶ. ಅಂತಹ ಪ್ರದೇಶದ ರಸ್ತೆ ಬದಿಯ ದೃಶ್ಯವಿದು. ವಾಹನಗಳ ಓಡಾಟ, ಜನರ ತಿರುಗಾಟ, ವ್ಯಾಪಾರ ವಹಿವಾಟುಗಳ ನಡುವೆಯೇ, ಫುಟ್‌ಪಾತ್‌ನ ಸಿಮೆಂಟ್ ನೆಲಹಾಸಿನ ಮೇಲೆ ಇಬ್ಬರು ಮಧ್ಯವಯಸ್ಕರು ಕೂತು ತಿಂಡಿ ತಿನ್ನುತ್ತಿದ್ದಾರೆ. ಅವರು ಆಗತಾನೆ ಕೆಲಸ ಕೈಬಿಟ್ಟು ಬಂದವರಂತೆ ಕಾಣುತ್ತಿದ್ದಾರೆ. ಬುತ್ತಿ ಬಿಚ್ಚಿ ತಿನ್ನುತ್ತ, ಕಷ್ಟ ಸುಖ ಮಾತನಾಡುತ್ತ ಕೆಲಸದ ಆಯಾಸವನ್ನು ಹಗುರ ಮಾಡಿಕೊಳ್ಳುತ್ತಿದ್ದಾರೆ.

ಅವರು ಬೇರಾರು ಅಲ್ಲ, ರವಿಕೃಷ್ಣಾ ರೆಡ್ಡಿ ಮತ್ತು ಅವರ ಮಡದಿ ಸುಪ್ರಿಯಾ. ರವಿಯವರು ಬೆಂಗಳೂರಿನ ಸೆರಗಿನಲ್ಲಿರುವ ಬೊಮ್ಮಸಂದ್ರದವರು. ಮಧ್ಯಮವರ್ಗದ ಕೃಷಿ ಕುಟುಂಬದಿಂದ ಬಂದವರು. ಬೆಂಗಳೂರಿನಲ್ಲಿ ಆಡಿ ಬೆಳೆದವರು. ಓದಿ ಅಮೆರಿಕದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ, ಹತ್ತು ವರ್ಷ ಕೆಲಸ ಮಾಡಿದ ನಂತರ, ‘‘ನಾನೇಕೆ ನಮ್ಮದೇ ನೆಲದಲ್ಲಿ, ನಮ್ಮದೇ ಜನಗಳ ನಡುವೆ ಬದುಕಿ, ನಮ್ಮ ದೇಶಕ್ಕೆ ಏನಾದರೂ ಕೊಡುಗೆ ಕೊಡಬಾರದು’’ ಅಂತನ್ನಿಸಿ ಬೆಂಗಳೂರಿಗೆ ಬಂದವರು. ಈಗ ಕೆಲಸ ಬಿಟ್ಟು, ಶ್ರಮದ ಸ್ವಂತ ಹಣ ಖರ್ಚು ಮಾಡುತ್ತ, ಜಯನಗರ ವಿಧಾನಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಯಾಗಿದ್ದಾರೆ. ಎಲ್ಲರಿಗಿಂತ ಮುಂಚೆ ಚುನಾವಣಾ ಪ್ರಚಾರ ಕಾರ್ಯ ಆರಂಭಿಸಿರುವ ರವಿಯವರು, ಕಾಲ್ನಡಿಗೆಯಲ್ಲಿ ಕ್ಷೇತ್ರದ ಮನೆಮನೆಗೆ ತೆರಳಿ, ಮತಯಾಚನೆ ಮಾಡುತ್ತಿದ್ದಾರೆ. ಬೇಸಿಗೆ ಬಿಸಿಲಿನ ಝಳ ಜಾಸ್ತಿಯಾದಾಗ ಹೀಗೆ ರಸ್ತೆಯ ಬದಿಯಲ್ಲಿ ಕೂತು, ಬುತ್ತಿ ಬಿಚ್ಚಿಕೊಂಡು ಉಣ್ಣುತ್ತ ದಣಿವಾರಿಸಿಕೊಳ್ಳುತ್ತಾರೆ. ಇದು ಕಳೆದ ಐದು ತಿಂಗಳಿನಿಂದ ಜಯನಗರದ ಜನ ನೋಡುತ್ತಿರುವ ದಿನನಿತ್ಯದ ನೋಟ. ಅಪರೂಪವೆನ್ನಿಸಿದವರು ಫೋಟೋ ಕ್ಲಿಕ್ಕಿಸಿದ್ದಾರೆ. ಇವರು ಇವರ ಪಾಡಿಗಿದ್ದಾರೆ.

ಆದರೆ ಈ ಚಿತ್ರ ವಿಶೇಷವಾಗಿದ್ದು, ನೋಡಿದ ತಕ್ಷಣ ಮಾತಿಗೆಳೆಯುವಂತಿದೆ. ಚಿತ್ರವನ್ನು ಕ್ಲಿಕ್ಕಿಸಿದವರು, ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಅದು ಸಾವಿರಾರು ಸಲ ಶೇರ್ ಆಗಿ, ಲಕ್ಷಾಂತರ ಜನರ ಲೈಕ್‌ಗೆ ಒಳಗಾಗಿ, ತಲೆಗೆ ತೋಚಿದ ಕಾಮೆಂಟ್‌ಗಳಿಗೆ ಬಲಿಯಾಗಿದೆ. ವೃತ್ತಿರಾಜಕಾರಣಿ ಗಳನ್ನು ನೋಡಿ ಬೇಸತ್ತವರು ‘‘ಎಲೆಕ್ಷನ್ ಟೈಮಲ್ಲಿ ಇವೆಲ್ಲ ಇದ್ದದ್ದೆ’’ ಎಂದು ತಮ್ಮ ಸಿನಿಕತನದ ಕಾಮೆಂಟ್ ಹಾಕಿದರೆ; ‘‘ಅಮೆರಿಕದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದರಂತೆ, ಫುಟ್‌ಪಾತ್ ಮೇಲೆ ಕೂತು ತಿಂಡಿ ತಿನ್ನುತ್ತಿದ್ದಾರೆ, ಈ ಕಾಲದಲ್ಲೂ ಇಂಥವರು ಇದ್ದಾರಲ್ಲ’’ ಎಂದು ಹಲವರು ಅವರ ಸರಳತೆಯನ್ನು ಮೆಚ್ಚಿ ಮಾತನಾಡಿದ್ದಾರೆ. ಮೌಲ್ಯಾಧಾರಿತ ರಾಜಕಾರಣ ಬಯಸುವವರು ರವಿಯವರ ಉಮೇದು ವಾರಿಕೆಯನ್ನು ಮುಕ್ತವಾಗಿ ಬೆಂಬಲಿಸಿದ್ದಾರೆ. ಇನ್ನು ಕೆಲವರು ಚುನಾವಣಾ ರಾಜಕಾರಣ ಬೇಡುವ ಹಣ, ಜಾತಿ, ಪ್ರಭಾವ, ಪ್ರತಿಷ್ಠೆಯನ್ನು ಪ್ರಸ್ತಾಪಿಸಿ, ‘‘ಇಂಥವೆಲ್ಲ ನಡಿಯಲ್ಲ ಈಗ’’ ಎಂದು ವಸ್ತುನಿಷ್ಠ ವಿಮರ್ಶೆಗಿಳಿದಿದ್ದಾರೆ. ಬದಲಾವಣೆ ಬಯಸುವ ಮನಸ್ಸುಗಳು ಪರ್ಯಾಯ ರಾಜಕಾರಣದ ಅಗತ್ಯ ಮತ್ತು ಅನಿವಾರ್ಯತೆಯನ್ನು ಚರ್ಚಿಸಿದ್ದಾರೆ. ರಾಷ್ಟ್ರೀಯ ಪಕ್ಷದೊಂದಿಗೆ ಗುರುತಿಸಿಕೊಂಡ ಕಾರ್ಯಕರ್ತರು ಉಡಾಫೆ ಯಿಂದ ಗೇಲಿ ಮಾಡಿದ್ದಾರೆ. ಹೀಗೆ, ಕೇವಲ ಒಂದೇ ಒಂದು ಫೋಟೋ ಇಷ್ಟೆಲ್ಲ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ. ಜೊತೆಗೆ ಹೊಸಗಾಲದ ಸೋಷಿಯಲ್ ಮೀಡಿಯಾದ ವ್ಯಾಪ್ತಿ, ವಿಸ್ತಾರ ಮತ್ತು ಶಕ್ತಿ ಸಾಮರ್ಥ್ಯವನ್ನು ಸಾರಿದೆ. ರವಿಯವರು ಅಮೆರಿಕದಲ್ಲಿರುವಾಗಲೇ ಉತ್ತಮ ಅಭಿರುಚಿ ಯುಳ್ಳ, ಕನ್ನಡದ ಅಸ್ಮಿತೆಯನ್ನು ಅರಳಿಸುವ, ಪತ್ರಿಕೋದ್ಯಮದ ಮೌಲ್ಯವನ್ನು ಎತ್ತಿಹಿಡಿಯುವ ‘ವಿಕ್ರಾಂತ ಕರ್ನಾಟಕ’ ಎಂಬ ವಾರಪತ್ರಿಕೆಯೊಂದನ್ನು ಆರಂಭಿಸಿದ್ದರು. ಅಮೆರಿಕದಿಂದಲೇ ಪತ್ರಿಕೆಗೆ ಅಂಕಣ ಬರೆಯುತ್ತಿದ್ದರು. ಮೌಲ್ಯಾಗ್ರಹ ಪ್ರಕಾಶನ ಸಂಸ್ಥೆ ಸ್ಥಾಪಿಸಿ, ನಾಲ್ಕು ವೌಲ್ಯಯುತ ಪುಸ್ತಕಗಳನ್ನು ಪ್ರಕಟಿಸಿರುವ ಅವರು, ಆ ಪತ್ರಿಕೆಯಿಂದ ಗಳಿಸಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು. ಆದರೂ ಸಮಾಜದಲ್ಲಿ ಬದಲಾವಣೆ ತರಬೇಕೆನ್ನುವ ತುಡಿತ, ಜನರಲ್ಲಿ ಜಾಗೃತಿಯನ್ನು ಉಂಟುಮಾಡಬೇಕೆನ್ನುವ ಹಂಬಲ, ಏನಾದರೂ ಸಾಧಿಸಲು ಸಾಧ್ಯ ಎಂಬ ಆಶಾಭಾವನೆ ಅವರಲ್ಲಿ ಬತ್ತದ ತೊರೆಯಂತೆ ಹರಿಯುತ್ತಲೇ ಇದೆ. ಆ ನಿಟ್ಟಿನಲ್ಲಿ ಹಲವು ಸಮಾಜಮುಖಿ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡದ್ದು ನಮ್ಮ ಕಣ್ಣಮುಂದೆಯೇ ಇದೆ. 2008ರಲ್ಲಿ, ಮೌಲ್ಯಾಗ್ರಹ- ಸಾರ್ವಜನಿಕ ಜೀವನದಲ್ಲಿ ಮೌಲ್ಯಗಳನ್ನು ಆಗ್ರಹಿಸಿ, ಎಂಜಿ ರಸ್ತೆಯ ಮಹಾತ್ಮಾಗಾಂಧಿ ಪ್ರತಿಮೆ ಎದುರು ಮೂರು ದಿನಗಳ ಕಾಲ ಉಪವಾಸ ಸತ್ಯಾಗ್ರಹ ಮಾಡಿದರು. ಬೆರಳೆಣಿಕೆಯಷ್ಟು ಜನ ಬೆಂಬಲಿಸಿದರು. ಮುಂದುವರಿದು, 2008ರ ಚುನಾವಣೆಯಲ್ಲಿ ಜಯನಗರ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತರು. ನಂತರ, ಪತ್ರಿಕಾಗೋಷ್ಠಿ ಕರೆದು, ಬೆಂಬಲಿಸಿದ ಮತದಾರರಿಗೆ ಧನ್ಯವಾದಗಳನ್ನು ತಿಳಿಸಿ, ಚುನಾವಣೆಯ ಖರ್ಚು ವೆಚ್ಚಗಳ ಲೆಕ್ಕ ಒಪ್ಪಿಸಿದ್ದರು. ಆನಂತರ, ಅಮೆರಿಕ ಬಿಟ್ಟು ಬೆಂಗಳೂರಿಗೆ ಬಂದರು. ಆ ಸಂದರ್ಭದಲ್ಲಿ ದೇಶದಲ್ಲಿ ಅಲೆ ಎಬ್ಬಿಸಿದ್ದ, ಭ್ರಷ್ಟಾಚಾರ ಮುಕ್ತ ದೇಶಕ್ಕಾಗಿ ಆಂದೋಲನ ರೂಪಿಸಿದ್ದ ಅಣ್ಣಾ ಹಝಾರೆಯವರ ಸಂಘಟನೆಯೊಂದಿಗೆ ಗುರುತಿಸಿಕೊಂಡರು. 2013ರಲ್ಲಿ ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದಿಂದ, 2014ರಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾದರು. ಎರಡರಲ್ಲೂ ಸೋತರು. ಅಷ್ಟಾದರೂ ಹತಾಶರಾಗದ, ಉತ್ಸಾಹ ಕಳೆದುಕೊಳ್ಳದ, ಸಿನಿಕರಾಗಿ ಮೂದಲಿಕೆಗಿಳಿಯದ ರವಿರೆಡ್ಡಿಯವರು, ಗಾಂಧಿ ಮಾರ್ಗದ ಮೂಲಕ ಸಾಮಾಜಿಕ ಹೋರಾಟಗಳಲ್ಲಿ ತೊಡಗಿಕೊಂಡರು. ಮಂಡೂರಿನ ಕಸದ ಸಮಸ್ಯೆಯಿಂದ ಜರ್ಜರಿತರಾಗಿದ್ದ ಹಳ್ಳಿಯವರ ಜೊತೆ ಸೇರಿ ಹೋರಾಟ ರೂಪಿಸಿದರು. ಪ್ರತಿಭಟನೆಗಿಳಿದಾಗ ಪಟ್ಟಭದ್ರರ ಕುತಂತ್ರದಿಂದಾಗಿ ಬಂಧನಕ್ಕೊಳಗಾದರು. ಎ.ಟಿ.ರಾಮಸ್ವಾಮಿ, ಸಂತೋಷ್ ಹೆಗ್ಡೆ, ಕೆ.ಆರ್.ಪೇಟೆ ಕೃಷ್ಣ, ಎಸ್.ಆರ್.ಹಿರೇಮಠರೊಂದಿಗೆ ಸೇರಿ ಸಾರ್ವಜನಿಕ ಸ್ವತ್ತು ಉಳಿಸುವ ನಿಟ್ಟಿನಲ್ಲಿ, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿಯವರ ನೇತೃತ್ವದಲ್ಲಿ ಭೂಕಬಳಿಕೆ ವಿರೋಧಿ ಹೋರಾಟಕ್ಕಿಳಿದರು. ಸತತ 39 ದಿನಗಳ ಕಾಲ ನಡೆದ ಈ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ನಾಯಕರಾಗಿ ರೂಪುಗೊಂಡರು. ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸಿದ ಸರಕಾರ, ಹಲ್ಲಿಲ್ಲದ ಎಸಿಬಿ ಸ್ಥಾಪಿಸಿದ್ದನ್ನು ಕಟುವಾಗಿ ವಿರೋಧಿಸಿ 8 ದಿನಗಳ ಕಾಲ ಉಪವಾಸ ಸತ್ಯಾಗ್ರಹ ಕೈಗೊಂಡರು. ಗದಗ ಜಿಲ್ಲೆಯ ಕಪ್ಪತ್ತಗುಡ್ಡ ಅರಣ್ಯ ಸಂರಕ್ಷಣೆಗಾಗಿ ತೋಂಟದಾರ್ಯ ಸ್ವಾಮೀಜಿ ಮತ್ತು ಹಿರೇಮಠರ ನೇತೃತ್ವದಲ್ಲಿ ನಡೆದ ಮೂರು ದಿನಗಳ ಅಹೋರಾತ್ರಿ ಉಪವಾಸ ಸತ್ಯಾಗ್ರಹ ದಲ್ಲಿ ಭಾಗಿಯಾಗಿ, ಮರ-ಮಳೆ-ಬೆಳೆ-ಪರಿಸರದ ಬಗ್ಗೆ ಜನರನ್ನು ಮತ್ತು ಸರಕಾರವನ್ನು ಎಚ್ಚರಿಸುವ ಕೆಲಸ ಮಾಡಿದರು. ಆನಂತರ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಸ್ಥಾಪಿಸಿ, ಸರಕಾರಿ ಕಚೇರಿಗಳಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರದ ವಿರುದ್ಧ ಸಮರವನ್ನೇ ಸಾರಿದರು. ಆರ್‌ಟಿಓ, ಕಂದಾಯ, ಪಡಿತರ, ಸಾರ್ವಜನಿಕ ಆಸ್ಪತ್ರೆಗಳಂತಹ ಅತಿ ಹೆಚ್ಚು ಭ್ರಷ್ಟಾಚಾರ ನಡೆಯುವ ಇಲಾಖೆಗಳ ಮೇಲೆ ಸಮಾನ ಮನಸ್ಕರೊಂದಿಗೆ ದಾಳಿ ನಡೆಸಿದರು. ಜನರ ಮುಂದೆಯೇ ಗಟ್ಟಿ ಧ್ವನಿಯಲ್ಲಿ ಅಧಿಕಾರಿಗಳನ್ನು ಪ್ರಶ್ನಿಸತೊಡಗಿದರು. ಭ್ರಷ್ಟಾಚಾರವನ್ನು ಒಪ್ಪಿಕೊಂಡಿರುವ, ವ್ಯವಸ್ಥೆಯೊಂದಿಗೆ ಹೊಂದಿಕೊಂಡಿರುವ ಜನರ ನಡುವೆಯೇ, ಜನರ ಹಣವನ್ನು ಜನರಿಗೆ ಕೊಡಿಸಿದ್ದು, ಸಾರ್ವಜನಿಕವಾಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು ವ್ಯಾಪಕ ಪ್ರಚಾರ ಪಡೆದು ಸುದ್ದಿಯಾಯಿತು. ಅದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿ ಸಂಚಲನ ಉಂಟುಮಾಡಿತು. ಇದರ ಫಲವಾಗಿ ರವಿಯವರ ವಿರುದ್ಧ ಸರಕಾರಿ ಅಧಿಕಾರಿಗಳು ಮತ್ತವರ ರಕ್ಷಣೆಗೆ ನಿಂತ ರಾಜಕಾರಣಿಗಳು, ದಲ್ಲಾಳಿಗಳು, ಏಜೆಂಟರು, ರೌಡಿಗಳು ಒಂದಾಗಿ ಹಲ್ಲೆ ಮಾಡಿದರು. ಇದರಿಂದ ರವಿಯವರು ಕಷ್ಟ-ನಷ್ಟಕ್ಕೊಳಗಾದರೂ, ಬಡವರ, ಅಸಹಾಯಕರ ಮುಖದಲ್ಲಿ ಮೂಡಿದ ಮಂದಹಾಸ ಎಲ್ಲವನ್ನು ಮರೆಸಿತು. ಮತ್ತದೇ ಜನಹಿತ ಕಾರ್ಯಗಳಲ್ಲಿ ತೊಡಗಿಕೊಳ್ಳಲು ಪ್ರೇರೇಪಿಸಿತು.

ಸರಕಾರಿ ಕಾರ್ಯಕ್ರಮಗಳು, ಅಭಿವೃದ್ಧಿ ಯೋಜನೆಗಳಲ್ಲಿ ನಡೆಯುವ ಅವ್ಯವಹಾರಗಳ ಬಗ್ಗೆ ತಿಳಿಯಲು ಆರ್‌ಟಿಐ ಕಾಯ್ದೆ ಇದೆ. ಅದರ ಮೂಲಕ ಸರಕಾರಿ ದಾಖಲೆಗಳನ್ನು ಪಡೆದು ಪ್ರಶ್ನಿಸಬಹುದು. ಸುದ್ದಿ ಮಾಡಿ, ಕೋರ್ಟಿಗೆಳೆದು ಶಿಕ್ಷೆಗೆ ಗುರಿಪಡಿಸಬಹುದು. ರವಿಯವರು, ಆರ್‌ಟಿಐ ಮತ್ತು ಸಕಾಲ ಕಾಯ್ದೆಗಳ ಬಗ್ಗೆ ತಿಳುವಳಿಕೆ ತುಂಬುವ ತರಬೇತಿ ಶಿಬಿರಗಳನ್ನು ಆಯೋಜಿಸಿ, ಜನರಲ್ಲಿ ಜಾಗೃತಿಯನ್ನುಂಟುಮಾಡುತ್ತಾ ಬಂದಿ ದ್ದಾರೆ. ಇದಷ್ಟೇ ಅಲ್ಲ, ಕೃಷಿಕ ಕುಟುಂಬದಿಂದ ಬಂದ ರವಿಯ ವರು, ರೈತರ ಆತ್ಮಹತ್ಯೆ ತಡೆಯುವ ನಿಟ್ಟಿನಲ್ಲಿ, ಅವರಲ್ಲಿ ಅರಿವು ಮೂಡಿಸುವ ಸಲುವಾಗಿ ಮದ್ದೂರಿನಿಂದ ಮಂಡ್ಯದವರೆಗೆ ಪಾದಯಾತ್ರೆಯನ್ನೂ ಮಾಡಿದ್ದಾರೆ. ಇದೆಲ್ಲವನ್ನು ರವಿಯವರು ಕಳೆದ ಹತ್ತು ವರ್ಷಗಳಿಂದ ತುಂಬಾ ಸೀರಿಯಸ್ಸಾಗಿ, ಸಿನ್ಸಿಯರ್ ಆಗಿ ಸಾರ್ವಜನಿಕ ಬದುಕಿನಲ್ಲಿ ವ್ರತದಂತೆ ಪಾಲಿಸಿಕೊಂಡು ಬಂದಿದ್ದಾರೆ. ಇದರಿಂದ ಅವರ ಶ್ರಮ, ಸಮಯ, ಹಣ ವ್ಯಯವಾಗಿದೆ. ವೈಯಕ್ತಿಕ ಬದುಕು ಏರುಪೇರಾಗಿದೆ. ಆದರೂ ಈ ಜನರಿಗಾಗಿ, ದೇಶಕ್ಕಾಗಿ, ಬದಲಾವಣೆಗಾಗಿ ಏನಾದರೂ ಮಾಡಬೇಕೆಂಬ ತುಡಿತ ಮಾತ್ರ ಕಡಿಮೆಯಾಗಿಲ್ಲ. ಇಂತಹ ರವಿಯವರನ್ನು ಬೆಂಬಲಿಸಿ, ಅವರ ಪರ ಚುನಾವಣಾ ಪ್ರಚಾರಕ್ಕೆ ಸ್ವರಾಜ್ ಇಂಡಿಯಾದ ರಾಷ್ಟ್ರೀಯಾಧ್ಯಕ್ಷ ಯೋಗೇಂದ್ರ ಯಾದವ್, ಚಿಂತಕ ದೇವನೂರ ಮಹಾದೇವ ಮತ್ತು ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠರು ಬಂದು, ಜಯನಗರದ ಬೀದಿಗಳಲ್ಲಿ ಸಂಚರಿಸಿದರು. ‘ಒಂದು ಓಟು, ಒಂದು ನೋಟು’ ಅಭಿಯಾನಕ್ಕೆ ಚಾಲನೆ ನೀಡಿದ ಯೋಗೇಂದ್ರ ಯಾದವ್, ‘‘ಇದು ನಾನು ಪತ್ರಿಕೆಗಳಿಗೆ ಲೇಖನ ಬರೆದು ಸಂಪಾದಿಸಿದ ನನ್ನ ಬೆವರಿನ ಹಣ’’ ಎಂದು ಎರಡು ಸಾವಿರ ರೂಪಾಯಿಗಳನ್ನು ದೇಣಿಗೆಯಾಗಿ ನೀಡಿದರು. ಜನ ಅವರಾಗಿಯೇ ಮುಂದೆ ಬಂದು ದೇಣಿಗೆ ನೀಡತೊಡಗಿದರು. ಅದೀಗಾಗಲೇ ಲಕ್ಷ ರೂ.ಗಳನ್ನು ದಾಟಿದೆ. ರವಿಯವರ ರಾಜಕಾರಣ, 1962ರಲ್ಲಿ, ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿ ಮಾದರಿ ರಾಜಕೀಯ ನಡೆಸಿದ ಶಾಂತವೇರಿ ಗೋಪಾಲಗೌಡರನ್ನು ಸಿಲಿಕಾನ್ ಸಿಟಿ ಜನರಿಗೆ ಪರಿಚಯಿಸುವ ಕೆಲಸ ಮಾಡುತ್ತಿದೆ. ಹಾಗೆಯೇ ಚುನಾವಣೆಗಳು ಹಾದಿ ತಪ್ಪಿರುವ ಸಮಯದಲ್ಲಿ ಕೊಂಚ ನೆಮ್ಮದಿ ಮೂಡಿಸುವ ಇಂತಹ ಸಂಕೇತಗಳು ಅಲ್ಲಲ್ಲಿ ಕಾಣಸಿಗುತ್ತಿವೆ.
ಹಣ ಬಳ, ತೋಳ್ಬಲ, ಜಾತಿ ಬಲದ ರಾಜಕಾರಣ ನೋಡಿ ಬೇಸತ್ತಿರುವ; ದೇವರು-ಧರ್ಮದ ಹೆಸರಿನಲ್ಲಿ ಅಧಿಕಾರಕ್ಕೇರಿ ದೇಶವನ್ನು ಹಿಂದಕ್ಕೆಳೆಯುತ್ತಿರುವ; ಕುಟಿಲ ತಂತ್ರಗಳಿಂದ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಅಪಹಾಸ್ಯ ಮಾಡುತ್ತಿರುವ ಇಂದಿನ ವೃತ್ತಿರಾಜಕಾರಣಿಗಳನ್ನು ಬದಲಾಯಿಸಲು ಇದು ಸಕಾಲ. ಮಾದರಿ ಜಯನಗರಕ್ಕಾಗಿ ಮಾನವಂತರ ಜಯಕ್ಕಾಗಿ, ಸದನದ ಘನತೆಗಾಗಿ, ಪ್ರಜಾಪ್ರಭುತ್ವದ ಉಳಿವಿಗಾಗಿ ರವಿಕೃಷ್ಣಾ ರೆಡ್ಡಿಯವರ ಆಯ್ಕೆ ಅಗತ್ಯ ಮತ್ತು ಅನಿವಾರ್ಯ. ಇದೇ ಸಂದರ್ಭದಲ್ಲಿ, ‘‘ನಮ್ಮ ಕ್ಷೇತ್ರಗಳಲ್ಲಿ ಒಂದು ಸೃಜನಶೀಲ ಆಯ್ಕೆಯೇ ಇಲ್ಲವಾಗಿದೆ. ಆದರೆ ರವಿಕೃಷ್ಣಾ ರೆಡ್ಡಿ ತರದವರು ಅಖಾಡಕ್ಕೆ ಇಳಿಯುವ ಮೂಲಕ ಇಲ್ಲಿನ ಜನ ತಮ್ಮ ಅಮೂಲ್ಯವಾದ ಮತವನ್ನು ಸಕಾರಣಕ್ಕೆ ಬಳಸುವ ಅವಕಾಶ ಒದಗಿ ಬಂದಿದೆ, ಬೆಂಗಳೂರಿನ ಜಯನಗರ ವಿಧಾನಸಭಾ ಕ್ಷೇತ್ರದ ಮತದಾರರು ನಿಜಕ್ಕೂ ಅದೃಷ್ಟವಂತರು’’ ಎಂದು ಹಿರಿಯ ಚಿಂತಕ ದೇವನೂರ ಮಹಾದೇವ ಹೇಳಿರುವುದು ಸಕಾಲಿಕವಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)