ಡಾ. ಅಂಬೇಡ್ಕರ್‌ರ ಕರುಳು-ಬೆರಳಿನ ಸಂಬಂಧಗಳು
ನಾವು ಡಾಕ್ಟರ್ ಅಂಬೇಡ್ಕರ್‌ರನ್ನು ಕಾಣಬೇಕಾದದ್ದು ಎಲ್ಲಿ, ಬಡವರನ್ನು, ಅಮಾಯಕರನ್ನು, ಶೋಷಣೆಯನ್ನು, ನೋಡಿ ಮರುಗಿದ ಅಂಬೇಡ್ಕರ್ ಅವರ ತಾಯ್ತನವನ್ನು ಶಾಶ್ವತಗೊಳಿಸುವುದು ಹೇಗೆಂದು ಆಲೋಚಿಸಬೇಕಿದೆ. ಅವರಿಗಿದ್ದ ಈ ತಾಯ್ತನವೇ ಅಲ್ಲವೇ ಇಂದಿನ ಬಹುಸಂಖ್ಯಾತ ದಲಿತರ ಬದುಕಿಗೆ ಆಶಾಕಿರಣವಾಗಿದ್ದು. ದರ್ಪ ದಬ್ಬಾಳಿಕೆ ನೋವನ್ನು ನೋಡಿ ಮಿಡಿದ ಅವರ ಕರುಳು, ಇದನ್ನೆಲ್ಲ ಬದಲಿಸಲು ಹೊರಟು ಪೆನ್ನು ಹಿಡಿದ ಅವರ ಬೆರಳನ್ನು ಪ್ರತಿಯೊಬ್ಬ ಭಾರತೀಯ ಬಡವನೂ ಹೆಮ್ಮೆಯಿಂದ ನೆನೆಯ ಬೇಕಲ್ಲವೇ?
ಈ ದೇಶದ ಪ್ರತಿಯೊಬ್ಬ ಬಡವನಿಗೂ ಡಾ. ಅಂಬೇಡ್ಕರ್‌ರಿಗೂ ಒಂದು ರೀತಿಯ ಕರುಳು ಬೆರಳಿನ ಸಂಬಂಧವಿದೆ. ಅಂಬೇಡ್ಕರ್ ಅವರ ಬೆವರಿನ ಋಣದ ಪ್ರತೀಕವಾಗಿ ಕೋಟ್ಯನುಕೋಟಿ ಜನರು ಇಂದು ಉಸಿರಾಡುತ್ತಿದ್ದಾರೆ. ಆದರೆ ಅವರು ಹಿಂದೆಂದಿಗಿಂತ ಇಂದು ತುಂಬಾ ಗಂಭೀರ ಪರಿಸ್ಥಿತಿಯಲ್ಲಿ ಜೀವಿಸುತ್ತಿದ್ದಾರೆ. ಹಾಗೆಯೇ ಡಾಕ್ಟರ್ ಅಂಬೇಡ್ಕರ್ ಅವರ ಜಯಂತಿ ಕೂಡ ಇಂದು ತನ್ನನ್ನು ತಾನು ಪರಿವರ್ತಿಸಿಕೊಳ್ಳಬೇಕಿದೆ. ಯಾಕೆಂದರೆ ಪ್ರಸ್ತುತದಲ್ಲಿ ಬದಲಾಗದೆ ಬದುಕಿಲ್ಲ. ಈ ಬಾರಿಯ ಅಂಬೇಡ್ಕರ್ ಜಯಂತಿಯಲ್ಲಿ ಯಾಕೋ ಹೇಳಲೇಬೇಕು ಎಂದು ಕಾಡಿದ ಡಾಕ್ಟರ್ ಅಂಬೇಡ್ಕರ್ ಅವರ ಬದುಕಿನ ಎರಡು ಬಹುಮುಖ್ಯ ಪ್ರಸಂಗಗಳನ್ನು ಹೇಳಲೇಬೇಕಿದೆ.
ಪತ್ರಕರ್ತರೊಬ್ಬರು ಅಂಬೇಡ್ಕರ್ ಅವರನ್ನು ಪ್ರಶ್ನೆ ಮಾಡುತ್ತಾ ‘‘ಡಾ.ಅಂಬೇಡ್ಕರ್, ನೀವು ನಿಮ್ಮ ಶೋಷಿತ ಸಮಾಜವನ್ನು ಉದ್ಧರಿಸಬೇಕೆಂದು ಜೀವನ ಪೂರ್ತಿ ಹೋರಾಟ ಮಾಡಿದ್ದೀರಿ, ಆದರೆ ಈ ಶೋಷಿತ ವರ್ಗ ಸಂಪೂರ್ಣವಾಗಿ ಉದ್ಧಾರವಾಗಿಲ್ಲ. ಇವರನ್ನು ಉದ್ಧರಿಸಬೇಕೆಂದರೆ ಇಲ್ಲಿ ಮತ್ತೊಮ್ಮೆ ನೀವೇ ಹುಟ್ಟಿ ಬರಬೇಕೇ?’’ ಎಂದರು. ಡಾ. ಅಂಬೇಡ್ಕರ್ ಅವರು ಇದಕ್ಕೆ ಉತ್ತರಿಸುತ್ತಾ ‘‘ಇಲ್ಲ ನಾನೇ ಮತ್ತೆ ಹುಟ್ಟಿ ಬರುವ ಅವಶ್ಯಕತೆ ಇಲ್ಲ. ಆದರೆ ಭಾರತ ದೇಶದ ಪ್ರತಿ ಗುಡಿಸಿಲಿನಲ್ಲಿ ಒಬ್ಬೊಬ್ಬ ಅಂಬೇಡ್ಕರ್ ಹುಟ್ಟುತ್ತಾನೆ. ಆ ಮೂಲಕ ಈ ಶೋಷಿತ ವರ್ಗವನ್ನು ಅವರು ಉದ್ಧರಿಸುತ್ತಾರೆ’’ ಎಂದು ಬಹುದೊಡ್ಡ ಭರವಸೆಯೊಂದಿಗೆ ಅತ್ಯಂತ ಆತ್ಮ ವಿಶ್ವಾಸದಿಂದ, ಹೆಮ್ಮೆಯಿಂದ ಉತ್ತರಿಸಿದ್ದರು. ಈ ಮಾತುಗಳನ್ನು ಅವರು ಹೇಳುವಾಗ ಎರಡು ರೀತಿಯಲ್ಲಿ ಅವಲೋಕಿಸಿರಬಹುದು. ಒಂದು ಈ ದೇಶದ ಶೋಷಿತ ಸಮುದಾಯದಿಂದ ಉದಯಿಸುವ ಪ್ರತಿಯೊಬ್ಬ ನಾಯಕನೂ ಸಹ ನನ್ನಂತೆ ತ್ಯಾಗಿಗಳಾಗಬಹುದು ಎಂಬ ಭರವಸೆ. ಮತ್ತೊಂದು ಇವರು ಯಾವುದೇ ಆಸೆ ಆಮಿಷಗಳಿಗೆ ಬದಲಾಗದೆ ನನ್ನಂತೆ ಕೆಲಸ ಮಾಡಬಹುದು ಎಂಬ ದೂರದರ್ಶಿತ್ವ. ಈ ಎರಡು ಆಲೋಚನೆಯಲ್ಲಿ ಹೇಳಿರಬಹುದು. ಆದರೆ ಇವತ್ತಿನ ಪರಿಸ್ಥಿತಿ ಏನಾಗಿದೆ? ಮತ್ತು ಯಾವ ಸ್ಥಿತಿಯಲ್ಲಿದೆ? ಎಂದು ಅವಲೋಕಿಸಿದರೆ ಡಾ. ಅಂಬೇಡ್ಕರ್ ಅವರ ದೂರದರ್ಶಿತ್ವದ ಹೇಳಿಕೆ ಇನ್ನೂ ಜೀವಂತಿಕೆಯಿಂದ ಉಸಿರಾಡುತ್ತಿದೆ ಎಂದು ಭಾವಿಸಲಾಗದು. ಯಾಕೆಂದರೆ ಡಾ. ಅಂಬೇಡ್ಕರ್ ಅವರನ್ನು ನಂಬಿದ ಜನರ ಸ್ಥಿತಿ ಡಾ. ಅಂಬೇಡ್ಕರ್ ಅವರ ಕಾಲಘಟ್ಟಕ್ಕಿಂತ ಇಂದು ಅತಿ ಗಂಭೀರ ಪರಿಸ್ಥಿತಿಯಲ್ಲಿದೆ. ಆ ಕಾಲಘಟ್ಟದಲ್ಲಿ ದೇಶದ ಯಾವುದೇ ಮೂಲೆಯಲ್ಲಿ ಶೋಷಿತರಿಗೆ ನೋವು ಉಂಟಾದರೆ ಅದರ ವಿರುದ್ಧದ ಧ್ವನಿಯಾಗಿ ಡಾ. ಅಂಬೇಡ್ಕರ್ ನಿಲ್ಲುತ್ತಿದ್ದರು ಮತ್ತು ಶತಶತಮಾನಗಳಿಂದ ಬಂದಿದ್ದ ನೋವು ಮತ್ತು ಅವಮಾನಕ್ಕೆ ಕಾರಣವಾದ ಅಂಶಗಳ ವಿರುದ್ಧ ಪ್ರಹಾರ ಮಾಡುತ್ತಿದ್ದರು. ಈ ಎರಡು ಅಂಶಗಳು ಅಂದಿನ ಜನರನ್ನು ಭರವಸೆದಾಯಕವಾಗಿಸಿತ್ತು. ಆದರೆ ಇಂದು ಕಣ್ಣೆದುರಿಗೆ ಶೋಷಿತ ಸಮುದಾಯಗಳನ್ನು ಇರಿದು ಕೊಂದರೂ, ಬೆತ್ತಲೆಗೊಳಿಸಿದರೂ ಅದರ ವಿರುದ್ಧದ ಗಟ್ಟಿ ಧ್ವನಿ ಕಾಣದಂತಾಗಿದೆ. ಅದಿರಲಿ, ಈ ದೇಶದ ಶೋಷಿತ ಸಮುದಾಯಗಳಿಗೆ ಮಾರಣಾಂತಿಕವಾಗಬಲ್ಲಂತಹ ಕಾಯ್ದೆಗಳ ವಿರುದ್ಧವಾಗಿ ತೀರ್ಪು ನೀಡಿದಾಗಲೂ ಕೂಡ ಒಂದು ಪ್ರಾಮಾಣಿಕ ಗಟ್ಟಿ ಏಕ ಧ್ವನಿ ಪ್ರತಿಧ್ವನಿಸಲಿಲ್ಲ. ಹಾಗಾದರೆ ಕೊರತೆ ಎಲ್ಲಿದೆ? ಅಂಬೇಡ್ಕರ್‌ರನ್ನು ಬಿಟ್ಟು ಸಾಗಿರುವ ಈ ಎಪ್ಪತ್ತು ವರ್ಷಗಳಲ್ಲಿ ಡಾ. ಅಂಬೇಡ್ಕರ್‌ರ ಬಗ್ಗೆ, ಅವರ ಸಿದ್ಧಾಂತದ ಬಗ್ಗೆ ಮಾತನಾಡುತ್ತಾ ಬಂದಿದ್ದೇವೆಯೇ ಹೊರತು ಅವರಂತೆ ಕೆಲಸ ಮಾಡುವುದನ್ನು ಕಲಿಯಲಿಲ್ಲ. ಅವರ ಸಿದ್ಧಾಂತವನ್ನು ಆರಾಧಿಸಿದ್ದೇವೆಯೇ ಹೊರತು ಅನುಸರಿಸಲಿಲ್ಲ. ಇಲ್ಲಿಯವರೆಗೆ ಅವರ ಸಿದ್ಧಾಂತದ ಮೇಲೆ ಕೆಲಸ ಮಾಡಿದ್ದಕ್ಕಿಂತ ಮಾತನಾಡಿದ್ದೆ ಹೆಚ್ಚು. ಒಂದು ವೇಳೆ ಡಾ. ಅಂಬೇಡ್ಕರ್‌ರ ಸಿದ್ಧಾಂತದ ಮೇಲೆ ಮಾತಿಗಿಂತ ಹೆಚ್ಚು ಕೆಲಸವಾಗಿದ್ದರೆ ಇಂದು ಬಂದೊದಗಿರುವ ಹೀನ ಸ್ಥಿತಿಯಲ್ಲಿ ಶೋಷಿತ ಸಮುದಾಯ ಬಂದು ನಿಲ್ಲುತ್ತಿರಲಿಲ್ಲ. ಬಹಿರಂಗವಾಗಿ ನಮ್ಮ ಹೆಣ್ಣು ಮಕ್ಕಳು ಬೆತ್ತಲೆಗೊಳ್ಳುತ್ತಿರಲಿಲ್ಲ. ಹಸುಳೆಗಳು ಜಾತಿಯ ಕಾವಿಗೆ ಸುಟ್ಟು ಕರಕಲಾಗುತ್ತಿರಲಿಲ್ಲ. ಮಾಂಸ ತಿಂದ ಕಾರಣಕ್ಕೆ ಚರ್ಮ ಸುಲಿಸಿಕೊಳ್ಳುತ್ತಿರಲಿಲ್ಲ. ಬಲಗೈಲಿ ವಾಚ್ ಕಟ್ಟಿದ ಕಾರಣಕ್ಕೆ ಕೈಯನ್ನೇ ಕತ್ತರಿಸುತ್ತಿರಲಿಲ್ಲ. ಕುದುರೆ ಏರಿದ ಕಾರಣಕ್ಕೆ ಶಿರಚ್ಛೇದನ ವಾಗುತ್ತಿರಲಿಲ್ಲ, ಕೂಲಿಯ ನರಕದಲ್ಲಿ ಜೀತದ ಕ್ರೌರ್ಯದಲ್ಲಿ ದಲಿತರು ನರಳ ಬೇಕಿರಲಿಲ್ಲ. ಧ್ವನಿ ಎತ್ತಿದ ಯುವಕನ ಎದೆ ಸೀಳುತ್ತಿರಲಿಲ್ಲ. ಇಷ್ಟೆಲ್ಲ ಸಂಭವಿಸಲು ನಮಗನಿಸಿದ ಹಾಗೆ ಉಳ್ಳವರ ಶಕ್ತಿವಂತ ಸಂಘಟನೆ ಮಾತ್ರ ಕಾರಣವಲ್ಲ, ಶೋಷಿತ ಸಮುದಾಯಗಳ ವಿಘಟನೆಯೂ ಕೂಡ ಕಾರಣ. ಡಾ. ಅಂಬೇಡ್ಕರ್ ನೈಜವಾಗಿ ನಮ್ಮಿಳಗೆ ಬದುಕಿದ್ದರೆ ನಾವು ವಿಘಟನೆಗೊಳ್ಳುತ್ತಿರಲಿಲ್ಲ. ಸಂಘಟಿಸುತ್ತಿದ್ದೆವು. ಸ್ವಹಿತಾಸಕ್ತಿಗಿಂತ ಸಮುದಾಯಗಳ ಹಿತ ಕಾಯುತ್ತಿದ್ದೆವು. ಆದರೆ ಇದು ಇನ್ನೂ ನಮ್ಮಿಳಗೆ ಸಂಭವಿಸಿಲ್ಲ. ಇಂದು ನಾವು ತುಂಬಾ ಗಂಭೀರವಾಗಿ ನಮ್ಮಿಳಗಿರುವ ಅಂಬೇಡ್ಕರ್‌ರ ಬಗ್ಗೆ ಯೋಚಿಸಬೇಕಾದದ್ದು ಆ ಪತ್ರಕರ್ತನಿಗೆ ಉತ್ತರಿಸುವಾಗ ಡಾ. ಅಂಬೇಡ್ಕರ್‌ರಿಗಿದ್ದ ಆತ್ಮವಿಶ್ವಾಸದ ಬಗ್ಗೆ; ಈ ಗುಡಿಸಲಿನೊಳಗೆ ಉದಯಿಸಿದ ಕೋಟ್ಯಂತರ ಅಂಬೇಡ್ಕರ್‌ರು ಆ ಭರವಸೆಯನ್ನು ಉಳಿಸಿಕೊಳ್ಳುವಲ್ಲಿ ಸಬಲರಾದರೆ ಎಂಬುದರ ಬಗ್ಗೆ. ಹಾಗೆಯೇ ಅವರಂತೆ ವೈಯಕ್ತಿಕ ಬದುಕಿನ ತ್ಯಾಗ ಇವರಿಗೆ ಸಾಧ್ಯವಾಯಿತೇ? ಇಲ್ಲಿ ಸ್ವಾರ್ಥವೇ ಮುಖ್ಯವಾಯಿತೇ?. ಅಂದರೆ ನಾವು ಡಾ.ಅಂಬೇಡ್ಕರ್‌ರನ್ನು ಜೀರ್ಣಿಸಿಕೊಳ್ಳುವುದರಲ್ಲಿ ಸೋತಿದ್ದೇವೆ ಎಂದರ್ಥ. ತಮ್ಮ ತಲೆಗೆ ತುರುಕಲ್ಪಟ್ಟ ಕೇವಲ ಮೀಸಲಾತಿಯ ಗಾಳಕ್ಕೆ ಸಿಲುಕಿಸಿಕೊಂಡು, ಮತ ಗಳಿಕೆಗಾಗಿ ಒಲ್ಲದ ಮನಸ್ಸಿನಿಂದ ಆರಾಧಿಸುವವರ ಹಿಂದೆ ಕುಡಿದು ಕುಪ್ಪಳಿಸಿ ಸಿಡಿಮದ್ದುಗಳು ಸಿಡಿಸಿ ಹಾರ ತುರಾಯಿಗಳಿಂದ ಮೆರೆಸಿ, ಆರ್ಕೆಸ್ಟ್ರಾ ಮೂಲಕ ವಿಜೃಂಭಿಸಿ ಕೊನೆಗೊಳ್ಳುವ ಅಂಬೇಡ್ಕರ್‌ರಲ್ಲ ನಮಗೆ ಬೇಕಿರುವುದು. ಬದುಕನ್ನು ಬದಲಿಸುವ, ಸಮಾಜವನ್ನು ಬದಲಿಸುವ ಜಾತಿ ಮತಗಳ ಆಚೆ ಮಾನವ ಪ್ರೇಮವನ್ನು ಬೆಳೆಸುವ ಸಮತೆ, ಸ್ವಾತಂತ್ರ್ಯ, ಭಾತೃತ್ವದ ತಳಹದಿಯಲ್ಲಿ ಜೀವಿಸುವ ಅಂಬೇಡ್ಕರ್‌ರನ್ನು ನಾವು ಜೀರ್ಣಸಿಕೊಂಡು ಸಮಾಜವೂ ಅದನ್ನು ಜೀರ್ಣಿಸಿಕೊಳ್ಳುವಂತೆ ಮಾಡಬೇಕಾಗಿದೆ. ಮತ್ತೊಂದು ಪ್ರಸಂಗವನ್ನು ನೆನಪಿಸುವುದು ಇಲ್ಲಿ ಪ್ರಸ್ತುತ ಎನಿಸುತ್ತದೆ. ಬಾಂಬೆ ಪ್ರಾಂತದ ಒಂದು ಹಳ್ಳಿಯಲ್ಲಿ ಕಾರಿನಲ್ಲಿ ಚಲಿಸುವಾಗ ಡಾ. ಅಂಬೇಡ್ಕರ್‌ರಿಗೆ ಒಂದು ದೃಶ್ಯ ಕಣ್ಣಿಗೆ ಬೀಳುತ್ತದೆ. ಅದೆಂದರೆ ನಾಲ್ಕಾರು ಮಕ್ಕಳು ಮೈಮೇಲೆ ಬಟ್ಟೆ ಇಲ್ಲದೆ ಉರಿ ಬಿಸಿಲಿನಲ್ಲಿ ಕುಳಿತು ಮೈಮೇಲೆ ಮಣ್ಣು ಸುರಿದುಕೊಂಡು ಆಟವಾಡುತ್ತಿರುತ್ತವೆ. ಅದನ್ನು ನೋಡಿದ ಡಾ. ಅಂಬೇಡ್ಕರ್ ಅವರು ಕಾರನ್ನು ನಿಲ್ಲಿಸಿ ಓಡೋಡಿ ಬಂದು ಬರೀ ಮೈಯಲ್ಲಿದ್ದ ಆ ಮಕ್ಕಳನ್ನು ತಬ್ಬಿ ಮುದ್ದಾಡಿ ಕಣ್ಣೀರಿಡುತ್ತಾ, ‘‘ಮಕ್ಕಳೇ ಈ ದೇಶದಲ್ಲಿ ಎಂತೆಂಥ ಜನರಿಗೆ ಏನೆಲ್ಲ ಸೌಲಭ್ಯಗಳನ್ನು ನಾನು ನಾನು ಕೊಡಿಸಲು ಹೋರಾಡಿದೆ. ಆದರೆ ನಿಮ್ಮ ಮೈಮೇಲೆ ಹಾಕಿಕೊಳ್ಳಲು ನನ್ನಿಂದ ಬಟ್ಟೆ ಕೊಡಿಸಲಿಕ್ಕೆ ಆಗಲಿಲ್ಲವಲ್ಲ ನನ್ನನ್ನು ಕ್ಷಮಿಸುತ್ತೀರ?’’ ಎಂದು ದುಃಖದಿಂದ ಹೇಳಿದರು. ಮಕ್ಕಳಿಗೆ ಆ ಮಾತುಗಳನ್ನು ಹೇಳುವಾಗ ಅವರನ್ನು ಕಾಡಿದ ನೋವುಗಳು ಎರಡು. ಒಂದು ನನ್ನ ಹೋರಾಟದ ಪ್ರತಿಫಲವನ್ನು ಕೆಲವೇ ಕೆಲವು ಜನರು ಅನುಭವಿಸುತ್ತಿದ್ದಾರೆ ಎಂಬುದಾದರೆ, ಮತ್ತೊಂದು ಎಷ್ಟೋ ಜನ ಅನಕ್ಷರಸ್ಥ ಮುಗ್ಧ ಬಡತನದಿಂದ ಬದುಕುವ ಅಮಾಯಕ ಜನರನ್ನು ನಾನು ಮುಟ್ಟಲಾಗಲಿಲ್ಲವಲ್ಲ. ನನ್ನ ಜೀವಿತಾವಧಿಯಲ್ಲಿ ಅವರನ್ನು ಇಂತಹ ಹೀನ ಸ್ಥಿತಿಯಲ್ಲಿಯೇ ಬಿಟ್ಟು ಹೋಗುತ್ತಿರುವೆನಲ್ಲ. ಇವರನ್ನು ಮೇಲೆತ್ತುವವರು ಯಾರು? ಎಂಬ ಬಹುದೊಡ್ಡ ಕೊರಗು ಅವರನ್ನು ಆವರಿಸಿತ್ತು. ಅಂದು ಅಂಬೇಡ್ಕರ್ ಅವರಿಗೆ ಕಂಡಂತೆ ನಮ್ಮ ಕಣ್ಣು ಮುಂದೆಯೂ ಇಂದು ಕೂಡ ನೂರಾರು ಜನ ಮಕ್ಕಳು ಮೈಮೇಲೆ ಬಟ್ಟೆಯೂ ಇಲ್ಲದೆ ತಿನ್ನುವ ಅನ್ನಕ್ಕಾಗಿ ಪರದಾಡುವುದನ್ನು ನೋಡುತ್ತಿರುತ್ತೇವೆ. ಆದರೆ ಅಂಬೇಡ್ಕರ್‌ವರ ಕರುಳು ಅಮಾಯಕರಿಗಾಗಿ ಮಿಡಿದಂತೆ ನಮಗೆ ಮಿಡಿಯಲಾಗುತ್ತಿಲ್ಲ ಯಾಕೆ. ಹಾಗಾದರೆ ನಾವು ಡಾಕ್ಟರ್ ಅಂಬೇಡ್ಕರ್‌ರನ್ನು ಕಾಣಬೇಕಾದದ್ದು ಎಲ್ಲಿ, ಬಡವರನ್ನು, ಅಮಾಯಕರನ್ನು, ಶೋಷಣೆಯನ್ನು, ನೋಡಿ ಮರುಗಿದ ಅಂಬೇಡ್ಕರ್ ಅವರ ತಾಯ್ತನವನ್ನು ಶಾಶ್ವತಗೊಳಿಸುವುದು ಹೇಗೆಂದು ಆಲೋಚಿಸಬೇಕಿದೆ. ಅವರಿಗಿದ್ದ ಈ ತಾಯ್ತನವೇ ಅಲ್ಲವೇ ಇಂದಿನ ಬಹುಸಂಖ್ಯಾತ ದಲಿತರ ಬದುಕಿಗೆ ಆಶಾಕಿರಣವಾಗಿದ್ದು. ದರ್ಪ ದಬ್ಬಾಳಿಕೆ ನೋವನ್ನು ನೋಡಿ ಮಿಡಿದ ಅವರ ಕರುಳು, ಇದನ್ನೆಲ್ಲ ಬದಲಿಸಲು ಹೊರಟು ಪೆನ್ನು ಹಿಡಿದ ಅವರ ಬೆರಳನ್ನು ಪ್ರತಿಯೊಬ್ಬ ಭಾರತೀಯ ಬಡವನೂ ಹೆಮ್ಮೆಯಿಂದ ನೆನೆಯ ಬೇಕಲ್ಲವೇ? ಡಾ. ಅಂಬೇಡ್ಕರ್ ಅವರು ‘‘ನನ್ನ ಜೀವನವೇ ಒಂದು ಸಂದೇಶ’’ ಎಂದರು. ಅದರ ಆಂತರಿಕ ಅರಿವು ನಮಗೆ ಬರಬೇಕಿತ್ತು. ನಾವು ಅವರ ಜೀವನವನ್ನು ಸೂಟು ಬೂಟು ಕೋಟಿನಲ್ಲಷ್ಟೆ ಕಂಡೆವು. ಅವರ ಬದುಕಿನ ತ್ಯಾಗದ ಸಾರವನ್ನು ಹೀರಿ ಶೋಷಿತ ಸಮುದಾಯದ ಕೆಲವರು ತಮ್ಮ ಬದುಕನ್ನು ಹಸನಾಗಿಸಿಕೊಳ್ಳಲು ಅವರನ್ನು ಹಿಂಬಾಲಿಸಿದರು. ಇಲ್ಲಿಯ ತನಕ ತಮ್ಮ ಬದುಕಿನ ಭಾಗ ದಂತಿದ್ದ ಅಂಬೇಡ್ಕರ್‌ರವರು ಬೌದ್ಧ ದಮ್ಮದ ಬಾಗಿಲಲ್ಲಿ ನಿಂತಾಗ ಅವರನ್ನು ಅಳೆದು ತೂಗುವ ಅರೆ ಪ್ರಜ್ಞಾವಸ್ಥೆಗೆ ಈ ಸಮಾಜ ಬಂದು ನಿಂತಿತ್ತು. ಡಾ. ಅಂಬೇಡ್ಕರ್ ಅವರು ಬೌದ್ಧ ದಮ್ಮಕ್ಕೆ ಹೋದದ್ದು ಸರಿಯೇ ತಪ್ಪೆಎನ್ನುವಂತಹ ಮೂರ್ಖತನದ ಸ್ಥಿತಿಯಲ್ಲಿ ಆಲೋಚಿಸಲಾರಂಭಿಸಿತ್ತು. ಬೌದ್ಧ ದಮ್ಮವನ್ನು ಒಂದು ಚಾರಿತ್ರಿಕ ಸಮರ್ಥನೆಗಾಗಿ, ಒಂದು ಐತಿಹಾಸಿಕ ಪರಂಪರೆಯನ್ನು ಶೋಷಿತ ಸಮುದಾಯಕ್ಕೆ ಗುರುತಿಸಿಕೊಡುವ ಸಲುವಾಗಿ ನಮ್ಮ ಮುಂದೆ ಇಟ್ಟರು ಎಂಬುದನ್ನು ಶೋಷಿತ ಸಮುದಾಯವು ಸಮರ್ಥಿಸಿಕೊಳ್ಳುವುದರಲ್ಲಿ ವಿಫಲವಾಯಿತು. ಅದರೆ ಅವರ ಜೀವನ ಸಂದೇಶದಲ್ಲಿ ಬುದ್ಧನೆಡೆಗೆ ನಡೆದ ಮಾರ್ಗವೇ ಬದುಕಿನ ಕೊನೆಯ ಸಂದೇಶ ಎಂಬುದನ್ನು ಮರೆಯಬಾರದಲ್ಲವೇ.
ಮೊದಲನೇ ಪ್ರಸಂಗವು ಸಂವಿಧಾನ ಬರೆಯುವಾಗ ಮಿಡಿದ ಅವರ ಬೆರಳುಗಳು ಬದಲಾವಣೆಯನ್ನು ಬಯಸಿದವು. ಹಾಗೆಯೇ ಅವರ ತೋರು ಬೆರಳು ಯಾವಾಗಲೂ ಮಾರ್ಗ ಸೂಚಕವಾಗಿದೆ. ದಿಕ್ಕು ಕಾಣದವರಿಗೆ ದಿಕ್ಕಾಗಿ ನಿಂತಿದೆ. ಆದರೆ ಆ ದಿಕ್ಕಿನೆಡೆಗೆ ಹೆಜ್ಜೆ ಇಡುವ ಪ್ರಯತ್ನವಾಗಬೇಕಷ್ಟೆ. ಎರಡನೇ ಪ್ರಸಂಗದಲ್ಲಿ ಅಮಾಯಕರನ್ನು ಕಂಡು ಅವರ ಕರುಳು ಮಿಡಿಯಿತು. ಈ ಕರುಳಿನ ಆಕ್ರಂದನ ಕೋಟ್ಯಂತರ ಬಲಿಷ್ಠ ಕರುಳುಗಳು ಅಮಾಯಕರಿಗಾಗಿ ಮಿಡಿಯಲಿ ಎಂಬ ಸಂದೇಶವನ್ನು ನೀಡಿತ್ತು. ಈಗ ಬಲಿತ ಕರುಳುಗಳು ಅಮಾಯಕ ಕಡೆಗೆ ಮಿಡಿಯುವುದೇ?.
ಕೊನೆಯದಾಗಿ ಒಂದು ಸತ್ಯವೆಂದರೆ ಒಬ್ಬ ಅಂಬೇಡ್ಕರ್‌ರಿಂದ ಇಷ್ಟೊಂದು ಬದಲಾವಣೆ ಸಾಧ್ಯವಾಗುವುದಾದರೆ ಅವರಿಂದ ಸೃಷ್ಟಿಸಲ್ಪಟ್ಟ ನೂರಾರು ಸಾವಿರಾರು ಅಂಬೇಡ್ಕರ್‌ಗಳಿಂದ ಇನ್ನೆಷ್ಟು ಬದಲಾವಣೆಯನ್ನ್ನು ಬಯಸ ಬಹುದು. ಆದರೆ ಅದು ಕೆಡವುವ ಕ್ರಿಯೆಗಿಂತ ಕಟ್ಟುವ ಕ್ರಿಯೆ ನಡೆದರೆ ಮಾತ್ರ ಸಾಧ್ಯವಾಗುತ್ತದೆ. ಹಾಗೆಯೇ ಅಂಬೇಡ್ಕರ್‌ರ ಬದುಕು ಪ್ರದರ್ಶನವಾಗದೇ ನಿದರ್ಶನವಾದರೆ ಮಾತ್ರ ಸಾಧ್ಯವಾಗುತ್ತದೆ.