ಶಿಕಾರಿಪುರ ಕ್ಷೇತ್ರ: ಯಡಿಯೂರಪ್ಪ ವಿರುದ್ಧ ಪ್ರಬಲ ಅಭ್ಯರ್ಥಿಯ ಹುಡುಕಾಟದಲ್ಲಿ ರಾಹುಲ್ ಗಾಂಧಿ, ಸಿದ್ದರಾಮಯ್ಯ
ಕಾಂಗ್ರೆಸ್ ಅಭ್ಯರ್ಥಿ ಪಟ್ಟಿಯಲ್ಲಿ ಕೇಳಿಬರುತ್ತಿದೆ ಈ ಸಚಿವರ ಹೆಸರು
ಶಿವಮೊಗ್ಗ, ಏ. 9: ಬಿಜೆಪಿ ರಾಜ್ಯಾಧ್ಯಕ್ಷ, ಆ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಘೋಷಿತವಾಗಿರುವ ಬಿ.ಎಸ್.ಯಡಿಯೂರಪ್ಪ ವಿರುದ್ಧ ಕಾಂಗ್ರೆಸ್ ನಿಂದ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಲು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ಚಿಂತನೆ ನಡೆಸುತ್ತಿದ್ದಾರೆ. ಇದಕ್ಕಾಗಿ ಪ್ರಭಾವಿ ಅಭ್ಯರ್ಥಿಯೋರ್ವರಿಗಾಗಿ ಶೋಧ ನಡೆಸುತ್ತಿದ್ದಾರೆಂಬ ಮಾಹಿತಿ ಕೇಳಿಬಂದಿದ್ದು, ಇದು ರಾಜ್ಯ ರಾಜಕೀಯ ವಲಯದಲ್ಲಿ ಬಿಸಿ ಬಿಸಿ ಚರ್ಚೆಗೆಡೆ ಮಾಡಿಕೊಟ್ಟಿದೆ.
ಇತ್ತೀಚೆಗೆ ಬಿ.ಎಸ್.ಯಡಿಯೂರಪ್ಪರವರು, ಶಿಕಾರಿಪುರದಿಂದ ಸಿದ್ದರಾಮಯ್ಯ ಕಣಕ್ಕಿಳಿಯಲಿ ಎಂದು ನೇರ ಸವಾಲು ಹಾಕಿದ್ದರು. ಮತ್ತೊಂದೆಡೆ ಸಿದ್ದರಾಮಯ್ಯ ಸ್ಪರ್ಧಿಸುತ್ತಿರುವ ಚಾಮುಂಡೇಶ್ವರಿ ಮತ್ತು ಅವರ ಪುತ್ರ ಯತೀಂದ್ರ ಸ್ಪರ್ಧಿಸುತ್ತಿರುವ ವರುಣಾ ಕ್ಷೇತ್ರದತ್ತ ಗಂಭೀರ ಚಿತ್ತ ನೆಟ್ಟಿದ್ದಾರೆ. ಇಬ್ಬರನ್ನು ಸೋಲಿಸುವ ಗೇಮ್ ಪ್ಲ್ಯಾನ್ ನಡೆಸುತ್ತಿದ್ದಾರೆ. ಈ ಕಾರಣದಿಂದಲೇ ವರುಣಾದಿಂದ ಪುತ್ರ ವಿಜಯೇಂದ್ರರನ್ನು ಕಣಕ್ಕಿಳಿಸುವ ಗಂಭೀರ ಚಿಂತನೆ ನಡೆಸಿದ್ದಾರೆ.
ಮತ್ತೊಂದೆಡೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋಲಿಸಲು ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಿ ಎಂದು ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೂಡ ಸಂದೇಶ ರವಾನಿಸಿದ್ದಾರೆ. ಈ ಕಾರಣದಿಂದ ಕ್ಷೇತ್ರದಲ್ಲಿ ಪ್ರಬಲವಾಗಿರುವ ಜೆಡಿಎಸ್ ಗೆ ಬಿಜೆಪಿಯಿಂದ ಪರೋಕ್ಷ ಬೆಂಬಲ ವ್ಯಕ್ತಪಡಿಸುವ ಲಕ್ಷಣಗಳು ಕೂಡ ಗೋಚರವಾಗುತ್ತಿವೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯರವರು ಚಾಮುಂಡೇಶ್ವರಿ ಕ್ಷೇತ್ರದ ಜೊತೆಗೆ ಮತ್ತೊಂದು ಕ್ಷೇತ್ರದಿಂದ ಸ್ಪರ್ಧಿಸವ ಚಿಂತನೆ ನಡೆಸುತ್ತಿದ್ದಾರೆಂಬ ಮಾತುಗಳು ಕೇಳಿಬರಲಾರಂಭಿಸಿದೆ.
ತಿರುಗೇಟು: ಬಿಜೆಪಿಯ ಈ ತಂತ್ರಕ್ಕೆ ಸಿಎಂ ಸಿದ್ದರಾಮಯ್ಯ ಕೂಡ ಪ್ರತಿತಂತ್ರ ರೂಪಿಸುತ್ತಿದ್ದಾರೆ. ಏಟಿಗೆ ಏದಿರೇಟು ನೀಡುವ ರೂಪುರೇಷೆ ಸಿದ್ದಪಡಿಸುತ್ತಿದ್ಧಾರೆ. ಈ ಕಾರಣದಿಂದ ಬಿ.ಎಸ್.ಯಡಿಯೂರಪ್ಪ ಕಣಕ್ಕಿಳಿಯುತ್ತಿರುವ ಶಿಕಾರಿಪುರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ನಿಂದ ಪ್ರಬಲ ಅಭ್ಯರ್ಥಿಯೋರ್ವರನ್ನು ಅಖಾಡಕ್ಕಿಳಿಸುವ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.
ಸಿದ್ದರಾಮಯ್ಯರ ಈ ಚಿಂತನೆಗೆ ರಾಹುಲ್ ಗಾಂಧಿ ಕೂಡ ಸಹಮತ ವ್ಯಕ್ತಪಡಿಸಿದ್ದು, ಗ್ರೀನ್ ಸಿಗ್ನಲ್ ನೀಡಿದ್ದಾರೆ. ಅವರು ಕೂಡ ಶಿಕಾರಿಪುರ ಕ್ಷೇತ್ರದ ರಾಜಕೀಯ ಚಿತ್ರಣ ಹಾಗೂ ಖಾಸಗಿ ಏಜೆನ್ಸಿಗಳ ಮೂಲಕ ಸಂಗ್ರಹಿಸಿರುವ ಸಮೀಕ್ಷಾ ವರದಿಗಳ ಖುದ್ದು ಅವಲೋಕನ ನಡೆಸಿ, ರಾಜ್ಯ ನಾಯಕರ ಜೊತೆ ಸಮಾಲೋಚನೆ ನಡೆಸಿದ್ದಾರೆ. ಸೂಕ್ತ ಅಭ್ಯರ್ಥಿಯ ಶೋಧ ನಡೆಸುವಂತೆ ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ಸಾಕಷ್ಟು ಕುತೂಹಲ ಕೆರಳುವಂತೆ ಮಾಡಿದೆ.
ಶೋಧ: ಯಡಿಯೂರಪ್ಪ ವಿರುದ್ದ ಯಾರನ್ನು ಕಣಕ್ಕಿಳಿಸಿದರೆ ಪ್ರಬಲ ಪೈಪೋಟಿವೊಡ್ಡಬಹುದು ಎಂಬ ಚರ್ಚೆಗಳು ನಡೆಯಲಾರಂಭಿಸಿವೆ. ಈಗಾಗಲೇ ಹಲವು ಅಭ್ಯರ್ಥಿಗಳ ಹೆಸರು ಟಿಕೆಟ್ ರೇಸ್ ನಲ್ಲಿ ಕೇಳಿ ಬಂದಿವೆಯಾದರೂ, ಇವರು ಪ್ರಬಲ ಪೈಪೋಟಿವೊಡ್ಡುವ ವಿಷಯದಲ್ಲಿ ವರಿಷ್ಠರಿಗೆ ವಿಶ್ವಾಸ ಮೂಡುತ್ತಿಲ್ಲವ ಎಂದು ಹೇಳಲಾಗುತ್ತಿದೆ.
ಶಿಕಾರಿಪುರ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯದ ಮತಗಳ ಜೊತೆಗೆ ಅಲ್ಪಸಂಖ್ಯಾತ, ಹಿಂದುಳಿದ, ದಲಿತ (ಅಹಿಂದ) ಮತಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಈ ಹಿಂದಿನ ಉಪ ಚುನಾವಣೆಯಲ್ಲಿ ಅಹಿಂದ ಮತಗಳು ಕಾಂಗ್ರೆಸ್ ಗೆ ಕೈ ಹಿಡಿದಿರುವ ಮಾಹಿತಿ ಅರಿತಿರುವ ಆ ಪಕ್ಷದ ವರಿಷ್ಠರು, ಲಿಂಗಾಯತ ಸಮುದಾಯಕ್ಕೆ ಸೇರಿದ ಪ್ರಭಾವಿ ಅಭ್ಯರ್ಥಿಯೋರ್ವರನ್ನು ಯಡಿಯೂರಪ್ಪ ಎದುರು ಕಣಕ್ಕಿಳಿಸುವ ತಂತ್ರಗಾರಿಕೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಈ ಕಾರಣದಿಂದಲೇ ಇತ್ತೀಚೆಗೆ ಜಲ ಸಂಪನ್ಮೂಲ ಸಚಿವ, ಲಿಂಗಾಯತ ಸಮುದಾಯಕ್ಕೆ ಸೇರಿದ ಎಂ.ಬಿ.ಪಾಟೀಲ್ ರವರ ಹೆಸರು ಕೂಡ ಚರ್ಚೆಯ ಮುನ್ನೆಲೆಗೆ ಬಂದಿದೆ. ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮ ಕಲ್ಪಿಸುವ ವಿಚಾರದಲ್ಲಿ ಮುಂಚೂಣಿಯಲ್ಲಿ ನಿಂತುಕೊಂಡು ಹೋರಾಟ ನಡೆಸಿದ ಎಂ.ಬಿ.ಪಾಟೀಲ್ ರನ್ನು ಶಿಕಾರಿಪುರದಿಂದ ಕಣಕ್ಕಿಳಿಸಿದರೆ ಹೇಗೆ ಎಂಬ ಚಿಂತನೆ ಕಾಂಗ್ರೆಸ್ ಪಾಳಯದಲ್ಲಿ ನಡೆಯುತ್ತಿರುವ ಮಾಹಿತಿಗಳಿವೆ. ಆದರೆ ಎಂ.ಬಿ.ಪಾಟೀಲರು ಶಿಕಾರಿಪುರದಿಂದ ಕಣಕ್ಕಿಳಿಯಲು ಹಿಂದೇಟು ಹಾಕುತ್ತಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ.
ಒಟ್ಠಾರೆ ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿ ಅಖಾಡಕ್ಕಿಳಿಸುವ ಗಂಭೀರ ಚಿಂತನೆಯನ್ನು ರಾಹುಲ್ ಗಾಂಧಿ ಹಾಗೂ ಸಿದ್ದರಾಮಯ್ಯ ನಡೆಸುತ್ತಿರುವ ಮಾತುಗಳು ಸ್ಥಳೀಯ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಈ ಕಾರಣದಿಂದ ಕಾಂಗ್ರೆಸ್ ಅಭ್ಯರ್ಥಿ ಯಾರಾಗಲಿದ್ದಾರೆಂಬ ಕುತೂಹಲ ಮೂಡಿಸಿದ್ದು, ಇನ್ನಷ್ಟೆ ಅಭ್ಯರ್ಥಿ ಯಾರೆಂಬುವುದು ಸ್ಪಷ್ಟವಾಗಬೇಕಾಗಿದೆ.
ಪುತ್ರ ಬಿ.ವೈ.ರಾಘವೇಂದ್ರಗೆ ಜವಾಬ್ದಾರಿ
ಶಿಕಾರಿಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ರಾಜಕೀಯ ತಂತ್ರಗಾರಿಕೆ ನಡೆಸುವ ಮಾಹಿತಿ ಅರಿತಿರುವ ಬಿ.ಎಸ್.ಯಡಿಯೂರಪ್ಪರವರು, ಸ್ವಕ್ಷೇತ್ರದಲ್ಲಿ ಸಾಕಷ್ಟು ಎಚ್ಚರಿಕೆಯ ಹೆಜ್ಜೆಯಿಡುತ್ತಿದ್ದಾರೆ. ರಾಜ್ಯಾದ್ಯಂತ ಸುತ್ತಾಡಬೇಕಾಗಿರುವ ಕಾರಣದಿಂದ ಶಿಕಾರಿಪುರ ಕ್ಷೇತ್ರದ ಸಂಪೂರ್ಣ ಜವಾಬ್ದಾರಿಯನ್ನು ಪುತ್ರ ಬಿ.ವೈ.ರಾಘವೇಂದ್ರಗೆ ಒಪ್ಪಿಸಿದ್ದಾರೆ. ಬಿ.ವೈ.ರಾಘವೇಂದ್ರ ಕೂಡ ಕಳೆದ ಹಲವು ತಿಂಗಳುಗಳಿಂದ ಕ್ಷೇತ್ರದಾದ್ಯಂತ ಬಿರುಸಿನ ಓಡಾಟ ನಡೆಸುತ್ತಿದ್ದಾರೆ. ತಂದೆಯ ಪರವಾಗಿ ಮತಯಾಚನೆ ಮಾಡುತ್ತಿದ್ದಾರೆ. ತಂದೆಯ ಪರವಾಗಿ ಕೆಲಸ ಮಾಡಬೇಕೆಂಬ ಉದ್ದೇಶದಿಂದ, ವಿಧಾನಸಭೆ ಚುನಾವಣಾ ಕಣದಿಂದ ದೂರ ಉಳಿಯುವ ನಿರ್ಧಾರವನ್ನು ಬಿ.ವೈ.ರಾಘವೇಂದ್ರ ಕೈಗೊಳ್ಳಲು ಮುಖ್ಯ ಕಾರಣವೆಂದು ಹೇಳಲಾಗುತ್ತಿದೆ.
ಕೇಳಿಬಂದಿತ್ತು ಮಂಜುನಾಥ ಭಂಡಾರಿ ಹೆಸರು
ಶಿಕಾರಿಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್, ಶಿಕಾರಿಪುರದ ಮುಖಂಡರಾದ ನಗರದ ಮಹದೇವಪ್ಪ, ಗೋಣಿ ಮಾಲತೇಶ್, ಜಿ.ಪಂ. ಸದಸ್ಯ ನರಸಿಂಗನಾಯ್ಕ್ ರವರು ಪ್ರಯತ್ನ ನಡೆಸುತ್ತಿದ್ದರು. ಈ ಮುಖಂಡರು ಟಿಕೆಟ್ ಕೋರಿ ಅರ್ಜಿ ಕೂಡ ಸಲ್ಲಿಸಿದ್ದಾರೆ. ಈ ನಡುವೆ ಕೆಪಿಸಿಸಿ ಉಪಾಧ್ಯಕ್ಷ ಮಂಜುನಾಥ ಭಂಡಾರಿಯವರ ಹೆಸರು ಕೂಡ ದಿಢೀರ್ ಆಗಿ ಕೇಳಿಬಂದಿತ್ತು. ಸ್ವತಃ ಸಿಎಂ ಸಿದ್ದರಾಮಯ್ಯ ಮಂಜುನಾಥ ಭಂಡಾರಿಯವರನ್ನು ಕಣಕ್ಕಿಳಿಸುವ ಕುರಿತಂತೆ ಚಿಂತನೆ ನಡೆಸಿದ್ದರು. ಅವರ ಜೊತೆ ಸಮಾಲೋಚನೆ ಕೂಡ ನಡೆಸಿದ್ದರು ಎಂಬ ಮಾಹಿತಿ ಕೇಳಿಬಂದಿತ್ತು. ಆದರೆ ಭಂಡಾರಿಯವರು ವಿಧಾನಸಭೆ ಚುನಾವಣಾ ಕಣಕ್ಕಿಳಿಯಲು ನಿರಾಸಕ್ತಿ ವ್ಯಕ್ತಪಡಿಸಿದ್ದು, ಲೋಕಸಭೆ ಚುನಾವಣೆಗೆ ಅಭ್ಯರ್ಥಿಯಾಗಲು ಆಸಕ್ತಿ ವ್ಯಕ್ತಪಡಿಸಿದ್ದರು ಎಂಬ ಮಾತುಗಳು ಕೇಳಿಬಂದಿದ್ದವು.