ಬಯಲಾಗುವ ಪರಿ-ಸಾಹಿತ್ಯ ವಿಮರ್ಶೆ
ಈ ಹೊತ್ತಿನ ಹೊತ್ತಿಗೆ
ಸದ್ಯದ ದಿನಗಳಲ್ಲಿ ವಿಮರ್ಶಾ ಲೋಕ ಮಂಕಾಗುತ್ತಿದೆ. ಕೀರ್ತಿನಾಥ ಕುರ್ತಕೋಟಿ, ಟಿ.ಪಿ. ಅಶೋಕ, ಅಮೂರ ಹೀಗೆ ವಿಮರ್ಶಾ ಕ್ಷೇತ್ರದ ವಿದ್ವಾಂಸರಿಂದಾಗಿ ಕನ್ನಡ ಸಾಹಿತ್ಯ ಲೋಕ ಇನ್ನಷ್ಟು ಸಮೃದ್ಧವಾಗಿತ್ತು. ಸಾಹಿತ್ಯವನ್ನು ಗಂಭೀರವಾಗಿ ತೆಗೆದುಕೊಂಡು ಬರೆಯುವುದಕ್ಕೆ ಈ ವಿಮರ್ಶಕರೂ ಕಾರಣವಾಗಿದ್ದರು. ಈ ವಿಮರ್ಶಕರ ಮಾತುಗಳಿಗೆ ಅಕೃತತೆಯಿತ್ತು. ಅಪಾರ ಓದು, ತಿಳುವಳಿಕೆಗಳಿಲ್ಲದೆ ವಿಮರ್ಶಾ ಲೋಕಕ್ಕೆ ಪ್ರವೇಶಿಸುವುದು ಕಷ್ಟ. ಆ ಕಾರಣದಿಂದಲೇ ಕತೆ ಕಾವ್ಯ ಬರೆಯುವವರ ಸಂಖ್ಯೆ ಹೆಚ್ಚಾಗಿದೆ. ಆದರೆ ವಿಮರ್ಶಾ ಕ್ಷೇತ್ರ ತೆಳುವಾಗಿದೆ. ವಿಮರ್ಶಕರ ಕುರಿತಂತೆಯೇ ಸಾಕಷ್ಟು ವಿಮರ್ಶೆಗಳಿವೆಯಾದರೂ, ಅವರಿಲ್ಲದ ಸಾಹಿತ್ಯ ಕ್ಷೇತ್ರ ಹೊಣೆಗಾರಿಕೆ ಇರುವ ಹಿರಿಯರಿಲ್ಲದ ಮನೆಯ ಹಾಗೆ. ಈ ನಿಟ್ಟಿನಲ್ಲಿ ವಿಮರ್ಶಾ ಕೃತಿಗಳೂ ಅಪರೂಪವಾಗುತ್ತಿವೆೆ. ಇಂತಹ ಸಂದರ್ಭದಲ್ಲಿ ಡಾ. ಸುರೇಶ್ ನಾಗಲಮಡಿಕೆ ಅವರು ತಮ್ಮ ವಿಮರ್ಶಾ ಕೃತಿಯನ್ನು ಹೊರತಂದಿದ್ದಾರೆ. ಹಳೆಗನ್ನಡ ಕಾವ್ಯ, ಹೊಸ ತಲೆಮಾರಿನ ಕಾವ್ಯ ಮತ್ತು ಜನಪದ ಮಹಾಕಾವ್ಯಗಳ ಬಗ್ಗೆ ಅಧ್ಯಯನದಲ್ಲಿ ತೊಡಗಿಕೊಂಡಿರುವ ಸುರೇಶ್ ಅವರ ಐದನೇ ಕೃತಿ ‘ಬಯಲಾಗುವ ಪರಿ’. ಅವೈದಿಕ ಸಾಹಿತ್ಯಗಳ ಕುರಿತಂತೆ ಅವರು ಹೊಂದಿರುವ ನೋಟ ಕ್ರಮಗಳನ್ನು ಇಲ್ಲಿರುವ ಹೆಚ್ಚಿನ ಬರಹಗಳಲ್ಲಿ ಕಾಣಬಹುದು. ಕನಕದಾಸರು, ಲಿಂಗಧ್ಯಾನಿ ಸಿದ್ದರಾಮೇಶ್ವರ, ಕನಕ-ಶರೀರ ಮೂಲಕ ಭಕ್ತಿ ಆಧ್ಯಾತ್ಮ, ಸಂಗಂ ಕಾವ್ಯ, ವಚನಗಳ ವಿಶ್ಲೇಷಣೆ....ಹೀಗೆ ವರ್ತಮಾನದ ವೈದಿಕ ರಾಜಕೀಯಗಳ ಸಿಕ್ಕುಗಳನ್ನು ಬಿಡಿಸುವುದಕ್ಕಾಗಿ ಅವರು ಅವೈದಿಕ ಚಿಂತನೆಗಳನ್ನು ಪರಿಣಾಮಕಾರಿಯಾಗಿ ಬಳಸುತ್ತಾರೆ. ಇಲ್ಲಿ ಒಟ್ಟು ಅಂತಹ ಒಂಬತ್ತು ವಿಮರ್ಶಾ ಬರಹಗಳಿವೆ. ‘ಕಾಡಿನ ಹುಡುಗ ಸುಬ್ರಹ್ಮಣ್ಯನ ಸುತ್ತ’ ಲೇಖನ ಸುಬ್ರಹ್ಮಣ್ಯ ಕ್ಷೇತ್ರದ ಹಿನ್ನೆಲೆಯನ್ನಿಟ್ಟುಕೊಂಡು ನಡೆಸಿದ ಸಂಸ್ಕೃತಿ ಚಿಂತನೆಯಾಗಿದೆ. ದ್ರಾವಿಡ ಸಂಸ್ಕೃತಿಯನ್ನು ಇಲ್ಲಿ ವೈದಿಕ ಸಂಸ್ಕೃತಿ ನುಂಗಿ ಹಾಕಿ ಹೇಗೆ ಮಲೆಕುಡಿಯರಂತಹ ಸಮುದಾಯವನ್ನು ಶೋಷಣೆಗಿಳಿಸಿದೆ ಎನ್ನುವುದನ್ನು ವಿವರಿಸುತ್ತಾರೆ. ಕೇಶವ ಮಳಗಿಯವರು ಈ ಕೃತಿಗೆ ಮುನ್ನುಡಿ ಬರೆಯುತ್ತಾ ‘‘ಇದೊಂದು ಕೇವಲ ಸಾಹಿತ್ಯ ವಿಮರ್ಶಾ ಕೃತಿಯಲ್ಲ. ಬದಲಿಗೆ ಭಾರತೀಯ ಸಮಾಜ, ಸಾಹಿತ್ಯ ಮತ್ತು ದರ್ಶನಗಳಲ್ಲಿ ಅವರು ಕಾಣಲು ಪ್ರಯತ್ನಿಸುತ್ತಿರುವ ಸಂಗತಿಗಳ ವಿಶಾಲ ನೆಲೆಯ ಪ್ರಸ್ತಾವನೆಗಳಾಗಿವೆ’’ ಎಂದು ಅಭಿಪ್ರಾಯ ಪಡುತ್ತಾರೆ.
ನಿವೇದಿತಾ ಪ್ರಕಾಶನ ಬೆಂಗಳೂರು ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 148. ಮುಖಬೆಲೆ 150 ರೂಪಾಯಿ. ಆಸಕ್ತರು 94487 33323 ದೂರವಾಣಿಯನ್ನು ಸಂಪರ್ಕಿಸಬಹುದು.