ಸಾಗರ ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ: ಜೆಡಿಎಸ್ ಅಭ್ಯರ್ಥಿಯಾಗಲಿದ್ದಾರಾ ಬೇಳೂರು ಗೋಪಾಲಕೃಷ್ಣ ?
ದಟ್ಟವಾಗುತ್ತಿದೆ ಸ್ನೇಹಿತರು ಎದುರಾಳಿಗಳಾಗುವ ಸಾಧ್ಯತೆ
ಶಿವಮೊಗ್ಗ, ಎ. 17: ಸಾಗರ ವಿಧಾನಸಭಾ ಕ್ಷೇತ್ರಕ್ಕೆ ಟಿಕೆಟ್ ಘೋಷಿಸಿದ ಬೆನ್ನಲ್ಲೆ, ನಿರೀಕ್ಷಿಸಿದಂತೆ ಸ್ಥಳೀಯ ಬಿಜೆಪಿ ಪಾಳಯದಲ್ಲಿ ಭಿನ್ನಮತ ಭುಗಿಲೆದ್ದಿದೆ. ಟಿಕೆಟ್ ವಂಚಿತವಾಗಿರುವ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಬಂಡಾಯದ ರಣಕಹಳೆ ಮೊಳಗಿಸಿದ್ದಾರೆ. ಪಕ್ಷದ ಅಭ್ಯರ್ಥಿಯಾಗಿರುವ ಮಾಜಿ ಸಚಿವ ಹರತಾಳು ಹಾಲಪ್ಪಗೆ ಬೆಂಬಲಿಸುವ ಪ್ರಶ್ನೆಯೇ ಇಲ್ಲವೆಂದು ಘೋಷಿಸಿದ್ದಾರೆ.
ಪ್ರಸ್ತುತ ಬೇಳೂರು ನಡೆ ಗಮನಿಸಿದರೆ, ಸಾಗರ ಕ್ಷೇತ್ರದಿಂದ ಕಣಕ್ಕಿಳಿಯುವ ಸಾಧ್ಯತೆಗಳು ಹೆಚ್ಚಾಗಿವೆ. ಕಳೆದ ವಿಧಾನಸಭೆ ಚುನಾವಣೆ ರೀತಿಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಅಖಾಡಕ್ಕಿಳಿದರೂ ಅಚ್ಚರಿಯಿಲ್ಲ. ಸ್ನೇಹಿತರು ಎದುರಾಳಿಗಳಾಗುವ ಸಾಧ್ಯತೆಗಳು ದಟ್ಟವಾಗುತ್ತಿವೆ. ಈ ನಡುವೆ ಬೇಳೂರು ಕೋಪ ಶಮನಕ್ಕೆ ಬಿಜೆಪಿ ವರಿಷ್ಠರು ಮುಂದಾಗಿದ್ದು, ಅವರ ಮನವೊಲಿಕೆಗೆ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.
ಬೆಂಬಲಿಗರ ಸಭೆ: ಮಂಗಳವಾರ ಸಾಗರ ಪಟ್ಟಣದ ರಾಘವೇಶ್ವರ ಭವನದಲ್ಲಿ ನಡೆದ ಬೆಂಬಲಿಗರ ಸಭೆಯಲ್ಲಿ, 'ಪಕ್ಷ ಬದಲಾಯಿಸುವುದಿಲ್ಲ' ಎಂದು ಬೇಳೂರು ಹೇಳಿದ್ದಾರೆ. ಮತ್ತೊಮ್ಮೆ ಮುಖಂಡರ ಜೊತೆ ಚರ್ಚೆ ನಡೆಸಿ, ಮನವೊಲಿಸುವ ಕೆಲಸ ಮಾಡುತ್ತೇನೆ. ಆಗಲೂ ಒಪ್ಪದಿದ್ದರೆ, ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಕುರಿತಂತೆ ಮತ್ತೆ ಬೆಂಬಲಿಗರ ಸಭೆ ನಡೆಸುತ್ತೇನೆ ಎಂದು ಅಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಭ್ಯರ್ಥಿಯಾಗಲಿದ್ದಾರಾ?: ಜೆಡಿಎಸ್ ಪಕ್ಷವು ಸಾಗರ ಹೊರತುಪಡಿಸಿ, ಜಿಲ್ಲೆಯ ಇತರೆ ಆರು ಕ್ಷೇತ್ರಗಳಿಗೆ ಅಧಿಕೃತವಾಗಿ ಅಭ್ಯರ್ಥಿ ಘೋಷಿಸಿದಾಗ ಸ್ಥಳೀಯ ರಾಜಕೀಯ ವಲಯದಲ್ಲಿ ನಾನಾ ರೀತಿಯ ಚರ್ಚೆಗೆ ಆಸ್ಪದ ನೀಡಿತ್ತು. ಬಿಜೆಪಿ ಟಿಕೆಟ್ ಫೈಟ್ ಕಾರಣದಿಂದಲೇ ಜೆಡಿಎಸ್ ಅಭ್ಯರ್ಥಿ ಪ್ರಕಟಿಸಿಲ್ಲ, ಬಿಜೆಪಿ ಟಿಕೆಟ್ ಸಿಗದಿದ್ದರೆ ಬೇಳೂರು ಜೆಡಿಎಸ್ನಿಂದ ಕಣಕ್ಕಿಳಿಯುವ ಸಾಧ್ಯತೆಗಳಿವೆ ಎಂಬ ಮಾತುಗಳು ಕೇಳಿಬಂದಿದ್ದವು.
ಪ್ರಸ್ತುತ ಬಿಜೆಪಿಯಲ್ಲಿನ ಬೆಳವಣಿಗೆ ಗಮನಿಸಿದರೆ ಈ ಮಾತು ನಿಜವೆಂಬಂತೆ ಗೋಚರವಾಗುತ್ತಿದೆ. ಹೆಚ್ಚು ಕಡಿಮೆಯಾದರೆ ಬೇಳೂರು ಜೆಡಿಎಸ್ ಅಭ್ಯರ್ಥಿಯಾಗಿ ಅಖಾಡಕ್ಕಿಳಿದರೂ ಅಚ್ಚರಿಯಿಲ್ಲ. ಮೊದಲಿನಿಂದಲೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಜೊತೆ ಉತ್ತಮ ಸಂಬಂಧ ಹೊಂದಿರುವ ಬೇಳೂರು, ಈಗಾಗಲೇ ಅವರ ಜೊತೆ ಒಂದು ಸುತ್ತಿನ ಮಾತುಕತೆ ಕೂಡ ನಡೆಸಿದ್ದಾರೆಂದು ಹೇಳಲಾಗುತ್ತಿದೆ.
ಕ್ಲೈಮಾಕ್ಸ್ ಹಂತಕ್ಕೆ: ಒಂದಾನೊಂದು ಕಾಲದಲ್ಲಿ ಸ್ನೇಹಿತರಾಗಿದ್ದ ಹಾಲಪ್ಪ ಹಾಗೂ ಬೇಳೂರು, ಏಕಕಾಲಕ್ಕೆ ರಾಜಕೀಯ ಪ್ರವೇಶಿಸಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಆಜನ್ಮ ಶತ್ರುಗಳಾಗಿ ಪರಿವರ್ತಿತರಾಗಿದ್ದರು. ಸಾಗರ ಟಿಕೆಟ್ ವಿಷಯಕ್ಕೆ ಸಂಬಂಧಿಸಿದಂತೆ ಅಕ್ಷರಶಃ ಹಾವು - ಮುಂಗಸಿಯಂತೆ ಕಾದಾಟಕ್ಕಿಳಿದಿದ್ದರು. ಇದು ಬಿಜೆಪಿ ವರಿಷ್ಠರಿಗೂ ತಲೆನೋವಾಗಿ ಪರಿಣಮಿಸುವಂತೆ ಮಾಡಿತ್ತು. ಇವರಿಬ್ಬರ ನಡುವಿನ ಜಗಳ ಇದೀಗ ಬಹುತೇಕ ಕ್ಲೈಮಾಕ್ಸ್ ಹಂತಕ್ಕೆ ಬಂದಿದೆ. ಟಿಕೆಟ್ ರೇಸ್ನಲ್ಲಿ ಹಾಲಪ್ಪ ಮೇಲುಗೈ ಸಾಧಿಸಿದ್ದಾರೆ. ಬೇಳೂರಿಗೆ ಮುಖಭಂಗವಾಗಿದೆ. ಇದರಿಂದ ಸಹಜವಾಗಿಯೇ ಬೇಳೂರು ಹಾಗೂ ಅವರ ಬೆಂಬಲಿಗರನ್ನು ರೊಚ್ಚಿಗೇಳಿಸಿದೆ. ಸಾಗರ ಬಿಜೆಪಿಯಲ್ಲಿ ಬಂಡಾಯ ಭುಗಿಲೇಳುವಂತೆ ಮಾಡಿದೆ.
ಹಾಗೆಯೇ ಬೇಳೂರು ಬಿಜೆಪಿಯಿಂದ ಹೊರಬರುತ್ತಾರಾ? ಜೆಡಿಎಸ್ ಪಕ್ಷದಿಂದ ಕಣಕ್ಕಿಳಿಯುತ್ತಾರಾ? ಇಲ್ಲ ಬಿಜೆಪಿಯಲ್ಲಿಯೇ ಉಳಿಯುತ್ತಾರಾ? ಎಂಬಿತ್ಯಾದಿ ಚರ್ಚೆಗಳು ಬಿರುಸುಗೊಂಡಿವೆ. ಒಂದೆರೆಡು ದಿನದಲ್ಲಿ ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಗುವ ಸಾಧ್ಯತೆಗಳಿವೆ.
ಬೆಂಬಲಿಗರೆದುರು ಕಣ್ಣೀರಧಾರೆ!
ಸಾಗರ ಪಟ್ಟಣದ ರಾಘವೇಶ್ವರ ಭವನದಲ್ಲಿ ನಡೆದ ಬೆಂಬಲಿಗರ ಸಭೆಯಲ್ಲಿ ಭಾಷಣ ಮಾಡುವ ವೇಳೆ ಬೇಳೂರು ಗೋಪಾಲಕೃಷ್ಣ ಭಾವುಕರಾಗಿದ್ದಾರೆ. ಕಣ್ಣೀರಿಟ್ಟಿದ್ದಾರೆ. 'ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಲೋಕಸಭೆ ಚುನಾವಣಾ ಅಖಾಡಕ್ಕಿಳಿದಾಗ, ನನ್ನ ಗುರುಗಳಾದ ಎಸ್.ಬಂಗಾರಪ್ಪರವರು ನನ್ನೊಂದಿಗೆ ಮಾತನಾಡಿದ್ದರು. ತಮ್ಮ ನಡೆ ಏನು ಎಂದು ಪ್ರಶ್ನಿಸಿದ್ದರು. ಆದರೆ ತಾನು ಪಕ್ಷಕ್ಕೆ ನಿಷ್ಠರಾಗಿ ಉಳಿಯುತ್ತೇನೆ ಎಂದು ಹೇಳಿದ್ದೆ.
ಬಿ.ಎಸ್.ಯಡಿಯೂರಪ್ಪ ಬಿಜೆಪಿ ತೊರೆದು ಕೆಜೆಪಿ ಪಕ್ಷ ಕಟ್ಟಿದಾಗಲೂ ಬಿಜೆಪಿ ಬಿಟ್ಟು ಅವರ ಜೊತೆ ಹೋಗಲಿಲ್ಲ. ಸಾಗರ ಕ್ಷೇತ್ರದಲ್ಲಿ ಪಕ್ಷಕ್ಕೆ ಅಸ್ತಿತ್ವವೇ ಇಲ್ಲದಂತ ಸ್ಥಿತಿಯಲ್ಲಿ, ಪಕ್ಷ ಕಟ್ಟಿ ಬೆಳೆಸಿದೆ. ತನ್ನ ಈ ಹೋರಾಟವೇ ಇದೀಗ ತನಗೆ ಮುಳುವಾಗುವಂತಾಗಿದೆ' ಎಂದು ನೋವಿನಿಂದ ಹೇಳಿದ್ದಾರೆ.
ಬಿಜೆಪಿ ಕಚೇರಿಗೆ ಪೊಲೀಸ್ ಪಹರೆ
ಸೋಮವಾರ ಹರತಾಳು ಹಾಲಪ್ಪಗೆ ಟಿಕೆಟ್ ಘೋಷಣೆಯಾದ ನಂತರ ಆಕ್ರೋಶಗೊಂಡಿದ್ದ ಬೇಳೂರು ಗೋಪಾಲಕೃಷ್ಣ ಬೆಂಬಲಿಗರು, ಸಾಗರ ಪಟ್ಟಣದಲ್ಲಿ ಬಿಜೆಪಿ ಪ್ರಚಾರ ವಾಹನ ಹಾಗೂ ಪಕ್ಷದ ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಹಾಗೆಯೇ ಕೆಲ ಬೆಂಬಲಿಗರು ಹಾಲಪ್ಪರ ಬೆಂಬಲಿಗನೋರ್ವನ ಮೇಲೆ ಹಲ್ಲೆ ಕೂಡ ನಡೆಸಿದ್ದರು. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕೆ ಕ್ರಮವಾಗಿ ಸಾಗರ ಪಟ್ಟಣದ ಬಿಜೆಪಿ ಕಚೇರಿಗೆ ಬಿಗಿ ಪೊಲೀಸ್ ಪಹರೆಯ ವ್ಯವಸ್ಥೆ ಮಾಡಲಾಗಿದೆ.
ಎ. 20 ರಂದು ನಾಮಪತ್ರ ಸಲ್ಲಿಸಲಿರುವ ಹರತಾಳು ಹಾಲಪ್ಪ
ಬೇಳೂರು ಗೋಪಾಲಕೃಷ್ಣ ಬಂಡಾಯ ಸಾರುವ ಲಕ್ಷಣಗಳು ದಟ್ಟವಾಗಿರುವ ಬೆನ್ನಲ್ಲೇ, ಮಾಜಿ ಸಚಿವ ಹರತಾಳು ಹಾಲಪ್ಪರವರು ಎ. 20 ರಂದು ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತಿದ್ದಾರೆ. ಈ ನಡುವೆ ಮಂಗಳವಾರ ಶಿವಮೊಗ್ಗ ನಗರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿ, 'ಸಾಗರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ಗೊಂದಲ ಆದಷ್ಟು ಶೀಘ್ರವಾಗಿ ಪರಿಹಾರವಾಗಲಿದೆ. ಪಕ್ಷದ ವರಿಷ್ಠರು ಮಧ್ಯಪ್ರವೇಶಿಸಿ ಬೇಳೂರು ಗೋಪಾಲಕೃಷ್ಣರ ಜೊತೆ ಮಾತುಕತೆ ನಡೆಸಿ, ಅಸಮಾಧಾನ ಶಮನಗೊಳಿಸಲಿದ್ದಾರೆ' ಎಂದು ಹೇಳಿದ್ದಾರೆ.