ಕನ್ನಡ ವರ್ಚುವಲ್ ವಿಶ್ವವಿದ್ಯಾನಿಲಯದ ಕನಸು
ಇದು ಸಂಪೂರ್ಣವಾಗಿ ಅಂತರ್ಜಾಲದ ಮೂಲಕವೇ ಕೆಲಸ ಮಾಡುವ ವಿಶ್ವವಿದ್ಯಾನಿಲಯ. ವಿದ್ಯಾರ್ಥಿಗಳಿಗೆ ಬೇಕಾದ ಎಲ್ಲ ಪಠ್ಯ, ಮಾದರಿ ಪ್ರಶ್ನೆ, ಯೋಜನೆ, ಪರೀಕ್ಷೆ, ಎಲ್ಲವೂ ಅಂತರ್ಜಾಲದ ಮೂಲಕವೇ ನಡೆಸಲಾಗುತ್ತದೆ. ಹಾಗಿದ್ದೂ, ನೇರ ತರಗತಿಗಳೂ ಇರುತ್ತವೆ. ಕನ್ನಡವನ್ನು ಕಲಿಯಲು ಆಸಕ್ತರಾದವರು ಜಗತ್ತಿನ ಯಾವ ಮೂಲೆಯಲ್ಲೇ ಇದ್ದರೂ ಅವರು ತಮ್ಮ ಮನೆಯಲ್ಲೇ, ತಮಗೆ ಸೂಕ್ತವಾದ ಸಮಯದಲ್ಲಿ ಕಲಿಯಬಹುದು. ಅವರಲ್ಲಿ ಕಂಪ್ಯೂಟರ್ ಮತ್ತು ಅಂತರ್ಜಾಲ ಸಂಪರ್ಕ ಇರಬೇಕಷ್ಟೆ.
ಹಣಕಾಸಿನ ಹೆಚ್ಚಿನ ಹೊರೆ ಇಲ್ಲದೆ ಈ ಕನ್ನಡ ವರ್ಚುವಲ್(ವಾಸ್ತವೋಪಮ) ವಿಶ್ವವಿದ್ಯಾನಿಲಯ ಸ್ಥಾಪಿಸಿ, ಕನ್ನಡ ಕಲಿಕೆಯ ಉದ್ದೇಶ ಈಡೇರಿಸಬಹುದು ಎಂದು ಸಮಿತಿಯು ಶಿಫಾರಸು ಮಾಡಿ ಏಳು ವರ್ಷಗಳೇ ಕಳೆದಿದ್ದರೂ, ಇನ್ನೂ ವಿಶ್ವವಿದ್ಯಾನಿಲಯ ಆರಂಭವಾಗುವ ಯಾವುದೇ ಸೂಚನೆಗಳು ಕಂಡುಬರುತ್ತಿಲ್ಲ. ಆದರೆ, ನೆರೆಯ ತಮಿಳು ನಾಡು ಸರಕಾರ ಇಂಥದ್ದೊಂದು ಡಿಜಿಟಲ್ ವಿಶ್ವವಿದ್ಯಾನಿಲಯವನ್ನು 2001ರಲ್ಲೇ ಆರಂಭಿಸಿ, ವಿಶ್ವಾದ್ಯಂತ ನೆಲೆಸಿರುವ ತಮಿಳು ಭಾಷಿಕರಿಗೆ ಸೇವೆ ಒದಗಿಸುತ್ತಿದೆ.
ಸರಕಾರದ ಆಡಳಿತದಲ್ಲಿ ಡಿಜಿಟಲ್ ಕನ್ನಡದ ಅಭಿವೃದ್ಧಿ ಮತ್ತು ಅನುಷ್ಠಾನದ ಹೊಣೆಗಾರಿಕೆ ಯಾರದು? ಎಂಬ ಪ್ರಶ್ನೆಗೆ ಉತ್ತರವನ್ನು ಹುಡುಕುತ್ತಾ ಹೋದರೆ, ಗೊಂದಲ ಹೆಚ್ಚಾಗುತ್ತದೆಯೇ ಹೊರತು, ಯಾವುದೂ ಸ್ಪಷ್ಟವಾಗುವುದಿಲ್ಲ. ಸರಕಾರದ ಇಲಾಖೆಗಳ ನಡುವೆ ಸಮನ್ವಯದ ಕೊರತೆ ಮತ್ತು ಅಧಿಕಾರಿಗಳಲ್ಲಿ ಆಸಕ್ತಿಯ ಕೊರತೆ ಮತ್ತು ತಜ್ಞತೆಯ ಕೊರತೆಗಳು ಎದ್ದುಕಾಣುತ್ತವೆ. ಡಿಜಿಟಲ್ ಕನ್ನಡ ಅಭಿವೃದ್ಧಿ ಮತ್ತು ಅನುಷ್ಠಾನಕ್ಕಾಗಿ ಶಿಫಾರಸುಗಳನ್ನು ಮಾಡುವ ಸಂಸ್ಥೆಯಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವಿದೆ. ಅನುಷ್ಠಾನವನ್ನು ಮಾಡುವ ಹೊಣೆಗಾರಿಕೆಯು ‘ಸರಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ’ (ಡಿಪಿಎಆರ್) ಹಾಗೂ ‘ಕನ್ನಡ ಮತ್ತು ಸಂಸ್ಕೃತಿ ಇಲಾಖೆ’ ಈ ಎರಡು ಇಲಾಖೆಗಳಲ್ಲಿ ಹಂಚಿಹೋಗಿದೆ. ಡಾ.ಕೆ.ಚಿದಾನಂದಗೌಡ ಸಮಿತಿಯ ವರದಿಯ ಶಿಫಾರಸುಗಳನ್ನು ಯಾವ ಇಲಾಖೆಯ ಮೂಲಕ ಅನುಷ್ಠಾನಗೊಳಿಸಬೇಕು ಎಂಬುದು ಇನ್ನೂ ಗೊಂದಲದಲ್ಲಿಯೇ ಇದೆ. ಆದರೆ, ಯಾವ ಇಲಾಖೆಯೂ ಈ ಬಗ್ಗೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ತಮಿಳು ವಾಸ್ತವೋಪಮ (ವರ್ಚುವಲ್) ವಿಶ್ವವಿದ್ಯಾನಿಲಯದ ಮಾದರಿಯಲ್ಲಿ ಕನ್ನಡದಲ್ಲೂ ವಾಸ್ತವೋಪಮ ವಿಶ್ವವಿದ್ಯಾನಿಲಯವನ್ನು ಆರಂಭಿಸಲಾಗುವುದು ಎಂದು ಸರಕಾರವು ಘೋಷಿಸಿದೆ. ಆದರೆ, ಈ ಬಗ್ಗೆ ಸರಕಾರದ ಯಾವ ಯಾವ ಇಲಾಖೆಗಳು ಏನೆಲ್ಲ ಮಾಡಿವೆ ಎಂಬುದನ್ನು ಹುಡುಕುತ್ತಾ ಹೋದರೆ ದೊರೆಯುವ ಮಾಹಿತಿಗಳು ನಿರಾಶಾದಾಯಕವಾಗಿವೆ.
‘‘ಕನ್ನಡಕ್ಕೆ ಯೂನಿಕೋಡ್ ಶಿಷ್ಟತೆ ಕಡ್ಡಾಯ ಎಂದು ಆದೇಶಿಸಿ ಅಧಿಸೂಚನೆ ಹೊರಡಿಸದಿದ್ದರೆ ಸರಕಾರದ ವಿವಿಧ ಇಲಾಖೆಯವರು ಯೂನಿಕೋಡ್ ಬಳಸುವುದಿಲ್ಲ. ಅದನ್ನು ಬಳಸದೆ ರಾಜ್ಯದಲ್ಲಿ ಇ-ಆಡಳಿತ ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ಎಲ್ಲರೂ ಯೂನಿಕೋಡ್ ಬಳಸಿದರೆ ಮಾತ್ರ ಕನ್ನಡದ ಸುಧಾರಣೆ ಸಾಧ್ಯ’’ ಎಂದು ತಜ್ಞರು ಖಚಿತ ಧ್ವನಿಯಲ್ಲಿ ಹೇಳಿ, ಈ ಕುರಿತು ಸರಕಾರಿ ಆದೇಶವನ್ನು ಹೊರಡಿಸಲು ಎಲ್ಲರ ಮನವೊಲಿಸುವಲ್ಲಿ ಎರಡು ವರ್ಷಗಳೇ ಕಳೆದುಹೋದುದು ನಮ್ಮ ಆಡಳಿತ ಯಂತ್ರದ ಕಾರ್ಯವೈಖರಿಗೊಂದು ಸ್ಪಷ್ಟ ನಿದರ್ಶನವಾಗಿದೆ. ‘ಕನ್ನಡಕ್ಕೆ ಯೂನಿಕೋಡ್ ಕಡ್ಡಾಯ’ ಎಂದು ಅಧಿಸೂಚನೆ ಹೊರಡಿಸಲು ಪಾಂಟ್ ಸಮಸ್ಯೆ ಇದೆ ಎಂದು ಇ-ಆಡಳಿತ ಇಲಾಖೆ ಹೇಳಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕರೆದಿದ್ದ ಟೆಂಡರ್ ಅನ್ವಯ ಕನ್ನಡಕ್ಕೆ ಯೂನಿಕೋಡ್ ಫಾಂಟ್ ಅಭಿವೃದ್ಧಿಪಡಿಸಿದ ನಂತರವೇ ಯೂನಿಕೋಡ್ ಶಿಷ್ಟತೆಯನ್ನು ಕನ್ನಡಕ್ಕೆ ಕಡ್ಡಾಯಗೊಳಿಸುವ ಅಧಿಸೂಚನೆ ಹೊರಡಿಸಬಹುದು ಎಂಬುದು ಇ-ಆಡಳಿತ ಇಲಾಖೆಯ ಅಧಿಕಾರಿಗಳ ವಾದವಾಗಿತ್ತು. ಯೂನಿಕೋಡ್ ಪಾಂಟುಗಳೂ ಲಭ್ಯವಿಲ್ಲ ಎಂಬುದು ಅಧಿಕಾರಿಗಳಲ್ಲಿ ಇರುವ ಮಾಹಿತಿ ಕೊರತೆಯನ್ನು ಎತ್ತಿತೋರುತ್ತದೆ. ಕನ್ನಡದ ಹಲವು ಯೂನಿಕೋಡ್ ಪಾಂಟ್‌ಗಳು ಇಂಟರ್‌ನೆಟ್‌ನಲ್ಲಿ ಈಗಾಗಲೇ ಉಚಿತವಾಗಿ ಲಭ್ಯವಿರುವುದು ಅಧಿಕಾರಿಗಳಿಗೆ ತಿಳಿದೇ ಇರಲಿಲ್ಲ. ‘‘ಡಾ.ಕೆ.ಚಿದಾನಂದ ಗೌಡ ಅಧ್ಯಕ್ಷತೆಯ ಕನ್ನಡ ತಂತ್ರಾಂಶ ಅಭಿವೃದ್ಧಿ ಸಮಿತಿ ಸಲ್ಲಿಸಿರುವ ವರದಿ ಆಧರಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಲ್ಲಿಸಿದ್ದ ಕಾರ್ಯಯೋಜನೆಯ ಪ್ರಸ್ತಾವನೆಗೆ ಒಪ್ಪಿಗೆ ನೀಡಲಾಗಿದೆ’’ ಎಂದು ಇ-ಆಡಳಿತ ಇಲಾಖೆ ಹೇಳಿದೆ. ಆದರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಗಳು: ‘‘ಯೂನಿಕೋಡ್ ಶಿಷ್ಟತೆ ಕುರಿತು ಅಧಿಸೂಚನೆ ಹೊರಡಿಸುವುದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವ್ಯಾಪ್ತಿಯಲ್ಲಿಲ್ಲ’’ ಎಂದಿದ್ದರು. ಇವೆಲ್ಲವನ್ನೂ ನೋಡಿದರೆ ಸರಕಾರದ ಇಲಾಖೆಗಳ ನಡುವೆ ಸಮನ್ವಯದ ಕೊರತೆಯು ಎದ್ದುಕಾಣುತ್ತಿದೆ. ಕೊನೆಗೆ, ಎಲ್ಲ ಗೊಂದಲಗಳಿಗೆ ತೆರೆಬಿದ್ದ ನಂತರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೇ ಕನ್ನಡಕ್ಕೆ ಯೂನಿಕೋಡ್ ಕಡ್ಡಾಯ ಎಂದು 2012ರಲ್ಲಿ ಆದೇಶ ಹೊರಡಿಸಿದೆ.
ಡಿಜಿಟಲ್ ಕನ್ನಡ ಅಭಿವೃದ್ಧಿಯ ಬಹುನಿರೀಕ್ಷಿತ ಯೋಜನೆಯಾದ ‘‘ಕನ್ನಡದ ವಾಸ್ತವೋಪಮ ವಿಶ್ವವಿದ್ಯಾನಿಲಯ’’ದ ಸ್ಥಾಪನೆಯ ಕಗ್ಗಂಟು ಇನ್ನೂ ಬಿಚ್ಚಿಕೊಂಡಿಲ್ಲ. ‘‘ಕನ್ನಡ ತಂತ್ರಾಂಶ ಅಭಿವೃದ್ಧಿ ಸಮಿತಿ ರಚನೆಯಾಗಿದ್ದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವ್ಯಾಪ್ತಿಯಲ್ಲಿ. ಆದರೆ, ವಾಸ್ತವೋಪಮ ವಿಶ್ವವಿದ್ಯಾನಿಲಯ ಆರಂಭಕ್ಕೆ ಬೇಕಿರುವ ತೀರ್ಮಾನಗಳನ್ನು ನಮ್ಮ ಇಲಾಖೆಯ ವ್ಯಾಪ್ತಿಯಲ್ಲಿ ಕೈಗೊಳ್ಳಲು ಆಗದು. ಅದಕ್ಕೆ ಉನ್ನತ ಹಂತದಲ್ಲಿ ತೀರ್ಮಾನ ಆಗಬೇಕು. ವಿಶ್ವವಿದ್ಯಾನಿಲಯಕ್ಕೆ ಸಂಬಂಧಿಸಿದ ಮಸೂದೆಗೆ ವಿಧಾನಸಭೆೆ, ವಿಧಾನ ಪರಿಷತ್ತುಗಳಿಂದ ಅನುಮೋದನೆ ಬೇಕು’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. ಕನ್ನಡಕ್ಕೆ ಒಂದು ವಾಸ್ತವೋಪಮ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸುವುದು ತುರ್ತಾಗಿ ಆಗಬೇಕಾದ ಕೆಲಸ ಎಂದು ಶಿಫಾರಸು ನೀಡಿರುವ ಸಮಿತಿಯು ಅದರ ಕಾರ್ಯಾರಂಭಕ್ಕೆ ಹಲವು ಪ್ರಯತ್ನಗಳನ್ನೂ ಸಹ ಮಾಡಿತು. ಸಮಿತಿಯ ಅಧ್ಯಕ್ಷರಾದ ಡಾ.ಕೆ.ಚಿದಾನಂದಗೌಡ, ಸದಸ್ಯರಾದ ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಹಲವು ರೀತಿಯಲ್ಲಿ ಪ್ರಯತ್ನಗಳನ್ನು ಮಾಡಿದರು. ಅವರ ಪ್ರಯತ್ನಗಳಿಗೆ ಫಲ ಎಂದಿಗೆ ದೊರೆಯುತ್ತದೆಯೋ ಕಾದುನೋಡಬೇಕು.
ಇನ್ನು, ಈ ಕನ್ನಡದ ವಾಸ್ತವೋಪಮ ವಿಶ್ವವಿದ್ಯಾನಿಲಯದ ಕುರಿತಾದ ವಿವರಗಳನ್ನು ನೋಡೋಣ. ಇದು ಸಂಪೂರ್ಣವಾಗಿ ಅಂತರ್ಜಾಲದ ಮೂಲಕವೇ ಕೆಲಸ ಮಾಡುವ ವಿಶ್ವವಿದ್ಯಾನಿಲಯ. ವಿದ್ಯಾರ್ಥಿಗಳಿಗೆ ಬೇಕಾದ ಎಲ್ಲ ಪಠ್ಯ, ಮಾದರಿ ಪ್ರಶ್ನೆ, ಯೋಜನೆ, ಪರೀಕ್ಷೆ, ಎಲ್ಲವೂ ಅಂತರ್ಜಾಲದ ಮೂಲಕವೇ ನಡೆಸಲಾಗುತ್ತದೆ. ಹಾಗಿದ್ದೂ, ನೇರ ತರಗತಿಗಳೂ ಇರುತ್ತವೆ. ಕನ್ನಡವನ್ನು ಕಲಿಯಲು ಆಸಕ್ತರಾದವರು ಜಗತ್ತಿನ ಯಾವ ಮೂಲೆಯಲ್ಲೇ ಇದ್ದರೂ ಅವರು ತಮ್ಮ ಮನೆಯಲ್ಲೇ, ತಮಗೆ ಸೂಕ್ತವಾದ ಸಮಯದಲ್ಲಿ ಕಲಿಯಬಹುದು. ಅವರಲ್ಲಿ ಕಂಪ್ಯೂಟರ್ ಮತ್ತು ಅಂತರ್ಜಾಲ ಸಂಪರ್ಕ ಇರಬೇಕಷ್ಟೆ. ಕನ್ನಡ ಕಲಿಸುವ ಜಾಲತಾಣಗಳು ಬೇಕಾದಷ್ಟಿದ್ದರೂ, ಅವುಗಳು ಪ್ರಮಾಣಪತ್ರವನ್ನೇನೂ ನೀಡುವುದಿಲ್ಲ. ನೀಡಿದರೂ ಅದಕ್ಕೆ ಮಾನ್ಯತೆ ಇಲ್ಲ. ಅಧಿಕೃತ ವಿಶ್ವವಿದ್ಯಾನಿಲಯದ ಪ್ರಮಾಣಪತ್ರದೊಂದಿಗೆ ವಿಶ್ವದ ಯಾವುದೇ ಪ್ರದೇಶದ ನಿವಾಸಿಗಳು ಕನ್ನಡ ಭಾಷಾ ಶಿಕ್ಷಣವನ್ನು ಅಧಿಕೃತವಾಗಿ ಪಡೆಯುವ ಈ ಯೋಜನೆಗೆ ಗ್ರಹಣ ಹಿಡಿದಿದೆ.
ಡಾ. ಯು.ಬಿ. ಪವನಜ
ಹಣಕಾಸಿನ ಹೆಚ್ಚಿನ ಹೊರೆ ಇಲ್ಲದೆ ಈ ಕನ್ನಡ ವಾಸ್ತವೋಪಮ ವಿಶ್ವವಿದ್ಯಾನಿಲಯ ಸ್ಥಾಪಿಸಿ, ಕನ್ನಡ ಕಲಿಕೆಯ ಉದ್ದೇಶ ಈಡೇರಿಸಬಹುದು ಎಂದು ಸಮಿತಿಯು ಶಿಫಾರಸು ಮಾಡಿ ಏಳು ವರ್ಷಗಳೇ ಕಳೆದಿದ್ದರೂ, ಇನ್ನೂ ವಿಶ್ವವಿದ್ಯಾನಿಲಯ ಆರಂಭವಾಗುವ ಯಾವುದೇ ಸೂಚನೆಗಳು ಕಂಡುಬರುತ್ತಿಲ್ಲ. ಆದರೆ, ನೆರೆಯ ತಮಿಳುನಾಡು ಸರಕಾರ ಇಂಥದ್ದೊಂದು ಡಿಜಿಟಲ್ ವಿಶ್ವವಿದ್ಯಾನಿಲಯವನ್ನು 2001ರಲ್ಲೇ ಆರಂಭಿಸಿ, ವಿಶ್ವದಾದ್ಯಂತ ನೆಲೆಸಿರುವ ತಮಿಳು ಭಾಷಿಕರಿಗೆ ಸೇವೆ ಒದಗಿಸುತ್ತಿದೆ. ಕನ್ನಡ ತಂತ್ರಾಂಶ ತಜ್ಞ ಡಾ.ಯು.ಬಿ.ಪವನಜ ಹೀಗೆ ಹೇಳುತ್ತಾರೆ : ‘‘ನಾನು ತಮಿಳುನಾಡಿಗೆ ಹೋಗಿ, ತಮಿಳು ವಾಸ್ತವೋಪಮ ವಿಶ್ವವಿದ್ಯಾನಿಲಯದ (www.tamilvu.org) ಬಗ್ಗೆ ಮಾಹಿತಿ ಸಂಗ್ರಹಿಸಿದ್ದೇನೆ. ಕನ್ನಡದಲ್ಲಿ ಅದೇ ಮಾದರಿಯ ವಿಶ್ವವಿದ್ಯಾನಿಲಯ ಆರಂಭಿಸುವ ಬಗ್ಗೆ ಟಿಪ್ಪಣಿ ಸಿದ್ಧಪಡಿಸಿ ಸರಕಾರಕ್ಕೆ ಕೊಟ್ಟಿದ್ದೇನೆ. ಆದರೆ, ಇದುವರೆಗೆ ಯಾವುದೇ ಕೆಲಸ ಆಗಿಲ್ಲ’’ ‘‘ಕನ್ನಡ ಮಾತ್ರವಲ್ಲದೆ, ವಿವಿಧ ಜ್ಞಾನಶಾಖೆಗಳನ್ನು ಒಳಗೊಳ್ಳುವ ವಾಸ್ತವೋಪಮ ವಿಶ್ವವಿದ್ಯಾನಿಲಯವನ್ನು ಉನ್ನತ ಶಿಕ್ಷಣ ಇಲಾಖೆಯವರು ರೂಪಿಸುತ್ತಾರೆ. ಕನ್ನಡ ವಾಸ್ತವೋಪಮ ವಿಶ್ವವಿದ್ಯಾನಿಲಯದ ಕೆಲಸವೂ ಇದರ ವ್ಯಾಪ್ತಿಯಲ್ಲೇ ಬರುತ್ತದೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ನನ್ನಲ್ಲಿ ಹೇಳಿದ್ದರು. ಆದರೆ, ಈಗ ಆ ಅಧಿಕಾರಿ ನಿವೃತ್ತರಾಗಿದ್ದಾರೆ, ಇಲಾಖೆಯವರು ಇದುವರೆಗೆ ಏನೂ ಮಾಡಿಲ್ಲ’’ ಎನ್ನುತ್ತಾರೆ ಪವನಜ. ಈ ವಿ.ವಿ.ಯಲ್ಲಿ ಹಣಕಾಸಿನ ಹೊರೆಯಾಗುವ ಸಿಬ್ಬಂದಿಗೆ ಬದಲು ಸೀಮಿತ ಸಂಖ್ಯೆಯ ಮುಖ್ಯ ಸಿಬ್ಬಂದಿ ಮಾತ್ರ ಇರುತ್ತಾರೆ. ಶೈಕ್ಷಣಿಕ ತಂತ್ರಾಂಶಗಳ ತಯಾರಿಕೆ, ಡಿಜಿಟಲ್ ಗ್ರಂಥಾಲಯ ನಿರ್ಮಾಣ ಮತ್ತು ಅವುಗಳ ನಿರಂತರ ನಿರ್ವಹಣೆ ವಿಶ್ವವಿದ್ಯಾನಿಲಯದ ಪ್ರಮುಖ ಕಾರ್ಯಗಳಾಗಿರುತ್ತವೆ. ಈ ತಂತ್ರಾಂಶಗಳನ್ನು ಅಂತರ್ಜಾಲ ಸಂಪರ್ಕ ಇಲ್ಲದವರಿಗೂ ವಿತರಿಸಬಹುದು’ ಎಂದು ಈ ವಿಶ್ವವಿದ್ಯಾನಿಲಯದ ಬಗ್ಗೆ ಸಿದ್ಧಪಡಿಸಿರುವ ಪ್ರಸ್ತಾವನೆಯಲ್ಲಿ ಅವರು ಉಲ್ಲೇಖಿಸಿದ್ದಾರೆ. ವಾಸ್ತವೋಪಮ ವಿಶ್ವವಿದ್ಯಾನಿಲಯ ನಿರ್ಮಾಣಕ್ಕೆ ಆರಂಭಿಕ ಮೊತ್ತವಾಗಿ ಅಂದಾಜು ರೂ. 3 ರಿಂದ 5 ಕೋಟಿ ಬೇಕಾಗಬಹುದು. ವಾರ್ಷಿಕ ಒಂದು ಕೋಟಿ ರೂ.ಗಳ ನಿರ್ವಹಣಾ ವೆಚ್ಚ ಸಾಕಾಗುತ್ತದೆ. ವಿಶ್ವವಿದ್ಯಾನಿಲಯ ಕಾರ್ಯಾರಂಭಿಸಿದ ನಂತರ, ಕೋರ್ಸ್ ಗಳ ಶುಲ್ಕದ ಮೂಲಕವೂ ಆದಾಯ ಬರುತ್ತದೆ.
ವಾಸ್ತವೋಪಮ ವಿಶ್ವವಿದ್ಯಾನಿಲಯವು ಅತ್ಯುತ್ತಮ ಗುಣಮಟ್ಟದ ಕನ್ನಡ ಕಲಿಕಾ ಸಾಮಗ್ರಿಗಳನ್ನು ಕನ್ನಡಿಗರಿಗೆ, ಕನ್ನಡ ಕಲಿಯುವ ಆಸೆ ಇರುವವರಿಗೆ ಅಂತರ್ಜಾಲ ಮಾಧ್ಯಮದ ಮೂಲಕ ತಲುಪಿಸಬಹುದು. ಇದರ ಶೈಕ್ಷಣಿಕ ಕಾರ್ಯಕ್ರಮಗಳು ಕನ್ನಡ ಅಕ್ಷರಾಭ್ಯಾಸದಿಂದ ಆರಂಭಿಸಿ, ಕನ್ನಡದಲ್ಲಿ ಅಂತರ್ಜಾಲ ಆಧಾರಿತ ಉನ್ನತ ಸಂಶೋಧನೆಯಂತಹ ವಿವಿಧ ಕೋರ್ಸ್ ಗಳವರೆಗೆ ವಿಸ್ತರಿಸಿರುತ್ತವೆ. ಪ್ರವಾಸಿಗರಿಗೆ, ವಲಸಿಗರಿಗೆ ಕನ್ನಡ ಕಲಿಸುವ ಕೋರ್ಸ್‌ಗಳನ್ನೂ ರೂಪಿಸಬಹುದು. ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಮತ್ತು ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರ ಅನುಕೂಲಕ್ಕಾಗಿ ಡಿಜಿಟಲ್ ಗ್ರಂಥಾಲಯ ರೂಪಿಸಬೇಕು. ಪುಸ್ತಕಗಳು, ನಿಘಂಟುಗಳು ಮತ್ತು ಇತರ ಪರಾಮರ್ಶನ ಎಂಬ ಹೆಸರಿನ ಮೂರು ವಿಭಾಗಗಳ ಅಡಿ ಗ್ರಂಥಾಲಯದಲ್ಲಿ ಮಾಹಿತಿ ಲಭ್ಯವಾಗಬೇಕು. ಇವೆಲ್ಲ ಆಶಯಗಳ ಸಾಕಾರಕ್ಕಾಗಿ ಮತ್ತು ಡಾ.ಕೆ.ಚಿದಾನಂದಗೌಡ ಸಮಿತಿಯ ವರದಿಯ ಅನುಷ್ಠಾನಕ್ಕಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕಾರ್ಯಪ್ರವೃತ್ತವಾಗುವುದು ಅಗತ್ಯವಿದೆ.