ಸಾವರ್ಕರ್ ಅತ್ಯಾಚಾರವನ್ನು ಒಂದು ರಾಜಕೀಯ ಅಸ್ತ್ರವಾಗಿ ಸಮರ್ಥಿಸಿದ್ದರೇ?
ಸಾವರ್ಕರ್ರ ಪುಸ್ತಕ ‘ಸಿಕ್ಸ್ ಗ್ಲೋರಿಯಸ್ ಈಪಕ್ಸ್’, ಹಲವಾರು ದಾಖಲೆಗಳನ್ನು, (ಇವುಗಳಲ್ಲಿ ಕೆಲವು ಅನುಮಾನಾಸ್ಪದ ದಾಖಲೆಗಳು) ವಿದೇಶಿ ಪ್ರವಾಸಿಗರ ಉತ್ಪ್ರೇಕ್ಷಿತ ವಿವರಗಳು ಮತ್ತು ವಸಾಹತುಶಾಹಿ ಇತಿಹಾಸಕಾರರ ಬರಹಗಳನ್ನು ಆಧರಿಸಿದೆ. ಸಾವರ್ಕರ್ರವರ ಉದ್ರೇಕಿತ ಹಾಗೂ ಭಯ ಹುಟ್ಟಿಸುವ ಕಲ್ಪನೆಯು ಈ ವಿಭಿನ್ನ ಆಕರಗಳನ್ನು ಮರುರಚಿಸಿ ಅವುಗಳನ್ನು ಅಸಾಧಾರಣವಾದ ಕೋಪ ಮತ್ತು ದ್ವೇಷದ ಒಂದು ಗ್ರಂಥವನ್ನಾಗಿಸುತ್ತದೆ.
ಭಾಗ -1
2002ರ ಗುಜರಾತ್ ಹಾಗೂ 2013ರ ಮುಝಫ್ಫರ್ನಗರ ದೊಂಬಿಗಳಲ್ಲಿ ಮಹಿಳೆಯರ ಮೇಲೆ ದಾಳಿಗಳು ನಡೆಯುವ ಹಲವಾರು ದಶಕಗಳ ಮೊದಲೇ, ಹಿಂದೂ ಕೋಮುವಾದದ ಪ್ರತಿಪಾದಕ, ಸಾವರ್ಕರ್ ಅತ್ಯಾಚಾರವನ್ನು ಒಂದು ರಾಜಕೀಯ ಅಸ್ತ್ರವಾಗಿ, ಒಂದು ಸಲಕರಣೆಯಾಗಿ ಸಮರ್ಥಿಸಿದ್ದರು. ಅವರು 1955ರಲ್ಲಿ ನಿಧನರಾಗುವ ಕೆಲವು ವರ್ಷಗಳ ಮೊದಲು ಮರಾಠಿಯಲ್ಲಿ ಬರೆದ ಅವರ ‘ಸಿಕ್ಸ್ ಗ್ಲೋರಿಯಸ್ ಈಪಕ್ಸ್ ಆಫ್ ಇಂಡಿಯನ್ ಹಿಸ್ಟರಿ’ ಎಂಬ ಪುಸ್ತಕದಲ್ಲಿ ‘ಹಿಂದು ಗುಣ’ದ ಪರಿಕಲ್ಪನೆಯನ್ನು ಪುನರ್ರೂಪಿಸುವ, ಪುನರ್ವ್ಯಾಖ್ಯಾನಿಸುವ ಮೂಲಕ ಅವರು ಅತ್ಯಾಚಾರವನ್ನು ಸಮರ್ಥಿಸಿದ್ದರು.
ಬಹಳ ಹಿಂದಿನ ಕಾಲದಿಂದ ಭಾರತದ ಮೇಲೆ ನಡೆದ ದಾಳಿಗಳಿಂದ ಹೇಗೆ ಹಿಂದೂ ಪ್ರತಿಭಟನೆ, ಪ್ರತಿರೋಧ ನಡೆಯಿತು ಎಂಬ ಕುರಿತು ವಿವರಗಳನ್ನು ‘ಸಿಕ್ಸ್ ಗ್ಲೋರಿಯಸ್ ಈಪಕ್ಸ್’ ನೀಡುತ್ತದೆ. ಈ ಪುಸ್ತಕವು ಹಲವಾರು ದಾಖಲೆಗಳನ್ನು, (ಇವುಗಳಲ್ಲಿ ಕೆಲವು ಅನುಮಾನಾಸ್ಪದ ದಾಖಲೆಗಳು) ವಿದೇಶಿ ಪ್ರವಾಸಿಗರ ಉತ್ಪ್ರೇಕ್ಷಿತ ವಿವರಗಳು ಮತ್ತು ವಸಾಹತುಶಾಹಿ ಇತಿಹಾಸಕಾರರ ಬರಹಗಳನ್ನು ಆಧರಿಸಿದೆ. ಸಾವರ್ಕರ್ರವರ ಉದ್ರೇಕಿತ ಹಾಗೂ ಭಯ ಹುಟ್ಟಿಸುವ ಕಲ್ಪನೆಯು ಈ ವಿಭಿನ್ನ ಆಕರಗಳನ್ನು ಮರುರಚಿಸಿ ಅವುಗಳನ್ನು ಅಸಾಧಾರಣವಾದ ಕೋಪ ಮತ್ತು ದ್ವೇಷದ ಒಂದು ಗ್ರಂಥವನ್ನಾಗಿಸುತ್ತದೆ.
ಸಾವರ್ಕರ್ ನೀಡುವ ಹಿಂದೂ ಪ್ರತಿರೋಧದ ವಿವರವು ಗುಣಗಳ ಒಂದು ಇತಿಹಾಸವೂ ಆಗಿದೆ. ಭಾರತದ ಹಿತಾಸಕ್ತಿಗೆ ಮಾರಕವಾದ ಮತ್ತು ಅದು ದಾಳಿಕೋರರ ಆಳ್ವಿಕೆಗೆ ಒಳಪಡಲು ಕಾರಣವಾದ ಗುಣಗಳನ್ನು ಅವರು ಗುರುತಿಸಿದರು. ಪುಸ್ತಕದ ‘ಪರ್ವರ್ಟೆಡ್ ಕಂನ್ಸೆಪ್ಶನ್ ಆಫ್ ವರ್ಚೂಸ್’ ಎಂಬ ಎಂಟನೆಯ ಅಧ್ಯಾಯದಲ್ಲಿ ನೈತಿಕತೆಯ ಕುರಿತಾದ ತನ್ನ ಸಿದ್ಧಾಂತಗಳನ್ನು ಮಂಡಿಸಿದ ಅವರು, ಗುಣದ ಸಂಪೂರ್ಣ ಅಥವಾ ಪರಿಪೂರ್ಣ ಪರಿಕಲ್ಪನೆಯನ್ನು ನಿರಾಕರಿಸುತ್ತಾರೆ. ‘‘ನಿಜ ಹೇಳಬೇಕೆಂದರೆ, ಗುಣಗಳು ಹಾಗೂ ದೋಷಗಳು ಕೇವಲ ಸಂಬಂಧಾವಲಂಬಿ ಶಬ್ದಗಳು’’ ಎನ್ನುತ್ತಾರೆ ಅವರು.
ಗುಣವೋ ದ್ವೇಷವೋ ?
ಯಾವುದು ಗುಣ ಅಥವಾ ದೋಷ ಎಂಬುದನ್ನು ನಿರ್ಧರಿಸಲು ಇರುವ ಮಾನದಂಡವೆಂದರೆ ಅದು ಸಮಾಜದ ಹಿತಾಸಕ್ತಿಗಳನ್ನು, ನಿರ್ದಿಷ್ಟವಾಗಿ ಹಿಂದೂ ಸಮಾಜದ ಹಿತಾಸಕ್ತಿಗಳನ್ನು ಕಾಪಾಡುತ್ತದೆಯೋ ಇಲ್ಲವೋ ಎನ್ನುವುದೇ ಆಗಿದೆ. ಯಾಕೆಂದರೆ ಸಂದರ್ಭಗಳು ಬದಲಾಗುತ್ತಲೇ ಇರುತ್ತವೆ. ಗತಕಾಲದಲ್ಲಿ ಯಾವುದನ್ನು ಗುಣ ಅಥವಾ ಒಳ್ಳೆಯದು ಎಂದು ಪರಿಗಣಿಸಲಾಗಿತ್ತೋ ಅದು ಮನುಕುಲಕ್ಕೆ ಮಾರಕವಾದರೆ ವರ್ತಮಾನದಲ್ಲಿ ಅದು ಒಂದು ದೋಷವಾಗುತ್ತದೆ ಎಂದರು ಸಾವರ್ಕರ್. ಉದಾಹರಣೆಗೆ ಅವರು ಹೇಳಿದರು: ‘‘ಮಡಿಮೈಲಿಗೆ, ಪರಿಶುದ್ಧತೆ ಮತ್ತು ಮಾಲಿನ್ಯದ ಬಗ್ಗೆ ವಿವರವಾದ ನಿಯಮಗಳಿದ್ದ ಜಾತಿಪದ್ಧತಿ ಹಿಂದೂ ಸಮಾಜವನ್ನು ಭದ್ರಪಡಿಸಲು ನೆರವಾಯಿತು. ಆದರೆ ಇವುಗಳಲ್ಲಿ ಕೆಲವು ನಿಯಮಗಳು ಕಾರ್ಯ ನಿರ್ವಹಿಸದೆ, ಹಿಂದೂ ಸಮಾಜದ ‘ಸಪ್ತ ಸಂಕೋಲೆ’ಗಳಾಗಿ ಪರಿಣಮಿಸಿದವು.’’
ಸಾವರ್ಕರ್ ಪ್ರಕಾರ, ಈ ಸಂಕೋಲೆಗಳು ಹೀಗಿವೆ:
‘‘ಅಸ್ಪಶ್ಯತೆ, ಇತರ ಜಾತಿಗಳಿಗೆ ಸೇರಿದವರ ಮೇಲೆ ಕುಡಿಯುವ ನೀರಿನ ಮೇಲೆ ಹೇರಲಾದ ನಿಷೇಧಗಳು, ಅಂತರ್ಜಾತೀಯ ಭೋಜನ, ಅಂತರ್ಜಾತೀಯ ವಿವಾಹ, ಸಮುದ್ರ ಪ್ರಯಾಣ, ಇಸ್ಲಾಂ ಅಥವಾ ಕ್ರಿಶ್ಚಿಯನ್ ಧರ್ಮಕ್ಕೆ ಬಲವಂತವಾಗಿ ಮತಾಂತರಗೊಳಿಸಲ್ಪಟ್ಟವರನ್ನು ಮರಳಿ ಹಿಂದೂಧರ್ಮಕ್ಕೆ ಸೇರಿಸದಂತೆ ನಿಷೇಧ ಮತ್ತು ಈ ನಿಷೇಧಗಳನ್ನು ಉಲ್ಲಂಘಿಸಿದವರಿಗೆ ಹಾಕುವ ಬಹಿಷ್ಕಾರ.’’
‘‘ಈ ‘ಸಪ್ತ ಸಂಕೋಲೆ’ಗಳು ಮುಸ್ಲಿಂ ದೊರೆಗಳಿಗೆ ವರದಾನವಾದವು; ಯಾಕೆಂದರೆ ಅವರು ಜಾತಿಪದ್ಧತಿ ನಿಯಮಗಳನ್ನು ತಮ್ಮ ಜನಸಂಖ್ಯೆ ಹೆಚ್ಚಿಸಿಕೊಳ್ಳಲು ಬಳಸಿಕೊಂಡರು’’ ಎಂದು ಸಾವರ್ಕರ್ ವಾದಿಸುತ್ತಾರೆ.
ಭಾರತದ ಮೇಲೆ ದಾಳಿ ನಡೆಸಿದ ಈ ಮುಸ್ಲಿಂ ದೊರೆಗಳು ಯುದ್ಧದಲ್ಲಿ ಸೋತ ಹಿಂದೂಗಳನ್ನು ಮತಾಂತರಿಸಿ ಅವರಿಗೆ ಆಹಾರ ಮತ್ತು ನೀರು ಪೂರೈಸಿದರು. ಮಹಿಳೆಯರನ್ನು ಅಪಹರಿಸಿದರು. ಮರಳಿ ಮಾತೃಧರ್ಮಕ್ಕೆ ಸೇರಿಸಲು ನಿಷೇಧವಿದ್ದುದರಿಂದ ಅವರಿಗೆ ಮುಸ್ಲಿಮರಾಗಿ ಬದುಕುವುದಲ್ಲದೆ ಬೇರೆ ಆಯ್ಕೆ ಇರಲಿಲ್ಲವೆಂದು ಖಚಿತವಾಗಿ ಗೊತ್ತಿದ್ದರಿಂದ ಆ ಮಹಿಳೆಯರನ್ನು ತಮ್ಮ ವೇಶ್ಯೆಯರಾಗಿ ಅಥವಾ ಮಡದಿಯರಾಗಿ ಇಟ್ಟುಕೊಂಡರು ಎಂದು ಹಿಂದೂ ಕೋಮುವಾದದ ಪ್ರತಿಪಾದಕ ಸಾವರ್ಕರ್ ಬರೆದರು. ಇದರ ಅರ್ಥ ‘‘ಒಬ್ಬ ಮನುಷ್ಯನ್ನು ಒಬ್ಬ ರಾಕ್ಷಸನನ್ನಾಗಿ ರೂಪಾಂತರಿಸುವುದು, ಒಬ್ಬ ದೇವರನ್ನು ಓರ್ವ ಸೈತಾನನನ್ನಾಗಿ ರೂಪಾಂತರಿಸುವುದು’’
ಒಂದು ರಾಜಕೀಯ ಅಸ್ತ್ರವಾಗಿ ಅತ್ಯಾಚಾರ
ನೀತಿ ಶಾಸ್ತ್ರದ ಈ ಮಾದರಿಯಲ್ಲಿ ಸಾವರ್ಕರ್ ಅತ್ಯಾಚಾರವನ್ನು ಒಂದು ರಾಜಕೀಯ ಅಸ್ತ್ರವಾಗಿ ಪ್ರತಿಪಾದಿಸಿದ್ದು, ಅವರು ಇದನ್ನು ಒಂದು ಹಾರೈಕೆಯಾಗಿ, ಬಯಕೆಯಾಗಿ ಪ್ರಶ್ನೆಯೊಂದರ ಮೂಲಕ ಅಭಿವ್ಯಕ್ತಿಸಿದರು: ‘‘ಆಗೊಮ್ಮೆ ಈಗೊಮ್ಮೆ ತಮ್ಮ ವಿರೋಧಿಗಳಾದ ಮುಸ್ಲಿಂ ದೊರೆಗಳನ್ನು ಸೋಲಿಸಿದ ಹಿಂದೂ ದೊರೆಗಳು, ಆ ಮುಸ್ಲಿಮರ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದ್ದರೆ ಏನಾಗುತ್ತಿತ್ತು?’’ ‘‘ಮುಸ್ಲಿಮರಲ್ಲದ ಮಹಿಳೆಯರನ್ನು ಅಪಹರಿಸಿ, ಬಲಾತ್ಕಾರ ಪೂರ್ವಕವಾಗಿ ಅವರನ್ನು ತಮ್ಮ ಧರ್ಮಕ್ಕೆ ಮತಾಂತರಿಸುವುದು ಪ್ರತಿಯೊಬ್ಬ ಮುಸ್ಲಿಮನ ಕರ್ತವ್ಯವಾಗಿತ್ತು’’ ಎಂದು ಘೋಷಿಸಿದ ಬಳಿಕ, ಸಾವರ್ಕರ್ ಈ ಬಯಕೆಯನ್ನು ವ್ಯಕ್ತಪಡಿಸಿದರು. ‘‘ಮುಸ್ಲಿಮರ ಜನಸಂಖ್ಯೆಯನ್ನು ಹೆಚ್ಚಿಸುವುದು ಈ ಮತಾಂಧತೆಯ ಉದ್ದೇಶವಾಗಿತ್ತು’’ ಎಂದು ಅವರು ಹೇಳಿದರು. ಪ್ರಾಣಿಗಳ ಪ್ರಪಂಚ ಪ್ರವೃತ್ತಿ ಸಹಜವಾಗಿ ಪಾಲಿಸುವ ಕಾನೂನು ಕೂಡಾ ಇದೇ ಆಗಿದೆ. ಸಾವರ್ಕರ್ ಬರೆದರು:
‘‘ಜಾನುವಾರುಗಳ ಮಂದೆಗಳಲ್ಲಿ ಹಸುಗಳಿಗಿಂತ ಎತ್ತುಗಳ ಸಂಖ್ಯೆ ಜಾಸ್ತಿಯಾದರೆ, ಜಾನುವಾರುಗಳ ಸಂಖ್ಯೆ ತ್ವರಿತಗತಿಯಲ್ಲಿ ಏರುವುದಿಲ್ಲ. ಬದಲಾಗಿ, ಹಸುಗಳ ಸಂಖ್ಯೆ ಎತ್ತುಗಳ ಸಂಖ್ಯೆಗಿಂತ ಹೆಚ್ಚು ಇದ್ದರೆ, ಆಗ ಮಂದೆಗಳಲ್ಲಿ ಪ್ರಾಣಿಗಳ ಸಂಖ್ಯೆ ಹೆಚ್ಚುತ್ತದೆ.’’
ಸಾವರ್ಕರ್ ಮಾನವ ಪ್ರಪಂಚದ ಉದಾಹರಣೆಗಳನ್ನು ಕೊಡುತ್ತಾರೆ. ಉದಾಹರಣೆಗೆ, ‘‘ಆಫ್ರಿಕಾದ ‘ವನ್ಯ ನಿವಾಸಿಗಳು’ (ವೈಲ್ಡ್ ಟ್ರೈಬ್ಸ್) ತಮ್ಮ ಪುರುಷ ಶತ್ರುಗಳನ್ನು ಮಾತ್ರ ಕೊಲ್ಲುತ್ತಾರೆ, ಅವರ ಹೆಂಗಸರನ್ನು ಕೊಲ್ಲುವುದಿಲ್ಲ; ಹೆಂಗಸರನ್ನು ಜಯಶಾಲಿಗಳು ತಮ್ಮ ತಮ್ಮಲ್ಲೇ ವಿತರಿಸಿಕೊಳ್ಳುತ್ತಾರೆ. ಹೀಗೆ ಯಾಕೆಂದರೆ ಅಪಹರಿಸಿ ತಂದ ಮಹಿಳೆಯರ ಮೂಲಕ ತಮ್ಮ ಸಂತತಿಯ ಜನಸಂಖ್ಯೆ ಹೆಚ್ಚಿಸುವುದನ್ನು ಆ ನಿವಾಸಿಗಳು ತಮ್ಮ ಕರ್ತವ್ಯವೆಂದು ತಿಳಿಯುತ್ತಾರೆ. ಅದೇ ರೀತಿಯಾಗಿ, ಭಾರತದಲ್ಲಿ ನಾನಾ ಬುಡಕಟ್ಟು ನಿವಾಸಿಗಳು ಪ್ರತಿಸ್ಪರ್ಧಿ ನಾಗಾಗಳ ಹೆಂಗಸರನ್ನು, ಸೆರೆಹಿಡಿಯಲಾಗದಾಗ, ಹತ್ಯೆ ಮಾಡುತ್ತಾರೆ. ಇದು ಸರಿ ಕೂಡ; ಯಾಕೆಂದರೆ, ಹೆಂಗಸರ ಸಂಖ್ಯೆ ಕಡಿಮೆಯಾದಾಗ ತಮ್ಮ ಶತ್ರುಗಳ ಸಂಖ್ಯೆಯೂ ಕಡಿಮೆಯಾಗುತ್ತದೆ ಎಂದು ನಾಗಾಗಳು ತಿಳಿಯುತ್ತಾರೆ.’’
ಆಫ್ರಿಕಾದ ಮುಸ್ಲಿಂ ದೊರೆಗಳು ಕೂಡಾ ಈ ಸಂಪ್ರದಾಯವನ್ನೇ ಪಾಲಿಸುತ್ತಿದ್ದರು ಎಂದು ಸಾವರ್ಕರ್ ಹೇಳುತ್ತಾರೆ. ಇದಾದ ಕೂಡಲೆ, ಸಾವರ್ಕರ್ ತನ್ನ ಪುಸ್ತಕದಲ್ಲಿ, ರಾವಣನು ಸೀತೆಯನ್ನು ಅಪಹರಿಸಿದಾಗ, ಆಕೆಯನ್ನು ರಾಮನಿಗೆ ಮರಳಿಸು ಎಂದು ರಾವಣನಿಗೆ ಸಲಹೆ ನೀಡಿದ ಅವನ ಹಿತೈಷಿಗಳ ಬಗ್ಗೆ ಮಾತನಾಡುತ್ತಾರೆ. ಸೀತೆಯನ್ನು ಅಪಹರಿಸಿದ್ದು ಅಧರ್ಮ ಎಂದು ಆ ಹಿತೈಷಿಗಳು ಹೇಳಿದರು. ಆಗ ರಾವಣ ಹೇಳಿದ ಮಾತನ್ನು ಸಾವರ್ಕರ್ ಉದ್ಧರಿಸುತ್ತಾರೆ.
‘‘ಏನು? ಶತ್ರುವಿನ ಹೆಂಗಸರನ್ನು ಅಪಹರಿಸಿ ಅವರ ಮೇಲೆ ಅತ್ಯಾಚಾರ ಎಸಗುವುದನ್ನು ನೀವು ಧಾರ್ಮಿಕ, ಧರ್ಮವಲ್ಲ ಎನ್ನುತ್ತೀರಾ ಅದು ಪರೋಧರ್ಮ, ಅತ್ಯಂತ ಶ್ರೇಷ್ಠವಾದ ಕರ್ತವ್ಯ.’’
ಕೃಪೆ: scroll.in