ಹೆಚ್ಚುತ್ತಿರುವ ಜಾಗತಿಕ ಆರ್ಥಿಕ ಬಿಕ್ಕಟ್ಟುಗಳು ಕುಸಿಯುತ್ತಿರುವ ಪ್ರಜಾತಾಂತ್ರಿಕ ಸಂಸ್ಥೆಗಳು
ನಾವು ಜಗತ್ತಿನ ರಾಷ್ಟ್ರಗಳ ಇಂದಿನ ರಾಜಕೀಯ ಪರಿಸ್ಥಿತಿಗಳನ್ನು ನೋಡುವುದಾದರೆ ಬಹುತೇಕ ರಾಷ್ಟ್ರಗಳಲ್ಲಿ ನಿರಂಕುಶಾಧಿಕಾರಿ ಆಡಳಿತಗಳೇ ಮೇಲುಗೈಯಲ್ಲಿವೆ ಎನ್ನುವುದನ್ನು ಗಮನಿಸಬಹುದು. ಜಗತ್ತಿಗೆ ಪ್ರಜಾ ಪ್ರಭುತ್ವದ ಪಾಠ ಹೇಳುತ್ತಾ, ಅದರ ರಕ್ಷಕ ತಾನೆಂದು ಬಿಂಬಿಸುತ್ತಾ ಇದ್ದ ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ನಿರಂಕುಶ ಅಧಿಕಾರ ಚಲಾವಣೆ ಆರಂಭಿಸಿಯಾಗಿದೆ. ಅಧಿಕಾರದ ಆಯಕಟ್ಟಿನ ಕೇಂದ್ರಗಳಲ್ಲಿ ತನ್ನ ಕುಟುಂಬದ ಸದಸ್ಯರನ್ನು ಹಾಗೂ ತನ್ನ ಕಾರ್ಪೊರೇಟ್ ಆಪ್ತರನ್ನು, ತನ್ನ ಪರವಾಗಿ ಲಾಬಿ ಮಾಡುವವರನ್ನು ಕುಳ್ಳಿರಿಸಿ ಅಮೆರಿಕ ಇದುವರೆಗೂ ಪಾಲಿಸಿಕೊಂಡು ಬಂದಿದ್ದ ನೀತಿ ನಿಯಮಾವಳಿಗಳನ್ನು ಬದಲಿಸುವುದು ಇಲ್ಲವೇ ಗಾಳಿಗೆ ತೂರುವ ಕೆಲಸಗಳನ್ನು ಮಾಡುತ್ತಿದ್ದಾರೆ.
ಇಂದಿನ ಜಗತ್ತು ಹತ್ತು ಹಲವು ಸ್ಥಿತ್ಯಂತರಗಳನ್ನು ಕಾಣುತ್ತಿದೆ. ಕೈಗಾರಿಕಾ ಕ್ರಾಂತಿಯ ಬಳುವಳಿಗಳಲ್ಲಿ ಒಂದಾದ ಬಂಡವಾಳಶಾಹಿ ಆಡಳಿತ ವ್ಯವಸ್ಥೆಯ ಸಾಂಸ್ಥೀಕರಣವೇ ಬಂಡವಾಳಶಾಹಿ ಪ್ರಜಾಪ್ರಭುತ್ವ ವ್ಯವಸ್ಥೆ. ಜಗತ್ತಿನ ಹಲವು ದೇಶಗಳಲ್ಲಿ ನಂತರದ ಕಾಲಘಟ್ಟಗಳಲ್ಲಿ ಈ ವ್ಯವಸ್ಥೆ ಕ್ರಾಂತಿಗಳ ಮೂಲಕ ಸ್ಥಾಪನೆಯಾದವು. ಅದರಲ್ಲೂ ಮುಂದುವರಿದ ದೇಶಗಳೆನ್ನಿಸಿಕೊಂಡಿದ್ದ ಯೂರೋಪ್, ಅಮೆರಿಕದ ದೇಶಗಳಲ್ಲಿ ಈ ವ್ಯವಸ್ಥೆಯನ್ನು ಅತ್ಯುನ್ನತ ಮಾದರಿಯನ್ನಾಗಿ ತೋರಿಸುತ್ತಾ ಬೆಳೆಸಲಾಯಿತು. ಇದಕ್ಕೆ ಪರ್ಯಾಯವೇ ಇಲ್ಲ ಎಂದು ಟೀನಾ ಸಿದ್ದಾಂತವೆಂದು ಕರೆಯಲ್ಪಡುವ ‘ದೇರ್ ಈಸ್ ನೋ ಆಲ್ಟರ್ನೇಟಿವ್’ ಹೆಸರಿನಲ್ಲಿ ಪ್ರಚಾರ ಮಾಡಲಾಗಿತ್ತು.
ನಂತರದಲ್ಲಿ ಜಾಗತಿಕವಾಗಿ ಲಕ್ಷಾಂತರ ವಿದ್ಯಮಾನಗಳು ಕಳೆದ ಶತಮಾನಗಳಲ್ಲಿ ನಡೆಯುತ್ತಾ ಬಂದಿವೆ. 1930ರ ಕಾಲಘಟ್ಟದಲ್ಲಿ ಮೊದಲ ಜಾಗತಿಕ ಆರ್ಥಿಕ ಬಿಕ್ಕಟ್ಟು ಕಾಣಿಸಿತು. ನಂತರ ಸಾಮಾನ್ಯವಾಗಿ ಹತ್ತು, ಇಪ್ಪತ್ತು ವರ್ಷಗಳಿಗೆ ಒಮ್ಮೆ ಜಾಗತಿಕ ಆರ್ಥಿಕ ಬಿಕ್ಕಟ್ಟುಗಳು ಕಾಣಿಸಿಕೊಳ್ಳುತ್ತಲೇ ಬಂದಿವೆ. 2008ರಲ್ಲಿ ಶುರುವಾದ ಜಾಗತಿಕ ಆರ್ಥಿಕ ಬಿಕ್ಕಟ್ಟು ಈಗ ಮತ್ತೂ ತೀವ್ರವಾಗುತ್ತಾ ಹೋಗುತ್ತಿದೆ. ಚೇತರಿಕೆ ಕಾಣುತ್ತಿಲ್ಲ.
ಪ್ರತೀ ಬಿಕ್ಕಟ್ಟುಗಳ ಸಂದರ್ಭಗಳಲ್ಲೂ ಬಂಡವಾಳಶಾಹಿ ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಮೊದಲಿದ್ದ ಪ್ರಜಾತಾಂತ್ರಿಕತೆಗಳು ಕಡಿಮೆಯಾಗುತ್ತಾ ಬಂದಿರುವುದೇ ಇತಿಹಾಸವಾಗಿದೆ. ಆದರೆ ಸಾಪೇಕ್ಷವಾಗಿ ತಮ್ಮ ತಮ್ಮ ರಾಷ್ಟ್ರಗಳಲ್ಲಿ ಅವರ ಪ್ರತಿಪಾದನೆಯ ಪ್ರಜಾತಾಂತ್ರಿಕ ವಾತಾವರಣ ಇರುವಂತೆ ನೋಡಿಕೊಂಡು ಆಯಾ ರಾಷ್ಟ್ರಗಳ ಜನರನ್ನು ನಂಬಿಸಲು ಪ್ರಯತ್ನಿಸುತ್ತಾ ಬಂದಿದ್ದವು. ಆದರೆ 2000ದವರೆಗೆ ಅವರು ಬಿಂಬಿಸುತ್ತಾ ಬಂದಿದ್ದ ಪ್ರಜಾಪ್ರಭುತ್ವದ ಮೇಲ್ಮಟ್ಟದ ಪ್ರತಿಪಾದನೆಗಳನ್ನು ಕೈಬಿಡುವ ಮಟ್ಟ ತಲುಪಿರಲಿಲ್ಲ. ಜಾಗತಿಕ ಬಂಡವಾಳಶಾಹಿ ದೇಶಗಳು ಪ್ರಜಾಪ್ರಭುತ್ವ ಸ್ಥಾಪನೆಗಾಗಿ ಎಂದು ಹಲವು ದೇಶಗಳ ಮೇಲೆ ಯುದ್ಧಗಳನ್ನು ನಡೆಸಿದ ಇತಿಹಾಸವೇ ಇದೆ. ಆದರೆ ಆ ಯುದ್ಧಗಳ ಹಿಂದಿನ ಕಾರಣಗಳು ತಮ್ಮ ತಮ್ಮ ಕುಸಿಯುತ್ತಿರುವ ಆರ್ಥಿಕತೆಗಳನ್ನು ಮೇಲೆತ್ತಿ ನಿಲ್ಲಿಸುವ ಉದ್ದೇಶಗಳಾಗಿದ್ದವು ಎನ್ನುವುದು ಕೂಡ ಈಗ ಬಹಿರಂಗ ರಹಸ್ಯ. ಇದರಲ್ಲೆಲ್ಲಾ ಅಮೆರಿಕ ಸಂಯುಕ್ತ ಸಂಸ್ಥಾನವು ಮುಂಚೂಣಿಯಾಗೇ ಇತ್ತು. ಜಾಗತಿಕ ಬಂಡವಾಳದ ಕೂಟವು ತಮಗೆದುರಾಗಿದ್ದ ಆರ್ಥಿಕ ಸಂಕಷ್ಟಗಳಿಂದ ಬಚಾವಾಗಲು ಬ್ರೆಟ್ಟನ್ ವುಡ್, ಡಂಕೆಲ್, ಗ್ಯಾಟ್, ಡಬ್ಲ್ಯೂಟಿಒ ಮೊದಲಾದ ಒಪ್ಪಂದಗಳನ್ನು ಜಗತ್ತಿನ ದೇಶಗಳ ಮೇಲೆ ಪ್ರತ್ಯಕ್ಷ ಮತ್ತು ಪರೋಕ್ಷ ರೀತಿಗಳಲ್ಲಿ ಹೇರತೊಡಗಿದರು. ಅದರ ಭಾಗವಾಗಿ ಜಾಗತೀಕರಣ, ಜಾಗತಿಕ ಹಳ್ಳಿ, ಮೊದಲಾದ ಪರಿಕಲ್ಪನೆಗಳನ್ನು ಆಕರ್ಷಕಗೊಳಿಸಲಾಗಿತ್ತು. ಈಗ ಜಾಗತೀಕರಣ ಆರಂಭವಾಗಿ ಎರಡೂವರೆ ದಶಕಗಳೇ ಕಳೆದಿವೆ. ಇದರ ಮಧ್ಯೆಯೇ 2008ರಲ್ಲಿ ಜಾಗತಿಕ ಆರ್ಥಿಕ ಬಿಕ್ಕಟ್ಟು ಪ್ರಾರಂಭವಾಗಿದ್ದು ಈಗ ಮತ್ತಷ್ಟು ತೀವ್ರತೆಯನ್ನು ಪಡೆಯುತ್ತಾ ಹೋಗುತ್ತಿದೆ. ಉತ್ಪಾದನೆ ಹಾಗೂ ಅಭಿವೃದ್ಧಿ ಸೂಚ್ಯಂಕಗಳು ಸಾಪೇಕ್ಷವಾಗಿ ಇಳಿಯುತ್ತಲೇ ಹೋಗುತ್ತಿವೆ. ಇದಕ್ಕೆ ಬಹುತೇಕ ಜಗತ್ತಿನ ರಾಷ್ಟ್ರಗಳು ಹೊರತಾಗಿಲ್ಲ. ಅದರಲ್ಲೂ ಮುಂದುವರಿದ ರಾಷ್ಟ್ರಗಳೆಲ್ಲವೂ ಈ ಬಿಕ್ಕಟ್ಟಿನಲ್ಲಿ ಸಿಲುಕಿ ಒದ್ದಾಡುತ್ತಿವೆ. ಹೊರಬರಲಾಗುತ್ತಿಲ್ಲ.
‘ಔಟ್ ಲುಕ್’ ಕಳೆದ ಮಾರ್ಚ್ 27ರ ತನ್ನ ಅಂತರ್ಜಾಲ ಪತ್ರಿಕೆಯಲ್ಲಿ ‘‘ಜಾಗತಿಕವಾಗಿ ಪ್ರಜಾ ಪ್ರಭುತ್ವ ಕುಸಿತಕ್ಕೊಳಗಾಗುತ್ತಿರುವಾಗ ಭಾರತದ ಪ್ರಜಾಪ್ರಭುತ್ವವನ್ನು ರಕ್ಷಿಸಿಕೊಳ್ಳಲು ಸಾಧ್ಯವೇ’’ ಎಂಬ ಪ್ರಶ್ನೆಯನ್ನು ಎತ್ತಿ ಒಂದು ಲೇಖನವನ್ನು ಪ್ರಕಟಿಸಿತು. ಅಮೆರಿಕದ ಲಾಭದ ಉದ್ದೇಶ ರಹಿತವಾದ ಸಂಸ್ಥೆ ಫ್ರೀಡಂ ಹೌಸ್ ಬಿಡುಗಡೆ ಮಾಡಿದ ‘ಫ್ರೀಡಂ ಇನ್ ದಿ ವರ್ಲ್ಡ್ 2018’ ಎಂಬ ವರದಿಯನ್ನು ಅದು ಉಲ್ಲೇಖಿಸಿದೆ. ಅದರ ಪ್ರಕಾರ ಜಗ ತ್ತಿನ ನೂರಾ ಹದಿಮೂರು ರಾಷ್ಟ್ರಗಳು ತಮ್ಮ ಹಿಂದಿದ್ದ ಪ್ರಜಾತಾಂತ್ರೀಕರಣ ಪ್ರಕ್ರಿಯೆಗಳಿಂದ ಹಿಮ್ಮುಖವಾಗಿ ಚಲಿಸಲಾರಂಭಿಸಿವೆ. ನಾಗರಿಕ ಹಕ್ಕುಗಳು, ರಾಜಕೀಯ ಹಕ್ಕುಗಳು ಈ ರಾಷ್ಟ್ರಗಳಲ್ಲಿ ದಿನೇ ದಿನೇ ಕುಸಿದು ಹೋಗುತ್ತಾ ಪ್ರಜಾಪ್ರಭುತ್ವವನ್ನು ತೀವ್ರ ಬಿಕ್ಕಟ್ಟಿಗೆ ದೂಡಿದೆ ಎಂದು ವಿವರಿಸಲಾಗಿದೆ. ಇದರಲ್ಲಿ ಮುಂದುವರಿದ ರಾಷ್ಟ್ರಗಳಾದ ಫ್ರಾನ್ಸ್, ಜರ್ಮನಿ, ಯುನೈಟೆಡ್ಕಿಂಗ್ಡಂ, ನೆದರ್ ಲ್ಯಾಂಡ್ಸ್, ಆಸ್ಟ್ರೀಯಗಳು ಕೂಡ ಸೇರಿವೆ. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಟ್ರಂಪ್ ಆಡಳಿತಕ್ಕೆ ಬಂದ ನಂತರ ಅದೇ ರೀತಿಯ ವಿದ್ಯಮಾನಗಳು ಪ್ರಾರಂಭವಾಗಿವೆ ಎಂದು ಅದರಲ್ಲಿ ಹೇಳಲಾಗಿದೆ.
ನಾವು ಜಗತ್ತಿನ ರಾಷ್ಟ್ರಗಳ ಇಂದಿನ ರಾಜಕೀಯ ಪರಿಸ್ಥಿತಿಗಳನ್ನು ನೋಡುವುದಾದರೆ ಬಹುತೇಕ ರಾಷ್ಟ್ರಗಳಲ್ಲಿ ನಿರಂಕುಶಾಧಿಕಾರಿ ಆಡಳಿತಗಳೇ ಮೇಲುಗೈಯಲ್ಲಿವೆ ಎನ್ನುವುದನ್ನು ಗಮನಿಸಬಹುದು. ಜಗತ್ತಿಗೆ ಪ್ರಜಾ ಪ್ರಭುತ್ವದ ಪಾಠ ಹೇಳುತ್ತಾ, ಅದರ ರಕ್ಷಕ ತಾನೆಂದು ಬಿಂಬಿಸುತ್ತಾ ಇದ್ದ ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ನಿರಂಕುಶ ಅಧಿಕಾರ ಚಲಾವಣೆ ಆರಂಭಿಸಿಯಾಗಿದೆ. ಅಧಿಕಾರದ ಆಯಕಟ್ಟಿನ ಕೇಂದ್ರಗಳಲ್ಲಿ ತನ್ನ ಕುಟುಂಬದ ಸದಸ್ಯರನ್ನು ಹಾಗೂ ತನ್ನ ಕಾರ್ಪೊರೇಟ್ ಆಪ್ತರನ್ನು, ತನ್ನ ಪರವಾಗಿ ಲಾಬಿ ಮಾಡುವವರನ್ನು ಕುಳ್ಳಿರಿಸಿ ಅಮೆರಿಕ ಇದುವರೆಗೂ ಪಾಲಿಸಿಕೊಂಡು ಬಂದಿದ್ದ ನೀತಿ ನಿಯಮಾವಳಿಗಳನ್ನು ಬದಲಿಸುವುದು ಇಲ್ಲವೇ ಗಾಳಿಗೆ ತೂರುವ ಕೆಲಸಗಳನ್ನು ಮಾಡುತ್ತಿದ್ದಾರೆ.
‘‘ಅಮೆರಿಕ ಅಮೆರಿಕದ ಜನರಿಗಾಗಿ ಮಾತ್ರ’’ ‘‘ನಾವು ಇನ್ನು ಮುಂದೆ ವಿಶ್ವದ ಪೊಲೀಸ್ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ’’ ‘‘ವಲಸಿಗರಿಗೆ ಅಮೆರಿಕದಲ್ಲಿ ಅವಕಾಶವಿಲ್ಲ’’ ಮುಂತಾದ ಕರೆಗಳನ್ನು ಟ್ರಂಪ್ ನೀಡುತ್ತಾ ಅದಕ್ಕೆ ತಕ್ಕಂತೆ ಅಮೆರಿಕದ ನೀತಿಗಳನ್ನು ಬದಲಿಸಲು ತೊಡಗಿದ್ದಾರೆ. ಅಮೆರಿಕದ ಅಧಿಕಾರದ ಎಲ್ಲಾ ಅಂಗಗಳನ್ನು ತನ್ನ ಮುಷ್ಟಿಯೊಳಗೆ ತೆಗೆದುಕೊಳ್ಳುವ ಎಲ್ಲಾ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಅಮೆರಿಕದ ನ್ಯಾಯಾಂಗದ ಮೇಲೂ ತನ್ನ ಹಿಡಿತ ಹೊಂದುವ ಪ್ರಯತ್ನ ಬಿರುಸು ಮಾಡಿದ್ದಾರೆ. ತನ್ನ ಬಲು ವಿವಾದಿತ ವಲಸೆ ನೀತಿಯ ಜಾರಿಯನ್ನು ವಿಚಾರಣೆ ಮತ್ತು ತೀರ್ಪಿನ ಮೂಲಕ ತಡೆದ ನ್ಯಾಯಾಧೀಶರನ್ನು ಬಹಿರಂಗವಾಗಿ ಟೀಕೆ ಮಾಡಿ ನಿಂದಿಸುವ ಮಟ್ಟಕ್ಕೂ ಟ್ರಂಪ್ಮುಂದುವರಿದಿದ್ದಾರೆ. ಒಂದು ಹಂತದಲ್ಲಿ ತನ್ನ ಆದೇಶಗಳನ್ನು ತಡೆಯುವ ನ್ಯಾಯಾಧೀಶರೇ ನೇರವಾಗಿ ಅಮೆರಿಕದ ಸಮಸ್ಯೆಗಳನ್ನು ಪರಿಹರಿಸಲಿ ಎಂಬಂತೆ ಕೂಡ ಹೇಳಿದ್ದರು. ಟ್ರಂಪ್ ತನ್ನ ನೀತಿಗಳ ವಿರುದ್ಧದ ಟೀಕೆಗಳನ್ನು ಸಹಿಸುತ್ತಿಲ್ಲ. ಮಾತ್ರವಲ್ಲ ತನ್ನ ನೀತಿಗಳನ್ನು ಟೀಕೆ, ವಿಮರ್ಶೆಗಳನ್ನು ಮಾಡುವ ಪತ್ರಕರ್ತರು, ಮಾನವ ಹಕ್ಕು ಹೋರಾಟಗಾರರು, ನಾಗರಿಕ ಹೋರಾಟಗಾರರನ್ನು ಬಂಧನಕ್ಕೊಳಪಡಿಸುತ್ತಿದ್ದಾರೆ. ಅಮೆರಿಕದಲ್ಲಿ ಇಂದಿನ ಸಂದರ್ಭದಲ್ಲಿ ಮೊದಲಿದ್ದಷ್ಟು ನಾಗರಿಕ ಹಕ್ಕುಗಳಿಗಾಗಲೀ, ಮುಕ್ತ ಪ್ರಜಾತಾಂತ್ರಿಕ ವಾತಾವರಣವಾಗಲೀ ಕಾಣಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಅಲ್ಲಿನ ಚುನಾವಣೆ ಕೂಡ ನ್ಯಾಯಸಮ್ಮತ ಹಾಗೂ ಮುಕ್ತವಾಗಿಲ್ಲ ಎನ್ನುವ ಅಭಿಪ್ರಾಯ ಕೂಡ ಬಲವಾಗಿದೆ. ಇದಕ್ಕೆ ಟ್ರಂಪ್ ಚುನಾವಣೆಯನ್ನು ನಿಭಾಯಿಸಿ ಗೆದ್ದ ರೀತಿಯೇ ಪ್ರಧಾನ ಕಾರಣವಾಗಿದೆ.
ಇದರಲ್ಲಿ ರಶ್ಯಾದ ಅಧ್ಯಕ್ಷ ಪುಟಿನ್ರ ನೇರ ಹಸ್ತಕ್ಷೇಪದ ವಿವಾದವನ್ನು ನಾವು ಗಮನಿಸಬಹುದು. ಟ್ರಂಪ್ರನ್ನು ಗೆಲ್ಲಿಸಲು ಅಲ್ಲಿನ ಕಾರ್ಪೊರೇಟ್ ಹಿತಾಸಕ್ತಿಗಳು ಒಂದಾಗಿ ಸಂಪನ್ಮೂಲ ಒದಗಿಸಿ ಕೆಲಸ ಮಾಡಿದ್ದು ಇಂದು ಗುಟ್ಟಾಗಿ ಉಳಿದಿಲ್ಲ. ಸ್ವತಃ ಟ್ರಂಪ್ ಕೂಡ ಭಾರೀ ಕಾರ್ಪೊರೇಟ್ ಕುಳವೇ ಆಗಿರುವುದು ಕೂಡ ಗಮನಾರ್ಹ. ಟ್ರಂಪ್ ಆಡಳಿತದಲ್ಲಿ ಪ್ರಜಾತಾಂತ್ರಿಕ ಪಾರದರ್ಶಕತೆ ಕಾಣೆಯಾಗಿದೆ, ಪ್ರಜಾತಾಂತ್ರಿಕ ಅಂಗಗಳನ್ನು ಬದಿಗೆ ಸರಿಸಿ ತನ್ನ ನಿರ್ಣಯಗಳನ್ನು ಜಾರಿ ಮಾಡುತ್ತಿದ್ದಾರೆ ಎಂಬ ಕೂಗು ಅಮೆರಿಕಾದ್ಯಂತ ಬಲವಾಗಿ ಕೇಳಿಬರತೊಡಗಿದೆ. ಜೊತೆಗೆ ಕ್ಲು. ಕ್ಲಕ್ಸ್. ಕ್ಲಾನ್ನಂತಹ ಜನಾಂಗೀಯ ದ್ವೇಷ ಹರಿಬಿಡುವ, ಸರ್ವಾಧಿಕಾರಿ ವ್ಯವಸ್ಥೆಯನ್ನು ಪ್ರತಿಪಾದಿಸುವ ಸಂಘಟನೆಗಳು ಟ್ರಂಪ್ ಅವಧಿಯಲ್ಲಿ ಭಾರೀ ಸಕ್ರಿಯವಾಗಿವೆ ಎಂಬ ವರದಿಗಳಿವೆ. ಮುಂದುವರಿದ ರಾಷ್ಟ್ರಗಳೆಂದು ಬಿಂಬಿಸಿಕೊಂಡಿದ್ದ ಯೂರೋಪಿನ ಯುನೈಟೆಡ್ ಕಿಂಗ್ಡಮ್, ಫ್ರಾನ್ಸ್, ಜರ್ಮನಿ, ಆಸ್ಟ್ರಿಯ, ನೆದರ್ ಲ್ಯಾಂಡ್, ಪೋಲೆಂಡ್ ಮೊದಲಾದ ರಾಷ್ಟ್ರಗಳಲ್ಲೂ ಈ ರೀತಿಯ ಬೆಳವಣಿಗೆಗಳಾಗುತ್ತಿವೆ.
ನಿರಂಕುಶತೆಯನ್ನು ಪ್ರತಿಪಾದಿಸುವ ವ್ಯಕ್ತಿಗಳು ಹಾಗೂ ಪಕ್ಷಗಳು ಅಧಿಕಾರಕ್ಕೆ ಬಂದಿರುವುದು ಇಲ್ಲವೇ ಅಧಿಕಾರದ ಸನಿಹಕ್ಕೆ ಬಂದಿರುವ ಬೆಳವಣಿಗೆಗಳಿವೆ. ಅವುಗಳು ಇದಕ್ಕಾಗಿ ಮುಸ್ಲಿಂ ದ್ವೇಷ, ವಲಸೆಗಾರರ ಮೇಲಿನ ದ್ವೇಷಗಳನ್ನು ಹರಿಬಿಡುತ್ತಾ ಮೊದಲಿನಿಂದಲೂ ಅಲ್ಲಿದ್ದ ಪ್ರಜಾತಾಂತ್ರಿಕ ಸಂಸ್ಥೆಗಳನ್ನು, ರಾಜಕೀಯ ಹಕ್ಕುಗಳು, ನಾಗರಿಕ ಹಕ್ಕುಗಳನ್ನು ತಿರಸ್ಕರಿಸುವ ಇಲ್ಲವೇ ಶಕ್ತಿಹೀನಗೊಳಿಸುವ ಕಾರ್ಯಗಳಲ್ಲಿ ತೊಡಗಿವೆ. ಅಂದರೆ ನಿರಂಕುಶ ವ್ಯವಸ್ಥೆಯ ಹೇರಿಕೆಯಾಗುತ್ತಿದೆ. ಫ್ರಾನ್ಸ್ ನ ‘ನ್ಯಾಷನಲ್ ಫ್ರಂಟ್’ ಪಕ್ಷದ ಮರೈನ್ ಲಿಪೆನ್ನಂತಹ ವ್ಯಕ್ತಿಗಳು, ಜರ್ಮನಿಯ ‘ಆಲ್ಟರ್ನೇಟಿವ್ ಜರ್ಮನಿ’, ಆಸ್ಟ್ರಿಯದ ‘ಫ್ರೀಡಂ ಪಾರ್ಟಿ’, ನೆದರ್ ಲ್ಯಾಂಡ್ಸ್ನ ‘ಪಾರ್ಟಿ ಫಾರ್ ಫ್ರೀಡಂ’ನಂತಹ ಪಕ್ಷಗಳು ಇದೇ ನಿಟ್ಟಿನಲ್ಲಿ ಕಾರ್ಯಶೀಲವಾಗಿವೆ.