ಉತ್ತರ ಕರ್ನಾಟಕ ನ್ಯಾಯಾಲಯಗಳ ಕಲಾಪದ ಸಮಯ ಬದಲು
ಬೆಂಗಳೂರು, ಎ.12: ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಉತ್ತರ ಕರ್ನಾಟಕದ ಎಲ್ಲ ಭಾಗಗಳಲ್ಲೂ ವಿಪರೀತ ಉರಿ ಬಿಸಿಲು ಪ್ರಾರಂಭವಾಗಿದೆ. ಹೀಗಾಗಿ, ಉತ್ತರ ಕರ್ನಾಟಕದ 8 ಜಿಲ್ಲೆಗಳಲ್ಲಿ ಅಧೀನ ನ್ಯಾಯಾಲಯಗಳ ಕಲಾಪದ ಸಮಯದಲ್ಲಿ ಬದಲಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
ಬಳ್ಳಾರಿ, ಬೀದರ್, ಕೊಪ್ಪಳ, ರಾಯಚೂರು, ಕಲಬುರಗಿ, ಯಾದಗಿರಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಎ.12ರಿಂದ ಮೇ. 31ರವರೆಗೆ ಎಲ್ಲ ಮಾದರಿಯ ಅಧೀನ ನ್ಯಾಯಾಲಯದ ಕಲಾಪದ ವೇಳೆಯನ್ನು ಬದಲು ಮಾಡಲಾಗಿದೆ.
ಈ ಕುರಿತು ಹೈಕೋರ್ಟ್ ನ ರಿಜಿಸ್ಟ್ರಾರ್ ಜನರಲ್ ಅಶೋಕ್ ನಿಜಗಣ್ಣವರ್ ಆದೇಶ ಹೊರಡಿಸಿದ್ದಾರೆ. ಕೋರ್ಟ್ಗಳು ಬೆಳಗ್ಗೆ 8ರಿಂದ ಮಧ್ಯಾಹ್ನ 11ರವರೆಗೆ ಮತ್ತು 11.30ರಿಂದ 1.30ರವರೆಗೆ ಕಾರ್ಯ ನಿರ್ವಹಿಸಲಿವೆ. ಕೋರ್ಟ್ ನ ಕಚೇರಿಗಳು ಬೆಳಗ್ಗೆ 7.30ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಕಾರ್ಯನಿರ್ವಹಣೆ ಮಾಡಲಿವೆ ಎನ್ನುವ ಮಾಹಿತಿ ಲಭ್ಯವಾಗಿದೆ. ಗುರುವಾರ ಬಳ್ಳಾರಿಯಲ್ಲಿ ಗರಿಷ್ಠ 38 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ರಾಯಚೂರಿನಲ್ಲಿ ಗರಿಷ್ಠ 36ಡಿಗ್ರಿ ಸೆಲ್ಸಿಯಸ್, ಕಲಬುರಗಿಯಲ್ಲಿ 32 ಡಿಗ್ರಿ ಸೆಲ್ಸಿಯಸ್, ಕೊಪ್ಪಳ 32ಡಿಗ್ರಿ, ಯಾದಗಿರಿಯಲ್ಲಿ 34 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.