ಫೇಸ್‍ಬುಕ್ ಮೂಲಕ ನಿಮ್ಮ ಮೊಬೈಲ್ ರಿಚಾರ್ಜ್ ಮಾಡುವುದು ಹೇಗೆ ?
ಇಲ್ಲಿದೆ ಮಾಹಿತಿ
ಹೊಸದಿಲ್ಲಿ,ಎ.19: ಭಾರತದಲ್ಲಿ ಫೇಸ್‍ಬುಕ್ ತನ್ನ ಬಳಕೆದಾರರಿಗೆ ಹೊಸ ಸೌಲಭ್ಯ ಕಲ್ಪಿಸಿದ್ದು, ಇದರ ಅನ್ವಯ ಫೇಸ್‍ಬುಕ್ ಬಳಕೆದಾರರು ತಮ್ಮ ಪ್ರೀಪೈಯ್ಡ್ ಮೊಬೈಲ್‍ಗಳ ರೀಚಾರ್ಜ್ ಮಾಡಬಹುದಾಗಿದೆ. ಪ್ರಸ್ತುತ ಇದು ಫೇಸ್‍ಬುಕ್‍ನ ಅಂಡ್ರಾಯ್ಡ್ ಅಪ್ಲಿಕೇಶನ್‍ನಲ್ಲಿ ಲಭ್ಯವಿದೆ.
ಭಾರತದಲ್ಲಿ ಹೊಸ ಪಾವತಿ ಸೇವಾ ಸೌಲಭ್ಯವನ್ನು ಫೇಸ್‍ಬುಕ್ ಆರಂಭಿಸುತ್ತಿದೆ ಎಂಬ ವರದಿಗಳ ಬೆನ್ನಲ್ಲೇ ಹೊಸ ಸೌಲಭ್ಯ ಆರಂಭಿಸಿದೆ. ಪಾವತಿ ಸೇವೆಯು ಮೆಸೆಂಜರ್ ನೊಂದಿಗೆ ಏಕೀಕೃತಗೊಂಡಿದ್ದು, ಇದು ವಾಟ್ಸ್ ಆಪ್‍ಪಾವತಿ ಸೇವೆಯಿಂದ ಸ್ವತಂತ್ರವಾಗಿ ಉಳಿಯಲಿದೆ ಎಂದು ಫ್ಯಾಕ್ಟರ್ಸ್ ಡೈಲಿ ವರದಿ ಮಾಡಿದೆ.
ಹೊಸ ಮೊಬೈಲ್ ರೀಚಾರ್ಜ್ ಸೇವೆ ಪಡೆಯಲು ಫೇಸ್‍ಬುಕ್‍ನ ಅಂಡ್ರಾಯ್ಡ್ ಅಪ್ಲಿಕೇಶನ್‍ನ ಇತ್ತೀಚಿನ ಅವತರಣಿಕೆ ಡೌನ್‍ಲೋಡ್ ಮಾಡಿಕೊಳ್ಳಬೇಕಾಗುತ್ತದೆ. ಬಲಬದಿಯಲ್ಲಿ ಮೆನು ಬಟನ್ ಒತ್ತಿ, ಕೆಳಕ್ಕೆ ಹೋದ ತಕ್ಷಣ, ಮೊಬೈಲ್ ಟಾಪ್ ಅಪ್ ಎಂಬ ಆಯ್ಕೆಯನ್ನು ನೀವು ಕಾಣಬಹುದು.
ಮುಂದಿನ ಸ್ಕ್ರೀನ್‍ನಲ್ಲಿ ನಿಮ್ಮ ಪ್ರಿಪೆಯ್ಡ್ ಮೊಬೈಲ್ ಟಾಪ್ ಅಪ್‍ನ ಬಟನ್ ಕಾಣುತ್ತೀರಿ. ಲಭ್ಯವಿರುವ ಪ್ಲಾನ್ ಅನ್ವಯ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಿ ಟಾಪ್ ಅಪ್ ಮಾಡಬಹುದಾಗಿದೆ. ಇದು ಸಂಪೂರ್ಣ ಸುರಕ್ಷಿತ ಹಾಗೂ ಉಚಿತ ಎಂದು ಫೇಸ್‍ಬುಕ್ ಹೇಳಿದೆ. ಪ್ರಸ್ತುತ ಫೇಸ್‍ಬುಕ್‍ನಲ್ಲಿ ವೀಸಾ ಮತ್ತು ಮಾಸ್ಟರ್ ಕಾರ್ಡ್ ಮೂಲಕ ಮಾತ್ರ ಸೇವೆ ಲಭ್ಯವಿದೆ.