ಶಿವಮೊಗ್ಗ ಜಿಲ್ಲೆಯಲ್ಲಿ ಘಟಾನುಘಟಿಗಳಿಂದ ನಾಮಪತ್ರ ಸಲ್ಲಿಕೆ
ಶಿವಮೊಗ್ಗ, ಏ. 19: ವಿಧಾನಸಭೆ ಚುನಾವಣೆ ನಾಮಪತ್ರ ಸಲ್ಲಿಕೆಗೆ 3 ನೇ ದಿನವಾದ ಗುರುವಾರ ಜಿಲ್ಲೆಯಲ್ಲಿ ನಾಮಪತ್ರ ಪತ್ರ ಸಲ್ಲಿಕೆ ಕಾರ್ಯ ಅಕ್ಷರಶಃ ಕಾವೇರಿತ್ತು. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪ್ರಮುಖ ನಾಯಕರು ಸೇರಿದಂತೆ ಇತರೆ ಪಕ್ಷ ಹಾಗೂ ಪಕ್ಷೇತರ ಅಭ್ಯರ್ಥಿಗಳು ಸಾಲುಸಾಲಾಗಿ ತಮ್ಮ ಉಮೇದುವಾರಿಕೆ ಅರ್ಜಿ ಸಲ್ಲಿಸಿದರು.
ಬಿಜೆಪಿ ಅಭ್ಯರ್ಥಿಗಳಾಗಿ ಶಿಕಾರಿಪುರದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಶಿವಮೊಗ್ಗದಲ್ಲಿ ಕೆ.ಎಸ್.ಈಶ್ವರಪ್ಪ, ಕಾಂಗ್ರೆಸ್ ಅಭ್ಯರ್ಥಿಗಳಾಗಿ ತೀರ್ಥಹಳ್ಳಿಯಲ್ಲಿ ಕಿಮ್ಮನೆ ರತ್ನಾಕರ್, ಭದ್ರಾವತಿಯಲ್ಲಿ ಬಿ.ಕೆ.ಸಂಗಮೇಶ್ವರ್, ಜೆಡಿಎಸ್ ಅಭ್ಯರ್ಥಿಗಳಾಗಿ ಸೊರಬದಲ್ಲಿ ಮಧು ಬಂಗಾರಪ್ಪ ಹಾಗೂ ಶಿಕಾರಿಪುರದಲ್ಲಿ ಹೆಚ್.ಟಿ.ಬಳಿಗಾರ್ ರವರು ನಾಮಪತ್ರ ಸಲ್ಲಿಸಿದ ಪ್ರಮುಖ ನಾಯಕರಾಗಿದ್ದಾರೆ.
ಉಳಿದಂತೆ ಶಿವಮೊಗ್ಗ ನಗರದಲ್ಲಿ ಸ್ವತಂತ್ರ ಅಭ್ಯರ್ಥಿಗಳಾಗಿ ವಸಂತಕುಮಾರ್, ಯಾಸೀನ್ಮುಬಾರಕ್, ತೀರ್ಥಹಳ್ಳಿಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕುಣಜೆ ಮಂಜುನಾಥ್, ಶಿಕಾರಿಪುರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಡಿ.ಎಸ್.ಈಶ್ವರಪ್ಪ, ಸೊರಬದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಹುಣವಳ್ಳಿ ಗಂಗಾಧರಪ್ಪ, ಭದ್ರಾವತಿಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಓಂ ವಿಜಯವಂಶಿಯವರು ಉಮೇದುವಾರಿಕೆ ಅರ್ಜಿ ಸಲ್ಲಿಸಿದ್ದಾರೆ.
ಮೆರವಣಿಗೆ: ಕೆಲ ನಾಯಕರು ಭಾರೀ ಮೆರವಣಿಗೆಯಲ್ಲಿ ಆಗಮಿಸಿ ನಾಮಪತ್ರ ಸಲ್ಲಿಸುವ ಮೂಲಕ ಶಕ್ತಿ ಪ್ರದರ್ಶನ ಮಾಡಿದರು. ಉಳಿದಂತೆ ಕೆಲ ಅಭ್ಯರ್ಥಿಗಳು ಸೀಮಿತ ಬೆಂಬಲಿಗರೊಂದಿಗೆ ಆಗಮಿಸಿ ತಮ್ಮ ಉಮೇದುವಾರಿಕೆ ಅರ್ಜಿ ಸಲ್ಲಿಸಿದರು. ಶಿಕಾರಿಪುರದಲ್ಲಿ ಬಿ.ಎಸ್.ಯಡಿಯೂರಪ್ಪ ಹುಚ್ಚರಾಯ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ತಾಲೂಕು ಕಚೇರಿವರೆಗೆ ಮೆರವಣಿಗೆಯಲ್ಲಿ ಆಗಮಿಸಿದರು. ನಂತರ ಛತ್ತಿಸ್ ಘಡದ ಮುಖ್ಯಮಂತ್ರಿ ರಮಣ್ಸಿಂಗ್, ಕೇಂದ್ರ ಸಚಿವ ಅನಂತಕುಮಾರ್, ಪುತ್ರ ಬಿ.ವೈ.ರಾಘವೇಂದ್ರ ಜೊತೆಗೆ ಉಮೇದುವಾರಿಕೆ ಅರ್ಜಿ ಸಲ್ಲಿಸಿದರು.
ಶಿವಮೊಗ್ಗದಲ್ಲಿ ಕೆ.ಎಸ್.ಈಶ್ವರಪ್ಪರವರು ರಾಮಣ್ಣ ಶ್ರೇಷ್ಠಿ ಪಾರ್ಕ್ ಆವರಣದಿಂದ ಮೆರವಣಿಗೆಯಲ್ಲಿ ಆಗಮಿಸಿದರು. 12 ಗಂಟೆಯೊಳಗೆ ನಾಮಪತ್ರ ಸಲ್ಲಿಸಲು ನಿರ್ಧರಿಸಿದ್ದ ಅವರು, ಮೆರವಣಿಗೆಯಿಂದ ಅರ್ಧದಲ್ಲಿಯೇ ಕಾರಿನ ಮೂಲಕ ಮಹಾನಗರ ಪಾಲಿಕೆ ಕಚೇರಿಗೆ ಆಗಮಿಸಿದರು. ಚುನಾವಣಾಧಿಕಾರಿಗೆ ಉಮೇದುವಾರಿಕೆ ಅರ್ಜಿ ಸಲ್ಲಿಸಿದರು. ಈ ವೇಳೆ ಪತ್ನಿ ಜಯಲಕ್ಷ್ಮಿ, ಪಕ್ಷದ ಜಿಲ್ಲಾಧ್ಯಕ್ಷ ರುದ್ರೇಗೌಡ, ಮುಖಂಡರಾದ ಅನಂತಶಾಸ್ತ್ರಿ, ಲಕ್ಷ್ಮಣ್ ಉಪಸ್ಥಿತರಿದ್ದರು.
ಸೊರಬ ಪಟ್ಟಣದ ರಂಗನಾಥ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಮಧು ಬಂಗಾರಪ್ಪರವರು ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ನಂತರ ತಾಲೂಕು ಕಚೇರಿಗೆ ಆಗಮಿಸಿ ಚುನಾವಣಾಧಿಕಾರಿಗೆ ಉಮೇದುವಾರಿಕೆ ಅರ್ಜಿ ಸಲ್ಲಿಸಿದರು. ಬಂಗಾರಧಾಮದಲ್ಲಿ ಬಹಿರಂಗ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಕುಟುಂಬ ಸದಸ್ಯರಾದ ಅನಿತಾ ಮಧು ಬಂಗಾರಪ್ಪ, ಗೀತಾ ಶಿವರಾಜ್ಕುಮಾರ್, ಸುಜತಾ ತಿಲಕ್ಕುಮಾರ್ ಸೇರಿದಂತೆ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.
ಕಾಂಗ್ರೆಸ್ ಅಭ್ಯರ್ಥಿಗಳಾದ ಕಿಮ್ಮನೆ ರತ್ನಾಕರ್ ಹಾಗೂ ಬಿ.ಕೆ.ಸಂಗಮೇಶ್ವರ್ರವರ ನಾಮಪತ್ರ ಸಲ್ಲಿಕೆ ಕಾರ್ಯ ಸರಳವಾಗಿತ್ತು. ತೀರ್ಥಹಳ್ಳಿ ಪಟ್ಟಣದ ಕಾಂಗ್ರೆಸ್ ಪಕ್ಷದ ಕಚೇರಿಯಿಂದ ಬೆಂಬಲಿಗರ ಜೊತೆ ರಾಮೇಶ್ವರ, ಗಣಪತಿ ಹಾಗೂ ಮಾರಿಕಾಂಬ ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಿದ ಕಿಮ್ಮನೆ ರತ್ನಾಕರ್ ರವರು ಇಕಜನಂತರ ತಾಲೂಕು ಕಚೇರಿಗೆ ತೆರಳಿ ಉಮೇದುವಾರಿಕೆ ಅರ್ಜಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ನಾರಾಯಣರಾವ್, ಕೆಸ್ತೂರು ಮಂಜುನಾಥ್, ರಾಘವೇಂದ್ರ, ಖಾಸೀಂ ಸಾಬ್ ಉಪಸ್ಥಿತರಿದ್ದರು.
ಶಿಕಾರಿಪುರ ಪಟ್ಟಣದ ಹುಚ್ಚುರಾಯ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಹೆಚ್.ಟಿ.ಬಳಿಗಾರ್ರವರು ತಮ್ಮ ಬೆಂಬಲಿಗರ ಜೊತೆ ಮೆರವಣಿಗೆಯಲ್ಲಿ ಆಗಮಿಸಿ ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಬಿಳಕಿ ನಾಗರಾಜಗೌಡ, ಮುಕಬುಲ್ ಸಾಹೇಬರು, ಬಸಣ್ಣ ಸೇರಿದಂತೆ ಮೊದಲಾದವರಿದ್ದರು.
ಭದ್ರಾವತಿ ಪಟ್ಟಣದ ಹಳೇ ಸಂತೆ ಮೈದಾನದಲ್ಲಿರುವ ಮನೆಯಿಂದ ಬೆಂಬಲಿಗರ ಜೊತೆ ತಾಲೂಕು ಕಚೇರಿಗೆ ಆಗಮಿಸಿದ ಮಾಜಿ ಶಾಸಕ ಬಿ.ಕೆ.ಸಂಗಮೇಶ್ವರ್ರವರು ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು. ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಜಯದ ಆತ್ಮವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಬಿ.ಟಿ.ನಾಗರಾಜ್, ಎ.ಮಾಧು, ಬಾಬು, ಅಣ್ಣೋಜಿರಾವ್, ರಾಘವೇಂದ್ರ, ವಸಂತಕುಮಾರ್ ಸೇರಿದಂತೆ ಮೊದಲಾದವರಿದ್ದರು.
'50 ಸಾವಿರ ಲೀಡ್ನಲ್ಲಿ ಜಯ' : ಬಿ.ಎಸ್.ಯಡಿಯೂರಪ್ಪ
'ಶಿಕಾರಿಪುರ ಕ್ಷೇತ್ರದಲ್ಲಿ ತಮ್ಮ ಗೆಲುವು ನಿಶ್ಚಿತವಾಗಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಸರಿಸುಮಾರು 50 ಸಾವಿರಕ್ಕೂ ಅಧಿಕ ಮತಗಳ ಅಂತರದಲ್ಲಿ ಜಯ ಗಳಿಸಲಿದ್ದೇನೆ' ಎಂದು ಬಿಜೆಪಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶಿಕಾರಿಪುರ ಪಟ್ಟಣದ ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ ನಂತರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಜನತೆ ಬೇಸತ್ತಿದ್ದಾರೆ. ರಾಜ್ಯಾದ್ಯಂತ ಬಿಜೆಪಿ ಪರವಾದ ಅಲೆ ಕಂಡುಬರುತ್ತಿದೆ. ಪೂರ್ಣ ಬಹುಮತದೊಂದಿಗೆ ಬಿಜೆಪಿ ಸರ್ಕಾರ ರಚನೆ ಮಾಡಲಿದೆ ಎಂದು ತಿಳಿಸಿದ್ದಾರೆ.
ಶಿಕಾರಿಪುರ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸಿದ್ದೇನೆ. ಮುಂದೆ ಬರುವ ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ಕ್ಷೇತ್ರದ ಹಲವು ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಗಮನಹರಿಸಲಾಗುವುದು. ಜನತೆಗೆ ನೀಡಿದ್ದ ಭರವಸೆಯಂತೆ ಮುನ್ನಡೆಯಲಾಗುವುದು ಎಂದು ತಿಳಿಸಿದ್ದಾರೆ.
'ತಮಗೆ ಎದುರಾಳಿಗಳೇ ಕಾಣುತ್ತಿಲ್ಲ' : ಕೆ.ಎಸ್.ಈಶ್ವರಪ್ಪ
'ತಮಗೆ ಎದುರಾಳಿಗಳೇ ಕಾಣುತ್ತಿಲ್ಲ. ಈ ಬಾರಿ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ತಮ್ಮ ಗೆಲುವು ನಿಶ್ಚಿತವಾಗಿದೆ' ಎಂದು ಬಿಜೆಪಿ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ನಾಮಪತ್ರ ಸಲ್ಲಿಸಿದ ನಂತರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಪರವಾದ ಅಲೆ ಕಂಡುಬರುತ್ತಿದೆ. ಕಳೆದ ಬಾರಿ ಬಿಜೆಪಿ-ಕೆಜೆಪಿ ಮತ ವಿಭಜನೆಯಿಂದ ಸೋಲಾಗುವಂತಾಯಿತು. ಕಳೆದ ಬಾರಿ ಎರಡೂ ಪಕ್ಷ ಪಡೆದ ಮತ ಗಣನೆಗೆ ತೆಗೆದುಕೊಂಡರೆ, ಈ ಬಾರಿ ಸುಮಾರು 30 ಸಾವಿರಕ್ಕೂ ಅಧಿಕ ಮತಗಳ ಅಂತರದಲ್ಲಿ ಜಯ ಸಾಧಿಸುವುದು ನಿಶ್ಚಿತವಾಗಿದೆ ಎಂದರು.
ಕಾಂಗ್ರೆಸ್ ಸರ್ಕಾರದ ಪಕ್ಷಪಾತ ಧೋರಣೆ, ದುರಾಡಳಿತದಿಂದ ಜನತೆ ಬೇಸತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲ ರಂಗಗಳಲ್ಲಿಯೂ ವಿಫಲರಾಗಿದ್ದಾರೆ. ಈ ಕಾರಣದಿಂದ ಬಿಜೆಪಿ ಪಕ್ಷಕ್ಕೆ ಜನತೆ ಬೆಂಬಲಿಸಲು ಮುಂದಾಗಿದ್ದು, ಬಿ.ಎಸ್.ಯಡಿಯೂರಪ್ಪ ಸಿಎಂ ಆಗುವುದು ನಿಶ್ಚಿತವಾಗಿದೆ ಎಂದರು.
'ತಮ್ಮ ಗೆಲುವು ನಿಶ್ಚಿತ' : ಕಿಮ್ಮನೆ ರತ್ನಾಕರ್
'ತೀರ್ಥಹಳ್ಳಿ ಕ್ಷೇತ್ರದಲ್ಲಿ ತಮ್ಮ ಗೆಲುವು ನಿಶ್ಚಿತವಾಗಿದೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ' ಎಂದು ತೀರ್ಥಹಳ್ಳಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕಿಮ್ಮನೆ ರತ್ನಾಕರ್ ರವರು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಕಳೆದ ಬಾರಿ ಚುನಾವಣೆಯಲ್ಲಿ ನೀಡಿದ್ದ ಭರವಸೆಯಂತೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸಿದ್ದೇನೆ. ಹತ್ತು ಹಲವು ಯೋಜನೆಗಳ ಅನುಷ್ಠಾನ ಮಾಡಿದ್ದೇನೆ. ನೂರಾರು ಕೋಟಿ ರೂ. ಅನುದಾನ ತಂದಿದ್ದೇನೆ. ಮತದಾರರು ತಮ್ಮ ಕಾರ್ಯವೈಖರಿಗೆ ಬೆಂಬಲ ವ್ಯಕ್ತಪಡಿಸುವ ವಿಶ್ವಾಸ ತಮ್ಮದಾಗಿದೆ ಎಂದು ಹೇಳಿದ್ದಾರೆ.
'ಜೆಡಿಎಸ್ ಪರವಾದ ಅಲೆಯಿದೆ: ಹೆಚ್.ಟಿ.ಬಳಿಗಾರ್
'ಶಿಕಾರಿಪುರ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಪರವಾದ ಅಲೆ ಕಂಡುಬರುತ್ತಿದೆ. ಈ ಬಾರಿಯ ಚುನಾವಣೆಯಲ್ಲಿ ತಾವು ಜಯ ಸಾಧಿಸುವುದು ಖಚಿತವಾಗಿದೆ' ಎಂದು ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಉಮೇದುವಾರಿಕೆ ಅರ್ಜಿ ಸಲ್ಲಿಸಿದ ಹೆಚ್.ಟಿ.ಬಳಿಗಾರ್ ರವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಾಮಪತ್ರ ಸಲ್ಲಿಸಿದ ನಂತರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ನೀಡಿದ ಜನಪರ ಆಡಳಿತಗಳೇ ತಮ್ಮ ಗೆಲುವಿಗೆ ಶ್ರೀರಕ್ಷೆಯಾಗಿದೆ. ಹಾಗೆಯೇ ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕೆಂಬ ಉದ್ದೇಶದಿಂದ ಶಿಕಾರಿಪುರ ಕ್ಷೇತ್ರದ ಜನತೆಯು ತಮಗೆ ಮತ ಹಾಕುವ ನಿರ್ಧಾರ ಮಾಡಿದ್ದಾರೆ ಎಂದರು.
ಬಿಜೆಪಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪರವರ ಸೋಲು ನಿಶ್ಚಿತವಾಗಿದೆ. ಕ್ಷೇತ್ರದಾದ್ಯಂತ ಅವರ ವಿರೋಧಿ ಅಲೆಯಿದೆ. ಮತದಾರರ ವಲಯದಲ್ಲಿ ಅವರ ಬಗ್ಗೆ ಆಕ್ರೋಶವಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.