ತಪ್ಪಿದ ವಿನಾಶ: ಭೂಮಿಯ ಅತಿ ಹತ್ತಿರದಿಂದ ಹಾದು ಹೋದ ದೈತ್ಯ ಆಕಾಶಕಾಯ
ಪ್ರಪಂಚೋದ್ಯ
ಎಪ್ರಿಲ್ 17ರ ದಿನ, ಎಂದಿನಂತೆ ಸರಿದುಹೋಗಿತ್ತು. ಜಗತ್ತಿನಾದ್ಯಂತ ಬಹುತೇಕ ಜನರು ತಮ್ಮ ತಮ್ಮ ಕೆಲಸಕಾರ್ಯಗಳಲ್ಲಿ ಅಂದು ಮಗ್ನರಾಗಿದ್ದರೇನೂ ಹೌದು. ಆದರೆ, ಆ ದಿನದಂದು ಅಮೆರಿಕದ ಬಾಹ್ಯಾಕಾಶಸಂಸ್ಥೆ ನಾಸಾದ ಕೆಲವು ವಿಜ್ಞಾನಿಗಳಿಗೆ ಮಾತ್ರವೇ, ಫುಟ್ಬಾಲ್ ಮೈದಾನದಷ್ಟು ದೊಡ್ಡ ಗಾತ್ರದ ಆಕಾಶಕಾಯವೊಂದು ಭೂಮಿಯ ಅತಿ ಸನಿಹಕ್ಕೆ ಆಗಮಿಸಿತ್ತೆಂಬ ವಿಷಯವು ತಿಳಿದಿತ್ತು.
ಈ ಆಕಾಶಕಾಯವು ಭೂಮಿಯ ಅತಿ ಸನಿಹದಲ್ಲಿ ಹಾದುಹೋದ 21 ತಾಸುಗಳಿಗೆ ನಿಮಿಷಗಳ ಮೊದಲು ನಾಸಾದ ಕೈಬೆರಳೆಣಿಕೆಯ ವಿಜ್ಞಾನಿಗಳಿಗೆ ಮಾತ್ರ ಅರಿವಾಗಿತ್ತು. ಪುಣ್ಯವಶಾತ್ ಈ ಆಕಾಶಕಾಯವು ಭೂಮಿಗೆ ಅಪ್ಪಳಿಸುವುದರಿಂದ ಸ್ವಲ್ಪದರಲ್ಲೇ ತಪ್ಪಿಹೋಗಿತ್ತು.
2018ಜಿಇ3 ಎಂದು ಹೆಸರಿಡಲಾದ ಈ ಆಕಾಶಕಾಯವು ಅಂತರ್‌ರಾಷ್ಟ್ರೀಯ ಕಾಲಮಾನ 12:11ಕ್ಕೆ ಭೂಮಿಗೆ ಅತಿ ನಿಕಟದೂರದಲ್ಲಿ ಹಾದುಹೋಗಿತ್ತು.
ಈ ದೈತ್ಯಗಾತ್ರದ ಆಕಾಶಕಾಯದ ವಿಸ್ತೀರ್ಣ 47 ಹಾಗೂ 100 ಮೀಟರ್‌ಗಳ ನಡುವೆಯಿತ್ತು. ತಾಸಿಗೆ 1.06 ಸಾವಿರ ಕಿ.ಮೀ. ವೇಗದಲ್ಲಿ ಭೂಮಿಯೆಡೆಗೆ ಅದು ಧಾವಿಸಿ ಬಂದಿತ್ತು. ಈ ಆಕಾಶಕಾಯವು ಭೂಮಿಗೆ ಎಷ್ಟು ಹತ್ತಿರದಲ್ಲಿತ್ತೆಂದರೆ, ಭೂಮಿ ಮತ್ತು ಚಂದ್ರನ ನಡುವಿನ ಸರಾಸರಿ ಅಂತರದ ಅರ್ಧದಷ್ಟಿತ್ತು.
2018ಜಿಇ3 ಆಕಾಶಕಾಯವು, 1908ರಲ್ಲಿ ರಶ್ಯಾದ ಟುಂಗುಸ್ಕಾ ಪ್ರಾಂತದ ಮೇಲೆ ಅಪ್ಪಳಿಸಿ ಭಾರೀ ಹಾನಿಯೆಸಗಿದ ಆಕಾಶಕಾಯದ ಗಾತ್ರಕ್ಕಿಂತ ಸರಿಸುಮಾರು 3.6ರಷ್ಟು ದೊಡ್ಡದಿತ್ತು. ‘‘ಒಂದು ವೇಳೆ 2018 ಜಿ3 ಭೂಮಿಗೆ ಅಪ್ಪಳಿಸಿದ್ದೇ ಆದಲ್ಲಿ, ಅದು ಭಾರೀ ಹಾನಿಯನ್ನೇ ಉಂಟು ಮಾಡಬಹುದಾಗಿತ್ತು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಆದಾಗ್ಯೂ ಇದರಿಂದ ಒಂದು ನಿರ್ದಿಷ್ಟ ಪ್ರದೇಶಕ್ಕೆ ಹಾನಿಯಾಗಬಹುದೇ ಹೊರತು ಇಡೀ ಪ್ರಾಂತಕ್ಕಲ್ಲ’’ವೆಂದು ಅಮೆರಿಕದ ಬಾಹ್ಯಾಕಾಶ ಹಾಗೂ ಹವಾಮಾನ ಇಲಾಖೆಯ ವೆಬ್‌ಸೈಟ್ ವರದಿ ಮಾಡಿದೆ.
ರಶ್ಯದ ಟುಂಗುಸ್ಕಾ ಪ್ರಾಂತಕ್ಕೆ ಅಪ್ಪಳಿಸಿದ ಆಕಾಶಕಾಯಕ್ಕಿಂತಲೂ 2018 ಜಿ3 ಆಕಾಶಕಾಯವು ಗಾತ್ರದಲ್ಲಿ ದೊಡ್ಡದಿತ್ತು ಮಾತ್ರವಲ್ಲ ಜಪಾನ್‌ನ ಹಿರೋಶಿಮಾ ನಗರದ ಮೇಲೆ ಎರಡನೇ ಜಾಗತಿಕ ಮಹಾಯುದ್ಧದ ವೇಳೆ ಎಸೆಯಲಾದ ಅಣುಬಾಂಬ್‌ನ 185 ಪಟ್ಟು ಅಧಿಕ ಶಕ್ತಿಯನ್ನು ಹೊಂದಿತ್ತು ಎಂದು ಸ್ಪೇಸ್.ಕಾಂ ವರದಿ ಮಾಡಿದೆ.