ಓ ಮೆಣಸೇ..
ಅಂಬೇಡ್ಕರ್ ಪ್ರತಿಮೆಗಳನ್ನು ಧ್ವಂಸಗೊಳಿಸುವಂತೆ ಕ್ರಿಶ್ಚಿಯನ್ ಮಿಷನರಿಗಳು ಕುಮ್ಮಕ್ಕು ನೀಡುತ್ತಿದ್ದಾರೆ - ಭರತ್ ಸಿಂಗ್, ಬಿಜೆಪಿ ಸಂಸದ
ಸಂಘಪರಿವಾರದ ಕಾರ್ಯಕರ್ತರು ಮಿಷನರಿಗಳು ಹೇಳಿದ್ದನ್ನು ಅಷ್ಟು ಸುಲಭದಲ್ಲಿ ಪಾಲಿಸುತ್ತಾರೆಯೇ?
---------------------
ಕಥುವಾ ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ಸ್ವಜನ ಪಕ್ಷಾಪಾತ ಮಾಡುವುದಿಲ್ಲ - ಡಿ.ವಿ.ಸದಾನಂದ ಗೌಡ, ಕೇಂದ್ರ ಸಚಿವ
ಅಂದರೆ ಆರೋಪಿಗಳು ಸ್ವಜನರು ಎ್ನುವುದನ್ನು ಒಪ್ಪಿಕೊಂಡಂತಾಯಿತು.
---------------------
ಅಭಿವೃದ್ಧಿ ಕಾರ್ಯಗಳ ಮುಂದೆ ಸುಳ್ಳು ಗೆಲ್ಲದು -ಯು.ಟಿ.ಖಾದರ್, ಸಚಿವ
ಅಭಿವೃದ್ಧಿಗಳ ಕುರಿತಂತೆಯೇ ಸುಳ್ಳು ಹೇಳಿದರಾಯಿತು.
---------------------
ಗೋದ್ರೋತ್ತರ ಗಲಭೆಯಲ್ಲಿ ಹಿಂದೂಗಳ ಹತ್ಯೆಯಾದಾಗಲೇ ಮೋದಿ ಮತ್ತು ನನ್ನ ನಡುವೆ ಭಿನ್ನಾಭಿಪ್ರಾಯ ಹುಟ್ಟಿಕೊಂಡಿತು - ಪ್ರವೀಣ್ ತೊಗಾಡಿಯಾ, ವಿಶ್ವ ಹಿಂದೂ ಪರಿಷತ್ ಮಾಜಿ ಕಾರ್ಯಾಧ್ಯಕ್ಷ
ತಮ್ಮ ಹತ್ಯೆಗೆ ಸಂಚು ನಡೆದ ಹಿನ್ನೆಲೆಯಲ್ಲಿ ಭಿನ್ನಾಭಿಪ್ರಾಯ ಬಿಗಡಾಯಿಸಿರಬೇಕು.
---------------------
ಪ್ರಧಾನಿ ನರೇಂದ್ರ ಮೋದಿ ನನ್ನ ಪ್ರತಿಸ್ಪರ್ಧಿ -ಹುಚ್ಚ ವೆಂಕಟ್, ನಟ
ಇಡೀ ದೇಶ ಇದನ್ನು ಒಪ್ಪಿದೆ.
---------------------
ಯಕ್ಷಗಾನ, ತಾಳ ಮದ್ದಳೆಯಿಂದ ಸದೃಢ ಸಮಾಜ ನಿರ್ಮಾಣ - ಕುಂಬಳೆ ಸುಂದರ ರಾವ್, ಮಾಜಿ ಶಾಸಕ
ಸುರತ್ಕಲ್ ಗಲಭೆಯ ಸಂದರ್ಭದಲ್ಲಿ ತಮ್ಮ ತಾಳಮದ್ದಲೆಯನ್ನು ಜನರು ಇನ್ನೂ ಮರೆತಿಲ್ಲ.
---------------------
ಡಾ. ಅಂಬೇಡ್ಕರ್ ಲೋಕಸಭೆಯೊಳಗೆ ಕಾಲಿಡಲು ಜವಾಹರಲಾಲ್ ನೆಹರೂ ಬಿಡಲಿಲ್ಲ - ಸಿಟಿರವಿ, ಶಾಸಕ
ನೆಹರೂ ನಿಮಗೆ ಮಾದರಿಯೇ?
---------------------
ಸಿರಿಯದಲ್ಲಿ ನಡೆಸಿದ ಕಾರ್ಯಾಚರಣೆ ಸಂಪೂರ್ಣ ಯಶಸ್ವಿಯಾಗಿದೆ - ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ
ನಾಗರಿಕರ ಸಾವು ನೋವು ನಿಮಗೆ ತೃಪ್ತಿ ತಂದಿದೆಯೇ?
ನನ್ನ ಏಳಿಗೆಯನ್ನು ಕಾಂಗ್ರೆಸ್‌ನವರು ಸಹಿಸುತ್ತಿಲ್ಲ -ಶ್ರೀರಾಮುಲು, ಸಂಸದ
ನಿಮ್ಮ ಏಳಿಗೆಯನ್ನು ಕಾಂಗ್ರೆಸ್‌ನವರು ಯಾಕೆ ಸಹಿಸಬೇಕು?
---------------------
ನಾನು ಶಾಸಕನಾದರೆ ಮುಖ್ಯಮಂತ್ರಿಗೆ ಸಮಾನ -ವಾಟಾಳ್ ನಾಗರಾಜ್, ಮಾಜಿ ಶಾಸಕ
ರಾಜ್ಯಕ್ಕೆ ಎರಡೆರಡು ಮುಖ್ಯಮಂತ್ರಿಗಳ ಅಗತ್ಯವಿದೆಯೇ?
---------------------
ಭ್ರಷ್ಟಾಚಾರ ಮುಕ್ತ ಭಾರತ ಸ್ಥಾಪನೆ ಬರೀ ಘೋಷಣೆಯಿಂದ ಸಾಧ್ಯವಿಲ್ಲ - ದೇವೇಗೌಡ, ಮಾಜಿ ಪ್ರಧಾನಿ
ಬಿಜೆಪಿ ಮೈತ್ರಿಯಿಂದಷ್ಟೇ ಅದು ಸಾಧ್ಯ ಎನ್ನುವುದು ಮನವರಿಕೆಯಾದಂತಿದೆ.
---------------------
ರಾಜ್ಯದಲ್ಲಿ ಮೂರನೇ ಶಕ್ತಿಯಾಗಿರುವ ಜೆಡಿಎಸ್‌ನ ನಿಜವಾದ ರಾಜಕೀಯ ಆಟ ಈಗ ಶುರುವಾಗಿದೆ - ಎಚ್.ವಿಶ್ವನಾಥ್, ಮಾಜಿ ಸಚಿವ
ಬರೇ ಜೂಜಾಟ.
---------------------
ಮೇಕ್ ಇನ್ ಇಂಡಿಯಾ ಯೋಜನೆಗೆ ಸ್ವೀಡನ್ ಸರಕಾರ ಬೆಂಬಲ ವ್ಯಕ್ತಪಡಿಸಿದೆ -ನರೇಂದ್ರಮೋದಿ, ಪ್ರಧಾನಿ
ಭಾರತದ ಬೆಂಬಲವಿದೆಯೇ ಎಂದು ವಿಚಾರಿಸಿ.
---------------------
ಜನವಿರೋಧಿ, ಧರ್ಮವಿರೋಧಿಗಳನ್ನು ಜನತೆ ಕ್ಷಮಿಸುವುದಿಲ್ಲ - ಶೋಭಾ ಕರಂದ್ಲಾಜೆ - ಸಂಸದೆ
ಅಂದರೆ ಬಿಜೆಪಿಯ ಬಗ್ಗೆ ಇಷ್ಟೊಂದು ನಿರಾಶೆಯೆ?
---------------------
ಬಿಜೆಪಿಯಿಂದ ಸ್ಪರ್ಧಿಸಲು ಅಭ್ಯರ್ಥಿಗಳನ್ನು ಹುಡುಕಬೇಕಿದ್ದ ಕಾಲವೊಂದಿತ್ತು. ಈಗ ಅಭ್ಯರ್ಥಿಗಳ ದಂಡೇ ಇದೆ - ಅನಂತಕುಮಾರ್ ಹೆಗಡೆ, ಸಂಸದ
ಆದರೆ ಮತ ಹಾಕುವವರದ್ದೇ ಕೊರತೆ.
---------------------
ಭಾರತೀಯರು ಅದ್ಭುತ ಡಿಎನ್‌ಎ ಹೊಂದಿದ್ದಾರೆ -ಹರ್ಷವರ್ಧನ್, ಕೇಂದ್ರ ಸಚಿವ
ಪ್ರತಿ ಅತ್ಯಾಚಾರ ಪ್ರಕರಣದಲ್ಲೂ ಈ ಡಿಎನ್‌ಎ ಪ್ರಕರಣ ಹೊಂದಿಕೆಯಾಗುತ್ತಿದೆ.
---------------------
ಕಾಂಗ್ರೆಸ್‌ನಲ್ಲಿ ಟಿಕೆಟ್ ಪಡೆಯಬೇಕಾದರೆ ಕಾರ್ಯಕರ್ತರ ಜೊತೆ ಕೆಲಸ ಮಾಡಿದರೆ ಸಾಲದು, ಲಾಬಿ ಮಾಡಲು ಗೊತ್ತಿರಬೇಕು - ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ
ಅನುಭವಿಗಳ ಮಾತು.
---------------------
ಸಂಸದೆ ಶೋಭಾ ಕರಂದ್ಲಾಜೆಗೆ ಏನೋ ಸಮಸ್ಯೆ ಇದೆ - ಡಿ.ಕೆ. ಶಿವಕುಮಾರ್, ಸಚಿವ
ಆಗಾಗ ನಾಗಲ್ಲಿ ಮೈಮೇಲೆ ಬರುವ ಸಮಸ್ಯೆ.
---------------------
ಮಹಾಭಾರತ ಕಾಲದಲ್ಲಿಯೇ ಇಂಟರ್ನೆಟ್, ಸ್ಯಾಟಲ್ಲೈಟ್ ಫೋನ್‌ಗಳು ಇದ್ದವು - ವಿಪ್ಲವ ಕುಮಾರ್ ದೇವ್, ತ್ರಿಪುರಾ ಮುಖ್ಯಮಂತ್ರಿ
ಪಾಂಡವರು ಆನ್‌ಲೈನ್‌ನಲ್ಲಿ ರಮ್ಮಿ ಆಡಿ ರಾಜ್ಯ ಕಳೆದುಕೊಂಡರಂತೆ.
---------------------
ಪ್ರಜಾಪ್ರಭುತ್ವದಲ್ಲಿ ಭ್ರಷ್ಟಾಚಾರ ಒಂದು ಶಾಪ - ವಿ.ಎಸ್.ಉಗ್ರಪ್ಪ, ಕಾಂಗ್ರೆಸ್ ಮುಖಂಡ
ಹೌದು. ರಾಜಕಾರಣಿಗಳ ಪಾಲಿಗೆ ಆ ಶಾಪವೇ ವರ.
---------------------
ಈ ದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಳಿವೇ ಇಲ್ಲ - ಜನಾರ್ದನ ಪೂಜಾರಿ, ಕಾಂಗ್ರೆಸ್ ನಾಯಕ
ಅಳಿಸುವ ಪ್ರಯತ್ನ ವಿಫಲವಾದ ಬಳಿಕದ ಹೇಳಿಕೆ.
---------------------
ಲಿಂಗಾಯತ-ವೀರಶೈವ ಚುನಾವಣಾ ವಿಷಯವೇ ಅಲ್ಲ - ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
ಯಡಿಯೂರಪ್ಪ -ಈಶ್ವರಪ್ಪ ಈ ಬಾರಿಯ ಪ್ರಮುಖ ಚುನಾವಣಾ ವಿಷಯವಂತೆ.
---------------------
ರಾಜಕೀಯವೇ ಬೇರೆ, ಸಂಬಂಧಗಳೇ ಬೇರೆ - ಕೆ.ಬಿ. ಕೋಳಿವಾಡ, ವಿಧಾನ ಸಭಾಧ್ಯಕ್ಷ
ರಾಜಕೀಯವೆಂದರೆ ಅಕ್ರಮ ಸಂಬಂಧ.