ಶಿವಮೊಗ್ಗ : ವಿಧಾನಸಭಾ ಚುನಾವಣಾ ಅಖಾಡಕ್ಕೆ 'ಡಾಕ್ಟರ್ಸ್'ಗಳು
ಶಿವಮೊಗ್ಗ, ಎ. 18: 'ಎತ್ತಣ ಮಾಮರ ಎತ್ತಣ ಕೋಗಿಲೆ...' ಎಂಬ ಮಾತು ರಾಜಕೀಯ ಹಾಗೂ ವೈದ್ಯಕೀಯ ಕ್ಷೇತ್ರಕ್ಕೆ ಸೂಕ್ತವಾಗಿ ಅನ್ವಯವಾಗುತ್ತದೆ. ಈ ಎರಡೂ ಕ್ಷೇತ್ರಕ್ಕೂ ಅಜಗಜಾಂತರ ಅಂತರವಿದೆ. ಒಂದಕ್ಕೊಂದು ಸಂಬಂಧವೇ ಇಲ್ಲವಾಗಿದೆ. ಆದರೆ ರಾಜಕೀಯ ಇತಿಹಾಸದ ಪುಟ ತಿರುವಿ ಹಾಕಿದರೆ, ಅದೆಷ್ಟೋ ವೈದ್ಯರು ರಾಜಕೀಯ ಕ್ಷೇತ್ರ ಪ್ರವೇಶಿಸಿದ್ದಾರೆ. ಈಗಲೂ ಕಾಲಿಡುತ್ತಿದ್ದಾರೆ.
ಪ್ರಸ್ತುತ ವಿಧಾನಸಭೆ ಚುನಾವಣೆಯಲ್ಲಿ ಶಿವಮೊಗ್ಗದ ಮೂವರು 'ತಜ್ಞ ವೈದ್ಯರು' ನೇರವಾಗಿ ಚುನಾವಣಾ ಅಖಾಡಕ್ಕಿಳಿಯುವ ಮೂಲಕ, ರಾಜಕೀಯ ಕ್ಷೇತ್ರ ಪ್ರವೇಶಿಸಲು ಮುಂದಾಗಿದ್ದಾರೆ. ಇದರಲ್ಲಿ ಇಬ್ಬರು ವೈದ್ಯರು ಅಖಾಡಕ್ಕಿಳಿಯುವುದು ಖಚಿತವಾಗಿದೆ. ಉಳಿದಂತೆ ಮತ್ತೋರ್ವ ವೈದ್ಯರ ಸ್ಪರ್ಧೆ ಇನ್ನಷ್ಟೆ ಸ್ಪಷ್ಟವಾಗಬೇಕಾಗಿದೆ.
ಬೆಂಗಳೂರಿನ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯಲ್ಲಿ ಹಿರಿಯ ಸ್ಥಾನಿಕ ವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ, ಈಗಾಗಲೇ ಹುದ್ದೆಗೆ ರಾಜೀನಾಮೆ ಸಲ್ಲಿಸಿರುವ 'ಮಕ್ಕಳ ತಜ್ಞ' ಡಾ. ಎಸ್.ಕೆ.ಶ್ರೀನಿವಾಸ್ರವರು ಶಿವಮೊಗ್ಗ ಗ್ರಾಮಾಂತರ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಖಾಡಕ್ಕಿಳಿಯುತ್ತಿದ್ದಾರೆ.
ಶಿವಮೊಗ್ಗ ನಗರದ ಸುಬ್ಬಯ್ಯ ಮೆಡಿಕಲ್ ಕಾಲೇಜು ಆಸ್ಪತ್ರೆಯ 'ಅನೆಸ್ತೇಶಿಯಾ ತಜ್ಞ' ಡಾ. ಪಿ. ಎಲ್. ನರೇಂದ್ರರವರು ಶಿವಮೊಗ್ಗ ನಗರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದಾರೆ. ಚುನಾವಣಾ ಕಣಕ್ಕಿಳಿಯುವ ನಿರ್ಧಾರವನ್ನು ಈಗಾಗಲೇ ಡಾ. ಪಿ. ಎಲ್. ನರೇಂದ್ರ ಖಚಿತಪಡಿಸಿದ್ದಾರೆ.
ಉಳಿದಂತೆ ನಗರದ ರಾಜ್ಕುಮಾರ್ ಡಯೋಗ್ನೋಸ್ಟಿಕ್ನ 'ಮಧುಮೇಹ ತಜ್ಞ' ಡಾ. ಪ್ರೀತಮ್ರವರು ಕೂಡ ಶಿವಮೊಗ್ಗ ನಗರ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಗಂಭೀರ ಚಿಂತನೆ ನಡೆಸುತ್ತಿದ್ದಾರೆ. ಈ ಕುರಿತಂತೆ ಹಿತೈಷಿಗಳ ಜೊತೆ ಸಮಾಲೋಚಿಸಿ, ಆದಷ್ಟು ಶೀಘ್ರವಾಗಿ ತಮ್ಮ ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದಾರೆ.
ಡಾ. ಎಸ್.ಕೆ.ಶ್ರೀನಿವಾಸ್ ಕರಿಯಣ್ಣರವರ ಕುಟುಂಬಕ್ಕೆ ರಾಜಕೀಯ ಹಿನ್ನೆಲೆಯಿದೆ. ಅವರ ತಂದೆ ಕರಿಯಣ್ಣರವರು ಶಾಸಕರಾಗಿ ಕಾರ್ಯನಿರ್ವಹಣೆ ಮಾಡಿದ್ದಾರೆ. ಉಳಿದಂತೆ ಡಾ. ಎಲ್. ಪಿ. ನರೇಂದ್ರ ಹಾಗೂ ಡಾ. ಪ್ರೀತಮ್ರವರ ಕುಟುಂಬಗಳಿಗೆ ಯಾವುದೇ ರಾಜಕೀಯ ಪ್ರೋಫೈಲ್ ಇಲ್ಲವಾಗಿದೆ.
ಸಾಲು ಸಾಲು ತಜ್ಞ ವೈದ್ಯರು ಚುನಾವಣಾ ಕಣಕ್ಕಿಳಿಯಲು ಮುಂದಾಗಿರುವುದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಕುತೂಹಲ ಕೆರಳಿಸುವುದರ ಜೊತೆಗೆ, ಗಮನ ಸೆಳೆಯುವಂತೆ ಮಾಡಿದೆ. ಹಾಗೆಯೇ ಬಿಸಿ ಬಿಸಿ ಚರ್ಚೆಗೂ ಕಾರಣವಾಗಿದೆ. ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ರಾಜಕೀಯ ಕ್ಷೇತ್ರದತ್ತ ಮುಖ ಮಾಡಿರುವ ಮೂವರು ವೈದ್ಯರ ಸಂಕ್ಷಿಪ್ತ ವಿವರ, ಅಭಿಪ್ರಾಯಗಳು ಈ ಮುಂದಿನಂತಿದೆ.
ಉನ್ನತ ವೈದ್ಯ ಹುದ್ದೆಗೆ ಗುಡ್ಬೈ!
ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಶುಕ್ರವಾರ ನಾಮಪತ್ರ ಸಲ್ಲಿಸುತ್ತಿರುವ, ಬೆಂಗಳೂರಿನ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯಲ್ಲಿ ಹಿರಿಯ ಸ್ಥಾನಿಕ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ 'ಮಕ್ಕಳ ತಜ್ಞ', ಪ್ರಸ್ತುತ ಹುದ್ದೆಗೆ ರಾಜೀನಾಮೆ ಸಲ್ಲಿಸಿರುವ 39 ವರ್ಷ ವಯೋಮಾನದ ಡಾ. ಎಸ್. ಕೆ. ಶ್ರೀನಿವಾಸ್ರವರು ಕಳೆದ ನಾಲ್ಕೈದು ವರ್ಷಗಳಿಂದ ವೈದ್ಯಕೀಯ ಕ್ಷೇತ್ರದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಇದೀಗ ರಾಜಕೀಯ ಕ್ಷೇತ್ರಕ್ಕೆ ಅಧಿಕೃತವಾಗಿ ಕಾಲಿಟ್ಟಿದ್ದಾರೆ.
'ಸರ್ಕಾರಿ ಹಾಗೂ ಖಾಸಗಿಯಾಗಿ ವೈದ್ಯ ವೃತ್ತಿಯಲ್ಲಿ ಬೆಳವಣಿಗೆಗೆ ಸಾಕಷ್ಟು ಅವಕಾಶಗಳಿವೆ. ಆದರೆ ರಾಜಕೀಯ ಕ್ಷೇತ್ರದಲ್ಲಿ ಸೇವೆ ಮಾಡಬೇಕೆಂಬ ಹಂಬಲ ತಮ್ಮದಾಗಿತ್ತು. ಈ ಕಾರಣದಿಂದಲೇ ವಿಧಾನಸಭಾ ಚುನಾವಣಾ ಕಣಕ್ಕಿಳಿಯುತ್ತಿದ್ದೇನೆ. ಇದಕ್ಕೆ ಪಕ್ಷದ ಹಿರಿಯರು, ವರಿಷ್ಠರು ಸಂತಸ ವ್ಯಕ್ತಪಡಿಸಿದ್ದಾರೆ. ನಿಮ್ಮಂತಹ ವಿದ್ಯಾವಂತ ಯುವಕರು ರಾಜಕೀಯ ಕ್ಷೇತ್ರಕ್ಕೆ ಕಾಲಿಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಪ್ರೋತ್ಸಾಹದ ಮಾತುಗಳು ಎಲ್ಲೆಡೆಯಿಂದ ಕೇಳಿಬರುತ್ತಿವೆ. ಮತದಾರರು ತಮಗೆ ಕೈ ಹಿಡಿಯುವ ನಿರೀಕ್ಷೆಯಿದೆ' ಎಂದು ಡಾ.ಎಸ್.ಕೆ.ಶ್ರೀನಿವಾಸ ಕರಿಯಣ್ಣರವರು ತಿಳಿಸುತ್ತಾರೆ.
22 ವರ್ಷದ ಸೇವಾನುಭವ
ಶಿವಮೊಗ್ಗ ನಗರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸೋಮವಾರ ಅದಿಕೃತವಾಗಿ ನಾಮಪತ್ರ ಸಲ್ಲಿಸುತ್ತಿರುವ ಸುಬ್ಬಯ್ಯ ಮೆಡಿಕಲ್ ಕಾಲೇಜು ಆಸ್ಪತ್ರೆಯ 'ಅನೆಸ್ತೇಶಿಯಾ ತಜ್ಞ', 47 ರ ವಯೋಮಾನದ ಡಾ. ಪಿ.ಎಲ್.ನರೇಂದ್ರರವರು 22 ವರ್ಷಗಳ ಕಾಲ ವೈದ್ಯಕೀಯ ಕ್ಷೇತ್ರದಲ್ಲಿ ಸಕ್ರೀಯವಾಗಿದ್ದಾರೆ. ಇದೀಗ ರಾಜಕೀಯ ಕ್ಷೇತ್ರದತ್ತ ಮುಖ ಮಾಡಿದ್ದಾರೆ.
'ರಾಜಕೀಯ ಕ್ಷೇತ್ರಕ್ಕೆ ಹಣ ಮಾಡಬೇಕು ಎಂಬ ಉದ್ದೇಶದಿಂದ ಬರುತ್ತಿಲ್ಲ. ವೈದ್ಯ ವೃತ್ತಿಯಲ್ಲಿಯೇ ನೆಮ್ಮದಿಯಾಗಿ ಜೀವನ ನಡೆಸಬಹುದಾಗಿದೆ. ನ್ಯಾಯಯುತವಾಗಿಯೇ ಹಣ ಸಂಪಾದಿಸಲು ಅವಕಾಶವಿದೆ. ರಾಜಕೀಯ ಕ್ಷೇತ್ರದ ಸುಧಾರಣೆಯ ವಿಷಯ ಬಂದಾಗಲೆಲ್ಲ ಪ್ರಜ್ಞಾವಂತ ನಾಗರೀಕರು ಬುದ್ದಿವಂತರು, ವಿದ್ಯಾವಂತರು ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯ ಕ್ಷೇತ್ರಕ್ಕೆ ಬರಬೇಕು ಎಂದು ಹೇಳುತ್ತಾರೆ. ಅದರಂತೆ ಹಾಗೂ ಸಮಾಜ ಸೇವೆ ಮಾಡಬೇಕೆಂಬ ಹಂಬಲದಿಂದ ಚುನಾವಣಾ ಕಣಕ್ಕಿಳಿಯುವ ನಿರ್ಧಾರ ಮಾಡಿದ್ದೇನೆ. ನಿಷ್ಪಕ್ಷಪಾತ, ನ್ಯಾಯಯುತವಾಗಿ ಚುನಾವಣೆ ಎದುರಿಸುತ್ತೇನೆ. ತಾವು ಶಾಸಕರಾಗಿ ಆಯ್ಕೆಯಾದರೆ ಕ್ಷೇತ್ರದ ಮತದಾರರಿಗೆ ಪ್ರಾಮಾಣಿಕ ಸೇವೆ ಸಲ್ಲಿಸುತ್ತೇನೆ' ಎಂದು ಡಾ.ಪಿ.ಎಲ್.ನರೇಂದ್ರರವರು ಅಭಿಪ್ರಾಯಪಡುತ್ತಾರೆ.
ಸಮಾಜ ಸೇವೆಯ ಆಸಕ್ತಿ
ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಗಂಭೀರ ಚಿಂತನೆ ನಡೆಸುತ್ತಿರುವ, ರಾಜ್ಕುಮಾರ್ ಡಯೋಗ್ನೋಸ್ಟಿಕ್ನ ಮಧಮೇಹ ತಜ್ಞ, 43 ರ ವಯೋಮಾನದ ಡಾ. ಪ್ರೀತಮ್ರವರು ಕಳೆದ 10 ವರ್ಷದಿಂದ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಕಳೆದ ಹಲವು ವರ್ಷಗಳ ಹಿಂದೆಯೇ ರಾಜಕೀಯ ಪ್ರವೇಶಿಸಿದ್ದು, ಕಾಂಗ್ರೆಸ್ ಪಕ್ಷದ ವೈದ್ಯಕೀಯ ವಿಭಾಗದ ಅಧ್ಯಕ್ಷರಾಗಿ ಹಾಗೂ ಆಮ್ ಆದ್ಮಿ ಪಾರ್ಟಿಯಲ್ಲಿ ಸಂಚಾಲಕರಾಗಿ ಕಾರ್ಯನಿರ್ವಹಣೆ ಮಾಡಿದ್ದಾರೆ. ಸ್ವತಂತ್ರ ಅಸ್ತಿತ್ವ ಕಾಯ್ದುಕೊಳ್ಳುವ ಉದ್ದೇಶದಿಂದ ಈ ಎರಡೂ ಪಕ್ಷಗಳಿಂದ ಹೊರಬಂದಿದ್ದಾರೆ.
'ಸಮಾಜ ಸೇವೆ ಮಾಡಬೇಕೆಂಬ ತುಡಿತ, ಆಸಕ್ತಿಯ ಕಾರಣದಿಂದ ರಾಜಕೀಯ ಕ್ಷೇತ್ರ ಪ್ರವೇಶಿಸಿದೆ. ರಾಜಕೀಯ ಕ್ಷೇತ್ರಗಳಲ್ಲಿನ ಸಂಸ್ಕೃತಿ, ವೈಯಕ್ತಿಕ ಅಭಿಪ್ರಾಯಗಳಿಗೆ ಸಿಗದ ಮನ್ನಣೆಯಿಂದ ಬೇಸತ್ತು ಹೊರಬಂದೆ. ಈ ಕಾರಣದಿಂದ ಸ್ವತಂತ್ರ ಅಸ್ತಿತ್ವ ಕಾಯ್ದುಕೊಂಡು ರಾಜಕೀಯ ಕ್ಷೇತ್ರದಲ್ಲಿ ಮುಂದುವರಿಯುವ ಅಭಿಲಾಷೆ ಹೊಂದಿದ್ದೇನೆ. ಹಿತೈಷಿಗಳ ಅಭಿಪ್ರಾಯ ಆಲಿಸಿ ವಿಧಾನಸಭಾ ಚುನಾವಣಾ ಕಣಕ್ಕಿಳಿಯುವ ಕುರಿತಂತೆ ನಿರ್ಧಾರ ಕೈಗೊಳ್ಳುತ್ತೇನೆ. ಜೊತೆಗೆ ನಾಗರೀಕರು ಹಾಗೂ ನಗರದ ಅಭಿವೃದ್ದಿ ಗಮನದಲ್ಲಿಟ್ಟುಕೊಂಡು ಪ್ರತ್ಯೇಕ ಪ್ರಣಾಳಿಕೆ ಸಿದ್ದಪಡಿಸುತ್ತೆನೆ' ಎಂದು ಡಾ. ಪ್ರೀತಮ್ರವರು ತಿಳಿಸುತ್ತಾರೆ.