ಹಬಾಶಿಕಾ ಕೊರಗ ಜನಾಂಗದ ಸಾಂಸ್ಕೃತಿಕ ಪಠ್ಯ
ಹಬಾಶಿಕಾನ ಮದುವೆಯ ದಿಬ್ಬಣದಲ್ಲಿ ಕೊರಗರ ಸಂಗೀತ ಮತ್ತು ನರ್ತನ. ಡೋಲು, ತಾಳ, ಕೊಳಲು, ಢಕ್ಕೆ ಇವೆಲ್ಲ ಕೊರಗರ ಸಂಗೀತ ಸಲಕರಣೆಗಳು. ಈ ನಾಟಕವು ಕೊರಗ ಜನಾಂಗದ ಆದಿ ಪುರಾಣದೊಂದಿಗೆ ಆ ಜನಾಂಗದ ಹಲವಾರು ಅನನ್ಯತೆಗಳನ್ನು ಹೊರಗೆಡಹುತ್ತದೆ. ಅವರ ಆ ಕೊರಗ ಪುರಾಣದಿಂದ ನಾವು ಆ ಜನಾಂಗದ ಕೆಲವು ಲಕ್ಷಣಗಳನ್ನು ಹೀಗೆಂದು ಗುರುತಿಸಬಹುದಾಗಿದೆ. ತಮ್ಮ ಪುರಾಣದ ಹಬಾಶಿಕಾ ಒಬ್ಬ ದೊರೆ. ತುಳುನಾಡಿನ ರಾಜ. ಪ್ರಭುತ್ವದ ಇತಿಹಾಸ ಇವರನ್ನು ಪ್ರಭುತ್ವದತ್ತ ತುಡಿಯುವಿಕೆಯನ್ನು ತೋರಿಸುತ್ತದೆ. ಪ್ರಭುತ್ವವೇ ಅವರ ಬಿಡುಗಡೆಯ ದಾರಿಯಾಗಿ ಧ್ವನಿತಗೊಂಡಿದೆ. ಇಡೀ ಸನಾತನ ಶ್ರೇಣೀಕೃತ ಸಮಾಜದ ಮೂಲಪುರುಷ ಕೊರಗ ಎಂಬ ಅವರ ನಂಬಿಕೆ ಅವರ ಉನ್ನತೀಕರಣದ ಹಸಿವಿಗೆ ಸಾಕ್ಷಿಯಾಗಿ ನಿಂತಿದೆ.
ದಲಿತ ಆದಿಮ ಸಾಂಸ್ಕೃತಿಕ ಪರಂಪರೆ ಧಾರೆಗಳೊಂದಿಗೆ ಬೆಸೆದುಕೊಂಡ ದಲಿತ ಪುರಾಣಗಳು ಆಯಾ ದಲಿತ ಜನಾಂಗದ ವಿಶಿಷ್ಟ ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ ಅನನ್ಯತೆಯನ್ನು ಎತ್ತಿ ಹಿಡಿಯುತ್ತವೆ. ಆ ಆದಿಮ ದಲಿತ ಸಂಸ್ಕೃತಿಗಳು ಶಿಷ್ಟ ಸಾಂಸ್ಕೃತಿಕ ರೀತಿ, ನೀತಿಗಳೊಂದಿಗೆ ಪರಸ್ಪರ ಮುಖಾಮುಖಿಯಾಗುತ್ತವೆ. ಯಾವ ರೀತಿ ಹಿಂದೂ ಸವರ್ಣಿಯ ಸಮಾಜದ ಶ್ರೇಣೀಕೃತ ವರ್ಣವ್ಯವಸ್ಥೆಯುಳ್ಳ ಸಮಾಜವು ತಮ್ಮ ಅನುಕೂಲಕ್ಕಾಗಿ ಮಾಡಿಕೊಂಡ ಪುರಾಣಗಳಿವೋ, ಅಂತೆಯೇ ಪ್ರತೀ ದಲಿತ ಸಮುದಾಯವೂ ತಮ್ಮದೇ ಆದ ವಿಶಿಷ್ಟ ಮೌಖಿಕ ಪುರಾಣಗಳ ಸೃಷ್ಟಿಯನ್ನು ಮಾಡಿಕೊಂಡಿದ್ದನ್ನು ನಾವು ಕಾಣುತ್ತೇವೆ. ಆ ದಲಿತ ಪುರಾಣಗಳು ಶಿಷ್ಟ ಹಿಂದೂ ಪುರಾಣಗಳಿಗೆ ಸಮಾನಾಂತರವಾಗಿ ಮತ್ತು ಅವುಗಳ ವಿರುದ್ಧ ದಿಶೆಯತ್ತ ಇರುತ್ತವೆ. ಮತ್ತು ಹೆಚ್ಚಿನ ದಲಿತ ಪುರಾಣಗಳು ಜಗತ್ತಿನ ಸೃಷ್ಟಿ, ಮತ್ತು ಅಲ್ಲಿನ ಪ್ರಾಣಿ, ಪಶು ಪಕ್ಷಿಗಳ, ಮತ್ತು ಅನಂತರದಲ್ಲಿ ಮನುಷ್ಯರ ಸೃಷ್ಟಿಯ ಕುರಿತು ತಮ್ಮ ತಮ್ಮದೇ ಕಥೆಗಳನ್ನು ನಮ್ಮ ಮುಂದಿಡುತ್ತವೆ. ಮತ್ತು ಆ ದಲಿತ ಪುರಾಣಗಳು ದಲಿತ ಸಮುದಾಯಗಳಿಂದ ಮೌಖಿಕವಾಗಿ ಹಲವಾರು ಜಾನಪದೀಯ ಸಂಗೀತ ಸಲಕರಣೆಗಳೊಂದಿಗೆ ಹಾಡಲ್ಪಡುತ್ತವೆ. ಉದಾಹರಣೆಗಾಗಿ ಮಾದಿಗರು ‘ಮಾರಮ್ಮ’ ಎಂಬ ಮಾತೃ ದೇವತೆಯನ್ನು ಪೂಜಿಸುತ್ತಾರೆ. ಆ ಮಾದಿಗರಲ್ಲಿ ಅಸಾದಿಗಳು ಎಂಬ ಸಮುದಾಯವು ಮಾರಮ್ಮನ ಕುರಿತಾದ ಅವಳ ದೈವಿಕತೆಯ ಕುರಿತಾದ ಹಾಡುಗಳನ್ನು ಹಾಡುತ್ತಾರೆ. ಅದು ಮಾರಮ್ಮ ಜಾತ್ರೆಯ ಧಾರ್ಮಿಕ ವಿಧಿವಿಧಾನಗಳ ಭಾಗವಾಗಿರುತ್ತದೆ. ನೀಲಗಾರರಿಗೆ ಮಂಟೇಸ್ವಾಮಿ, ಕಂಸಾಳೆಯವರಿಗೆ ಮಹದೇಶ್ವರ, ಚೌಡಿಕೆಯವರಿಗೆ ಎಲ್ಲಮ್ಮ ಹಾಗೆಯೇ ದಕ್ಷಿಣ ಕನ್ನಡ ಜಿಲ್ಲೆಯ ಪರಿಶಿಷ್ಟ ಜನಾಂಗ ಕೊರಗರು. ಅವರ ದೈವ ಕೊರಗ ತನಿಯ ಅಥವಾ ಕೊರಗಜ್ಜ. ಇತ್ತೀಚೆಗೆ ದಲಿತ ಕವಿಗಳು, ಸಾಹಿತಿಗಳು ತಮ್ಮ ಸಾಂಸ್ಕೃತಿಕ ಅನನ್ಯತೆಯನ್ನು ತಮ್ಮ ಸಮುದಾಯದ ಮೌಖಿಕ ಪುರಾಣಗಳೊಂದಿಗೆ ದಲಿತ ಸಂವೇದನೆಯನ್ನು ಮುಖಾಮುಖಿಯಾಗಿಸಿ ವಿಶಿಷ್ಟ ಬಗೆಯ ಸಾಹಿತ್ಯ ಕೃತಿಗಳನ್ನು ರಚಿಸತೊಡಗಿದ್ದಾರೆ. ಅವರಲ್ಲಿ ಅಸಾದಿ ಜನಾಂಗದವರಾದ ವಡ್ಡಗೆರೆ ನಾಗರಾಜಯ್ಯ ಅವರು ‘ಅಸಾದಿ’ ಎಂಬ ಖಂಡ ಕಾವ್ಯವನ್ನು ರಚಿಸಿ ವಿಶಿಷ್ಟ ಕೊಡುಗೆಯನ್ನು ಕನ್ನಡ ಸಾಹಿತ್ಯಕ್ಕೆ ಕೊಡಮಾಡಿದ್ದಾರೆ. ಅದೇ ಜನಾಂಗದ ರಂಗನಾಥ್ ಶಿರಾ ಇವರು ‘ಶ್ರೀ ಬಾಲಗೌರಿ’ ಎಂಬ ವಿಶಿಷ್ಟ ಬಗೆಯ ದಲಿತ ಕಾದಂಬರಿಯನ್ನು ರಚಿಸಿದ್ದಾರೆ. ಅಂತೆಯೇ ಕೊರಗ ಜನಾಂಗದ ವಸುಮ ಕಾವ್ಯನಾಮವುಳ್ಳ ಕವಿ, ಕಾದಂಬರಿಕಾರ, ಕಥೆಗಾರ ‘ಹಬಾಶಿಕಾ’ ನಾಟಕವನ್ನು ರಚಿಸಿ ಕೊರಗ ಜನಾಂಗದ ಪುರಾಣವನ್ನು ಐತಿಹಾಸಿಕ ಸತ್ಯವೆನ್ನುವ ನಂಬಿಕೆಯಲ್ಲಿ ತಮ್ಮ ಅನನ್ಯತೆಯನ್ನು ಮೆರೆದಿದ್ದಾರೆ. ತಮ್ಮ ಶೋಷಿತ ಸಮುದಾಯದ ಒಡಲಾಳದ ಕೃತಿಗಳನ್ನು ರಚಿಸಿದ ಸಾಹಿತ್ಯ ರಚನೆಗಳು ಸಾಂಸ್ಕೃತಿಕ ಪಠ್ಯವಾಗಿ, ಸಮಾಜಶಾಸ್ತ್ರೀಯ ಅಧ್ಯಯನವಾಗಿ ನಮಗೆ ಪ್ರಸ್ತುತವಾಗುತ್ತದೆ.
ಅಂತೆಯೇ ಈ ನಾಟಕ ‘ಹಬಾಶಿಕಾ’ ತುಳುನಾಡನ್ನು ಆಳಿದನೆಂಬ ಕೊರಗ ಸಮುದಾಯದವನಾದ ಹಬಾಶಿಕಾ ಎಂಬ ದಲಿತ ರಾಜನ ದಂತಕಥೆಯಾಧಾರಿತ ದಲಿತ ಪುರಾಣವಾದ ದಲಿತ ಸಂಸ್ಕೃತಿಯ ಅನನ್ಯತೆಯನ್ನು ಎತ್ತಿ ಹಿಡಿಯುವ ಸಾಂಸ್ಕೃತಿಕ ನಾಟಕವಾಗಿದೆ. ಇಲ್ಲಿ 9 ದೃಶ್ಯಗಳಲ್ಲಿ ಚುರುಕಾದ ಸಂಭಾಷಣೆಯೊಂದಿಗೆ ಕೊರಗ ಜಾನಪದ ನೃತ್ಯ ಹಾಗೂ ಸಂಗೀತ ಮತ್ತು ಕೊರಗ ವಾದ್ಯಗಳೊಂದಿಗೆ ಅತ್ಯಂತ ಪರಿಣಾಮಕಾರಿಯಾಗಿ ಅಭಿವ್ಯಕ್ತಿಸಲಾಗಿದೆ. ಹೆಚ್ಚಿನ ದಲಿತ ಪುರಾಣಗಳಲ್ಲಿ ಆಯಾ ದಲಿತ ಸಮುದಾಯವು ಬ್ರಾಹ್ಮಣ ಸಮುದಾಯದ ದಬ್ಬಾಳಿಕೆಯೊಂದಿಗೆ ಮುಖಾಮುಖಿಯಾಗುತ್ತವೆ. ಈ ನಾಟಕದಲ್ಲಿಯೂ ಬನವಾಸಿಯನ್ನು ಆಳಿದ ಮಯೂರಶರ್ಮ ಎಂಬ ಬ್ರಾಹ್ಮಣ ರಾಜನು ತುಳುನಾಡಿನ ಕೊರಗ ರಾಜನಾದ ಹಬಾಶಿಕಾನಿಂದ ಸೋತು ಹೋಗುತ್ತಾನೆ. ಆಗ ಮಯೂರ ಶರ್ಮನಿಗೆ ನಾಚಿಕೆಯಾಗುತ್ತದೆ, ಅಂದರೆ ಮುಖಭಂಗವಾಗುತ್ತದೆ. ಆದರೆ ರಣಾಂಗಣದಲ್ಲಿ ಹಬಾಶಿಕಾನ ಸೈನ್ಯವನ್ನು ಎದುರಿಸುವ ಕೌಶಲ್ಯವಾಗಲಿ, ತಾಕತ್ತಾಗಲಿ ಮಯೂರ ಶರ್ಮನ ಸೈನ್ಯಕ್ಕಿರುವುದಿಲ್ಲ. ಹಾಗಾಗಿ ಮಯೂರಶರ್ಮನು ತನ್ನದೇ ಸಮುದಾಯದವನಾದ ಮಂಜೇಶ್ವರದ ರಾಜ ನಾಗಶರ್ಮನ ಸಹಾಯವನ್ನು ಯಾಚಿಸುತ್ತಾನೆ. ಆ ಇಬ್ಬರು ಬ್ರಾಹ್ಮಣ ದೊರೆಗಳಿಗೆ ಹಬಾಶಿಕಾನ ಸೈನ್ಯವನ್ನು ಎದುರಿಸುವ ಕೌಶಲ್ಯವಿರುವುದಿಲ್ಲ. ರಣಾಂಗಣದಲ್ಲಿ ಸೋಲಿಸಲು ಅಸಾಧ್ಯವಾದ ಹಬಾಶಿಕಾನನ್ನು ಮೋಸದಿಂದ ಕೊಲ್ಲಿಸುವ ಕುತಂತ್ರವನ್ನು ನಾಗಶರ್ಮ ಮಾಡುತ್ತಾರೆ. ನಾಗಶರ್ಮನು ಹಬಾಶಿಕಾನಿಗೆ ತನ್ನ ಮಗಳು ನೀರಜದೇವಿಯನ್ನು ಹಬಾಶಿಕಾನ ಶೌರ್ಯಕ್ಕೆ ಮೆಚ್ಚಿ ವಿವಾಹ ಮಾಡಿಕೊಡುವುದಾಗಿ ಪತ್ರ ಕಳುಹಿಸುತ್ತಾನೆ. ಹಬಾಶಿಕಾ ನಾಗಶರ್ಮನನ್ನು ನಂಬಿಬಿಡುತ್ತಾನೆ. ಮತ್ತು ದಿಬ್ಬಣ ಸಮೇತ ಮಂಜೇಶ್ವರಕ್ಕೆ ಆಗಮಿಸುತ್ತಾನೆ. ಅಲ್ಲಿ ಆ ಹಬಾಶಿಕಾ ಮತ್ತು ಅವನ ಪರಿವಾರದವರಿಗೆ ವಿಶ್ರಾಂತಧಾಮದಲ್ಲಿ ತಂಗುವ ವ್ಯವಸ್ಥೆ ಮಾಡಲಾಗುತ್ತದೆ. ಅವರಿಗೆ ಕಂಠಪೂರ್ತಿ ಕಳ್ಳಿನ ಸತ್ಕಾರವಾಗುತ್ತದೆ. ಆ ಕಳ್ಳಿನ ಅಮಲಿನಲ್ಲಿರುವಾಗ ನಾಗಶರ್ಮ ಕಠಾರಿಯಿಂದ ಹಬಾಶಿಕಾನ ಕೊಲೆ ಮಾಡಿಸುತ್ತಾನೆ. ಉಳಿದ ಕೊರಗರು ಹೆದರಿ ಓಡಿ ಹೋಗುತ್ತಾರೆ. ನಾಗಶರ್ಮ ತುಳುನಾಡಿಗೆ ನುಗ್ಗಿ ಕೊರಗರೆಲ್ಲರನ್ನೂ ವಧಿಸುತ್ತಾನೆ. ಉಳಿದ ಕೊರಗರು ಕಾಡಿಗೆ ಓಡಿ ಹೋಗಿ ಅಲ್ಲ್ಲಿಯೇ ನೆಲೆಸುತ್ತಾರೆ. ಮತ್ತೆ ಅವರಿಗೆ ನಾಡಿಗೆ ಬರಲು ಯಾರೂ ಅವಕಾಶ ಕೊಡಲಿಲ್ಲ.
ಇದು ಕೊರಗ ಜನಾಂಗದ ಹೋರಾಟದ ಕಥೆಯಾಗಿದೆ. ಆ ಜನಾಂಗದ ಉತ್ಕೃಷ್ಟತೆಯನ್ನು ಹೆಚ್ಚುಗಾರಿಕೆಯನ್ನು ಆ ಪುರಾಣ ವ್ಯಕ್ತಪಡಿಸುತ್ತದೆ. ಉದಾಹರಣೆಗಾಗಿ ಕೊರಗರು ಮಯೂರಶರ್ಮನನ್ನು ಯುದ್ಧದಲ್ಲಿ ಸೋಲಿಸುತ್ತಾರೆ. ಅದು ಹೇಗೆ? ನಾಟಕದ ಪಾತ್ರವೊಂದು ಹೇಳುತ್ತದೆ: ‘‘ಮಹಾಪ್ರಭು! ಹಬಾಶಿಕನ ಪಡೆ ಸಾಮಾನ್ಯವಾದುದಲ್ಲ. ಅವರು ಸಿಡಿಲಿನಂತೆ ಆರ್ಭಟಿಸುತ್ತ ನಮ್ಮನ್ನು ಸುತ್ತುವರಿದು ಪೊದೆಗಳ ಎಡೆಯಿಂದ ಮರಗಳ ಮರೆಯಿಂದ ನಮ್ಮ ಮೇಲೆ ಬಾಣ ಬಿಟ್ಟರು. ಅವರ ಬಾಣಗಳ ಹೊಡೆತಕ್ಕೆ ನಮ್ಮ ಹೆಚ್ಚಿನ ಸೈನಿಕರು ಅಲ್ಲೇ ಸತ್ತು ಹೋದರು’. ಇದು ಆ ಕೊರಗ ಸೈನಿಕರ ಹೆಗ್ಗಳಿಕೆ. ಅವರ ಯುದ್ಧದ ನೀತಿ ನಮ್ಮ ಯುದ್ಧದ ನೀತಿಗೆ ವಿರುದ್ಧವಾಗಿರುವಂತಿದೆ. ಆದರೆ ಆ ಕಾಡುಜನರ ಯುದ್ಧನೀತಿಯೇ ಹಾಗೆ. ಶತ್ರುಗಳನ್ನು ಸುತ್ತುವರಿದು ಮರೆಯಿಂದ ಬಾಣಬಿಡುವುದು ಅವರ ಸಮರ ನೀತಿ’’ ಎಂದು ಮಯೂರಶರ್ಮನ ಸೈನಿಕನೊಬ್ಬನ ವಿಷಯ ವಿಮರ್ಶೆ. ಹಾಗಾದರೆ ಯುಕ್ತಿಯಿಂದ ಅವರನ್ನು ಗೆಲ್ಲುವ ಯೋಜನೆಯನ್ನು ಬ್ರಾಹ್ಮಣ ರಾಜರು ಹಾಕಿಕೊಳ್ಳುತ್ತಾರೆ. ಕೊರಗರ ಜನಾಂಗದ ಹಿರಿಮೆಯನ್ನು ನಾಟಕಕಾರ ವರ್ಣಿಸುವುದು ಹೀಗೆ: ‘‘ತುಳುನಾಡು ನಮ್ಮದು. ಇಲ್ಲಿಯ ಭೋರ್ಗರೆಯುವ ಕಡಲನ್ನು ನೋಡುತ್ತಾ ಬೆಳೆದವರು. ನಾವೂ ತೆರೆಗಳಿಗೆ ಸರಿಸಮಾನ. ಆ ತೆರೆಗಳನ್ನು ಪ್ರತಿಭಟಿಸುವವರಾರು?’’ ಕೊರಗರ ಮುಖಾಮುಖಿ ಬ್ರಾಹ್ಮಣರೊಂದಿಗೆ ಮಾತ್ರ ಆಗುವುದು ಒಂದು ವಿಶೇಷ. ಹಬಾಶಿಕಾ ಹೇಳುತ್ತಾನೆ ‘‘ನಾವು ತೆರೆಗಳಂತೆ ಎಂದು ಅವರಿಗೆ ತೋರಿಸಿಕೊಟ್ಟಿದ್ದೇವೆ. ಇನ್ನಾದರೂ ಅವರು ನಮ್ಮನ್ನು ಅರ್ಥಮಾಡಿಕೊಂಡು ವ್ಯವಹರಿಸಲಿ’’ ಈ ನಾಟಕದಲ್ಲಿ ಎಲ್ಲ ದಲಿತ ಪುರಾಣಗಳು ಜಗತ್ತಿನ ಸೃಷ್ಟಿಯ ಕುರಿತಾಗಿ ತಮ್ಮದೇ ರೀತಿಯ ತಮ್ಮ ವೃತ್ತಿಗೆ ಸಂಬಂಧಪಟ್ಟ ನೆಲೆಯಲ್ಲಿ ಕಥೆಯನ್ನು ಕಟ್ಟಿಕೊಟ್ಟಂತೆ ಇಲ್ಲಿಯೂ ಕೊರಗರ ವೃತ್ತಿಗೆ ಸಂಬಂಧಪಟ್ಟ ಡೋಲು ಬಾರಿಸುವುದು, ಈ ಚಿಹ್ನೆಯ ಮೂಲಕ ಜಗತ್ತಿನ ಸೃಷ್ಟಿಯ ಕಥೆ ಹೆಣೆಯಲಾಗಿದೆ ಕಥೆ ಹೀಗಿದೆ: ‘‘ಪ್ರಪಂಚ ಮೊದಲು ನೀರಿನಿಂದ ತುಂಬಿಕೊಂಡಿತ್ತು. ಆಗ ಬ್ರಹ್ಮದೇವರು ಈ ನೀರಿನಲ್ಲಿ ನಮ್ಮ ಕೊರಗ ಜಾತಿಯ ಅಣ್ಣತಂಗಿಯರಿಬ್ಬರನ್ನು ಸೃಷ್ಟಿ ಮಾಡಿದನು. ವಿಷ್ಣು ದೇವರು ನೀರಿನ ಮೇಲೆ ಡೋಲನ್ನು ಸೃಷ್ಟಿಸಿ, ಅಣ್ಣ ತಂಗಿಯರಿಗೆ ಈ ಡೋಲಿನೊಳಗೆ ವಾಸಿಸಲು ಹೇಳಿದರು. ಅವರ ಮಾತಿನಂತೆ ಇವರು ಡೋಲಿನೊಳಗಡೆ ವಾಸಿಸತೊಡಗಿದರು. ಅಣ್ಣತಂಗಿಯರು ಡೋಲಿನಲ್ಲಿರುವಾಗ ಒಂದು ದಿನ ವಿಷ್ಣು ದೇವರು ಅವರ ಬಳಿ ಬಂದು, ನಿಮಗೆ ಹೂವು, ಹಣ್ಣು, ಪಶು, ಪಕ್ಷಿ, ಗಿಡ, ಮರ, ಬಳ್ಳಿಗಳನ್ನು ನೋಡಲು ಅಸೆಯಾಗುವುದಿಲ್ಲವೇ ಎಂದು ಕೇಳಿದರು. ಭೂಮಿಯನ್ನು ಸೃಷ್ಟಿಸಿ, ಅದರಲ್ಲಿ ತಾವು ಕೇಳಿದ ಎಲ್ಲವನ್ನೂ ನೀಡಿ ಅಣ್ಣತಂಗಿಯರಿಗೆ ಡೋಲಿನಿಂದ ಹೊರಬಂದು, ಅವುಗಳ ನಡುವೆ ಜೀವಿಸಲು ಹೇಳಿದರು. ಮುಂದೆ ಅವರು ಪರಸ್ಪರ ಮೋಹಗೊಂಡರು. ಕೂಡಿದರು. ಮಕ್ಕಳಾಯಿತು. ಅವರಲ್ಲಿ ಹುಟ್ಟಿದ ಹೆಣ್ಣುಮಕ್ಕಳು ದಲಿತರಾದರು. ಗಂಡುಮಕ್ಕಳು ಬಲಿತರಾದರು. ತಂಗಿ, ಅಣ್ಣನನ್ನು ಕೂಡಿದ ಪಾಪಕ್ಕೆ ಅವರ ಹೆಣ್ಣುಮಕ್ಕಳು ದಲಿತರಾದರು. ಆದರೆ ಅವರ ಗಂಡುಮಕ್ಕಳಿಗೆ ಪಾಪ ತಟ್ಟಲಿಲ್ಲ. ಹೀಗಾಗಿ ಬಲಿತರಾದರು. ಹೆಣ್ಣುಮಕ್ಕಳ ಸಂತತಿಯವರು ಈಗಲೂ ಇದ್ದಾರೆ. ಅವರು ಮುಗೇರರು, ಮುಂಡಾಲರು, ನಲಿಕೆಯವರು, ಪಂಬದರು, ಪರವರು, ಬಾಕುಡರು, ಮನ್ಸರು ಮತ್ತು ಕೊರಗರು. ಈ ಹೆಣ್ಣು ಮಕ್ಕಳ ಸಂತತಿಯವರು. ಗಂಡು ಮಕ್ಕಳ ಸಂತತಿಯವರು ಯಾರೆಲ್ಲ ಅಂದರೆ ಬ್ರಾಹ್ಮಣರು, ಬಂಟರು, ಗೌಡರು, ಕುಂಬಾರರು, ಗಾಣಿಗರು, ದೇವಾಡಿಗರು, ಮಡಿವಾಳರು, ಮೊಗವೀರರು, ಬಿಲ್ಲವರು ಮೊದಲಾದ ದಲಿತೇತರರೇ ಗಂಡು ಮಕ್ಕಳ ಸಂತತಿಯವರು’’. ಅಣ್ಣತಂಗಿಯರು ಮದುವೆಯಾಗುವ ಸಂಪ್ರದಾಯದ ಕುರಿತು ವೇದಕಾಲದ ಕಾದಂಬರಿಯಾದ ‘ಅವಧೇಶ್ವರಿ’ ಯಲ್ಲಿ ಶಂಕರ ಮೊಕಾಶಿ ಪುಣೇಕರರು ಪ್ರಸ್ತಾಪ ಮಾಡಿದ್ದಾರೆ. ಈಜಿಪ್ಟ್ ಮತು ಗ್ರೀಸ್‌ನಲ್ಲಿಯೂ ಈ ಅಣ್ಣತಂಗಿಯರ ವಿವಾಹ ಪ್ರಸ್ತಾಪವಿದೆ. ಈ ಸಂಪ್ರದಾಯವನ್ನು ಈಜಿಪ್ಟಿನವರು ವಂಶದ ರಕ್ತಶುದ್ಧಿಗಾಗಿ ತಮ್ಮ ರಕ್ತ ಹೊರಗೆ ಹೋಗಕೂಡದು, ಹೊರಗಿನಿಂದ ರಕ್ತ ಅರಮನೆಯೊಳಗೆ ಬರಕೂಡದು,ಞ ಇದುವೇ ಆ ರಾಜಮನೆತನದ ಸಿದ್ಧಾಂತವಾಗಿತ್ತು. ಕೊರಗರು ‘ಕೊರಗ ತನಿಯ’ ಎಂಬ ದೈವವನ್ನು ನಂಬುತ್ತಾರೆ ಎಂಬ ವಿಷಯವೂ ಪ್ರಸ್ತಾಪವಾಗಿದೆ. ಆ ದೈವಕ್ಕೆ ಮಾಂಸದ ಎಡೆ ಹಾಕಿ, ಮಣ್ಣಿನ ಹೂಜಿಯಲ್ಲಿ ಕಳ್ಳು ಇಟ್ಟು ಕೊರಗ ತನಿಯನ ಪೂಜೆಗೈಯುತ್ತಾರೆ. ಇವರ ಕುಲದೈವ ಕೊರಗ ತನಿಯ. ಕೊರಗಜ್ಜ ಸ್ವಾಮಿ ಎಂದೂ ಕರೆಯಲಾಗುತ್ತದೆ. ಆ ದೈವಕ್ಕೆ ಹರಕೆ ಹೊರುತ್ತಾರೆ. ಕೊರಗಜ್ಜನಿಗೆ ಕಳ್ಳಿನ ಮೇಲೆ ತುಂಬ ಪ್ರೀತಿ. ಯಾಕೆಂದರೆ ಇವನು ಕಳ್ಳು ಮಾರುವ ಮೈರಕ್ಕೆ ಬೈದ್ಯೆತಿಯ ಮನೆಯಲ್ಲಿ ಬೆಳೆದವನು. ಆಕೆ ಅವನಿಗೆ ದಿನಾಲೂ ಕುಡಿಯಲು ಕಳ್ಳು ಕೊಡುತ್ತಿದ್ದಳಂತೆ. ಅದರ ರುಚಿ ಹತ್ತಿಸಿಕೊಂಡ ಈತ ದೈವವಾದ ಮೇಲೂ ಈ ಕಳ್ಳನ್ನೇ ಬಯಸುತ್ತಿದ್ದಾನೆ. ಈತನು ಕೊರಗ ವಂಶದವನು. ಹುಟ್ಟು ಹೆಸರು ತನಿಯ. ಈತನ ತಂದೆ ಮುಂಗುರ, ತಾಯಿ ಕರ್ಗಿ. ಹುಟ್ಟಿದ ಆರು ವರ್ಷದಲ್ಲಿ ತಬ್ಬಲಿಯಾಗಿ, ಬಂಧು ಬಾಂಧವರನ್ನು ಕಳೆದುಕೊಂಡು, ದಿಕ್ಕು ದೆಸೆ ಕಾಣದೇ ಕಂಗಾಲಾಗಿ ಹೊಟ್ಟೆಪಾಡನ್ನು ಹುಡುಕಿಕೊಂಡು ಅಳುತ್ತ ಹೋಗುತ್ತಿದ್ದಾಗ, ಈತನು ಹೋಗುವ ದಾರಿಗೆ ತಾಗಿಕೊಂಡಿದ್ದ ಕೆಂದಾಳೆ ತೆಂಗಿನಮರದ ಕಟ್ಟೆಯಲ್ಲಿ ಕಳ್ಳು ಮಾರುತ್ತಿದ್ದ ಮೈರಕ್ಕೆ ಬೈದ್ಯೆತಿ ಈತನನ್ನು ಕಂಡು ತನ್ನ ಬಳಿಗೆ ಕರೆದು ವಿಚಾರಿಸಿದಳು. ಆಗ ಆತ ತಬ್ಬಲಿಯೆಂದು ಆಕೆಗೆ ತಿಳಿಯಿತು. ಅವಳು ಈತನ ಬಗ್ಗೆ ಕನಿಕರ ತೋರಿ ಪ್ರೀತಿಯಿಂದ ತನ್ನ ಮನೆಗೆ ಕರೆದುಕೊಂಡು ಬಂದಳು. ಇವನನ್ನು ಹೊರಗಿನ ಕೆಲಸಕ್ಕೆ ಆಳನ್ನಾಗಿ ಮಾಡಿಕೊಂಡಳು. ದನಗಳನ್ನು ಮೇಯಿಸುವುದು, ತೆನೆ ಕೀಳಲು ಗದ್ದೆಗೆ ಬರುವ ಹಕ್ಕಿ, ಕೋಳಿಗಳನ್ನು ಓಡಿಸುವುದು ಮುಂತಾದ ಕೆಲಸಗಳನ್ನು ಮಾಡುತ್ತಿದ್ದನು. ಆ ಚಿಕ್ಕ ಬಾಲಕನಿಗೆ ಕಷ್ಟದ ಕೆಲಸಗಳೇ. ಆವನು ದೈವವಾದದ್ದು ಹೇಗೆ? ಒಂದು ದಿನ ಮೈರಕ್ಕ ಬೈದ್ಯೆತಿ ಊರಿನ ಧೂಮಾವತಿ ದೈವದ ನೇಮಕ್ಕೆ ಈತನ ಮೂಲಕ ಹೊರೆ ಕಾಣಿಕೆಯನ್ನು ಕೊಟ್ಟು ಕಳುಹಿಸಿದಳು. ಈತ ಅದನ್ನು ಹೊತ್ತುಕೊಂಡು ಅಲ್ಲಿಗೆ ಹೋಗಿ, ಅದನ್ನು ದೈವದ ಗುಡಿಯ ಎದುರಿಗಿಟ್ಟನು. ಆಗ ಗುಡಿಗೆ ತಾಗಿಕೊಂಡಿದ್ದ ಮಾದಳದ ಮರದ ಗೆಲ್ಲೊಂದು ಹಣ್ಣಿನಿಂದ ತುಂಬಿ ಈತನೆದುರು ಬಾಗಿ ನಿಂತಿತ್ತು. ಅದನ್ನು ಕಂಡು ಹಸಿದಿದ್ದ ಈತ, ಆ ಗೆಲ್ಲನ್ನು ಬಗ್ಗಿಸಿ ಹಣ್ಣುಗಳನ್ನು ಕೊಯ್ಯುತ್ತಿದ್ದಾಗ ಇವನು ಇದ್ದಕ್ಕಿದ್ದಂತೆ ಮಾಯವಾದನು. ಅಂದರೆ ಧೂಮಾವತಿ ಅವನನ್ನು ಮಾಯ ಮಾಡಿತು. ಯಾಕೆಂದರೆ ಈತ ಕೊರಗ ಜಾತಿಯವನಾಗಿ ಮಾಡಬಾರದ್ದನ್ನು ಮಾಡಿದನಲ್ಲಾ ಎಂದು ಧೂಮಾವತಿಗೆ ಸಿಟ್ಟು ಬಂದು ಹಾಗೆ ಮಾಡಿತು. ಈತ ಅಸ್ಪಶ್ಯ. ದೈವಸ್ಥಾನದ ಅಂಗಳಕ್ಕೆ ಇವನು ಹೋಗುವಂತಿಲ್ಲ. ಹೀಗಿದ್ದೂ ಈತ ಲೆಕ್ಕಿಸದೇ ದೈವಸ್ಥಾನದ ಅಂಗಳಕ್ಕೆ ಹೋಗಿ, ಅಲ್ಲಿದ್ದ ಮಾದಳದ ಹಣ್ಣುಗಳನ್ನು ಕೊಯ್ದು, ದೈವಸ್ಥಾನದ ಮಡಿಗೆ ಮೈಲಿಗೆ ಮಾಡಿದ್ದು ಅಕ್ಷಮ್ಯ ಅಪರಾಧವೆಂದು ಆ ದೈವ ತಿಳಿದು ಈತನಿಗೆ ಈ ಶಿಕ್ಷೆ ನೀಡಿತು. ಕೆಳಜಾತಿಯವರು ಅಸ್ಪಶ್ಯರು. ಅಸ್ಪ್ರಶ್ಯರು ದುರ್ಬಲರು. ಈತ ಜಾತಿಯಲ್ಲಿ ಹೀನನಾದ್ದರಿಂದ ಈ ದುರಂತಕ್ಕೆ ಒಳಗಾದ. ಈತ ಮಾಯವಾದ ಮೇಲೆ ಕೊರಗ ತನಿಯ ದೈವವಾಗಿ ನಮಗೆಲ್ಲ ಕುಲಸ್ವಾಮಿಯಾದ. ಈ ಕೊರಗ ತನಿಯನ ಮಹಿಮೆಯಿಂದ ಮಕ್ಕಳಿಗೆ, ದನಕರುಗಳಿಗೆ ಕಾಯಿಲೆ ಬಂದಾಗ ಈತನಿಗೆ ಹರಕೆ ಹೇಳಿಕೊಂಡ ಕೂಡಲೇ ಆ ಕಾಯಿಲೆಗಳು ಗುಣಮುಖವಾಗುತ್ತವೆಯಂತೆ. ಯಾವುದೇ ದೈವವನ್ನು ಮಾಟ, ಮಂತ್ರದಿಂದ ಬಂಧಿಸಿ ಬಂಧನದಲ್ಲಿಡಬಹುದು. ಆದರೆ ಕೊರಗ ತನಿಯಸ್ವಾಮಿಯನ್ನು ಮಾಟ, ಮಂತ್ರದಿಂದ ಬಂಧಿಸಿ ಬಂಧನದಲ್ಲಿಡಲು ಆಗುವುದಿಲ್ಲವಂತೆ.
ನಾಟಕದ ಕೊನೆಯಲ್ಲಿ ಕೊರಗ ಕುಲದ ನಾಶದ ಅತ್ಯಂತ ದಾರುಣ ಚಿತ್ರವನ್ನು ಕೊಡಲಾಗಿದೆ.
ಭಯದ ಭೀತಿಯಲ್ಲಿ ಬಿದ್ದು
ಅಡಗಿಕೊಂಡು ಕಾಡಿಗೆ
ಮರೆಯ ಮಧ್ಯೆ ಗೆಡ್ಡೆ, ಗೆಣಸು
ಮಾಂಸ ತಿಂದ ಜನರಿಗೆ ಮೃಗದಿ ತೆರದಿ ಬದುಕುತ್ತಿರುವ
ಎಂಥ ನೋವು ಬಾಳಿಗೆ
ಇಂಥ ನೋವು ಕಳೆಯಲೆಂದು
ಬಂದು ಬೆಳಗಿ ಹೋದ ಹಬಾಶಿಕಾ
ಧರಣು ಶರಣು ನಿನಗೆ ಶರಣು
ಈ ಗೀತೆಯೊಂದಿಗೆ ನಾಟಕ ಮುಕ್ತಾಯವಾಗುತ್ತದೆ. ಕೊರಗರ ಸಂಗೀತ ವಾದ್ಯಗಳ ವಿವರಣೆ ಇಲ್ಲಿ ಕೊಡಲಾಗಿದೆ, ಹಬಾಶಿಕಾನ ಮದುವೆಯ ದಿಬ್ಬಣದಲ್ಲಿ ಕೊರಗರ ಸಂಗೀತ ಮತ್ತು ನರ್ತನ. ಡೋಲು, ತಾಳ, ಕೊಳಲು, ಢಕ್ಕೆ ಇವೆಲ್ಲ ಕೊರಗರ ಸಂಗೀತ ಸಲಕರಣೆಗಳು. ಈ ನಾಟಕವು ಕೊರಗ ಜನಾಂಗದ ಆದಿ ಪುರಾಣದೊಂದಿಗೆ ಆ ಜನಾಂಗದ ಹಲವಾರು ಅನನ್ಯತೆಗಳನ್ನು ಹೊರಗೆಡಹುತ್ತದೆ. ಅವರ ಆ ಕೊರಗ ಪುರಾಣದಿಂದ ನಾವು ಆ ಜನಾಂಗದ ಕೆಲವು ಲಕ್ಷಣಗಳನ್ನು ಹೀಗೆಂದು ಗುರುತಿಸಬಹುದಾಗಿದೆ. ತಮ್ಮ ಪುರಾಣದ ಹಬಾಶಿಕಾ ಒಬ್ಬ ದೊರೆ. ತುಳುನಾಡಿನ ರಾಜ. ಪ್ರಭುತ್ವದ ಇತಿಹಾಸ ಇವರನ್ನು ಪ್ರಭುತ್ವದತ್ತ ತುಡಿಯುವಿಕೆಯನ್ನು ತೋರಿಸುತ್ತದೆ. ಪ್ರಭುತ್ವವೇ ಅವರ ಬಿಡುಗಡೆಯ ದಾರಿಯಾಗಿ ಧ್ವನಿತಗೊಂಡಿದೆ. ಇಡೀ ಸನಾತನ ಶ್ರೇಣೀಕೃತ ಸಮಾಜದ ಮೂಲಪುರುಷ ಕೊರಗ ಎಂಬ ಅವರ ನಂಬಿಕೆ ಅವರ ಉನ್ನತೀಕರಣದ ಹಸಿವಿಗೆ ಸಾಕ್ಷಿಯಾಗಿ ನಿಂತಿದೆ. ಆದರೂ ವಾಸ್ತವಿಕತೆಯ ಪ್ರಜ್ಞೆ ಇದೆ. ಅವರ ಬ್ರಾಹ್ಮಣರೊಡನೆ ಮಾಡಬಯಸುವ ವಿವಾಹ ಸಂಬಂಧವೂ ಕೂಡ ಉನ್ನತೀಕರಣದ ಬಯಕೆಯ ಒಂದು ಮುಖವೇ ಆಗಿದೆ. ಎಲ್ಲ ಬಗೆಯ ಮಾನವ ಸೃಷ್ಟಿಗೆ ಕೊರಗರು ಮೂಲ ಎಂಬ ನಂಬಿಕೆ ಅವರ ಶ್ರೇಷ್ಠತೆಯನ್ನು ಸ್ಥಾಪಿಸುವ ಅವರ ಬಯಕೆಯನ್ನು ಎತ್ತಿ ತೋರಿಸುತ್ತದೆ ಮತ್ತು ಶೂದ್ರರೂ ಅವರನ್ನು ದೂರ ಇಟ್ಟಿದ್ದರ ಕುರಿತು ಪ್ರಸ್ತಾಪವಿದೆ. ಮೈರೆಬೈದ್ಯೆತಿ ಅವನನ್ನು ಕೆಲಸದಾಳಿನಂತೆ ಬಳಸಿಕೊಳ್ಳುತ್ತಾಳೆ ಮತ್ತು ಅವನನ್ನು ಧೂಮಾವತಿಯ ದೈವಸ್ಥಾನಕ್ಕೆ ಹೊರೆಕಾಣಿಕೆ ಕೊಟ್ಟು ಕಳುಹಿಸುತ್ತಾಳೆ. ಆದರೆ ಅಲ್ಲಿ ಶೂದ್ರರೂ ಆ ಕೊರಗ ತನಿಯನನ್ನು ಅಸ್ಪಶ್ಯತೆಯ ನರಕಕ್ಕೆ ತಳ್ಳುತ್ತಾರೆ. ಶೂದ್ರರಿಗೆ ಕೊರಗ ಅಸ್ಪಶ್ಯ. ಹಾಗಾಗಿ ಧೂಮಾವತಿ ದೈವಸ್ಥಾನದ ಅಂಗಳಕ್ಕೆ ಹೋಗಬಾರದ ಜಾತಿಯವನು ಹೋಗುತ್ತಾನೆ. ಅಲ್ಲಿ ಅವನ ಕೊಲೆ ಆಗುತ್ತದೆ. ಧೂಮಾವತಿಯ ಹೆಸರಿನಲ್ಲಿ ಅಸ್ಪಶ್ಯತೆಯ ನೆಪದಲ್ಲಿ ಅವನ ಕೊಲೆಯೇ ಆಗುತ್ತದೆ. ಅವನನ್ನು ಧೂಮಾವತಿ ಮಾಯ ಮಾಡಿದಳು ಇದರ ಅರ್ಥ ಏನು? ಶೂದ್ರರು ಅವನ ಕೊಲೆಗೈಯುತ್ತಾರೆ ಎಂದೇ ಅರ್ಥ. ಕೊಲೆಗೈದು ಪಶ್ಚಾತ್ತಾಪ ಪಟ್ಟ ಆ ಶೂದ್ರ ಜನಾಂಗ ಆ ತನಿಯನಿಗೆ ಒಂದು ದೈವದ ಸ್ಥಾನ. ಮಾನ ನೀಡಿ ಪಾಪ ಪರಿಹಾರ ಮಾಡಿಕೊಂಡಂತೆ ತೋರುತ್ತದೆ. ಇಲ್ಲಿ ಕೊರಗರನ್ನು ಶೋಷಿಸುವುದರಲ್ಲಿ ಶೂದ್ರರು ಬ್ರಾಹ್ಮಣರಿಗೇನು ಹಿಂದೆ ಬೀಳಲಿಲ್ಲ ಎಂಬರಿವುಂಟಾಗುತ್ತದೆ.
ಇಂತೂ ಈ ನಾಟಕ ಒಂದು ಜನಾಂಗದ ಸಾಂಸ್ಕೃತಿಕ ಪಠ್ಯವಾಗಿ ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಸ್ಥಾನವನ್ನು ಪಡೆಯುತ್ತದೆ.