'ಅಪ್ಪಂದಿರ' ರಾಜಕೀಯ ಜೀವನದಲ್ಲಿ ನಿರ್ಣಾಯಕ, ಈ ವಿಧಾನಸಭೆ ಚುನಾವಣೆ!
ಯಡಿಯೂರಪ್ಪ,ಈಶ್ವರಪ್ಪ, ಕಾಗೋಡು ತಿಮ್ಮಪ್ಪರತ್ತ ಕುತೂಹಲದ ಚಿತ್ತ
ಶಿವಮೊಗ್ಗ, ಏ. 11: ಪ್ರತಿ ಸಾರ್ವತ್ರಿಕ ಚುನಾವಣೆಗಳ ಸಂದರ್ಭದಲ್ಲಿಯೂ ನಾನಾ ಕಾರಣಗಳಿಂದ, ಶಿವಮೊಗ್ಗ ಜಿಲ್ಲೆಯ ರಾಜಕಾರಣ ರಾಷ್ಟ್ರ- ರಾಜ್ಯ ಮಟ್ಟದ ಗಮನ ಸೆಳೆಯುತ್ತದೆ. ಪ್ರಭಾವಿ ನಾಯಕರ ಸ್ಪರ್ಧೆ, ಪಕ್ಷಗಳಲ್ಲಿನ ಹೈಡ್ರಾಮಾ, ಪಕ್ಷಾಂತರ ಮತ್ತಿತರ ಮಹತ್ವದ ರಾಜಕೀಯ ಬೆಳವಣಿಗೆಗಳಿಗೆ ಜಿಲ್ಲೆ ಸಾಕ್ಷಿಯಾಗುತ್ತಾ ಬಂದಿದೆ. ಇದು ಕೆಲ ಬಾರಿ ರಾಜ್ಯ ರಾಜಕಾರಣದ ಮೇಲೂ ಪ್ರಭಾವ ಬೀರಿದ್ದ ನಿದರ್ಶನಗಳಿವೆ.
ಜಿಲ್ಲೆಯು ರಾಜ್ಯ ರಾಜಕಾರಣದಲ್ಲಿ ತನ್ನದೆ ಆದ ಮಹತ್ವ ಉಳಿಸಿಕೊಂಡು ಬಂದಿದೆ. ಅತೀ ಹೆಚ್ಚು ಮುಖ್ಯಮಂತ್ರಿಗಳನ್ನು ನೀಡಿದ ಜಿಲ್ಲೆ ಎಂಬ ಹೆಗ್ಗಳಿಕೆಗೂ ಭಾಜನವಾಗಿದೆ. ಜಿಲ್ಲೆಯ ಹಲವು ನಾಯಕರ ಹೆಸರು ರಾಜಕಾರಣದ ಪುಟದಲ್ಲಿ ಅಚ್ಚಳಿಯದೆ ಉಳಿಯುವಂತಾಗಿದೆ. ಈ ಕಾರಣದಿಂದಲೇ ಲೋಕಸಭೆ - ವಿಧಾನಸಭೆಯಂತಹ ಸಾರ್ವತ್ರಿಕ ಚುನಾವಣೆ ವೇಳೆ ರಾಜಕೀಯ ಕುತೂಹಲಿಗರ ಚಿತ್ತ ಶಿವಮೊಗ್ಗ ಜಿಲ್ಲೆಯ ಬೆಳವಣಿಗೆಗಳತ್ತ ನೆಟ್ಟಿರುತ್ತದೆ.
ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿಯೂ ಕೂಡ ಜಿಲ್ಲಾ ರಾಜಕಾರಣವು ಕುತೂಹಲದ ಕೇಂದ್ರಬಿಂದುವಾಗಿದೆ. ಈಗಾಗಲೇ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಹಲವು ಹೈಡ್ರಾಮಾಗಳು ನಡೆದು ಹೋಗಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೈಡ್ರಾಮ ನಡೆಯುವ ಲಕ್ಷಣಗಳು ಗೋಚರವಾಗುತ್ತಿವೆ. ಇದೆಲ್ಲ ಸರ್ವೇಸಾಮಾನ್ಯವಾಗಿದೆ. ಆದರೆ ಈ ಬಾರಿಯ ಚುನಾವಣೆಯಲ್ಲಿ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಕಣಕ್ಕಿಳಿಯುತ್ತಿರುವ ಅತಿರಥ-ಮಹಾರಥ ರಾಜಕಾರಣಿಗಳು, ಇಡೀ ರಾಜ್ಯದ ಗಮನ ಸೆಳೆದಿದ್ದಾರೆ. ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಘೋಷಿತವಾಗಿರುವ ಆ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಆ ಪಕ್ಷದ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರೂ ಆದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪರತ್ತ ಕುತೂಹಲದ ಚಿತ್ತ ನೆಟ್ಟಿದೆ.
ಈ ನಾಯಕರ ರಾಜಕೀಯ ಜೀವನದಲ್ಲಿ ಈ ಚುನಾವಣೆ ಬಹುತೇಕ ನಿರ್ಣಾಯಕವಾಗಿದ್ದು, ಅಳಿವು - ಉಳಿವಿನ ಪ್ರಶ್ನೆಯಾಗಿದೆ. ಈಗಾಗಲೇ ಶಿಕಾರಿಪುರದಿಂದ ಯಡಿಯೂರಪ್ಪ ಹಾಗೂ ಶಿವಮೊಗ್ಗ ನಗರ ಕ್ಷೇತ್ರದಿಂದ ಕೆ.ಎಸ್.ಈಶ್ವರಪ್ಪರವರು ಬಿಜೆಪಿ ಅಭ್ಯರ್ಥಿಯಾಗಿ ಅಖಾಡಕ್ಕಿಳಿಯುವುದು ಖಚಿತವಾಗಿದೆ. ಉಳಿದಂತೆ ಕಾಗೋಡು ತಿಮ್ಮಪ್ಪ ಸ್ಪರ್ಧಿಸುವುದು ಖಚಿತವಾಗಿದ್ದರೂ, ಸ್ಪಷ್ಟವಾಗುತ್ತಿಲ್ಲ. ಈ ನಾಯಕರ ಅಸೆಂಬ್ಲಿ ರಾಜಕಾರಣದ ಏರಿಳಿತ ಈ ಮುಂದಿನಂತಿದೆ.
'ಸಿಎಂ ಅಭ್ಯರ್ಥಿ ಬಿಎಸ್‍ವೈಗೆ ಗೆಲುವು ಅನಿವಾರ್ಯ'
ಬಿಜೆಪಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವ, 76 ರ ವಯೋಮಾನದ ಯಡಿಯೂರಪ್ಪಗೆ ಈ ಬಾರಿಯ ಚುನಾವಣೆ ಅತ್ಯಂತ ಮಹತ್ವದ್ದಾಗಿದೆ. ಶಿಕಾರಿಪುರದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಅವರದ್ದಾಗಿದೆ. ಕಳೆದ ಎಂಟು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಬಿಎಸ್‍ವೈ ಏಳು ಬಾರಿ ಜಯ ಸಾಧಿಸಿದ್ದರೆ, ಒಮ್ಮೆ ಪರಾಭವಗೊಂಡಿದ್ದಾರೆ. ಒಟ್ಟಾರೆ ಶಿಕಾರಿಪುರದಲ್ಲಿ ಪ್ರಾಬಲ್ಯ ಮುಂದುವರಿಸಿಕೊಂಡು ಬಂದಿದ್ದಾರೆ. 1983 ರಲ್ಲಿ ಮೊದಲ ಬಾರಿ ವಿಧಾನಸಭೆ ಚುನಾವಣಾ ಕಣಕ್ಕಿಳಿದು ಜಯ ಸಾಧಿಸಿದ ಬಿಎಸ್‍ವೈ, 1994 ರವರೆಗೆ ನಡೆದ ನಾಲ್ಕು ಚುನಾವಣೆಗಳಲ್ಲಿಯೂ ಜಯಭೇರಿ ಸಾಧಿಸಿದ್ದರು. ಆದರೆ 1999 ರಲ್ಲಿ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿತವಾಗಿದ್ದ ಸಂದರ್ಭದಲ್ಲಿ, ಕಾಂಗ್ರೆಸ್ ಅಭ್ಯರ್ಥಿ ಮಹಾಲಿಂಗಪ್ಪರೆದುರು ಪರಾಭವಗೊಂಡಿದ್ದರು. ನಂತರ ನಡೆದ 2004, 2008, 2013 ರ ಚುನಾವಣೆಗಳಲ್ಲಿ ಸತತ ಜಯ ಸಂಪಾದಿಸಿದ್ದರು. ಕಳೆದ ಲೋಕಸಭೆ ಚುನಾವಣೆಯಲ್ಲಿ ಕಣಕ್ಕಿಳಿದು ಭಾರೀ ಮತಗಳ ಅಂತರದಲ್ಲಿ ಜಯ ಸಾಧಿಸಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಶಿಕಾರಿಪುರ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಪುತ್ರ ಬಿ.ವೈ.ರಾಘವೇಂದ್ರರನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಂಡು ಬರುವಲ್ಲಿ ಸಫಲವಾಗಿದ್ದರು.
ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಹೊರಬಂದು ಪ್ರತ್ಯೇಕ ಕೆಜೆಪಿ ಪಕ್ಷ ಕಟ್ಟಿಕೊಂಡಿದ್ದ ಬಿಎಸ್‍ವೈ, ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವಲ್ಲಿ ಯಶಸ್ವಿಯಾಗಿದ್ದರು. ಬದಲಾದ ಬೆಳವಣಿಗೆಯಲ್ಲಿ ಮತ್ತೆ ಅವರು ಮಾತೃಪಕ್ಷ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಅವರನ್ನೇ ಸಿಎಂ ಅಭ್ಯರ್ಥಿಯಾಗಿಯೂ ಪಕ್ಷ ಘೋಷಿಸಿದೆ. ಈ ಕಾರಣದಿಂದ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲೇಬೇಕಾದ ಮಹತ್ತರ ಜವಾಬ್ದಾರಿ ಅವರ ಮೇಲಿದೆ. ಹಾಗೆಯೇ ಸ್ವಕ್ಷೇತ್ರ ಶಿಕಾರಿಪುರದಲ್ಲಿ ಭಾರೀ ಮತಗಳ ಅಂತರದಲ್ಲಿ ಜಯ ಸಾಧಿಸುವ ಒತ್ತಡವೂ ಇದೆ. ಜೆಡಿಎಸ್, ಕಾಂಗ್ರೆಸ್‍ನಿಂದ ಪ್ರಬಲ ಸ್ಪರ್ಧೆ ಎದುರಿಸುವ ಸಾಧ್ಯತೆಗಳಿವೆ. ಈ ಕಾರಣದಿಂದ ರಾಜ್ಯ ಸುತ್ತಾಟದ ನಡುವೆಯೂ ಸ್ವಕ್ಷೇತ್ರ ಶಿಕಾರಿಪುರದತ್ತಲೂ ಹೆಚ್ಚಿನ ಗಮನ ಹರಿಸುತ್ತಿದ್ದಾರೆ.
'ಜಯ ಸಾಧಿಸಲೇಬೇಕಾದ ಒತ್ತಡದಲ್ಲಿ ಕೆಎಸ್‍ಈ'
ಬಿಜೆಪಿ ಪಕ್ಷದ ಹಿರಿಯ ಮುಖಂಡ ಹಾಗೂ ಹಾಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ, 69 ವರ್ಷದ ಈಶ್ವರಪ್ಪರವರು ತಮ್ಮ ರಾಜಕೀಯ ಜೀವನದಲ್ಲಿ ಇದೇ ಮೊದಲ ಬಾರಿಗೆ ಶಿವಮೊಗ್ಗ ನಗರ ಕ್ಷೇತ್ರದ ಟಿಕೆಟ್‍ಗೆ ಇನ್ನಿಲ್ಲದ ಕಸರತ್ತು ನಡೆಸುವಂತಾಗಿತ್ತು. ಇನ್ನೇನು ಅವರು ಕಣಕ್ಕಿಳಿಯುವುದು ಅನುಮಾನ ಎನ್ನುವ ಸ್ಥಿತಿಯೂ ನಿರ್ಮಾಣವಾಗಿತ್ತು. ಆದರೆ ಅಂತಿಮವಾಗಿ ವರಿಷ್ಠರ ಮನವೊಲಿಸಿ, ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ.
ಈ ಬಾರಿಯ ಚುನಾವಣೆ ಕೆಎಸ್‍ಈ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. ರಾಜಕೀಯ ಕ್ಷೇತ್ರದಲ್ಲಿ ಅವರ ಅಳಿವು - ಉಳಿವಿನ ಪ್ರಶ್ನೆಯೂ ಆಗಿದೆ. ಕಳೆದ ಚುನಾವಣೆಯ ಸೋಲಿನ ಸುಳಿಯಿಂದ ಹೊರಬರಲು ಹಾಗೂ ಬಿಜೆಪಿಯಲ್ಲಿ ಮತ್ತೆ ತಮ್ಮ ಅಸ್ತಿತ್ವ ಕಾಯ್ದುಕೊಳ್ಳಲು ಪ್ರಸ್ತುತ ಚುನಾವಣೆಯಲ್ಲಿ ಗೆಲ್ಲಲೇಬೇಕಾದ ಒತ್ತಡ, ಅನಿವಾರ್ಯತೆಯಲ್ಲಿದ್ದಾರೆ. ಈ ಕಾರಣದಿಂದ ಕಳೆದ ಕೆಲ ವರ್ಷಗಳಿಂದಲೇ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಚುನಾವಣಾ ಸಿದ್ದತೆಯಲ್ಲಿ ತೊಡಗಿದ್ದಾರೆ. ಮತದಾರರ ಮನವೊಲಿಸುವ ಕೆಲಸ ಮಾಡಿಕೊಂಡು ಬಂದಿದ್ದಾರೆ. ಟಿಕೆಟ್ ಖಚಿತಗೊಂಡ ನಂತರ ಕ್ಷೇತ್ರದಾದ್ಯಂತ ಬಿರುಸಿನ ಓಡಾಟ ಕೂಡ ನಡೆಸುತ್ತಿದ್ದಾರೆ.
ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಿಂದ 1989 ರಿಂದ 2013 ರವರೆಗೆ, ಅಂದರೆ ಸತತ 6 ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಅವರು ಕಣಕ್ಕಿಳಿದಿದ್ದಾರೆ. ಇದರಲ್ಲಿ ನಾಲ್ಕು ಚುನಾವಣೆಗಳಲ್ಲಿ ಜಯ ಸಂಪಾದಿಸಿ, ಎರಡರಲ್ಲಿ ಪರಾಭವಗೊಂಡಿದ್ದಾರೆ. ಏಳನೇ ಬಾರಿಯೂ ಶಿವಮೊಗ್ಗ ನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. 1989 ರಲ್ಲಿ ಕೆ.ಎಸ್.ಈ ರವರು ಪ್ರಥಮ ಬಾರಿಗೆ ವಿಧಾನಸಭೆ ಚುನಾವಣಾ ಕಣಕ್ಕೆ ಧುಮುಕಿ ಗೆಲುವು ಸಂಪಾದಿಸಿದರು. ಮೊದಲ ಯತ್ನದಲ್ಲಿಯೇ ಅಂದಿನ ಘಟಾನುಘಟಿ ರಾಜಕಾರಣಿಯಾಗಿದ್ದ, ಕಾಂಗ್ರೆಸ್ ಅಭ್ಯರ್ಥಿ ಕೆ.ಹೆಚ್.ಶ್ರೀನಿವಾಸ್‍ರವರನ್ನು ಪರಾಭವಗೊಳಿಸಿದ್ದರು.
1994 ರಲ್ಲಿಯೂ ಜಯ ಸಂಪಾದಿಸಿದ್ದರು. ಆದರೆ 1999 ರ ಚುನಾವಣೆಯಲ್ಲಿ ಪರಾಭವಗೊಂಡಿದ್ದರು. 2004, 2008 ರ ಚುನಾವಣೆಯಲ್ಲಿ ಗೆಲುವು ಸಂಪಾದಿಸಿದ್ದ ಕೆ.ಎಸ್.ಈ 2013 ರಲ್ಲಿ ಬಿ.ಎಸ್.ಯಡಿಯೂರಪ್ಪರ ಕೆಜೆಪಿ ಪಕ್ಷದ ಕಾರಣದಿಂದ ಪರಾಭವಗೊಂಡಿದ್ದರು. ಬದಲಾದ ರಾಜಕಾರಣದಲ್ಲಿ ಕೆಎಸ್ಈ ಮತ್ತೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಪಕ್ಷದ ಆಂತರಿಕ ಗೊಂದಲಗಳನ್ನು ಪರಿಹರಿಸಿಕೊಳ್ಳಬೇಕಾದ ಒತ್ತಡ ಅವರಿಗಿದೆ. ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಪ್ರಮುಖ ಎದುರಾಳಿಗಳಾಗಿವೆ. ಸಾಕಷ್ಟು ಪೈಪೋಟಿ ಎದುರಿಸುವುದು ನಿಶ್ಚಿತವಾಗಿದೆ. ಈ ಕಾರಣದಿಂದ ಕೆಎಸ್ಈ ರವರು ಕ್ಷೇತ್ರದತ್ತ ಸಾಕಷ್ಟು ಗಮನಹರಿಸಿದ್ದಾರೆ.
'ಕಾಗೋಡು ಸುತ್ತ ಕುತೂಹಲದ ಹುತ್ತ'
ರಾಜ್ಯದ ಹಿರಿಯ ರಾಜಕಾರಣಿ, ಹಾಲಿ ಸಚಿವ, 87 ರ ವಯೋಮಾನದ ಕಾಗೋಡು ತಿಮ್ಮಪ್ಪರಿಗೆ ಪ್ರಸ್ತುತ ವಿಧಾನಸಭೆ ಚುನಾವಣೆಯು ಅವರ ರಾಜಕೀಯ ಜೀವನದಲ್ಲಿ ಬಹುತೇಕ ಕೊನೆಯ ಚುನಾವಣೆಯಾಗಿದೆ. ವಯಸ್ಸು ಹಾಗೂ ಅನಾರೋಗ್ಯದ ಕಾರಣದಿಂದ ಚುನಾವಣಾ ರಾಜಕಾರಣದಿಂದ ದೂರ ಉಳಿಯುವ ನಿರ್ಧಾರ ಮಾಡಿದ್ದ ಕಾಗೋಡು, ಅಂತಿಮ ಗಳಿಗೆಯಲ್ಲಿ ಮತ್ತೆ ಚುನಾವಣಾ ಕಣಕ್ಕೆ ಧುಮುಕುವ ನಿರ್ಧಾರ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಕೂಡ ಅವರಿಗೆ ಟಿಕೆಟ್ ನೀಡುವ ಭರವಸೆ ನೀಡಿದೆ. ಆದರೆ ಕಾಗೋಡು ಕಣಕ್ಕಿಳಿಯುತ್ತಾರಾ? ಇಲ್ಲವೇ ಬೇರೆಯವರನ್ನು ಅಖಾಡಕ್ಕಿಳಿಸುತ್ತಾರಾ? ಎಂಬ ಚರ್ಚೆ ಮಾತ್ರ ಮುಂದುವರಿದಿದೆ.
ಸಾಗರ ಕ್ಷೇತ್ರದಲ್ಲಿ ಪ್ರಥಮ ಬಾರಿಗೆ 1962 ರಲ್ಲಿ ಕಾಗೋಡುರವರು ಸೋಶಿಯಲಿಸ್ಟ್ ಪಾರ್ಟಿಯಿಂದ ಕಣಕ್ಕಿಳಿದು ಪರಾಭವಗೊಂಡಿದ್ದರು. 1967 ರ ಎಸ್‍ಎಸ್‍ಪಿಯಿಂದ ಅಖಾಡಕ್ಕಿಳಿದು ಸೋತಿದ್ದರು. ನಂತರ 1972 ರಲ್ಲಿ ಸೋಶಿಯಲಿಸ್ಟ್ ಪಕ್ಷದಿಂದ ಸ್ಪರ್ಧಿಸಿ ಪ್ರಥಮ ಜಯ ಸಂಪಾದಿಸಿದ್ದರು. 1978 ರಲ್ಲಿ ಜನತಾ ಪಕ್ಷದಿಂದ ಕಣಕ್ಕಿಳಿದು ಪರಾಭವಗೊಂಡಿದ್ದರು. 1983 ರಲ್ಲಿ ಸೊರಬ ಕ್ಷೇತ್ರಕ್ಕೆ ಸ್ಥಳಾಂತರಗೊಂಡಿದ್ದ ಕಾಗೋಡುರವರು, ಬಂಗಾರಪ್ಪರ ಎದುರು ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದು ಪರಾಭವಗೊಂಡಿದ್ದರು. 1985 ರ ವಿಧಾನಸಭೆ ಚುನಾವವಣೆಯಲ್ಲಿ ಅವರು ಕಣಕ್ಕಿಳಿಯಲಿಲ್ಲ. 1989 ರಲ್ಲಿ ಸಾಗರದಿಂದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ತದನಂತರ 1994, 1999 ರ ಚುನಾವಣೆಯಲ್ಲಿಯೂ ಜಯಗಳಿಸಿದ್ದರು. ನಂತರ 2004, 2008 ರ ಚುನಾವಣೆಗಳಲ್ಲಿ ಸತತ ಸೋಲನುಭವಿಸಿದ್ದರು. 2013 ರ ಚುನಾವಣೆಯಲ್ಲಿ ಕಣಕ್ಕಿಳಿದು ಜಯ ಸಾಧಿಸುವ ಮೂಲಕ ಸೋಲಿನ ಸುಳಿಯಿಂದ ಅವರು ಹೊರಬಂದಿದ್ದರು. 2013 ರವರೆಗೆ ಒಟ್ಟಾರೆ 11 ಚುನಾವಣೆಗಳಲ್ಲಿ ಸ್ಪರ್ಧಿಸಿರುವ ಕಾಗೋಡುರವರು 5 ಬಾರಿ ಜಯ ಸಾಧಿಸಿ, 6 ಬಾರಿ ಸೋಲನುಭವಿಸಿದ್ದಾರೆ. ಇದೀಗ ತಮ್ಮ ರಾಜಕೀಯ ಜೀವನದ 12 ನೇ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಮುಂದಾಗಿದ್ದಾರೆ. ಒಂದು ವೇಳೆ ಅವರು ಕಣಕ್ಕಿಳಿದರೆ ಇದೇ ಅವರ ಅಂತಿಮ ಚುನಾವಣೆಯಾಗುವ ಸಾಧ್ಯತೆಯಿದ್ದು, ಪ್ರತಿಷ್ಠೆಯ ಕಾರಣದಿಂದಲಾದರೂ ಅವರಿಗೆ ಜಯ ಅನಿವಾರ್ಯವಾಗಿದೆ. ಒಂದು ವೇಳೆ ಕಾಗೋಡು ಕಣಕ್ಕಿಳಿಯದಿದ್ದರೆ ಸಾಗರ ಕ್ಷೇತ್ರದಿಂದ ಕಣಕ್ಕಿಳಿಯುವ ಅಭ್ಯರ್ಥಿ ಯಾರೆಂಬ ಚರ್ಚೆ ಕೂಡ ಸ್ಥಳೀಯ ರಾಜಕೀಯ ವಲಯದಲ್ಲಿ ನಡೆಯುತ್ತಿದೆ.