ಅಧ್ಯಯನ ಮತ್ತು ಅರಿವು
ಲೈಬ್ರರಿ
ಭಾಗ 1
ವಿಚಿತ್ರವಾದ ಚೌಕಟ್ಟಿನಲ್ಲಿ ಮಕ್ಕಳು ಬಂದಿಯಾಗಿದ್ದು, ಅವರಿಗೆ ವಿಧಿಸಿದ ಎಲ್ಲಾ ವಿಷಯಗಳನ್ನೂ ಅಧ್ಯಯನ ಮಾಡಲು ಸಾಧ್ಯವಾಗದೇ ಇರುವುದರಿಂದ ನಿಂದನೆಗೆ, ದಂಡನೆಗೆ ಒಳಗಾಗಿ ಅಪರಾಧಿಗಳಂತೆ ತಲೆತಗ್ಗಿಸಿಕೊಂಡು ನಿಲ್ಲಬೇಕು. ಅವರನ್ನು ಪಕ್ಕದಲ್ಲಿ ನಿಲ್ಲಿಸಿಕೊಂಡು ತಂದೆ ತಾಯಿಯರು ಶಾಲಾ ಮಂಡಳಿಯ ಮುಂದೆ ಭಿಕ್ಷುಕರಂತೆ ಕೃಪೆಯನ್ನು ಬೇಡಿಕೊಂಡು ಅಂಗಲಾಚುತ್ತಿರಬೇಕು.
ಅದೊಂದು ಶಾಲೆ. ಆ ಶಾಲೆಯಲ್ಲಿ ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದ ಹುಡುಗನ ತಂದೆ ತಾಯಿಯರನ್ನು ಮುಖ್ಯೋಪಾಧ್ಯಾಯರು ಕರೆಯಿಸಿದರು. ಶಾಲೆಯವರು ಹೇಳುತ್ತಿರುವುದೇನೆಂದರೆ, ‘‘ನಿಮ್ಮ ಹುಡುಗ ಸರಿಯಾಗಿ ಓದುವುದಿಲ್ಲ. ಅವನನ್ನು ಹತ್ತನೇ ತರಗತಿಗೆ ಕಳುಹಿಸಲಾಗುವುದಿಲ್ಲ. ಏಕೆಂದರೆ, ಅವನು ಹತ್ತನೇ ತರಗತಿಯಲ್ಲಿ ಅನುತ್ತೀರ್ಣನಾದರೆ ನಮಗೆ ಫಲಿತಾಂಶದ ಶೇಕಡಾವಾರು ಸಾಧನೆಗೆ ಕೊರತೆಯಾಗುತ್ತದೆ. ಹುಡುಗ ಬೆಳೆದುಬಿಟ್ಟಿದ್ದಾನೆ. ಈಗಾಗಲೇ ಸಾಕಷ್ಟು ಫೇಲಾಗಿದ್ದಾನೆ. ಮತ್ತೆ ಫೇಲಾಗುವುದು ಬೇಡಾಂದ್ರೆ, ಪಾಸ್ ಮಾಡುತ್ತೇವೆ. ಆದರೆ ಟಿಸಿ ಕೊಡುತ್ತೇವೆ. ಬೇರೆ ಶಾಲೆಗೆ ಸೇರಿಸಿಕೊಳ್ಳಿ. ನಮ್ಮ ಶಾಲೆಯಲ್ಲಂತೂ ಅವನನ್ನು ಪಾಸ್ ಮಾಡಿ ಇಟ್ಟುಕೊಳ್ಳಲಾಗುವುದಿಲ್ಲ’’.
ತಂದೆ ತಾಯಿಗೆ ರೇಗಿತ್ತು. ‘‘ಅವನು ಓದಿಲ್ಲ ಎಂದರೆ, ಫೇಲಾಗಲಿ, ಆದರೆ ಇದೆಂತದ್ದು ಆಫರ್? ಪಾಸ್ ಮಾಡ್ತೀವಿ, ಬೇರೆ ಶಾಲೆಗೆ ಸೇರಿಸಿ ಎಂದರೆ?’’ ‘‘ಏನು ಮಾಡಿದರೂ ನಿಮ್ಮ ಮಗ ಓದಲ್ಲ, ಬರೆಯಲ್ಲ. ಅವನಿಗೆ ವಿದ್ಯೆ ತಲೆಗೆ ಹತ್ತಲ್ಲ. ಅವನು ಹತ್ತನೇ ಕ್ಲಾಸ್ ಪಾಸ್ ಆಗಲ್ಲ. ಅವನು ನಮ್ಮ ಶಾಲೆಗೆ ಬೇಡ’’. ಇದು ಮುಖ್ಯೋಪಾಧ್ಯಾಯರ ಸ್ಪಷ್ಟ ಮಾತು.
ಪಾಸ್ ಮಾಡ್ತೀವಿ, ಅವನು ಬೇಡ
ಆ ಹುಡುಗ ಆ ಶಾಲೆಯಲ್ಲಿ ಸುಮಾರು ಏಳೆಂಟು ವರ್ಷಗಳ ಕಾಲ ಓದಿದ್ದಾನೆ. ಆದರೂ ಅವನಿಗೆ ಓದಲು ಬರೆಯಲು ಬಂದಿಲ್ಲ. ಈಗ ಹತ್ತನೇ ಕ್ಲಾಸ್ಗೆ ಅವನು ಬಂದರೆ ಶೇಕಡಾವಾರು ಫಲಿತಾಂಶದಲ್ಲಿ ಅವರಿಗೆ ಕಡಿಮೆಯಾಗತ್ತಂತೆ. ಅದಕ್ಕೆ ಪಾಸ್ ಅಂತ ಮಾಡಿ ಕಳುಹಿಸುವಂತಹ ಮಹಾ ಔದಾರ್ಯ ತೋರಲು ಸಿದ್ಧರಾಗಿದ್ದಾರೆ!
ಇದು ಹಲವು ಮಕ್ಕಳ ಕಥೆ. ವಿಚಿತ್ರವಾದ ಚೌಕಟ್ಟಿನಲ್ಲಿ ಮಕ್ಕಳು ಬಂಧಿಯಾಗಿದ್ದು, ಅವರಿಗೆ ವಿಧಿಸಿದ ಎಲ್ಲಾ ವಿಷಯಗಳನ್ನೂ ಅಧ್ಯಯನ ಮಾಡಲು ಸಾಧ್ಯವಾಗದೇ ಇರುವುದರಿಂದ ನಿಂದನೆಗೆ, ದಂಡನೆಗೆ ಒಳಗಾಗಿ ಅಪರಾಧಿಗಳಂತೆ ತಲೆತಗ್ಗಿಸಿಕೊಂಡು ನಿಲ್ಲಬೇಕು. ಅವರನ್ನು ಪಕ್ಕದಲ್ಲಿ ನಿಲ್ಲಿಸಿಕೊಂಡು ತಂದೆ ತಾಯಿಯರು ಶಾಲಾ ಮಂಡಳಿಯ ಮುಂದೆ ಭಿಕ್ಷುಕರಂತೆ ಕೃಪೆಯನ್ನು ಬೇಡಿಕೊಂಡು ಅಂಗಲಾಚುತ್ತಿರಬೇಕು.
ಫುಟ್ಬಾಲ್ ಲೈಬ್ರರಿ
ಆ ಹುಡುಗನ ಮಾತಾಡಿಸಿದೆ. ಅವನಿಗೆ ಭಾಷೆ ಇಂಗ್ಲಿಷ್ ಬರುತ್ತದೆ. ಕನ್ನಡವೂ ಕೂಡ ಓದಲು ಬರೆಯಲು ಸುಮಾರಾಗಿ ಬರುತ್ತದೆ. ಇನ್ನುಳಿದಂತೆ ಲೆಕ್ಕ, ವಿಜ್ಞಾನ, ಸಮಾಜ ಶಾಸ್ತ್ರ, ಹಿಂದಿ; ಎಲ್ಲವೂ ಪರಮ ಕಷ್ಟ. ಸಾಲದಕ್ಕೆ, ಅವನ ತಂದೆ ಮತ್ತು ತಾಯಿ ಹೇಳಿದಂತೆ, ‘‘ಅವನಿಗೆ ಫುಟ್ಬಾಲ್ ಇಷ್ಟ. ಅದರದ್ದೇನೇನೋ ಮಾಡ್ಕೊಂಡಿರ್ತಾನೆ’’.
ಅದೇನು ಮಾಡ್ತಾನೆ ಅಂತ ಹುಡುಗನಿಗೆ ಕೇಳಿದೆ. ‘‘ನಾನು ಫುಟ್ಬಾಲ್ದು ಲೈಬ್ರರಿ ಮಾಡಿದ್ದೀನಿ’’ ಅಂದ. ಅವರ ಮನೆಯಲ್ಲಿ ಫುಟ್ಬಾಲ್ಗೆ ಸಂಬಂಧಪಟ್ಟಂತೆ ಒಂದೂ ಪುಸ್ತಕ ಕಾಣಲಿಲ್ಲ. ಒಂದೋ ಎರಡೋ ಫುಟ್ಬಾಲ್ ಚೆಂಡುಗಳನ್ನು ಬಿಟ್ಟರೆ ಇನ್ನೇನೂ ಇಲ್ಲ.
‘‘ಇಲ್ಲಾ ಅಂಕಲ್, ನನ್ನ ಸಿಸ್ಟಮ್ನಲ್ಲಿ’’ ಎಂದು ಕಂಪ್ಯೂಟರ್ನಲ್ಲಿ ಅವನ ಲೈಬ್ರರಿ ತೋರಿಸಿದ. ವಿಶ್ವ ಫುಟ್ಬಾಲ್ ಆಟದ ಚರಿತ್ರೆಯೇ ಅಲ್ಲಿದೆ. ಬೇರೆ ಬೇರೆ ಫೋಲ್ಡರ್ಗಳಲ್ಲಿ ಭಾರತವೇ ಮೊದಲ್ಗೊಂಡು ವಿಶ್ವದ ಫುಟ್ಬಾಲ್ ಪಂದ್ಯಗಳ ಎಲ್ಲಾ ವಿವರಗಳು, ಆಟಗಾರರು, ತರಬೇತಿದಾರರು; ಈ ಎಲ್ಲಾ ವಿವರ ಮತ್ತು ಫೋಟೊಗಳ ಬಹುದೊಡ್ಡ ಸಂಗ್ರಹ. ಆಟದ ಹುಟ್ಟು, ಬೆಳವಣಿಗೆ, ಅದರ ಮಾರ್ಪಾಡುಗಳು, ವಿಶಿಷ್ಟವಾದ ಘಟನೆಗಳು, ಫುಟ್ಬಾಲ್ ಆಟದ ನಿಯಮಗಳು, ತಂತ್ರಗಾರಿಕೆಗಳು ಇತ್ಯಾದಿಗಳೆಲ್ಲವೂ ಅವನ ಕಂಪ್ಯೂಟರ್ನಲ್ಲಿ ಜೋಪಾನವಾಗಿ ಸಂಗ್ರಹಿತವಾಗಿವೆ. ಕ್ರೀಡೆಯ ವಿಷಯದಲ್ಲಿ ಅಷ್ಟೇನೂ ಹೆಚ್ಚು ತಿಳಿಯದವನಾದ ನನ್ನಂತಹವನಿಗಂತೂ ಫುಟ್ಬಾಲಿನ ಚರಿತ್ರೆಯಿಂದ ಹಿಡಿದು ಪ್ರಸ್ತುತದವರೆಗೂ ಎಲ್ಲಾ ಮಾಹಿತಿಗಳಿವೆ. ಬಹು ಮೆಚ್ಚುಗೆಯ ಅಂಶವೆಂದರೆ ಅವುಗಳನ್ನು ವಿಭಾಗಿಸಿ ಮತ್ತು ಸಂಗ್ರಹಿಸಿರುವ ರೀತಿ. ಒಂದೊಂದು ವಿಷಯಗಳಿಗನುಸಾರವಾಗಿ ಫೋಲ್ಡರ್ಗಳಿವೆ. ಅದರಲ್ಲಿ ಚಿತ್ರಗಳು, ಪಿಡಿಎಫ್ ಮತ್ತು ವರ್ಡ್ ಡಾಕ್ಯುಮೆಂಟಲ್ಲಿರುವ ಲೇಖನಗಳು, ಕಾಮೆಂಟರಿಗಳ ಧ್ವನಿ ಸಂಗ್ರಹಗಳು, ವೀಡಿಯೊಗಳು; ಹೀಗೆ ಎಲ್ಲವೂ ಇವೆ. ಇದನ್ನು ಹೇಳಿ ಕೊಟ್ಟವರು ಯಾರು? ಎಂದು ಕೇಳಿದೆ. ಅವನೇ ಮಾಡಿದ್ದಾನೆ. ಮೊದಲು ಎಲ್ಲಾ ರಾಶಿಗಳನ್ನೂ ಒಟ್ಟಿಗಿಟ್ಟಿಕೊಂಡು ಹುಡುಕಲು ಒದ್ದಾಡುತ್ತಿದ್ದುದರಿಂದ ಅದನ್ನೆಲ್ಲಾ ಬೇರೆ ಬೇರೆಯಾಗಿ ವಿಂಗಡಿಸಿ, ನಂತರ ಸಾಮ್ಯತೆ ಇರುವ ವಿಷಯಗಳನ್ನೆಲ್ಲಾ ಒತ್ತೊಟ್ಟಿಗೆ ಫೋಲ್ಡರ್ಗಳನ್ನು ಮಾಡಿ ಸಂಗ್ರಹಿಸಿದ್ದಾನೆ. ಉದಾಹರಣೆಗೆ ಅರ್ಜೆಂಟೈನಾದ ಫುಟ್ಬಾಲ್ ಆಟಗಾರ ಮರಡೋನನ ಫೋಲ್ಡರ್ ತೆಗೆದರೆ, ಅವನ ಬದುಕು, ಕ್ರೀಡೆ, ಸಾಧನೆಗಳು, ವಿವಾದಗಳು; ಹೀಗೆ ಪ್ರತಿಯೊಂದೂ ಕೂಡ ಲೇಖನಗಳ ರೂಪದಲ್ಲಿ, ಚಿತ್ರಗಳು ಮತ್ತು ವೀಡಿಯೊಗಳ ಸಂಗ್ರಹದಲ್ಲಿದೆ. ಅದೇ ರೀತಿ ಇತರ ಆಟಗಾರರು ಮತ್ತು ಪಂದ್ಯಗಳು. ಆ ಹುಡುಗನ ಫುಟ್ಬಾಲ್ ಮೇಲಿನ ಪ್ರೇಮವನ್ನು ನೋಡಿ, ನೀನು ಆಡುತ್ತೀಯಾ ಎಂದು ಕೇಳಿದೆ. ಆಡುತ್ತಾನಂತೆ, ಆದರೆ ಹೆಚ್ಚಿನ ಸಮಯವನ್ನು ವಿನಿಯೋಗಿಸಲು ಸಾಧ್ಯವಾಗುವುದಿಲ್ಲವಂತೆ. ಅವನಿಗೆ ಬರದೇ ಇರುವ ವಿಷಯಗಳಾದ ಗಣಿತ, ವಿಜ್ಞಾನಗಳನ್ನು ಕಲಿಯಲೇ ಬೇಕಂತೆ. ಇಲ್ಲವಾದರೆ ಅವನು ಫೇಲ್ ಆಗುತ್ತಾನಂತೆ.
ಬೇಸಿಕ್ ಎಜುಕೇಶನ್ ಬೇಕೇಬೇಕು
ಅವನಿಗೆ ಆಸಕ್ತಿ ಮತ್ತು ಸಾಮರ್ಥ್ಯ ಇಲ್ಲದಿರುವ ವಿಷಯಗಳ ಬಗ್ಗೆ ಅವನ ಮೇಲೆ ಏಕೆ ಒತ್ತಡ ತರುತ್ತೀರಿ? ಅವನ ಇಷ್ಟದ ಫುಟ್ಬಾಲ್ಗೇ ಬಿಡುವುದು ತಾನೇ? ಎಂದು ಕೇಳಿದರೆ, ಹತ್ತನೇ ಕ್ಲಾಸ್ ಒಂದು ಮಾಡಿಕೊಂಡು ಬಿಡಲಿ ಆಮೇಲೆ ಅದೇನು ಮಾಡ್ತಾನೋ ಮಾಡಲಿ. ಬೇಸಿಕ್ ಎಜುಕೇಶನ್ ಬೇಕೇಬೇಕು. ಮೊದಲು ಎಜುಕೇಶನ್ ಅಲ್ವಾ ಸರ್ ಇಂಪಾರ್ಟೆಂಟು? ಎನ್ನುತ್ತಾನೆ ಅವನ ತಂದೆ. ಆದರೆ ಬೇಸಿಕ್ ಎಜುಕೇಶನ್ ಅನ್ನೋದು ಯಾವುದರಲ್ಲಿದೆ ಎಂಬುದೇ ಇನ್ನೂ ನಮ್ಮ ಪೋಷಕರಿಗೆ ಅರ್ಥವಾಗದ ವಿಷಯ. ಆ ಹುಡುಗನ ಕೇಳಿದರೆ, ನಮ್ಮ ದೇಶದಲ್ಲಿ ಒಂದು ಸಶಕ್ತ ಫುಟ್ಬಾಲ್ ಟೀಂ ಕಟ್ಟಬೇಕೆಂಬ ಕನಸನ್ನು ಹೊಂದಿದ್ದಾನೆ. ಹಾಗೂ ಹಾಗೆ ಮಾಡುವ ಸಾಧ್ಯವಾಗುವ ಆಸಕ್ತಿಯೂ ಇದೆ, ಆ ಶಕ್ತಿಯೂ ಇದೆ ಎಂಬ ಲಕ್ಷಣಗಳನ್ನು ತೋರುತ್ತಾನೆ. ಲೈಬ್ರರಿ ಎಂದರೆ ಗ್ರಂಥಾಲಯ ಅಥವಾ ಪುಸ್ತಕಗಳ ಸಂಗ್ರಹಾಲಯ ಎಂದಷ್ಟೇ ತಿಳಿದಿರುವ ಆ ಹುಡುಗನ ತಂದೆ ತಾಯಿಗೆ ಅವನು ಇಟ್ಟುಕೊಂಡಿರುವ ಫುಟ್ಬಾಲ್ ಸಂಬಂದಿತ ಫೋಟೊ, ಧ್ವನಿ ಸುರುಳಿ, ವೀಡಿಯೊಗಳ ಲೈಬ್ರರಿ ಅರ್ಥವಾಗುತ್ತಿಲ್ಲ. ತನಗೆ ಬೇಡದೆಯೇ ಇರುವ ವಿಷಯಗಳನ್ನು ಕಲಿಯಲು ಒತ್ತಾಯಿಸುತ್ತಾ, ತನಗೆ ಮಹಾಸಕ್ತಿ ಇರುವ ವಿಷಯವನ್ನು ಅಭ್ಯಾಸ ಮಾಡಲು ಅಧ್ಯಯನ ಮಾಡಲು ಬಿಡದೇ ಇರುವ ಅವನಿಗೆ ಮನೆಯವರ ಮೇಲೆ ಮತ್ತು ಶಾಲೆಯ ಮೇಲೆ ಭಯಂಕರ ಕೋಪವಿದೆ. ಎಷ್ಟೋ ಸಲ ಮನೆ ಬಿಟ್ಟು ಓಡಿ ಹೋಗೋಣ ಎನಿಸುತ್ತದೆ. ಆಮೇಲೆ ಏನೇನೋ ಎಮೋಶನಲ್ ಹೈಡ್ರಾಮಗಳು ತಲೆಯೆತ್ತಿ ಮನೆಯಲ್ಲಿ ನಿಲ್ಲುತ್ತಾನಂತೆ. ನನಗೆ ನಮ್ಮಪ್ಪ ಅಮ್ಮಂದು ಏನೂ ಬೇಡ, ಲ್ಯಾಪ್ಟಾಪ್ ಒಂದು ತೆಗೆದುಕೊಂಡು ಹೊರಟು ಹೋಗಿ ಬಿಡುತ್ತೇನೆ ಎಂದು ಸುಮಾರು ನಾಲ್ಕು ಗಂಟೆಯ ಸಮಯದಲ್ಲಿ ಮಾತಾಡುವಾಗ ಕನಿಷ್ಠ ಪಕ್ಷ ಹತ್ತನ್ನೆರಡು ಸಲ ಗೊಣಗಿದ್ದ. ನಾನೊಂದು ದಿನ ಎಲ್ಲಾ ಕ್ರೀಡೆಗಳ ಬಗ್ಗೆಯೂ ಎಲ್ಲಾ ಬಗೆಯ ವಿಷಯಗಳನ್ನು ಸಂಗ್ರಹಿಸಿ ಡಿಜಿಟಲ್ ಲೈಬ್ರರಿ ಮಾಡುತ್ತೇನೆ ಎನ್ನುತ್ತಾನೆ.
ಲೈಬ್ರರಿ ಏಕೆ ಬೇಕು?
ಅವನ ಜೊತೆ ನಾನು ಲೈಬ್ರರಿಯ ಬಗ್ಗೆ ಮಾತನಾಡಿದ ಸಂವಾದದ ಸಾರಾಂಶವನ್ನು ಗಮನಿಸಿ. ‘‘ಲೈಬ್ರರಿ ಯಾಕೆ ಮಾಡ್ಬೇಕು?’’
‘‘ಲೈಬ್ರರಿ ಮಾಡಿದರೆ, ಒಂದು ವಿಷಯಕ್ಕೆ ಸಂಬಂಧಪಟ್ಟ ಎಲ್ಲಾ ಮಾಹಿತಿಗಳೂ, ವಿವರಗಳು ಒಂದು ಕಡೆ ಇರತ್ತೆ. ಸಂಶೋಧನೆ ಮತ್ತು ಅಧ್ಯಯನ ಮಾಡುವವರಿಗೆ ಅವೆಲ್ಲಾ ಬೇಕಾಗತ್ತೆ’’.
‘‘ರಿಸರ್ಚ್ ಯಾಕೆ ಮಾಡ್ಬೇಕು?’’
‘‘ರಿಸರ್ಚ್ ಮಾಡಿದರೆ, ಆ ವಿಷಯ ಚೆನ್ನಾಗಿ ಗೊತ್ತಾಗತ್ತೆ ಮತ್ತು ಅದನ್ನ ಈ ಕಾಲದಲ್ಲಿ ಅಡ್ವಾನ್ಸ್ ಆಗಿ ಪ್ರಯೋಗಗಳನ್ನ ಮಾಡಬಹುದು’’.
‘‘ಮತ್ತೆ ಲೈಬ್ರರಿ ಬಗ್ಗೆ ಹೇಳು.’’
‘‘ನಾವು ಇಷ್ಟ ಪಡೋ ವಿಷಯದ ಬಗ್ಗೆ ಹಿಸ್ಟರಿ, ಅದರಲ್ಲಿ ಯಾರ್ಯಾರೆಲ್ಲಾ ಕೆಲಸ ಮಾಡಿದ್ದಾರೆ. ಅವುಗಳು ಬೇರೆ ಬೇರೆ ದೇಶಗಳಲ್ಲಿ ಹೇಗಿದೆ ಅಂತ ನಮಗೆ ಗೊತ್ತಾದರೆ, ನಮಗೆ ಒಂದು ಥರಾ ಎನರ್ಜಿ ಸಿಗತ್ತೆ. ಓ ನಾವು ಇಷ್ಟ ಪಡೋ ವಿಷಯ ಇಷ್ಟು ದೊಡ್ಡದಾ ಅಂತ ಅದರ ಬಗ್ಗೆ ಹೆಮ್ಮೆ ಆಗತ್ತೆ. ಅದನ್ನು ಇನ್ನೂ ಸ್ಟಡಿ ಮಾಡಕ್ಕೆ, ಪ್ರಾಕ್ಟೀಸ್ ಮಾಡಕ್ಕೆ ಎಂಕರೇಜ್ಮೆಂಟ್ ಸಿಗತ್ತೆ. ಆ ಸಬ್ಜೆಕ್ಟ್ ಮ್ಯಾಟರ್ನಲ್ಲಿ ನಾವು ಇನ್ನೂ ಸ್ಟ್ರಾಂಗ್ ಆಗ್ತೀವಿ’’.
ಫುಟ್ಬಾಲ್ ಮತ್ತು ಲೈಬ್ರರಿಯ ಬಗ್ಗೆ ಮಾತನಾಡುವಾಗ ಹದಿನಾಲ್ಕು, ಹದಿನೈದು ವರ್ಷಗಳ ಅವನ ಕಣ್ಣುಗಳಲ್ಲಿನ ಹೊಳಪನ್ನು ನೋಡದೇ ಇದ್ದರೆ, ಅವನ ಮಾತುಗಳಲ್ಲಿನ ಚೈತನ್ಯ ಮತ್ತು ಕೈ ಕಾಲುಗಳು ಲಗುಬಗೆಯಿಂದ ಕೆಲಸ ಮಾಡುವ ಹುರುಪನ್ನು ಗಮನಿಸಲು ಸಾಧ್ಯವಾಗದಿದ್ದರೆ ಆ ಹುಡುಗನನ್ನು ಮಾತಾಡಿಸುವ ಬದಲು ಕಡಿದೆಸೆದಿರುವ ಕೊರಡಿನ ಮುಂದೆ ಕುಳಿತುಕೊಳ್ಳಬಹುದು. ಶಾಲೆಯ ವಿಷಯ ಬಂತೆಂದರೆ ಅವನು ಜಡವಾಗಿ ತಾನೊಂದು ಬರಡೆಂಬ ಭಾವದಲ್ಲಿ, ಜೊತೆಗೆ ಮುಖದಲ್ಲಿ ಅಪರಾಧಿಪ್ರಜ್ಞೆ ಉಳ್ಳವನಾಗಿ ಕುಳಿತಿರುತ್ತಾನೆ. ಇವನನ್ನು ಉತ್ತೀರ್ಣನಾಗಿಸಲು ಅಯೋಗ್ಯ ಎನ್ನುತ್ತಾರೆ ಶಾಲೆಯವರು. ತಮ್ಮ ಮಗುವಿನ ಆಸಕ್ತಿ ಮತ್ತು ಶಕ್ತಿಯನ್ನೇ ಕಂಡುಕೊಳ್ಳದ ತಂದೆ ತಾಯಿಯರೇ ಶಾಲೆಯ ಆಡಳಿತ ಮಂಡಳಿಯ ಬಲಿಪಶುಗಳು. ತಾವೂ ಸಂಕಟ ಪಡುತ್ತಾರೆ, ಮಗುವನ್ನು ಭಯಾನಕ ಸಂಕಟಕ್ಕೆ ದೂಡುತ್ತಾರೆ. ಭವಿಷ್ಯದಲ್ಲಿ ಏನೋ ಆಗಬಹುದಾದ ಒಂದು ಅದ್ಭುತವನ್ನು ನಾಶ ಮಾಡಿಬಿಡುತ್ತಾರೆ.
ಯಾವ ದೊಡ್ಡ ಲೈಬ್ರರಿಗಳನ್ನೂ ಅವನು ನೋಡಿಲ್ಲ. ಶಾಲೆಯಲ್ಲಿರುವ ಒಂದು ಸಾಧಾರಣ ಮಟ್ಟದ ಲೈಬ್ರರಿಯನ್ನು ನೋಡಿ ಡಿಜಿಟಲ್ ಲೈಬ್ರರಿ ಮಾಡಿರುವ ಆ ಹುಡುಗನ ಪ್ರೇರಣೆಯಿಂದ ನಾನು ಲೈಬ್ರರಿ ಮತ್ತು ಲೈಬ್ರರಿಗಳ ಉಪಯೋಗದ ಬಗ್ಗೆ ಬರೆಯಲು ತೊಡಗಿದೆ. ಲೈಬ್ರರಿಗಳ ಉಪಯೋಗಗಳ ಬಗ್ಗೆ, ಲೈಬ್ರರಿಗಳನ್ನು ಮಾಡುವ ಬಗ್ಗೆ ಮತ್ತು ದಾಖಲೆ ಮತ್ತು ಅಧ್ಯಯನಗಳ ವಿಷಯಗಳಲ್ಲಿ ಲೈಬ್ರರಿಯ ಮಹತ್ವದ ಬಗ್ಗೆ ಮಾತನಾಡುವ ಅವನು ಫುಟ್ಬಾಲ್ ಪ್ರೀತಿಯಿಂದ ಸ್ವಂತಕ್ಕೆ ತಾನೊಂದು ಡಿಜಿಟಲ್ ಲೈಬ್ರರಿ ಮಾಡಿರುವುದು. ಆದರೆ ಅವನು ಲೈಬ್ರರಿಯ ಬಗ್ಗೆ ಬರೆಯಲು ತಾನೊಂದು ಪ್ರೇರಣೆಯಾಗುತ್ತೇನೆ ಎಂದು ಅವನಿಗೇ ಗೊತ್ತಿರಲಿಲ್ಲ.